Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ!

ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ!

ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ!

ಇತ್ತೀಚೆಗೆ ಖ್ಯಾತ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ನಮ್ಮ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಚುಕ್ಕಾಣಿ ಹಿಡಿದಿರುವ ಡಾ. ಮಧುಕರ್ ಶೆಟ್ಟಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರನ್ನು ಭೇಟಿಯಾಗುವುದೆಂದರೆ ಒಬ್ಬ ಪ್ರಖ್ಯಾತ ಪ್ರೊಫೆಸರ್‌ನ ಬಳಿ ಕುಳಿತು ಜ್ಞಾನವರ್ಧನೆ ಮಾಡಿಕೊಂಡಂತೆ. ಒಂಥರಾ  enriching experience ಆಗುತ್ತದೆ. ಮೊನ್ನೆ ಸಿಕ್ಕಾಗಲೂ ಅದೇ ತೆರನಾದ ಅನುಭವವಾಯಿತು. ಒಬ್ಬ ರಾಜಕಾರಣಿ, ಆತ ಎಂಎಲ್‌ಎಯೋ, ಎಂಪಿಯೋ ಅಥವಾ ಸಚಿವರೋ, ಯಾರೇ ಆಗಿದ್ದರೂ ಪ್ರಾಮಾಣಿಕರಾಗಿದ್ದರೆ ಅಧಿಕಾರಿಗಳೂ ಮಾತು ಕೇಳುತ್ತಾರೆ, ಅದರಿಂದ ಒಳ್ಳೆಯ ಕೆಲಸಗಳೂ ಆಗುತ್ತವೆ, ನಮಗೂ ಯೋಗ್ಯರ ಜತೆ ಕೆಲಸ ಮಾಡುತ್ತಿದ್ದೇವೆ ಹಾಗೂ ಯೋಗ್ಯ ಕೆಲಸ ಮಾಡಿದರೆ ಮನ್ನಣೆ ಸಿಗುತ್ತದೆ ಎಂಬ ಒಳ್ಳೆಯ ಭಾವನೆಯೂ ಇರುತ್ತದೆ ಎಂದರು.
ಒಬ್ಬ ರಾಜಕಾರಣಿ ಪ್ರಾಮಾಣಿಕನಾಗಿದ್ದರೆ ಸಮಾಜಕ್ಕೆ ಎಷ್ಟೆಲ್ಲಾ ಒಳ್ಳೆಯದಾಗಬಹುದು ಎಂಬ ಯೋಚನೆ ಕಾಡತೊಡಗಿತು. ಅವರ ಮಾತನ್ನು ಕೇಳಿ ಹೊರಬಂದಾಗ ಪ್ರಾಮಾಣಿಕತೆ ಎಂದ ಕೂಡಲೇ ಕಣ್ಣಮುಂದೆ ಬಂದವರು ಡಿವಿಜಿ! ಆಗಷ್ಟೇ ಡಿವಿಜಿ 80ಕ್ಕೆ ಕಾಲಿಟ್ಟಿದ್ದರು. ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಒಟ್ಟು ಸೇರಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಒಂದು ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು. ಬರವಣಿಗೆಯಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆರ್ಥಿಕತೆ ಅಷ್ಟೇ ದೊಡ್ಡ ಸಮಸ್ಯೆಯಾಗಿ ಡಿವಿಜಿ ಅವರನ್ನು ಕಾಡುತ್ತಿತ್ತು. ಅದು ಸ್ನೇಹಿತರೆಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಸ್ವಲ್ಪವಾದರೂ ಸಹಾಯವಾಗಲಿ, ಗೌರವಧನ ನೀಡೋಣ ಎಂದು ಒಂದಿಷ್ಟು ಹಣವನ್ನು ಒಟ್ಟು ಹಾಕಿದ್ದರು. ಕಾರ್ಯಕ್ರಮದ ವೇಳೆ ಗೌರವ ಹಾಗೂ ಪ್ರೀತಿಪೂರ್ವಕವಾಗಿ ಅದನ್ನು ಡಿವಿಜಿಯವರಿಗೆ ಅರ್ಪಿಸಲಾಯಿತು. ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ-ಒಂದು ಲಕ್ಷ ರುಪಾಯಿ!
