Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!!

ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!!

ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!!

ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ! ‘ಲವ್ ಜಿಹಾದ್’ ಅಥವಾ ‘ರೋಮಿಯೋ ಜಿಹಾದ್’ ಎಂಬ ಕಾರ್ಯಸೂಚಿ ನಿಜಕ್ಕೂ ನಡೆಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆಯೇ? ‘ಲವ್ ಜಿಹಾದ್’ಗೂ ನಕಲಿ ನೋಟು, ಮಾದಕವಸ್ತು ಕಳ್ಳಸಾಗಣೆ ಜಾಲ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೂ ಸಂಬಂಧ, ಸಂಪರ್ಕ ಇದೆಯೇ? ಹಾಗಂತ ಕೇರಳ ಹೈಕೋರ್ಟ್ ಎಂಟು ವರ್ಷದ ಹಿಂದೆಯೇ ಪ್ರಶ್ನಿಸಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2009, ಸೆಪ್ಟೆಂಬರ್ 30ರಂದು ನಿರ್ದೇಶನ ನೀಡಿದ್ದ ಕೇರಳ ಹೈಕೋರ್ಟ್, ಕೂಲಂಕಷ ತನಿಖೆ ನಡೆಸಿ, ಈ ಮೇಲಿನ ಆಯಾಮಗಳ ಬಗ್ಗೆ ದೃಷ್ಟಿ ಹಾಯಿಸಿ ಮೂರು ವಾರಗಳೊಳಗೆ ತನಗೆ ವರದಿಯೊಪ್ಪಿಸ ಬೇಕೆಂದು ಆಗ ಆದೇಶ ನೀಡಿತ್ತು. ಅದಕ್ಕೂ ಕಾರಣವಿದೆ.
ಅಂದು ಕೇರಳದ ಪಟ್ಟಣಂತಿಟ್ಟ ಕಾಲೇಜಿನ ಇಬ್ಬರು ಎಂಬಿಎ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಅವರ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಪತ್ತೆ ಮಾಡಲಾಗಲಿಲ್ಲ. ಕೊನೆಗೆ ಹೈಕೋರ್ಟ್‌ನ ಕದತಟ್ಟಿದ ಅವರು ‘ಹೇಬಿಯಸ್ ಕಾರ್ಪಸ್’(ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ) ಮೊಕದ್ದಮೆ ಹಾಕಿದರು. ಅನಿವಾರ್ಯಕ್ಕೆ ಸಿಲುಕಿದ ಪೊಲೀಸರು ಕಾರ್ಯಪ್ರವೃತ್ತರಾಗಲೇಬೇಕಾಯಿತು. ಇಬ್ಬರನ್ನೂ ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಸತ್ಯ ತೆರೆದುಕೊಳ್ಳುತ್ತಾ ಹೋಯಿತು. ಸುಮಾರು ವರ್ಷಗಳ ಹಿಂದೆ ಕೆಲವು ನಿರ್ದಿಷ್ಟ ದಿನಗಳಂದು ಇಂಟರ್‌ನೆಟ್ ಮೂಲಕ ಕಂಪ್ಯೂಟರ್‌ಗಳಿಗೆ ಬಗ್(ವೈರಸ್)ಗಳನ್ನು ಹರಿಬಿಡುತ್ತಿದ್ದುದನ್ನು ನೀವು ಕೇಳಿರಬಹುದು ಅಥವಾ ನಿಮಗೂ ಅನುಭವಕ್ಕೆ ಬಂದಿರಬಹುದು. ಜನವರಿ 1, ಫೆಬ್ರವರಿ 14 ಹೀಗೆ ಕೆಲವು ದಿನಗಳಂದು ಇಂಟರ್‌ನೆಟ್ ಕನೆಕ್ಟ್‌ ಮಾಡಿಕೊಳ್ಳಲು ಜನ ಹೆದರುತ್ತಿದ್ದರು, ಆ ದಿನಗಳಂದು ಇಂಟರ್‌ನೆಟ್ ಮುಟ್ಟಬೇಡಿ ಎಂದು ಮೊದಲೇ ಸಂದೇಶಗಳನ್ನು ರವಾನಿಸುವುದನ್ನು ಕಾಣಬಹುದಿತ್ತು.
