Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್‌ಗೇಕೆ ಆಪತ್ತು?

ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್‌ಗೇಕೆ ಆಪತ್ತು?

ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್‌ಗೇಕೆ ಆಪತ್ತು?

ಸಾಮಾನ್ಯವಾಗಿ ಶುಕ್ರವಾರ ಮಧ್ಯಾಹ್ನದ ನಂತರ ಸಂಸತ್ತಿನ ಎರಡೂ ಸದನಗಳು, ಅದು ರಾಜ್ಯಸಭೆ ಇರಬಹುದು, ಲೋಕಸಭೆಯಾಗಿರಬಹುದು, ಬಿಕೋ ಎನ್ನುತ್ತಿರುತ್ತವೆ. ಶನಿವಾರ, ಭಾನುವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಯೋಜನೆಯಾಗಿರುವ ಸಭೆ, ಸಮಾರಂಭ, ಮೀಟಿಂಗ್‌ಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೆಚ್ಚಿನ ಸಂಸದರು ಶುಕ್ರವಾರ ಕ್ಷೇತ್ರಕ್ಕೆ ತೆರಳುವುದರ ಬಗ್ಗೆಯೇ ಹೆಚ್ಚು ಚಿಂತಿತರಾಗಿರುತ್ತಾರೆ. ರಾಜ್ಯಸಭೆ ಸದಸ್ಯರಿಗೆ ಅಂಥ ಅನಿವಾರ್ಯ, ದರ್ದು ಇಲ್ಲ. ಆದರೂ ರಾಜ್ಯಸಭೆಯೂ ಹೆಚ್ಚೂಕಡಿಮೆ ಖಾಲಿಯಾಗಿ ಬಿಡುತ್ತದೆ. ಅಲ್ಲಿ ತುಂಬಿದ ಸಭೆಯನ್ನು ನೋಡಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಯಾವುದಾದರೂ ಬಹುಮುಖ್ಯ ವಿಧೇಯಕ ತರುತ್ತಿದೆಯೆಂದಾದರೆ ಅದನ್ನು ತಡೆಯಲು ತೋರುವ ಅಭಿವೃದ್ಧಿ ವಿರೋಧಿ ಉತ್ಸಾಹದ ಸಂದರ್ಭದಲ್ಲಿ ಮಾತ್ರ. ಕಳೆದ ಶುಕ್ರವಾರ(ಮಾರ್ಚ್ 10) ರಾಜ್ಯಸಭೆಯಲ್ಲಿದ್ದುದು ಕೇವಲ 31 ಸದಸ್ಯರು. ಅವರಲ್ಲಿ ಹೆಚ್ಚಿನವರು ನಮ್ಮ ಬಿಜೆಪಿ, ಎನ್‌ಡಿಎ ಅವರೇ!

