Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ!

ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ!

ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ!

ಅದು 1909ರ ಜೂನ್. ಮುಖ್ಯ ಎಂಜಿನಿಯರ್ ಆಗಿದ್ದ ಮೆಕ್ ಹಚಿನ್ ಸೇವೆಯಿಂದ ನಿವೃತ್ತಿ ಹೊಂದುವವರಿದ್ದರು. ಅವರ ಸ್ಥಾನಕ್ಕೆ ಒಬ್ಬ ದಕ್ಷ ಎಂಜಿನಿಯರ್‍ನ ಹುಡುಕಾಟ ಮ್ಯೆಸೂರು ಸಂಸ್ಥಾನದಲ್ಲಿ ನಡೆಯುತ್ತಿತ್ತು. ಅದೇ ಹೊತ್ತಿಗೆ ಸಂಸ್ಥಾನದ ದಿವಾನರಾಗಿದ್ದ ವಿ.ಪಿ ಮಾಧವರಾಯರೂ ನಿವೃತ್ತರಾಗಿ ಅವರ ಸ್ಥಾನಕ್ಕೆ ಟಿ. ಆನಂದರಾಯರು ಬಂದಿದ್ದರು. ಸದಾ ಸಂಸ್ಥಾನದ ಧ್ಯಾನದಲ್ಲೇ ಇರುತ್ತಿದ್ದ ಮಹಾಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಒಂದೇ ಹೊತ್ತಲ್ಲಿ ಸಾಮ್ರಾಜ್ಯದ ಎರಡು ಹೊಸ ಕಂಬಗಳನ್ನು ನಿಲ್ಲಿಸುವ ಹೊರೆ ಬಿತ್ತು. ನಾಲ್ವಡಿಯವರು ನಿವೃತ್ತರಾದ ಮಾಧವರಾಯರನ್ನು ಸುಲಭಕ್ಕೆ ವಿಶ್ರಾಂತ ಜೀವನಕ್ಕೆ ಬಿಟ್ಟುಕೊಡಲಿಲ್ಲ. ಸಂಸ್ಥಾನಕ್ಕೆ ಹೊಸ ಎಂಜಿನಿಯರರನ್ನು ನೇಮಕ ಮಾಡುವ ಹೊಣೆಯನ್ನು ವಹಿಸಿಬಿಟ್ಟಿದ್ದರು. ಮಾಧವರಾಯರು ದಿವಾನಪಟ್ಟದಲ್ಲಿರುವಾಗಲೇ ಬಾಂಬೆ ಪ್ರಾಂತದಲ್ಲಿ ಅದ್ಭುತ ಕೆಲಸಗಳನ್ನು ಮಾಡಿದ ಒಬ್ಬ ಕನ್ನಡದ ಯುವಕನತ್ತ ಒಂದು ಕಣ್ಣಿಟ್ಟಿದ್ದರು. ಸಂಸ್ಥಾನಕ್ಕೆ ಆತನನ್ನು ಕರೆತರಬೇಕೆಂದು ಯೋಚನೆ ಮಾಡಿದ್ದರು. ಯಾಕೋ ಅವರ ಅಧಿಕಾರಾವಧಿಯಲ್ಲಿ ಅದು ಕೈಗೂಡಲಿಲ್ಲ. ಕೊನೆಗೆ ಮಾಧವರಾಯರು ಅದದ್ದಾಗಲಿ ಎಂದು ತಮ್ಮ ಉತ್ತರಾಧಿಕಾರಿ ಆನಂದರಾಯರೊಡನೆ ಮಾತುಕತೆ ನಡೆಸಿ ಅವರಿಂದ ಒಂದು ಪತ್ರ ಬರೆಸಿದರು.

   “ತಾಯ್ನಾಡಿನಲ್ಲಿ ಸೇವೆ ಲಭಿಸಲಿದೆ’ ಎಂದು ಭಾವುಕ ವಾಕ್ಯವನ್ನೂ ಹೊಡೆದರು!

