Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಒಂದೇ ಒಂದು ಗುಂಡು ಹಾರಿಸದೆ ಯುದ್ಧ ಗೆದ್ದ ಮೋದಿ

ಒಂದೇ ಒಂದು ಗುಂಡು ಹಾರಿಸದೆ ಯುದ್ಧ ಗೆದ್ದ ಮೋದಿ

ಒಂದೇ ಒಂದು ಗುಂಡು ಹಾರಿಸದೆ ಯುದ್ಧ ಗೆದ್ದ ಮೋದಿ

ತಿಂಗಳುಗಟ್ಟಲೇ ಡೊಕಾ ಲಾ ನಲ್ಲಿ ಕಣ್ಣೆವೆ ಮುಚ್ಚದೆ ಮುಖಾಮುಖಿಯಾಗಿ, ಇನ್ನೇನು ಸ್ಫೋಟಿಸಿಯೇ ಬಿಡುತ್ತದೆಂಬಂತೆ ಸೃಷ್ಟಿಯಾಗಿದ್ದ ವಾತಾವರಣ ಈಗ ಮಂಜಿನಂತೆ ಕರಗಿದೆ. ಉಭಯ ದೇಶಗಳಷ್ಟೇ ಅಲ್ಲದೆ ವಿಶ್ವದ ಬಲಾಢ್ಯ ದೇಶಗಳಲ್ಲೂ ಬಿಗುವನ್ನು ಉಂಟುಮಾಡಿದ್ದ ಬಿಕ್ಕಟ್ಟು ಇಷ್ಟು ಸರಳವಾಗಿ ಪರಿಹಾರವಾಗಿದ್ದು ಹೇಗೆ? ಒಂದೇ ಒಂದು ಗುಂಡು ಹಾರದೆ ವಿಸ್ತರಣಾವಾದಿ ಮಾನಸಿಕತೆ ಹಿಂದಕ್ಕೆ ತೆರಳಲು ಕಾರಣರಾದವರು ಯಾರು? ಬೆಟ್ಟದಂಥ ವಿಪತ್ತು ಕಡ್ಡಿಯಂತೆ ಸುಲಲಿತಗೊಳಿಸಿದ್ದರ ಹಿಂದಿನ ರಣತಂತ್ರವಾದರೂ ಏನು?
ಡೊಕಾ ಲಾ ಬಿಕ್ಕಟ್ಟು ಮುಗಿದಾಗ ದೇಶದೆಲ್ಲೆಡೆ ಎದ್ದ ಪ್ರಶ್ನೆ ಇದು.
ಡೊಕಾ ಲಾ ಪ್ರಕರಣದ ಉತ್ತರ ರಂಗವನ್ನು ಗಮನಿಸೋಣ. ಗಡಿಯಲ್ಲಿ ಎರಡೂ ದೇಶಗಳು ಸೇನೆ ವಾಪಾಸು ಕರೆಸಿಕೊಂಡ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚೀನಾದ ಕ್ಸಿಯಾಮೆನ್‌ನಲ್ಲಿ ಬ್ರಿಕ್ಸ್‌ ಸಮ್ಮೇಳನದಲ್ಲಿ ಭಾಗವಹಿಸಲು ಹೊರಟುಹೋದರು. ಇತ್ತ ನಾವೆಲ್ಲರೂ ಡೊಕಾ ಲಾ ಸುಖಾಂತ್ಯವಾಯಿತು ಎಂದುಕೊಳ್ಳುತ್ತಿದ್ದರೆ ಮೋದಿಯವರಿಗೆ ಅದಿನ್ನೂ ಸಂಪೂರ್ಣ ಮುಗಿದಿಲ್ಲ ಎಂಬುದು ಗೊತ್ತಿತ್ತು. ಏಕೆಂದರೆ ಚೀನಾ ಸುಲಭಕ್ಕೆ ಬಗ್ಗುವ ಆಸಾಮಿಯಲ್ಲ ಎಂಬುದು ಅದರ ಪೂರ್ವಾಪರವನ್ನು ಅರಿತವರಿಗೆ ಸ್ಪಷ್ಟ. ಯಾವತ್ತೂ ವಿಸ್ತರಣಾವಾದದ ಮಾನಸಿಕತೆ ಅಷ್ಟೊಂದು ಸುಲಭಕ್ಕೆ ಮಣಿಯುವುದಿಲ್ಲ. ಎಲ್ಲೆಲ್ಲಿ ಭಾರತವನ್ನು ದುರ್ಬಲಗೊಳಿಸಬಲ್ಲದೋ ಆ ಎಲ್ಲಾ ರಂಧ್ರಗಳನ್ನು ಚೀನಾ ಹುಡುಕುತ್ತದೆ. ಡೊಕಾ ಲಾನಲ್ಲಿ ಸೇನೆ ವಾಪಾಸು ಕರೆಸಿಕೊಂಡ ಚೀನಾ ಇನ್ನೇನು ಬ್ರಿಕ್ಸ್‌ ಆರಂಭವಾಗಬೇಕು ಎನ್ನುವಾಗ ಸಮ್ಮೇಳನದಲ್ಲಿ ಭಯೋತ್ಪಾದನೆಯ ಬಗ್ಗೆ ಚರ್ಚೆ ಬೇಡ ಎಂದು ಹೇಳಿಕೆ ಕೊಟ್ಟಿತು.
