Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?!

ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?!

ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?!

ಮೂವತ್ತು ವರ್ಷ ವಯಸ್ಸಿನ ಸುಂದರ ಯುವಕ ವಡಿಕ್ಕಲ್ ರಾಮಕೃಷ್ಣನ್. ತಲಶೇರಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದರು. ಬಿಡುವಿನ ವೇಳೆಯಲ್ಲಿ ಆರೆಸ್ಸೆಸ್ ಶಾಖೆ ನಡೆಸುತ್ತಿದ್ದದ್ದು ಬಿಟ್ಟರೆ ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಿದ್ದರು ವಡಿಕ್ಕಲ್ ರಾಮಕೃಷ್ಣನ್. ಒಂದು ದಿನ ಎಂದಿನಂತೆ ರಾಮಕೃಷ್ಣನ್ ರಾತ್ರಿ ಟೈಲರಿಂಗ್ ಅಂಗಡಿಯನ್ನು ಮುಚ್ಚಿ, ಸಂಪಾದನೆಯ ಪುಡಿ ಹಣವನ್ನು ಎಣಿಸಿ ಜೇಬಿಗೆ ಹಾಕಿ ಅಕ್ಕಿಯೋ ಬೇಳೆಯೋ ಖರೀದಿಸಬೇಕೆಂದು ಅಂದಾಜಿಸುತ್ತಾ ಮನೆಗೆ ಮರಳುತ್ತಿದ್ದರು. ದಾರಿ ಮಧ್ಯೆ ಇದ್ದಕ್ಕಿದ್ದಂತೆ ಕಮ್ಯುನಿಸ್ಟ್ ಗೂಂಡಾಗಳು ಎರಗಿದರು. ರಾಮಕೃಷ್ಣನ್ ಅವರಿಗೆ ಯದ್ವಾತದ್ವಾ ಮಾರಕಾಯುಧಗಳಿಂದ ಕೊಚ್ಚಿದರು. ಕೆಲವೇ ಕೆಲವು ನಿಮಿಷಗಳಲ್ಲಿ ಆ ರಾಷ್ಟ್ರಭಕ್ತನ ಪ್ರಾಣಪಕ್ಷಿ ಹಾರಿಹೋಯಿತು. ತಾವು ನಡೆಸುತ್ತಿದ್ದ ಶಾಖೆಯ ಮಕ್ಕಳನ್ನೂ ಶಾಖೆಯ ಧ್ಯೇಯಗಳನ್ನೂ ಅತಿಯಾಗಿ ಹಚ್ಚಿಕೊಂಡಿದ್ದ ರಾಮಕೃಷ್ಣನ್ ಅವರ ಆ ಸಾವನ್ನು ಕೇರಳದ ಸಂಘಪರಿವಾರ ಮತ್ತು ಭಾಜಪದ ಕಾರ್ಯಕರ್ತರು ಇಂದಿಗೂ ಮರೆತಿಲ್ಲ.

ಅದು 1969ನೇ ಇಸವಿ ಏಪ್ರಿಲ್ 28.