ನೀವೇ ಯೋಚನೆ ಮಾಡಿ, ನಲವತ್ಮೂರು ವರ್ಷಗಳ ಹಿಂದೆ ಒಂದು ಲಕ್ಷ ರುಪಾಯಿ?! ಡಿವಿಜಿಯವರ ಮನೆಯಿದ್ದಿದ್ದು ಬೆಂಗಳೂರಿನ ಬಸವನಗುಡಿಯ ನಾಗಸಂದ್ರ ರಸ್ತೆಯಲ್ಲಿ (ಈಗಿನ ಡಿವಿಜಿ ರಸ್ತೆ). ಅಲ್ಲೊಂದು ದಿನಸಿ ಅಂಗಡಿಯಿತ್ತು. ಡಿವಿಜಿಯವರು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದುದು ಅಲ್ಲಿಯೇ. ಸನ್ಮಾನ ಸಮಾರಂಭದ ಮರುದಿನ ಡಿವಿಜಿ ಮನೆಗೆಲಸದ ಹುಡುಗ ಕರುಬಯ್ಯ ಚೀಟಿ ಹಿಡಿದುಕೊಂಡು ದಿನಸಿ ಅಂಗಡಿಗೆ ಬಂದ. ಸುಧಾ ಪತ್ರಿಕೆಯ ಸಂಪಾದಕರಾಗಿದ್ದ ಇ.ಆರ್. ಸೇತುರಾಮ್ ಅಲ್ಲೇ ಸಿಗರೇಟು ಸೇದುತ್ತಾ ನಿಂತಿದ್ದರು. ಆ ಹುಡುಗ ಡಿವಿಜಿ ಮನೆಯವನು ಎಂದು ಗೊತ್ತಾಯಿತು. ಚೀಟಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿತು. ಅಂಗಡಿಯಾತನ ಬಳಿ ಕೇಳಿಯೇ ಬಿಟ್ಟರು. ‘ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ಕಾಫಿ ಪುಡಿ, ಸಕ್ಕರೆ ಕೊಟ್ಟರೆ ನಾಳೆ ಬಿಲ್ ಕೊಡುತ್ತೇನೆ’!
ಮುಂದೊಂದು ದಿನ ಈ ಘಟನೆಯ ಬಗ್ಗೆ ಸೇತುರಾಮ್ ಹೀಗೆ ಬರೆಯುತ್ತಾರೆ-‘ನಿನ್ನೆ ಒಂದು ಲಕ್ಷ ರುಪಾಯಿ ಕೊಟ್ಟಾಗ ಅದು ನನ್ನದಲ್ಲ ಎಂದು ಕೊಟ್ಟವರು, ಆ ಬಗ್ಗೆ ಯಾವ ಬೇಸರವೂ ಇಲ್ಲದವರು ಡಿವಿಜಿ. ಇವತ್ತು ಕಾಫಿ ಪುಡಿ ಖರ್ಚಿಗೂ ಅವರ ಬಳಿ ದುಡ್ಡಿಲ್ಲ. ಇದು ಅವರ ನಿಸ್ಪಹತೆಯನ್ನು ತೋರಿಸುತ್ತದೆ’. ಹೌದು, ಸನ್ಮಾನದ ಸಂದರ್ಭದಲ್ಲಿ ಡಿವಿಜಿಗೆ 1 ಲಕ್ಷ ರುಪಾಯಿ ನೀಡಿದ್ದು ನಿಜ. ಅದನ್ನು ನೋಡಿ ಅವರು ಹಿರಿಹಿರಿ ಹಿಗ್ಗಲಿಲ್ಲ. ಬಹುಶಃ ಮೊತ್ತ ಈ ಪರಿ ಇರಬಹುದೆಂದು ಅವರು ಊಹಿಸಿದ್ದಿಲ್ಲವಾದರೂ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಡಿವಿಜಿಗೆ ಮೊದಲೇ ಗೊತ್ತಾಗಿತ್ತು. ಏನನ್ನೂ ಕೊಡಕೂಡದು, ನಾನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಇಷ್ಟಾಗಿಯೂ ಒಂದು ಲಕ್ಷವನ್ನು ಕೈಗಿತ್ತಾಗ ಅದರಲ್ಲಿ ಚಿಕ್ಕಾಸನ್ನೂ ತೆಗೆದುಕೊಳ್ಳದೆ ಇಡಿಯಾಗಿ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಅಭಿವೃದ್ಧಿಗೆ ಕೊಟ್ಟು ವೇದಿಕೆಯಿಂದ ಕೆಳಗಿಳಿದಿದ್ದರು ಡಿವಿಜಿ! ಇವತ್ತು  Paid News  ಹಾಗೂ  Journa ಗಳ ಬಗ್ಗೆ, ಅದನ್ನು ತಡೆಯುವ ಪರಿಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ನಮ್ಮ ದರಿದ್ರ ರಾಜಕೀಯವಂತೂ ರಿಯಲ್ ಎಸ್ಟೇಟು, ಕಾಂಟ್ರ್ಯಾಕ್ಟು, ಕಮಿಷನ್ನು ಎನ್ನುವ ಭ್ರಷ್ಟರ ಕೂಪವಾಗಿದೆ. ಆದರೆ ಅವತ್ತು ಕೈಗಿತ್ತ 1 ಲಕ್ಷ, ಇವತ್ತಿನ ಕೋಟಿಗೂ ಮೀರಿದ ಮೊತ್ತ. ಬಡತನ ಬೆನ್ನಿಗೆ ಅಂಟಿಕೊಂಡಿದ್ದ ಸಂದರ್ಭದಲ್ಲೂ ಡಿವಿಜಿ ದುಡ್ಡಿನ ಮುಂದೆ ಶರಣಾಗಲಿಲ್ಲ. ಈ ದೇಶದ ಅಗ್ರಮಾನ್ಯ ಪತ್ರಕರ್ತರಲ್ಲಿ ಒಬ್ಬರೆನಿಸಿಕೊಂಡಿದ್ದ ಡಿವಿಜಿಯವರ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣಬಹುದು. ಬಡತನ ಬೆನ್ನಿಗಂಟಿಕೊಂಡಿತ್ತು.
