Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ಕೇಂದ್ರದ ಕಾಸಲ್ಲಿ ಸಿಎಂ ಶೋ: ಸಂಸದ ಪ್ರತಾಪ್ ಸಿಂಹ

ಕೇಂದ್ರದ ಕಾಸಲ್ಲಿ ಸಿಎಂ ಶೋ: ಸಂಸದ ಪ್ರತಾಪ್ ಸಿಂಹ

ಕೇಂದ್ರದ ಕಾಸಲ್ಲಿ ಸಿಎಂ ಶೋ: ಸಂಸದ ಪ್ರತಾಪ್ ಸಿಂಹ

2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದ್ದು ಅಷ್ಟರೊಳಗೆ
ಪ್ರತಿಯೊಂದು ಮನೆಗೂ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡುವ
ಗುರಿಯನ್ನು ಹೊಂದಿದ್ದೇನೆ ಎಂದು 2014ರ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ಮೇಲಿಂದ ಘೋಷಿಸಿದ್ದರು. ಆ ಗುರಿ
ಸಾಧನೆಗೆ ವಿದ್ಯುತ್ ಉತ್ಪಾದನೆಯಲ್ಲಿನ ಹೆಚ್ಚಳ ಎಷ್ಟು ಮುಖ್ಯವೋ, ವಿದ್ಯುತ್ ಉಳಿತಾಯವೂ ಅಷ್ಟೇ ಮುಖ್ಯ. ಇದನ್ನು ಮನಗಂಡ ಪ್ರಧಾನಿಯವರು, ಬಿಪಿಎಲ್
ಮತ್ತು ಅಂತ್ಯೋದಯ ಕಾರ್ಡುದಾರರಿಗೆ 2 ಎಲ್‍ಇಡಿ ಬಲ್ಬ್‍ಗಳನ್ನು ತಲಾ 10
ರೂ.ಗಳಿಗೆ ಕೊಡುವ ಯೋಜನೆಗೆ 2015, ಜನವರಿ 6ರಂದು “ಪ್ರಕಾಶ ಪಥ” ಎಂಬ
ಹೆಸರಿನಲ್ಲಿ ಚಾಲನೆ ನೀಡಿದರು.

ಪ್ರತಿ ಎಲ್‍ಇಡಿ ಬಲ್ಬ್‍ಗೆ ಕನಿಷ್ಟ 400 ರೂ. ವೆಚ್ಚವಾಗಲಿದ್ದು, ಅದನ್ನು ಕೇವಲ 10 ರೂ.ಗೆ ಬಡವರಿಗೆ ನೀಡುವ ಸಲುವಾಗಿ ಭಾರತ ಸರ್ಕಾರದ ಇಂಧನ ಇಲಾಖೆಯ ಸಾರ್ವಜನಿಕ ಉದ್ದಿಮೆಯಾದ ಇಇಎಸ್‍ಎಲ್ ಮೂಲಕ ದೇಶೀಯ ಸ್ವಸ್ಥ ಬೆಳಕು ಯೋಜನೆ(ಡಿಇಎಲ್‍ಪಿ)ಯನ್ನು ನರೇಂದ್ರ ಮೋದಿ ಜಾರಿಗೆ ತಂದರು. ಇದು ನೂರಕ್ಕೆ ನೂರು ಪ್ರತಿಶತ ಕೇಂದ್ರ ಸರ್ಕಾರದ ಯೋಜನೆ. ಪ್ರಾರಂಭದ ಹಂತದಲ್ಲಿ 2016 ಮಾರ್ಚ್‍ನೊಳಗೆ ದೇಶದ 100 ನಗರಗಳನ್ನು ಎಲ್‍ಇಡಿ ನಗರಗಳಾಗಿ
ಪರಿವರ್ತಿಸಬೇಕೆಂದು ಗುರಿ ನೀಡಿದರು. ದೇಶದ 21 ರಾಜ್ಯಗಳಲ್ಲಿನ 1 ಲಕ್ಷಕ್ಕಿಂತ
ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳೆಲ್ಲ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಅವುಗಳಲ್ಲಿ ನಮ್ಮ ಮೈಸೂರೂ ಒಂದು. ಈ 100 ನಗರಗಳಲ್ಲಿ 2 ಕೋಟಿ ಬಲ್ಬ್‍ಗಳನ್ನು ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದೆ.

ರಾಜಧಾನಿ ದಿಲ್ಲಿಯಲ್ಲಿ ಈಗಾಗಲೇ 34 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ 33 ಲಕ್ಷ, ಆಂಧ್ರದಲ್ಲಿ 65 ಲಕ್ಷ ಬಲ್ಬ್‍ಗಳನ್ನು ವಿತರಣೆ ಮಾಡಲಾಗಿದ್ದು ಸುಮಾರು 73 ಸಾವಿರ ಯುನಿಟ್ ವಿದ್ಯುತ್ ಪ್ರತಿದಿನ ಉಳಿತಾಯವಾಗುತ್ತಿದೆ. ಯಾಕಾಗಿ 400 ರೂ.
ಬೆಲೆಯ ಬಲ್ಬನ್ನು ಕೇಂದ್ರ ಸರ್ಕಾರ 10 ರೂ.ಗೆ ನೀಡುತ್ತಿದೆಯೆಂದರೆ 2 ಕೋಟಿ ಬಲ್ಬ್ ವಿತರಣೆ ಪೂರ್ಣವಾದ ಸಂದರ್ಭದಲ್ಲಿ ದಿನಕ್ಕೆ 2.9 ಕೋಟಿ ಯುನಿಟ್ ನಿತ್ಯವೂ
ಉಳಿತಾಯವಾಗಲಿದೆ.