ಅದಾಗಿ ಇನ್ನೂ ಆರು ತಿಂಗಳಾಗಿರಲಿಲ್ಲ. ಕಮ್ಯುನಿಸ್ಟರ ರಕ್ತದಾಹ ಆರಲಿಲ್ಲ. ಕೊಟ್ಟಾಯಂ ಜಿಲ್ಲೆಯ  ಪಿ.ಎಸ್ ಶ್ರೀಧರನ್ ನಾಯರ್ ಎಂಬ ಭಾಜಪದ ಕಾರ್ಯಕರ್ತರನ್ನು ಅಮಾನುಷವಾಗಿ ಕೊಚ್ಚಿ ಕೊಲ್ಲಲಾಯಿತು. 71ರ ಫೆಬ್ರವರಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಪುತ್ತುಪೆರಿಯಾರಂ ಗ್ರಾಮದ ಸಂಘದ ಶಾರೀರಿಕ್ ಪ್ರಮುಖ್ ವಿ ರಾಮಕೃಷ್ಣ ಅವರನ್ನು ಸಂಘದ ಶಾಖಾಸ್ಥಾನದಲ್ಲೇ ಕೊಚ್ಚಿ ಕೊಲ್ಲಲಾಯಿತು. 1970ರಲ್ಲಿ ವೆಳಿಯತ್ತುನಾಡು ಚಂದ್ರಶೇಖರನ್, 71ರಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಯಾದ ಉನ್ನಿಚೋಯಿಕುಟ್ಟಿ, 73ರಲ್ಲಿ ತ್ರಿಶೂರಿನಲ್ಲಿ ಮಾರ್ಕಿಸ್ಟ್ ಗೂಂಡಾಗಳಿಂದ ಹತ್ಯೆಯಾದ ಶಂಕರನಾರಾಯಣನ್, ಕಣ್ಣೂರಿನ ಕೆ. ವಿಜಯನ್, ನಾಣು ಮಾಷ್ಟರ್, ಅಲ್ಲಪುಳದ ಗೋಪಾಲಕೃಷ್ಣನ್, ಕರಿಂಪಿಲ್ ಸತೀಸನ್, ಪಾಲಕ್ಕಾಡಿನ ಎಂ.ಟಿ ಕೃಷ್ಣನ್, ವಯನಾಡಿನ ಕರಿನ್ಗಾರಿ ಚಂದ್ರನ್, ವಿದ್ಯಾರ್ಥಿ ಪರಿಷತ್ತಿನ ಅನು, ಸುಜಿತ್, ಕಿಮ್, ಮತ್ತು ಮಕ್ಕಳಿಗೆ ಪಾಠ ಮಾಡಿದ ‘ಅಪರಾಧ’ಕ್ಕೆ ಕಾಲು ಕಳೆದುಕೊಂಡ ಜಯಕೃಷ್ಣನ್ ಮಾಷ್ಟರ್… ಬರೆದಷ್ಟೂ ಮರೆಯಲಾಗದ ಅವೇ ಮುಖಗಳು ನೆನಪಾಗುತ್ತವೆ.

ಕೇರಳದ ಕೆಂಪು ಉಗ್ರರ ರಕ್ತ ಚರಿತ್ರೆ 60ರ ದಶಕದಲ್ಲಿ ಆರಂಭವಾದರೂ ಅದಿನ್ನೂ ನಿಂತಿಲ್ಲ. ಎರಡು ದಿನದ ಹಿಂದೆ ರೆಮಿತ್‍ನ ಜೀವವನ್ನು ಆಹುತಿ ತೆಗೆದುಕೊಂಡಿದ್ದಾರೆ ಕಮ್ಯುನಿಸ್ಟ್ ಪಾರ್ಟಿಯ ಗೂಂಡಾಗಳು. ಕೇರಳದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ, ನೀವು ಕಣ್ಣೂರು ಜಿಲ್ಲೆಯ ಯಾವ ಊರಿಗೆ ಹೋದರೂ ಕಮ್ಯುನಿಸ್ಟರು, ಇಸ್ಲಾಮಿಕ್ ಉಗ್ರರಿಂದ ಪ್ರಾಣ ಕಳೆದುಕೊಂಡ ಹಲವು ಹಿಂದೂ ಮನೆಗಳನ್ನು ನೀವು ಕಾಣದೇ ಇರಲಾರಿರಿ. ಇವರ ರಕ್ತ ಚರಿತ್ರೆಯ ಇತಿಹಾಸವನ್ನು ನೋಡಬೇಕೆಂದರೆ ಒಮ್ಮೆ ಕಣ್ಣೂರು ಜಿಲ್ಲೆಯ ಆರೆಸ್ಸೆಸ್ ಕಾರ್ಯಾಲಯವನ್ನೊಮ್ಮೆ ನೋಡಿ ಬರಬೇಕು. ಅಲ್ಲಿ ನೇತುಹಾಕಿದ ನೂರಾರು ಕಾರ್ಯಕರ್ತರ ಪೋಟೋಗಳಿಗೆ ಹೂವಿನ ಹಾರ ಬಿದ್ದಿದೆ. ಪ್ರತಿ ದಿನ ಬೆಳಗ್ಗೆ ಆ ಪೋಟೋಗಳೆದುರಿಗೆ ನಿಂತು ಕಾರ್ಯಕರ್ತರು ದೇಶಭಕ್ತಿಯ ಹಾಡನ್ನು ಹಾಡುತ್ತಾರೆ. ಈ ಪೋಟೋಗಳಾಗಿರುವ ಕಾರ್ಯಕರ್ತರು ಧಾರುಣವಾಗಿ ಸತ್ತರೇಕೆ? ಇವರು ಮಾಡಿದ ತಪ್ಪಾದರೂ ಏನು? ಕೊಂದವರಾದರೂ ಯಾರು?

