Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಐಪಿಸಿ ಮುನ್ನೂರೆಪ್ಪತ್ತೇಳು, ಇದೇನು ಹೊಸ ಗೋಳು?

ಐಪಿಸಿ ಮುನ್ನೂರೆಪ್ಪತ್ತೇಳು, ಇದೇನು ಹೊಸ ಗೋಳು?

ಐಪಿಸಿ ಮುನ್ನೂರೆಪ್ಪತ್ತೇಳು, ಇದೇನು ಹೊಸ ಗೋಳು?

ಲಿಂಗ ಕಾಮವೆಂಬುದು ನಮ್ಮ ಸಮಾಜಕ್ಕೆ ಖಂಡಿತ ಒಗ್ಗುವಂಥದ್ದಲ್ಲ. ಯಾರೋ ಸಲಿಂಗ ಕಾಮದಲ್ಲಿ ತೊಡಗಿ ದ್ದಾರೆಂದರೆ ಯಾರೂ ಅವರನ್ನು ಕೊಲೆಗೈಯ್ಯುವುದಿಲ್ಲ,ಹಿಡಿದು ಬಡಿಯುವುದೂ ಇಲ್ಲ. ಹೆಚ್ಚೆಂದರೆ ಚೀ… ಥೂ… ಗಲೀಜು… ಅಂದುಕೊಂಡು ಮೂಗು ಮುರಿಯಬಹುದು. ಹಾಗಿರುವಾಗ ಸಲಿಂಗ ಕಾಮಕ್ಕೆ ಕಾನೂನಿನ ಮಾನ್ಯತೆ ಕೊಡುವುದೇ ಘನ ಕಾರ್ಯ ಎಂದೇಕೆ ಭಾವಿಸಬೆಕು?

ಇದೂ ಕೂಡ ಒಂದು Fad . Latest Fad ಅಥವಾ ‘ಹೊಸ ತೆವಲು’ ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism  ಒಂದು Fad  ಆಗಿತ್ತು. ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು), ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಕ್ಲಾಸ್‌ರೂಮ್ಗಳಲ್ಲಿ, ಕಾರಿಡಾರ್‌ನಲ್ಲಿ ನಿಂತು ಎಡಪಂಥೀಯ ವಾದದ ಬಗ್ಗೆ ಮಾತನಾಡುವುದು, ದೇಶ-ವ್ಯವಸ್ಥೆಯನ್ನು ಟೀಕೆ ಮಾಡುವುದೇ ಒಂದು ತೆವಲು ಹಾಗೂ ಹೆಮ್ಮೆಯ ವಿಚಾರವಾಗಿತ್ತು. ಆನಂತರ ‘”Animal Rights’ ’  ಎಂಬ ಹೊಸ ಫ್ಯಾ ಡ್ ಬಂತು. ಪ್ರಸ್ತುತ ಕೇಂದ್ರ ಸಚಿವರೂ ಆಗಿರುವ ಮೇನಕಾ ಗಾಂಧಿ  ಮುಂತಾದವರು ‘ಆನಿಮಲ್ ರೈಟ್ಸ್’ ಎಂದಂದುಕೊಂಡು ಕಂಡಕಂಡವರನ್ನೆಲ್ಲ ಕಚ್ಚುವ ಬೀದಿನಾಯಿಗಳ ಪರವಾಗಿ, ಅವುಗಳನ್ನು ಕೊಲ್ಲುವ ಕಾರ್ಪೊರೇಶನ್‌ಗಳ ವಿರುದ್ಧವಾಗಿ ಟೊಂಕಕಟ್ಟಿ ನಿಂತರು. ಅದರ ಬೆನ್ನ ಹಾಗೂ ಅದಕ್ಕೇ ಸಂಬಂಧಿ ಸಿದ ‘ವೆಜಿಟೇರಿಯನಿಸಂ’ ಆರಂಭವಾಯಿತು.