ಹೊರನೋಟಕ್ಕೆ ಈ ಹೇಳಿಕೆಗೂ ಮತ್ತು ಡೊಕಾ ಲಾ ಪ್ರಕರಣಕ್ಕೂ ಏನೇನೂ ಸಂಬಂಧವಿರದಂತೆ ಕಂಡರೂ ಚೀನಾದ ತಂತ್ರಗಾರಿಕೆಯಂತೂ ಇದ್ದೇ ಇತ್ತು. ಅಂದರೆ ಚೀನಾ ತನ್ನ ಎದುರಾಳಿಗಳನ್ನು ಮಣಿಸುವುದೇ ಇಂಥ ತಂತ್ರಗಳ ಮೂಲಕ. ಬ್ರಿಕ್ಸ್‌‌ನಲ್ಲಿ ಭಯೋತ್ಪಾದನೆಯ ಪ್ರಸ್ತಾಪ ಕೂಡ ಅದರ ಒಂದು ಭಾಗ. ಭಯೋತ್ಪಾದನೆಯ ಪ್ರಸ್ತಾಪ ಮತ್ತು ಚರ್ಚೆ ಕೂಡದು ಎಂದರೆ ತನ್ನ ಮತ್ತು ಪಾಕಿಸ್ತಾನದ ಗೆಳೆತನ ಎಂದೆಂದಿಗೂ ಗಟ್ಟಿಯಾಗಿ ಇರಲಿದೆ ಎಂದು ಪರೋಕ್ಷವಾಗಿ ಭಾರತವನ್ನು ಎಚ್ಚರಿಸಿದಂತೆ ಎಂಬುದು ಭಾರತ ಸರ್ಕಾರಕ್ಕೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಬ್ರಿಕ್ಸ್‌ ಸಮ್ಮೇಳನದಲ್ಲಿ ಮೋದಿಯವರು ಬ್ರಿಕ್ಸ್‌ ಮುಖಂಡರ ಎದುರು ನೇರವಾಗಿ ಎಲ್ಲಾ ಬಗೆಯ ಉಗ್ರವಾದ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಖಂಡಿಸಿ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು.