ಕಳೆದ ಎರಡೂವರೆ ವರ್ಷಗಳಿಂದ ಇಂಥದ್ದೊಂದು ಅವಕಾಶಕ್ಕಾಗಿ ಬಿಜೆಪಿ ಕಾದು ಕುಳಿತಿತ್ತು!
ಅದಕ್ಕೂ ಮಿಗಿಲಾಗಿ ಅಂದು ಆ ವಿಧೇಯಕವನ್ನು ಪಾಸು ಮಾಡದಿದ್ದರೆ ಮಾರ್ಚ್ 14ಕ್ಕೆ ಅದು ತನ್ನ ಅಸ್ತಿತ್ವ ಕಳೆದುಕೊಂಡು ಸಾವಿರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ ಈ ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನ ಸ್ಥಾಪನೆಯ ರೂವಾರಿಗಳಲ್ಲೊಬ್ಬನಾದ ರಾಜಾ ಮೊಹಮದ್ ಅಮೀರ್ ಮೊಹಮದ್ ಖಾನ್ ಅಥವಾ ಮೊಹಮದಾಬಾದ್ ರಾಜಾನ ಉತ್ತರಾಧಿಕಾರಿಗಳ ಪಾಲಾಗುತ್ತಿತ್ತು! ಬಹುಶಃ ಕಾಂಗ್ರೆಸ್ಸಿಗೆ ಅದೇ ಬೇಕಿತ್ತು. ಹಾಗಾಗಿಯೇ ಐದು ಬಾರಿ ಮೋದಿ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕಾಗಿ ಬಂತು. ಇಷ್ಟಾಗಿಯೂ ವಿಧೇಯಕವನ್ನು ಪಾಸು ಮಾಡಲು ಕಾಂಗ್ರೆಸ್ ರಾಜ್ಯಸಭೆಯಲ್ಲಿ ಬಿಡುತ್ತಿರಲಿಲ್ಲ. ಹಾಗಾಗಿ ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಮೋದಿ ಸರಕಾರ, ಕೇವಲ 31 ಸದಸ್ಯರು ಇದ್ದ ಸಂದರ್ಭವನ್ನು ಬಳಸಿಕೊಂಡು ಕಳೆದ ಶುಕ್ರವಾರ ‘ಎನಿಮಿ ಪ್ರಾಪರ್ಟಿ ಬಿಲ್’ ಅಥವಾ ಶತ್ರು ಸ್ವತ್ತು ವಿಧೇಯಕವನ್ನು ರಾಜ್ಯಸಭೆಯಲ್ಲಿ ಪಾಸು ಮಾಡಿಕೊಂಡಿತ್ತು. ಮಾರ್ಚ್ 14ರಂದು ಲೋಕಸಭೆಯಲ್ಲೂ ಈ ವಿಧೇಯಕ ಪಾಸಾಯಿತು. ಅಲ್ಲಿಗೆ ಒಟ್ಟಾರೆ ಐದೂವರೆ ಲಕ್ಷ ಕೋಟಿ ರುಪಾಯಿ ಮೌಲ್ಯದ ಆಸ್ತಿ, 1962ರ ಚೀನಾ ಯುದ್ಧ ಹಾಗೂ 1965ರ ಪಾಕ್ ಯುದ್ಧದ ನಂತರ ಪಾಕಿಸ್ತಾನ ಹಾಗೂ ಚೀನಾಕ್ಕೆ ಪಲಾಯನ ಮಾಡಿ, ಈಗ ಆಸ್ತಿ ವಾಪಸ್ ಕೇಳಲು ಬಂದಿದ್ದವರ ಬದಲು ಭಾರತ ಸರಕಾರದ ಪಾಲಾಯಿತು!!
ಇಷ್ಟಕ್ಕೂ ಎನಿಮಿ ಪ್ರಾಪರ್ಟಿ ಬಿಲ್ ಅಥವಾ ಶತ್ರು ಸ್ವತ್ತು ವಿಧೇಯಕ ಎಂದರೇನು?

1965ರ ಯುದ್ಧದ ನಂತರ 1968ರಲ್ಲಿ ಮೊದಲಿಗೆ ಈ ಕಾಯಿದೆಯನ್ನು ಜಾರಿಗೆ ತರಲಾಯಿತು. ಅಂದರೆ ಭಾರತ-ಪಾಕಿಸ್ತಾನ ಹಾಗೂ ಭಾರತ-ಚೀನಾ ಯುದ್ಧದ ನಂತರ ಅದಕ್ಕೂ ಮೊದಲು ಭಾರತದಲ್ಲೇ ಉಳಿದಿದ್ದ ಕೆಲ ಪಾಕಿಸ್ತಾನಿಯರು ಹಾಗೂ ಚೀನಿಯರು ಆಯಾ ದೇಶಗಳಿಗೆ ವಾಪಸ್ ಹೊರಟು ಹೋದರು. ಆಗ ಅವರು ಭಾರತದಲ್ಲಿ ಹೊಂದಿದ್ದ ಆಸ್ತಿಯ ಪ್ರಶ್ನೆ ಎದುರಾಯಿತು. ದೇಶ ಇಬ್ಭಾಗವಾದ ನಂತರ, ಯುದ್ಧಗಳ ನಂತರ ಭಾರತಕ್ಕೆ ಬಂದ ನಮ್ಮವರ ಆಸ್ತಿಯನ್ನು ಪಾಕಿಸ್ತಾನ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಂಡಿತ್ತು. ಭಾರತವೂ ಹಾಗೆ ಮುಟ್ಟುಗೋಲು ಹಾಕಿಕೊಳ್ಳುವ ಕಾಯಿದೆಯನ್ನು 1968ರಲ್ಲಿ ಜಾರಿಗೆ ತಂದಿತು. ಆದರೆ ಪಾಕಿಸ್ತಾನಕ್ಕೆ ತೆರಳಿದ್ದ ಮೊಹಮದಾಬಾದ್ ರಾಜಾ ಭಾರತಕ್ಕೆ ವಾಪಸಾಗಿ ಆಸ್ತಿಯ ಮೇಲೆ ಹಕ್ಕು ಸ್ಥಾಪನೆ ಮಾಡತೊಡಗಿದ! ಆದರೆ 1968ರ ಕಾಯಿದೆ ದೇಶದಿಂದ ಹೊರಹೋದ ಮೇಲೆ ಆಸ್ತಿ ಸರಕಾರದ ಸ್ವತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದರೂ, 1973ರಲ್ಲಿ ಮೊಹಮದಾಬಾದ್ ರಾಜಾ ಸತ್ತುಹೋದ ಮೇಲೆ ಆತನ ಪತ್ನಿ ಮತ್ತು ಪುತ್ರ ಉತ್ತರಾಧಿಕಾರತ್ವದ ಪ್ರಶ್ನೆ ಎತ್ತಿಕೊಂಡು ಕೋರ್ಟ್ ಮೇಟ್ಟಿಲೇರಿದರು. ಬಹಳ ದೀರ್ಘ ಕಾಲದ ವಿಚಾರಣೆ ನಡೆದು 2005ರಲ್ಲಿ ಮೊಹಮದಾಬಾದ್ ರಾಜಾನ ಕುಟುಂಬಕ್ಕೆ ಆಸ್ತಿಯನ್ನು ಸರಕಾರ ತಕ್ಷಣ ಖಾಲಿ ಮಾಡಿಕೊಡಬೇಕೆಂದು ಕೋರ್ಟ್ ಸೂಚಿಸಿತು.

ಮತ್ತೆ ಸಮಸ್ಯೆ ಆರಂಭವಾಯಿತು. ಏಕೆಂದರೆ ಉತ್ತರ ಪ್ರದೇಶದ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ದೇಶವಿರೋಧಿ ಕುಟುಂಬಕ್ಕೆ ಬಿಟ್ಟುಕೊಡಬೇಕಾಯಿತು. ಹಾಗಾಗಿ 2010ರಲ್ಲಿ 1968ರ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ ನನೆಗುದಿಗೆ ಬಿದ್ದಿತು. ಆಗಿನ ಗೃಹಸಚಿವ ಚಿದಂಬರಂ ಸೂಕ್ತ ನಿರ್ಧಾರವನ್ನೇ ಕೈಗೊಂಡು, ಒಮ್ಮೆ ಸರಕಾರಿ ಆಸ್ತಿ ಎಂದ ಮೇಲೆ ಉತ್ತರಾಧಿಕಾರತ್ವದ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು. ಆದರೆ ಆ ತಿದ್ದುಪಡಿಗೆ ಅಂಗೀಕಾರ ದೊರೆಯಲು ಅಥವಾ ಸದನದ ಮುಂದಿಡಲು ಕಾಂಗ್ರೆಸ್ಸೇ ಬಿಡಲಿಲ್ಲ.

ಇಷ್ಟಕ್ಕೂ ಈ ಮೊಹಮದಾಬಾದ್ ರಾಜಾ ಅಥವಾ ಆತನಿಗೆ ಆಸ್ತಿ ಬಳುವಳಿಯಾಗಿ ಬಂದ ಆತನ ಪೂರ್ವಜ ರಾಜಾ ಮೊಹಮದ್ ಹಸನ್ ಖಾನ್ ಯಾರೆಂದು ಗೊತ್ತೆ? ಬ್ರಿಟಿಷರು ಯಾರನ್ನು ತಾಲೂಕುದಾರ ಎಂದು ಘೋಷಣೆ ಮಾಡಿ ಆಸ್ತಿ ಕೊಡುತ್ತಿದ್ದರು ಎಂದುಕೊಂಡಿರಿ? ಇಲ್ಲಿಂದ ಒಂದು ಸ್ವಾರಸ್ಯಕರ ಅಧ್ಯಾಯ ತೆರೆದುಕೊಳ್ಳುತ್ತದೆ. 1857ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಮೊದಲು ತಿರುಗಿ ಬಿದ್ದಿದ್ದು. ಇದಕ್ಕೆ ಅವರು ಸಿಪಾಯಿ ದಂಗೆ ಎಂದು ಹೆಸರಿಟ್ಟರು. ಈಸ್ಟ್ ಇಂಡಿಯಾ ಕಂಪನಿ ಬಹಳ ಪ್ರಯತ್ನ ಪಟ್ಟು, ಇಲ್ಲಿನ ಭಾರತೀಯರದ್ದೇ ಬೆಂಬಲ ಪಡೆದುಕೊಂಡು ಬಹಳ ಘೋರವಾಗಿ ದಂಗೆಯನ್ನು ಹತ್ತಿಕ್ಕಿತು.

