Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಜಾರ್ಜ್ ರಾಜೀನಾಮೆ ಕೊಟ್ಟಿಲ್ಲವೇಕೆ?

ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಜಾರ್ಜ್ ರಾಜೀನಾಮೆ ಕೊಟ್ಟಿಲ್ಲವೇಕೆ?

ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಜಾರ್ಜ್ ರಾಜೀನಾಮೆ ಕೊಟ್ಟಿಲ್ಲವೇಕೆ?

ಈ ಪ್ರಕರಣದಲ್ಲಿ ಕೆಲವೊಂದು ದಿಗ್ಭ್ರಮೆ ಹುಟ್ಟಿಸುವ ಸಂಗತಿಗಳಿವೆ. ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ…
ಆದರೆ ಒಂದು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ!
ಡಿವೈಎಸ್ಪಿ ಎಂ.ಕೆ. ಗಣಪತಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಇಂದಿಗೆ ಐದು ದಿನಗಳಾದವು. ಆದರೆ ಕೆ.ಜೆ. ಜಾರ್ಜ್ ಸಾಹೇಬರು ಮಾತ್ರ ಕುರ್ಚಿ ಬಿಟ್ಟು ಇಳಿದಿಲ್ಲ. ತೀರ್ಪು ಹೊರಬಂದ ದಿನವೇ ಪತ್ರಕರ್ತೆ ಗೌರಿ ಲಂಕೇಶರ ಬರ್ಬರ ಹತ್ಯೆ ನಡೆದ ಕಾರಣ ಮಾಧ್ಯಮಗಳಿಗೆ ಟಿಆರ್‌ಪಿ ಏರಿಸುವ ಹೊಸ ವಿಚಾರ ಸಿಕ್ಕಿತು, ಜಾರ್ಜ್ ವಿಷಯವನ್ನು ಕೈಬಿಟ್ಟವು. ಅಂತಹ ಅವಕಾಶ ಸಿಕ್ಕಿತಲ್ಲಾ ಎಂದು, ಕಾವೇರಿ ಹೊಳೆಗಿಂತ ತಮಗೆ ಹಣದ ಹೊಳೆ ಹರಿಸುವ ಜಾರ್ಜ್ ಬಗ್ಗೆ ಬಹಳ ಅಕ್ಕರೆ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ಗೌರಿ ಹತ್ಯೆಯಿಂದಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆ ಎಂದು ಬಹುಶಃ ನಿಟ್ಟುಸಿರುವ ಬಿಟ್ಟಿರಬಹುದು!

ಜಾರ್ಜ್ ಸಾಹೇಬರನ್ನ ಕೇಳಿದರೆ, ‘ಸಿಎಂ ಹೇಳಿದರೆ ಈಗಲೇ ರಾಜೀನಾಮೆ ಕೊಡುತ್ತೇನೆ’ ಎಂದು ತುಂಬ ಸಾತ್ವಕರಂತೆ ನುಡಿಯುತ್ತಾರೆ. ಮುಖ್ಯಮಂತ್ರಿ ಇವರ ರಾಜೀನಾಮೆ ಕೇಳುವುದಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲ. ಬಹಳ ದೀರ್ಘವಾಗಿ ಈ ಪ್ರಕರಣದ ಬಗ್ಗೆ ಹೇಳಬೇಕಿಲ್ಲ. ಕಳೆದ ವರ್ಷದ ಜುಲೈ 7ರಂದು ಡಿವೈಎಸ್ಪಿ ಗಣಪತಿಯವರು ಮಾಧ್ಯಮವೊಂದರ ಮುಂದೆ ತಮಗೆ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳಿಂದ ಕಿರುಕುಳವಾಗುತ್ತಿದೆ ಎಂದು ಆಲವತ್ತುಕೊಂಡು ಅನುಮಾನಾಸ್ಪದವಾಗಿ ಮಡಿಕೇರಿಯ ಲಾಡ್ಜೊಂದರಲ್ಲಿ ಹೆಣವಾಗಿ ಕಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇಷ್ಟಾಗಿಯೂ ಜಾರ್ಜ್ ಕ್ಯಾರೆ ಅನ್ನಲಿಲ್ಲ! ಗಣಪತಿಯವರ ಕುಟುಂಬದ ಮೇಲೆ ಒತ್ತಡ ಹೇರಿ ಅವರ ಪತ್ನಿಯಿಂದಲೇ, ಗಣಪತಿ ಮಾನಸಿಕ ಕಾರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಬರೆಸಿಕೊಂಡು ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದ್ದನ್ನೂ ನೀವು ನೋಡಿದ್ದೀರಿ. ಆದರೆ ಗಣಪತಿ ವೈದ್ಯರನ್ನು ಭೇಟಿ ಮಾಡಿದ್ದು ತುಂಬ ಹಿಂದೆ ಎಂಬುದು ಆಮೇಲೆ ಸ್ಪಷ್ಟವಾಗಿದೆ. ಒಬ್ಬರು ಮಾನಸಿಕ ಖಿನ್ನತೆ ಅಂದರು. ಇನ್ನೊಬ್ಬರು ಕುಟುಂಬದೊಳಗೆ ಸರಿ ಇರಲಿಲ್ಲ ಎಂದರು.