ಅದನ್ನು ಕೆಲವು ವಿಶ್ಲೇಷಕರು ಡೊಕಾ ಲಾ ನಂತರ ಭಾರತಕ್ಕೆ ಎರಡನೆ ಗೆಲುವು ಎಂದು ಬಣ್ಣಿಸಿದರು. ಆದರೆ ನಿಜಕ್ಕೂ ಅದು ಡೊಕಾ ಲಾ ನಡೆಯ ಮುಂದುವರಿದ ಭಾಗ ಮತ್ತು ಆದರದ್ದೇ ಗೆಲುವು! ಏಕೆಂದರೆ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು, ಒಪ್ಪಂದಗಳನ್ನು ಮುರಿಯುವುದು ಮತ್ತು ಮಾತುಕತೆಗಳನ್ನು ಮೀರಿ ಸರ್ಕಾರ ನಡೆದುಕೊಳ್ಳುವುದನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದು ಅದರ ಸಾಮಾನ್ಯವಾದ ಅಭ್ಯಾಾಸ. ಚೀನಾವನ್ನು ನೇರಾ ನೇರಾ ಎದುರಿಸುವುದೊಂದೇ ಉತ್ತರ ಮತ್ತು ಪರಿಹಾರ ಎಂದು ಅದರ ಮಾನಸಿಕತೆಯನ್ನೂ, ಅಲ್ಲಿನ ಕಮ್ಯುನಿಸಮ್ಮನ್ನೂ ಅರ್ಥ ಮಾಡಿಕೊಂಡವರು ನರೇಂದ್ರ ಮೋದಿ. ಇದೂ ಕೂಡಾ ಒಂದು ಪ್ರಬುದ್ಧ ನಡೆ. ಅಷ್ಟೇ ಅಲ್ಲ ಚೀನಾದ ನೆಲದಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರೊಡನೆ ಮಾತುಕತೆ ನಡೆಸಿದ್ದು ಕೂಡಾ ಭಾರತದ ಶಕ್ತಿ ಪ್ರದರ್ಶನದ ಒಂದು ಭಾಗವೇ.
ಬ್ರಿಕ್ಸ್‌ ಮುಗಿದ ಕೆಲವೇ ದಿನಗಳಲ್ಲಿ ಚೀನಾದ ಪರಮ ಶತ್ರು ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ನೀಡಿದ ಭೇಟಿಯಿಂದ ಚೀನಾಕ್ಕೆ ಹಸಿ ಮೆಣಸನ್ನು ಅರೆದು ಕುಡಿದಂತಾಗಿರುವುದು ಸುಳ್ಳಲ್ಲ. ಜಪಾನಿನ ಬುಲ್ಲೆಟ್ ರೈಲಿಗಿಂತ ಉತ್ತಮ ಗುಣಮಟ್ಟದ ರೈಲುಗಳನ್ನು ನಾವು ತಯಾರಿಸುತ್ತೇವೆಂದುಕೊಳ್ಳುವ ಚೀನಾ ಗುಜರಾತಿನಲ್ಲಿ ನಡೆದ ಬುಲ್ಲೆಟ್ ಶಿಲಾನ್ಯಾಸದಿಂದ ಕಂಪಿಸುತ್ತಿದೆ. ಚೀನಾಕ್ಕೆ ಇಂಥ ನೇರಾ ನೇರಾ ಸವಾಲನ್ನು ಈ ಮೊದಲು ಯಾವ ದೇಶವೂ ಹಾಕಿರಲಿಲ್ಲ. ಶೀತಲ ಸಮರದ ಕಾಲದಲ್ಲೂ ಚೀನಾ ಇಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಚೀನಾಕ್ಕೀಗ ತನ್ನ ಸುತ್ತಲೂ ಇರುವ ಅನೇಕ ಶತ್ರುದೇಶಗಳ ನಾಯಕನಂತೆ ಭಾರತ ನಿಂತಿರುವಂತೆ ಗೋಚರಿಸುತ್ತಿದೆ. ಏಕೆಂದರೆ ಭಾರತದ ಸುಲಭಕ್ಕೆ ಅರ್ಥವಾಗದ ನಡೆಗಳು. 50 ವರ್ಷಗಳ ಹಿಂದೆ ಚೀನಾ ಭಾರತ ಎಂದರೆ ಹೀಗೀಗೆ ಎಂದು ಯಾವುದನ್ನು ಅಂದುಕೊಂಡಿತ್ತೋ ಅವೆಲ್ಲವನ್ನೂ ಒಂದೇ ಏಟಿಗೆ ಬದಲಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಅಂದರೆ ಅಂತಾರಾಷ್ಟ್ರೀಯ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಭಾರತದ ನಡೆ ನಿಜಕ್ಕೂ ಅದಕ್ಕೆ ಆಘಾತ ಸೃಷ್ಟಿಸಿದೆ. ಭಾರತದಲ್ಲಿ ತನ್ನ ಬುಲ್ಲೆಟ್ ರೈಲನ್ನು ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದ ಚೀನಾಕ್ಕೆ ಇದು ಮಾರಣಾಂತಿಕ ಹೊಡೆತ. ಭಾರತ ತನ್ನ ಹಳೆಯ ವಿಳಂಬ ನೀತಿ, ಸಮಸ್ಯೆಯ ಮೂಲವನ್ನು ಅರಿಯಲು ಎಡವಿ ಮಾಡಿಕೊಂಡ ಎಡವಟ್ಟುಗಳು ದೇಶದಲ್ಲಿ ಸಮಸ್ಯೆಗಳನ್ನು ಬಿಡಿಸಲಾರದ ಸಿಕ್ಕುಗಳಂತೆ ಮಾಡಿರುವುದನ್ನು ನಾವು ಹಿಂದೆ ಕಂಡಿದ್ದೇವೆ.
