Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಪ್ಳಾ ದಂಗೆ, ಮರಾಡ್ ಹತ್ಯಾಕಾಂಡ ಮತ್ತು ಮಲಬಾರ್ ಗೋಲ್ಡ್‌ನ ದೇಶದ್ರೋಹ!

ಮಪ್ಳಾ ದಂಗೆ, ಮರಾಡ್ ಹತ್ಯಾಕಾಂಡ ಮತ್ತು ಮಲಬಾರ್ ಗೋಲ್ಡ್‌ನ ದೇಶದ್ರೋಹ!

ಮಪ್ಳಾ ದಂಗೆ, ಮರಾಡ್ ಹತ್ಯಾಕಾಂಡ ಮತ್ತು ಮಲಬಾರ್ ಗೋಲ್ಡ್‌ನ ದೇಶದ್ರೋಹ!

ಅದು ಇಪ್ಪತ್ತನೆಯ ಶತಮಾನದ ಎರಡನೆಯ ದಶಕದ ಆರಂಭ. ಮಧ್ಯಪ್ರಾಚ್ಯದಲ್ಲಿ ಅಟೋಮನ್ ಸಾಮ್ರಾಜ್ಯದ ಖಲೀಫನನ್ನು ಮತ್ತೆ ಕೂರಿಸಬೇಕು ಎನ್ನುವ ಕೂಗು ಏಳುತ್ತಿತ್ತು. ಅದು ಚಳವಳಿಯ ರೂಪಕ್ಕೂ ಬಂತು. ಸಾಗರದಾಚೆ ಆರಂಭವಾದ ಈ ಚಳವಳಿ ಸಂಪೂರ್ಣ ಪ್ಯಾನ್ ಇಸ್ಲಾಮ್‌ನ ವಿಚಾರಧಾರೆಯಾಗಿ ಬದಲಾಯಿತು. ಅಂದರೆ ಈ ಉದ್ದೇಶದ ಈಡೇರಿಕೆಗಾಗಿ ಜಗತ್ತಿನ ಮುಸ್ಲಿಮರೆಲ್ಲರೂ ಒಂದೇ ಸೂರಿನಡಿಯಲ್ಲಿ ಬರಬೇಕು, ಬೆರೆಯಬೇಕು ಎನ್ನುವ ಧೋರಣೆಯನ್ನು ಇಸ್ಲಾಂ ಜಗತ್ತು ಹೊಂದಿತ್ತು. ಚಳವಳಿ ಶೀಘ್ರವಾಗಿ ಹಬ್ಬುತ್ತಿತ್ತು. ಆದರೆ ಬ್ರಿಟಿಷರು ಅಂತಹ ಯಾವ ತೀರ್ಮಾನಕ್ಕೂ ಬರುವ ಲಕ್ಷಣ ಕಾಣಿಸಲಿಲ್ಲ. ಏಕೆಂದರೆ ಬಾಲ್ಕನ್ ಯುದ್ಧಗಳಿಂದ ಟರ್ಕಿ ಸೋತು ಸುಣ್ಣವಾದ ಮೇಲೆ ಯುರೋಪಿನ ಜನ ಇಸ್ಲಾಮನ್ನು ತಿರಸ್ಕರಿಸಲಾರಂಭಿಸಿದ್ದರು. ಖಲೀಫನ ಪರವಾದ ಚಳವಳಿ ಬಹುಬೇಗನೆ ಸಮಸ್ತ ಬ್ರಿಟಿಷರ ವಿರುದ್ಧ ಚಳವಳಿಯ ಸ್ವರೂಪಕ್ಕೆ ಬದಲಾಯಿತು.ಮತಾಂಧತೆಯ ಬಣ್ಣಕ್ಕೆ ಪರಿವರ್ತಿತವಾಯಿತು. ಸಾಗರದಾಚೆಗೂ ದಾಟಿತು. ಭಾರತದಲ್ಲೂ ಬ್ರಿಟಿಷರು ಆಳುತ್ತಿದ್ದರಲ್ಲಾ, ಇಲ್ಲೂ ಖಿಲಾಫತ್ ಶುರುವಾಯಿತು. ಎಲ್ಲಿನವನೋ ಖಲೀಫ. ಎಲ್ಲಿಗೋ ಚಳವಳಿ. ಅದಕ್ಕೆ ಭಾರತದ ನೆಲ!