ಪ್ರಾಣಿಹತ್ಯೆ ವಿರುದ್ಧ, ಲೆದರ್ ಬಳಸುವುದರ ವಿರುದ್ಧ ಕೂಗಾಟ ಆರಂಭವಾಯಿತು. ಆನಂತರ Child Rights’ ,  “Tribal Rights’, “Tiger Conservation’, “Forest Preser- vation’  ಮುಂತಾದುವುಗಳು ಆರಂಭವಾದವು. ಎಲ್ಲವೂ ಮುಗಿದ ಮೇಲೆ `Trekking ನಂಥ ವಿಷಯವನ್ನೂ ಬಿಡಲಿಲ್ಲ. ಇಂತಹ ವಿಷಯಗಳನ್ನು ಕೈಗೆತ್ತಿಕೊಳ್ಳುವವರಾದರೂ ಯಾರು? ಖರ್ಚಿಗೆ ಹಣವಿರುವ, ಮಾಡಲು ಕೆಲಸವಿಲ್ಲದ, ಮಾತನಾಡಲು ಇಂಗ್ಲಿಷ್ ಬರುವ ಪ್ರಚಾರಪ್ರಿಯ ಆತ್ಮಗಳೇ. ಈಗ ತಲೆಯೆತ್ತಿರುವ  Gay Rights ಅಥವಾ  LGBT ಅಥವಾ ಭಾರತೀಯ ದಂಡ ಸಂಹಿತೆ 377ನ್ನು ಬರ್ಖಾಸ್ತು ಮಾಡಿ ಎಂಬುದೂ ಕೂಡಾ ಕೆಲಸವಿಲ್ಲದವರು ಆರಂಭಿಸಿರುವ ಒಂದು ಲೇಟೆಸ್ಟ್ ಫ್ಯಾಡೇ ಹೊರತು ಬೇರೇನೂ ಅಲ್ಲ. 1960ರ ದಶಕದಲ್ಲಿ ಯಾವ ವಿಷಯಕ್ಕಾಗಿ ಬ್ರಿಟನ್‌ನಲ್ಲಿ ದೊಡ್ಡ ಚರ್ಚೆಯಾಗಿತ್ತೋ ಅದೇ ವಿಷಯ 50 ವರ್ಷಗಳ ನಂತರ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿದೆ ಅಷ್ಟೇ. ಅದರಿಂದ ಮಾಧ್ಯಮಗಳಿಗೆ ಒಂದು ವಾರ, ತಿಂಗಳಿಗಾಗುವಷ್ಟು  Fodder’’ ಸಿಕ್ಕಿದ್ದು ಬಿಟ್ಟರೆ ಸಮಾಜಕ್ಕಾಗಲಿ, ಸಾಮಾನ್ಯ ಜನರಿಗಾಗಲಿ ಯಾವ ಲಾಭವಾಗಲಿದೆ?ಅಷ್ಟಕ್ಕೂ ಸಲಿಂಗ ಕಾಮದ ಬಗ್ಗೆ 2009ರಲ್ಲಿ ದಿಲ್ಲಿ ಹೈಕೋರ್ಟ್ ಹೇಳಿದ್ದೇನು? ಹಾಗೂ 2016, ಫೆಬ್ರವರಿ 2 ರಂದು ಸುಪ್ರೀಂಕೋರ್ಟ್ 5 ನ್ಯಾಯಮೂರ್ತಿಗಳ ಪೀಠಕ್ಕೆ ಈ ವಿಚಾರವನ್ನು ವರ್ಗಾಯಿಸಿದ್ದೇಕೆ?ಈ Homosexuality  ಎಂಬ ಪದ ಬಂದಿದ್ದು ಗ್ರೀಕ್ ಹಾಗೂ ಲ್ಯಾಟಿನ್ ಮೂಲದಿಂದ. Homos  ಎಂದರೆ ‘Same ’ ಎಂದರ್ಥ. Homosexuality  ಎಂದರೆ ಸಲಿಂಗಿಗಳ ನಡುವಿನ ರತಿಕ್ರೀಡೆ. ಸಾಮಾನ್ಯವಾಗಿ ಗಂಡಸರಿಬ್ಬರ ನಡುವಿನ ಕಾಮಕೇಳಿಯನ್ನು “Gay’ ಎಂದು ಕರೆದರೆ, ಸೀಯರ ನಡುವಿನ ಸಲಿಂಗ ಕಾಮವನ್ನು Lesbianism ಎನ್ನುತ್ತಾರೆ.

