Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?

ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?

Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದ, ಮತಾಂತರ ಮಾಡಲು ಯತ್ನಿಸಿದ ಒಂದು ನಿದರ್ಶನ ತೋರಿಸಿ?

ಹಾಗಿರುವಾಗ ಈ “ಹಿಂದೂ ಟೆರರ್”, “ಹಿಂದೂ ಟೆರರಿಸಂ” ಹಾಗೂ “ಸ್ಯಾಫ್ರನ್ ಟೆರರಿಸಂ” ಎಂಬ ಪದಪ್ರಯೋಗಗಳು ಎಲ್ಲಿಂದ ಹುಟ್ಟಿಕೊಂಡವು?

1. 2006, ಸೆಪ್ಟೆಂಬರ್ 8ರಂದು ಮಾಲೆಗಾಂವ್‌ನಲ್ಲಿ (ಮೊದಲ) ಸ್ಫೋಟ: 37 ಜನರ ಹತ್ಯೆ. ತನಿಖೆ: ಹಿಂದೂ ಭಯೋತ್ಪಾದಕರ ಮೇಲೆ ಶಂಕೆ. 2. 2007, ಫೆಬ್ರವರಿ 18ರಂದು ಸಮ್‌ಜೋತಾ ಎಕ್ಸ್‌ಪ್ರೆಸ್ ಸ್ಫೋಟ: 68 ಪಾಕಿಸ್ತಾನಿಯರ ದುರ್ಮರಣ. ತನಿಖೆ: ಆರೆಸ್ಸೆಸ್ ಪ್ರಚಾರಕರಾದ ಸಂದೀಪ್ ಡಾಂಗೆ ಹಾಗೂ ರಾಮ್‌ಜಿಗಾಗಿ ಪೊಲೀಸರ ತಲಾಷ್. 3. 2007, ಮೇ 18ರಂದು ಮೆಕ್ಕಾ ಮಸೀದಿ ಸ್ಫೋಟ: 14 ಸಾವು. ತನಿಖೆ: ಸಂದೀಪ್ ಡಾಂಗೆ ಹಾಗೂ ರಾಮಚಂದ್ರ ಕಲಸಂಗ್ರ ಅವರನ್ನು ಹುಡುಕಿ ಕೊಟ್ಟವರಿಗೆ 10 ಲಕ್ಷ ಇನಾಮು ನೀಡುವುದಾಗಿ ಸಿಬಿಐನಿಂದ ಘೋಷಣೆ. 4. 2008, ಸೆಪ್ಟೆಂಬರ್ 29. ಮಾಲೆಗಾಂವ್ ಬಾಂಬ್ (ಎರಡನೆ) ಸ್ಫೋಟ: 7 ಸಾವು. ತನಿಖೆ: ಸಾಧ್ವಿ ಪ್ರe ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಹಾಗೂ ಸ್ವಾಮಿ ಅಮೃತಾನಂದ ದೇವ್ ತೀರ್ಥ (ದಯಾನಂದ ಪಾಂಡೆ) ಬಂಧನ.