ಇದಕ್ಕೆ ಸೊಪ್ಪು ಹಾಕುವಂತೆ ದೇಶಾದ್ಯಂತ ಖಿಲಾಫತ್ ಚಳವಳಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಅಲಹಾಬಾದ್ ಮತ್ತು ಕರಾಚಿಗಳಲ್ಲಿ ಖಿಲಾಫತ್ ಸಮ್ಮೇಳನಗಳೂ ನಡೆದವು. ಎಲ್ಲಾ ಸಮ್ಮೇಳನಗಳನ್ನೂ ಕಾಂಗ್ರೆಸ್ ಘಟಕಗಳೇ ಖುದ್ದು ನಿಂತು ಆಯೋಜಿಸಿದ್ದವು. ಸ್ವತಃ ಗಾಂಧಿಜಿಯೇ ಖಿಲಾಫತ್ ಪ್ರಚಾರ ಯಾತ್ರೆಯನ್ನೂ ನಡೆಸಲಾರಂಭಿಸಿದ್ದರು! ಹಣಸಂಗ್ರಹ ಅಭಿಯಾನ, ಅದ್ಧೂರಿ ಪ್ರಚಾರಗಳು ನಡೆದವು. ಬಹುತೇಕ ಖಿಲಾಫತ್ ಸಂಬಂಧಿತ ಯೋಜನೆಗಳು ಮಸೀದಿಗಳಲ್ಲಿ ನಡೆಯುತ್ತಿದ್ದವು.
ಕಾಂಗ್ರೆಸಿನ ಕೆಲವು ಸದಸ್ಯರು ಇದನ್ನು ವಿರೋಧಿಸಿದ್ದರೂ ಗಾಂಧಿಜಿ ಖಿಲಾಫತ್ತಿಗೆ ಕೊಟ್ಟ ಬೆಂಬಲದಿಂದ ಅವರ ಪ್ರಯತ್ನವಾವುದೂ ನಡೆಯಲಿಲ್ಲ. ಯಾವುದೋ ದೇಶದ ರಾಜಕೀಯ ಸ್ಥಿತ್ಯಂತರಕ್ಕೆ ಇನ್ನಾವುದೋ ದೇಶದ ಜನ ಬೀದಿಗಿಳಿಯುವ ಕೆಟ್ಟ ಪರಂಪರೆಯೊಂದಕ್ಕೆ ಖಿಲಾಫತ್ ನಾಂದಿಯಾಯಿತು. ಗಾಂಧಿಜಿ ಅದಕ್ಕೆ ಸಾಕ್ಷಿಯೂ ಆದರು. ಕಾಂಗ್ರೆಸಿನ ಈ ಆತ್ಮಘಾತುಕ ನಡೆ ಬಗ್ಗೆ ಡಾ. ಅನಿಬೆಸೆಂಟರು ಮತ್ತು ಡಾ. ಹೆಡಗೇವಾರರು ಎಚ್ಚರಿಸಿದರೂ ಅವರ ಮಾತನ್ನು ಯಾವ ಕಾಂಗ್ರೆಸಿಗನೂ ಕೇಳಲಿಲ್ಲ. ಮುಸಲ್ಮಾನರಿಗೇನೋ ಪ್ಯಾನ್ ಇಸ್ಲಾಮಿನ ಹುಚ್ಚು ತಲೆಗೇರಿತ್ತು ಎನ್ನೋಣ. ಆದರೆ ಕಾಂಗ್ರೇಸಿಗೇನಾಗಿತ್ತು?