ಈ ಯೋಜನೆ ಆರಂಭವಾಗಿ 11 ತಿಂಗಳವರೆಗೂ ಸುಮ್ಮನೆ ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅವರ ಇಂಧನ ಸಚಿವರು, ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಮೂಡಿಸುತ್ತಿದೆ “ಹೊಸ ಬೆಳಕು” ಎಂಬ ಘೋಷವಾಕ್ಯದೊಂದಿಗೆ
ಶುಕ್ರವಾರ ಮೈಸೂರಿನಲ್ಲಿ ಚಾಲನೆ ನೀಡುವ ಮೂಲಕ ಕೇಂದ್ರದ
ಯೋಜನೆಯನ್ನೇ ಹೈಜಾಕ್ ಮಾಡಿದ್ದಾರೆ! ಅದೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ! ರಾಜ್ಯ ಇಂಧನ ಇಲಾಖೆ ಕೇವಲ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದೆಯೇ ಹೊರತು,
ಇದು ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆ. ಹೀಗಿದ್ದರೂ ಯೋಜನೆಯನ್ನು ಹೈಜಾಕ್ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿರುವುದು ಮಾತ್ರವಲ್ಲ, ಕೇಂದ್ರ ಸರ್ಕಾರದ ಯೋಜನೆಗೆ ಚಾಲನೆ ಕೊಡುವಾಗ ಕೇಂದ್ರ ಸರ್ಕಾರದ ಮಂತ್ರಿ ಹಾಜರಿರಬೇಕು, ಸ್ಥಳಿಯ ಸಂಸದರಿಗೂ ಆಹ್ವಾನ ನೀಡಬೇಕು ಎಂಬ ಕನಿಷ್ಠ ಶಿಷ್ಟಾಚಾರವನ್ನೂ ಇಂಧನ ಇಲಾಖೆ ಪಾಲಿಸಿಲ್ಲ.

ಇಂಥ ಘಟನೆ ಇದೇ ಮೊದಲಲ್ಲ. 30 ರೂ.ಗೆ 30 ಸಾವಿರ ಮೌಲ್ಯದ ಹೆಲ್ತ್ ಕಾರ್ಡ್ ನೀಡುವ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಗೆ ಕೇಂದ್ರ ಶೇ. 75, ರಾಜ್ಯ 20 ಪರ್ಸೆಂಟ್ ನೀಡುತ್ತದೆ. ಆದರೆ ಆ ಯೋಜನೆಯನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಹೊಂದಿರುವ ರಾಜ್ಯ ಕಾರ್ಮಿಕ ಸಚಿವಾಲಯ, ಪರಮೇಶ್ವರ ನಾಯಕ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಫೋಟೋ ಹಾಕಿಕೊಂಡು ಪ್ರಚಾರ ಮಾಡುತ್ತಾ ಬಂದಿದೆ. ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 32 ರೂ. ಕೊಟ್ಟು ಅಕ್ಕಿ ಖರೀದಿ
ಮಾಡಿ, ರಾಜ್ಯಕ್ಕೆ 3 ರೂ.ಗೆ ನೀಡಿದರೆ. ಅದನ್ನು 2 ರೂ. ಕಡಿಮೆ ಮಾಡಿ ಕೆಜಿಗೆ ಒಂದು ರೂಪಾಯಿಯಂತೆ ಅಕ್ಕಿ ಕೊಡುತ್ತೇವೆ ಎಂದು ಅಕ್ಕಿ, ಎಣ್ಣೆ ಪ್ಯಾಕ್ ಮೇಲೆ ತಮ್ಮ ಭಾವಚಿತ್ರ ಹಾಕಿಕೊಳ್ಳುತ್ತಿರುವ ಸಿದ್ದರಾಮಯ್ಯನವರ ಸರ್ಕಾರ
ಕೇಂದ್ರದ ದುಡ್ಡಿನಲ್ಲಿ ಸ್ವಂತ ಜಾತ್ರೆ ಮಾಡುವ ಮೋಸದ ರಾಜಕಾರಣ
ನಡೆಸುತ್ತಿದೆ.

ಇಷ್ಟು ಮಾತ್ರವಲ್ಲ, ಹೊಸ ಬೆಳಕು ಯೋಜನೆಯ ಪ್ರಚಾರಕ್ಕೆ ಕಾಂಗ್ರೆಸ್‍ನ ಮಾಜಿ ಸಂಸದೆ ರಮ್ಯಾರನ್ನು ಆಹ್ವಾನಿಸಿರುವುದರ ಹಿಂದಿರುವ ಮರ್ಮವೇನು ಎಂಬುದನ್ನು ಮುಖ್ಯಮಂತ್ರಿಯವರು ದಯವಿಟ್ಟು ತಿಳಿಸಬೇಕು. ಕನ್ನಡದಲ್ಲಿ
ಯಾರೂ ನಟಿಯರಿರಲಿಲ್ಲವೆ? ಮಾಜಿ ನಟಿ, ಮಾಜಿ ಸಂಸದೆಯೇ ಏಕೆ ಬೇಕಿತ್ತು?

ಒಂದು ವೇಳೆ, ಕೇಂದ್ರದ ಯೋಜನೆಯನ್ನು ಹೈಜಾಕ್ ಮಾಡುವುದನ್ನು ರಾಜ್ಯ
ಸರ್ಕಾರ ನಿಲ್ಲಿಸದಿದ್ದರೆ, ಶಿಷ್ಟಾಚಾರವನ್ನು ಪಾಲಿಸದಿದ್ದರೆ ದೂರು ನೀಡಬೇಕಾಗುತ್ತದೆ.

ksk

Comments are closed.