ಒಮ್ಮೆ ವಿಶ್ವೇಶ್ವರಯ್ಯನವರು ಡಿವಿಜಿ ಅವರೊಡನೆ ಮಾತನಾಡುತ್ತಾ ‘ನಾನು ನಿನ್ನ ಮನೆಗೊಂದು ದಿನ ಭೇಟಿ ನೀಡಬೇಕು’ ಎಂದರು. ಕೂಡಲೇ ಎದ್ದು ವಂದಿಸಿದ ಡಿವಿಜಿ ‘ಕ್ಷಮಿಸಬೇಕು, ತಾವು ನನ್ನ ಮನೆಗೆ ಬರಬಾರದು’ ಎಂದು ವಿನಂತಿಸಿದರು. ವಿಶ್ವೇಶ್ವರಯ್ಯನವರಿಗೆ ಅಚ್ಚರಿ, ಕೌತುಕ. ತಮ್ಮನ್ನು ಮನೆಗೆ ಬರಬೇಡಿರೆಂದು ಹೇಳಿದವರು ಯಾರೂ ಇಲ್ಲ. ‘ಇದೇನಿದು! ಯಾರಾದರೂ ಬರುತ್ತೇನೆನ್ನುವ ಗೆಳೆಯರನ್ನು ನೇರವಾಗಿಯೇ ತಡೆಯುವುದುಂಟೇ?’ ಎಂದು ತತ್‌ಕ್ಷಣ ಪ್ರಶ್ನಿಸಿದ್ದರು. ಡಿವಿಜಿ ಇದೀಗ ವಿವರಿಸಿದರು ‘ದಿಟವೇ, ತಾವು ಕಾಲಿಟ್ಟ ಕಡೆ ಶುಭ, ಸಂಪದ, ಸೌಖ್ಯಗಳು ಬೆಳಗುತ್ತವೆ. ಆದರೆ ನನ್ನ ಕಾರಣ ಬೇರೆಯಿದೆ. ತಾವು ನನ್ನ ಮನೆಗೆ ಬಂದರೆ ತಮಗೆ ಮುರುಕಲು ಕುರ್ಚಿ- ಹರಕಲು ಚಾಪೆಗಳಲ್ಲದೆ ಬೇರೆ ಇಲ್ಲ. ನನ್ನ ಚಿಂದಿ ಬದುಕು ನಿಮಗೆ ದುಃಖ ತರುತ್ತದೆ. ನನ್ನನ್ನು ಒಳ್ಳೆಯ ಸಂಪಾದನೆಯ ತಾಣಗಳಿಗೆ ಸೇರಿಸಬೇಕೆಂದು ತಾವು ಹಿಂದೆ ಮಾಡಿದ ಪ್ರಯತ್ನಗಳೂ ನನ್ನ ಮೂರ್ಖತನವು ಅವುಗಳನ್ನೆಲ್ಲ ಒಲ್ಲೆನೆಂದ ಪರಿಯೂ ತಮಗೆ ನೆನಪಾಗಿ ಬೇಸರವಾಗುತ್ತದೆ. ಅದಕ್ಕೆಲ್ಲ ಅವಕಾಶವಾಗಬಾರದು.
ಹೀಗಾಗಿ ತಾವಿದ್ದಲ್ಲಿಗೆ ನಾನು ಬಂದು ತಮ್ಮ ಯಾವ ಆದೇಶವನ್ನೂ ನಡೆಸುತ್ತೇನೆ, ಮನ್ನಿಸಬೇಕು?’. ‘ಹೌದು, ಹೌದು. ನೀನು ಮೂರ್ಖ,  obstinate’  ಎಂದು ನಿರುಪಾಯಕರಾದ ಮೆಚ್ಚುಗೆಯ ಪೆಚ್ಚುನಗೆಯಿಂದ ವಿಶ್ವೇಶ್ವರಯ್ಯನವರು ಮಾತು ಮುಗಿಸಿದರು.