ಅದಕ್ಕೆ ಪೂರಕವಾಗಿ ಆ ಹೊತ್ತಿನ ಕೇರಳದ ವಾತಾವರಣ ವಿಚಿತ್ರವಾಗಿ ಹೊಗೆಯಾಡುವಂತಿತ್ತು.
ಯಾವತ್ತೂ ಸದ್ಭಾವನೆಯಿಂದ ಇಲ್ಲದಿದ್ದ ಜಮೀನುದಾರರು ಮತ್ತು ಕಾರ್ಮಿಕ ವರ್ಗ ಯಾವ ಹೊತ್ತಲ್ಲೂ ಸಿಡಿಯಲು ಸಿದ್ಧ ಎಂಬಂತಿದ್ದರು. ಕೇರಳದ ಮಾಪಿಳ್ಳೆಗಳ (ಮಲೆಯಾಳ ಮಾತನಾಡುವ ಮುಸಲ್ಮಾನರು) ಮತೀಯ ಅಸಹನೆಗೆ ಈ ಜಮೀನ್ದಾರರ ಮೇಲಿನ ದ್ವೇಷ ತುಪ್ಪ ಸುರಿಯುವಂತಿತ್ತು. ಅವರು ಪ್ರಬಲ ಕಾರಣವೊಂದಕ್ಕೆ ಬಹು ದಿನಗಳಿಂದಲೇ ಕಾಯುತ್ತಿದ್ದರು. ಅಂಥವರ ಕಾಲಿಗೆ ಸುಲಭವಾಗಿ ತೊಡರಿದ್ದು ಈ ಖಿಲಾಫತ್ ಎಂಬ ವಿದೇಶಿ ಅಸ್ತ್ರ . ಪರಿಣಾಮ ಕೇರಳ ಹೊತ್ತಿ ಉರಿಯಿತು. ಆರಂಭದಲ್ಲಿ ಖಿಲಾಫತ್ ಎಂದು ಆರಂಭವಾದ ಚಳವಳಿ ಬೇಗನೆ ಹಿಂಸೆಗೆ ತಿರುಗಿತು. ಹಿಂಸೆಗೆ ಕೋಮು ಇಂಬು ನೀಡಿತು. ಮುಂದೆ ಕೇರಳದಲ್ಲಿ ನಡೆದದ್ದು ಮಹಾ ಮಾರಣಹೋಮ. ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆಗಳು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಬೀದಿಗಿಳಿದರು. ಗಲಭೆ ನಿಯಂತ್ರಣಕ್ಕೆ ಬಂದ ಪೊಲೀಸರನ್ನೂ ಗಲಭೆಕೋರರರು ಕೊಚ್ಚಿಹಾಕಿದರು. ಹೇಗೆ ಮಧ್ಯಕಾಲೀನ ಅಕ್ರಮ ಮುಸಲ್ಮಾನರು ಮತಾಂತರ ಇಲ್ಲವೇ ಕೊಲೆ ಎಂಬ ನಿಯಮಕ್ಕೆ ಬದ್ಧರಾಗಿದ್ದರೋ ಹಾಗೆಯೇ ಗಲಭೆಕೋರ ಮಾಪಿಳ್ಳೆಗಳೂ ಅದುವರೆಗೆ ಕೇರಳ ಕಂಡುಕೇಳರಿಯದ ಹಿಂಸಾಚಾರಕ್ಕಿಳಿದರು.
ಬಲಾತ್ಕಾರದ ಮತಾಂತರಕ್ಕಿಳಿದರು. ಅತ್ಯಾಚಾರ, ಹಿಂದೂಗಳಿಗೆ ಚಿತ್ರಹಿಂಸೆ ನೀಡಿ ಕೊಲ್ಲುವುದು ಅವ್ಯಾಹತವಾಗಿ ನಡೆದವು. ಹಿಂದೂಗಳ ಆಸ್ತಿಗಳ ಲೂಟಿ, ಕೊಲೆ, ದರೋಡೆ, ಸರಕಾರಿ ಖಜಾನೆಗಳ ಲೂಟಿ, ದೇವಾಲಯಗಳ ಧ್ವಂಸ, ವಿಗ್ರಹ ಭಂಜನೆಗಳು ಎಗ್ಗಿಲ್ಲದೆ ಸಾಗಿತು. ಬರೋಬ್ಬರಿ ಎಂಟು ತಿಂಗಳವರೆಗೆ ಹಿಂಸಾಚಾರ ನಡೆಯಿತೆಂದರೆ ಮಲಬಾರ್ ಅದೆಷ್ಟು ನಲುಗಿರಬಹುದು? ಹಿಂದೂಗಳು ಎಂಥ ಸ್ಥಿತಿಯನ್ನು ಅನುಭವಿಸಿರಬಹುದು? ಎಲ್ಲವೂ ಇಲ್ಲಿಯವನಲ್ಲದ ಖಲೀಫನಿಗಾಗಿ, ಇಸ್ಲಾಮಿಗಾಗಿ. ಬ್ರಿಟಿಷರ ಮೇಲಿನ ದ್ವೇಷಕ್ಕೆ ಕಾಫೀರರೆಲ್ಲರ ಕೊಲೆ.
ಇಂದು ಐಸಿಸ್ ಏನು ಮಾಡುತ್ತಿದೆಯೋ ಅದು 1921ರಲ್ಲೇ ಮಲಬಾರಿನಲ್ಲಿ ನಡೆದುಹೋಗಿತ್ತು! ಇಲ್ಲಿ ಖಲೀಫನ ಕುರ್ಚಿಗಾಗಿ ಬಲಿಯಾದವನು ಅಮಾಯಕ ಹಿಂದೂ! ದಿನೇ ದಿನೆ ಮಲಬಾರ್ ಪ್ರಾಂತದ ಮಾಪಿಳ್ಳೆಗಳು ವ್ಯವಸ್ಥೆಯಿಂದ ಸಂಪೂರ್ಣ ಕೈತಪ್ಪಿದ್ದರು. ಬ್ರಿಟಿಷರಂಥ ಬ್ರಿಟಿಷರೇ ತಿಂಗಳುಗಟ್ಟಲೆ ಕೈಚೆಲ್ಲಿ ಕುಳಿತುಬಿಟ್ಟಿದ್ದರು.

ಕಿಡಿಗೆ ಗಾಳಿಯೂದಿದ ಗಾಂಧಿಜಿ ಧಾವಾನಲವನ್ನೇ ಹುಟ್ಟಿಸಿಬಿಟ್ಟಿತು. ಸಮಸ್ತ ಮಲಬಾರನ್ನೇ ಸುಟ್ಟುಹಾಕಿತು.

ಅಂಥ ಹೊತ್ತಲ್ಲೂ ಗಾಂಧಿಜಿ ಕೊಟ್ಟ ಹೇಳಿಕೆಯೇನು ಗೊತ್ತೇ?