ಆದರೆ ಪೊಲೀಸ್ ಅಧಿಕಾರಿಯೊಬ್ಬ ಮಾನಸಿಕ ಖಿನ್ನತೆಗೆ ಒಳಗಾಗುವ ಸ್ಥಿತಿ ಯಾಕೆ ಬಂತು? ಅದಕ್ಕೆ ಹೊಣೆ ಯಾರು? ಕಿರುಕುಳದ ಕಾರಣಕ್ಕೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಾ? ಎಂಬುದನ್ನೆಲ್ಲ ಯಾರೂ ತನಿಖೆ ಮಾಡಲಿಲ್ಲ. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಂಡವರು ಪತ್ರ ಬರೆದು, ದಲ್ಲಿ ಯಾರದ್ದಾದರೂ ಮೇಲೆ ಆರೋಪ ಮಾಡಿದ್ದರೆ, ವೀಡಿಯೊ ದಾಖಲಿಸಿದ್ದರೆ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗುತ್ತದೆ. ನೆಲಮಂಗಲದಲ್ಲಿ ಹುಡುಗ- ಹುಡುಗಿ ಪ್ರೀತಿಸಿ ಮನೆಯಿಂದ ಓಡಿ ಹೋಗಿದ್ದರು. ತಂದೆ- ತಾಯಿ ಕರೆ ಮಾಡಿ, ನೀವು ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಾಗ, ಆಯಿತು ಮಾಡಿಕೊಳ್ಳಿ ಎಂದಿದ್ದರು. ತಂದೆ- ತಾಯಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡರು. ಇದೇ ಕಾರಣಕ್ಕೆ ಯುವಕ- ಯುವತಿಯನ್ನು ನಮ್ಮದೇ ಪೊಲೀಸರು ಬಂಧಿಸಿದ್ದರು. ಶಾಲೆಗಳಲ್ಲಿ ಬೈದು ಅಥವಾ ಹೊಡೆದು, ನಂತರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ ಶಿಕ್ಷಕರನ್ನು ಬಂಧಿಸಲಾಗುತ್ತದೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಸಾಮಾನ್ಯ ಜರನ್ನು ಬಂಧಿಸವ ಪೊಲೀಸ್ ಇಲಾಖೆ, ತಮ್ಮದೇ ಅಧಿಕಾರಿಯೊಬ್ಬರ ವೀಡಿಯೊ ಇದ್ದರೂ ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸುವ ಮನಸ್ಸು ಮಾಡಲಿಲ್ಲ.