ನಮಗೆಲ್ಲರಿಗೂ ತಿಳಿದಂತೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಾಮಾಣಿಕತೆ, ಪರಿಶುದ್ಧತೆ ಹಾಗೂ ನಿಸ್ವಾರ್ಥಗಳ ಪರಮಾದರ್ಶ. ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಬಂಧುಗಳೆಲ್ಲರನ್ನೂ ಮನೆಯ ಹಜಾರದಲ್ಲಿ ಸೇರಿಸಿ ತಾಯಿ ವೆಂಕಜ್ಜಮ್ಮನವರನ್ನು ‘ನೀನು ಇವರ್ಯಾರ ಪರವಾಗಿ ಕೂಡ ಶಿಫಾರಸು ಮಾಡಲು ನನ್ನ ಬಳಿ ಬರಬಾರದು’ ಎಂದು ಮಾತು ತೆಗೆದುಕೊಂಡೇ ಮುಂದಿನ ಕೆಲಸಕ್ಕೆ ಕೈ ಹಾಕಿದ ಮಹನೀಯರು. ಇಂಥ ವಿಶ್ವೇಶ್ವರಯ್ಯನವರಿಗೂ ಸವಾಲಾಗುವಂಥ ನಿಸ್ಪಹತೆ ಡಿವಿಜಿಯವರದು.
ಲಾಹೋರಿನ ‘ಟ್ರಿಬ್ಯೂನ್’ ಎಂಬ ರಾಷ್ಟ್ರಮಟ್ಟದ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಯ ಸಂಪಾದಕರಾಗಲು ಅರ್ಹ ವ್ಯಕ್ತಿಗಳನ್ನು ಸೂಚಿಸಬೇಕಾಗಿ ಅದರ ಮಾಲೀಕರು ವಿಶ್ವೇಶ್ವರಯ್ಯನವರನ್ನು ಕೇಳಿದರು. ಇವರಿಗಾಗ ಮೊದಲು ಹೊಳೆದ ಹೆಸರು ಡಿವಿಜಿ. ಈ ಸೂಚನೆಯನ್ನು ಟ್ರಿಬ್ಯೂನ್ ಪತ್ರಿಕೆಯ ವ್ಯವಸ್ಥಾಪಕರೂ ಬಹುವಾಗಿ ಸಂತೋಷಿಸಿ ಒಪ್ಪಿದರು. ದೊಡ್ಡ ಸ್ಥಾನ, ಹೆಸರು, ಹಣ, ಸಂಪರ್ಕಗಳೆಲ್ಲ ಸಿದ್ಧಿಸುವ ಆ ಉದ್ಯೋಗವು ಅಂದು ಯಾವುದೇ ಪತ್ರಕರ್ತನಿಗೆ ಪ್ರಲೋಭನೀಯವಾಗಿತ್ತು. ಡಿವಿಜಿಯವರ ಆರ್ಥಿಕ ಪರಿಸ್ಥಿತಿಯಂತೂ ಎಂದಿನಂತೆ ತೀರಾ ಅತಂತ್ರವಾಗಿಯೇ ಇತ್ತು. ಈ ಕಾರಣದಿಂದಲಾದರೂ ಅವರು ಒಪ್ಪಿಯಾರೇ ಎಂಬ ಕುಡಿಯಾಶೆ ವಿಶ್ವೇಶ್ವರಯ್ಯನವರದು. ಆದರೆ ಡಿವಿಜಿ ಖಂಡತುಂಡವಾಗಿ ಈ ಅವಕಾಶವನ್ನು ನಿರಾಕರಿಸಿದರು.
‘ನಾನು ಹೇಗೋ ಹೊಟ್ಟೆ ಹೊರೆದುಕೊಳ್ಳುತ್ತೇನೆ. ಬೀದಿಯಲ್ಲಿ ಬಿದ್ದು ಒದ್ದಾಡಿ ತೊಂಡುತೊಂಡಾಗಿ ಬೆಳೆದ ಈ ಜೀವಕ್ಕೆ ಅಂಥ ದೊಡ್ಡ ಪದವಿ- ಪ್ರತಿಷ್ಠೆಗಳು ಒಗ್ಗುವುದಿಲ್ಲ’ ಎಂದಿದ್ದರು. ಈ ಮೂಲಕವಾಗಿ ಅವರು ತಮ್ಮ ಸ್ವಾತಂತ್ರ್ಯ, ನಿರ್ಭೀತಿ, ನಿಸ್ಪಹತೆಗಳನ್ನೂ ಕಾಯ್ದುಕೊಂಡರು. ಹೀಗಾಗಿಯೇ ಮಹಾರಾಜರಿಗಾಗಲಿ, ದಿವಾನರುಗಳಾಗಲಿ ರೆಸಿಡೆಂಟ್- ವೈಸ್‌ರಾಯ್ ವರ್ಗದವರಿಗಾಗಲಿ ತಮ್ಮ ನಿಷ್ಪಾಕ್ಷಿಕವೂ ನಿಷ್ಠುರವೂ ಆದ ಅಭಿಪ್ರಾಯಗಳನ್ನು ಕೊಡಲು ಸಾಧ್ಯವಾಯಿತು.