ಮಾಪ್ಳಾಗಳು ತಮ್ಮ ಧಾರ್ಮಿಕ ಆದೇಶದಂತೆ ವರ್ತಿಸಿದ್ದಾರೆ. ಹಿಂದೂಗಳು ಹಿಂದೆ ಮಾಡಿದ ಪಾಪವೇ ಈ ಘಟನೆಗಳಿಗೆ ಕಾರಣವಿರಬಹುದು! ಗಲಭೆಯನ್ನು ಹತ್ತಿಕ್ಕಿದ ನಂತರ ಬ್ರಿಟಿಷರು ಸಮೀಕ್ಷೆ ನಡೆಸಿದಾಗ ಗಲಭೆಯಲ್ಲಿ 1,000 ಹಿಂದೂಗಳ ಕಗ್ಗೊಲೆ,20,000 ಬಲವಂತದ ಮತಾಂತರಗಳು, ಹಲವು ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ 3 ಕೋಟಿಗೂ ಮಿಕ್ಕಿದ ಹಣದ ಲೂಟಿ ನಡೆದಿತ್ತು.
ಬ್ರಿಟಿಷರ ವರದಿಯನ್ನು ಒಪ್ಪದ ಕೆಲವು ಸಂಸ್ಥೆಗಳು ಸಮೀಕ್ಷೆ ನಡೆಸಿದಾಗ ಗಲಭೆಯಲ್ಲಿ ಸತ್ತ ಹಿಂದೂಗಳ ಸಂಖ್ಯೆ 10 ಸಾವಿರಕ್ಕೂ ಅಧಿಕ ಎಂದು ತಿಳಿದುಬಂತು!

ಜಾಮೋರಿನ್ನನ ಕಾಲದಿಂದ ನೋಡಿದರೂ ಕೇರಳ ಮತಾಂಧತೆಯ ಉರಿಯಿಂದ ತಪ್ಪಿಸಿಕೊಳ್ಳದ ದಶಕಗಳೇ ಇಲ್ಲ. ಮಾಪ್ಳಾಕ್ಕಿಂತಮೊದಲು ಮಂಜೇರಿ ದಂಗೆ, ಎರಡು ಬಾರಿ ಟಿಪ್ಪು ನಡೆಸಿದ ನರಮೇಧ, ಅದಕ್ಕೂ ಮುನ್ನ ಹೈದರಾಲಿಯ ಆಕ್ರಮಣದಿಂದಾದ ಸಾವುನೋವುಗಳು, ತಿರುವಾಂಕೂರಿನ ಮೇಲಾದ ಮತಾಂಧರ ಆಕ್ರಮಣ ಹೀಗೆ ಸಾಲುಸಾಲು ಕಗ್ಗೊಲೆಗಳು ಕೇರಳದಲ್ಲಿ ನಡೆದಿವೆ. ಇಂಥ ಕೇರಳ ಇಂದಿಗೂ ವಿಶ್ವದ ಮತಾಂಧತೆಯ ಕಿಡಿಗೆ ಮೊದಲು ಸ್ಪಂದಿಸುವ ಪ್ರದೇಶ ಎಂಬುದು ವಿಪರ್ಯಾಸವಾದರೂ ಕಠೋರವಾದ ಸತ್ಯ .

ಕೇರಳ ಯಾವತ್ತೂ ಕಾಯುತ್ತಿರುವ ಕುಲುಮೆ ಎಂಬುದಕ್ಕೆ ಕೇರಳದ ಇತಿಹಾಸವೇ ಸಾಕ್ಷಿ.
ಅಂಥ ಕರಾಳ ಇತಿಹಾಸದಲ್ಲಿ ನಮಗೆ ಎದ್ದು ಕಾಣುವ ಮತ್ತೊಂದು ಹಿಂದೂಗಳ ನರಮೇಧ ಮರಾಡ್ ಹತ್ಯಾಕಾಂಡ.