ಜಿಲ್ಲಾ ನ್ಯಾಯಾಲಯದಲ್ಲಿ ಕುಟುಂಬದವರು ಪ್ರಕರಣ ದಾಖಲಿಸಿದ ನಂತರ, ನ್ಯಾಯಾಲಯದ ನಿರ್ದೇಶನದಂತೆ ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಾಯಿತು. ಆಗ ಅನಿವಾರ್ಯವಾಗಿ ಜುಲೈ 16ರಂದು ಜಾರ್ಜ್ ರಾಜೀನಾಮೆ ನೀಡಿದರು. ಆದರೆ ಜಾರ್ಜ್ ಬೇಗ ನಿರಪರಾಧಿಯಾಗಿ ಸಂಪುಟಕ್ಕೆ ಮರಳುತ್ತಾರೆಂದು ಎಲ್ಲರಿಗೂ ಗೊತ್ತಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಸಚಿವ ಸ್ಥಾನವನ್ನು ಖಾಲಿ ಇಟ್ಟುಕೊಂಡು ಕಾಯುತ್ತಿದ್ದರು. ಬಳಿಕ ಡಿಐಜಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಸಿಐಡಿ ತನಿಖೆಯೂ ಆರಂಭವಾಯಿತು. ನಮ್ಮ ಸಿಐಡಿ ಟೀಮ್ ಎಷ್ಟು ಕಾರ್ಯಕ್ಷಮತೆ ತೋರಿತೆಂದರೆ ಎರಡೇ ತಿಂಗಳಲ್ಲಿ ವರದಿ ಕೊಟ್ಟು ಬಿಟ್ಟಿತು! ಎಂಥಾ ಸ್ಪೀಡ್ ನೋಡಿ!! ಆ ವೇಳೆಗಾಗಲೇ ಕಾವೇರಿ ಗಲಾಟೆ ತಾರಕ್ಕೇರಿತ್ತು. ಸೆಪ್ಟೆಂಬರ್ 25ರಂದು ಕಾವೇರಿ ವಿಷಯದಲ್ಲಿ, ನೀರು ಬಿಡುವ ಸಂಬಂಧ ಸುಪ್ರೀಂಕೋರ್ಟ್ ಒಂದು ಮಹತ್ವದ ತೀರ್ಪು ನೀಡುವುದರಲ್ಲಿತ್ತು. ಆದರೆ ನಮ್ಮ ಸಿ.ಎಂ. ಸಿದ್ದರಾಮಯ್ಯ ಸಾಹೇಬ್ರು ಕಾವೇರಿ ಹೊಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಚಿಂತಿತರಾಗಿರಲಿಲ್ಲ, ತಮಗೆ ಹಣದ ಹೊಳೆ ಹರಿಸುವ ಜಾರ್ಜ್‌ರನ್ನು ಅದೇ ದಿನ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅದಕ್ಕೆ, ಈಗ ಮಂಗಳೂರು ವಿಭಾಗದ ಐಜಿ ಆಗಿರುವ ನಿಂಬಾಳ್ಕರ್ ಸಾಹೇಬರು ಫಾರೆನ್ಸಿಕ್ ರಿಫೋರ್ಟ್ (ಎಫ್.ಎಸ್.ಎಲ್.) ಬರುವ ಮೊದಲೇ ಅಂತಿಮ ವರದಿ ಸಲ್ಲಿಸಿ ಅನುವು ಮಾಡಿಕೊಟ್ಟಿದ್ದರು!!