ಪುರುಷ ಹಾಗೂ ಸ್ತ್ರೀ ಇಬ್ಬರ ಜತೆಯೂ ಸರಸವಾಡುವವರನ್ನು Bisexual   ಎಂದು ಕರೆಯಲಾಗುತ್ತದೆ. ಆದರೆ ಜಗತ್ತಿನ ಯಾವ ಸಮಾಜಗಳೂ ಸಲಿಂಗ ಕಾಮವನ್ನು ಒಪ್ಪಿಕೊಂಡಿರಲಿಲ್ಲ. ಅಮೆರಿಕದ ಕ್ಯಾಲಿ  ಫೋರ್ನಿಯಾದಂತಹ ರಾಜ್ಯ ಸಲಿಂಗ ಕಾಮಿಗಳಿಬ್ಬರು ವಿವಾಹವಾಗುವುದಕ್ಕೆ ಕಾನೂನಿನ ಮಾನ್ಯತೆ ನೀಡಿದ್ದರೂ, ಕೆಲವು ದೇಶಗಳು ಸಲಿಂಗ ಕಾಮಕ್ಕೆ ಅವಕಾಶ ನೀಡಿದ್ದರೂ, ಇಂದಿಗೂ ಯಾವ ಸಮಾಜವೂ ಸಲಿಂಗ ಕಾಮವನ್ನು ಮುಕ್ತಮನಸ್ಸಿನಿಂದ ಮಾನ್ಯ ಮಾಡಿಲ್ಲ. 1967ರಲ್ಲಿ ಕಾನೂನು ತರುವ ಮೂಲಕ ಸಲಿಂಗ ರತಿಗೆ ಮಾನ್ಯತೆ ನೀಡಿದರೂ ಅದುವರೆಗೆ ಬ್ರಿಟನ್‌ನಲ್ಲೂ ಸಲಿಂಗ ಕಾಮ ಕಾನೂನಿನ ದೃಷ್ಟಿಯಿಂದ ಅಪರಾಧವಾಗಿತ್ತು. ಅದೊಂದು ಅಸ್ವಾಭಾವಿಕ, ಅಶುದ್ಧ ಕ್ರಿಯೆ ಎಂದು ಇಂದಿಗೂ ವ್ಯಾಟಿಕನ್ ಪ್ರತಿಪಾದಿಸುತ್ತದೆ ಹಾಗೂ ಖಡಾಖಂಡಿತವಾಗಿ ವಿರೋಧಿ ಸುತ್ತದೆ. ಖಜುರಾಹೋದಲ್ಲಿ ಹಾಗಿದೆ, ನಮ್ಮ ಪುರಾಣಗಳಲ್ಲಿ ಹೀಗೆ ಹೇಳಲಾಗಿದೆ ಎಂದು ಯಾರೆಷ್ಟೇ ಬೊಬ್ಬೆಹಾಕಿದರೂ, ಸಮಜಾಯಿಷಿ ಕೊಟ್ಟರೂ ಹಿಂದೂ ನೀತಿ-ನಿಯಮಾವಳಿಗಳ ಮನುಸ್ಮೃತಿ, ಸಲಿಂಗ ರತಿಯನ್ನು ಲೈಂಗಿಕ ಕ್ರಿಯೆಗಳಲ್ಲಿ ಒಂದು ವಿಧ ಎಂದು ಪಟ್ಟಿಮಾಡಿದ್ದರೂ ಅದಕ್ಕೆ ಶಿಕ್ಷೆಯನ್ನು ನಿಗದಿ ಮಾಡಿದೆ.

ಸಲಿಂಗ ಕಾಮಿಗಳಿಗೆ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಸಹಜ ಸ್ಥಿತಿಗೆ ತರಬೇಕು ಎಂದು ಕ್ಯಾಥೋಲಿಕ್ ಚರ್ಚ್‌ಗಳು ಹೇಳಿದರೆ, ಇಸ್ಲಾಂನ ಷರಿಯತ್ ಕಾನೂನಿನಲ್ಲಂತೂ ಸಲಿಂಗ ಕಾಮವೊಂದು ಅಪರಾಧ ಹಾಗೂ ಅದು ನಿರ್ಬಂಧಿತ. ಯಾವುದೇ ಧರ್ಮಗಳನ್ನು ತೆಗೆದುಕೊಳ್ಳಿ, ಆ ಧರ್ಮಗಳು ಎಷ್ಟೇ ಉದಾರವಾಗಿರಲಿ. ಆದರೆ ಗಂಡಸು ಗಂಡಸಿನ, ಹೆಣ್ಣು-ಹೆಣ್ಣಿನ ನಡುವಿನ ಲೈಂಗಿಕತೆಯನ್ನು ಒಪ್ಪಿಕೊಂಡಿಲ್ಲ.ಜತೆಗೆ ಅದನ್ನು ಪಾಪ, ಅಪರಾಧವೆಂಬಂತೇ ಕಾಣುತ್ತಾ ಬಂದಿವೆ.ಭಾರತೀಯ ದಂಡ ಸಂಹಿತೆ (IPC) ಯ 377ನೇ ಸೆಕ್ಷನ್ ಕೂಡ ಇಂತಹ ಅಂಶಗಳನ್ನೇ ಒಳಗೊಂಡಿದೆ.ಅದು ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕತೆ ಅಪರಾಧವೆನ್ನುತ್ತದೆ. ಅಂದರೆ ಪರಸ್ಪರ ಒಪ್ಪಿಗೆ ಇದ್ದರೂ ಸಹಿತ ಅಸ್ವಾಭಾವಿಕವಾಗಿ ಒಬ್ಬ ಗಂಡಸು ಮತ್ತೊಬ್ಬ ಗಂಡಸಿನ ಜತೆ, ಹೆಣ್ಣು ಹೆಣ್ಣಿನ ಜತೆ ಅಥವಾ ಪ್ರಾಣಿಗಳ ಜತೆ, ಮಕ್ಕಳ ಜತೆ ಕಾಮಕೇಳಿ ಅಥವಾ ರತಿಕ್ರೀಡೆಯಲ್ಲಿ ತೊಡಗುವುದು 377ನೇ ಸೆಕ್ಷನ್ ಪ್ರಕಾರ ಅಪರಾಧ. ಈ ಅಪರಾಧವೆಸಗಿರುವುದು ಸಾಬೀತಾದರೆ 10 ವರ್ಷಗಳವರೆಗೂ ಜೈಲು ಶಿಕ್ಷೆ ನೀಡಬಹುದು.