ಕೆಲವು ಉದಾಹರಣೆಗಳನ್ನೇ ನೋಡಿ.
1947 ರ ಸೆಪ್ಟೆಂಬರ್ 19ರಂದು ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್ ತನ್ನ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ಭಾರತ ಸರ್ಕಾರದ ಮುಂದಿಟ್ಟರು. ಆದರೆ ನೆಹರೂ ಒಪ್ಪಲಿಲ್ಲ. ಏಕೆಂದರೆ ನೆಹರೂಗೆ ಜಮ್ಮು ಮತ್ತು ಕಾಶ್ಮೀರದ ಮಹತ್ವ ತಿಳಿದಿರಲಿಲ್ಲ. ಆಶ್ಚರ್ಯವೆಂದರೆ ಜಮ್ಮು ಮತ್ತು ಕಾಶ್ಮೀರದ ಮಹತ್ವ ನೆಹರೂಗಿಂತ ಚೆನ್ನಾಗಿ ಪಾಕಿಸ್ತಾನಕ್ಕೆ ತಿಳಿದಿತ್ತು. ಇದಾದ ಐದೇ ವಾರಗಳಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿತು. ಹರಿಸಿಂಗ್ ಮತ್ತೆ ಭಾರತಕ್ಕೆ ಆಹ್ವಾನ ನೀಡಿದರು. ಆಗ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ನೆಹರೂ ಸಮ್ಮತಿಸಿದರು. ಆದರೆ ಕಾಲ ಮಿಂಚಿಹೋಗಿತ್ತು. ವಿಲೀನ ಪ್ರಕ್ರಿಯೆಗಿಂತ ಮೊದಲು ಪಾಕ್ ಸೇನೆಯನ್ನು ಕಾಶ್ಮೀರದಿಂದ ಹೊರದಬ್ಬಬೇಕಿತ್ತು. ಒಂದು ವೇಳೆ ಹರಿಸಿಂಗ್ ಮೊದಲ ಬಾರಿಗೆ ಪ್ರಸ್ತಾಪ ಮುಂದಿಟ್ಟಿದ್ದಾಗಲೇ ವಿಲೀನಕ್ಕೆ ಮುಂದಾಗಿದ್ದರೆ ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುತ್ತಿತ್ತು.
ವಿಲೀನದ ನಂತರ ಆಕ್ರಮಣ ಮಾಡುವ ಧೈರ್ಯವನ್ನು ಪಾಕ್ ಖಂಡಿತಾ ತೋರುತ್ತಿರಲಿಲ್ಲ. ಏಕೆಂದರೆ ಧರ್ಮದ ಆಧಾರದ ಮೇಲೆ ದೇಶದ ಜತೆಗೆ ಸೇನೆಯನ್ನೂ ವಿಭಜನೆ ಮಾಡಲಾಗಿತ್ತು. ಹಾಗಾಗಿ ಭಾರತೀಯ ಸೇನೆ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠವಾಗಿತ್ತು. ಇಂತಹ ಸೇನೆಯನ್ನು ಎದುರಿಸುವ ಎದೆಗಾರಿಕೆಯನ್ನು ಪಾಕ್ ಖಂಡಿತಾ ತೋರುತ್ತಿರಲಿಲ್ಲ. ಎದೆಗಾರಿಕೆಯ ಕೊರತೆ ದೇಶವನ್ನು ಇಂದಿಗೂ ಯಾವ ಸ್ಥಿತಿಯಲ್ಲಿಟ್ಟಿದೆ ಎಂಬುದನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ.
