Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಚೇತಕ್ ಹೊತ್ತ ಮೇವಾಡದ ರತ್ನ, ನೆಪೋಲಿಯನ್ನನಾಚೆಗೂ ನಿಲ್ಲುವ ಮಹಾರಾಣಾ ಪ್ರತಾಪ

ಚೇತಕ್ ಹೊತ್ತ ಮೇವಾಡದ ರತ್ನ, ನೆಪೋಲಿಯನ್ನನಾಚೆಗೂ ನಿಲ್ಲುವ ಮಹಾರಾಣಾ ಪ್ರತಾಪ

ಚೇತಕ್ ಹೊತ್ತ ಮೇವಾಡದ ರತ್ನ, ನೆಪೋಲಿಯನ್ನನಾಚೆಗೂ ನಿಲ್ಲುವ ಮಹಾರಾಣಾ ಪ್ರತಾಪ

ಕೆಲವು ತಿಂಗಳುಗಳ ಹಿಂದೆ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್‌ರವರು ರಾಜಾಸ್ಥಾಾನದ ಕಾರ್ಯಕ್ರಮವೊಂದರಲ್ಲಿ ಆಡಿದ ಮಾತನ್ನು ದೇಶದ ಸೆಕ್ಯುಲರ್ ಬಣ ಭಾರೀ ವಿವಾದ ಎಂಬಂತೆ ಬಿಂಬಿಸಿತು. ಕೆಲವು ಸೆಕ್ಯುಲರ್ ವಾಹಿನಿಗಳು ಅದನ್ನು ಸಾಧ್ಯವಾದಷ್ಟೂ ಉದ್ದವಾಗಿ ಎಳೆದರು. ‘ದೇಶದ ಗೃಹಸಚಿವರಿಗೆ ಮೊಘಲ್ ಅರಸರ ಬಗ್ಗೆ ದ್ವೇಷವಿದೆ, ಆರೆಸ್ಸೆಸ್ ಮಾನಸಿಕತೆಯನ್ನು ಸಚಿವರು ತೋರಿದ್ದಾರೆ, ಅಕ್ಬರ್ ದಿ ಗ್ರೇಟ್ ಎನ್ನುವುದನ್ನು ಅಲ್ಲಗೆಳೆದಿದ್ದಾರೆ’ ಎಂದು ಆರೋಪಿಸಿತು. ತನ್ನ ಎಲ್ಲಾ ಪಟ್ಟುಗಳು ವಿಫಲರಾಗುತ್ತಾ ಸಾಗುತ್ತಿದ್ದರೆ ಸೆಕ್ಯುಲರ್ ಬಣ ಇಂಥ ಮೂರ್ಖ ವಾದಕ್ಕಿಳಿಯುತ್ತದೆ. ಏನಕೇನ ವಿರೋಧಿಸುವ ಬರದಲ್ಲಿ ನಗೆಪಾಟಲಿಗೀಡಾಗುತ್ತವೆ. ಅಷ್ಟಕ್ಕೂ ಅಂದು ರಾಜನಾಥ ಸಿಂಗರು ಹೇಳಿದ್ದಿಷ್ಟು, ‘ದೇಶದ ಇತಿಹಾಸದಲ್ಲಿ ರಾಣಾ ಪ್ರತಾಪರಿಗೆ ಸಿಗಬೇಕಾದ ಸ್ಥಾನ ಸಿಗಲಿಲ್ಲ. ನಮ್ಮ ಇತಿಹಾಸಕಾರರಿಗೆ ಅಕ್ಬರ್ ದಿ ಗ್ರೇಟ್ ಎನ್ನುವುದು ಕಾಣುವುದಾದರೆ ರಾಣಾ ಪ್ರತಾಪರೇಕೆ ಗ್ರೇಟ್ ಅನ್ನಿಸುವುದಿಲ್ಲ?’