ಫೆಬ್ರವರಿ 14ರಂದು ‘ಲವ್ ಬಗ್’ ಬಂದೇ ಬರುತ್ತದೆ, ನಿಮ್ಮ ಕಂಪ್ಯೂಟರ್ ಅನ್ನು ಹಾಳುಮಾಡಿಯೇ ಮಾಡುತ್ತದೆ ಎಂಬ ನಂಬಿಕೆಯಿತ್ತು. ಪ್ರಸ್ತುತ ಕೇರಳದಲ್ಲಿ ‘ರೋಮಿಯೋ ಜಿಹಾದ್’, ‘ಲವ್ ಜಿಹಾದ್’ ಎಂಬ ವೈರಸ್‌ಗಳು ಓಡಾಡುತ್ತಿವೆ! ಈ ವೈರಸ್‌ಗಳ ವೈಶಿಷ್ಟ್ಯವೇನೆಂದರೆ ಅವು ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡುವುದಿಲ್ಲ, ಅಮಾಯಕ ಹಿಂದೂ ಮತ್ತು ಕ್ರೈಸ್ತ ಯುವತಿಯರ ಮನಸ್ಸಿನ ಮೇಲೆ ‘ಪ್ರೀತಿ’ಯ ಹೆಸರಿನಲ್ಲಿ ದಾಳಿ ಮಾಡುತ್ತಿವೆ! ಮಲೆಯಾಳಿ ಮುಸ್ಲಿಮರಲ್ಲಿನ ಒಂದು ವರ್ಗ ತಮ್ಮ ಸಮುದಾಯದ ಸುಂದರ ಯುವಕರನ್ನು ಛೂ ಬಿಟ್ಟಿದೆ. ಆ ಯುವಕರು ಮಾಡಲು ಉದ್ಯೋಗವಿಲ್ಲದ್ದರೂ, ಸರಿಯಾಗಿ ನಾಲ್ಕು ಅಕ್ಷರ ಕಲಿಯದಿದ್ದರೂ ಕಾಲೇಜು ಕ್ಯಾಂಪಸ್‌ಗಳಲ್ಲಿ ಅಡ್ಡಾಡುತ್ತಿರುತ್ತಾರೆ. ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಕ ಅವರ ಹಿಂದೂ-ಕ್ರೈಸ್ತ ಸ್ನೇಹಿತೆಯರ ಪರಿಚಯ ಮಾಡಿಕೊಳ್ಳುತ್ತಾರೆ, ಚೆನ್ನಾಗಿ ಹಣ ಖರ್ಚು ಮಾಡುತ್ತಾರೆ, ನಿಧಾನವಾಗಿ ಪ್ರೀತಿಯ ಗಾಳ ಹಾಕುತ್ತಾರೆ.
ಬಲೆಗೆ ಬಿದ್ದ ಮೇಲೆ ವಿವಾಹದ ನೆಪದಲ್ಲಿ ಇಸ್ಲಾಂಗೆ ಮತಾಂತರ ಮಾಡುತ್ತಾರೆ, ತದನಂತರ ಧರ್ಮಾಂಧತೆಯನ್ನು ತಲೆಗೆ ತುಂಬಿ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಹುನ್ನಾರ ರೂಪಿಸಿದ್ದಾರೆ! ಸಿರಾಜುದ್ದೀನ್ ಹಾಗೂ ಶೇನ್‌ಶಾ ಮಾಡಿದ್ದೂ ಅದನ್ನೇ. ಪಟ್ಟಣಂತಿಟ್ಟ ಕಾಲೇಜಿನ ಇಬ್ಬರು ಅನ್ಯಧರ್ಮೀಯ ವಿದ್ಯಾರ್ಥಿನಿಯರ ಜತೆ ಮೊದಲು ಸ್ನೇಹದ ನಾಟಕವಾಡಿದರು. ಕ್ರಮೇಣ ಪ್ರೀತಿಯನ್ನು ತಲೆಗೆ ತುಂಬಿದರು. ಅವರಿಬ್ಬರೂ ಒಂದು ದಿನ ಸಿರಾಜುದ್ದೀನ್ ಹಾಗೂ ಶೇನ್ ಶಾ ಜತೆ ಪಲಾಯನ ಮಾಡಿದರು. ಒಬ್ಬಳನ್ನು ವಿವಾಹ ಮಾಡಿಕೊಂಡು ಇಚ್ಛೆಗೆ ವಿರುದ್ಧವಾಗಿ ಇಸ್ಲಾಂಗೆ ಮತಾಂತರ ಮಾಡಲಾಯಿತು. ಆತನ ಸ್ನೇಹಿತನೊಬ್ಬನನ್ನು ವಿವಾಹವಾಗುವಂತೆ ಹಾಗೂ ಇಸ್ಲಾಂಗೆ ಮತಾಂತರಗೊಳ್ಳುವಂತೆ ಇನ್ನೊಬ್ಬಳ ಮೇಲೆ ಒತ್ತಡ ಹೇರಲಾಯಿತು. ಹೈಕೋರ್ಟ್ ಮುಂದೆ ಹಾಜರುಪಡಿಸಿದಾಗ ಇಬ್ಬರೂ ವಿದ್ಯಾರ್ಥಿನಿಯರು ತಮ್ಮ ಗೋಳಿನ ಕಥೆಯನ್ನು ತೋಡಿಕೊಂಡಿದ್ದಾರೆ.