ನೆಹರೂ ಮುಂದೆ ಕೂಡಾ ಎದೆಗಾರಿಕೆಯನ್ನು ಬೆಳೆಸಿಕೊಳ್ಳಲಿಲ್ಲ. ತಪ್ಪನ್ನು ತಿದ್ದಿಕೊಳ್ಳಲಿಲ್ಲ. ಸ್ವತಂತ್ರ ಭಾರತದ ಮೊದಲ ಮಹಾ ದಂಡನಾಯಕ ಜನರಲ್ ರಾಬರ್ಟ್ ಲಕ್ಹಾರ್ಟ್, ದೇಶದ ಸೇನೆಯ ಬಲಾಬಲವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಪ್ರಧಾನಿ ನೆಹರೂ ಅವರ ಮುಂದಿಟ್ಟರು. ಆದರೆ ನಮ್ಮದು ಅಹಿಂಸಾ ನೀತಿ, ಯಾವುದೇ ಬಾಹ್ಯ ಬೆದರಿಕೆಗಳು ಗೋಚರಿಸುತ್ತಿಲ್ಲ. ಹಾಗಾಗಿ ಸೇನೆಯ ಅಗತ್ಯವಿಲ್ಲ. ರಕ್ಷಣೆ ಜವಾಬ್ದಾರಿಯನ್ನು ನಿರ್ವಹಿಸಲು ಪೊಲೀಸರು ಸಾಕು ಎಂದಿದ್ದರು ನೆಹರು. 1947ರ ಸೆಪ್ಟೆಂಬರ್ 16 ರಂದು ನಿರ್ದೇಶನವೊಂದನ್ನು ನೀಡಿದ ನೆಹರೂ, 2,80,000ರಷ್ಟಿದ್ದ ಸೇನಾಬಲವನ್ನು 1,50,000ಕ್ಕಿಳಿಸಲು ಸೂಚಿಸಿದರು. ಇದಾದ ಮೂರು ದಿನಗಳಲ್ಲಿಯೇ ಕಾಶ್ಮೀರದ ಮೇಲೆ ಪಾಕ್ ಆಕ್ರಮಣ ಮಾಡಿತು. ದೇಶಕ್ಕೆ ಸೇನೆಯ ಅಗತ್ಯದ ಅರಿವಾಯಿತು. ಆಗಲೂ ನೆಹರೂ ಎಚ್ಚೆತ್ತುಕೊಳ್ಳಲಿಲ್ಲ.
ಇದೆಲ್ಲವನ್ನೂ ಹಿಮಾಲಯದ ಬಗಲಲ್ಲಿ ಕುಳಿತು ಗಮನಿಸುತ್ತಿದ್ದ ಚೀನಾಕ್ಕೆ ಭಾರತ ನಮ್ಮ ಸುಲಭದ ತುತ್ತು ಎಂದೆನಿಸಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. 1949ರಲ್ಲಿ ಸ್ವತಂತ್ರಗೊಂಡ ಚೀನಾ ತನ್ನ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಲುವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬರ್ಮಾ, ಪಾಕ್ ಮತ್ತು ನೇಪಾಳಗಳಿಗೆ ಮಾತುಕತೆಯ ಪ್ರಸ್ತಾಪ ಕಳುಹಿಸಿತು. ನೆಹರೂ ಆ ಪ್ರಸ್ತಾಪವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಏಕೆಂದರೆ ನೆರೆಯ ಸಮಾಜವಾದಿ ರಾಷ್ಟ್ರವಾದ ಚೀನಾ ಯಾವುದೇ ಕಾರಣಕ್ಕೂ ನಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ. ಜತೆಗೆ ಹಿಮಾಲಯವೆಂಬ ತಡೆಗೋಡೆಯಿದೆ ಎಂದು ಬಲವಾಗಿ ನಂಬಿದ್ದರು. ಆದರೆ ನೆಹರೂ ಉದಾಸೀನ ಬಗ್ಗೆ ಚೀನಾ ಕುಪಿತಗೊಂಡಿತು. ಆಗಲೂ ಇತಿಹಾಸ ತನ್ನ ಮೂರ್ಖತನವನ್ನು ಸರಿಪಡಿಸಿಕೊಳ್ಳಲು ನೆಹರೂ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಿತು. ಆದರೂ ಪಾಠ ಕಲಿಯಲಿಲ್ಲ.