ಇವುಗಳ ಜತೆಗೆ ಇಬ್ಬರನ್ನು ಬಲಿತೆಗೆದುಕೊಂಡ ಗೋವಾ ಬ್ಲಾಸ್ಟ್, ಮೂವರನ್ನು ಆಹುತಿ ತೆಗೆದುಕೊಂಡ ಅಜ್ಮೀರ್ ಷರೀಫ್ ಸ್ಫೋಟ, ಥಾಣೆ ಸಿನೆಮಾ ಹಾಲ್ ಸ್ಫೋಟ ಪ್ರಕರಣಗಳನ್ನು ಪ್ರಮುಖ ವಾಗಿಟ್ಟುಕೊಂಡಿರುವ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ‘ಔಟ್‌ಲುಕ್’ ತನ್ನ ಜುಲೈ 19ರ ಸಂಚಿಕೆಯಲ್ಲಿ, “Hindu Terror: Conspiracy of Silence” ಎಂಬ ಹೆಡ್‌ಲೈನ್‌ನಡಿ 2006ರಿಂದೀಚೆಗೆ ನಡೆದ 7 ಬಾಂಬ್ ಸ್ಫೋಟಗಳ ಹಿಂದೆ ‘ಹಿಂದೂ ಕೈವಾಡವಿದೆ ಎಂದು ಬರೆದಿದೆ. ಇಷ್ಟಾಗಿಯೂ ಹಿಂದೂ ಭಯೋತ್ಪಾದನೆಯ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಭಾರತೀಯರು ತಯಾರಿಲ್ಲ ಎಂಬುದು ಅದರ ಕೊರಗು. “ನಮ್ಮ ನಡುವೆಯೇ ಇರುವ ಬಾಂಬರ್” ಎಂಬ ಶೀರ್ಷಿಕೆಯಡಿ, ತಮ್ಮ ನಡುವೆಯೇ ತಲೆಯೆತ್ತುತ್ತಿರುವ ಭಯೋತ್ಪಾದನೆ ಬಗ್ಗೆ ಬಹುಸಂಖ್ಯಾತ ಹಿಂದೂಗಳು ಕುರುಡು ದೃಷ್ಟಿ ತೋರಿಸುತ್ತಿದ್ದಾರೆ ಎಂದು ‘ಔಟ್‌ಲುಕ್’ ಕಣ್ಣೀರು ಸುರಿಸಿದೆ. ಅದರಲ್ಲೂ “ಬಿಜೆಪಿ ಸಂಸದರು ಹಾಗೂ ಭಯೋತ್ಪಾದಕರು ಒಂದೇ ‘ಮೂಲ’ದಿಂದ ಬಂದವರಾಗಿದ್ದಾರೆ. ಅದು ನಮಗೆ ತೀರಾ ಆತಂಕ ಹುಟ್ಟಿಸುವಂತಾಗಿದೆ” ಎಂಬುದು ಜ್ಯೋತಿರ್ಮಯಿ ಶರ್ಮಾ ಎಂಬ ಲೇಖಕನೊಬ್ಬನ ಅಂಬೋಣ. ಈ ಮಧ್ಯೆ, ಔಟ್‌ಲುಕ್‌ನ ಮುಖಪುಟ ಲೇಖನವನ್ನೇ ಆಧಾರವಾಗಿಟ್ಟುಕೊಂಡು, “ದೇಶದ ಕೆಲವು ಭಾಗಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಹಿಂದೆ ವಿಎಚ್‌ಪಿ-ಆರೆಸ್ಸೆಸ್‌ಗಳ ಕೈವಾಡವಿದೆ. ದುರದೃಷ್ಟವಶಾತ್, ಅವರೇ ನಮ್ಮ ರಾಜ್ಯದ ಪೋಷಕರಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಣಿಮುತ್ತು ಉದುರಿಸಿದ್ದಾರೆ. ‘ಹೆಡ್‌ಲೈನ್ಸ್ ಟುಡೆ’ ಎಂಬ ಯಾರೂ ವೀಕ್ಷಿಸದ ಮತ್ತೊಂದು ಚಾನೆಲ್ ಕೂಡ ಹಿಂದೂ ಭಯೋತ್ಪಾದನೆಯ ಬಗ್ಗೆ ಬಡಬಡಾಯಿಸಿದೆ.