ಇಸ್ಲಾಂ ಧಾರ್ಮಿಕ ಕೃತಿಗಳನ್ನು ಓದುವಂತೆ ಬಲವಂತಪಡಿಸಿದ್ದನ್ನು ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾರೆ. ನಮ್ಮನ್ನು ಅಪಹರಿಸಿ ಮಲಪ್ಪುರಂಗೆ ಕರೆದೊಯ್ದು ಮತಾಂತರ ಮಾಡಲು ಪ್ರಯತ್ನಿಸಲಾಯಿತು ಎಂದು ಹೇಳಿದ್ದಾರೆ. ದಕ್ಷಿಣ ಭಾರತ, ಅದರಲ್ಲೂ ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಕ್ರಿಯಾಶೀಲವಾಗಿರುವ ಮಲೆಯಾಳಿ ಮುಸ್ಲಿಮರ(ಬ್ಯಾರಿ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಎಂಬ ಸಂಘಟನೆಯ ಮಹಿಳಾ ವಿಭಾಗದ ಸಂಘಟಕನೊಬ್ಬ ಮತಾಂತರ ಮಾಡಲು ಪ್ರಯತ್ನಿಸಿದ ಎಂದು ದೂರಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ‘ಕ್ಯಾಂಪಸ್ ಫ್ರಂಟ್’ ಎಂಬ ವಿದ್ಯಾರ್ಥಿ ಸಂಘಟನೆ ಇಂತಹ ಕೆಲಸದಲ್ಲಿ ತೊಡಗಿದೆ ಎಂಬ ಬಲವಾದ ಅನುಮಾನಗಳು ಕಾಡಲಾರಂಭಿಸಿವೆ. ಇದು ಕೇವಲ ಒಂದು ಘಟನೆಯಲ್ಲ. ಕಳೆದ ಎಂಟು-ಹತ್ತು ವರ್ಷಗಳಲ್ಲಿ ಇಂತಹ ಸಾವಿರಾರು ಘಟನೆಗಳು ಕೇರಳದಲ್ಲಿ ನಡೆದಿವೆ!
ಪೊಲೀಸ್ ದೂರು ಪ್ರಕರಣಗಳ ಪಟ್ಟಿಯನ್ನು ತರಿಸಿಕೊಂಡು ನ್ಯಾಯಾಲಯ ಪರಾಮರ್ಶೆ ನಡೆಸಿದೆ. ಇದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡೇ, ತನಿಖೆ ನಡೆಸಿ ವರದಿಯೊಪ್ಪಿಸುವಂತೆ ಕೇರಳ ಹೈಕೋರ್ಟ್ ಪೊಲೀಸ್ ಮಹಾನಿರ್ದೇಶಕರಿಗೆ ಎಂಟು ವರ್ಷಗಳ ಹಿಂದೆಯೇ ಸೂಚಿಸಿ ಗಡುವು ನೀಡಿತ್ತು. ಜತೆಗೆ ಮೂಲತಃ ಕೊಚ್ಚಿ ಮತ್ತು ತಿರುವನಂತಪುರಂನವರಾದ ಆ ವಿದ್ಯಾರ್ಥಿನಿಯರು ಪೋಷಕರ ಜತೆ ಮನೆಗೆ ತೆರೆಳಲು ಅನುಮತಿ ನೀಡಿತ್ತು. ‘ಸಂವಿಧಾನದ 25ನೇ ವಿಧಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಅಂದಮಾತ್ರಕ್ಕೆ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವಂತೆ ಇನ್ನೊಬ್ಬರ ಮೇಲೆ ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ’ ಎಂದು ನ್ಯಾಯಾಲಯ ಹೇಳಿದೆ. ಹಲವಾರು ಪ್ರಕರಣಗಳಲ್ಲಿ ‘ಲವ್ ಜಿಹಾದ್’ ನಡೆದಿರುವುದಕ್ಕೆ ಸ್ಪಷ್ಟ ಸಂಕೇತಗಳೂ ಕಾಣುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಟಿ. ಶಂಕರನ್ ಹೇಳಿದ್ದರು.
ಈ ಮಧ್ಯೆ ಆಮಿಷ, ಬಲವಂತದ ಮೂಲಕ ಹುಡುಗಿಯರನ್ನು ಪುಸಲಾಯಿಸುವ ಹಾಗೂ ಪ್ರೇಮದ ಖೆಡ್ಡಾದಲ್ಲಿ ಬೀಳಿಸುವ ತಂತ್ರದ ವಿರುದ್ಧ ‘ಕೇರಳ ಕ್ಯಾಥೋಲಿಕ್ ಬಿಶಪ್ಸ್‌ ಕಾನ್ಫೆರೆನ್ಸ್‌’(ಅಖಿಲ ಕೇರಳ ಕ್ಯಾಥೋಲಿಕ್ ಬಿಶಪ್ಪರ ಸಂಘಟನೆ) ಕೆಲವು ವರ್ಷಗಳ ಹಿಂದೆ ಪ್ರಚಾರಾಂದೋಲನವೊಂದನ್ನು ಆರಂಭಿಸಿತ್ತು. ‘ಲವ್ ಜಿಹಾದಿ’ಗಳ “Holy war of love’ ಬಗ್ಗೆ ಹೆಣ್ಣು ಹೆತ್ತಿರುವ ಪೋಷಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿತ್ತು. ಅದರಲ್ಲೂ ಕ್ರೈಸ್ತರ ಪತ್ರಿಕೆಯಾದ ‘ಜಾಗ್ರತಾ’ದಲ್ಲಿ ದೊಡ್ಡ ಲೇಖನವನ್ನೇ ಬರೆದು ಸ್ವಧರ್ಮೀಯರನ್ನು ಎಚ್ಚರಿಸಲಾಗಿತ್ತು. ‘ಈ ಸಾಮಾಜಿಕ ಪೀಡೆಯ ವಿರುದ್ಧ ನಾವು ವಿಶ್ವಹಿಂದೂ ಪರಿಷತ್(ವಿಎಚ್‌ಪಿ) ಜತೆಗೂ ಕೈಜೋಡಿಸುತ್ತಿದ್ದೇವೆ’ ಎಂದು ಕ್ರಿಶ್ಚಿಯನ್ ಅಸೋಸಿಯೇಶನ್ ಫಾರ್ ಸೋಷಿಯಲ್ ಆಕ್ಷನ್(ಇದು ಹಿಂದೂಗಳ ವಿಎಚ್‌ಪಿ-ಶ್ರೀರಾಮಸೇನೆ, ಬ್ಯಾರಿಗಳ ಕೆಎಫ್‌ಡಿ ಇದ್ದಂತೆ ಕ್ತೈಸ್ತರ ನೈತಿಕ ಪೊಲೀಸ್!) ಪದಾಧಿಕಾರಿ ಕೆ.ಎಸ್. ಸ್ಯಾಮ್ಸನ್ ಹೇಳಿದ್ದರು!
‘ಈ ಧೂರ್ತ ತಂತ್ರಕ್ಕೆ ಹಿಂದೂ-ಕ್ರೈಸ್ತ ಎರಡೂ ಧರ್ಮದ ಯುವತಿಯರು ಬಲಿಯಾಗಿದ್ದಾರೆ. ಹಾಗಾಗಿ ನಾವು ಪರಸ್ಪರ ಸಹಕರಿಸುತ್ತಿದ್ದೇವೆ. ಯಾವುದೇ ಹಂತದವರೆಗಾದರೂ ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಕೆಲವು ದಿನಗಳ ಹಿಂದೆ ಕ್ರೈಸ್ತ ಬಾಹುಳ್ಯದ ಸ್ಥಳವೊಂದಲ್ಲಿ ಹಿಂದೂ ಶಾಲಾ ವಿದ್ಯಾರ್ಥಿನಿಯೊಬ್ಬಳು ಬಲಿಪಶುವಾಗಿದ್ದಾಳೆ ಎಂದು ತಿಳಿದುಬಂತು. ನಾವು ಕೂಡಲೇ ವಿಎಚ್‌ಪಿಗೆ ತಿಳಿಸಿದೆವು. ಅದೇ ರೀತಿ ವಿಎಚ್‌ಪಿ ಕೂಡ ಹಲವು ಪ್ರಕರಣಗಳಲ್ಲಿ ನಮಗೆ ಸಹಾಯ ಮಾಡಿದೆ’ ಎಂದೂ ಹೇಳಿದ್ದರು. ಇತ್ತ ಆಪತ್ತಿನಲ್ಲಿ ಸಿಕ್ಕಿಹಾಕಿಕೊಂಡವರಿಗೆ, ನೊಂದವರಿಗೆ ಸಹಾಯ ಮಾಡುವ ಸಲುವಾಗಿ ಕೇರಳದ ವಿಶ್ವಹಿಂದೂ ಪರಿಷತ್ ‘ಹಿಂದೂ ಹೆಲ್ಪ್‌‌ಲೈನ್’ ಆರಂಭಿಸಿದೆ. ಅದಕ್ಕೆ ಕಳೆದ ಮೂರು ತಿಂಗಳಿನಲ್ಲಿ ಸಹಾಯಯಾಚನೆ ಹಾಗೂ ಬೆದರಿಕೆ ಸೇರಿದಂತೆ 1500 ಕರೆಗಳು ಬಂದಿತ್ತೆಂದರೆ, ನೀವು ನಂಬಲೇ ಬೇಕು.