ಆ ಎಂಜಿನಿಯರರು ಮ್ಯೆಸೂರಿನ ಮುಖ್ಯ ಎಂಜಿನಿಯರ್ ಆಗಲು ಒಪ್ಪಿದರು. ಆ ಒಪ್ಪಿಗೆ ಮುಂದೆ ಕನಾ೯ಟಕದ ದಿಸೆಯನ್ನೇ ಬದಲು ಮಾಡಿತು. ಸಮಾಜವನ್ನೇ ಬದಲಿಸಿತು. ಆ ಒಪ್ಪಿಗೆ ನಾಡಿಗೆ ವರವಾಯಿತು. ಒಪ್ಪಿಕೊಂಡವ ಮುಂದೆ ನಾಡ ಜನರಿಗೆ ದೇವರಾದ. ಆ ಮಹಾತ್ಮ ನಮ್ಮ ವಿಶ್ವೇಶ್ವರಯ್ಯನವರು. ಹೀಗೆ 1909ರ ನವೆಂಬರ್‍ನಲ್ಲಿ ವಿಶ್ವೇಶ್ವರಯ್ಯನವರು ಮ್ಯೆಸೂರು ಸಂಸ್ಥಾನದ ಮುಖ್ಯ ಎಂಜಿನಿಯರಾಗಿ ಸೇವೆಗೆ ಸೇರಿದರು. ಆ ಹೊತ್ತಲ್ಲೂ ಮ್ಯೆಸೂರು ಸಂಸ್ಥಾನ ದೇಶದಲ್ಲೇ ಅಭಿವೃದ್ಧಿ ಹೊಂದಿದ ಸಂಸ್ಥಾನ ಎಂದು ಖ್ಯಾತವಾಗಿದ್ದರೂ ಆಗಬೇಕಾದ ಸುಧಾರಣೆಗಳು ಇನ್ನೂ ಬೇಕಾದಷ್ಟಿದ್ದವು. ವಿಶ್ವೇಶ್ವರಯ್ಯನವರು ಸಾಮ್ರಾಜ್ಯವನ್ನು ಕೂಲಂಕಷವಾಗಿ ಅಧ್ಯಯನ ಮಾಡತೊಡಗಿದರು. ಖಾನ್‍ದೇಶ, ನಾಸಿಕ್, ಬಾಂಬೆಗಳಲ್ಲಿ ಮಾಡಿದ ಕೆಲಸ ಮತ್ತು ಅಮೆರಿಕ, ಯುರೋಪ್ ಮತ್ತು ಜಪಾನಿಗೆ ಕೈಗೊಂಡ ಪ್ರವಾಸಗಳಿಂದ ಅತೀ ಶೀಘ್ರದಲ್ಲೇ ವಿಶ್ವೇಶ್ವರಯ್ಯನವರಿಗೆ ಸಾಮ್ರಾಜ್ಯದಲ್ಲಿ ಏನುಂಟು ಏನಿಲ್ಲ ಎಂಬುದು ತಿಳಿದುಹೋಯಿತು. ಅತ್ತ ಇನ್ನೊಂದೆಡೆ ನಾಲ್ವಡಿ ಮಹಾರಾಜರು ಮಾರುವೇಷದಲ್ಲಿ ಹಳ್ಳಿಹಳ್ಳಿಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಅರಿಯುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಒಂದು ದಿನ ಇಬ್ಬರೂ ಸಮಾಜದ ಭವಿಷ್ಯದ ಚಿಂತೆಯನ್ನು ಹೊತ್ತು ಅರಮನೆಯಲ್ಲಿ ಎದುರುಬದುರು ಕುಳಿತರು. ವಿಚಿತ್ರ ಎಂದರೆ ಇಬ್ಬರಿಗೂ ಆಗಬೇಕಾದುದೇನು ಎಂಬ ಪ್ರಶ್ನೆಗೆ ಹೊಳೆದ ಉತ್ತರ ಒಂದೇ ಆಗಿತ್ತು. ಅದು ಸಂಸ್ಥಾನದ ನೀರಾವರಿ ಯೋಜನೆ. ಅದರಿಂದ ಹಲವು ಯೋಜನೆಗಳಿಗೆ ದಾರಿ, ಅಂದರೆ ವಿವಿದೋದ್ದೇಶ ನೀರಾವರಿ ಯೋಜನೆ. ಸಂಸ್ಥಾನದಲ್ಲಿ ನೀರಿನ ಹರಿವು ಸಾಕಷ್ಟು ಇತ್ತು. ಹಲವು ಸಣ್ಣಪುಟ್ಟ ಒಡ್ಡುಗಳೂ ಇದ್ದವು. ಜಲಪಾತಗಳೂ ಇದ್ದವು. ಸಾವಿರಾರು ಕೆರೆಗಳಿದ್ದವು. ಮಾರಿಕಣಿವೆ ಎಂಬಲ್ಲಿ ಕಟ್ಟಿದ ಅಣೆಕಟ್ಟನ್ನೇ ಅತಿ ದೊಡ್ಡ ಅಣೆಕಟ್ಟು ಎಂದು ಆಲ್ಲಿಯವರೆಗೆ ಭಾವಿಸಲಾಗಿತ್ತು. ಶಿವನಸಮುದ್ರದ ಬಳಿ ವಿದ್ಯುತ್ ಯೋಜನೆಯೊಂದು ಇತ್ತಾದರೂ ಅದರಲ್ಲಿ ಕೊರತೆಗಳೇ ಹಲವಿದ್ದವು. ಆದರೆ ವಿದ್ಯುತ್ತಿನ ಬೇಡಿಕೆ ದಿನೇ ದಿನೆ ಹೆಚ್ಚುತ್ತಿತ್ತು. ಸಹಜವಾಗಿ ಮಹಾರಾಜರೂ, ದಿವಾನರೂ ಚಿಂತಿತರಾಗಿದ್ದರು. ಮಹಾರಾಜರ ಮುಂದೆ ಕುಳಿತ ವಿಶ್ವೇಶ್ವರಯ್ಯನವರು ಎಲ್ಲವನ್ನೂ ವಿವರಿಸುತ್ತಿದ್ದರೆ ನಾಲ್ವಡಿಯವರ ಮೈಯ ರೋಮರೋಮಗಳೂ ಪುಳಕಗೊಳ್ಳುತ್ತಿದ್ದವು. ಎಲ್ಲವನ್ನೂ ಕೇಳಿದ ಮಹಾರಾಜರು “ನಿಮ್ಮ ಯಾವ ಯೋಜನೆಗಳಲ್ಲೂ ಯಾವ ನ್ಯೂನತೆಗಳೂ ಬರದಂತೆ ನೋಡಿಕೊಳ್ಳುತ್ತೇವೆ, ಮುಂದುವರಿಯಿರಿ’ ಎಂದು ಆದೇಶಿಸಿಯೇ ಬಿಟ್ಟರು.