ಗಾಂಧೀಜಿಯವರ ಬಗೆಗೆ ಗುಂಡಪ್ಪನವರಿಗೆ ತುಂಬ ಗೌರವ. ಬೆಂಗಳೂರಿಗೆ ಅವರನ್ನು ಮೊತ್ತ ಮೊದಲು (1915ರಲ್ಲಿ) ಕರೆಯಿಸಿದವರೆ ಡಿವಿಜಿ. ಗಾಂಧಿಯವರು ಅಂದು ಅನಾವರಣ ಮಾಡಿದ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವು ಇಂದೂ ಡಿವಿಜಿಯವರು ಕಟ್ಟಿದ ಸಂಸ್ಥೆಯ ಸಭಾಮಂಟಪದಲ್ಲಿ ದರ್ಶನೀಯ ಮಾತ್ರವಲ್ಲ, ಅನೇಕ ರಾಜನೈತಿಕ ವಿಚಾರಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಗಾಂಧಿಯವರೊಡನೆ ಡಿವಿಜಿ ಪ್ರತ್ಯಕ್ಷ- ಪರೋಕ್ಷ ರೀತಿಗಳಿಂದ ತೊಡಗಿಕೊಂಡಿದ್ದರು. ಅವರ ಪ್ರಥಮ ಕವಿತಾ ಸಂಗ್ರಹ ವಸಂತ ಕುಸುಮಾಂಜಲಿಯಲ್ಲಿಯೇ ಗಾಂಧಿಯವರ ಬಗೆಗೊಂದು ಸೀಸ ಪದ್ಯವುಂಟು. ಅಲ್ಲದೇ ಗಾಂಧೀಜಿ ತೀರಿಕೊಂಡಾಗ ‘ಗಾಂಧಿಜ್ಞಾಪಕ ಪದ ಸಂಗ್ರಹವೆಂಬ ಮತ್ತೊಂದು ಕಂದಪದ್ಯಗಳ ಕವಿತೆಯನ್ನು ಪ್ರಕಟಿಸಿದ್ದರು. ಅಷ್ಟೇಕೆ, ಗಾಂಧಿಯವರ ಐತಿಹಾಸಿಕವಾದ ಇಪ್ಪತ್ತೊಂದು ದಿನಗಳ ದೀರ್ಘೋಪವಾಸ ಸತ್ಯಾಗ್ರಹವು ಮುಗಿದು ಅವರು ಪ್ರಾಣಾಪಾಯವಿಲ್ಲದೆ ಹೊರ ಬಂದಾಗ ‘ಧನ್ಯವಾದ ಸಮರ್ಪಣೆ’ ಎಂಬ ಕವಿತೆಯನ್ನು ಡಿವಿಜಿ ಬರೆದಿದ್ದಾರೆ. ಇದು ಅವರ ಉಪವಾಸ ಮುಗಿದಂದೇ ರಚಿತವಾಗಿ, ಮುದ್ರಿತವೂ ಆಗಿತ್ತು. Not for  publicaion (ಬಹಿರಂಗ ಪ್ರಕಟಣೆಯಲ್ಲವೆಂಬ) ಒಕ್ಕಣೆ ಕೂಡ ಆ ಕರಪತ್ರದ ಮೇಲೆ ಅಚ್ಚಾಗಿದೆ. ‘ನಮ್ಮುಸಿರ ಹೂವು, ನಮ್ಮ ಬಾಳ್ ಅವನು, ನಮ್ಮೊಬ್ಬ ಗುರು, ನರಕುಲದ ಶಿರ, ದೈವ ಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೇ’ ಎಂದು ಅವರನ್ನೆಷ್ಟು ಬಗೆಯಲ್ಲಿ ಗೌರವಿಸಿದ್ದರೂ ಅವರ ಕೆಲವು ನಿಲುವುಗಳ ಬಗೆಗೆ ಡಿವಿಜಿಯವರ ತೀವ್ರ ವಿರೋಧವಿದ್ದಿತು. ಇದನ್ನವರು ದಾಖಲಿಸಿಯೂ ಇದ್ದಾರೆ.