ಇಷ್ಟೇ ಅಲ್ಲ? ‘ಪ್ರೀತಿ-ಪ್ರೇಮದ ನೆಪದಲ್ಲಿ ಧಾರ್ಮಿಕ ತೀವ್ರವಾದಿಗಳು ನಡೆಸುತ್ತಿರುವ ಲವ್ ಜಿಹಾದ್ ಬಗ್ಗೆ ಕ್ರೈಸ್ತರು ನಿಗಾವಹಿಸ ಬೇಕು. ಲವ್ ಜಿಹಾದ್ ಅಥವಾ ಪವಿತ್ರ ಯುದ್ಧದ ಮೂಲಕ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಮತಾಂತರ ಮಾಡಲಾಗಿದೆ. ಈ ಲವ್ ಜಿಹಾದಿಗಳು ಕಾಲೇಜು ಕ್ಯಾಂಪಸ್‌ಗಳಲ್ಲೇ ಇರುತ್ತಾರೆ. ನಿಧಾನವಾಗಿ ಹುಡುಗಿಯರ ಮನಸೆಳೆದು ನಂತರ ವಿವಾಹದ ಪ್ರಸ್ತಾಪವನ್ನಿಡುತ್ತಾರೆ. ಆಕೆ ವಿವಾಹ ಪ್ರಸ್ತಾವವನ್ನು ಒಪ್ಪಿಕೊಂಡ ಕೂಡಲೇ ಮತಾಂತರ ಮಾಡಿಬಿಡುತ್ತಾರೆ. ಆನಂತರ ಆ ಹುಡುಗಿಯರು ಏನಾದರು, ಅವರಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಕೇರಳ ಕ್ಯಾಥೋಲಿಕ್ ಬಿಶಪ್ಸ್‌ ಕೌನ್ಸಿಲ್‌ನ ‘ಸಾಮಾಜಿಕ ಸೌಹಾರ್ದ ಹಾಗೂ ನಿಗಾ ಆಯೋಗ’ದ ಕಾರ್ಯದರ್ಶಿ ಫಾದರ್ ಆಗಿದ್ದ ಜೋನಿ ಕೊಚ್ಚುಪರಂಬಿಲ್ ಹೇಳಿದ್ದರು. ‘ತಂದೆ- ತಾಯಂದಿರು ಪೊಲೀಸರಿಗೆ ದೂರು ಕೊಡುವುದೂ ವಿರಳ.
ಏಕೆಂದರೆ ಓಡಿ ಹೋಗುವ ಹೆಣ್ಣುಮಕ್ಕಳು ಸಾಮಾನ್ಯವಾಗಿ 18 ವರ್ಷ ಮೀರಿರುತ್ತಾರೆ. ಅವರ ನಿರ್ಧಾರಕ್ಕೆ ಕಾನೂನಿನಡಿ ಸವಾಲೆಸೆಯುವುದಕ್ಕೂ ಆಗುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಕುಟುಂಬ ಗೌರವಕ್ಕೆ ಅಂಜಿ ಓಡಿಹೋದವಳು ಏನು ಬೇಕಾದರೂ ಆಗಲಿ ಎಂದು ಪೋಷಕರು ಕೈಚೆಲ್ಲಿಬಿಡುತ್ತಾರೆ’ ಎಂದು ಪರಿಸ್ಥಿತಿಯನ್ನು ಜೋನಿ ವಿವರಿಸಿದ್ದರು. ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳುವ ವಿಷಯದಲ್ಲಿ ಪೋಷಕರಿಗೆ ಸಹಾಯ ಮಾಡುವ ಸಲುವಾಗಿ ಕೇರಳದ ಎಲ್ಲ ಚರ್ಚ್ ಹಾಗೂ ಚರ್ಚ್ ಪೋಷಿತ ಶಾಲಾ-ಕಾಲೇಜುಗಳಲ್ಲೂ ಈ ಕ್ರೈಸ್ತ ಆಯೋಗ ಮಾರ್ಗ ಸೂಚಿಗಳನ್ನು ವಿತರಿಸಿದೆ. ಅಲ್ಲ, ಮತಾಂತರದ ಬಗ್ಗೆ ಕ್ಯಾಥೋಲಿಕ್ಕರಿಗೇಕೆ ಭಯ ಅನ್ನುತ್ತೀರಾ?!