2003ರ ಮೇ 3. ಅಂದು ಮುಂಜಾನೆ ಕೋಯಿಕೋಡಿನ ಮರಾಡ್ ಕಡಲ ತೀರದಲ್ಲಿ 9 ಜನ ಹಿಂದೂ ಮೀನುಗಾರರು ಬೆಳಕು ಹರಿಯುವ ಮೊದಲೇ ಕಡಲಿಗಿಳಿದಿದ್ದರು. ಎಂದಿಗಿಂತ ಮೊದಲೇ ಕಡಲಿನಿಂದ ಮರಳಿದ್ದರು. ದೋಣಿ ಇಳಿದು ದಣಿವಾರಿಸಿಕೊಳ್ಳುತ್ತಾ ದಡದಲ್ಲೇ ಕುಳಿತಿದ್ದರು. ಆ ಒಂಬತ್ತು ಜನರಲ್ಲಿ ಒಬ್ಬನಿಗೆ ಆಗಷ್ಟೇ ಮದುವೆಯಾಗಿ ಐದು ದಿನಗಳಾಗಿತ್ತು. ಉಳಿದವರು ಆತನನ್ನು ರೇಗಿಸುತ್ತಿದ್ದರು. ಆತ ನಾಚಿಕೊಳ್ಳುತ್ತಿದ್ದ. ಹೀಗೆ ಹರಟೆ ನಡೆಯುತ್ತಿದ್ದಾಗಲೇ ಸುಮಾರು ನೂರಕ್ಕೂ ಹೆಚ್ಚಿನ ಸಂಖ್ಯೆಯ ದೊಡ್ಡದೊಂದು ಗುಂಪು ಸಮೀಪದ ಮಸೀದಿಯಿಂದ ಇವರು ಕುಳಿತಿದ್ದಲ್ಲಿಗೆ ಬಂತು. ಕೈಯಲ್ಲಿ ಲಾಂಗುಗಳು, ತರಹೇವಾರಿ ಚೂರಿಗಳನ್ನು ಹಿಡಿದು ಬಂದ ಆ ಗುಂಪು ಇದ್ದಕ್ಕಿದ್ದಂತೆ ಮೀನುಗಾರರ ಮೇಲೆರಗಿತು. ಆ ಗುಂಪು ಮೀನುಗಾರರನ್ನು ಮನಬಂದಂತೆ ಕೊಚ್ಚಿಹಾಕಿತು. ಕೈಯಲ್ಲಿ ಆಯುಧಗಳಿದ್ದರೂ ಅವರು ನಾಡಬಾಂಬುಗಳನ್ನು ಎಸೆದರು(ಆದರೆ ಸ್ಪೋಟಿಸಲಿಲ್ಲ). ಬಿದ್ದವರ ತಲೆಯ ಮೇಲೆ ಕಲ್ಲುಗಳನ್ನು ಎತ್ತಿಹಾಕಿದರು. ಅವರ ದೇವರ ಘೋಷಣೆಗಳನ್ನು ಕೂಗಿದರು.ಸ್ವಲ್ಪ ಹೊತ್ತಿನ ಹಿಂದೆ ನಗು, ಉಲ್ಲಾಸದಿಂದ ಇದ್ದ ಆ ಒಂಬತ್ತು ಮೀನುಗಾರರು ಕೆಲವೇ ಕ್ಷಣಗಳಲ್ಲಿ ಮುಖದ ಗುರುತು ಸಿಗಲಾರದಂತೆ ಶವವಾಗಿ ಬಿದ್ದಿದ್ದರು. ದೇಶಾದ್ಯಂತ ಈ ಹತ್ಯಾಕಾಂಡ ಸದ್ದು ಮಾಡಿತು. ಸಮುದ್ರ ತಟದ ಒಂದು ಸಣ್ಣ ಊರಲ್ಲಿ ಒಂಬತ್ತು ಕುಟುಂಬಗಳು ಗೋಳಾಡುವುದನ್ನು ಇಡೀ ದೇಶ ನೋಡಿತು. ಹತ್ಯಾಕಾಂಡದ ನಂತರ ತನಿಖೆಯಲ್ಲಿ ಈ ಹತ್ಯಾಕಾಂಡದ ಹಿಂದೆ ಮುಸ್ಲಿಂ ಲೀಗ್ ಇದೆಯೆಂದು ಗೊತ್ತಾಯಿತು. ನಂತರ ಕೆಲವೇ ದಿನಗಳಲ್ಲಿ ಮುಸ್ಲಿಂ ಲೀಗ್ ಜತೆ ಎನ್‌ಡಿಎಫ್ ಎಂಬ ಸಂಘಟನೆಯೂ ಶಾಮೀಲಾಗಿದೆಯೆಂದು ತನಿಖೆ ತಿಳಿಸಿತು. ಮಾಧ್ಯಮಗಳು ಮರಾಡ್ ಹತ್ಯಾಕಾಂಡವನ್ನು ಎರಡನೆಯ ಮಾಪ್ಲಾ ಹತ್ಯಾಕಾಂಡ ಎಂದು ಕರೆಯಿತು.