Gosh…

ಇದ್ಯಾವಾಗ ಹುಟ್ಟಿಕೊಂಡಿತು ಈ ಹಿಂದೂ ಭಯೋತ್ಪಾದನೆ? ನಾವು ಕಾಣುತ್ತಿರುವುದು ನಿಜವಾಗಿಯೂ ‘ಹಿಂದೂ ಭಯೋತ್ಪಾದನೆ’ ಯನ್ನಾ? ಈ ಮೇಲಿನ ಬಾಂಬ್‌ಸ್ಫೋಟಗಳಲ್ಲಿ ಕೆಲವು ಹಿಂದೂ ಸಂಘಟನೆಗಳ ಕೈವಾಡವಿದೆ ಎಂದಾದರೂ ಅದು ಯಾವ ರೀತಿ ‘ಹಿಂದೂ ಟೆರರಿಸಂ’ ಆಗುತ್ತದೆ? To every action there is always an equal and opposite reaction ಎಂದು ಐಸಾಕ್ ನ್ಯೂಟನ್ 17ನೇ ಶತಮಾನದಲ್ಲಿಯೇ ಹೇಳಿದ್ದ. ಅದನ್ನು ೨೦೦೬ರಿಂದೀಚೆಗೆ ನಡೆದ ಕೆಲವು ಬಾಂಬ್ ಸ್ಫೋಟಗಳ ವಿಚಾರದಲ್ಲೂ ಏಕೆ ಅನ್ವಯಿಸಬಾರದು? 1985ರ ನಂತರ 7 ಲಕ್ಷ ಹಿಂದೂಗಳನ್ನು ಕಾಶ್ಮೀರ ಕಣಿವೆಯಿಂದ ಹೊರದಬ್ಬಿದವರಾರು? 2005, ಅಕ್ಟೋಬರ್ 29ರಂದು ಅಂದರೆ ದೀಪಾವಳಿಗೆ 2 ದಿನ ಮುನ್ನ ರಾಜಧಾನಿ ದಿಲ್ಲಿಯ ಮಾರುಕಟ್ಟೆಗಳಲ್ಲಿ ಬಾಂಬಿಟ್ಟು 62 ಹಿಂದೂಗಳನ್ನು ಕೊಂದು ಬೆಳಕಿನ ಹಬ್ಬಕ್ಕೆ ಕತ್ತಲು ಕವಿಸಿದ್ದು ಯಾರು? ಅಕ್ಷರಧಾಮಕ್ಕೆ ಲಗ್ಗೆ ಇಟ್ಟವರಾರು? ಮುಂಬೈನಲ್ಲಿ ಮಾರಣಹೋಮ ಮಾಡಿದ್ದು, ಸಂಸತ್ ಮೇಲೆ ದಾಳಿ ಮಾಡಿದ್ದು, ಹನುಮಾನ್ ಜಯಂತಿ ಮೆರವಣಿಗೆ ಮೇಲೆ ಕಲ್ಲು ಹೊಡೆದು ಕೋಮುದಳ್ಳುರಿ ಆರಂಭಿಸಿದ್ದು, ಇಂಡಿಯಾ ಗೇಟ್ ಎದುರು ಬಾಂಬಿಟ್ಟು 55 ಜನರನ್ನು ಕೊಂದಿದ್ದು, ಪುಣೆಯ ಜರ್ಮನ್ ಬೇಕರಿಯನ್ನು ಸ್ಫೋಟಿಸಿದ್ದು ಯಾವ ಧರ್ಮೀಯರು? ಇಂತಹ ಘಟನೆಗಳು ನಡೆದಾಗ ಬಹುಸಂಖ್ಯಾತ ಹಿಂದೂಗಳ ಮನಸ್ಸಿನಲ್ಲಿ ಯಾವ ಭಾವನೆ ಮೂಡೀತು? ನಮಗೇನಂತೆ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕೆ? ಒಂದಿಷ್ಟು ನೊಂದ ಜನರಲ್ಲಿ ರೋಷ ಜಾಗೃತವಾಗಿ ಪ್ರತೀಕಾರದ ಕೃತ್ಯಗಳನ್ನೆಸಗಿರಬಹುದು. ಅದು ಸರಿಯೋ, ತಪ್ಪೋ ಬೇರೇ ಮಾತು. ಆದರೆ ನ್ಯೂಟನ್‌ನ action-reaction ಸೂತ್ರವನ್ನು ಇದಕ್ಕೂ ಏಕೆ ಅನ್ವಯಿಸಬಾರದು? ಈ ಹಿನ್ನೆಲೆಯಲ್ಲಿ ಕೆಲವು ಸ್ಫೋಟಗಳನ್ನು ‘ಹಿಂದೂ ರಿಯಾಕ್ಷನ್’ ಎನ್ನಿ, ‘ಹಿಂದೂ ರಿವೇಂಜ್-ರಿಟಾಲಿಯೇಶನ್’ ಎಂದರೂ ಪರವಾಗಿಲ್ಲ, ‘ಹಿಂದೂ ಆಂಗರ್’ ಎಂದರೂ ತಪ್ಪಿಲ್ಲ. ಆದರೆ ಅದು ಹಿಂದೂ ಟೆರರ್ ಹೇಗಾದೀತು? ಇಷ್ಟು ವರ್ಷಗಳ ಕಾಲ ಇಲ್ಲದ ಹಿಂದೂ ಟೆರರಿಸಂ ಈಗ ಎಲ್ಲಿಂದ ಬಂತು? ಏಕಾಗಿ ಹುಟ್ಟಿಕೊಂಡಿತು? ನಕ್ಸಲರ ಮೇಲೆ ಸಿಆರ್‌ಪಿಎಫ್ ಅಥವಾ ಸೇನೆಯನ್ನು ಛೂ ಬಿಡುವ ಮೊದಲು, ಕೂಂಬಿಂಗ್ ಆರಂಭಿಸುವ ಮುಂಚೆ ನಕ್ಸಲಿಸಂಗೆ ಕಾರಣವಾಗಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಯನ್ನು ಪರಿಹರಿಸಿ ಎಂದು ಬೊಬ್ಬೆ ಹಾಕುತ್ತಾರಲ್ಲಾ, ಹಿಂದೂ ಟೆರರಿಸಂ ಎಂದು ಬೊಬ್ಬಿಡುವ ಮೊದಲು ಅಂಥದ್ದೊಂದು ಅಪಾಯ ಎದುರಾಗಿದೆ ಎನ್ನುವುದಾದರೆ ಅದರ ಹಿಂದಿರುವ ಕಾರಣದ ಬಗ್ಗೆಯೂ ಏಕೆ ಗಮನಹರಿಸಬಾರದು? ಹಿಂದೂ ಭಯೋತ್ಪಾದನೆಯ ಹುಟ್ಟಿಗೆ ಕಾರಣವಾಗಿರುವ ಮುಸ್ಲಿಂ ಮೂಲಭೂತವಾದವನ್ನು ಮೊದಲು ಮಟ್ಟಹಾಕಬಾರದೇಕೆ? ಧರ್ಮವನ್ನು ಮುಂದಿಟ್ಟುಕೊಂಡು 1947ರಲ್ಲಿ  ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡ ಮೇಲೂ, ಕಾಶ್ಮೀರದ ವಿಷಯವನ್ನಿಟ್ಟುಕೊಂಡು ಈ ದೇಶದಲ್ಲಿ ಭಯೋತ್ಪಾದನೆಯನ್ನು ಆರಂಭಿಸಿದವರಾರು?  ಈ ಮೇಲಿನ ಘಟನೆಗಳಲ್ಲಿ ಕೆಲವು ಹಿಂದೂ ಸಂಘಟನೆಗಳ ಕೈವಾಡವಿದೆಯೆಂಬ ಶಂಕೆ ಇದೆಯೇ ಹೊರತು, ಸಾಬೀತಾಗಿದೆಯೇ? ಹಾಗಿದ್ದರೂ ಯಾವ ಆಧಾರದ ಮೇಲೆ ಅದನ್ನು ಹಿಂದೂ ಭಯೋತ್ಪಾದನೆ ಎಂದು ಕರೆಯುತ್ತಿದ್ದಾರೆ? ಆರುಷಿಯನ್ನು ಕೊಲ್ಲಿಸಿದ್ದು ಆಕೆಯ ಅಪ್ಪನೇ ಎಂದು ಇಂಗ್ಲಿಷ್ ಮಾಧ್ಯಮಗಳು ಸಾರಿದ್ದವು. ಆದರೆ ಸಿಬಿಐ ತನಿಖೆ ಮಾಡಿದರೂ ಅದನ್ನು ಸಾಬೀತುಪಡಿಸಲಾಯಿತೆ? ಅಂದು ಕಂಚಿಶ್ರೀಗಳನ್ನು ಕಟಕಟೆಗೆ ತಂದುನಿಲ್ಲಿಸಿದರಲ್ಲಾ, ಇದುವರೆಗೂ ಒಂದಾದರೂ ಆರೋಪವನ್ನು ಸಾಬೀತುಪಡಿಸಲಾಗಿದೆಯೆ? 2000ನೇ ಸಾಲಿನಲ್ಲಿ  ದಕ್ಷಿಣ ಹಾಗೂ ಮಧ್ಯ ಭಾರತದಲ್ಲಿ ಹಲವಾರು ಚರ್ಚ್‌ಗಳ ಮೇಲೆ ದಾಳಿಯಾದಾಗಲೂ ಹಿಂದೂ ಸಂಘಟನೆಗಳ ಮೇಲೆ ದೋಷಾರೋಪ ಹೊರಿಸಿದ್ದರು. ಕೊನೆಗೆ ಸಿಕ್ಕಿಬಿದ್ದಿದ್ದು ಯಾರು? ಮುಸ್ಲಿಮರ ದೀನ್‌ದಾರ್ ಸಂಘಟನೆಯಲ್ಲವೆ?