ಪಟ್ಟಣಂತಿಟ್ಟ ಕಾಲೇಜಿನಿಂದ ಅಪಹರಣಗೊಂಡಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿನಿಯರಲ್ಲಿ ಒಬ್ಬಳು ಹಿಂದೂವಾದರೆ, ಮತ್ತೊಬ್ಬಳು ಇಸಾಯಿ! ಮಲಪ್ಪುುರಂ ಜಿಲ್ಲೆಯಲ್ಲಿ ‘ಲವ್ ಜಿಹಾದ್’ಗೆ ಅತಿಹೆಚ್ಚು ಬಲಿಯಾಗಿರುವವರು, ಮತಾಂತರಕ್ಕೊಳಗಾಗಿರುವವರು ಕ್ರೈಸ್ತ ಯುವತಿಯರೇ! 2005ರಿಂದೀಚೆಗೆ ಕೇರಳದಲ್ಲಿ ಸುಮಾರು 4,500ಕ್ಕೂ ಹೆಚ್ಚು ಯುವತಿಯರು ‘ರೋಮಿಯೋ ಜಿಹಾದ್’, ‘ಲವ್ ಜಿಹಾದ್’ಗೆ ಸಿಲುಕಿ ಮುಸ್ಲಿಮರನ್ನು ಮದುವೆಯಾಗಿ, ಬಲವಂತ ಅಥವಾ ಅನಿವಾರ್ಯವಾಗಿ ಮತಾಂತರಗೊಂಡಿದ್ದಾರೆ. ಅದರಲ್ಲಿ ಹಿಂದೂಗಳಷ್ಟೇ ಗಣನೀಯ ಸಂಖ್ಯೆಯಲ್ಲಿ ಕ್ರೈಸ್ತ ಯುವತಿಯರೂ ಇದ್ದಾರೆ. ಈ ಪಿತೂರಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಈ ಘಟನೆಗಳ ಬಗ್ಗೆ ಬ್ರಿಟನ್‌ನ ಪ್ರತಿಷ್ಠಿತ ‘ಟೆಲಿಗ್ರಾಫ್’ ಪತ್ರಿಕೆ ‘”Handsome Muslim men
accused of waging ‘love jihad’ in India’’ ಎಂಬ ಶೀರ್ಷಿಕೆಯಡಿ ದೊಡ್ಡ ಸುದ್ದಿ ಪ್ರಕಟಿಸಿತ್ತು.
ಅಷ್ಟೆಲ್ಲಾ ದೂರ ಏಕೆ ಹೋಗಬೇಕು? ಎಲ್ಲೋ ದೂರದ ಕೇರಳ, ಗಡಿಯ ದಕ್ಷಿಣ ಕನ್ನಡದಲ್ಲಿ ಇಂತಹ ಘಟನೆಗಳಾಗುತ್ತಿವೆ ಎಂದುಕೊಳ್ಳಬೇಡಿ. ನಮ್ಮ ಚಾಮರಾಜನಗರ ಜಿಲ್ಲೆಯಲ್ಲೇ ಒಬ್ಬ ಹುಡುಗಿ ಕೂಡ ‘ಲವ್ ಜಿಹಾದ್’ನಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಚಾಮರಾಜನಗರದ ಕುವೆಂಪು ನಗರದ ಸೆಲ್ವರಾಜ್ ಎಂಬವರ ಮಗಳು ಕಳೆದ 2009ರ ಆಗಸ್ಟ್‌ 8ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದಳು. ಈ ಬಗ್ಗೆ ಅವರು ಪೋಲಿಸರಿಗೆ ದೂರನ್ನೂ ನೀಡಿದರು. ಆಗಸ್ಟ್‌ 15ರಂದು ಅಸ್ಗರ್ ಎಂಬಾತ ಕರೆ ಮಾಡಿದ. ನಿಮ್ಮ ಮಗಳನ್ನು ಮದುವೆಯಾಗುತ್ತಿದ್ದೇನೆಂದು ಹೇಳಿದ. ಆನಂತರ ಕೆ.ಪಿ. ಪರಿತ್ ಕುಟ್ಟಿ ಎಂಬಾತನಿಂದ ಕರೆ ಬಂತು. ನಿಮ್ಮ ಮಗಳು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ, ಆಕೆಯ ಜತೆ ಇನ್ನು ಮುಂದೆ ನೀವು ಯಾವ ಸಂಪರ್ಕವನ್ನೂ ಇಟ್ಟುಕೊಳ್ಳುವಂತಿಲ್ಲ, ಮಾತನಾಡುವಂತಿಲ್ಲ ಎಂದು ತಾಕೀತು ಹಾಕಿದ. ಆದರೆ ಹೆತ್ತಜೀವ ಕೇಳಬೇಕಲ್ಲ? ಸೆಲ್ವರಾಜ್ ಅವರು ಮಗಳನ್ನು ಹುಡುಕುತ್ತ ಪೋಲಿಸರ ಜತೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎರತ್ತುಪಟ್ಟಿಗೆ ಹೋದರು.