ಜಯಕೃಷ್ಣ ಮಾಷ್ಟರ್ ಆ ಊರಿನಲ್ಲಿ ಖ್ಯಾತರಾಗಿದ್ದ ಮನುಷ್ಯ. ಮೇಷ್ಟ್ರರೆಂದರೆ ಜಯಕೃಷ್ಣ ಮೇಷ್ಟ್ರರಂತಿರಬೇಕು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ತಪ್ಪದೆ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದ ಜಯಕೃಷ್ಣ ಮಾಷ್ಟರ್ ಮಕ್ಕಳಿಗೆ ಭ್ರಮೆಗಳಿಗೆ ಬಲಿಯಾಗದಂತೆ ಪೀಳಿಗೆಯನ್ನು ರೂಪಿಸುವ ಕೆಲಸ ಮಾಡುತ್ತಿದ್ದರು. ಅವರ ಮುಂದೆ ಕೇರಳದ ಭವಿಷ್ಯ ನಿಂತಿತ್ತು. ಆದರೆ ಮಾರ್ಕ್ಸ್ ವಾದಿಗಳಿಗೆ ಅವರಿಗಿದ್ದ ಕಾಳಜಿ ಇರಲಿಲ್ಲ. ದಿನ ಕಾಯುತ್ತಿದ್ದ ಕಮ್ಯುನಿಸ್ಟರು ಒಂದು ದಿನ ಜಯಕೃಷ್ಣ ಮಾಷ್ಟರ್ ಅವರನ್ನು ಹಿಡಿದು ಗರಗಸದಿಂದ ಕಾಲನ್ನು ಕತ್ತರಿಸಿಯೇ ಬಿಟ್ಟರು. ಕತ್ತರಿಸಿದರು ಎಂದರೆ ಕಾಲು ಅವರ ದೇಹದಿಂದ ಪ್ರತ್ಯೇಕವಾಯಿತು! ಈ ಕಮ್ಯುನಿಸ್ಟರೆಷ್ಟು ಕ್ರೂರಿಗಳೆಂದರೆ ಕತ್ತರಿಸಿ ಬಿದ್ದಿದ್ದ ಕಾಲನ್ನು ಹಿಡಿದು ಡಾಂಬರು ರಸ್ತೆಗೆ ಗರಗರ ಉಜ್ಜಿದರು. ಅರೆಸ್ಸೆಸ್ಸಿಗನ ತುಂಡಾಗಿ ಬಿದ್ದಿದ್ದ ಕಾಲುಗಳೂ ಅವರಿಗೆ ಹೆದರಿಕೆ ಹುಟ್ಟಿಸಿತ್ತು. ಅಂದರೆ ಈ ಆರೆಸ್ಸೆಸ್ಸಿಗರ ನಿರ್ಜೀವ ದೇಹವೂ ದೇಶಪ್ರೇಮವನ್ನು ಸಾರುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಆದರೇನು ಜಯಕೃಷ್ಣ ಮೇಷ್ಟರು ಯಮನನ್ನು ಗೆದ್ದು ಬಂದರು. ಪ್ರಾಣ ಉಳಿಸಿಕೊಂಡರು. ಒಂಟಿ ಕಾಲಲ್ಲಿ ಕೇರಳಾದ್ಯಂತ ಪ್ರವಾಸ ಮಾಡಿದರು. ಕೇರಳದಲ್ಲಿ ನಡೆಯುವ ಕಮ್ಯುನಿಸ್ಟರ ದೌರ್ಜನ್ಯವನ್ನು ದೆಹಲಿಗೆ ಮುಟ್ಟಿಸಿದರು. ಆ ಒಂಟಿ ಕಾಲಿಗೂ ಕಮ್ಯುನಿಸ್ಟರು ಹೆದರಿದರು. ಮತ್ತೆ ಬೆದರಿಕೆಗಳು ಬಂದವು. ದಿಟ್ಟ ಜಯಕೃಷ್ಣ  ಮಾಷ್ಟರ್ ನನ್ನ ಪ್ರಾಣದ ಮೇಲೆ ನಿಮಗಷ್ಟು ಭಯವೇ ಎಂದು ಕಮ್ಯುನಿಸ್ಟರ ವಿರುದ್ಧ ಗುಡುಗಿದರು. ಕೇರಳವನ್ನು ದೇವರ ನಾಡು ಎನ್ನುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಇಂಥ ದೇವರಂಥಾ ಮನುಷ್ಯರಿರುವುದರಿಂದಲೇ ಕೇರಳ ದೇವರ ನಾಡಾಗಿದೆ ಎಂದು ನನಗನಿಸುತ್ತದೆ.