ಇದರಲ್ಲಿ ವಿವಾದವಾಗುವಂಥಾದ್ದೇನಿದೆ? ಹಾಗಾದರೆ ದೇಶದಲ್ಲಿ ಗ್ರೇಟ್ ಎಂಬ ಪಟ್ಟ ಅಕ್ಬರ್ ಎಂಬ ಮೊಘಲನ ಪೇಟೆಂಟ್ ಆಸ್ತಿಯೇ? ಇತಿಹಾಸದಲ್ಲಿ ರಾಣಾ ಪ್ರತಾಪನಿಗೆ ಅಕ್ಬರ ಬಿಡಿ ಔರಂಗಜೇಬನಿಗೆ ಸಿಕ್ಕಷ್ಟು ಸ್ಥಾನ ಸಿಕ್ಕಿದೆಯೇ? ರಾಣಾ ಪ್ರತಾಪ ದೇಶದ ಚರಿತ್ರೆಯಲ್ಲಿ ಏನೂ ಆಲ್ಲದ ಅರಸನೇ? ಭಾರೀ ಪ್ರಮಾಣದ ಸೈನ್ಯ ಮತ್ತು ಸಂಪನ್ಮೂಲದಿಂದ ಒಬ್ಬ ಅರಸ ಗ್ರೇಟ್ ಎನಿಸಿಕೊಳ್ಳಬಹುದಾದರೆ ಏನೂ ಇಲ್ಲದೆ ನಾಡಿಗಾಗಿ ಹೋರಾಡಿದ ಪ್ರತಾಪ ಏಕೆ ಗ್ರೇಟ್ ಆಗುವುದಿಲ್ಲ? ಅಕ್ಬರನಂಥವನಿಗೆ ನೀರು ಕುಡಿಸಿದ ರಾಣಾ ಪ್ರತಾಪ ಯಾಕೆ ಇತಿಹಾಸಕಾರರಿಗೆ ವರ್ಜ್ಯ? ತನ್ನದಲ್ಲದ ಸಾಮ್ರಾಜ್ಯಕ್ಕೆ ನುಗ್ಗಿ ಮಾರಣಹೋಮ ನಡೆಸಿದ ರಾಜ ಗ್ರೇಟೋ? ತನ್ನ ನೆಲಕ್ಕಾಗಿ, ತನ್ನ ಸ್ವಾಭಿಮಾನಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದವ ಗ್ರೇಟೋ? ಇಂಥ ಪ್ರಶ್ನೆಗಳಿಗೆ ಇತಿಹಾಸದ ಅಲ್ಪಜ್ಞಾನವಿಲ್ಲವರೂ ಸುಲಭ ಉತ್ತರ ನೀಡಬಲ್ಲರು. ಆದರೆ ನಮ್ಮ ಮಹಾನ್ ಇತಿಹಾಸಕಾರರಿಗೆ, ಅಂತಾರಾಷ್ಟ್ರೀಯ ಖ್ಯಾತಿಯ ಪತ್ರಕರ್ತರಿಗೆ, ಬಹುಬೇಡಿಕೆಯ ಸಿನಿಮಾ ನಿರ್ದೇಶಕರಿಗೆ ಉತ್ತರ ತಿಳಿಯುವುದಿಲ್ಲ. ಅವರಿಗೆ ಅಕ್ಬರ ಗ್ರೇಟ್ ಅಷ್ಟೇ ಅಲ್ಲ, ಮಹಾ ಪ್ರೇಮಿಯೂ ಆಗಿ ಕಾಣುತ್ತಾನೆ! ಇವರಿಗೆ ಅಕ್ಬರ್ ಯಾವ ಕೋನದಲ್ಲಿ ಮಹಾಪ್ರೇಮಿಯಾಗಿ ಕಾಣುತ್ತಾನೋ!
ಕಳೆದ ಮೇ 9ಕ್ಕೆ ಮಹಾರಾಣಾ ಪ್ರತಾಪ ಎಂಬ ಮಹಾಪುರುಷ ಹುಟ್ಟಿ 477 ವರ್ಷಗಳಾದವು. ಇಂದಿಗೂ ರಾಜಾಸ್ಥಾನದಲ್ಲಿ ರಾಣಾ ಪ್ರತಾಪ ಮಾತ್ರವಲ್ಲ ಆತನ ಕುದುರೆಗೂ ಜನ ದೈವತ್ವದ ಪಟ್ಟ ಕಟ್ಟುತ್ತಾರೆ. ಮೇವಾರ, ಅಂಬಾರ್, ಜೈಸಲ್ಮೇರದ ಹಳ್ಳಿಗಳಲ್ಲಿ ಜನ ಪ್ರತಾಪನ ಸಾಹಸಗಳನ್ನು ಲಾವಣಿಗಳ ಮೂಲಕ ಹಾಡುತ್ತಾ ಪ್ರೇರಣೆಯನ್ನು ಪಡೆಯುತ್ತಾರೆ. ಒಬ್ಬ ವ್ಯಕ್ತಿ ಗ್ರೇಟೋ ಆಲ್ಲವೋ ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿಗಳು ಬೇಕು? ಆದರೆ ದೇಶದ ಗ್ರೇಟ್‌ನೆಸ್ಸನ್ನು ಆಳೆಯುವ ಮಾಪಕದಂತಾಡುವ ಸೆಕ್ಯುಲರ್ ಬಣಕ್ಕೆ ಆತನ ಜನ್ಮದಿನವೂ ನೆನಪಾಗಲಿಲ್ಲ. ಆದರೆ ಪ್ರೇಮಕಥೆಗಳನ್ನು ತುರುಕಿ ಇತಿಹಾಸವನ್ನು ತಿರುಚಲು ಈ ಬಣ ಸಾಲುಗಟ್ಟಿ ನಿಂತಿರುತ್ತವೆ! ಆದರೆ ಮಹಾರಾಣಾ ಪ್ರತಾಪ ಗ್ರೇಟ್ ಮಾತ್ರವಲ್ಲ ಭಾರತದ ಕೆಚ್ಚಿನ ಇತಿಹಾಸಕ್ಕೆ ಮತ್ತೊಂದು ಹೆಸರು. ಛಲಕ್ಕೆ, ಹೋರಾಟಕ್ಕೆ ಇಂದಿಗೂ ಪ್ರೇರಣೆ. ಮಹಾರಾಣಾ ಪ್ರತಾಪ ವಿಶ್ವ ಇತಿಹಾಸದಲ್ಲೇ ಗ್ರೇಟ್ ಅನಿಸುವುದಕ್ಕೆ ನೂರಾರು ಕಾರಣಗಳಿವೆ. ಆತನ ಛಲ, ಸ್ವಾಭಿಮಾನ, ಕೊನೆಯವರೆಗೆ ಕಾಪಿಟ್ಟುಕೊಂಡ ಮುನ್ನುಗ್ಗುವ ಸ್ವಭಾವ, ನೆಲದ ಮೇಲಿನ ಪ್ರೀತಿಗಳು ರಾಣಾ ಆತನನ್ನು ನೆಪೋಲಿಯನ್, ಅಲೆಕ್ಸಾಂಡರನಾಚೆಗೂ ನಿಲ್ಲಿಸುತ್ತವೆ. ಏಕೆಂದರೆ ರಾಣಾ ಪ್ರತಾಪ ತನ್ನದಲ್ಲದ ಒಂದಿಂಚು ನೆಲವನ್ನೂ ಅಪೇಕ್ಷೆಪಟ್ಟವನಲ್ಲ. ಜಗತ್ತನ್ನೇ ಮುಷ್ಠಿಯಲ್ಲಿಡಲು ಹಾತೊರೆದವನಲ್ಲ. ಇತರ ಮಹತ್ವಾಾಕಾಂಕ್ಷಿ ಅರಸರಂತೆ ಸಾಮ್ರಾಜ ವಿಸ್ತಾರಕ್ಕೆ ಎಂದೂ ಕೈಹಾಕಲಿಲ್ಲ. ಕಡೆಯವರೆಗೂ ತನ್ನ ನಂಬಿದವರನ್ನು ಕೈಬಿಡಲಿಲ್ಲ. ಇಂಥ ಒಬ್ಬ ಅರಸ ಜಗತ್ತಿನಲ್ಲಿ ಕಾಣುವುದು ತೀರಾ ಅಪರೂಪ. ಅಂಥ ಅಪರೂಪದ ರಾಜ ರಾಣಾ ಪ್ರತಾಪ.
ತಂದೆ ಉದಯಸಿಂಹ ನಿಧನರಾದಾಗ ಆತ ಪ್ರತಾಪ ಸಿಂಹನಿಗೆ ಬಿಟ್ಟು ಹೋಗಿದ್ದು ಶ್ರೇಷ್ಠ ರಜಪೂತ ವಂಶದ ಕಥೆಗಳನ್ನು ಮತ್ತು ರಾಣಾ ಎಂಬ ಬಿರುದನ್ನು ಮಾತ್ರ. ಆ ಹೊತ್ತಿಗೆ ಮೇವಾಡ ಶಿಥಿಲವಾಗಿತ್ತು. ಅಕ್ಬರನ ಕ್ಷುದ್ರ ದೃಷ್ಟಿಯಿಂದ ಸಾಮ್ರಾಜ್ಯಾದ್ಯಂತ ವಿಷಮ ಪರಿಸ್ಥಿತಿ ನೆಲೆಸಿತ್ತು. ಚಿತ್ತೋಡ್ ಸಂಪೂರ್ಣ ಅಕ್ಬರನ ವಶವಾಗಿತ್ತು. ಅಲ್ಲದೆ ಮನೆಯೊಳಗೇ ಜಯಮಲ್ಲನೆಂಬವನು ಬಗಲಿನ ಕೆಂಡದಂತಿದ್ದ. ಪ್ರತಾಪನ ಸ್ವಜಾತಿ ಬಾಂಧವರೆಲ್ಲರೂ ಅಕ್ಬರನ ಪರವಾಗಿದ್ದರು. ಅಲ್ಲದೆ ಸಮೀಪದ ಮಾರವಾಡ, ಅಂಬಾರ್, ಬೂಂದಿ, ಬಿಕಾನೇರುಗಳ ರಾಜರೆಲ್ಲರೂ ಸ್ವಾಭಿಮಾನವನ್ನು ಮರೆತು ದೆಹಲಿಗೆ ಮುಜುರೆ ಸಲ್ಲಿಸುತ್ತಿಿದ್ದರು. ಒಡಹುಟ್ಟಿದ ತಮ್ಮ ಶಕ್ತಿಸಿಂಹ ಕೂಡಾ ಪ್ರತಾಪನಿಂದ ದೂರವಾದ. ಸಿಂಹಾಸನ ಸಿಗದ ಆಕ್ರೋಶಗೊಂಡ ತಂದೆಯ ದಾಸಿಪುತ್ರ ಜಗಮಲ್ಲ ಅಕ್ಬರನ ದರ್ಬಾರಿನಲ್ಲಿ ಕುರ್ಚಿ ಗಿಟ್ಟಿಸಿಕೊಂಡು ಮೇವಾಡದ ಮೇಲೆ ಕತ್ತಿ ಮಸೆಯುತ್ತಿದ್ದ. ತನ್ನ ಪಾದ ನೆಕ್ಕಿದವರಿಗೆಲ್ಲರಿಗೂ ಅಕ್ಬರ್ ಪಾಳೆಪಟ್ಟುಗಳನ್ನು ನೀಡಿ ಸಂತೃಪ್ತಗೊಳಿಸಿದ್ದ. ಆದ್ದರಿಂದ ಅಕ್ಬರನ ಪಾದಕ್ಕೆ ಬೀಳುವ ರಜಪೂತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿತ್ತು. ಆದರೆ ರಾಣಾ ಪ್ರತಾಪ ತಾನೇ ಬರಿಗೈವನಾಗಿದ್ದ. ಹಾಗಾಗಿ ಒಬ್ಬೊಂಟಿಯಾದ. ಆದರೆ ಉಳಿದ ರಜಪೂತರಲ್ಲಿಲ್ಲದ ಕೆಲವು ಸಂಗತಿಗಳು ರಾಣಾ ಪ್ರತಾಪನಲ್ಲಿದ್ದವು. ತಮ್ಮ ವಂಶದ ಮಹಾನ್ ಚರಿತ್ರೆ, ಬಪ್ಪರಾವನನ ಸದಾ ಕಾಡುವ ನೆನಪು ಆತನಲ್ಲಿ ಸದಾ ಇರುತ್ತಿತ್ತು. ಈ ಕಾರಣದಿಂದ ರಾಣಾ ಪ್ರತಾಪ ಆಕ್ರಮಣಕಾರನ ದರ್ಬಾರಿನಲ್ಲಿ ತಣ್ಣಗೆ ಇರುವುದಕ್ಕಿಂತಲೂ ಮುಳ್ಳಿನ ಹಾದಿಯನ್ನು ಆರಿಸಿಕೊಂಡ. ಗುಂಭಳಗಢಕ್ಕೆ ಹೊರಟು ನಿಂತ. ಆದರೆ ಅತನ ಹಿಂದೆಯೇ ಅಕ್ಬರನು ರಜಪೂತ ಸೈನ್ಯವನ್ನು ಅಟ್ಟಿದ್ದ. 25 ವರ್ಷಗಳಿಂದ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಅಕ್ಬರನ ಸೈನ್ಯದೊಡನೆ ಆಗಷ್ಟೇ ಪಟ್ಟಕ್ಕೆ ಬಂದ ಪ್ರತಾಪ ಹೋರಾಡಬೇಕಿತ್ತು. ಅನುಭವವಿಲ್ಲ, ಆತನಷ್ಟು ಶಕ್ತಿಯಿಲ್ಲ. ಆದರೆ ಕೆಚ್ಚು ಒಂದನ್ನೇ ಬಂಡವಾಳವಾಗಿ ಹೊಂದಿದ್ದ ಪ್ರತಾಪ ಅದನ್ನು ಎದುರಿಸಲು ಸಿದ್ಧನಾದ.
ಬೆಟ್ಟದಿಂದ ಬೆಟ್ಟಕ್ಕೆ ದೌಢಾಯಿಸಿದ, ಕಾಡಿನ ಹಣ್ಣುಹಂಪಲುಗಳಿಂದಲೇ ಹೊಟ್ಟೆ ತುಂಬಿಸಿಕೊಂಡ. ಕಾಡುಜನರೊಂದಿಗೆ ನಿರಂತರ ಓಡಾಟ ಮಾಡಿದ. ಅಕ್ಬರ ರಕ್ತಸಂಬಂಧದ ಆಹ್ವಾನವನ್ನು ನೀಡಿ ಮತ್ತೊಂದು ರೀತಿಯಲ್ಲಿ ರಾಣಾ ಪ್ರತಾಪನನ್ನು ಬಗ್ಗಿಸಲು ನೋಡಿ ಅದರಲ್ಲೂ ವಿಫಲನಾದ. ತನ್ನ ನೆಲದ ಸ್ವಾತಂತ್ರ್ಯಹರಣ ಮಾಡಿದವನ ಮೇಲೆ ಎಂಥ ಸಂಧಿ? ರಾಣಾ ಪ್ರತಾಪ ಆತನ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿ ಮತ್ತಷ್ಟು ಕಷ್ಟದ ಬದುಕನ್ನು ಅಪ್ಪಿಕೊಂಡ. ಬೆಳ್ಳಿಯ ಊಟ ತಟ್ಟೆಗಳನ್ನು ತ್ಯಜಿಸಿದ, ಊಟಕ್ಕೆ ಎಲೆಗಳನ್ನು ಬಳಸಿದ, ಮೆತ್ತನೆಯ ಹಾಸಿಗೆಯ ಬದಲಿಗೆ ಹುಲ್ಲಿನ ಹಾಸಿಗೆಯನ್ನು ಬಳಸತೊಡಗಿದ. ಕ್ಷೌರವನ್ನು ತ್ಯಜಿಸಿ ದೀಕ್ಷಾಬದ್ಧನಾದ. ಮೈದಾನಗಳನ್ನು ತ್ಯಜಿಸಿ ಕಾಡು ಸೇರಿಕೊಳ್ಳಲು ತನ್ನ ಸೈನಿಕರಿಗೆ ಆಜ್ಞೆ ನೀಡಿದ. ಸಾಮ್ರಾಜ್ಯದ ಹೊಲಗಳೆಲ್ಲಾ ಹುಲ್ಲುಗಾವಲಾದವು. ರಾಜಮಾರ್ಗದಲ್ಲಿ ಮುಳ್ಳುಗಿಡಗಳು ಬೆಳೆದವು. ಆ ಹೊತ್ತಿನ ರಾಣಾನ ಮನಸ್ಥಿತಿ ಹೇಗಿದ್ದಿರಬಹುದು? ಯಾವ ರಾಜ ತಾನೇ ತನ್ನ ಸಾಮ್ರಾಜ್ಯವನ್ನು ಹಾಗೆ ನೋಡಲು ಆಸೆ ಪಟ್ಟಾನು? ಆದರೆ ರಾಣಾ ಪ್ರತಾಪನ ಈ ನಡೆಯ ಹಿಂದೆ ರಣತಂತ್ರದ ಉದ್ದೇಶವಿತ್ತು. ಊರನ್ನು ಹಾಳುಸುರಿಯಲು ಬಿಟ್ಟ ಮೇವಾಡದ ಸೈನ್ಯ ಅಕ್ಬರ ಮತ್ತು ಆತನ ಹಿಂಬಾಲಕರ ದಂಡನ್ನು ಸುಲಭವಾಗಿ ತಡೆದರು. ಮೊಘಲರ ವ್ಯಾಪಾರ ಮಾರ್ಗ ಬಂದಾಯಿತು. ಮೇವಾಡದ ಈ ನಡೆ ದೆಹಲಿಗೂ ಉಸಿರುಗಟ್ಟಿಸಿತ್ತು. ಪರಿಣಾಮ ಸ್ವತಃ ಅಕ್ಬರನೇ ಆಜ್ಮೀರಕ್ಕೆ ಬಂದಿಳಿದ. ಇದು ಮುಂದೆ ಹಳದೀಘಾಟ್ ಯುದ್ಧಕ್ಕೆ ಮುನ್ನುಡಿಯಾಯಿತು.