ಏಕೆ ಸತ್ಯ ಸಾಬೀತಾಗುವ ಮೊದಲೇ ಮಾಧ್ಯಮಗಳು ತೀರ್ಪು ನೀಡುತ್ತವೆ?

Would Jehadis target Muslim devout at a dargah? (ಜಿಹಾದಿಗಳು ಸ್ವಧರ್ಮೀಯರ ಮೇಲೆಯೇ ದಾಳಿ ಮಾಡುತ್ತಾರೆಯೇ?) ಎಂಬ ಘನವೆತ್ತ ಪ್ರಶ್ನೆ ಕೇಳುತ್ತಿರುವವರು ನಮ್ಮ ಪ್ರಶ್ನೆಗೂ ಉತ್ತರಿಸಲಿ…. ಅಜ್ಮೀರ್ ದರ್ಗಾಕ್ಕೆ ಬಾಂಬಿಟ್ಟವರು ‘ಅಭಿನವ ಭಾರತ’ದ ಕಾರ್ಯಕರ್ತರು ಎನ್ನುವುದಾದರೆ ಕರಾಚಿ, ಬಲೂಚಿಸ್ತಾನದ ಬೀದಿ, ಮಸೀದಿಗಳಲ್ಲಿ ಬಾಂಬಿಡುತ್ತಿರುವವರು ಯಾರು? ಏಳನೇ ಶತಮಾನದಿಂದ ಇದುವರೆಗೂ ನಡೆದುಕೊಂಡು ಬರುತ್ತಿರುವ ಶಿಯಾ-ಸುನ್ನಿಗಳ ಬಡಿದಾಟಕ್ಕೆ ಯಾರು ಕಾರಣ? ಇರಾನ್-ಇರಾಕ್‌ಗಳ ನಡುವೆ ನಡೆದ ಒಂಬತ್ತು ವರ್ಷಗಳ ಕದನಕ್ಕೆ ರಣ ಕಹಣೆ ಊದಿದವರು, ಮುಸ್ಲಿಂ ರಾಷ್ಟ್ರವಾದ ಕುವೈತ್ ಮೇಲೆ ಮತ್ತೊಂದು ಮುಸ್ಲಿಂ ರಾಷ್ಟ್ರವಾದ ಇರಾಕ್ ಆಕ್ರಮಣ ಮಾಡುವಂತೆ ಮಾಡಿದವರು ಆರೆಸ್ಸೆಸ್ಸಿಗರೇನು? ಬಲೂಚಿಸ್ತಾನ, ವಜೀರಿಸ್ತಾನಗಳಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟಗಳ ಹಿಂದೆಯೂ ಆರೆಸ್ಸೆಸ್ ಪ್ರಚಾರಕರ ಕೈವಾಡವಿದೆಯೇ? ಬೇನಝೀರ್ ಭುಟ್ಟೋರನ್ನು ಕೊಂದಿದ್ದು ಯಾವ ಹಿಂದೂ ಭಯೋತ್ಪಾದಕ? ಪಾಕಿಸ್ತಾನವನ್ನು ದಟ್ಟದಾರಿದ್ರ್ಯ ರಾಷ್ಟ್ರಗಳ ಸಾಲಿಗೆ ಸೇರಿಸಿದ್ದು ಅಭಿನವ ಭಾರತದ ಕಾರ್ಯಕರ್ತರಾ?