ಅಲ್ಲಿಗೆ ಮಾಧ್ಯಮಗಳ ಆಸಕ್ತಿಯೂ ಮುಗಿದಿತ್ತು!
ಒಂದು ರಾಜಕೀಯ ಪಕ್ಷವಾಗಿ ನಾವೂ ಹೋರಾಟ ಬಿಟ್ಟು ಸೋಮಾರಿತನಕ್ಕೆ ಶರಣಾಗಿದ್ದೆವು. ಆದರೆ ಗಣಪತಿಯವರ ತಂದೆ ಕುಶಾಲಪ್ಪನವರು ಸಿಬಿಐ ತನಿಖೆಗೆ ಒತ್ತಾಯಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿಯೂ ನಿರಾಸೆಯೇ ಕಾದಿತ್ತು. ಆದರೂ ಛಲಬಿಡದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಆಗಸ್ಟ್‌ ಮೂರನೇ ವಾರ ಕುಶಾಲಪ್ಪನವರ ಮನವಿಯನ್ನು ಪುರಸ್ಕರಿಸಿ ಕೇಸನ್ನು ಸ್ವೀಕರಿಸಿ ಕೆ.ಜೆ. ಜಾರ್ಜ್‌ಗೆ ನೋಟೀಸು ಜಾರಿ ಮಾಡಿದಾಗ ಪ್ರಕರಣದಲ್ಲಿ ಏನೋ ಹುರುಳಿದೆ ಎಂಬುದರ ಪ್ರಾರಂಭಿಕ ಸೂಚನೆ ದೊರೆತಿತ್ತು. ಅದರ ಬೆನ್ನಲ್ಲೇ, ಅಂದರೆ ಆಗಸ್ಟ್‌ 23ರಂದು ರಾತ್ರಿ 7 ಗಂಟೆಯಿಂದ 9 ಗಂಟೆವರೆಗೂ ಟೈಮ್ಸನೌ ಚಾನೆಲ್, ಸತತವಾಗಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳು, ಪಂಚನಾಮೆಯ ಬಗ್ಗೆ ಸಿದ್ಧವಾಗಿದ್ದ ಫಾರನ್ಸಿಕ್ ವರದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಾಗ ಎಂಥವರಿಗೂ ದಿಗ್ಭ್ರಮೆಯಾಗುವಂತಿದ್ದವು. ಇನ್ನು ಸರಕಾರವಾಗಲಿ, ಸಿಐಡಿಯಾಗಲಿ, ಗೃಹ ಇಲಾಖೆಯಾಗಲಿ ಟೈಮ್ಸ್‌‌ನೌನಲ್ಲಿ ಪ್ರಕಟವಾದ ಎಫ್‌ಎಸ್‌ಎಲ್ ವರದಿಯನ್ನು ನಿರಾಕರಿಸದೇ ಹೋದಾಗ ಸಿದ್ದರಾಮಯ್ಯನವರ ಸರಕಾರದ ಮೋಸಗಾರಿಕೆ ಖಚಿತವಾಯಿತು. ಸುಪ್ರೀಂ ಕೋರ್ಟ್ ಗಣಪತಿ ಪ್ರಕರಣವನ್ನು ಸಿಬಿಐಗೆ ಸಲ್ಲಿಸಬಹುದು ಎಂಬ ಭರವಸೆಯೂ ಹೆಚ್ಚಾಯಿತು!