ಇತಿಹಾಸಕಾರರ, ಸಿನಿಮಾ ಮಂದಿಯ ಅಕ್ಬರ್ ದಿ ಗ್ರೇಟ್ ಯಾವ ಲೆಕ್ಕದಲ್ಲೂ ಪ್ರತಾಪನಿಗೆ ಸಾಟಿಯಾಗುವಂತಿರಲಿಲ್ಲ. ಅಕ್ಬರನ ಸೈನ್ಯದ ಬಹುಪಾಲು ಸ್ವಂತಿಕೆ ಕಳೆದುಕೊಂಡ ರಜಪೂತರೇ ಆಗಿದ್ದರು. ರಾಣಾ ಪ್ರತಾಪ ಮೊಘಲರೆದುರು ನೇರ ಯುದ್ಧ ಘೋಷಿಸಿದ್ದರೆ ಅಕ್ಬರ ಭಯಗ್ರಸ್ಥನಾಗಿ ದೆಹಲಿ ಬಿಟ್ಟು ಬಂದಿದ್ದ. ಉದಯಪುರದ ಬಳಿಯ ಹಳದಿಘಾಟಿ ಮೈದಾನದಲ್ಲಿ ಪ್ರತಾಪನನ್ನು ಎದುರಿಸಲು ಅಕ್ಬರ ತನ್ನ ಮಗ ಸಲೀಮನನ್ನು ಕಳುಹಿಸಿದ. ಆತನ ಸಹಾಯಕರಾಗಿ ಮಾನಸಿಂಹ ಮತ್ತು ಮಹಬತ್ ಖಾನ್‌ರನ್ನು ನೇಮಿಸಿ ಅಕ್ಬರ ಕುಟಿಲ ತಂತ್ರ ಹೆಣೆದಿದ್ದ. ಏಕೆಂದರೆ ರಾಣಾ ಪ್ರತಾಪನ ರಜಪೂತ ಸೇನೆ ಮಾನಸಿಂಹನೊಡನೆ ಹೋರಾಟ ಮಾಡದಿರಲಿ ಮತ್ತು ರಜಪೂತರು ಪರಸ್ಪರ ಹೋಡೆದಾಡಿ ಸಾಯಲಿ ಎಂಬ ಉದ್ದೇಶ ಅಕ್ಬರನಿಗಿತ್ತು. ಯುದ್ಧಕ್ಕಿಳಿಯುವಾಗಲೂ ಅಕ್ಬರನಲ್ಲಿ ಎಷ್ಟೊಂದು ಭಯ ಮನೆಮಾಡಿತ್ತೆಂದರೆ ಹಳದಿಘಾಟಿಗೆ ತೆರಳುವ ತನ್ನ ಪಡೆಗಳಲ್ಲಿ ಅತೀ ಹೆಚ್ಚು ರಜಪೂತ ಸೈನ್ಯವೇ ಇರುವಂತೆ ಮುತುವರ್ಜಿ ವಹಿಸಿದ. ರಾಣಾ ಪ್ರತಾಪ ತನ್ನ 22 ಸಾವಿರ ಖಡ್ಗಧಾರಿಗಳ ಮುಂಚೂಣಿಯಲ್ಲಿ ಬಂದು ನಿಂತ. ಮೊಘಲ್ ಸೇನೆ ರಜಪೂತ ಸೈನ್ಯಕ್ಕಿಂತ ಮೂರು ಪಟ್ಟು ದೊಡ್ಡದಿದ್ದರೂ ಮೇವಾಡದ ಸೇನೆ ನೇರ ಆಕ್ರಮಣಕ್ಕಿಳಿಯಿತು. ರಾಣಾ ಪ್ರತಾಪ ನೇರವಾಗಿ ಸಲೀಮನತ್ತ ನುಗ್ಗದೆ ಮಾನಸಿಂಹನ ಮೇಲೆರಗಿದ. ರಾಣಾ ಪ್ರತಾಪನ ದೃಷ್ಟಿಯನ್ನು ಎದುರಿಸಲಾಗದೆ ಮಾನಸಿಂಹ ಸಲೀಮನ ಬೆನ್ನ ಹಿಂದೆ ಅವಿತುಕೊಂಡ.