  ವಿಶ್ವೇಶ್ವರಯ್ಯನವರು ಮರುದಿನದಿಂದಲೇ ಕೆಲಸ ಆರಂಭಿಸಿದರು. ಶಿವನಸಮುದ್ರಕ್ಕೆ ತೆರಳಿ ವಿದ್ಯುತ್ ಉತ್ಪಾದನೆಯನ್ನು ಗಮನಿಸಿದರು. ಅಲ್ಲಿ 13,000 ಹೆಚ್.ಪಿ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿತ್ತು. ಅದರಲ್ಲಿ 11,000 ಹೆಚ್‍ಪಿಯನ್ನು ಅಲ್ಲಿಂದ ನೂರೈವತ್ತಕ್ಕೂ ಹೆಚ್ಚು ಕಿ.ಮೀ ದೂರದ ಕೆ.ಜಿ.ಎಫ಼್‍ಗೆ ರವಾನಿಸಲಾಗುತ್ತಿತ್ತು. ಶಿವನಸಮುದ್ರದ ನೀರಿನ ಹರಿವಿಗೂ, ಅಲ್ಲಿನ ಉತ್ಪಾದನೆಗೂ ಆಗುತ್ತಿದ್ದ ವೆಚ್ಚಕ್ಕೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿತ್ತು. ಅವನ್ನೆಲ್ಲಾ ನೋಡುತ್ತಾ ಅದೇ ಸ್ಥಳದಲ್ಲಿ ವಿಶ್ವೇಶ್ವರಯ್ಯನವರ ಕಣ್ಣಲ್ಲಿ ದೊಡ್ಡ ಜಲಾಶಯ ವೊಂದರ ನಕಾಶೆ ಮೂಡಲಾರಂಭಿಸಿತು. ಆ ಜಲಾಶಯ ನಾಡಿನ ಬರವನ್ನು ತಣಿಸಿದಂತೆ, ಹಸಿದವರಿಗೆ ಅನ್ನ ಉಣಿಸಿದಂತೆ, ದೀಪವನ್ನು ಬೆಳಗಿದಂತೆ, ನಗರ ನಿಮಾ೯ಣವಾದಂತೆ, ಸಂಸ್ಥಾನದ ಹೆಸರು ಗಂಗೆಯನ್ನೂ ದಾಟಿ ಥೇಮ್ಸ್‌ವರೆಗೆ ಮುಟ್ಟಿದಂತೆ, ಮಹರಾಜರ ಕೀತಿ೯ ಶಿಖರದೆತ್ತರ ಏರಿದಂತೆ ದೃಶ್ಯಗಳು ಮೂಡಲಾರಂಭಿಸಿದವು. ವಿಶ್ವೇಶ್ವರಯ್ಯನವರು ಮತ್ತೆ ತಡ ಮಾಡಲಿಲ್ಲ. ಅಷ್ಟರಲ್ಲಾಗಲೇ ವಿಶ್ವೇಶ್ವರಯ್ಯನವರು ಅಮೆರಿಕಾದ ಖ್ಯಾತ ವಿವಿದ್ದೊದ್ದೇಶ ನೀರಾವರಿ ಯೋಜನೆ “ಟೆನಿಸಿ’ ಬಗ್ಗೆ ಅಧ್ಯಯನ ಮಾಡಿದ್ದರು. ಹೀಗೆ ನಕಾಶೆ ಬರೆಯುತ್ತಾ ಬರೆಯುತ್ತಾ ಅವರಿಗೆ ಶ್ರೀರಂಗಪಟ್ಟಣದ ಸಮೀಪದ ಕನ್ನಂಬಾಡಿ ಟೆನಿಸಿಯಂತೆ ಕಾಣಲಾರಂಭಿಸಿತು. ಸಂಸ್ಥಾನದ ಹಿರಿಯ ಅಧಿಕಾರಿಗಳೊಡನೆ ಚಚಿ೯ಸಿದರು. ಆರಂಭದಲ್ಲಿ ಕೃಷಿ ಮತ್ತು ಕೈಗಾರಿಕಾಭಿವೃದ್ಧಿಯ ಯೋಜನೆಗಾಗಿ ನಿಮಾ೯ಣವಾಗುವ ಅಣೆಕಟ್ಟೆಯನ್ನು 124 ಅಡಿ ಎತ್ತರದಲ್ಲಿ 48 ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲ ಯೋಜನೆಯನ್ನು ಮಾಡಲಾಯಿತು. ನಂತರ ಹೆಚ್ಚಿನ ಕೃಷಿ ಭೂಮಿ ಮತ್ತು ಕೆಜಿಎಫ್ ಅಲ್ಲದೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳಿಗೂ ವಿಧ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಎತ್ತರವನ್ನು 130 ಅಡಿಗಳಿಗೆ ಮತ್ತು ಉದ್ದವನ್ನು 8600 ಅಡಿಗಳಿಗೆ ವಿಸ್ತರಿಸಲಾಯಿತು. ಕನ್ನಂಬಾಡಿ ಜಲಾಶಯದಿಂದ ಶಿವನಸಮುದ್ರ ಮತ್ತು ಶಿಂಷಾಗಳೂ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ದೂರದೃಷ್ಟಿಯ ಯೋಜನೆಯೂ ಸಿದ್ಧವಾಯಿತು. ಆದರೆ ಕೆಲಸ ಆರಂಭವಾಗಲೇ ಇಲ್ಲ. ಏಕೆಂದರೆ ಯೋಜಿತ ಅಣೆಕಟ್ಟೆಯಂಥ ಅಣೆಕಟ್ಟೆ ಭಾರತದಲ್ಲಿ ಮೊದಲೆಂದೂ ಕಟ್ಟಿರಲಿಲ್ಲ. ಯೋಜನೆಯ ಮೊದಲ ಅಂದಾಜುಪಟ್ಟಿ ಪ್ರಕಾರ ಯೋಜನೆಯ ಒಟ್ಟು ವೆಚ್ಚ 2 ಕೋಟಿ 53 ಲಕ್ಷ ರೂಪಾಯಿಗಳಾಗಿತ್ತು. ಅದುವರೆಗೆ ಯಾವ ಸಂಸ್ಥಾನ ಕೂಡಾ ಒಂದು ಯೋಜನೆಗೆ ಅಷ್ಟು ಹಣವನ್ನೂ ಖಚು೯ ಮಾಡಿರಲಿಲ್ಲ. ಮಹಾರಾಜರಿಗೆ ಯೋಜನೆಯ ಬಗ್ಗೆ ತುಂಬು ಉತ್ಸಾಹವಿತ್ತಾದರೂ ಅವರ ಕೈಕಟ್ಟಿತ್ತು. ಮಹಾರಾಜರೂ ಮಂಕಾದರು. ಜತೆಗೆ ಕೆಲವು ಭಟ್ಟಂಗಿಗಳು ಅದಾಗಲೇ ವಿಶ್ವೇಶ್ವರಯ್ಯನವರ ಬಗ್ಗೆ ಮಹಾರಾಜರಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಇದೊಂದು ದುಂದುವೆಚ್ಚ ಎಂದು ತಲೆಕೆಡಿಸಲು ನೋಡಿದರು. ಇವೆಲ್ಲವೂ ವಿಶ್ವೇಶ್ವರಯ್ಯನವರಿಗೆ ತಿಳಿದು ಉತ್ಸಾಹದ ಬುಗ್ಗೆ ಒಡೆದುಹೋಯಿತು. ಮಹಾರಾಜರಂತೆ ವಿಶ್ವೇಶ್ವರಯ್ಯನವರೂ ಮಂಕಾದರು. ಯೋಜನೆ ನನೆಗುದಿಗೆ ಬಿತ್ತು.