ಇಷ್ಟಕ್ಕೂ ಫಾರೆಸ್ಸಿಕ್ ವರದಿಯಲ್ಲಿ ಏನಿತ್ತು ಗೊತ್ತಾ?
• ಸಿಐಡಿ ವರದಿಯಲ್ಲಿ ಗಣಪತಿ ಅವರು ಲಾಡ್ಜ್‌ ಒಂದರ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದರೆಂದು ಹೇಳಲಾಗಿದೆ. ಆದರೆ, ಅದರ ಫೋಟೋವನ್ನು ತೆಗೆದಿಲ್ಲ!
• ಡಿವೈಎಸ್‌ಪಿ ಗಣಪತಿ ಶವ ದೊರೆತ ಸ್ಥಳದಿಂದ ಅವರ ಮೊಬೈಲ್ ವಶಕ್ಕೆ ಪಡೆದಿರುವ ಅಧಿಕಾರಿಗಳಿಂದ ಅದರಲ್ಲಿನ ಅನೇಕ ಮಾಹಿತಿಗಳನ್ನು ಡಿಲೀಟ್ ಮಾಡಲಾಗಿದೆ. ಗಣಪತಿ ಬಳಸುತ್ತಿದ್ದ ಪೆನ್ ಡ್ರೈವ್‌ಗಳಿಂದ ಅನೇಕ ಫೈಲ್‌ಗಳನ್ನು ಡಿಲೀಟ್ ಮಾಡಲಾಗಿದೆ.
• ಅವರ ಪರ್ಸನಲ್ ಕಂಪ್ಯೂಟರ್‌ನಿಂದ 100 ಇ-ಮೇಲ್‌ಗಳನ್ನು ಡಿಲೀಟ್ ಮಾಡಲಾಗಿದೆ.
• ಪೆನ್ ಡ್ರೈವ್ ನಿಂದ 145 ಪಿಡಿಎಫ್ ಪೈಲ್‌ಗಳು ಡಿಲೀಟ್.
• ಮೊಬೈಲ್‌ನ ಕಾಲ್ ಲಾಗ್‌ನಲ್ಲಿದ್ದ ಕೆಲವಾರು, ಹೆಸರುಗಳು ಡಿಲೀಟ್. ಇದರಲ್ಲಿ ಒಬ್ಬ ಮಾಜಿ ಮಂತ್ರಿಯ ಕೆರೆಗಳು, ಶಾಸಕರ ಕರೆಗಳ ಲಾಗ್ ಡಿಲೀಟ್ ಆಗಿದೆ. ಇವುಗಳಲ್ಲಿ ಅಂದಿನ ನಗರಾಭಿವೃದ್ದಿ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಶಾಸಕ ಮುನಿರತ್ನ, ಮಲ್ಲೇಶ್ವರಂ ಡಿಸಿಪಿ, ಕೆಲ ಪೊಲೀಸ್ ಕಂಟ್ರೋಲ್ ರೂಂ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳ ಫೋನ್ ಕರೆಗಳು ಡಿಲೀಟ್ ಆಗಿವೆ.
• ಮೊಬೈಲ್‌ನಲ್ಲಿದ್ದ 52 ಮೆಸೇಜ್‌ಗಳು ಡಿಲೀಟ್ ಆಗಿವೆ.
• ಮೊಬೈಲ್‌ನಲ್ಲಿದ್ದ 2500 ಫೋಟೋಗಳು ಡಿಲೀಟ್ ಆಗಿದೆ.
• ಕಂಪ್ಯೂಟರ್‌ನಲ್ಲಿದ್ದ 910 ಎಕ್ಸೆಲ್ ಫೈಲ್‌ಗಳು ಡಿಲೀಟ್ ಆಗಿದೆ.
• 2699 ಎಂಎಸ್ ವರ್ಡ್ ಫೈಲ್ ಡಿಲೀಟ್ ಆಗಿದೆ.
• 791 ಟೆಕ್ಸ್ಟ್‌ ಫೈಲ್‌ಗಳು ಡಿಲೀಟ್ ಆಗಿದೆ.
• ಡಿವೈಎಸ್‌ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಹೋಟೆಲ್ ಕೊಠಡಿಯ ಚಿಲಕ ಒಳಗಿನಿಂದ ಹಾಕಿರುವುದರ ಬಗ್ಗೆ ಅನುಮಾನ.
• ಡಿವೈಎಸ್‌ಪಿ ಗಣಪತಿ ಶವ ನೇತಾಡುತ್ತಿದ್ದ ಸೀಲಿಂಗ್ ಫ್ಯಾನ್‌ನ ಮೇಲಿರುವ ಕೆಲವಾರು ಬೆರಳಚ್ಚುಗಳನ್ನು (ಫಿಂಗರ್ ಫ್ರಿಂಟ್ ಗಳನ್ನು ) ಪರಿಗಣಿಸಿಲ್ಲ.
• ಅಲ್ಲದೆ ಫ್ಯಾನಿಗೆ ಗಣಪತಿ ಬಟ್ಟೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆದರೆ ಅದರ ಜತೆಗೇ, ಪೊಲೀಸರು ಉಪಯೋಗಿಸುವ ಕ್ಯಾನ್ವಾಸ್ ಬೆಲ್ಟ್‌ ಕೂಡ ಫೋಟೋದಲ್ಲಿ ಕಾಣುತ್ತಿದೆ. ಇದನ್ನು ಸಿಐಡಿ ತನಿಖೆಯಲ್ಲಿ ಪರಿಗಣಿಸಿಲ್ಲ.
• ಆತ್ಮಹತ್ಯೆ ನಡೆದ ಸ್ಥಳದಲ್ಲಿ ಎರಡು ಹಾರಿಸಿರುವ ಬುಲೆಟ್‌ಗಳ ಗುರುತು ಹಾಗೂ ಸಿಡಿದ ಗುಂಡಿನ ಚೂರುಗಳು ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ಇಲ್ಲ.