ಅದಿರಲಿ, ಈ ಜಗತ್ತಿನಲ್ಲಿ ಮುಸ್ಲಿಂ ಮೂಲಭೂತವಾದದ ಬಗ್ಗೆ ಭಯಭೀತರಾಗಿರುವುದು, ತೀವ್ರವಾಗಿ ಪ್ರತಿಕ್ರಿಯಿಸುತ್ತಿರುವುದು ಭಾರತೀಯ ಹಿಂದೂಗಳು ಮಾತ್ರವೇನು?

ಇತ್ತೀಚೆಗೆ ಫ್ರಾನ್ಸ್, ಸ್ಪೇನ್, ಬ್ರಿಟನ್, ಜರ್ಮನಿ ಹಾಗೂ ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆ ಏನು ಹೇಳುತ್ತದೆ ಗೊತ್ತೆ? ಸರಿಸುಮಾರು 82 ಪರ್ಸೆಂಟ್ ಫ್ರಾನ್ಸ್ ಜನರು ಬುರ್ಖಾವನ್ನು ನಿಷೇಧಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯದಲ್ಲಿ ಫ್ರಾನ್ಸ್‌ನ ನಂತರದ ಸ್ಥಾನದಲ್ಲಿರುವ ಜರ್ಮನಿಯ ಶೇ 71ರಷ್ಟು ಜನರು ಬುರ್ಖಾಕ್ಕೆ ನೋ ಎಂದಿದ್ದಾರೆ. ಬ್ರಿಟನ್‌ನ ಶೇ. 62ರಷ್ಟು ಹಾಗೂ ಸ್ಪೇನ್‌ನ ಶೇ. 59ರಷ್ಟು ಜನರು ಬುರ್ಖಾ ಮೇಲೆ ಬ್ಯಾನ್ ಹಾಕಬೇಕೆಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲ, ಡೆನ್ಮಾರ್ಕ್ ದೇಶ ಮುಸ್ಲಿಮರನ್ನೇ ದೃಷ್ಟಿಯಲ್ಲಿಟ್ಟುಕೊಂಡು, ವಲಸೆ ಬರುವವರ ಮದುವೆ ವಯಸ್ಸನ್ನು 24ಕ್ಕೆ ನಿಗದಿ ಪಡಿಸಿದೆ.  ಹಾಲೆಂಡ್ ತನ್ನ ನೆಲಕ್ಕೆ ವಲಸೆ ಬರುವವರಿಗಾಗಿ ಭಾಷೆ ಹಾಗೂ ಸಾಂಸ್ಕೃತಿಕ ಪರೀಕ್ಷೆಯನ್ನಿಟ್ಟಿದೆ.  ಮಿನಾರ್‌ಗಳ (ಮುಸ್ಲಿಮರು ನಿರ್ಮಿಸುವ ಗೋಪುರ) ನಿರ್ಮಾಣದ ಮೇಲೆ ಸ್ವಿಜರ್‌ಲ್ಯಾಂಡ್ ನಿಷೇಧ ಹಾಕಿದೆ. ಬುರ್ಖಾ ನಿಷೇಧಿಸಿ ಬೆಲ್ಜಿಯಂ ಸಂಸತ್ ವಿಧೇಯಕ ಪಾಸು ಮಾಡಿದೆ. ಪೋಲೆಂಡ್ ಮತ್ತು ಆಸ್ಟ್ರಿಯಾದಲ್ಲಿ “Down with Jehad” ಎಂಬ ಭಿತ್ತಿಪತ್ರಗಳನ್ನು ಹಿಡಿದು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆದಿದೆ. ಏಕೆ?

Islamophobia!