ಖಡ್ಗ ಹಿಡಿದ ಪ್ರತಾಪ ಸಲೀಮನತ್ತ ನುಗ್ಗಿದ. ಆತನೂ ಪ್ರತಾಪನ ಆಕ್ರೋಶವನ್ನು ಕಂಡು ಪಲಾಯನಕ್ಕೆ ಯತ್ನಿಸಿದ. ಆತನ ಆನೆ ಕೆರಳಿ ಸಲೀಮನನ್ನು ಯುದ್ಧರಂಗದಿಂದ ಹೊತ್ತುಕೊಂಡು ಓಡಿತು. ನೋಡನೋಡುತ್ತಲೇ ಎರಡೂ ಕಡೆಯ ರಜಪೂತರ ಜೀವ ತುಂಡಾಗಿ ಬೀಳತೊಡಗಿತು. ಸ್ವತಃ ಪ್ರತಾಪ ಮೂರು ಬಾರಿ ಶತ್ರುಗಳ ವ್ಯೂಹದಲ್ಲಿ ಸಿಕ್ಕಿಕೊಂಡು ಹಿಂತಿರುಗಿದ. ಆತನ ದೇಹದಿಂದ ರಕ್ತ ಬೆವರಿನಂತೆ ಸೋರತೊಡಗಿತು. ಪ್ರತಾಪನನ್ನು ಉಳಿಸಲು ಹಲವು ರಜಪೂತ ಯೋಧರು ತಾವು ಬಲಿದಾನಿಗಳಾದರು. ರಜಪೂತರು ಸಾಗರದಂತಿದ್ದ ಮೊಘಲ್ ಸೈನ್ಯದೆದುರು ಮೇವಾಡದ ಯೋಧರು ಹೋರಾಡುತ್ತಲೇ ಇದ್ದರು. ಮೊಘಲರ ಒಂದು ದಳ ಖಾಲಿಯಾಗುತ್ತಿದ್ದಂತೆ ಮತ್ತೊಂದು ಹೊಸ ದಳ ರಕ್ತಬೀಜಾಸುರನಂತೆ ಮೇವಾಡದೆದುರು ಬಂದು ನಿಲ್ಲುತ್ತಿತ್ತು. ರಜಪೂತ ದಳಗಳು ಒಂದೊಂದಾಗಿ ಕೆಳಗುರುಳುತ್ತಿದ್ದವು. ಯುದ್ಧ ಆರಂಭವಾದಾಗ 22 ಸಾವಿರದಷ್ಟಿದ್ದ ರಜಪೂತ ಸೈನ್ಯದ ಸಂಖ್ಯೆ 8ಸಾವಿರಕ್ಕೆ ಬಂದು ಮುಟ್ಟಿತು. ಹಳದಿಘಾಟ್ ರಜಪೂರತ ರಕ್ತದಿಂದ ಕೆಂಪಾಯಿತು. ಆ ಹೊತ್ತಿಗೆ ಪ್ರತಾಪನೂ ರಕ್ತದಿಂದ ತೊಯ್ದುಹೋಗಿದ್ದ. ಗಂಭೀರವಾಗಿ ಗಾಯಗೊಂಡ ಅವನನ್ನು ಯುದ್ಧರಂಗದಿಂದ ಹೊರಗೆ ಸಾಗಿಸಲಾಯಿತು. ಆ ಸ್ಥಿತಿಯಲ್ಲೂ ಪ್ರತಾಪ ಹೆಸರಿಗೆ ತಕ್ಕಂತೆ ಪ್ರತಾಪವನ್ನು ಪ್ರದರ್ಶಿಸಿದ.