  ಹೀಗೆ ತಿಂಗಳುಗಳು ಕಳೆದವು. ಒಂದು ದಿನ ಮಹಾರಾಜರಿಗೆ ನನೆಗುದಿಗೆ ಬಿದ್ದ ಕಾರಣ ಮತ್ತು ನಾಡಿನ ನಾಳೆಯ ಬಗ್ಗೆ ಚಿಂತೆಯನ್ನು ಮನವರಿಕೆ ಮಾಡಿಕೊಟ್ಟರು. ಮಹಾರಾಜರಿಗೆ ಪರಿಸ್ಥಿತಿ ಅಥ೯ವಾದದ್ದು ಮಾತ್ರವಲ್ಲದೆ ತಕ್ಷಣವೇ ಯೋಜನೆಯನ್ನು ಮುಂದುವರಿಸಬೇಕೆಂದೂ ಎಲ್ಲಾ ವ್ಯವಸ್ಥೆಗಳನ್ನೂ ಮಾಡುವುದೆಂದೂ ಮಾತು ಕೊಟ್ಟರು. ಈ ಮಾತು ನಾಡಿನ ನಕಾಶೆಯನ್ನು ಬದಲಿಸಿದ ಎರಡನೆಯ ಪ್ರಸಂಗ. ನಾಲ್ವಡಿ ಕೃಷ್ಣರಾಜ ಒಡೆಯರದ್ದು ಸ್ವತಂತ್ರ ಸಂಸ್ಥಾನವಲ್ಲ. ಬ್ರಿಟಿಷ್ ದೊರೆಗಳ ಅನುಮತಿ ಇಲ್ಲದೆ ಸರಕಾರಿ ಖಜಾನೆಯನ್ನು ಬಳಸುವಂತಿಲ್ಲ. ಬ್ರಿಟಿಷರಿಗೆ ನಾಡಿಗೆ ನೀರು ಹರಿಯಲಿ ಬಿಡಲಿ, ಆಗಬೇಕಾದುದೇನೂ ಇಲ್ಲ. ಆದರೂ ನಾಲ್ವಡಿಯವರು ಅಳುಕಲಿಲ್ಲ. ತಮ್ಮ ಮತ್ತು ಮಹಾರಾಣಿ ಪ್ರತಾಪಕುಮಾರಿಯ ಆಭರಣಗಳನ್ನು ಬಾಂಬೆಗೆ ಕೊಂಡೊಯ್ದರು. ಅಡವಿಟ್ಟರು. ರಾಜ ಪೋಷಾಕಿನ ಹಲವು ರತ್ನಹಾರಗಳು ಗಿರಿವಿಯಾದವು. ನಾಡಿಗಿಂತ ದೊಡ್ಡದೇ ರಾಜಪೋಷಾಕು ಎಂದು ಮಹಾರಾಜರು ಆಡಿದವರ ಬಾಯಿ ಮುಚ್ಚಿಸಿದರು. ಕೆಲವರು ನಿರಾಭರಣ ರಾಜರನ್ನು ಮರೆಯಲ್ಲಿ ಆಡಿಕೊಂಡರು. ಆದರೆ ಅನ್ನ ಬೆಳೆಯುವ ಜನರ ಕಣ್ಣಲ್ಲಿ ಅಂದೇ ನಾಲ್ವಡಿ ದೇವರ ಸ್ಥಾನಕ್ಕೇರಿಬಿಟ್ಟಿದ್ದರು. ಕಟ್ಟೆ ಏಳತೊಡಗಿತು. ಯಜ್ಞದಂತೆ ಎಲ್ಲವೂ ನಡೆಯುತ್ತಿದ್ದವು. ಅದಾಗಲೇ ಮಡ್ರಾಸ್ ಸರಕಾರದಿಂದ ಕ್ಯಾತೆ ಆರಂಭವಾಯಿತು. ಕನ್ನಂಬಾಡಿಗಿಂತ ಎರಡುಪಟ್ಟು ದೊಡ್ಡ ಕಟ್ಟೆಯನ್ನು ಮೆಟ್ಟೂರು ಎಂಬಲ್ಲಿ ಸ್ಥಾಪಿಸಲು ಅದು ಉದ್ದೇಶಿಸಿತ್ತು. ಕೆಲಸವನ್ನೂ ಆರಂಭಿಸಿಬಿಟ್ಟಿತ್ತು. ಕನ್ನಂಬಾಡಿಗಿಂತ ತೀರಾ ಕೆಳಗೆ ಅಂದರೆ 60 ಮ್ಯೆಲಿಗಳಲ್ಲೇ ಮೆಟ್ಟೂರು ನಿಮಾ೯ಣ ಆಗಕೂಡದು. ಇದು ಸಮಸ್ಯೆಯನ್ನು ಶಾಸ್ವತವಾಗಿಟ್ಟಂತೆ ಎಂದು ವಿಶ್ವೇಶ್ವರಯ್ಯನವರು ಪಟ್ಟು ಹಿಡಿದರು. ವೈಸರಾಯಿಗಳಿಗೆ ದೂರು ಒಯ್ದರು.

ಮೆಟ್ಟೂರು ಕಟ್ಟೆ ಎದ್ದರೆ ಅದು ನಿರಂತರ ಕನ್ನಂಬಾಡಿಯನ್ನೇ ಅವಲಂಬಿಸಬೇಕಾಗುತ್ತದೆ. ಕನ್ನಂಬಾಡಿ ನಿಮಾ೯ಣ ಯೋಜನೆ ಮೊದಲು ತಯಾರಾದದ್ದು. ಹಾಗಾಗಿ ಮೆಟ್ಟೂರು ಅವೈಜ್ಞಾನಿಕ ಎಂದು ಸಾಭೀತುಪಡಿಸಿದರು. ಆದರೆ ಮೆಡ್ರಾಸ್ ಸರಕಾರ ಕೂಡ ಪಟ್ಟು ಬಿಡಲಿಲ್ಲ. ಕನಾ೯ಟಕಕ್ಕೆ ಹೋಲಿಸಿದರೆ ಮೆಡ್ರಾಸಿನಲ್ಲೇ ಕಾವೇರಿ ಮುಖಜಭೂಮಿ ಪ್ರದೇಶ ಅತಿ ಹೆಚ್ಚಿತ್ತು. ಅಂದರೆ ಕಾವೇರಿ ನೀರಿನ ಪ್ರಮಾಣ ಅಲ್ಲಿಗೆ ಹೆಚ್ಚು ಬೇಕು. ಹಾಗೆ ಮಾಡಿದರೆ ಕನ್ನಡದ ನೆಲದಲ್ಲಿ ನೀರು ಮತ್ತು ಶಕ್ತಿ ಎರಡೂ ಪೋಲಾಗುತ್ತದೆ. ನೀರನ್ನು ಆರಂಭದಲ್ಲೇ ಬಳಸಿ ವಿವಿದೋದ್ದೇಶ ಯೋಜನೆ ರೂಪಿಸಲು ಮೆಟ್ಟೂರಿಗಿಂತ ಕನ್ನಂಬಾಡಿ ಸೂಕ್ತ ಎಂದು ಮ್ಯೆಸೂರು ಸಂಸ್ಥಾನ ವೈಸರಾಯರಲ್ಲಿ ವಾದಿಸಿತು. ಆದರೆ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಮೆಡ್ರಾಸ್ ಸಂಸ್ಥಾನವನ್ನು ವೈಸರಾಯಿ ಬರಿಗೈಯಲ್ಲಿ ಕಳುಹಿಸಲಿಲ್ಲ. ಕನ್ನಂಬಾಡಿಯ ಎತ್ತರ ಕೇವಲ 80 ಅಡಿ ಇರಲಿ ಎಂದು ಸಂಧಾನ ಮಾಡಿ ಕಳುಹಿಸಿದರು. ಅಂದರೆ ಬ್ರಿಟಿಷರು ಕನ್ನಂಬಾಡಿಯ ನೀರಿನ ಶೇಖರಣಾ ಸಾಮಥ್ಯ೯ವನ್ನು ಕಡಿತಗೊಳಿಸಿಬಿಟ್ಟಿದ್ದರು. ಆದರೆ ಕನ್ನಂಬಾಡಿಯ ತಳಪಾಯ 130 ಅಡಿಗೆ ಎಂದು ಕಲ್ಲಿಟ್ಟಾಗಿತ್ತಲ್ಲ. ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯಿಂದ ವಿನ್ಯಾಸಗೊಳಿಸಿದ ವಿಶಾಲ ತಳಹದಿಯಲ್ಲೇ ಕಟ್ಟೆ ಕೆಲಸ ಆರಂಭವಾಯಿತು. ಮಡ್ರಾಸ್ ಮತ್ತೆ ತಗಾದೆ ತೆಗೆಯಿತು. ವಿಶ್ವೇಶ್ವರಯ್ಯನವರು ತಳಪಾಯದ ಬಗ್ಗೆ ಮೆಡ್ರಾಸ್ ತಲೆಕೆಡಿಸಿಕೊಳ್ಳಬಾರದು ಎಂದು ವಾದ ಹೂಡಿ ಕಟ್ಟೆ ಎಬ್ಬಿಸಿಯೇ ಬಿಟ್ಟರು! ಈ ಸಮಯಪ್ರಜ್ಞೆ ಮುಂದೆ ನಾಡಿನ ಜನರ ಪ್ರತೀ ತುತ್ತು ಅನ್ನಕ್ಕೆ ಕಾರಣವಾಯಿತು. ಅಂದು ಮೆಡ್ರಾಸ್ ಸರಕಾರದ ಒತ್ತಡದ ವಿರುದ್ಧ ಅವರು ಹೋರಾಟ ಮಾಡದೇ ಇದ್ದಿದ್ದರೆ ಕನ್ನಂಬಾಡಿ ಏಳುವ ಸಂಭವ ಕೂಡ ಇರಲಿಲ್ಲ. ಎದ್ದಿದ್ದರೂ ಕನ್ನಂಬಾಡಿ ಒಂದು ಸಣ್ಣ ಒಡ್ಡು ಆಗಿರುತ್ತಿತ್ತು ಅಥವಾ ಅಡಿಗಲ್ಲು ಸಣ್ಣದಾಗಿದ್ದರೆ ಮತ್ತೆಂದೂ ಕನ್ನಂಬಾಡಿ ದೊಡ್ಡದಾಗುವ ಸಂಭವವೇ ಇರುತ್ತಿರಲಿಲ್ಲ. ಅವೆಲ್ಲಾ ಕಂಟಕಗಳನ್ನು ದೂರ ಮಾಡಿದವರು ಸರ್. ಎಂವಿ. ಯೋಗ್ಯ ಕಾಲುವೆಗಳು ನಿಮಾ೯ಣವಾದವು. ಲಕ್ಷಗಟ್ಟಲೆ ಏಕರೆ ನೀರಾವರಿಗೆ ಒಳಪಟ್ಟಿತು. ವಿದ್ಯುತ್ ಉತ್ಪಾದನೆ ನಿರೀಕ್ಷೆಗಿಂತ ಮೀರಿ ನಡೆಯಿತು. ಯೋಜನೆ ಮುಗಿದ ಒಂದೂವರೆ ದಶಕದ ನಂತರ ನಡೆದ ಆಥಿ೯ಕ ಸಮೀಕ್ಷೆಯೊಂದರಲ್ಲಿ ಕಟ್ಟೆಗೆ ಹಾಕಿದ ಬಂಡವಾಳ ಮರಳಿ ಬಂದಿತ್ತು. ಅಂದರೆ ಅದರ ಪ್ರತಿಫಲ ನೀಡಿತ್ತು. (ಸರಕಾರಿ ಕಂದಾಯ ಎಲ್ಲಾ ಉತ್ಪಾದನೆಗಳು ಸೇರಿ). ಕನ್ನಂಬಾಡಿ ಕೃಷ್ಣರಾಜಸಾಗರವಾಗಿತ್ತು. ನಾಲ್ವಡಿಯವರ ಜೊತೆಗೆ ವಿಶ್ವೇಶ್ವರಯ್ಯನವರನ್ನೂ ಜನ ಮನೆಮನೆಯಲ್ಲಿ ಚಿತ್ರಪಟ ಹಾಕಿ ಪೂಜಿಸಲಾರಂಭಿಸಿದರು.

  ಕಾವೇರಿ ಜಲವಿವಾದ ತಾರಕ್ಕೇರಿದಾಗಲೆಲ್ಲಾ ಈ ಸಾಹಸ ಮತ್ತೆ ಮತ್ತೆ ಕಾಡುತ್ತದೆ!