ಒಮ್ಮೆ ಆಕಾಶವಾಣಿಯವರು ಗುಂಡಪ್ಪನವರನ್ನು ಗಾಂಧಿಯವರ ಉಪವಾಸಗಳನ್ನು ಕುರಿತು ಮಾತನಾಡಬೇಕಾಗಿ ಕೋರಿದಾಗ ಇವರು ಬರೆದ ಪತ್ರ ತುಂಬ ಮಾರ್ಮಿಕವಾಗಿದೆ. ‘ನನಗೆ ಉಪವಾಸಗಳಲ್ಲಿ ನಂಬಿಕೆಯಿಲ್ಲ. ನಾನು ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿ ಬೆಳೆದವನು. ಅಲ್ಲದೆ, ನಾನು ಗಾಂಧಿಯವರ ಅನುಯಾಯಿಯೂ ಅಲ್ಲ. ಹೀಗಾಗಿ, ತಮ್ಮ ಆಹ್ವಾನವನ್ನು ಸ್ವೀಕರಿಸಲಾಗುತ್ತಿಲ್ಲ.
ಸುಪ್ರಸಿದ್ಧ ಅಂಕಣಕಾರರೂ ಕನ್ನಡದ ಕಟ್ಟಾಳು ಆಗಿದ್ದ ಹಾ.ಮಾ. ನಾಯಕರು ಅದೊಮ್ಮೆ ಡಿವಿಜಿಯವರನ್ನು ಕಾಣಲು ಹೋದರು. ಆಗಷ್ಟೇ ಹಸನಾದ ಬಿಸಿ ಬಿಸಿ ಜಿಲೇಬಿಯನ್ನು ತಾವೊಲಿದ ಅಂಗಡಿಯಿಂದ ತರಿಸಿ ಇನ್ನೇನು, ತಿನ್ನುವ ಹವಣಿನಲ್ಲಿ ಗುಂಡಪ್ಪನವರಿದ್ದರು. ನಾಯಕರನ್ನು ಕಂಡೊಡನೆಯೇ ಸ್ವಾಗತಿಸಿ ಅವರಿಗೂ ಜಿಲೇಬಿಗಳನ್ನು ಕೊಟ್ಟರು. ನಾಯಕರು ರಸ ತುಂಬಿದ ಆ ಬಂಗಾರದ ಬಣ್ಣದ ಗರಿಗರಿ ಸುರುಳಿಗಳನ್ನು ಸವಿಯುತ್ತಲೇ ಕೇಳಿದರು: ‘ಸರ್! ಈ ಪಾಟಿ ಜಿಡ್ಡು, ಸಕ್ಕರೆ ಎಲ್ಲ ತುಂಬಿದ ಈ ತಿಂಡಿಗಳು ನಿಮ್ಮ ಆರೋಗ್ಯಕ್ಕೆ ಅಪಥ್ಯ ಅಂತ ವೈದ್ಯರು ಹೇಳಿದ್ದಾರಲ್ಲಾ! ಮತ್ತಿದು ಹೇಗೆ?’ ಡಿವಿಜಿಯವರಾದರೋ ತಮ್ಮ ಬಲಗೈಯಿಂದ ಆ ಮಧುರ ಖಾದ್ಯವನ್ನು ಲೀಲಾಜಾಲವಾಗಿ ಕಬಳಿಸುತ್ತಲೇ ಸವಿನಗುವಿನೊಡನೆ ನುಡಿದರಂತೆ: ‘ನೋಡಿ ನಾಯಕರೆ! ಇಲ್ಲೆಲ್ಲ ಅದ್ವೈತ ಮಾಡಬಾರದು.
ಆರೋಗ್ಯ ಬೇರೆ, ಬಾಯಿ ರುಚಿಯೇ ಬೇರೆ! ಇದು ಅಪ್ಪಟ ದ್ವೈತ. ಅನಾರೋಗ್ಯ ಚಿಕಿತ್ಸೆಗಾಗಿ ಕಹಿಯಾದ ಔಷಧ, ನೋಯಿಸುವ ಚುಚ್ಚುಮದ್ದು ಮತ್ತು ತೀವ್ರವಾದ ಶಸ್ತ್ರಚಿಕಿತ್ಸೆಗಳ ‘ಕೋಟಾ'(quota)ನೇ ಬೇರೆ. ಜಿಲೇಬಿ, ಬೋಂಡ, ಪಕೋಡ, ಹಲ್ವಗಳಂಥ ರುಚಿ ರುಚಿಯಾದ ಪರುಠವಣೆಗಳ ಕೋಟಾನೇ ಬೇರೆ. ಎರಡನ್ನೂ ಬೆರೆಸಬಾರದು. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು. ಒಂದು ಮತ್ತೊಂದನ್ನು ಪ್ರಶ್ನಿಸುವಂತಿಲ್ಲ. ನನ್ನ ದೇಹದಲ್ಲಿ ಇವೆರಡಕ್ಕೂ ಬೇರೆ ಬೇರೆ ಚಾನಲ್‌ಗಳೇ ಇವೆ’!