ಇಂಥ ಎಷ್ಟೋ ಉದಾಹರಣೆಗಳು ಕೇರಳದಲ್ಲಿವೆ!

ಒಮ್ಮೆ ಕಮ್ಯುನಿಸ್ಟರ ರಕ್ಕಸರ ಮುಷ್ಠಿಯಿಂದ ಹೊರಬಂದು ಆರೆಸ್ಸೆಸ್ ಶಾಖೆಗೆ ಸೇರ್ಪಡೆಯಾದ ಒಬ್ಬ ದೇಶಭಕ್ತನನ್ನು ನಡುರಸ್ತೆಯಲ್ಲೇ ಹೆಡೆಮುರಿ ಕಟ್ಟಲಾಯಿತು. ಕಮ್ಯುನಿಸ್ಟ್ ಕಚೇರಿಯಿಂದ ತಂದ ಭಯಂಕರ ವಿಷವನ್ನು ಅವರ ಬಾಯಿಗೆ ಸುರಿಯಲಾಯಿತು. ವಿಷ ಆ ವ್ಯಕ್ತಿಯ ದೇಹವನ್ನು ವ್ಯಾಪಿಸುವವರೆಗೂ ಆತನ ಕಟ್ಟನ್ನು ಕಮುನಿಸ್ಟರು ಬಿಚ್ಚಲಿಲ್ಲ. ಆದರೆ ಆ ಮಹಾಪುರುಷ ವಿಷ ತನ್ನ ದೇಹಕ್ಕಿಡೀ ವ್ಯಾಪಿಸಿ ಸ್ಮ್ರತಿ ತಪ್ಪುವವರೆಗೂ ಭಾರತ ಮಾತೆಗೆ ಜಯಕಾರ ಹಾಕುತ್ತಲೇ ಪ್ರಾಣಬಿಟ್ಟರು. ದೇಶ ಸ್ವತಂತ್ರಗೊಂಡು ಹತ್ತಿರ ಹತ್ತಿರ ಒಂದು ಶತಮಾನಗಳಾಗುತ್ತಿರುವ ಈ ಹೊತ್ತಿನಲ್ಲಿ, ಜಗತ್ತೇ ಕಮ್ಯುನಿಸಮ್ಮಿನತ್ತ ಹೇಸಿಗೆಯ ಮುಖಭಾವದೊಂದಿಗೆ ನೋಡುತ್ತಿರುವ ಹೊತ್ತಿನಲ್ಲಿ ಕೇರಳದಲ್ಲಿ ಇಂದಿಗೂ ಇಂಥ ಘಟನೆಗಳು ನಡೆಯುತ್ತವೆ.