‘ಪೊಲೀಸರ ಜತೆ ನಾನು ಹೊರಟ ಕೂಡಲೇ ಐದಾರು ತಂಡಗಳು ನಮ್ಮನ್ನು ಹಿಂಬಾಲಿಸತೊಡಗಿದವು. ಆ ಮೂಲಕ ಬೆದರಿಸಲು ಆರಂಭಿಸಿದರು. ಪೊಲೀಸರನ್ನೂ ಲೆಕ್ಕಿಸಲಿಲ್ಲ. ಹೇಗೋ ಮಾಡಿ ಮಗಳನ್ನು ಭೇಟಿ ಮಾಡಿದೆ. ಸ್ವಲ್ಪ ಹೊತ್ತು ಮಾತನಾಡಲು ಅವಕಾಶ ಕೊಟ್ಟರು. ನನಗೆ ದನದ ಮಾಂಸ ತಿನ್ನು ಎಂದು ಒತ್ತಾಾಯಿಸುತ್ತಾಾರೆ. ಹೇಗೆ ತಿನ್ನಲಿ? ಎಂದು ನೋವು ತೋಡಿಕೊಂಡಳು. ನಾನು ತಪ್ಪುು ಮಾಡಿದೆ ಎಂದು ರೋಧಿಸಿದಳು’ ಎನ್ನುತ್ತಾರೆ ಸೆಲ್ವರಾಜ್. ಈ ಬಗ್ಗೆ ಕನ್ನಡದ ಜನಪ್ರಿಯ ಚಾನೆಲ್‌ಗಳು ವಿಶೇಷ ವರದಿ ಪ್ರಸಾರ ಮಾಡಿದ್ದನ್ನು ನೀವು ನೋಡಿರಬಹುದು.
ಮಗಳನ್ನು ವಾಪಸ್ ಕರೆದುಕೊಂಡು ಬರುವುದು ಬಿಡಿ, ಹೆಚ್ಚು ಹೊತ್ತು ಮಾತನಾಡುವುದಕ್ಕೂ ಅವಕಾಶ ನೀಡದೇ ಸೆಲ್ವರಾಜ್‌ರನ್ನು ಬೆದರಿಸಿ ಕಳುಹಿಸಲಾಗಿದೆ. ದಾರಿಕಾಣದೇ ಅವರು ಕರ್ನಾಟಕ ಹೈಕೋರ್ಟ್‌ನ ಮೊರೆಹೋಗಿದ್ದರು. ಈ ಬಗ್ಗೆ ಸೂಕ್ತ ದೂರು ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಇದೊಂದೇ ಅಲ್ಲ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಜರುಗಿರುವ ಇಂತಹ ಮೂರ್ನಾಲ್ಕು ಪ್ರಕರಣಗಳು ಕರ್ನಾಟಕ ಹೈಕೋರ್ಟ್ ಮೊರೆಹೋಗಲು ಮುಂದಾಗಿವೆ. ಮುಂದಿನ ಗುರಿ ಮಡಿಕೇರಿ, ಬೆಳಗಾವಿ, ರಾಯಚೂರು. ಇತ್ತೀಚಿನ ದಿನಗಳಲ್ಲಿ ರಿಯಾಝ್ ಭಟ್ಕಳನಿಂದ ಹಿಡಿದು ದೇಶಬಾಹಿರ ಚಟುವಟಿಕೆಗಳಲ್ಲಿ ಹೆಚ್ಚುಹೆಚ್ಚಾಗಿ ತೊಡಗುತ್ತಿರುವವರೆಲ್ಲ ಕರಾವಳಿ ಭಾಗದವರೇ ಎಂಬ ಅಪಾಯಕಾರಿ ಅಂಶ ಬೆಳಕಿಗೆ ಬರುತ್ತಿದೆ. ಈಗ ಅವರು ‘ಲವ್ ಜಿಹಾದ್’ ಎಂಬ ಹೊಸ ಜಾಡು ಹಿಡಿದಿದ್ದಾರೆ ಅಷ್ಟೇ.