ಪ್ರತೀ ಹನಿ ನೀರು ಕುಡಿಯುವಾಗಲೂ ನಮ್ಮ ಹಳೇ ಮ್ಯೆಸೂರು ಭಾಗದ ಜನರಿಗೆ ಈ ಕಥೆ ನೆನಪಾಗುತ್ತವೆ. ಮಹಾಸ್ವಾಮಿ ನಾಲ್ವಡಿಯವರು ಮತ್ತು ವಿಶ್ವೇಶ್ವರಯ್ಯನವರ ಶ್ರಮ ಇಲ್ಲದಿದ್ದಿದ್ದರೆ ನಮ್ಮ ನಾಡು ಹೇಗಿರುತ್ತಿತ್ತು ಎಂಬುದನ್ನು ಯೋಚಿಸಿದರೆ ನಡುಕ ಹುಟ್ಟುತ್ತದೆ. ಅವರ ಶ್ರಮದ ಒಂದು ಅಂಶವನ್ನಾದರೂ ನಮ್ಮನ್ನಾಳಿದ ಸರಕಾರಗಳು ಪಟ್ಟಿದ್ದರೆ ನಾಡಿನ ನಕಾಶೆ ಮತ್ತೊಮ್ಮೆ ಬದಲಾಗುತ್ತಿತ್ತು ಎನಿಸುತ್ತದೆ. ಬಹಳ ಬೇಸರದ ಸಂಗತಿಯೆಂದರೆ, ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಖಚು೯ ಮಾಡಿದರೂ ನೀರು ಉಳಿಸಿಕೊಳ್ಳಲಾಗಲಿಲ್ಲವಲ್ಲಾ ಸ್ವಾಮಿ?! ಬಹುಶಃ ತಮ್ಮ ಹೆಂಡತಿಯ ಒಡವೆ ಅಡವಿಟ್ಟು ಕಟ್ಟಿದ್ದರೆ ಇವರಿಗೆ ಕನ್ನಂಬಾಡಿಯ ಮಹತ್ವ ಅರಿವಾಗುತ್ತಿತ್ತೇನೋ!
ಈ ವಕೀಲ ಮಹಾಶಯರಿಗೆ ನಮ್ಮ ರಾಜ್ಯ ಸರಕಾರ ಬೊಕ್ಕಸದಿಂದ ಬರೋಬ್ಬರಿ 25 ಕೋಟಿ ವಷ೯ಕ್ಕೆ ಖಚು೯ ಮಾಡುತ್ತಿದೆ!
ಅನಿಲ್ ದಿವಾನ್‍ರೊಬ್ಬರಿಗೇ 9.66 ಕೋಟಿ ರೂಪಾಯಿಗಳನ್ನು ರೂಗಳನ್ನು ವ್ಯಯಿಸಿದರೆ,
2.08 ಕೋಟಿಯನ್ನು ನಾರಿಮನ್‍ಗೆ ನೀಡಿದೆ! ದಿವಾನ್ ಬೆಂಗಳೂರು-ದೆಹಲಿ ನಡುವೆ 49 ಸಲ, ನಾರಿಮನ್ 19, ಮೋಹನ್ ಕಟಾಕಿ೯ 193 ಬಾರಿ ತಿರುಗಾಡಿದ ಕಚಿ೯ನ ಮೊತ್ತವೇ ರೂ.2.75 ಕೋಟಿಗಳು!
ಅಂದರೆ ಅಂದು ಸರ್.ಎಂ ವಿಶ್ವೇಶ್ವರಯ್ಯನವರು ಅಣೆಕಟ್ಟೆ ನಿಮಾ೯ಣಕ್ಕೆ ಮಾಡಿದ ಅಂದಾಜುಪಟ್ಟಿಗಿಂತಲೂ ಹೆಚ್ಚು!! ಇವರಷ್ಟೇ ಅಲ್ಲ, ಎಸ್.ಎಸ್ ಜವಳಿ ದೆಹಲಿಯಿಂದ ಬೆಂಗಳೂರಿಗೆ 158 ಬಾರಿ ಪ್ರಯಾಣ ಮಾಡಿದ್ದಾರೆ, ಶಂಭುಪ್ರಸಾದ್ ಶಮಾ೯ ಎಂಬವರು 138 ಬಾರಿ ದಂಡಯಾತ್ರೆ ಮಾಡಿದ್ದಾರೆ. ಇವರಿಬ್ಬರ ಪ್ರವಾಸ ಮತ್ತು ಖಚಿ೯ನ ಬಾಬ್ತು 6 ಕೋಟಿಗೂ ಹೆಚ್ಚು. ಕಾವೇರಿ ಕೆಲವರ ಪಾಲಿಗೆ ನಿಜಕ್ಕೂ ಕಾಮಧೇನುವಾಗಿಹೋದಳು. ಇನ್ನು ಕೆಲವು ಮಹಾನುಭಾವರು ಕಾವೇರಿ ಹೆಸರಲ್ಲಿ ಕೊಬ್ಬಿದವರಿದ್ದಾರೆ. ಆದರೂ ರಾಜ್ಯಕ್ಕೆ ನ್ಯಾಯ ಒದಗಿಸಲಾಗದೆ ಇಂದು ಭಾರೀ ನೋವು ಅನುಭವಿಸಿದವರಂತೆ ಪೋಸು ಕೊಡುತ್ತಿದ್ದಾರೆ. ಫೇಸ್‍ಬುಕ್‍ನಲ್ಲಿ ರಾಜ್ಯದ ರಕ್ಷಕರೆಂಬಂತೆ ಪೋಸು ಕೊಡುವ ವಕೀಲ ಬ್ರಿಜೇಶ್ ಕಾಳಪ್ಪ ನಯವಾಗಿ 31.42 ಲಕ್ಷಗಳನ್ನು ಕೇಸಿನ ಫೀಸಿನ ರೂಪದಲ್ಲಿ ತೆಗೆದುಕೊಂಡಿದ್ದಾರೆ. ಇಂಥ ತಾಕತ್ತಿಲ್ಲದ ವಕೀಲರುಗಳಿಗೆ ಕೋಟಿಗಟ್ಟಲೆ ಹಣ ಸುರಿದೂ ನಮ್ಮ ನೀರಿನ ಹಕ್ಕನ್ನು ರಕ್ಷಿಸಿಕೊಳ್ಳಲಾಗದವರಿಂದ ರಾಜ್ಯ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ ಹೇಳಿ? ಅಂದು ನಾಡು ಬೆಳಗಲು ಅವರು ಪಟ್ಟ ಶ್ರಮವಷ್ಟೇ ಸಾಕೇ? ಅದನ್ನು ಉಳಿಸಿಕೊಳ್ಳುವಲ್ಲಿ ನಮ್ಮದೂ ಪಾಲಿಲ್ಲವೇ? ಆಭರಣಗಳನ್ನು ಅಡವಿಟ್ಟ ಮಹಾರಾಜರು ಇಂದಿನ ಮುಖ್ಯಮಂತ್ರಿಗಳಿಗೆ ಪ್ರೇರಣೆ ಹುಟ್ಟಿಸದಿದ್ದರೆ ನಾಡು ಹೇಗೆ ಬೆಳಗೀತು?