ಬ್ರಿಟಿಷರು ಇಂತಿಷ್ಟು ಭೂಮಿ ತೆಗೆದುಕೊಂಡು ತಾಲೂಕು ಎಂದು ಘೋಷಣೆ ಮಾಡಿ, ಈ ದಂಗೆಯ ಬೆಂಕಿ ಆರುವುದಕ್ಕೆ ಯಾರ್ಯಾರು ಸಹಾಯ ಮಾಡಿದ್ದರೋ ಅವರಿಗೆಲ್ಲರಿಗೂ ಆ ಭೂಮಿಯನ್ನು ಹಂಚಿತ್ತು. ಆ ಭಾರತೀಯರೆಲ್ಲರೂ ಹೆಸರಿಗಷ್ಟೇ ಭಾರತೀಯರು. ಬೆಂಬಲ ಪೂರ್ತಿ ಬ್ರಿಟಿಷರಿಗೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರ ಬಗ್ಗೆ ಮಾಹಿತಿ ಕೊಟ್ಟು ಬೂಟು ನೆಕ್ಕುವುದೇ ಅವರ ಕೆಲಸ.

ಯಾರ್ಯಾರು ತಾಲೂಕುದಾರರಾಗಬೇಕೋ ಅವರೆಲ್ಲರೂ ಸನಾದ್ ಕಾಬುಲಿಯತ್ ಎಂಬ ಬಾಂಡ್ ಸಹಿ ಮಾಡಬೇಕಿತ್ತು. ಬ್ರಿಟಿಷರಿಗೆ ಯಾವಾಗಲೂ ನಿಯತ್ತಾಗಿರುವುದು, ನಿಷ್ಠೆ ಪ್ರದರ್ಶನ, ಯಾವುದೇ ಸಮಯದಲ್ಲೂ ಕಂಪನಿ ಸರಕಾರದ ಪರವಾಗೇ ಇರಬೇಕಿತ್ತು. ಒಟ್ಟಾರೆಯಾಗಿ ಜೀವನ ಪೂರ್ತಿ ಬ್ರಿಟಿಷ್ ಸರಕಾರ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿಕೊಂಡು ಬಿದ್ದಿರಬೇಕು. ಅಂಥವರಿಗೆ ತಾಲೂಕುದಾರ ಎಂಬ ಅಧಿಕಾರ ಸಿಗುತ್ತಿತ್ತು. ಒಮ್ಮೆ ಈ ಮೇಲಿನ ನಿಯಮಗಳಲ್ಲಿ ಒಂದು ಸ್ವಲ್ಪ ವ್ಯತ್ಯಾಸವಾದರೂ ಕೊಟ್ಟಿದ್ದೆಲ್ಲವನ್ನೂ ಕಿತ್ತುಕೊಂಡು ಬ್ರಿಟಿಷರು ಬರಿಗೈಯಲ್ಲಿ ವಾಪಸ್ ಕಳಿಸುತ್ತಿದ್ದರು.

ಈ ರಾಜಾ ಮೊಹಮ್ಮದ್ ಆಮಿರ್‌ನ ಪೂರ್ವಜರಾದ ಮೊಹಮದಾಬಾದ್ ರಾಜ, ಸನಾದ್ ಬಾಂಡ್‌ಗೆ ಸಹಿ ಮಾಡಿ ತಾಲೂಕುದಾರಿ ಅಧಿಕಾರವನ್ನು ಪಡೆದಿದ್ದರು. ತಾಲೂಕುದಾರರ ಪಟ್ಟಿಯ ನೋಂದಣಿ ಸಂಖ್ಯೆ 86ರಲ್ಲಿ ಅವರ ಹೆಸರು ಇನ್ನೂ ಇದೆ. ವಿಭಜನೆಯ ನಂತರ ರಾಜ್ ಮೊಹಮ್ಮದ್ ಆಮಿರ್‌ನ ಅಪ್ಪ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ನಾಗರಿಕರಾದರು. ನಮ್ಮ ಶತ್ರು ರಾಷ್ಟ್ರದಲ್ಲೂ ಅವರು ಆಸ್ತಿ ಹೊಂದಿ, ಭಾರತದ ಏಕೀಕರಣದ ವಿರುದ್ಧ ಸತತವಾಗಿ ವಿಷ ಕಾರುತ್ತಾ ಬಂದರು. ಇದಲ್ಲದೇ ಕೇವಲ ಆಸ್ತಿಗಾಗಿ ಮತ್ತೆ ಭಾರತಕ್ಕೆ ಬಂದು ಹಕ್ಕು ಚಲಾಯಿಸಲು ನಿಂತರು. ಇದು ಹೇಗೆ ಎಂದರೆ, ಪಾಕಿಸ್ತಾನಿಯನೊಬ್ಬ ಭಾರತಕ್ಕೆ ಬಂದು ಅಧಿಕಾರ ನಡೆಸಿದಂತೆ.