ಹಾದಿಯಾ ಲವ್ ಜಿಹಾದ್ ಪ್ರಕರಣದಲ್ಲಿ ಲವ್ ಜಿಹಾದ್ ಎಂಬುದು ನಿಜಕ್ಕೂ ಇದೆಯೋ ಇಲ್ಲವೋ? ಇದ್ದರೆ ಏನದು? ಸ್ವರೂಪವೇನು? ಹೇಗೆ ನಡೆಯುತ್ತದೆ ಎಂದೆಲ್ಲ ಎನ್‌ಐಎಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಮೊನ್ನೆ ಸುಪ್ರೀಂ ಕೋರ್ಟ್ ಸೂಚಿಸಿದಾಗ ಇವೆಲ್ಲ ನೆನಪಾಯ್ತು. ಅಂದು ಕೇರಳ ಹೈ ಕೋರ್ಟ್ ಯಾವ್ಯಾವ ಪ್ರಶ್ನೆ ಕೇಳಿತ್ತೋ ಹೆಚ್ಚೂಕಡಿಮೆ ಸುಪ್ರೀಂ ಕೋರ್ಟ್ ಈಗ ಅದನ್ನೇ ಕೇಳಿದೆ. ಅಖಿಲಾ ಅಲಿಯಾಸ್ ಹಾದಿಯಾ ಪ್ರಕರಣವೂ ಕೇರಳ ಹೈ ಕೋರ್ಟ್‌ನಿಂದಲೇ ಸುಪ್ರೀಂ ಕೋರ್ಟ್‌ಗೆ ಬಂದದ್ದು. ಕೇರಳ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ಹಾದಿಯಾ ಮತ್ತು ಶೆಫನ್ ಜಹಾನ್ ಮದುವೆಯನ್ನು ಅಸಿಂಧುಗೊಳಿಸಿತ್ತು. ಅದಕ್ಕೆ ಶೆಫನ್ ಜಹಾನ್ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಇದೇನೇ ಇರಲಿ, ಖಂಡಿತ ಪ್ರೀತಿಸುವುದು ತಪ್ಪಲ್ಲ. ಪ್ರೀತಿ, ಪ್ರೇಮಕ್ಕೆ ಜಾತಿ-ಧರ್ಮದ ತಾರತಮ್ಯವೂ ಇಲ್ಲ. ಆದರೆ ಕೆಲವು ಉದ್ದೇಶ, ಗುರಿಗಳನ್ನಿಟ್ಟುಕೊಂಡು ಮಾಡುವ ‘ಪ್ರೀತಿ’, ಪಿತೂರಿಯಾಗಿ ಯುವತಿಯರ ಬದುಕನ್ನೇ ಸುಟ್ಟು ಬಿಡುತ್ತದೆ. ವಿವಾಹ ಭರವಸೆ ನೀಡಿ, ಲೈಂಗಿಕ ಸಂಬಂಧ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಯ್ಲಾಕ್‌ಮೇಲ್ ಮಾಡಿದ ಉಹಾಹರಣೆಗಳೂ ಇವೆ. ಹೀಗೆ ಹೇಳುವ ಹಿಂದಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳಿ. ಪ್ರೀತಿಸುವ ಮೊದಲು ನೀವು ಎಂತಹ ವ್ಯಕ್ತಿಯನ್ನು ಪ್ರೀತಿಸಲು ಹೊರಟಿದ್ದೀರಿ ಎಂಬ ಬಗ್ಗೆಯೂ ಯೋಚನೆ ಮಾಡಿ. ಅಷ್ಟಕ್ಕೂ ವಿವೇಚನೆಯಿಲ್ಲದ ಪ್ರೀತಿ ನಿಮ್ಮ ಬದುಕಿನ ಜತೆಗೆ ಹೆತ್ತು-ಹೊತ್ತು, ಸಾಕಿ-ಸಲಹಿದ ಅಪ್ಪ-ಅಮ್ಮನನ್ನೂ ಮಾನಸಿಕವಾಗಿ ಹಿಂಸಿಸಿ ಸಾಯಿಸುತ್ತದೆ.
ಹುಡುಗಿಯರೇ ಹುಷಾರ್!

Comments are closed.