ಹಾ.ಮಾ. ನಾಯಕರು ಹತಾಶೆಯ ನಗೆ ನಕ್ಕು ಸುಮ್ಮನಾಗಿರಬೇಕು. ಡಿವಿಜಿಯವರಲ್ಲಿ ಅಪರಿಮಿತ ಹಾಸ್ಯಪ್ರಜ್ಞೆ ಇತ್ತು. ಕೆಲವೊಮ್ಮೆ ತಮ್ಮನ್ನೇ ವಸ್ತುವಾಗಿಸಿಕೊಳ್ಳುತ್ತಿದ್ದರು. ಬನ್ನೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏನಾದರೂ ಸಂದೇಶ ಬರೆದುಕೊಡಿ ಎಂದು ಬಂದಾಗ, ಗುಂಡಪ್ಪನಾದೊಡೇಂ ಕುಂಡೆಯದು ನೋಯದೇ? ಎಂದು ಬರೆದುಕೊಟ್ಟು, ತಾಕತ್ತಿದ್ದರೆ ಓದಿ ಎಂದಿದ್ದರು. ಆ ಸಂದರ್ಭದಲ್ಲಿ ಡಿವಿಜಿಯವರಿಗೆ ಮೂಲವ್ಯಾಧಿಯಾಗಿತ್ತು! ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಇಸ್ಮಾಯಿಲರಿಗಾಗಲಿ ಪುಟ್ಟಣ ಚೆಟ್ಟಿಯವರೇ ಮುಂತಾದ ಇನ್ನಿತರ ಅನೇಕ ಸಾರ್ವಜನಿಕ ಮಹನೀಯರಿಗಾಗಲಿ ರಾಜ್ಯಶಾಸ್ತ್ರ-ಅರ್ಥಶಾಸ್ತ್ರ-ಪತ್ರಿಕೋದ್ಯಮ-ಸಮಾಜಶಾಸ್ತ್ರವೇ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪರಿಪರಿಯಾದ ಸಲಹೆ- ಸೂಚನೆಗಳನ್ನೂ ನೆರವು- ನೇರ್ಪುಗಳನ್ನೂ ಮಾಡಿಕೊಡುತ್ತಿದ್ದವರು ಡಿವಿಜಿ.
ಇಂಥ ಕೆಲಸಗಳಿಗೆ ತುಂಬ ಸಮಯ- ಶ್ರದ್ಧೆ- ಅಧ್ಯಯನಗಳೂ ಮೇಲ್ಮಟ್ಟದ ವಿವೇಚನೆ- ವಿಶ್ಲೇಷಣೆಗಳೂ ಬೇಕಾಗುತ್ತಿದ್ದವು. ಈ ಎಲ್ಲ ಪರಿಶ್ರಮ- ಸಹಕಾರಕ್ಕಾಗಿ ಇಂಥ ಹಿರಿಯರು ಗುಂಡಪ್ಪನವರಿಗೆ ಗೌರವಧನವೆಂದು ಎಷ್ಟನ್ನೂ ಕೊಡಲು ಸಿದ್ಧವಿರುತ್ತಿದ್ದರು. ಆದರೆ, ಡಿವಿಜಿ ಮಾತ್ರ ಇವಾವುದನ್ನೂ ಒಲ್ಲೆನೆಂದು ಖಂಡ- ತುಂಡವಾಗಿ ನಿರಾಕರಿಸುತ್ತಿದ್ದರು: ‘ನಿಮ್ಮಂಥ ಹಿರಿಯರಿಗೆ, ಈ ತೆರನಾದ ಸಾರ್ವಜನಿಕ ಹಿತಕಾರ್ಯಗಳಿಗೆ ನೆರವಾಗುವುದೇ ಒಂದು ಸೌಭಾಗ್ಯ. ಇದಕ್ಕೆ ಮಿಗಿಲಾಗಿ ಮತ್ತೇನೂ ಬೇಡ! ಸೇವೆಗೆ ಪ್ರತಿಫಲವಿಲ್ಲ- ಇದು ಡಿವಿಜಿಯವರದೇ ಧ್ಯೇಯ ವಾಕ್ಯ. ಆದರೆ ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಅವರಾಗಲಿ ಇದನ್ನೊಪ್ಪಲು ಸಿದ್ಧವಿರಲಿಲ್ಲ: ‘ಯಾವುದೇ ಯುಕ್ತ ರೀತಿಯ ನೆರವಿಗೆ ಸೂಕ್ತ ಗೌರವ ಸಲ್ಲಬೇಕು. ಇಲ್ಲವಾದಲ್ಲಿ ಮುಂದೆ ನಿಮ್ಮಿಂದ ನಾವು ಇನ್ನಾವ ರೀತಿಯ ನೆರವನ್ನೂ ಪಡೆಯುವುದು ಕಷ್ಟವಾಗುತ್ತದೆ. ಅಲ್ಲದೆ ಇಂಥ ತಜ್ಞಸಂಭಾವನೆ- ಗೌರವ ಧನಗಳೂ ವಿವಿಧ ಸಾರ್ವಜನಿಕ ಕಾರ್ಯಗಳ ಬಜೆಟ್ಟಿನಲ್ಲಿ ಸೇರಿರುತ್ತವೆ. ಆದುದರಿಂದ ನಮ್ಮ ಮನ್ನಣೆಯನ್ನು ಒಪ್ಪಿಸಿಕೊಳ್ಳಲೇಬೇಕು’ ಎಂದು ಆಗ್ರಹಿಸುತ್ತಿದ್ದರು.