2001ರಲ್ಲಿ ಈ ಕಾಯಿದೆಯ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಯನ್ನು ಹಾಕಿದ ‘ನಾಝ್’ ಎಂಬ ಸ್ವಯಂ ಸೇವಾ ಸಂಸ್ಥೆ, ಇಬ್ಬರು ಸಲಿಂಗಿಗಳು ಪರಸ್ಪರ ಒಪ್ಪಿಗೆಯಿಂದ ಕಾಮದಲ್ಲಿ ತೊಡಗಿದರೂ ಶಿಕ್ಷಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಸಂವಿಧಾನದ 14, 15, 19(1)(ಎ-ಡಿ) ಹಾಗೂ 21ನೇ ವಿಧಿ ಗಳು ನೀಡಿರುವ ಹಕ್ಕಿನ ಮೇಲೆ ಪ್ರಹಾರ ಮಾಡುತ್ತಿದೆ ಎಂದು ದೂರಿತು. ಪೊಲೀಸರು ಕಾನೂನನ್ನು ಮುಂದಿಟ್ಟುಕೊಂಡು ಸಲಿಂಗ ಕಾಮಿಗಳನ್ನು ಬೆದರಿಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿಕೊಂಡಿತು. ಆದರೆ ಸಲಿಂಗ ಕಾಮವನ್ನು ಅಪರಾಧವೆಂದು ಕಾಣುವ ಕಾನೂನಿಗೆ ಕಡಿವಾಣ ಹಾಕಲೊಪ್ಪದ ದಿಲ್ಲಿ ಹೈಕೋರ್ಟ್ 2004ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೇ ವಜಾ ಮಾಡಿತು. ಆದರೇನಂತೆ ತನ್ನ ತೀರ್ಪನ್ನು ಮರು ಪರಾಮರ್ಶೆ ಮಾಡಬೇಕು ಎಂದು 2004, ಸೆಪ್ಟೆಂಬರ್ 3ರಂದು ಮತ್ತೆ ಮನವಿ ಮಾಡಿಕೊಳ್ಳಲಾಯಿತು. ಇಷ್ಟಾಗಿಯೂ ದಿಲ್ಲಿ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿತು. ಕೊನೆಗೆ ಸಲಿಂಗ ಕಾಮಿಗಳ ಪರವಾಗಿ ಹೋರಾಡುತ್ತಿರುವವರು 2004, ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ತುಳಿದರು. 2006, ಏಪ್ರಿಲ್ 3ರಂದು ದಿಲ್ಲಿ ಹೈಕೋರ್ಟ್‌ಗೆ ಪ್ರಕರಣವನ್ನು ಹಿಂದಿರುಗಿಸಿದ ಸುಪ್ರೀಂಕೋರ್ಟ್, ಆದ್ಯತೆ ಮೇಲೆ ಮರು ಪರಾಮರ್ಶೆ ನಡೆಸುವಂತೆ ಸೂಚನೆ ನೀಡಿತು. ಇತ್ತ ಮಾಜಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್, 2008, ಆಗಸ್ಟ್ 9ರಂದು ‘ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ಗೆ ತಿದ್ದುಪಡಿ ತಂದು ಸಲಿಂಗ ಕಾಮವನ್ನು ಕ್ರಿಮಿನಲ್ ಅಪರಾಧವೆಂಬಂತೆ ಕಾಣುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿಕೆ ನೀಡುವ ಮೂಲಕ ಸಲಿಂಗ ಕಾಮಿಗಳ ಪರ ಹೋರಾಡುತ್ತಿರುವವರ ವಿಶ್ವಾಸವನ್ನು ಹೆಚ್ಚಿಸಿದರು. ಈ ಕುರಿತು ವಿವರಣೆ ನೀಡುವಂತೆ ದಿಲ್ಲಿ ಹೈಕೋರ್ಟ್ ನೀಡಿದ್ದಆದೇಶಕ್ಕೆ ಸೂಕ್ತ ಹಾಗೂ ವೈಜ್ಞಾನಿಕ ಕಾರಣಗಳನ್ನು ನೀಡುವ ಬದಲು ಕೇಂದ್ರದ ಯುಪಿಎ ಸರಕಾರ, ‘ಅದೊಂದು ಅನೈತಿಕ ಕಾರ್ಯ ಹಾಗೂ ಮಾನಸಿಕ ದೌರ್ಬಲ್ಯದ ಪ್ರತೀಕ. ಅದರಿಂದ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತದೆ’ ಎಂಬ ಕಳಪೆ ಸಮಜಾಯಿಷಿ ನೀಡಿತು.ಇದರ ಪರಿಣಾಮವನ್ನು 2009ರಲ್ಲಿ ದಿಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಕಾಣಬಹುದು.‘ಹದಿನೆಂಟು ವರ್ಷ ತುಂಬಿರುವ ಇಬ್ಬರು ವಯಸ್ಕರು ಪರಸ್ಪರ ಇಚ್ಛಿಸಿ ಖಾಸಗಿಯಾಗಿ ಕಾಮಿಸುವುದನ್ನೂ ಕ್ರಿಮಿನಲ್ ಅಪರಾಧವೆಂದು ಕಾಣುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಸಂವಿಧಾನದ 14, 21 ಹಾಗೂ 15ನೇ ವಿಧಿ ಗಳ ಉಲ್ಲಂಘನೆಯಾಗಿದೆ’ ಎಂದು ನ್ಯಾಯಮೂರ್ತಿ ಎ.ಪಿ. ಶಾ ಹಾಗೂ ಎಸ್. ಮುರಳೀಧರ್ ತೀರ್ಪು ನೀಡಿದರು. ಅಲ್ಲಿಗೆ 18 ವರ್ಷದ ದಾಟಿದ ಸಲಿಂಗ ಕಾಮಿಗಳಿಬ್ಬರು ‘ಕೂಡು’ವುದಕ್ಕೆ ನ್ಯಾಯಾಲಯದ ಮಾನ್ಯತೆ, ಆ ಮೂಲಕ ಕಾನೂನಿನ ರಕ್ಷಣೆ ಸಿಕ್ಕಂತಾಯಿತು. ಆದರೆ ಸಮಸ್ಯೆ ಅದಲ್ಲ.ಯಾರೋ 18 ವರ್ಷ ಕಳೆದ ಗಂಡಸರು ಅಥವಾ ಹೆಂಗಸರಿಬ್ಬರು ತಮಗೆ ಬೇಕಾದುದನ್ನು ಮಾಡಿಕೊಳ್ಳಲು, ತಮಗಿಷ್ಟ ಬಂದಂತೆ ಬದುಕಲು ಅವಕಾಶ ಮಾಡಿಕೊಡುವುದಕ್ಕಷ್ಟೇ ಸೀಮಿತವಾದ ವಿಚಾರ ಖಂಡಿತ ಇದಾಗಿಲ್ಲ. ಹಾಗೇನಾದರೂ ಆಗಿದ್ದರೆ ಸುಮ್ಮನಾಗಬಹುದಿತ್ತು.