ಆತನ ಆಜ್ಞೆಯಂತೆ ರಾಜನನ್ನು ತನ್ನ ಮೆಚ್ಚಿನ ಕುದುರೆ ಚೇತಕ್‌ನ ಮೇಲೆ ಕೂರಿಸಲಾಯಿತು. ಪ್ರತಾಪ ಕುಳಿತಿದ್ದೇ ತಡ ಚೇತಕ್ ಸಾಮ್ರಾಜ್ಯದ ಉದ್ದೇಶ ರಾಜನಂತೆ ತನಗೂ ತಿಳಿದಿದೆ ಎನ್ನುವಂತೆ ಓಡತೊಡಗಿತು. ಚೇತಕ್ ಅನ್ನು ಬೆನ್ನಟ್ಟುತ್ತಾ ಇಬ್ಬರು ಮೊಘಲ್ ಕುದುರೆ ಸವಾರರು ಹಿಂಬಾಲಿಸುತ್ತಿದ್ದರು. ಇನ್ನೇನು ಕುದುರೆ ಸವಾರರು ಚೇತಕ್‌ನ ತೀರಾ ಸಮೀಪಕ್ಕೆ ಬಂದಾಗ ರಜಪೂತರ ರತ್ನವನ್ನು ಹೊತ್ತಿದ್ದ ಆ ಕುದುರೆ ದೊಡ್ಡ ಕಂದಕವೊಂದನ್ನು ಹಾರಿ ದಾಟಿತು. ಕಂದಕದಾಚೆ ಹಾರಿದ ಚೇತಕ್ ತನ್ನೊಡೆಯನ್ನೇನೊ ಪಾರುಮಾಡಿತು. ಆದರೆ ಕುಸಿದ ತಾನು ಮೇಲೇಳಲಿಲ್ಲ. ಚೇತಕ್ ಕಾಲು ಮುರಿದುಕೊಂಡು ಒದ್ದಾಡತೊಡಗಿತು. ತೇವವಾದ ಕಣ್ಣುಗಳಿಂದ ಚೇತಕ್‌ನತ್ತ ನೋಡಿದ ಪ್ರತಾಪನಿಗೆ ಚೇತಕ್‌ನ ರೂಪದಲ್ಲಿ ಮೇವಾಡವೇ ಕಾಲುಮುರಿದುಬಿದ್ದಂತೆ ಕಂಡಿತು. ಅಷ್ಟರಲ್ಲಿ ಅಟ್ಟಿಸಿಕೊಂಡು ಬಂದ ಇಬ್ಬರು ಕುದುರೆ ಸವಾರರಲ್ಲೊಬ್ಬ ಪ್ರತಾಪನ ಬಳಿ ಬಂದ. ನೋಡಿದರೆ ಆತ ತನ್ನ ಸ್ವಂತ ತಮ್ಮ ಶಕ್ತಿಸಿಂಹ! ಅಕ್ಬರನ ಜೊತೆಗೂಡಿ ಮೇವಾಡದ ಬೆನ್ನಿಗೆ ಇರಿದಿದ್ದ ಆ ದ್ರೋಹಿಯನ್ನು ಪ್ರತಾಪ ವಿಷಾದಿಂದೊಮ್ಮೆ ನೋಡಿದ. ಆದರೆ ಶಕ್ತಿಹಿಂಹನ ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಹಳದಿಘಾಟಿಯಲ್ಲಿ ರಜಪೂತರ ಪರಾಕ್ರಮವನ್ನು ನೋಡುತ್ತಾ ಶಕ್ತಿಸಿಂಹ ಮೊಘಲರ ವಿರುದ್ಧ ತಿರುಗಿಬಿದ್ದಿದ್ದ! ಸಹೋದರರ ಈ ಮಿಲನವನ್ನು ನೋಡುತ್ತಾ ಚೇತಕ್ ನೆಮ್ಮದಿಯಿಂದ ಕಣ್ಣುಮುಚ್ಚಿತು.
ಖ್ಯಾತ ಇತಿಹಾಸಕಾರ ಡಾ.ಗೌರಿ ಶಂಕರ ಹೀರಾಚಂದ್ ಓಝಾರವರು ತಮ್ಮ ‘ವೀರ ಶಿರೋಮಣಿ ಮಹಾರಾಣಾಪ್ರತಾಪ್ ಪುಸ್ತಕದಲ್ಲಿ ಹಳದಿಘಾಟಿನಲ್ಲಿ ನಡೆದ ಒಂದು ಘಟನೆಯನ್ನು ಹೀಗೆ ವಿವರಿಸುತ್ತಾರೆ:  ಯುದ್ಧ ಮಾಡುತ್ತಲೇ ರಾಣಾ ಪ್ರತಾಪ ತನ್ನ ಚೇತಕ್‌ನಲ್ಲಿ ಮಾನಸಿಂಹನನ್ನು ಹುಡುಕುತ್ತಿದ್ದ. ಒಂದೆಡೆ ಆವನಿಗೆ ಮುಖಾಮುಖಿಯಾಗಿ ನಿಂತು ‘ಈಗ ನಿನ್ನ ಪೌರುಷವನ್ನು ತೋರಿಸು ಎಂದು ಅಬ್ಬರಿಸಿದ. ಆ ಕಂಚಿನ ಕಂಠವನ್ನು ಕೇಳಿ ನಡುಗಿನ ಮಾನಸಿಂಹ ಓಡತೊಡಗುತ್ತಾನೆ. ಪ್ರತಾಪ ತನ್ನ ಭರ್ಚಿಯಿಂದ ಮಾನಹಿಂಹನ ಮೇಲೆ ದಾಳಿ ನಡೆಸುತ್ತಾನೆ. ಆದರೆ ಮಾನಸಿಂಹ ತನ್ನ ಕವಚದಿಂದ ಬದುಕಿಕೊಳ್ಳುತ್ತಾನೆ. ಯುದ್ಧರಂಗದಲ್ಲಿ ಪ್ರತಾಪನದೊಂದು ಪರಾಕ್ರಮವಾದರೆ ಚೇತಕ್‌ನದ್ದು ಮತ್ತೊಂದು ಪರಾಕ್ರಮ. ಆ ರಜಪೂತ ಕುದುರೆ ರಾಣಾನ ಮನಸ್ಸನ್ನು ಅರ್ಥ ಮಾಡಿಕೊಂಡಂತೆ ಎದುರಾಳಿಗಳನ್ನು ಕಾಲುಗಳಿಂದ ಆಘಾತವೆಸಗುತ್ತಿತ್ತು. ರಜಪೂತರ ಸೇನೆ ಜರ್ಜರಿತವಾದರೂ ಅಕ್ಬರನಿಗೆ ಯಶಸ್ಸು ಸಿಗಲಿಲ್ಲ. ದಾರಿಗಾಣದೆ ಮೊಘಲ್ ಸೇನೆ ಅಜ್ಮೀರಕ್ಕೆ ತೆರಳಿತು. ಇತ್ತ ಪ್ರತಾಪ ಗಾಯಗೊಂಡರೂ ಕುಂಭಳಗಢಕ್ಕೆ ತೆರಳಿ ಆಸುಪಾಸಿನ ಮೊಘಲ್ ಕೋಟೆಗಳ ಮೇಲೆ ದಾಳಿ ಆರಂಭಿಸಿದ. ಮೊಘಲರ ಹಲವು ಕೋಟೆಗಳು ಪ್ರತಾಪನ ವಶವಾದವು.