ಅದನ್ನು “Christian Terror” ಎನ್ನುತ್ತೀರಾ? ಇವತ್ತು ಬರೀ ಹಿಂದೂಗಳಷ್ಟೇ ಮುಸ್ಲಿಂ ಕಟ್ಟರ್‌ಪಂಥೀಯವಾದದ ಬಗ್ಗೆ ರೊಚ್ಚಿಗೇಳುತ್ತಿದ್ದರೆ ಖಂಡಿತ ಹಿಂದೂಗಳನ್ನು ದೂಷಿಸಬಹುದಿತ್ತು. ಆದರೆ ಆಧುನಿಕತೆಯ ಹರಿಕಾರರಾದ, ಪ್ರಜಾತಂತ್ರ ವ್ಯವಸ್ಥೆಯ ಪ್ರತಿಪಾದಕರಾದ, ಮಾನವ ಹಕ್ಕು ಸಂಸ್ಥೆಗಳ ಸ್ಥಾಪಕರಾದ, ಜಾತ್ಯ ತೀತತೆಯ ಬಗ್ಗೆ ಭಾಷಣ ಕೊಡುವ ಯುರೋಪಿನ ಕ್ರೈಸ್ತ ರಾಷ್ಟ್ರಗಳು ಮಾಡುತ್ತಿರುವುದೇನು? ಅಫ್ಫಾನಿಸ್ತಾನವನ್ನು ಮಟ್ಟಹಾಕಿದ, ಇರಾಕ್ ಮೇಲೆ ಆಕ್ರಮಣ ಮಾಡಿದ ಜಾರ್ಜ್ ಬುಷ್ ಅವರನ್ನು ಜಾತ್ಯತೀತವಾದಿಗಳಾದ ಅಮೆರಿಕನ್ನರು 2004ರಲ್ಲಿ ಏಕೆ ಮರು ಆಯ್ಕೆ ಮಾಡಿದರು? ಭಯೋತ್ಪಾದಕ ದಾಳಿಯ ಭಯದಿಂದಲೇ ಅಲ್ಲವೆ? ಇವತ್ತು ಯುರೋಪಿನ ಬಹುತೇಕ ರಾಷ್ಟ್ರಗಳು ಏಕೆ ಬುರ್ಖಾವನ್ನು ಬ್ಯಾನ್ ಮಾಡಲು ಮುಂದಾಗುತ್ತಿವೆ? ಅಲ್ಲಿನ ಜನರು ಬುರ್ಖಾ ಮೇಲೆ ನಿಷೇಧ ಹೇರಬೇಕೆಂದು ಸಮೀಕ್ಷೆಗಳ ಮೂಲಕ ಏಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ? ಅವರ ಭಯವಿರುವುದು ಬುರ್ಖಾ ಮೇಲಲ್ಲ, ಒಟ್ಟಾರೆ ಮುಸ್ಲಿಂ ಮೂಲಭೂತವಾದ ಹಾಗೂ ಯುರೋಪ್‌ನಲ್ಲಿ ಹೆಚ್ಚಾಗುತ್ತಿರುವ ಮುಸ್ಲಿಮರ ಜನಸಂಖ್ಯೆ ಬಗ್ಗೆ… ಹತ್ತು ಪರ್ಸೆಂಟ್ ಅಥವಾ ಹದಿನೈದು-ಇಪ್ಪತ್ತು ಲಕ್ಷ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳೇ ಇಷ್ಟು ಭಯಭೀತವಾಗಿರಬೇಕಾದರೆ ಸರಿಸುಮಾರು 20 ಕೋಟಿ ಮುಸ್ಲಿಮರನ್ನು ಹೊಂದಿರುವ ಭಾರತ, ‘ಜನೋತ್ಪಾದನೆ’ಯಲ್ಲಿ ತೊಡಗಿರುವವರ ಬಗ್ಗೆ ಎಷ್ಟು ಭೀತಿಗೊಳಗಾಗಬೇಕು?

ಇಷ್ಟಾಗಿಯೂ ಭಾರತ ಹೇಗೆ ನಡೆದುಕೊಂಡು ಬಂದಿದೆ?