ರಾಷ್ಟ್ರವಾದಿಗಳನ್ನು ಕೇರಳದ ಕಮ್ಯುನಿಸ್ಟರು ಯಾವ ಯಾವ ಪರಿಯಲ್ಲಿ ಹಿಂಸೆ ಕೊಟ್ಟರೆಂದರೆ ಅದನ್ನು ನೋಡಿದರೆ ಸ್ವತಃ ಹಿಟ್ಲರನೇ ನಾಚಿಕೊಳ್ಳಬೇಕು. ಒಮ್ಮೆ ತಲಶೇರಿ ಸಮೀಪದ ವಿಧವೆ ತಾಯಿಯೊಬ್ಬಳು ತನ್ನ ಮಕ್ಕಳನ್ನು ಕಮ್ಯುನಿಸ್ಟರ ಸಹವಾಸದಿಂದ ಬಿಡಿಸಿ ಅವರನ್ನು ಆರೆಸ್ಸೆಸ್ ಶಾಖೆಗೆ ಕಳುಹಿಸತೊಡಗಿದಳು. ಕಮ್ಯುನಿಸ್ಟರ ಕೋಪ ಆ ವಿಧವೆ ತಾಯಿಯತ್ತ ತಿರುಗಿತು. ಒಂದು ದಿನ ಆಕೆ ತನ್ನ ಮಕ್ಕಳನ್ನು ಶಾಖೆಗೆ ಕಳುಹಿಸಿ ದಿನಸಿ ಖರೀದಿಸಲು ಅಂಗಡಿಗೆ ನಡೆದು ಬರುತ್ತಿದಳು. ಹಳೆಯ ಜೀಪೋಂದು ಭಾರೀ ವೇಗವಾಗಿ ಆಕೆಯ ಮೇಲೆ ಹರಿಯಿತು. ಆಕೆ ಸ್ಥಳದಲ್ಲೇ ಸತ್ತಳು. ಶಾಖೆಗೆ ಹೋದ ಒಂದೇ ಕಾರಣಕ್ಕೆ ಕಮ್ಯುನಿಸ್ಟರು ಆ ಪುಟ್ಟ ಮಕ್ಕಳನ್ನು ಅನಾಥ ಮಾಡಿದ್ದರು. ಇನ್ನೊಮ್ಮೆ ಅದೇ ತಲಶೇರಿಯಲ್ಲಿ ಕಮ್ಯುನಿಸ್ಟರ ಸಂಗ ಬಿಟ್ಟ ಅಟೋ ಚಾಲಕರೊಬ್ಬರು ಸಂಘದ ಸಿದ್ಧಾಂತಕ್ಕೆ ವಾಲಿದ್ದರು. ಅವರನ್ನು ಕೊಲ್ಲಲು ಕಮ್ಯುನಿಸ್ಟರಿಗೆ ಜೀಪು ಅಥವಾ ವಿಷದ ಅಗತ್ಯ ಬೀಳಲಿಲ್ಲ. ನೇರ ಮನೆಗೇ ನುಗ್ಗಿ ಮನಬಂದಂತೆ ಮಚ್ಚಿನೇಟು ಹಾಕಿದರು. ಅವರ ಸುಂದರ ಮುಖ ಗುರುತು ಸಿಗಲಾರದಂತೆ ಬದಲಾಯಿತು. ಸೆಪ್ಟಂಬರ್ 17, 1996ರ ದಿನ ಕೇರಳದ ಪರುಮಲ ಜಿಲ್ಲೆಯ  ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ಅನು, ಸುಜಿತ್, ಕಿಮ್ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು. ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ   ಈ ಹುಡುಗರು ಮಾಡಿದ ಮಹಾಪರಾಧ. ಕಾಲೇಜಿಗೆ ಲಗ್ಗೆ ಇಟ್ಟ ಕಮ್ಯುನಿಸ್ಟ್ ಗೂಂಡಾಗಳು ಮಚ್ಚು ಹಿಡಿದು ಸಿನೆಮಾ ಶೈಲಿಯಲ್ಲಿ ನುಗ್ಗಿದರು. ಪ್ರಾಣ ಉಳಿಸಿಕೊಳ್ಳಲು ಕಾಲೇಜಿನ ಕಿಟಕಿಯಿಂದ ಹಾರಿದ ಹುಡುಗರು ಪಂಪಾನದಿಯತ್ತ ಧುಮುಕಿ ಈಜಲಾರಂಭಿಸಿದರು. ನೀರಿಗೂ ಈ ಗೂಂಡಾಗಳು ಕಲ್ಲೆಸೆಯಲಾರಂಭಿಸಿದರು. ಅಲ್ಲೇ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಂಗಸರು ಈ ಹುಡುಗರಿಗೆ ಸೀರೆಗಳನ್ನು ಎಸೆದು ಬದುಕಿಕೊಳ್ಳುವಂತೆ ಅವಕಾಶ ನೀಡಿದರೂ ಕಮ್ಯುನಿಸ್ಟ್ ಗೂಂಡಾಗಳು ಹೆಂಗಸರಿಗೂ ಕೊಲೆ ಬೆದರಿಕೆ ಒಡ್ಡಿದರು. ಹುಡುಗರು ನದಿಯಲ್ಲಿ ಈಜಲಾರದೆ, ದಡ ಸೇರಲಾರದೆ ಧಾರುಣವಾಗಿ ಸತ್ತರು. ಮರುದಿನ ಪೆರುಮುಲ ಜಿಲ್ಲಾ  ಕಮ್ಯುನಿಸ್ಟ್ ಕಛೇರಿಯಲ್ಲಿ ‘ನಂಗಳ್ ಕೊಯ್ಯುಂ ವಯಲೆಲ್ಲಾ ನಂಗಳದಾವು ಪೈಂಗಿಳೆಯೇ’ ಕ್ರಾಂತಿಗೀತೆಯನ್ನು ಕಮ್ಯುನಿಸ್ಟರು ರಾಗಾವಾಗಿ ಹಾಡಿ ಲಾಲ್ ಸಲಾಂ ಘೋಷಣೆ ಮೊಳಗಿಸಿ ಚಹಾ ಪಾರ್ಟಿ ನಡೆಸಿ ಖುಷಿ ಪಟ್ಟರು.