ಒಮ್ಮೆ ಪ್ರತಾಪನ ಸೇನೆ ಅಕ್ಬರನ ಸೇನೆಯ ಮೇಲೆ ನಡೆಸಿದ ದಾಳಿಯಲ್ಲಿ ಆತನ ಸೇನಾಧಿಕಾರಿ ಮಿರ್ಜಾಖಾನ್ ಮತ್ತು ಆತನ ಪತ್ನಿಯರನ್ನು ಸೆರೆಹಿಡಿದರು. ತನ್ನ ರಾಜ್ಯವನ್ನು ಬೀದಿಗೆ ತಂದ ಶತ್ರುಗಳು ಸೆರೆಸಿಕ್ಕರೂ ರಾಣಾ ಅವರನ್ನು ಗೌರವಪೂರ್ವಕವಾಗಿ ಹಿಂದಕ್ಕೆ ಕಳುಹಿಸಿಕೊಟ್ಟು ತನ್ನ ಧರ್ಮಭೀರುತನವನ್ನು ಪ್ರದರ್ಶಿಸಿದ. ಅಂಥ ಗ್ರೇಟ್‌ನೆಸ್ಸ್ ಬುದ್ಧಿಜೀವಿಗಳ ಅಕ್ಬರನಿಗೆ ಎಂದಾದರೂ ಇತ್ತೇ? ನಮ್ಮ ಇತಿಹಾಸ ತಿಳಿಸಬೇಕಾದದ್ದು ಪ್ರತಾಪನಂಥಾ ಇತಿಹಾಸವನ್ನೋ ಅಥವಾ ಪರರ ರಾಜ್ಯವನ್ನು ಕಿತ್ತುಕೊಳ್ಳಲು ಹೊರಟ ಅಕ್ಬರನಂಥವನ ಜೀವನದ ಕಥೆಗಳನ್ನೋ? ಅಂಥ ಕಥೆಯನ್ನು ಓದುವ ಮಕ್ಕಳಿಗೆ ತನ್ನದಲ್ಲದ ವಸ್ತುವನ್ನೂ ಕದಿಯಬಹುದು ಎಂಬ ಭಾವ ಹುಟ್ಟಲಾರದೇ? ನಮ್ಮ ಇತಿಹಾಸ ಎಂಥ ಪೀಳಿಗೆಯನ್ನು ನಿರ್ಮಾಣ ಮಾಡಬೇಕಾಗಿದೆ? ಯಾರ ಜಯಂತಿಯನ್ನು ಆಚರಿಸಬೇಕಾಗಿದೆ. ಇತಿಹಾಸಕ್ಕೆ ವ್ಯಕ್ತಿನಿರ್ಮಾಣದ ಹೊಣೆಗಾರಿಕೆ ಇರುವುದಿಲ್ಲವೇ? ಸೆಕ್ಯುಲರ್ ಹುನ್ನಾರದಿಂದ ಶಾಲಾ ಪಠ್ಯಗಳಲ್ಲಿ ರಾಣಾ ಪ್ರತಾಪನ ಹೋರಾಟದ ಗಾಥೆಯ ಬದಲಿಗೆ ಅಕ್ಬರ್ ಕಥೆ ಕೇಳಲು ಸಿಗುತ್ತದೆ. ಆದರೆ ಆರೆಸ್ಸೆಸ್ ಶಾಖೆಗಳಲ್ಲಿ, ಆರೆಸ್ಸೆೆಸಿನ ಶಾಳೆಗಳಲ್ಲಿ ಇಂದಿಗೂ ರಾಣಾ ಪ್ರತಾಪ ಜೀವಂತವಾಗಿದ್ದಾನೆ. ಆತನ ಪ್ರೇರಣೆ ಪಡೆಯುವ ಲಕ್ಷಾಂತರ ಯುವಕರು ಇಂದು ಶಾಖೆಗಳಲ್ಲಿ ಬೆಳೆಯುತ್ತಿದ್ದಾರೆ. ಸುಳ್ಳನ್ನೇ ಕುಡಿದು ಬೆಳೆಯುವ ವ್ಯಕ್ತಿ ಎಂಥ ಸಮಾಜವನ್ನು ನಿರ್ಮಿಸಬಲ್ಲ? ಹಾಗಾಗಿ ಆರೆಸ್ಸೆಸ್ಸಿನಲ್ಲಿ ಬೆಳೆಯುವ ವ್ಯಕ್ತಿಯ ಮೇಲೆ ಇಂದು ದೇಶ ನಂಬಿಕೆಯಿಡುತ್ತಿದೆ.

Comments are closed.