ಮೊಹಮದಾಬಾದ್ ರಾಜ ಪಕ್ಕಾ ಪಾಕಿಸ್ತಾನ ಪ್ರೇಮಿ ಮತ್ತು ಭಾರತ ವಿರೋಧಿ. ಆತ 1973ರಲ್ಲಿ ಲಂಡನ್‌ನಲ್ಲಿ ಮೃತಪಟ್ಟ. ಆತನ ಮಗನಾಗಿರುವ ರಾಜಾ ಮೊಹಮ್ಮದ್ ಆಮಿರ್ ಕೇಂಬ್ರಿಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದವರು ಭಾರತಕ್ಕೆ ಬಂದು ತನ್ನ ಅಪ್ಪನ ಆಸ್ತಿಯನ್ನು ತನಗೆ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಇವರು ಕೊಡುವ ಕಾರಣವೇನೆಂದರೆ, ಅವರ ತಂದೆ ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಮಗ ರಾಜಾ ಮೊಹಮ್ಮದ್ ಆಮಿರ್ ಭಾರತದಲ್ಲೇ ಇದ್ದರು. ಹಾಗಾಗಿ ಅವರ ಹೆಸರಿಗೇ ಆಸ್ತಿ ಕೊಡಬೇಕೆಂಬುದು ಅವರ ವಾದವಾಗಿತ್ತು.

ಆದರೆ 1968ರ ಎನಿಮಿ ಪ್ರಾಪರ್ಟಿ ಆ್ಯಕ್ಟ್ ಹೇಳುವುದೇನೆಂದರೆ, ಶತ್ರು ರಾಷ್ಟ್ರಗಳ ಆಸ್ತಿಯನ್ನು ಯಾರೂ ಖರೀದಿಸುವಂತೆಯೂ ಇಲ್ಲ ಅಥವಾ ಅದು ಪೂರ್ವಜರ ಆಸ್ತಿಯಾಗಿದ್ದರೂ ಅವರವರ ಕುಟುಂಬಕ್ಕೆ ಸೇರುವುದೂ ಇಲ್ಲ, ಮಾಲೀಕತ್ವವೂ ಸಿಗುವುದಿಲ್ಲ ಎಂದು. ಅದರ ಪ್ರಕಾರವೇ ಕೋಟ್ಯಂತರ ರುಪಾಯಿ ಮೌಲ್ಯದ ಭೂಮಿ, ಆಸ್ತಿಯನ್ನು ಸರಕಾರ ವಶಪಡಿಸಿಕೊಂಡಿತ್ತು. ರಾಜಾ ಮೊಹಮ್ಮದ್ ಆಮಿರ್ ಕಾಂಗ್ರೆಸ್‌ನವರು ಎಂಬ ಒಂದೇ ಒಂದು ಕಾರಣಕ್ಕೆ, ವಿಧೇಯಕ ತಿದ್ದುಪಡಿಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದಕ್ಕೆ ಕಾಂಗ್ರೆಸ್ ಬಿಡಲೇ ಇಲ್ಲ. ಹಾಗಾಗಿ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿರುವ ರಾಜಾ ಮೊಹಮ್ಮದ್ ಆಮಿರ್, ಲಕನೌ ಹೊರವಲಯದಲ್ಲಿರುವ, ತಂದೆ ರಾಜಾ ಮೊಹಮದಾಬಾದ್ ಅವರ ಮೊಹಮದಾಬಾದ್ ಕೋಟೆ ಸೇರಿದಂತೆ ಕೋಟ್ಯಂತರ ಆಸ್ತಿಯು ತಮಗೇ ಸೇರಬೇಕು ಎಂದು ಸತತವಾಗಿ ರಿಟ್ ಪೆಟಿಶನ್ ಸಲ್ಲಿಸುತ್ತಲೇ ಬಂದರು. 1997ರಲ್ಲಿ ಬಾಂಬೆ ಹೈ ಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಪೆಟಿಶನ್‌ಗೆ 2001ರಲ್ಲಿ ಜಯ ಸಿಕ್ಕಿ, ಕೇಂದ್ರ ಸರಕಾರ ಮುಂಬೈನಲ್ಲಿ ಶತ್ರು ಆಸ್ತಿ ಎಂದು ವಶಪಡಿಸಿಕೊಂಡಿರುವುದನ್ನು ವಾಪಸ್ ಕೊಡಬೇಕು ಎಂದು ಆದೇಶಿಸಿತು. ಇದನ್ನು ಬಿಜೆಪಿ ಪ್ರಶ್ನಿಸಿತ್ತು. ಪುನಃ 2005ರಲ್ಲಿ ರಾಜಾ ಮೊಹಮ್ಮದ್‌ಗೇ ಜಯ ಸಿಕ್ಕಿತ್ತು.