ಸಲಿಂಗ ಕಾಮಕ್ಕೆ ವೈಜ್ಞಾನಿಕ, ದೈಹಿಕ ಕಾರಣಗಳಷ್ಟನ್ನೇ ನೀಡಿದರೂ ಸಮಾಜದಲ್ಲಿ ಅದರದ್ದೇ ನೀತಿ-ನಿಯಮಗಳು, Value System ಇರುತ್ತದೆ, ಕೆಲವೊಂದು ಸ್ಥಾಪಿತ ಹಾಗೂ ರೂಢಿಗತ ಮೌಲ್ಯಗಳಿರುತ್ತವೆ. ಅವುಗಳನ್ನು ನಾವು ಅಷ್ಟು ಸುಲಭಕ್ಕೆ ಧಿಕ್ಕರಿಸಲು ಸಾಧ್ಯವಿಲ್ಲ. ಒಂದು ವೇಳೆ, ಲೆಕ್ಕಿಸದೇ ಹೋದರೆ ಸಮಾಜವೇ ಅಲುಗಾಡುವ ಸಾಧ್ಯತೆ ಇರುತ್ತದೆ. ಸಲಿಂಗ ಕಾಮವನ್ನು ಇದೇ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಅಷ್ಟಕ್ಕೂ ಸ್ವಚ್ಛಂದ ಕಾಮವನ್ನೇ ಒಪ್ಪಲು ಹಿಂದೆ-ಮುಂದೆ ನೋಡುವ ಸಮಾಜ ಸಲಿಂಗಕಾಮವನ್ನು ಹೇಗೆತಾನೇ ಒಪ್ಪಿಕೊಂಡೀತು?
ಸಲಿಂಗ ಕಾಮವೆಂಬುದು ಯಾವುದೋ ಒಂದು ತೀರ್ಪಿನಿಂದ ಬಗೆಹರಿಸುವ ಸಮಸ್ಯೆಯಲ್ಲ. ಆದರೆ ದಿಲ್ಲಿ ಹೈಕೋರ್ಟ್‌ನಿಂದ ಹೊರಬಿದ್ದಂತಹ ತೀರ್ಪೊಂದು ಹಲವಾರು ಸಮಸ್ಯೆಗಳನ್ನೇ ಸೃಷ್ಟಿಸಿ ಬಿಡಬಲ್ಲದು. ಉಮೇಶ್ ರೆಡ್ಡಿಗೆ ಮಹಿಳೆಯರ ಒಳ ಉಡುಪನ್ನು ಕದಿಯುವುದರಲ್ಲಿ, ಸಂಗ್ರಹಿಸುವುದರಲ್ಲಿ ಮಜಾ ಸಿಗುತ್ತದೆ ಎಂಬ ಕಾರಣಕ್ಕೆ ಅದು Individual Freedom ಎಂದು ಸುಮ್ಮನಾಗಲು ಸಾಧ್ಯವೆ? ಸಹಜ ಹಾಗೂ ಸಲಿಂಗ ಕಾಮಗಳು ಬಲ ಮತ್ತು ಎಡಗೈಗಳಿದ್ದಂತೆ. ಕೆಲವರು ಬಲಗೈಲಿ ಊಟ ಮಾಡುತ್ತಾರೆ, ಕೆಲವರು ಎಡಗೈಲಿ ಆ ಕೆಲಸ ಮಾಡುತ್ತಾರೆ ಎಂದು ಸಮಜಾಯಿಷಿ ಕೊಡುವಷ್ಟು ಸರಳ ವಿಚಾರವೇ? ಭಾರತದಲ್ಲಿ ಸುಮಾರು 30 ಲಕ್ಷಕ್ಕೂ ಮೀರಿ ಸಲಿಂಗ ಕಾಮಿಗಳಿ ದ್ದಾರೆ.