ಇದೇ ಹೊತ್ತಲ್ಲಿ ಅತೀ ಬೇಸರದ ಸಂಗತಿಯೊಂದನ್ನೂ ಹೇಳಬೇಕೆನಿಸುತ್ತಿದೆ. ಕಾವೇರಿ ರೈತರಿಗೆ ನೀರುಣಿಸುವುದರಲ್ಲಿ ಗಂಗೆಗಿಂತಲೂ ಮುಂದೆ ಎಂಬ ಮಾತೊಂದಿದೆ. ತಾನು ಹರಿಯುವಲ್ಲೆಲ್ಲಾ ಕಾವೇರಿ ಅನ್ನ ಹುಟ್ಟಿಸುತ್ತಾ ಸಾಗಿ ಬಂಗಾಳಕೊಲ್ಲಿಯನ್ನು ಸೇರಿ ಲೋಕಪಾವನೆ ಎಂದು ಕರೆದುಕೊಳ್ಳುತ್ತಾಳೆ. ಕನಾ೯ಟಕದಲ್ಲಿ ಆಕೆ ತಾಯಿ ಎನಿಸಿಕೊಂಡಷ್ಟೇ ತಮಿಳುನಾಡಿನಲ್ಲೂ ಕಾವೇರಿ ತಾಯಿ ಎಂದು ಕರೆಸಿಕೊಳ್ಳುತ್ತಾಳೆ. ಯಾರಿಗೆ ತಾಯಿಯಾದರೂ ಕೊಡಗಿನಲ್ಲಿ ಆಕೆ ಕುಲದೇವಿ! ಕೊಡಗಿನವರು ಕಾವೇರಿಯನ್ನು ತಮ್ಮ ಕುಲಮಾತೆ ಎಂದೇ ನಂಬುತ್ತಾರೆ. ಇಷ್ಟೆಲ್ಲಾ ಇದ್ದರೂ ಒಂದು ವಿಚಿತ್ರವನ್ನು ಎಲ್ಲರೂ ಗಮನಿಸಿರಬಹುದು. ಪ್ರತೀ ಬಾರಿ ಕಾವೇರಿ ವಿವಾದದ ಬಿಸಿ ಏರಿದಾಗಲೂ ಕಾವೇರಿಯ ತವರುಮನೆ ಕೊಡಗು ಮಹಾಮೌನಕ್ಕೆ ಜಾರುತ್ತದೆ.

    ಏಕೆಂದರೆ…

ಕೊಡಗಿನಲ್ಲಿ ಮಳೆಯಾದರೆ ಸರಕಾರಕ್ಕೂ ಖುಷಿ, ಕಟ್ಟೆ ತುಂಬುವ ಹೊತ್ತೆಂದು ಹಳೆ ಮ್ಯೆಸೂರು-ತಮಿಳುನಾಡಿಗೂ ಖುಷಿ. ಆದರೆ ಕೊಡಗು ಅಕ್ಷರಶ ಆ ಹೊತ್ತಲ್ಲಿ ನರಳಾಡುತ್ತದೆ. ಇಲ್ಲಿ ಕಟ್ಟೆ ತುಂಬುವ ಹೊತ್ತಲ್ಲಿ ಅಲ್ಲಿ ಕತ್ತಲಿರುತ್ತದೆ. ಭತ್ತದ ಬಿತ್ತನೆಗೆ ಅಲ್ಲಿನ ರೈತ ಮಳೆ ನಿಲ್ಲಲಿ ಎಂದು ಕಾಯುತ್ತಿರುತ್ತಾನೆ. ಕಾವೇರಿಗೆ ಸೇರುವ ಉಪನದಿಗಳು, ತೋಡುಗಳೂ ತುಂಬಿ, ಏರಿ ಒಡೆದು ಗದ್ದೆಗೆ ನುಗ್ಗುತ್ತದೆ. ಅಲ್ಲಿನ ರೈತ ನಷ್ಟ ಅನುಭವಿಸುತ್ತಾನೆ. ನಷ್ಟದ ಭತಿ೯ಗೆ ಆತ ಸರಕಾರಕ್ಕೆ ಅಜಿ೯ ಹಾಕುತ್ತಾನೆ. ಸಾವಿರಾರು ರೂಪಾಯಿ ನಷ್ಟಕ್ಕೆ ಸರಕಾರ ಚಿಲ್ಲರೆ ನೂರಿನ್ನೂರು ರೂಪಾಯಿ ಪರಿಹಾರ ನೀಡುತ್ತದೆ. ನಿಲ್ಲದೆ ಬೀಳುವ ಮಳೆ ನಗರದಲ್ಲಿ ಕುಳಿತ ನಮಗೆ ಖುಷಿಯಾಗುತ್ತದೆ. ಕೊಡಗಿನಲ್ಲಿ ಬಜ೯ರಿ ಮಳೆ ಎಂಬ ಸುದ್ಧಿಗೆ ಹಳೆ ಮ್ಯೆಸೂರು-ಬೆಂಗಳೂರಿನ ಜನ ಈ ವಷ೯ ಕಾವೇರಿ ಕ್ಯಾತೆ ಇಲ್ಲ, ಕುಡಿಯುವ ನೀರಿಗೆ ಬರವಿಲ್ಲ, ಫಸಲಿಗೆ ನಷ್ಟವಿಲ್ಲ ಎಂದುಕೊಳ್ಳುತ್ತೇವಲ್ಲಾ ಅದೇ ಹೊತ್ತಲ್ಲಿ ನಮ್ಮ ಕೊಡಗಿನ ರೈತನ ಬಲಿಯುತ್ತಿರುವ ಕಾಫಿ, ಕಾಳುಮೆಣಸು ಕಣ್ಣೆದುರೇ ಉದುರುದುರಿ ಬೀಳುತ್ತವೆ. ಆತ ಮಳೆಯಲ್ಲೇ ಅವನ್ನು ನೋಡುತ್ತಾ ಕಣ್ಣೀರು ಹಾಕುತ್ತಾನೆ. ಅಲ್ಲಿನ ಮಳೆಗೆ ಇಲ್ಲಿನ ರೈತನ ಕನಸ್ಸು ಚಿಗುರುತ್ತಿದ್ದಾಗಲೇ ಅಲ್ಲಿನ ರೈತರ ಕನಸ್ಸು ಮುದುಡುತ್ತದೆ. ಮಗಳ ಮದುವೆ ಚಿಂತೆ, ತಂದೆ-ತಾಯಿಯ ಆರೋಗ್ಯದ ಚಿಂತೆ, ಅಧ೯ಕ್ಕೆ ನಿಂತ ಹೊಸ ಮನೆ, ಮಕ್ಕಳ ಓದಿನ ಚಿಂತೆ ಒಂದು ಮಳೆಗಾಲದಲ್ಲೇ ಆತನಿಗೆ ಶುರುವಾಗುತ್ತದೆ. ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾನೆ. ಆ ಮಳೆಯಲ್ಲಿ ಆತನ ಕಣ್ಣೀರು ಕೊಡಗನ್ನು ದಾಟುವುದಿಲ್ಲ. ಜಲಾಶಯ ತುಂಬಿದರೆ ಕರೆಂಟಿನ ಉತ್ಪಾದನೆಯೂ ಹೆಚ್ಚು ಎಂದು ಎಂಜಿನಿಯರುಗಳು ಇಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾಗಲೇ ಅಲ್ಲಿ ಕೊಡಗಿನ ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ, ನಾಪೋಕ್ಲು, ಸೂಲ೯ಬ್ಬಿ, ಬಿರುನಾಣಿಗಳು ತಿಂಗಳುಗಟ್ಟಲೆ ಕತ್ತಲುಹೊದ್ದು ಮಲಗಿರುತ್ತದೆ. ಹೊರಲೋಕದ ಸಂಪಕ೯ವನ್ನು ಕಳೆದುಕೊಳ್ಳುತ್ತವೆ. ಅವರೂ ರೈತರು ಎಂಬುದು ನಮಗೆ ಯಾವತ್ತಾದ್ರೂ ನೆನಪಿಗೆ ಬಂದಿದೆಯೇ? ಅವರ ಉದುರುವ ಕಾಫಿ, ಮೆಣಸು, ಬತ್ತದ ಬೆಂಬಲ ಬೆಲೆಗೆ ನಾವೆಂದಾದರೂ ಬೀದಿಗಿಳಿದು ಹೋರಾಟ ಮಾಡಿದ್ದೇವೆಯೇ? ರಸ್ತೆ ತಡೆದು ಟಯರು ಹೊತ್ತಿಸಿದ್ದೇವೆಯೇ? ಕೊಡಗಿನ ಸಂಪನ್ಮೂಲವನ್ನು ಸೂರೆಗೈಯುವ ಕೇರಳ ಲೂಟಿಕೋರರ ಬಗ್ಗೆ, ಕೊಡಗಿನ ಲೂಟಿಗೆ ಸರದಾರನಂತೆ ನಿಂತಿರುವ ಮಾಜಿ ಗ್ರಹಮಂತ್ರಿಯ ಬಗ್ಗೆ ನಾವೆಂದಾದರೂ ಮಾತಾಡಿದ್ದೇವೆಯೇ?