ರಾಜಾ ಮೊಹಮದಾಬಾದ್ ಭಾರತ ಬಿಟ್ಟು ಪಾಕಿಸ್ತಾನ ಸೇರಿದ ದಿನದಿಂದಲೇ, ಅವರ ಆಸ್ತಿಯೆಲ್ಲವೂ ಭಾರತದ ಸ್ವತ್ತಾಯಿತೇ ಹೊರತು, ಮೊಹಮದಾಬಾದ್‌ನ ಹೆಂಡತಿ, ಮಕ್ಕಳು ಇಲ್ಲಿಯೇ ಉಳಿದುಕೊಂಡರು ಎಂದ ಮಾತ್ರಕ್ಕೆ ಅಪ್ಪನ ಆಸ್ತಿಯನ್ನು ಅವರಿಗೆ ವರ್ಗಾಯಿಸುವುದಕ್ಕೆ ಹೇಗೆ ಸಾಧ್ಯ?

1947 ಇಂಡಿಪೆಂಡೆನ್ಸ್ ಆಫ್ ಇಂಡಿಯಾ ಆ್ಯಕ್ಟ್ ಯಾವಾಗ ಬಂತೋ ಆಗಲಿಂದ ಬ್ರಿಟಿಷ್ ಸರಕಾರ ಎಂಬ ಪದವೂ ದೇಶ ಬಿಟ್ಟು ತೊಲಗಿತ್ತು. ಹೀಗಾಗಿ ರಾಜಾ ಮೊಹಮ್ಮದ್ ಆಮಿರ್‌ರ ತಂದೆ ರಾಜಾ ಮೊಹಮದಾಬಾದ್ ಭಾರತಕ್ಕೆ ಶತ್ರುವಾಗಿ, ಅವರ ಅಧಿಕಾರ, ಅವರ ತಾಲೂಕುದಾರಿ ಆಸ್ತಿಯನ್ನು ಕಳೆದುಕೊಂಡು ಅದು ಭಾರತ ಸರಕಾರದ ಪಾಲಾಗಿರುತ್ತದೆ. ಈ ತಾಲೂಕುದಾರಿ ಆಸ್ತಿಯ ಮೇಲೆ ರಾಜಾ ಮೊಹಮದಾಬಾದ್ ಆಗಲಿ ಅವನ ಮಗ ರಾಜಾ ಮೊಹಮ್ಮದ್ ಆಮಿರ್‌ಗಾಗಲೀ ಯಾವುದೇ ಹಕ್ಕಿಲ್ಲ. ಹಾಗೆ ತೆಗೆದುಕೊಂಡರೆ, ಅದು ಸ್ಪಷ್ಟವಾಗಿ ಕಾನೂನಿಗೆ ವಿರುದ್ಧ.

