Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?

ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?

ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?

ದಯವಿಟ್ಟು ಕ್ಷಮಿಸಿ, ಸಭ್ಯತೆಯ ಗೆರೆ ಮೀರಿ ಹೀಗೆ ಪ್ರಶ್ನಿಸುತ್ತಿರುವುದಕ್ಕೆ. ಮನಸ್ಸು ಒಲ್ಲೆ ಎನ್ನುತ್ತಿದ್ದರೂ ಏಕೆ ಹೀಗೆ ಕೇಳಬೇಕಾಗಿದೆಯೆಂದರೆ ನಮ್ಮ ಮಹಾನ್ ನೇತಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂಬ ಅವಿವೇಕದ ಹೇಳಿಕೆಯನ್ನು ಆಗಾಗ್ಗೆ ಕೊಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಅರ್ಥವಾಗುವುದು ಇದೇ ಭಾಷೆ! ಸಾಮಾನ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರು ಮಾತಿಗೆ ನಿಂತರೆ ಅದು ಲೋಕಸಭೆ ಇರಬಹುದು, ಸಾರ್ವಜನಿಕ ಸಭೆಗಳಿರಬಹುದು, ಪ್ರಧಾನಿಯನ್ನು ಕುಟುಕದೆ, ಆರೆಸ್ಸೆಸ್ಸನ್ನು ಎಳೆದು ತಂದು ಹೀಗಳೆಯದೇ ಅವರ ಮಾತು ಪೂರ್ಣಗೊಳ್ಳುವುದೇ ಇಲ್ಲ.
ಫೆಬ್ರವರಿ 1ರಂದು ಬಜೆಟ್ ಮಂಡನೆಯಾಯಿತು. ಒಂದು ದಿನ ಕಳೆದ ನಂತರ ರಾಷ್ಟ್ರಪತಿ ಭಾಷಣದ ಮೇಲೆ ಲೋಕಸಭೆಯಲ್ಲಿ ಚರ್ಚೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಖರ್ಗೆಯವರು, ನಮ್ಮ ಪಕ್ಷ ಸ್ವಾತಂತ್ರ್ಯಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಬಲಿದಾನ ಮಾಡಿದೆ, ನಿಮ್ಮ ಬಿಜೆಪಿ, ಆರೆಸ್ಸೆಸ್ಸಿನ ಒಂದು ನಾಯಿಯೂ ಸತ್ತಿಲ್ಲ ಎಂದು ಬಿಟ್ಟರು. ತಕ್ಷಣ ಪ್ರತಿಭಟನೆ ಮಾಡಿದ ಬಿಜೆಪಿ ಸಂಸದರು, ಕಾಶ್ಮೀರಕ್ಕಾಗಿ ನಾವು ಶಾಮ ಪ್ರಸಾದ ಮುಖರ್ಜಿಯವರನ್ನು, ದೇಶಕ್ಕಾಗಿ ದೀನ ದಯಾಳ ಉಪಾಧ್ಯಾಯರನ್ನು ಕಳೆದುಕೊಂಡಿದ್ದೇವೆ. ಮಾತನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಪಕ್ಕದಲ್ಲೇ ಇದ್ದ ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವುಕ್ಕಾಗಿ ಸ್ವಾತಂತ್ರ್ಯಾನಂತರ ಯಾವ್ಯಾವುದೋ ಕಾರಣಕ್ಕೆ ಹತ್ಯೆಯಾದ ಇಂದಿರಾ, ರಾಜೀವ್‌ರನ್ನು ದೇಶಕ್ಕಾಗಿ ಬಲಿದಾನ ಮಾಡಿದರು ಎಂದು ಖರ್ಗೆಯವರು ಮಾತಿನ ಭರಾಟೆಯಲ್ಲಿ ಹೇಳಿರಬಹುದೆಂದು, ವಾಪಸ್ಸು ಪಡೆಯುತ್ತಾರೆಂದು ಎಲ್ಲರೂ ಭಾವಿಸಿದರು. ಉಹೂಃ, ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಖರ್ಗೆ ಮತ್ತೆ ವೀರಾವೇಶದಿಂದ ಕೂಗಾಡಿದರು. ಇಷ್ಟೆಲ್ಲಾ ದಾರ್ಷ್ಟ್ಯದಿಂದ ಮಾತನಾಡುತ್ತಿರುವ ಖರ್ಗೆಯವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕೋ ಬೇಡವೋ, ನೀವೇ ಹೇಳಿ? ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರೆಸ್ಸೆಸ್‌ನ ಒಂದು ನಾಯಿಯೂ ಸತ್ತಿಲ್ಲ ಎನ್ನುತ್ತೀರಲ್ಲಾ ಖರ್ಗೆಯವರೇ, 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಮ್ಮ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?!