1947ರಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ನಮಗೆ ಎಲ್ಲ ಕಾರಣಗಳೂ ಇದ್ದವು. ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ತಾನವನ್ನು ನೀಡಿಯೂ ಆಗಿತ್ತು. ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದ್ದರೆ ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಸಯ್ಯದ್ ಮೊಹಮದ್ ಸಾದುಲ್ಲಾ ಹೊರತುಪಡಿಸಿ ಸಂವಿಧಾನದ ಡ್ರಾಫ್ಟಿಂಗ್ ಕಮಿಟಿಯಲ್ಲಿ ಇದ್ದ ಅಷ್ಟೂ ಸದಸ್ಯರು ಹಿಂದೂಗಳಾಗಿದ್ದರು. ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ 1941ರಲ್ಲಿಯೇ “ಥಾಟ್ಸ್ ಆನ್ ಪಾಕಿಸ್ತಾನ್’ ಎಂಬ ಪುಸ್ತಕ ಬರೆದು ಏಕೆ ಹಿಂದೂ-ಮುಸ್ಲಿಮರು ಒಂದೇ ಸೂರಿನಡಿ ಇರಲು ಸಾಧ್ಯವಿಲ್ಲ, ಮುಸ್ಲಿಮರ ಸಹೋದರತ್ವ ಯೂನಿವರ್ಸಲ್ ಬ್ರದರ್‌ಹುಡ್ ಅಲ್ಲ, ಇಸ್ಲಾಮಿಕ್ ಬ್ರದರ್‌ಹುಡ್. ಹಾಗಾಗಿ ಭಾರತ ವಿಭಜನೆಯಾಗುವುದೇ ಒಳಿತು. ಇಬ್ಭಾಗವಾದ ನಂತರ ಇಲ್ಲಿಯ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿರುವ ಹಿಂದೂಗಳು ಭಾರತಕ್ಕೆ ಎಕ್ಸ್‌ಚೇಂಜ್ ಮಾಡಿಕೊಳ್ಳಬೇಕು ಎಂದು ವಾದಿಸಿದ್ದ ವ್ಯಕ್ತಿ. ಹಾಗಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿಕೊಳ್ಳಲು ನಮಗೆ ಯಾವ ಅಡ್ಡಿ-ಅಡಚಣೆಗಳೂ ಇರಲಿಲ್ಲ. ಆದರೂ ನಾವೇಕೆ ಈ ದೇಶವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಿಸಿಕೊಂಡೆವು? ಅದು ನಮ್ಮ ಧರ್ಮಸಹಿಷ್ಣುತೆಯನ್ನು ತೋರಿಸುತ್ತದೆ. ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಧರ್ಮವಾದ ಬುದ್ಧಿಸಂ ಹುಟ್ಟಿದ್ದೂ ಭಾರತದಲ್ಲಿ, ಜೈನಿಸಂ ಜನ್ಮತಳೆದಿದ್ದೂ ನಮ್ಮ ನೆಲದಲ್ಲೇ. ಜಗತ್ತಿನ ಯಾವ ದೇಶ, ಯಾವ ಧರ್ಮ, ಇತರ ಮತಗಳ ಉದಯಕ್ಕೆ ಅವಕಾಶ ಮಾಡಿಕೊಟ್ಟಿದೆ ಹೇಳಿ? ಮತಾನುಯಾಯಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ‘ನಂಬರ್ ಗೇಮ್’ನಲ್ಲಿ ನಾವೆಂದೂ ನಂಬಿಕೆ ಇಟ್ಟವರಲ್ಲ, ನಮ್ಮದೆಂದೂ ವಿಸ್ತರಣಾವಾದಿ(Expansionist) ರಾಷ್ಟ್ರವಾಗಿರಲಿಲ್ಲ. ಆದರೆ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಬಾಹುಳ್ಯ ಹೊಂದಿದ್ದು ತಾನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿಕೊಂಡ ಒಂದೇ ಒಂದು ದೇಶದ ಉದಾಹರಣೆ ಕೊಡಿ? ಇತರ ರಾಷ್ಟ್ರಗಳ ಮೇಲೆ ದಾಳಿ, ಆಕ್ರಮಣ ಮಾಡದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಜಗತ್ತಿನ ಎಲ್ಲ ಧರ್ಮಗಳಿಗೂ ಆಶ್ರಯ, ನೆಲೆ ನೀಡಿದ ಏಕಮಾತ್ರ ದೇಶ ಭರತ ಖಂಡ. ರೋಮನ್ನರಿಂದ ದೌರ್ಜನ್ಯಕ್ಕೊಳಗಾದ ಯಹೂದಿಗಳಿಗೂ ಆಶ್ರಯ ನೀಡಿದೆ, ಮುಸ್ಲಿಮರಿಂದ ತಾಯ್ನೆಲ ಕಳೆದುಕೊಂಡ ಇರಾನಿನ ಪಾರ್ಸಿಗಳಿಗೂ ನೆಲೆ ನೀಡಿದೆ. ಇವತ್ತಿಗೂ ಭಾರತ ಪರಧರ್ಮಸಹಿಷ್ಣು ಹಾಗೂ ಸೆಕ್ಯುಲರ್ ರಾಷ್ಟ್ರವಾಗಿದ್ದರೆ ಅದಕ್ಕೆ ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಮುಸ್ಲಿಮರು ಬಹುಸಂಖ್ಯಾತರಾದರೆ ಏನಾಗುತ್ತದೆ ಎಂಬುದಕ್ಕೆ ಕಾಶ್ಮೀರಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ, ಕ್ರೈಸ್ತರ ಸಂಖ್ಯೆ ಹೆಚ್ಚಾ ದರೆ ಯಾವ ಅಪಾಯ ಎದುರಾಗುತ್ತದೆ ಎಂಬುದಕ್ಕೆ ಈಶಾನ್ಯ ರಾಜ್ಯ ಗಳಿಗಿಂತ ಉತ್ತಮ ಉದಾಹರಣೆ ಬೇರಿಲ್ಲ.