ಕಮ್ಯುನಿಸ್ಟರ ಆರದ ರಕ್ತದಾಹದಿಂದ ಇಂದು ದೇವರ ಸ್ವಂತ ನಾಡು ದೇಶದಲ್ಲೇ ಕುಖ್ಯಾತಿಯನ್ನು ಪಡೆಯುತ್ತಿದೆ. ಭಿನ್ನ ರಾಜಕೀಯ ಸಿದ್ಧಾಂತಗಳಿಗಾಗಿ ಒಬ್ಬನ ಕೊಲೆಯನ್ನೇ ನಡೆಸುವುದಾದರೆ ಈ ಕಮ್ಯುನಿಸ್ಟರು ಕಟ್ಟುವ ಸಮಾಜದ ಸ್ವರೂಪವಾದರೂ ಎಂಥಾದ್ದು? ಸರಾಸರಿ ತಿಂಗಳಿಗೆರಡರಂತೆ ನಡೆಯುತ್ತಿರುವ ರಾಷ್ಟ್ರೀಯವಾದಿಗಳ ಕೊಲೆಯ ನಡುವೆಯೂ ಕೇರಳದ ಅಂತಸತ್ವವೊಂದು ಇನ್ನೂ ಮಿಡಿಯುತ್ತಿದೆ. ಕಮ್ಯುನಿಸ್ಟರ ಕ್ರೌರ್ಯದ ನಡುವೆಯೂ ಕೇರಳದ ಶಕ್ತಿ ಬತ್ತದ ಒರತೆಯಂತೆ ಇನ್ನೂ ಹರಿಯುತ್ತಲೇ ಇದೆ. ತನ್ನ ನೆರೆಕರೆಯ ವ್ಯಕ್ತಿ, ಕಾಲೇಜಿನ ಸಹಪಾಠಿಯ ಬರ್ಬರ ಕೊಲೆಯಾದರೂ ಕೇರಳದಲ್ಲಿ ಸಂಘವಾಗಲೀ, ವಿದ್ಯಾರ್ಥಿ ಪರಿಷತ್ ಆಗಲೀ, ಭಾಜಪವಾಗಲೀ ಹೆದರಿ ಮೂಲೆಯಲ್ಲಿ ಕುಳಿತಿಲ್ಲ. ಇಂದು ಕೇರಳ ದೇಶದಲ್ಲೇ ಅತಿ ಹೆಚ್ಚಿನ ಆರೆಸ್ಸೆಸ್ ಶಾಖೆಗಳನ್ನು ಹೊಂದಿರುವ ರಾಜ್ಯ. ಬಾಲಗೋಕುಲಂ ಎಂಬ ಯೋಜನೆ ಕೇರಳದ ಮನೆಮನೆಯನ್ನೂ ಮುಟ್ಟಿದೆ. ವಿವೇಕಾನಂದ ಕೇಂದ್ರದ ಮೂಲಕ ಪ್ರತಿ ಮನೆಯೂ ಸಂಘದ ಮನೆಗಳಾಗಿ ಬದಲಾಗುತ್ತಿದೆ. ಕಮ್ಯುನಿಸ್ಟರಿಗೆ ಗೊತ್ತಿಲ್ಲದಂತೆಯೇ ಅವರು ಆರೆಸ್ಸೆಸ್ ಆಗಿಹೋಗುತ್ತಿದ್ದಾರೆ. ಒಳ್ಳೆಯದು ಯಾವುದೆಂಬುದು ಗೊತ್ತಿದ್ದರೂ ಕೆಟ್ಟದ್ದನ್ನು ಬಿಡಲಾರದ ಕಮ್ಯುನಿಸ್ಟರ ಈ ಚಾಳಿ ಕೇರಳದಲ್ಲಿ ರಕ್ತಹರಿಸುತ್ತಿದೆ. ಅಂದರೆ ತಮ್ಮ ಬುಡ ಅಲ್ಲಾಡುತ್ತಿರುವಾಗ ಅವರಿಗೆ ಕಂಡ ಕಟ್ಟಕಡೆಯ ಉಪಾಯ ಆರೆಸ್ಸೆಸ್ಸಿಗರನ್ನು ಕಂಡಲ್ಲಿ ಕೊಲ್ಲುವ ರಾಕ್ಷಸ ಮಾರ್ಗ.