ಇಂದು ಇಟಲಿ ಮೂಲದ ಸೋನಿಯಾ ಗಾಂಧಿ ಕೈಯಲ್ಲಿರುವ ಕಾಂಗ್ರೆಸ್, ಎ.ಓ. ಹ್ಯೂಮ್ ಎಂಬ ಬ್ರಿಟಿಷನಿಂದ ಅಂದು ಸ್ಥಾಪನೆಯಾಗಿದ್ದು 1885ರಲ್ಲಿ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಹುಟ್ಟುವುದಕ್ಕಿಂತ ಮೊದಲೇ ನಡೆದ ಹೋರಾಟದಲ್ಲಿ ಏಕೆ ಸಾಯಲಿಲ್ಲ ಎಂದು ನಾವು ಕಾಂಗ್ರೆಸನ್ನು ಕೇಳಿದರೆ ಎಷ್ಟು ಅಸಂಬದ್ಧವಾಗುತ್ತದೋ 1951ರಲ್ಲಿ ಜನಿಸಿದ ಜನ ಸಂಘವೇಕೆ 1947ರಲ್ಲಿ ಅಂತ್ಯವಾದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲಿಲ್ಲ, ಬಲಿದಾನ ಮಾಡಲಿಲ್ಲ ಎಂದು ಕೇಳಿದರೂ ಅಷ್ಟೇ ಅವಿವೇಕವಾಗುತ್ತದೆ ಅಲ್ಲವೆ? ಇನ್ನು 1925ರಲ್ಲಿ ಡಾ. ಹೆಡಗೆವಾರರು ಆರೆಸ್ಸೆಸ್ಸನ್ನು ಸ್ಥಾಪನೆ ಮಾಡಿದಾಗ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾಗಿತ್ತು, ಅದೇ ವೇಳೆಯಲ್ಲಿ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಶಕ್ತಿಗಳೂ ರಾರಾಜಿಸುತ್ತಿದ್ದವು.
ಅವುಗಳು ಒಡ್ಡಿದ್ದ ಆತಂಕ ತೀವ್ರವಾಗಿತ್ತು. ಹಾಗಾಗಿ ಸ್ವಾತಂತ್ರ್ಯ ಬಂದ ಮೇಲೆ ಅದನ್ನು ರಕ್ಷಣೆ ಮಾಡಿಕೊಳ್ಳಬೇಕಲ್ಲಾ, ಅದೇ ಆರೆಸ್ಸೆಸ್ ಸ್ಥಾಪನೆಯ ಹಿಂದಿರುವ ಉದ್ದೇಶ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು. ಇಷ್ಟಾಗಿಯೂ ಆರೆಸ್ಸೆಸ್ಸನ್ನು ಏಕೆ ವಿನಾಕಾರಣ ಟೀಕಿಸುತ್ತೀರಿ? ಅದಿರಲಿ, ಸ್ವಾತಂತ್ರ್ಯ ಹೋರಾಟ, ಬಲಿದಾನ ಎಂದ ಕೂಡಲೇ ನೆಹರು, ಇಂದಿರಾ, ರಾಜೀವ್ ಗಾಂಧಿಯವರನ್ನು ಬಿಟ್ಟರೆ ಬೇರಾರ ಹೆಸರೂ ನಿಮ್ಮ ಬಾಯಿಂದ ಏಕೆ ಬರುವುದಿಲ್ಲ? ವಿದೇಶಿ ನೆಲದಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಮದನ್ ಲಾಲ್ ಧಿಂಗ್ರಾ, ಬ್ರಿಟಿಷರ ಲಾಠಿ ಏಟು ತಿಂದು ತೀರಿಕೊಂಡ ಲಾಲಾ ಲಜಪತರಾಯ್, ಭಗತ್ ಸಿಂಗ್, ರಾಜಗುರು, ಸುಖದೇವ್, ಆಶ್ಫಾಕುಲ್ಲಾ ಖಾನ್, ಚಂದ್ರಶೇಖರ ಆಝಾದ್, ನಿಗೂಢವಾಗಿ ಕಣ್ಮರೆಯಾದ ಸುಭಾಷ್‌ಚಂದ್ರ ಬೋಸ್ ಹೆಸರು ನಿಮಗೆ ನೆನಪಾಗುವುದೇ ಇಲ್ಲ ಏಕೆ ಖರ್ಗೆಯವರೇ? ಬಾಲಗಂಗಾಧರ ತಿಲಕರ ಮರಣದ ನಂತರ ಕಾಂಗ್ರೆಸ್‌ನಲ್ಲೂ ಎರಡು ಬಣಗಳಿದ್ದವು. ಗಾಂಧಿಯವರ ಸೌಮ್ಯವಾದಿ ಬಣ, ಬ್ರಿಟಿಷರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕೆಂಬ ಕ್ರಾಂತಿಕಾರಿಗಳ ಬಣ.
ಅಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂದವರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್‌ನಲ್ಲೇ ಪ್ರಯತ್ನ ನಡೆದಾಗ ಅಲ್ಲಿಂದ ಹೊರಹೋದವರೇ ಮುಂದೆ ದೇಶಕ್ಕಾಗಿ ಹೆಚ್ಚಾಗಿ ಬಲಿದಾನ ಮಾಡಿದವರು ಎಂಬುದು ನಿಮ್ಮ ನೆನಪಿನಲ್ಲಿರಲಿ. ಮತ್ತೊಂದು ಪ್ರಶ್ನೆ: ನಿಮ್ಮ ರಾಹುಲ್ ಗಾಂಧಿಯವರು ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂದು ಜರಿಯುತ್ತಾರಲ್ಲಾ, ಅವರ ಮುತ್ತಜ್ಜ ನೆಹರು ವಿರುದ್ಧ ಬ್ರಿಟಿಷರು ಒಂದು ಹುಲ್ಲುಕಡ್ಡಿಯನ್ನೂ ಎತ್ತಲಿಲ್ಲವಲ್ಲಾ ಏಕೆ?! ಭಾರತವನ್ನು ಆಳಲು ಬಂದಿದ್ದ ವೈಸರಾಯ್ ಬಗ್ಗೆ ಇಡೀ ದೇಶವಾಸಿಗಳಿಗೆ ಭಯವಿತ್ತು. ಆದರೆ ನಿಮ್ಮ ನೆಹರು ವೈಸರಾಯ್ ಪತ್ನಿಯ ಸಿಗಾರ್‌ಗೆ ಬೆಂಕಿಕಡ್ಡಿ ಗೀರುವಷ್ಟು ನಿರಾಳವಾಗಿದ್ದರಲ್ಲಾ ಹೇಗೆ ಸ್ವಾಮಿ?! ನಿಮಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬೇಕು.
ಅಸಹಕಾರ ಚಳವಳಿಕಾರರ ಮೇಲೆ ದೌರ್ಜನ್ಯ ಎಸಗಿದರೆಂಬ ಕಾರಣಕ್ಕೆ ಗೋರಖ್‌ಪುರ ಜಿಲ್ಲೆಯ ಚೌರಿ ಚೌರಾ ಎಂಬಲ್ಲಿ ಠಾಣೆಯನ್ನು ಸುಟ್ಟು 22 ಪೊಲೀಸರು ಸತ್ತಿದ್ದು ಗೊತ್ತಲ್ಲವೆ? ಅದರಲ್ಲಿ 170ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದ ಬ್ರಿಟಿಷರು, ತಪ್ಪಿತಸ್ಥರೆಂದು ಗಲ್ಲುಶಿಕ್ಷೆ ವಿಧಿಸಿದರು. ಆ ಕಾಲಕ್ಕೆ ನಿಮ್ಮ ಜವಾಹರಲಾಲ್ ನೆಹರು, ಅವರಪ್ಪ ಮೋತಿಲಾಲ್ ನೆಹರು, ಅಷ್ಟೇಕೆ ಗಾಂಧೀಜಿ ಕೂಡಾ ಪ್ರಸಿದ್ಧ ವಕೀಲರೇ ಆಗಿದ್ದರಲ್ಲವೆ? ಅವತ್ತು ಈ 170 ನಿಸ್ವಾರ್ಥ ಸ್ವಾಾತಂತ್ರ್ಯ ಹೋರಾಟಗಾರರನ್ನು ಗಲ್ಲು ಶಿಕ್ಷೆಯಿಂದ ತಪ್ಪಿಸಲು ನಿಮ್ಮ ನೆಹರು ಮತ್ತು ಅವರಪ್ಪ ಏಕೆ ಕರಿಕೋಟು ಹಾಕಿ ಕೋರ್ಟಿಗೆ ಬರಲಿಲ್ಲ? ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಮರಣದಂಡನೆ ವಿಧಿಸಿದಾಗ ಇಡೀ ದೇಶವೇ ದುಃಖದ ಮಡುವಿನಲ್ಲಿತ್ತು. ಗಲ್ಲುಶಿಕ್ಷೆ ತಪ್ಪಿಸಲು ನೆಹರು ಏಕೆ ಕೋರ್ಟಿಗೆ ಬಂದು ವಾದ ಮಾಡಲಿಲ್ಲ. ಚೌರಿಚೌರಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ 170 ಜನರಲ್ಲಿ 155ರನ್ನು ನಿರ್ದೋಷಿಗಳೆಂದು ಸಾಬೀತು ಮಾಡಿದ್ದು, 15 ಜನರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದ್ದು ವಕೀಲಿಕೆ ಬಿಟ್ಟು ಮನೆಯಲ್ಲಿದ್ದ ಪಂಡಿತ ಮದನ ಮೋಹನ ಮಾಳವೀಯರೇ ಹೊರತು, ನಿಮ್ಮ ನೆಹರು ಗಾಂಧಿಯರಲ್ಲ!
ಖರ್ಗೆ ಸಾಹೇಬ್ರೇ, ನೀವು ಎಷ್ಟೇ ಜೋರಾಗಿ ನೆಹರು, ಇಂದಿರಾ, ರಾಜೀವ್ ಗಾಂಧಿ ಎಂದು ಬೊಬ್ಬೆ ಹಾಕಿದರೂ ಈಗಿನ ಯುವ ಜನತೆಗೆ ಇತಿಹಾಸದ ಪುಟಗಳು ಸಲೀಸಾಗಿ ಸಿಕ್ಕಿ ಯಾರ್ಯಾಾರು ಏನೇನು ಎಂಬುದು ತಿಳಿದು ಬಿಟ್ಟಿದೆ. ಅಲ್ಲಾ ಸ್ವಾಮಿ, ಇಂದಿರಾ ಗಾಂಧಿಯವರನ್ನು ಭಜಿಸುತ್ತೀರಲ್ಲಾ, ನಮ್ಮ ದೇಶದ ಇತಿಹಾಸದಲ್ಲೇ ನ್ಯಾಯಾಲಯದಿಂದ ದೋಷಿ ಎಂದು ಘೋಷಣೆಯಾದ ಹಾಗೂ ಜೈಲಿಗೆ ಹೋದ ಮೊದಲ ಪ್ರಧಾನಿ ಯಾರು?! ನ್ಯಾಯಾಲಯದಿಂದ ದೋಷಿಯೆಂದು ಘೋಷಣೆಯಾಗಿರುವ ಆಕೆಯ ಹೆಸರಿನಲ್ಲೂ ಯೋಜನೆಗಳನ್ನೂ ಆರಂಭಿಸುತ್ತೀರಲ್ಲಾ ನಿಮಗೆ ಏನೆನ್ನಬೇಕು? ಯುಪಿಎನ 10 ವರ್ಷಗಳ ಆಡಳಿತದಲ್ಲಿ 256 ಯೋಜನೆಗಳನ್ನು ನೆಹರು, ಇಂದಿರಾ, ರಾಜೀವ್ ಗಾಂಧಿಯವರ ಹೆಸರಿನಲ್ಲಿ ಘೋಷಣೆ ಮಾಡಿದರಲ್ಲಾ ನಿಮಗೆ ಕಾಂಗ್ರೆಸ್‌ನ ಉಳಿದ ಯಾವ ಮಹಾನ್ ನಾಯಕರ ಹೆಸರೂ ನೆನಪಾಗಲಿಲ್ಲವೆ? ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಶಾಸ್ತ್ರಿ, ತಿಲಕ್, ಲಜಪತರಾಯ್ ಕೂಡಾ ಕಾಂಗ್ರೆಸ್ಸಿನ ನಾಯಕರೇ ಆಗಿದ್ದರಲ್ಲವೆ? ಅವರ ಹೆಸರಲ್ಲಿ ಯಾವ್ಯಾವ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ ದಯವಿಟ್ಟು ಹೇಳಿ? ಖರ್ಗೆ ಸಾರ್, ನಿಮಗೆ ವಂದೇ ಮಾತರಂ ಹಾಗೂ ಗಾಂಧೀಜಿಯವರ ಅಚ್ಚುಮೆಚ್ಚಿನ ರಘುಪತಿ ರಾಘವ ರಾಜಾರಾಂ ಗೀತೆಗಳು ನೆನಪಿವೆಯೇ? ಅದು 1923, ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು.
ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು.  ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ ಅಧ್ಯಕ್ಷ (ಮುಸ್ಲಿಂ ಲೀಗ್‌ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಅಲಿ ಮತ್ತು ಆತನ ಸಹೋದರ ಶೌಕತ್ ಅಲಿ ತಡೆದರು. ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್‌ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ, ಮಸೀದಿಯೂ ಅಲ್ಲ.. ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ?! ವಂದೇ ಮಾತರಂಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಅಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದಿದ್ದರು!
ಅಂದಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೇಜಿಸಿದ್ದು ಇದೇ ವಂದೇ ಮಾತರಂ.. 1905ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗಭಂಗ ಚಳವಳಿಗೆ ಇದೇ ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ 1947 ರ ಸ್ವಾತಂತ್ರ್ಯ ಸಿಗುವವರೆಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ. ಇಂತಹ ವಂದೇ ಮಾತರಂ… ಹಾಗೂ ಗಾಂಧೀಜಿಯವರ ಮೆಚ್ಚಿನ ರಘುಪತಿ ರಾಘವ ರಾಜಾರಾಂ.. ಪತಿತ ಪಾವನ ಸೀತಾರಾಂಗಳನ್ನು ಬಹಳ ಸುಶ್ರಾವ್ಯವಾಗಿ ಕಾಂಗ್ರೆಸ್ಸಿನ ಸಭೆ- ಸಮಾರಂಭಗಳಲ್ಲಿ, ಅಧಿವೇಶನಗಳಲ್ಲಿ ಹೇಳಿಕೊಡುತ್ತಿದ್ದರಲ್ಲಾ ಅವೆಲ್ಲ ಕಾಂಗ್ರೆಸಿಗರ ಬಾಯಿಂದ ಹೊರಡುವುದೇ ಇಲ್ಲವಲ್ಲಾ ಈಗ, ಏಕೆ ಸಾರ್?! ಯಾವಾಗ ಕಾಂಗ್ರೆಸ್ ನೆಹರು ಕುಟುಂಬದ ದಾಸ್ಯಕ್ಕೆ ಬಿತ್ತೋ, ಅಂದೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಜತೆ ಅದು ಸಂಬಂಧ ಕಡಿದುಕೊಂಡಿದೆ!
ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸನ್ನು ವಿಸರ್ಜನೆ ಮಾಡಿ ಎಂದು ಗಾಂಧೀಜಿ ಹೇಳಿದ್ದು ಏಕೆ? ಸ್ವಾತಂತ್ರ್ಯ ಕೊಡಿಸಿದ್ದು ನಾವೇ, ನಾವೇ ಎನ್ನುತ್ತಾ ದೇಶ ಲೂಟಿ ಮಾಡುತ್ತಾರೆ ಎಂಬ ಭಯದಿಂದಲೇ. ಒಂದು ಮಾತು ನೆನಪಿರಲಿ, ಸ್ವಾತಂತ್ರ್ಯ ಬಂದಾಗ ಬಿಜೆಪಿ ಜನಿಸಿಲ್ಲದಿರಬಹುದು. ಆದರೆ ಸ್ವಾತಂತ್ರ್ಯ ತಂದುಕೊಟ್ಟ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆಯಿಂದ ಹಿಡಿದು, ತಿಲಕ್, ಲಜಪತರಾಯ್, ಸಾವರ್ಕರ್, ಸುಭಾಷ್, ಭಗತ್, ಆಜಾದ್, ಧಿಂಗ್ರಾ, ಪಟೇಲ್, ಶಾಸ್ತ್ರಿಯವರನ್ನು ಅವರು ಹುಟ್ಟಿದ ದಿನ, ಅಗಲಿದ ದಿನ ಇಂದಿಗೂ ಶ್ರದ್ಧೆಯಿಂದ, ಭಕ್ತಿಯಿಂದ, ಧನ್ಯತೆಯಿಂದ ನೆನಪಿಸಿಕೊಳ್ಳುವುದು ಬಿಜೆಪಿ ಕಚೇರಿಗಳಲ್ಲೇ. ವಂದೇ ಮಾತರಂ ಸುಶ್ರಾವ್ಯವಾಗಿ, ರೋಮಾಂಚನಗೊಳ್ಳುವಂತೆ ಮೊಳಗುವುದು ಆರೆಸ್ಸೆೆಸ್ ಹಾಗೂ ಬಿಜೆಪಿ ಸಭೆಗಳಲ್ಲೇ. ನಿಮ್ಮದೇನಿದ್ದರೂ ನೆಹರು ಕುಟುಂಬದ ಭಜನೆ!