ಅಂದರೆ ಶೇ. 0.3 ಜನರಿಗೋಸ್ಕರ ಕಾನೂನಿಗೇ ತಿದ್ದುಪಡಿ ತಂದು ಉಳಿದ 99.7 ಪರ್ಸೆಂಟ್ ಜನರಿಗೆ ಕಿರಿಕಿರಿಯುಂಟು ಮಾಡುವ ಅಗತ್ಯವೇನಿದೆ? ಎಚ್ಐವಿ ಸೋಂಕು ಹರಡುತ್ತಿರುವುದು ಹೆಚ್ಚಾಗಿ ಸಲಿಂಗ ಕಾಮದ ಮೂಲಕ ಎಂಬ ವಾಸ್ತವ ಕಣ್ಣಮುಂದೆ ಇದ್ದರೂ ಅದಕ್ಕೆ ಕಾನೂನಿನ ಮಾನ್ಯತೆ ಕೊಡಿಸುವ ತೆವಲೇಕೆ? ಅಷ್ಟಕ್ಕೂ ಸಲಿಂಗ ಕಾಮವೆಂಬುದು ಭಾರತದಂತಹ ಒಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಬಲ್ಲದಲ್ಲವೆ?

ಮದುವೆಯಾಗಿ 4 ವರ್ಷ ಆಯ್ತು. ಇನ್ನೂ ಮಕ್ಕಳಾಗಿಲ್ಲವಾ? ಏನಾದರೂ ಸಮಸ್ಯೆಯಿದೆಯೇ? ಎಂದು ಕೇಳುವ ಸಮಾಜ ನಮ್ಮದು.ಇಲ್ಲಿ ಸೆಕ್ಸ್ ಎಂಬುದು ಮಕ್ಕಳನ್ನು ತಯಾರಿಸುವ ಪ್ರಕ್ರಿಯೆ ಇಲ್ಲವೇ, ದೈಹಿಕ ತೃಷೆ ತೀರಿಸಿಕೊಳ್ಳುವ ಒಂದು ವಿಧಾನವೆಂಬಂತಿದೆ. ಪಾಶ್ಚ್ಯಾತ್ಯ ರಾಷ್ಟ್ರಗಳಂತೆ ಸೆಕ್ಸ್‌ನಲ್ಲಿ Fulfi llment ಕಂಡುಕೊಳ್ಳಲು ಪ್ರಯತ್ನಿಸುವವರ ಸಂಖ್ಯೆ ನಮ್ಮಲ್ಲಿ ತೀರಾ ಕಡಿಮೆ. ಇಂತಹ ಸಮಾಜ ಸಲಿಂಗ ಕಾಮವನ್ನು ಒಪ್ಪಿಕೊಳ್ಳಲು ಸಾಧ್ಯವಿದೆಯೇ? ಮಿಗಿಲಾಗಿ, ಪ್ರತಿಯೊಂದು ಸಮಾಜಕ್ಕೂ ಅದರದ್ದೇ “Value System’ ಎಂಬುದು ಇರುತ್ತದೆ. ಈಗಾಗಲೇ ಉನ್ನತ ವರ್ಗದಲ್ಲಿ ಚಾಲ್ತಿಯಲ್ಲಿರುವ Wife swapping ಅನ್ನೂ, ‘ನನ್ನ ಹೆಂಡತಿಯನ್ನು ನಾನು ಯಾರ ಜತೆ ಬೇಕಾದರೂ ಹಂಚಿಕೊಳ್ಳುತ್ತೇನೆ’ ಎಂದು ಮುಂದೊಂದು ದಿನ ವಾದಿಸಿದರೆ ಅದನ್ನೂ ವೈಯಕ್ತಿಕ ಸ್ವಾತಂತ್ರ್ಯವೆಂದು ಸಮಾಜ ಒಪ್ಪಿಕೊಳ್ಳಲು ಸಾಧ್ಯವೆ? ಸಲಿಂಗ ಕಾಮವೆಂಬುದು ನಮ್ಮ ಸಮಾಜಕ್ಕೆ ಖಂಡಿತ ಒಗ್ಗುವಂಥದ್ದಲ್ಲ. ಯಾರೋ ಸಲಿಂಗ ಕಾಮದಲ್ಲಿ ತೊಡಗಿ ದ್ದಾರೆಂದರೆ ಯಾರೂ ಅವರನ್ನು ಕೊಲೆಗೈಯ್ಯುವುದಿಲ್ಲ, ಹಿಡಿದು ಬಡಿಯುವುದೂ ಇಲ್ಲ. ಹೆಚ್ಚೆಂದರೆ ಚೀ… ಥೂ… ಗಲೀಜು… ಅಂದುಕೊಂಡು ಮೂಗು ಮುರಿಯಬಹುದು. ಹಾಗಿರುವಾಗ ಸಲಿಂಗ ಕಾಮಕ್ಕೆ ಕಾನೂನಿನ ಮಾನ್ಯತೆ ಕೊಡುವುದೇ ಘನ ಕಾರ್ಯ ಎಂದೇಕೆ ಭಾವಿಸಬೇಕು? ಎಂಥೆಂಥಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಈ ಕಾಲದಲ್ಲಿ ಸಲಿಂಗ ಕಾಮವೆಂಬ ವ್ಯಾಧಿ ಗೂ ಸಲಹೆ, ಮಾರ್ಗದರ್ಶನ ಅಥವಾ ಇನ್ನಿತರ ಪರಿಹಾರಗಳನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಬಾರದು?

ಈ ಐಪಿಸಿ-377 ಬಂದಿದ್ದು 1860ರಲ್ಲಿ. ಅಂದರೆ 156 ವರ್ಷಗಳ ಇತಿಹಾಸದಲ್ಲಿ 377ರ ಅಡಿ ವಿಚಾರಣೆಗೆ ಬಂದ ಪ್ರಕರಣಗಳ ಸಂಖ್ಯೆ ಕೇವಲ 200. ಹಾಗಾಗಿಯೇ 2014ರಲ್ಲಿ 2009ರ ದಿಲ್ಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಸಲಿಂಗಿಗಳ ಪರವಾದಿಗಳು ಕೂಡಲೇ ತೀರ್ಪನ್ನು ಮರು ಪರಾಮರ್ಶೆ ಮಾಡಬೇಕೆಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹಾಕಿದರು. ಈ ಬಗ್ಗೆ ಚರ್ಚೆಯನ್ನೇ ಮಾಡದೆ, ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು 2014, ಜನವರಿ 28ರಂದು ಮೇಲ್ಮನವಿಯನ್ನು ತಿರಸ್ಕಾರ ಮಾಡಿತು. ಆದರೂ ಈ ಓರಾಟಗಾರರು ಸುಮ್ಮನಾಗಲಿಲ್ಲ. ತೀರ್ಪಿನಲ್ಲಿ ಲೋಪವಿದೆ, ಅದನ್ನು ಸರಿಪಡಿಸಬೇಕೆಂದು ಕ್ಯುರೇಟಿವ್ ಪಿಟೀಶನ್ ಹಾಕಿದರು. ಮೊನ್ನೆ -ಬ್ರವರಿ 2ರಂದು ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧಿ ಶರಾದ ಟಿ.ಎಸ್. ಠಾಕೂರ್ ನೇತೃತ್ವದ ತ್ರಿಸದಸ್ಯ ಪೀಠ ಯಾವುದೇ ಅಭಿಪ್ರಾಯ ಕೊಡದೆ ಪಂಚ ನ್ಯಾಯಾಧಿ ಶರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.ಆದರೆ ಈ ಸಲಿಂಗಕಾಮದ ಪ್ರತಿಪಾದಕರಿಗೆ ಹೋರಾಡಲು ಬೇರಾವ ವಿಚಾರ, ಸಮಸ್ಯೆಗಳೇ ಇಲ್ಲವೆ?ಸಲಿಂಗ ಕಾಮವನ್ನು ಅಪರಾಧವೆಂಬಂತೆ ಕಾಣುವ, 10 ವರ್ಷದ ತನಕ ಜೈಲುವಾಸ ವಿಧಿ ಸುವ ಐಪಿಸಿ-377ನ್ನು ತೆಗೆದುಹಾಕಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾದರೆ ತೊಂದರೆಯಿಲ್ಲ.