  ತಮಿಳುನಾಡಿಗೆ ನೀರು ಬಿಡುವಾಗ ನೆನಪಾಗುವ ಕಾವೇರಿ, ತೀಥ೯ರೂಪಿಣಿಯಾಗಿ ದಶ೯ನ ಕೊಡುವ ತುಲಾ ಸಂಕ್ರಮಣದ ದಿನ ನಮಗೆ ನೆನಪೇ ಆಗುವುದಿಲ್ಲ! ಅದೇ ರೀತಿ ಉತ್ತರ ಕನಾ೯ಟಕದ ಗೋಳಿಗೆ ದಕ್ಷಿಣ ಕನಾ೯ಟಕ ಎಂದೂ ಸ್ಪಂದಿಸುವುದಿಲ್ಲ ಎಂಬ ನೋವು ಉತ್ತರ ಕನಾ೯ಟಕದವರನ್ನು ಕಾಡುತ್ತಿತ್ತು. ಆದರೆ ಬಹಳ ಖುಷಿಕೊಡುವ ಸಂಗತಿಯೆಂದರೆ ಮಹಾದಾಯಿ ಹೋರಾಟಕ್ಕೆ ದಕ್ಷಿಣವೂ ಸ್ಪಂದಿಸಿತು, ಕಾವೇರಿಯ ಕೂಗು ನಿನ್ನೆ ಹುಬ್ಬಳ್ಳಿಯಲ್ಲೂ ಮಾದ೯ನಿಸಿದೆ. ನಮ್ಮ ನ್ಯಾಯಾಲಯ ನೀಡಿದ ವ್ಯತಿರಿಕ್ತ ತೀಪಿ೯ನ ಸಲುವಾಗಿಯಾದರೂ ನೆಲ, ಜಲದ ವಿಷಯದಲ್ಲಿ ಕನ್ನಡಿಗರೆಲ್ಲ ಒಂದಾಗುವಂತಾಯಿತಲ್ಲಾ… ಈ ಒಗ್ಗಟ್ಟನ್ನು ಹೀಗೆಯೇ ಮುಂದುವರಿಸಿ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗೋಣ. ನಮ್ಮ ಹಕ್ಕಿಗಾಗಿ ಹೋರಾಡೋಣ.

  ಅಂದಹಾಗೆ, ಸೆಪ್ಟೆಂಬರ್ 15, ವಿಶ್ವೇಶ್ವರಯ್ಯನವರ ಜನ್ಮದಿನ, ಮಣ್ಣಿಗೆ ನೀರುಣಿಸಿದವನ ಮರೆಯದೆ ನೆನೆಯೋಣ. ಇನ್ನೊಂದು ತಿಂಗಳಲ್ಲಿ ಬರಲಿರುವ ಕಾವೇರಿ ತುಲಾಸಂಕ್ರಮಣಕ್ಕೂ ಶ್ರದ್ಧೆಯಿಂದ ಹೋಗೋಣ.

 krsdam

Comments are closed.