ಅಂದರೆ ಮರಾಡ್ ಎಲ್ಲರಿಗೂ ಮಾಪ್ಳಾವನ್ನು ನೆನಪಿಗೆ ತರಿಸಿತ್ತು. ಕೇರಳದ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸುತ್ತಿದ್ದಾಗ ಈ ಎರಡು ಘಟನೆಗಳು ಏಕೆ ನೆನಪಾದವೆಂದವೆಂದರೆ ತಿಂಗಳ ಹಿಂದೆ ಕಾಸರಗೋಡಿನ ಕೆಲವರು ಐಸಿಸ್ ಸೇರಲು ಹೊರಟಿದ್ದರು. ಮಲ್ಲಪುರಂ ಯಾವ ಕ್ಷಣದಲ್ಲಿ ಏನಾಗುವುದೋ ಎಂದು ಸದಾ ಬಿಗುವಿನಲ್ಲಿರುತ್ತದೆ.
ಸಮಸ್ತ ಮತಾಂಧ ಸಂಘಟನೆಗಳೆಲ್ಲವೂ ಕೇರಳವನ್ನು ತವರುಮನೆಯನ್ನಾಗಿ ಮಾಡಿಕೊಂಡಿವೆ. ದಕ್ಷಿಣದ ಕೇರಳ ಉತ್ತರದ ತುದಿ ಕಾಶ್ಮೀರಕ್ಕೆ ಆಗಾಗ ಅಜಾದಿ ಎನ್ನುತ್ತದೆ. ಯಾವುದೋ ದೇಶದಿಂದ ಹುಟ್ಟುವ ಮತಾಂಧತೆಯ ವಿಷ ಗಾಳಿ ನೇರವಾಗಿ ಕೇರಳಕ್ಕೆ ಬೀಸಿಬರುತ್ತವೆ. ಒಂದು ಕಾಲದಲ್ಲಿ ಒತ್ತಡಕ್ಕೆ ಮಣಿದೋ, ಭಯಕ್ಕೆ ಬಲಿಯಾಗಿಯೋ ಮತ ಬದಲಿಸಿಕೊಂಡವರ ಮನಸ್ಸು ಇಷ್ಟೊಂದು ಕಠಿಣವಾಯಿತೇಕೆ ಎಂದು ಪದೇ ಪದೆ ಅನಿಸಿದ್ದಿದೆ. ಕೇರಳ ಅನ್ಯ ರಾಜ್ಯಗಳಿಗೆ ಮತಾಂಧತೆಯನ್ನು ಹರಡುವ ಕೋಠಿಯಂತೆ ಕಾಣುತ್ತದೆ.

ಮೊನ್ನೆ ತಾನೇ ದೇಶಕ್ಕೆ ದೇಶವೇ 70ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ ಕೇರಳ ಮೂಲದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಎಂಬ ಕಂಪನಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸುವ ಚಿತ್ರಗಳು, ಕ್ವಿಜ್ ಕಾಂಪಿಟಿಶನ್ ಸಂಬಂಧಿತ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದವು!

ನಮ್ಮ ಸ್ವಾತಂತ್ರ್ಯದಿನಾಚರಣೆಯ ದಿನ ಬೆಳಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಮುಖಪುಟ ತೆರೆದರೆ ಹಿಂದಿನ ದಿನ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಮಲಬಾರ್ ಗೋಲ್ಡ್ ಆಚರಿಸಿದ ಸುದ್ದಿ ರಾರಾಜಿಸುತ್ತಿತ್ತು! ಎಂತಹ ದೇಶದ್ರೋಹ ನೋಡಿ? ಕ್ರಿಕೆಟಿಗ ವಿರಾಟ್ ಕೋಹ್ಲಿಯ ಅಭಿಮಾನಿಯೊಬ್ಬ ಖುಷಿಯಾಗಿ ತನ್ನ ಮನೆ ಮೇಲೆ ಭಾರತ ಧ್ವಜವನ್ನು ಹಾರಿಸಿಕೊಂಡರೆ, ಪಾಕಿಸ್ತಾನ ನ್ಯಾಯಾಲಯಗಳು ಆತನ್ನು ಕರೆತಂದು ಎರಡೇ ದಿನದಲ್ಲಿ ವಿಚಾರಣೆ ಮುಗಿಸಿ ಜೈಲಿಗಟ್ಟುತ್ತದೆ.
ಪಾಕಿಸ್ತಾನದಲ್ಲಿ ಭಾರತದ ಒಂದೇ ಒಂದು ಕುರುಹು ಸಿಕ್ಕರೂ ಸಾಕು ಹೊಸಕಿ ಹಾಕುತ್ತದೆ. ವಿಭಜನೆಗೊಂಡ ಮೇಲೆ ಪಾಕಿಸ್ತಾನದಲ್ಲಿದ್ದ ಸಾವಿರಾರು ದೇವಸ್ಥಾನಗಳು ಇಂದು ಬೆರಳೆಣಿಕೆಯಾಗಿರುವುದೇ ಆ ದೇಶದ ಅಸಹಿಷ್ಣುತೆಗೆ ಸ್ಪಷ್ಟ ನಿದರ್ಶನ. ಆಗಸ್ಟ್ 15ರಂದೇ ಕಾಶ್ಮೀರದಲ್ಲಿ ಉಗ್ರರು ಪಾಕಿಸ್ತಾನದ ಧ್ವಜ ಹಾರಿಸಿದ್ದರು. ಇದನ್ನು ತೆರವುಗೊಳಿಸಿ, ಭಾರತದ ಧ್ವಜ ಏರಿಸಿದ ಸಿಆರ್‌ಪಿಎಫ್ ನ ಪ್ರಮೋದ್ ಕುಮಾರ್ ಅವರನ್ನು ಒಂದೇ ತಾಸಿನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.