ಆದರೆ ಇವರ ಮಾತಿಗೆ ತಲೆಯಾಡಿಸಿ ಸಲಿಂಗ ಕಾಮಕ್ಕೆ ಅವಕಾಶ ಮಾಡಿಕೊಟ್ಟರೆ ಅದರಿಂದ ಎದುರಾಗಲಿರುವ ಇತರ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿ. ಈಗಾಗಲೇ ಫ್ಯಾಶನ್ ಜಗತ್ತಿನಲ್ಲಿ  ಗಂಡಸರು ಗಂಡರಿಂದಲೇ ‘ಸೆಕ್ಷುವಲ್ ಫೇವರ್ಸ್ ’ ಪಡೆದುಕೊಳ್ಳುವ ಕಾಸ್ಟಿಂಗ್ ಕೌಚ್ ಚಾಲ್ತಿಯಲ್ಲಿದೆ. ಅದು ‘”Gay prostitution’  ಆಗಿ ಪರಿವರ್ತನೆಯಾದರೆ ಗತಿಯೇನು?

ಸಲಿಂಗ ಕಾಮಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ‘ಮ್ಯಾರೇಜ್’ ಎಂಬ ‘ಇನ್‌ಸ್ಟಿಟ್ಯೂಶನ್’ ಅನ್ನೇ ಬದಲಾಯಿಸಬೇಕಾಗಿ ಬರಬಹುದಲ್ಲವೆ? ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲ ಧರ್ಮಗುರುಗಳೂ ಒಕ್ಕೊರಲಿನಿಂದ ಏಕೆ ಸಲಿಂಗ ಕಾಮವನ್ನು ವಿರೋಧಿ ಸುತ್ತಿ ದ್ದಾರೆ? ಅವರ ಮಾತಿನಲ್ಲಿ ಅರ್ಥವಿಲ್ಲದೇ ಇದೆಯೇ? ಅವರು ವಿರೋಧದ ಹಿಂದೆ ಇರುವುದೂ ಸಾಮಾಜಿಕ ಕಳಕಳಿಯೇ ಅಲ್ಲವೆ? ಪಾಶ್ಚಾತ್ಯ ರಾಷ್ಟ್ರಗಳಲ್ಲಿ LGBT rights  (Lesbian, Gay, Bisexual and Transgender) ಎಂಬ ಹೋರಾಟ ನಡೆಯುತ್ತಿರುವುದು ನಿಜವಾದರೂ ಅಂತಹ ಹೋರಾಟವನ್ನು ಭಾರತದಲ್ಲೂ ಆರಂಭಿಸಬೇಕೆ “Western Virtueಗಳನ್ನು ನಮ್ಮ ಸಮಾಜಕ್ಕೆ ಅನ್ವಯಿಸಲು, ಜಾರಿಗೆ ತರಲು ಹೊರಡುವುದು ಎಷ್ಟು ಸರಿ? ಪ್ರಜಾಪ್ರಭುತ್ವ ಹಾಗೂ ಅದು ಕೊಟ್ಟಿರುವ ಮೂಲಭೂತ ಹಕ್ಕುಗಳೆಂಬ Big  Umbrella   ಕೆಳಗೆ ಎಲ್ಲವನ್ನೂ ಒಪ್ಪಿಕೊಳ್ಳುವುದು, ಸ್ವೀಕರಿಸುವುದು ಸುಲಭವೇ ಹಾಗೂ ಸಾಧುವೆ?
ತಮ್ಮ ಮಗನೋ ಮಗಳೋ ಸಲಿಂಗ ರತಿಯಲ್ಲಿ ತೊಡಗಿದರೆ ಪೋಷಕರಿಗೆ ಆಗುವ ನೋವು, ಸಾಮಾಜಿಕ ಅವಮಾನ ಗಣನೆಗೆ ತೆಗೆದುಕೊಳ್ಳಬೇಕಾದ ವಿಚಾರವಲ್ಲವೆ? ಸಲಿಂಗ ಕಾಮವೆಂಬುದು ಬರೀ ಲಾಜಿಕ್ಕಿನ ಪರಿಧಿ ಯೊಳಗೆ ನೋಡಬೇಕಾದ ವಿಚಾರವೋ ಅಥವಾ ಸಾಮಾಜಿಕ ಮೌಲ್ಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕೋ?

salingakama

Comments are closed.