ಇದರಿಂದ ಡಿವಿಜಿ ಮತ್ತೂ ಜಾಣ್ಮೆಯ ಹಾದಿಯೊಂದನ್ನು ತುಳಿದರು. ಅದೆಂದರೆ ಈ ಎಲ್ಲ ಹಿರಿಯರಿಂದ ಧನಾದೇಶ ಪತ್ರ ರೂಪದಲ್ಲಿ (ಚೆಕ್) ಸಂಭಾವನೆಯನ್ನೇನೋ ಸ್ವೀಕರಿಸುವುದು, ಆದರೆ ಯಾವೊಂದನ್ನೂ ನಗದಾಗಿ ಪರಿವರ್ತಿಸಿಕೊಳ್ಳದೆ ಹಾಗೆಯೇ ತಮ್ಮ ಪೆಟ್ಟಿಗೆಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವುದು! ಹೀಗೆ ದಶಕಗಳ ಕಾಲ ಈ ‘ಜಾಣತನ’ ಸಾಗಿತು, ಲಕ್ಷಗಟ್ಟಲೆ ಹಣ ನಗದಾಗಿಯೇ ಉಳಿಯಿತು, ಡಿವಿಜಿಯವರ ನಿಸ್ಪಹತೆ ಮಾತ್ರ ನಗುತ್ತಿತ್ತು. ಡಿವಿಜಿ ಕೇವಲ ಚೆಕ್ಕುಗಳನ್ನಷ್ಟೇ ಅಲ್ಲ ಯಾರ ಸ್ನೇಹವನ್ನೂ ಯಾವ ಅವಕಾಶವನ್ನೂ ಮತ್ತಾವುದೇ ಸ್ಥಾನ-ಮಾನ- ಪರಿಚಯಗಳನ್ನು ಎನ್‌ಕ್ಯಾಷ್ ಮಾಡಿಕೊಳ್ಳಲಿಲ್ಲ.
ಇಂಥ ನೂರಾರು ಘಟನೆ, ನಿದರ್ಶನಗಳನ್ನು ಡಿವಿಜಿಯವರ ಜೀವನದಲ್ಲಿ ಕಾಣಬಹುದು. ಒಂದೊಂದು ಘಟನೆಗಳು ಡಿವಿಜಿಯವರ ಪ್ರಾಮಾಣಿಕತೆ, ನಿಸ್ವಾರ್ಥತೆಯ ದ್ಯೋತಕಗಳಾಗಿವೆ. ಅವಧಾನ ಕಲೆಯನ್ನು ನಾಡಿನ ಮೂಲೆ ಮೂಲೆಗೆ ಕೊಂಡೊಯ್ಯುತ್ತಿರುವ ಖ್ಯಾತ ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಅವರು ಈ ಘಟನೆ, ನಿದರ್ಶನಗಳನ್ನು ‘ಬ್ರಹ್ಮಪುರಿಯ ಭಿಕ್ಷುಕ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಕಾಲದಲ್ಲಿ ನ್ಯಾಯ ನೀತಿಗೆ, ಪ್ರಾಮಾಣಿಕತೆಗೆ, ಸಚ್ಚಾರಿತ್ರ್ಯಕ್ಕೆ ಯಾವ ಬೆಲೆಯೂ ಇಲ್ಲ ಎಂಬ ಸಿನಿಕತೆ ಆವರಿಸಿರುವ ಸಂದರ್ಭದಲ್ಲಿ ಡಿವಿಜಿ ಅವರಂಥವರನ್ನು ನೆನಪಿಸಿಕೊಂಡಾಗ ಮಾತ್ರ ನೈತಿಕತೆ ಎಂಬುದು ಮತ್ತೆ ಜಾಗೃತಗೊಳ್ಳಲು ಸಾಧ್ಯ.
ಅಂದಹಾಗೆ, ಬರುವ ಮಾರ್ಚ್ 17 ಡಿವಿಜಿಯವರ ಜನ್ಮದಿನ!

20170311_071206

Comments are closed.