ಇವುಗಳ ಮಧ್ಯೆ ನಮ್ಮ ದೇಶದ್ದೇ ಕಂಪನಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚಣೆಯನ್ನು ಕ್ವಿಜ್ ಕಾಂಪಿಟಿಶನ್ ಹಾಗೂ ಆಕರ್ಷಕ ಉಡುಗೊರೆಗಳ ಮೂಲಕ ಆಚರಿಸುತ್ತದೆ!

ಇದೇನು ವಿಚಿತ್ರ? ಸಾಂಸ್ಕೃತಿಕ, ಸಾಮಾಜಿಕ ಮಹತ್ವದ ಮಲಬಾರ್ ಎಂಬ ಹೆಸರಿಟ್ಟುಕೊಂಡ, ಮಲಬಾರ್ ಎಂದರೆ ಶುದ್ಧತೆಯ ಪ್ರತೀಕ ಎಂಬ ಜಂಬ ಹೊತ್ತುಕೊಂಡ ಕಂಪನಿ ನಮ್ಮ ಶತ್ರುದೇಶದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು! ಇದೇ ದೇಶದ ಗ್ರಾಹಕರನ್ನು ನಂಬಿ ಆರಂಭಿಸಿದ, ಇಲ್ಲಿನ ಬೆವರ ಹನಿಗಳ ಶ್ರಮವನ್ನು ಬಂಡವಾಳ ಮಾಡಿಕೊಂಡ, ಇದೇ ದೇಶದ ಋಣವನ್ನು ಹೊತ್ತ ಕಂಪನಿಗೆ ಭಾರತದ ಸ್ವಾತಂತ್ರ್ಯೋತ್ಸವದಂದು ನೆನಪಾಗಿದ್ದು ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ! ಅಂದರೆ ಈ ಕಂಪನಿ ಯಾವ ನೆಲದಲ್ಲಿ ನಿಂತು ಬೆಳೆಯಿತೋ, ಯಾವ ಜನ ಅದನ್ನು ಬೆಳೆಸಿದ್ದರೋ ಆ ನೆಲವನ್ನು ತುಂಡರಿಸಿ ಹೋದ, ಇಲ್ಲಿನ ಜನರ ಪ್ರಾಣವನ್ನು ಬಲಿಕೊಟ್ಟ ಪಾಕಿಸ್ತಾನದ ಮೇಲೆ ಪ್ರೀತಿ ತೋರುವ ಬುದ್ಧಿ. ಮಲಬಾರ್ ಗೋಲ್ಡ್‌ಗೆ ಅತೀ ಶೀಘ್ರದ ಅತ್ಯಂತ ದೊಡ್ಡದಾಗಿ ಬೆಳೆದ ಚಿನ್ನದ ಕಂಪನಿ ಎಂಬ ಹೆಗ್ಗಳಿಕೆಯಿದೆ.
ಅದನ್ನು ದೊಡ್ಡದಾಗಿ ಬೆಳೆಸಿದ್ದು ಯಾರು? ಭಾರತೀಯರೋ? ಪಾಕಿಸ್ತಾನಿಗಳೋ? ಪಾಕಿಸ್ತಾನದಲ್ಲಿ ಒಂದೇ ಒಂದು ಶೋ ರೂಮ್ ಇಲ್ಲದಿದ್ದರೂ ಮಲಬಾರ್ ಚಿನ್ನದಂಗಡಿಗೆ ಅದೇನು ಪಾಕಿಸ್ತಾನದ ಮೇಲೆ ಅಷ್ಟೊಂದು ವ್ಯಾಮೋಹ? ತಮ್ಮ ಅಂಗಡಿಯಲ್ಲಿ ಕುಳಿತು ಕೇಕ್ ಕತ್ತರಿಸಿ ಬಾಯಿ ಸಿಹಿ ಮಾಡಿಕೊಂಡರ, ಆಗ ತಮ್ಮ ದೇಶ, ತಮ್ಮ ಗ್ರಾಹಕರು ಇವರಿಗೆ ಒಮ್ಮೆಯೂ ನೆನಪಾಗಲಿಲ್ಲವೇ? ದೇಶದ್ರೋಹದ ಕೆಲಸ ಮಾಡಿದ್ದರೂ ಮಲಬಾರ್ ಗೋಲ್ಡ್ ಎಂಥ ನಿರ್ಲಜ್ಜ ಸ್ಪಷ್ಟೀಕರಣವನ್ನು ಕೊಟ್ಟಿತೆಂದರೆ ತಮಗೆ ನಮ್ಮ ದೇಶದ ಮೇಲೆ ಅಪಾರ ಗೌರವ ಇದ್ದು, ವಿವಿಧ ದೇಶಗಳಲ್ಲಿ ನಮ್ಮ ಮಳಿಗೆಗಳಿವೆ. ಅಲ್ಲಿನ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಆಯಾ ರಾಷ್ಟ್ರಗಳ ಹಬ್ಬಗಳನ್ನು ಆಚರಿಸುವ ಸಂಪ್ರದಾಯವನ್ನು ನಾವು ಹೊಂದಿದ್ದೇವೆ! ಗಲ್ಫ್ ದೇಶಗಳಲ್ಲಿ ಮಲಬಾರ್ ಗೋಲ್ಡ್ ಜನಪ್ರಿಯ ಮಳಿಗೆಯಾಗಿರಬಹುದು. ಆದರೆ ಆ ರಾಷ್ಟ್ರಗಳಲ್ಲೂ ಭಾರತೀಯ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾ ರೆ. ಅದೇಕೆ ನೆನಪಾಗಲಿಲ್ಲ? ಮಲಬಾರ್ ಗೋಲ್ಡ್ ಕಂಪನಿಗೆ ಪಾಕಿಸ್ತಾನಿ ಗ್ರಾಹಕರನ್ನು ಓಲೈಸಬೇಕು ಅಂತಿದ್ದರೆ ನಮ್ಮ ಬೆಂಗಳೂರು, ಮಂಗಳೂರು, ಮೈಸೂರುಗಳ ಮಳಿಗೆಗಳನ್ನು ಮುಚ್ಚಿ ಪೇಶಾವರದಲ್ಲೋ, ಅಬೋಟಾಬಾದಿನಲ್ಲೋ ತೆರೆಯಬಾರದೇಕೆ?