ಈ ಹಿನ್ನೆಲೆಯಲ್ಲಿ ಧರ್ಮದ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಒಂದಿಷ್ಟು ಜನರು ರೊಚ್ಚಿಗೆದ್ದು ಉಗ್ರವಾಗಿ ಪ್ರತಿಕ್ರಿಯೆ ನೀಡಲು ಮುಂದಾದರೆ ಅದು ‘ಹಿಂದೂ ಟೆರರಿಸಂ’ ಆಗಿ ಬಿಡುತ್ತದೆಯೇ? ಹಿಂದೂ ಪ್ರತಿಕ್ರಿಯೆಯನ್ನು ಹಿಂದೂ ಭಯೋತ್ಪಾದನೆ ಎನ್ನುವುದಾದರೆ, ಕೇರಳದ ಉಪನ್ಯಾಸಕ  T.J. ಜೋಸೆಫ್ ಅವರ ಕೈ ಕತ್ತರಿಸಿದ ಬೆನ್ನಲ್ಲೇ ಮುಸ್ಲಿಮರ ಅಂಗಡಿ, ವಾಹನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ ಚರ್ಚ್‌ನ ಕ್ರಮವನ್ನು ‘ಕ್ರಿಶ್ಚಿಯನ್ ಟೆರರಿಸಂ’ ಎನ್ನುತ್ತೀರಾ? ಏಕೆ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ? ಯಾವ ಧರ್ಮೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕು?  ಹಿಂದೂಗಳ ಮೇಲೆ ಯಾರಾದರೂ ಕೈ ಎತ್ತಿದರೆ ಕೈ ಕಡಿಯುತ್ತೇನೆ ಎಂದು ವರುಣ್ ಗಾಂಧಿ ಬಾಯಲ್ಲಿ ಹೇಳಿದರು. ಆದರೆ T.J. ಜೋಸೆಫ್‌ರ ಕೈ ಕಡಿಯುವ ಮೂಲಕ ಮುಸ್ಲಿಂ ಮೂಲಭೂತ ವಾದಿಗಳು ಅದನ್ನು ಕೃತಿಯಲ್ಲಿ ತೋರಿದ್ದಾರೆ. ಈ ಎರಡೂ ಪ್ರಕರಣಗಳಿಗೆ ಸಿಕ್ಕ ಪ್ರಚಾರದಲ್ಲಿನ ವ್ಯತ್ಯಾಸವನ್ನು ನೋಡಿ? ಕೈ ಕಡಿಯುತ್ತೇನೆ ಎಂದಿದ್ದು ತಿಂಗಳಾನುಗಟ್ಟಲೆ ಸುದ್ದಿಯಾಯಿತು, ವರುಣ್ ಜೈಲಿಗೂ ಹೋಗಿ ಬಂದರು. ಆದರೆ ಕೇರಳದಲ್ಲಿ ಕ್ರೈಸ್ತ ಉಪನ್ಯಾಸಕನ ಕೈ ಕಡಿದವರಿಗೆ ಏನಾಯಿತು?! ನೀವೇ ಯೋಚನೆ ಮಾಡಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರೇನಾದರೂ ಜೋಸೆಫ್ ಅವರ ಕೈ ಕಡಿದಿದ್ದರೆ….? ರೋಮನ್ ಕ್ಯಾಥೋಲಿಕ್ ಚರ್ಚ್ ಪ್ರತಿಕ್ರಿಯೆ ನೀಡುತ್ತಿತ್ತು, ಒಬಾಮ ಹೇಳಿಕೆ ನೀಡುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಕಾರಾತ್ಮಕ ಪ್ರಚಾರ ಸಿಕ್ಕಿ, ಮುತಾಲಿಕ್‌ರನ್ನು ದೊಡ್ಡ ಕ್ರಿಮಿನಲ್ ಎಂಬಂತೆ ಬಿಂಬಿಸುತ್ತಿದ್ದರು. ಜೋಸೆಫ್ ಅವರ ಕೈ ಕಡಿದವರನ್ನು ಯಾವ ಮಾಧ್ಯಮ, ಸೆಕ್ಯುಲರ್‌ವಾದಿಗಳು ಎದ್ದು ನಿಂತು ಪ್ರತಿಭಟಿಸುತ್ತಿದ್ದಾರೆ? ಅದು ಕೇವಲ ಒಂದು ದಿನದ ಸುದ್ದಿಯಾಗಿ ಏಕೆ ಕಳೆದುಹೋಗುತ್ತದೆ?

54 Responses to “ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?”

  1. Madhusudhan says:

    Hi ,

    Good One … But You should publish this type off article in papers and have to publish books .

    we have to come together to save our culture and our nation, let me know if i can help u in any way…..

    Thanks & Regards
    Madhusudhan.B

  2. mahesh yadawad says:

    nice article sir. tumba chennagi bandide

  3. hemavathi says:

    sir . i read ur artical . one small dout if u agree india had a hindhu religion .

  4. vijay Kumar says:

    Dear sir,

    first time reading Mr. Pratap Simha ( sing) articles. He is simply. super