ಭಾರತ ಸ್ವಾತಂತ್ರ್ಯದ ವಿರುದ್ಧ ಇರುವ ಭಾರತೀಯರನ್ನು ಮಾತ್ರ ಬ್ರಿಟಿಷ್ ಸರಕಾರ ತಾಲೂಕುದಾರರನ್ನಾಗಿ ಮಾಡುತ್ತಿತ್ತು ಎಂಬುದಂತೂ ಇತಿಹಾಸವೇ ನಮಗೆ ತಿಳಿಸಿದೆ. ಹೀಗೆ ಬ್ರಿಟಿಷರಿಗೆ ಸಹಾಯ ಮಾಡಿ ತಾಲೂಕುದಾರಿ ಆಸ್ತಿ ಗಳಿಸಿ ಮತ್ತೆ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿ, ಯಾವಾಗ ಭಾರತದ ಏಕೀಕರಣದ ವಿರುದ್ಧ ಮಾತಾಡಿದರೋ ಆಗಲೇ ಇಲ್ಲಿರುವ ಅವರ ಆಸ್ತಿಯ ಮೇಲಿನ ಹಕ್ಕನ್ನು ಅವರು ಕಳೆದುಕೊಂಡು ಬಿಟ್ಟರು. ವಿಭಜನೆಯ ಸಮಯದಲ್ಲಿ ಕೆಲವರು ಭಾರತದಲ್ಲಿರಲು ಇಚ್ಛಿಸಿದಾಗ ಅವರೆಲ್ಲರೂ ತಮ್ಮ ಆಸ್ತಿಯನ್ನು ಪಾಕಿಸ್ತಾನದಲ್ಲೇ ಬಿಟ್ಟು ಬಂದಿದ್ದರು. ಆಗ ಪಾಕಿಸ್ತಾನ ಆ ಭೂಮಿ, ಆಸ್ತಿಯನ್ನೆೆಲ್ಲ ಮುಟ್ಟುಗೋಲು ಹಾಕಿಕೊಂಡು, ಸರಕಾರಿ ಜಾಗವನ್ನಾಗಿ ಮಾಡಿಕೊಂಡಿತು. ಅದೇ ರೀತಿ ಭಾರತದಲ್ಲು ಸಹ ಆಗುತ್ತಿರುವುದು. ಆದರೆ ಶತ್ರು ರಾಜನ ಮಗನೊಬ್ಬ, ಅಪ್ಪ ಭಾರತೀಯರ ವಿರುದ್ಧದ ಮಸಲತ್ತಿನಿಂದಲೇ ಮಾಡಿದ ಆಸ್ತಿಗಾಗಿ ಈ ಪಾಟಿ ಪೆಟಿಶನ್ ಮೇಲೆ ಪೆಟಿಶನ್ ಸಲ್ಲಿಸಿ ಆಸ್ತಿ ಲಪಟಾಯಿಸುವುದಕ್ಕೆ ಮಾಡುತ್ತಿರುವ ಪ್ರಯತ್ನವೇ ಅಚ್ಚರಿ ತರಿಸುತ್ತದೆ. ಅದು ಒಂದೆರಡು ಎಕರೆ ಅಲ್ಲ ನೋಡಿ, ಸಾವಿರಾರು ಎಕರೆ. ಇಂದು ಅವುಗಳ ಬೆಲೆ ಲಕ್ಷ ಕೋಟಿಯಷ್ಟಿದೆ.

ಹೇಳಿ, ಇಂಥವರ ಆಸ್ತಿಯನ್ನು ಭಾರತ ಸರಕಾರ ವಶಪಡಿಸಿಕೊಂಡಿದ್ದರಲ್ಲಿ ತಪ್ಪೇನಿದೆ?
ಕೊನೆಯದಾಗಿ ಒಂದು ವಿಚಾರ ಗಮನಿಸಿ: ಒಬ್ಬ ದೇಶದ ಆಸ್ತಿಯನ್ನು ಲಪಟಾಯಿಸುತ್ತಿರುವಾಗ ಅದನ್ನು ತಡೆದು, ದೇಶಕ್ಕೆ ನ್ಯಾಯ ಒದಗಿಸುವ ಬದಲು, ವಿಧೇಯಕ ತಿದ್ದುಪಡಿಯನ್ನು ಪಾಸು ಮಾಡಲು ಬಿಡದೇ, ಅಂಥವರಿಗೆ ಬೆಂಬಲಿಸುತ್ತಿರುವ ಕಾಂಗ್ರೆಸಿಗರ ಮನಸ್ಥಿತಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ! ಛೇ!

20170318_072320

Comments are closed.