ಹೀಗೆ ಬಹಿರಂಗವಾಗಿಯೇ ಮತಾಂಧ ದೇಶವೊಂದರ ಪರವಿರುವ ಶ್ರೀಮಂತ ಕಂಪನಿ ಇನ್ನು ಯಾವ ಸ್ಥಿತಿಗಿಳಿಯಲೂ ಹೇಸುವುದಿಲ್ಲ ಎಂದು ಅದು ತೋರಿಸಿಕೊಟ್ಟಿದೆ.
ಕೆಲವು ಕೊಲ್ಲಿ ದೇಶಗಳ ಕಂಪನಿಗಳು ಭಯೋತ್ಪಾದಕರಿಗೆ ಇಂತಿಷ್ಟು ದೇಣಿಗೆಯನ್ನು ನೀಡುತ್ತವೆ ಎಂಬುದು ಇಂದು ಗುಟ್ಟಾಗಿ ಉಳಿದಿಲ್ಲ. ಪಾಕಿಸ್ತಾನ ಪ್ರಿಯ ಈ ಕಂಪನಿಯೂ ಆ ಪಟ್ಟಿಯಲ್ಲಿದೆಯೋ ಎಂದು ಸಂಶಯಬಾರದೇ? ಪಾಕಿಸ್ತಾನಕ್ಕಾಗಿ ಕೇಕ್ ಕತ್ತರಿಸಿದವರು ಪ್ರತ್ಯೇಕತಾವಾದಿಗಳಿಗೆ ಬೆಂಬಲ ಕೊಡಲಾರರೇ? ಫಿನಿಶಿಂಗ್ ಚೆನ್ನಾಗಿರುತ್ತದೆ, ಮೋಹನ್ ಲಾಲ್ ಅಂಬಾಸಿಡರ್ ಆಗಿದ್ದಾನೆ ಎಂದು ಮಲಬಾರ್ ಗೋಲ್ಡ್‌ನಲ್ಲಿ ವಜ್ರ, ಚಿನ್ನ ಖರೀದಿಗೆ ಹೋಗುವವರೊಮ್ಮೆ ಯೋಚಿಸಿ. ನೀವು ಕೊಳ್ಳುವ ಒಂದು ನೆಕ್ಲೇಸ್‌ನ ಲಾಭ ಭಯೋತ್ಪಾದಕರ ಕೋವಿಗೆ ಹೋಗಬಹುದು. ಆ ಕೋವಿ ನಮ್ಮ ದೇಶ ಕಾಯುವವನ ಎದೆಯನ್ನು ಸೀಳಬಹುದು. ನೀವು ನಿಂತ ನೆಲವನ್ನೇ ಅದು ಕಿತ್ತುಕೊಳ್ಳಬಹುದು. ಮಲಬಾರ್ ಗೋಲ್ಡ್‌ನಲ್ಲಿ ನೀವು ಮಾಡುವ ಖರೀದಿಯಿಂದ ಚಿನ್ನ ವೃದ್ಧಿಯಾಗುವುದಿಲ್ಲ. ಭಯೋತ್ಪಾದನೆ ಹೆಚ್ಚಳವಾಗುತ್ತದೆ ಎಂಬುದನ್ನು ನೆನಪಿಡಿ!

   malbar gold

Comments are closed.