ನೀವು ಕಮ್ಯುನಿಸ್ಟರನ್ನು ಎಲ್ಲೇ ನೋಡಿ. ಅವರು ತಮ್ಮ ನೆಲೆಯನ್ನು ಕಂಡುಕೊಂಡಿರುವುದು ಹಿಂಸೆಯ ಮೂಲಕವೇ. ಎಷ್ಟಾದರೂ ಸಿದ್ಧಾಂತ ಅವರಿಗೆ ಎರಡನೆಯ ಸಂಗತಿ. ಅಧಿಕಾರ ಹಿಡಿಯಲು ಕಮ್ಯುನಿಸ್ಟರು ಏನನ್ನು ಬೇಕಾದರೂ ಮಾಡುತ್ತಾರೆನ್ನುವುದನ್ನು ಇಡೀ ಜಗತ್ತೇ ನೋಡಿದೆ. ರಷ್ಯಾದಲ್ಲಿ, ಚೀನಾದಲ್ಲಿ, ಮಧ್ಯ ಅಮೆರಿಕಾದ ದೇಶಗಳಲ್ಲಿ ಕಮ್ಯುನಿಸ್ಟರು ಬಡವರ ಮೇಲೆ ನಡೆಸಿದ ಸುಲಿಗೆ, ಅಮಾಯಕರ ಮೇಲೆ ನಡೆಸಿದ ಕ್ರೌರ್ಯಗಳನ್ನು ಇಡೀ ಜಗತ್ತೇ ಕಂಡು ಟೀಕಿಸಿದೆ. ನಮ್ಮ ಭಾರತದಲ್ಲೂ ಕಳೆದ ಅರೆ ಶತಮಾನಗಳಿಂದ ಬಂಗಾಳದಂಥ ಫಲವತ್ತಾದ ನೆಲವನ್ನು ಗೊಬ್ಬರದ ಗುಂಡಿಯನ್ನಾಗಿ ಮಾಡಿದ ಶ್ರೇಯಸ್ಸು ಈ ಕಮ್ಯುನಿಸ್ಟರಿಗೆ ಸಲ್ಲಬೇಕು. ಅವರು ಸಂಪತ್ತಿನ ಹಂಚಿಕೆಯ ಮಾತಾಡುತ್ತಲೇ ನೆಲದ ಅಂತಸತ್ವವನ್ನು ಕಿತ್ತೊಗೆಯುತ್ತಾರೆ. ಸಮಾನತೆಯ ಮಾತಾಡುತ್ತಲೇ ಸಮಾಜದಲ್ಲಿ ಒಡಕು ಮೂಡಿಸುತ್ತಾರೆ. ಆದರೆ ಅವರ ರಕ್ತಚರಿತ್ರೆಯ ಹೊರತಾಗಿಯೂ ಉಳಿದುಕೊಂಡಿದ್ದು ಕೇರಳವೊಂದೇ. ಕೇರಳವನ್ನು ಕೇರಳವಾಗಿ ಉಳಿಸಲು ಇಟ್ಟಿಗೆಯಾಗಿ ಬಳಕೆಯಾದವರು ನಮ್ಮ ರಾಷ್ಟ್ರೀಯವಾದಿ ಸಂಘಟನೆಗಳ ಕಾರ್ಯಕರ್ತರು. ಕೇರಳದಲ್ಲಿ ನಡೆದಷ್ಟು ರಕ್ತಪಾತ, ಕಗ್ಗೊಲೆಗಳು ಜಗತ್ತಿನ ಯಾವ ಭಾಗದಲ್ಲೇ ನಡೆದಿದ್ದರೂ ಆ ನೆಲ ಮೂಲಸ್ವರೂಪವನ್ನು ಬದಲಾಯಿಸಿ ಕೊಂಡು ಇನ್ನೇನೋ ಆಗಿಹೋಗುತ್ತಿತ್ತು.