ಒಮ್ಮೆ ಪಾರ್ವತಿ ಪರಮೇಶ್ವರರು ತಮ್ಮ ಮಕ್ಕಳಾದ ಗಣಪತಿ, ಸುಬ್ರಹ್ಮಣ್ಯರಿಗೆ ಯಾರು ಮೊದಲು ತ್ರಿಲೋಕ ಸಂಚರಿಸಿ, ಜನರ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತೀರಿ ನೋಡೋಣ ಎಂದು ಸ್ಪರ್ಧೆ ಇಟ್ಟರು. ಸುಬ್ರಹ್ಮಣ್ಯ ನವಿಲು ಏರಿ ತ್ರಿಲೋಕ ಸಂಚಾರಕ್ಕೆ ಹೊರಟೇ ಬಿಟ್ಟ. ಆದರೆ ಎಷ್ಟು ಹೊತ್ತಾದರೂ ಗಣೇಶ ಮಾತ್ರ ಕುಂತಲ್ಲೇ ಇದ್ದ! ಪಾರ್ವತಿ ಪರಮೇಶ್ವರರಿಗೇ ಆಶ್ಚರ್ಯವಾಗಿ, ನೀನೇಕೆ ಇನ್ನೂ ಹೋಗಿಲ್ಲ ಎಂದು ಕೇಳಿದರು. ಮೇಲೆದ್ದ ಗಣೇಶ, ತ್ರಿಲೋಕವನ್ನು ಬಲ್ಲ ನೀವೇ ಇಲ್ಲಿದ್ದೀರಲ್ಲಾ ಎಂದು ಪಾರ್ವತಿ ಪರಮೇಶ್ವರರಿಗೇ ಮೂರು ಸುತ್ತು ಹಾಕಿ ಕುಳಿತ!!
ನಮ್ಮ ಖರ್ಗೆಯವರ ಕಥೆಯೂ ಹೀಗೆ. ಕಲಬುರ್ಗಿಯಲ್ಲಿ 1300 ಕೋಟಿ ಇಎಸ್‌ಐ ದುಡ್ಡಿನಲ್ಲಿ ‘ಖರ್ಗೆ ಗುಂಬಝ್’ ಕಟ್ಟಿರುವ ಅವರಿಗೆ, ನೆಹರು ಕುಟುಂಬವೇ ಬ್ರಹ್ಮಾಂಡ! ಸೋನಿಯಾ ಗಾಂಧಿಯವರ ಸುತ್ತ ಸುತ್ತಿದರೆ ತನಗೆ ಸ್ವತ್ತು, ಸವಲತ್ತು, ಮಗನಿಗೆ ಮಂತ್ರಿಗಿರಿ ಸಿಗುತ್ತದೆ ಎಂದು ಚೆನ್ನಾಗಿ ತಿಳಿದಿದೆ! ಸ್ವಾಮಿ ಖರ್ಗೆಯವರೇ, ರಾಜೀವ್ ಗಾಂಧಿಯವರ ‘ಮಗಳ’ ಹೆಸರನ್ನು ‘ಮಗ’ನಿಗೆ(ಪ್ರಿಯಾಂಕ) ಇಟ್ಟಿರುವ ನಿಮ್ಮ ಮಾನಸಿಕ ದಾಸ್ಯ ಯಾವ ಮಟ್ಟದ್ದು ಅಂತ ನಮಗೆ ಗೊತ್ತು, ನಿಮ್ಮ ಮಾತುಗಳಲ್ಲಿ ತೂಕವಿರಲಿ.

20170218_081038

Comments are closed.