ಪ್ರಕರಣವನ್ನು ಸಿಬಿಐಗೆ ವಹಿಸುತ್ತಾ, ಈ ಪ್ರಕರಣದಲ್ಲಿ ಕೆಲವೊಂದು ದಿಗ್ಭ್ರಮೆ ಹುಟ್ಟಿಸುವ ಸಂಗತಿಗಳಿವೆ… ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಸುಖಾಸುಮ್ಮನೆ ಅಲ್ಲ, ಇದೇ ಕಾರಣಕ್ಕೆ! ಹಾಗೆ ಹೇಳಿ, ಸಿಬಿಐಗೆ ವಹಿಸಿ ಐದು ದಿನಗಳಾದರೂ ಜಾರ್ಜ್ ಏಕೆ ಕುರ್ಚಿ ಬಿಟ್ಟು ಇಳಿದಿಲ್ಲ? ಯಾಕಾಗಿ ಮುಖ್ಯಮಂತ್ರಿಯವರು ರಾಜೀನಾಮೆ ಪಡೆದಿಲ್ಲ? ಯಾಕಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಜಾರ್ಜ್ ಪರ ನಿಂತಿದ್ದಾರೆ? ಸಿಬಿಐನಂತಹ ಗಂಭೀರ ತನಿಖೆಗೆ ಆದೇಶಿಸಿದ್ದರೂ ರಾಜೀನಾಮೆ ನೀಡುವ ಕನಿಷ್ಠ ನೈತಿಕತೆ ಯಾಕೆ ಕಾಣುತ್ತಿಲ್ಲ?

ಸಿಬಿಐ ತನಿಖೆಯಾದರೂ ಅದಕ್ಕೆ ದಾಖಲೆ, ಮಾಹಿತಿ ನೀಡಬೇಕಾದದ್ದು ಪ್ರಾರಂಭಿಕ ತನಿಖೆ ಮಾಡಿದ ಸಿಐಡಿ. ಅದಿರುವುದು ಸರ್ಕಾರದ ಮೂಗಿನ ಕೆಳಗೆ. ಹಾಗಿರುವಾಗ ಸಿಐಡಿ ಒಬ್ಬ ಪ್ರಭಾವಿ ಸಚಿವರ ವಿರುದ್ಧದ ತನಿಖೆಗೆ, ಅವರು ಅಧಿಕಾರದಲ್ಲೇ ಮುಂದುವರಿದಿದ್ದಾಗ ಪ್ರಾಮಾಣಿಕವಾಗಿ ಸ್ಪಂದಿಸಲು ಸಾಧ್ಯವೆ? ಆದರಲ್ಲೂ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಯ ಪ್ರಮುಖ ಸಾಕ್ಷಿಗಳ ನಾಶ ಮಾಡಿರುವ ಸರ್ಕಾರದ ಮಂತ್ರಿ ಅವರು. ಜಾರ್ಜ್ ರಾಜೀನಾಮೆ ನೀಡಿದರೂ, ಅವರಿಗೆ ಬೇಕಾದಂತೆ ವರದಿ ತರಿಸಿ, ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ ಸರಕಾರ, ಸಿಐಡಿಗೆ ಎಲ್ಲವನ್ನೂ ಸರಿಯಾಗಿ ಹಸ್ತಾಂತರ ಮಾಡುವುದೇ? ಈಗಾಗಲೇ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಏನೆಲ್ಲ ಸಾಕ್ಷ್ಯ ನಾಶ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿಯಾಗಿದೆ ಎಂಬ ಅನುಮಾನ ಬಲವಾಗಿದೆ. ಹೀಗೆಲ್ಲ ಇರುವಾಗ ನೀವೇ ಹೇಳಿ, ಜಾರ್ಜ್ ರಾಜೀನಾಮೆ ಕೊಡಬೇಕೋ ಬೇಡವೋ? ಮಾನ್ಯ ಮುಖ್ಯಮಂತ್ರಿಗಳೇ, ಮೊದಲೇ ನೊಂದಿರುವ ಕುಶಾಲ್ಪನಪ್ಪನವರಿಗೆ ಮಗನನ್ನು ವಾಪಸ್ ತಂದುಕೊಡುವುದಕ್ಕಂತೂ ಆಗುವುದಿಲ್ಲ, ಕನಿಷ್ಠ ಜಾರ್ಜ್‌ರನ್ನು ವಜಾಗೊಳಿಸುವ ಮೂಲಕ ನ್ಯಾಯಸಮ್ಮತ ತನಿಖೆಗಾದರೂ ಅವಕಾಶ ಮಾಡಿಕೊಡಿ.

Comments are closed.