ಕಳೆದ ತಿಂಗಳು ಕೇರಳದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪರಿಷತ್ತಿನ ಕಾರ್ಯಕಾರಣಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರೂ ಆಗಮಿಸಿದ್ದರು. ಅಲ್ಲೊಂದು “ಅಹುತಿ” ಹೆಸರಿನ ಪ್ರದಕ್ಷಿಣೆಯನ್ನು ಆಯೋಜನೆ ಮಾಡಲಾಗಿತ್ತು. ಅದನ್ನು ನೋಡಿದರೆ ಇಸ್ರೇಲ್‍ನ ಹೋಲೋಕಾಸ್ಟ್ ಮ್ಯೂಸಿಯಮ್ಮನ್ನು ನೋಡಿದಂತೆ ಭಾಸವಾಗುತ್ತಿತ್ತು. ಕಮ್ಯುನಿಸ್ಟರ ದಾಳಿಗೆ ತುತ್ತಾಗಿ ಪ್ರಾಣಕಳೆದುಕೊಂಡ ನೂರಾರು ಕಾರ್ಯಕರ್ತರ ರಕ್ತಸಿಕ್ತ ದೇಹಗಳ ಒಂದೊಂದೇ ಚಿತ್ರವನ್ನು ನೋಡಿದಾಗ ಕರುಳ ಹಿಂಡಿದಂತಾಗುತ್ತಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ಭಾನುವಾರ ಬೆಂಗಳೂರಿನ ಜಯನಗರದಲ್ಲಿರುವ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಒಂದು ಪುಸ್ತಕ ಬಿಡುಗಡೆ ಹಾಗೂ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಕೊನೆಹಾಡಿ ಎಂದು ಕರೆಕೊಡುವ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಆಯೋಜನೆಯಾಗಿದೆ. ಎರಡೂ ಕಾಲು ಕಳೆದುಕೊಂಡಿರುವ ಸದಾನಂದನ್ ಮಾಷ್ಟರ್ ಸ್ವತಃ ತಮ್ಮ ಕಥೆ ಹೇಳಲಿದ್ದಾರೆ. ಮರೆಯದೆ ಬನ್ನಿ.

ಇದೇನೇ ಇರಲಿ, ಇವತ್ತು ಯಾವುದಾದರೂ ಪೋಸ್ಟ್ ಅಥವಾ ಟಿಕೆಟ್ ಕೊಡುವುದಿದ್ದರೆ ಮಾತ್ರ ಪಕ್ಷಕ್ಕೆ ಸೇರುತ್ತೇವೆ ಎನ್ನುವವರನ್ನೇ ರಾಜಕಾರಣದಲ್ಲಿ ಕಾಣುತ್ತಿದ್ದೇವೆ. ಟಿಕೆಟ್ ಕೊಡುವಾಗ ಎಷ್ಟು ಖರ್ಚು ಮಾಡುತ್ತೀಯಾ ಎಂದು ಕೇಳುವ ರಾಜಕಾರಣ ನಮ್ಮಲ್ಲಿದೆ. ಇದರ ಮಧ್ಯೆ ರಕ್ತಚೆಲ್ಲಿ ಪಕ್ಷ ಕಟ್ಟುತ್ತಿರುವ ಕೇರಳದ ನಮ್ಮ ಕಾರ್ಯಕರ್ತರಿದ್ದಾರೆ. ತಮ್ಮ ಜೀವವನ್ನೇ ಪಕ್ಷ, ಸಂಘಟನೆಗಾಗಿ ಕೊಡುವ ಅವರ ತ್ಯಾಗದ ಮುಂದೆ ನಾವೆಂಥಾ ಕುಬ್ಜರು ಅಲ್ಲವೆ?

 kerala-rss

Comments are closed.