ಈ ಘಟನೆ ನಡೆದ ವರ್ಷವೇ 50 ಸಾವಿರ ಭಾರತೀಯ ಸೈನಿಕರನ್ನು ಕಿತ್ತೊಗೆದ ನೆಹರೂ ತಪ್ಪನ್ನು ಪುನರಾವರ್ತಿಸಿದರು. 1954ರಲ್ಲಿ ಚೀನಾಕ್ಕೆ ಭೇಟಿ ನೀಡಿದ ನೆಹರೂ, ಪರಸ್ಪರರ ಮೇಲೆ ದಾಳಿ ಮಾಡಬಾರದೆಂಬ ಮೂಲಮಂತ್ರವನ್ನು ಹೊಂದಿದ್ದ ಪಂಚಶೀಲ ತತ್ವಕ್ಕೆ ಸಹಿ ಹಾಕಿ ಯಾವುದೇ ಅಪಾಯ ಇಲ್ಲ ಎಂದು ನಿಟ್ಪುಸಿರುಬಿಟ್ಪರು. ಜತೆಗೆ ಟಿಬೆಟ್ ಸಾರ್ವಭೌಮ ಚೀನಾದ ಒಂದು ಭಾಗವೆಂದು ಘೋಷಣೆ ಮಾಡಿದರು. ಪರಿಣಾಮವೇನು? 1959ರಲ್ಲಿ ಆಕ್ರಮಿತ ಟಿಬೆಟ್‌ನಲ್ಲಿ ಜನ ದಂಗೆ ಎದ್ದರು. ಚೀನಿ ಸೇನೆ ಬಂಡಾಯವನ್ನು ಹಿಂಸೆಯ ಮೂಲಕ ಹತ್ತಿಕ್ಕಿತು. ಹೆದರಿದ ಟಿಬೆಟ್ ಧರ್ಮಗುರು ದಲೈಲಾಮಾ, 1ಲಕ್ಷ ಅನುಯಾಯಿಗಳೊಂದಿಗೆ ಭಾರತಕ್ಕೆ ಪಲಾಯನ ಮಾಡಿದರು. ಹೀಗೆ ಬಂದವರಿಗೆ ಅನುಕಂಪದ ಮೇಲೆ ನೆಹರೂ ಆಶ್ರಯ ನೀಡಿದ್ದೇನೋ ಸರಿ. ಆದರೆ ಟಿಬೆಟ್ ಚೀನಾದ ಒಂದು ಭಾಗವೆಂದು 1954ರಲ್ಲಿಯೇ ಒಪ್ಪಿಕೊಂಡ ಮೇಲೆ, ನಮ್ಮ ರಾಷ್ಟ್ರದಲ್ಲಿ ದಲೈಲಾಮಾ ನೇತೃತ್ವದ ಅಜ್ಞಾತವಾಸಿ ಟಿಬೆಟ್ ಸರಕಾರದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ? ಇದು ಚೀನಿ ನಾಯಕ ಮಾವೋ ಝೆಡಾಂಗ್ ಅವರನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತು. ಈ ನಡುವೆ ಜೀಪ್ ಹಗರಣದ ಸುಳಿಗೆ ಸಿಲುಕ್ಕಿದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್ ಅವರನ್ನು ಕಿತ್ತೊಗೆಯುವ ಬದಲು ರಕ್ಷಣಾ ಸಚಿವನನ್ನಾಗಿ ಮಾಡಿದರು! ಹೀಗೆ ಒಂದರ ಹಿಂದೆ ಒಂದರಂತೆ ನೆಹರೂ ತಪ್ಪೆಸಗುತ್ತಲೇಹೋದರು.
ಇತ್ತ ದಲೈಲಾಮಗೆ ಭಾರತದ ನೆಲದಿಂದ ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದ ನೆಹರೂ ಅವರಿಗೆ ತಕ್ಕ ಪಾಠ ಕಲಿಸಲು ಮಾವೋ ಸಮಯ ಕಾಯುತ್ತಿದ್ದರು. ಚೀನಾದಲ್ಲಿ ಮಾವೋ ನಾಯಕತ್ವಕ್ಕೆ ಡೆಂಗ್ ಕ್ಷಿಯಾಪಿಂಗ್ ಸವಾಲು ಎಸೆದಿದ್ದರು. ವಿರೋಧಿಗಳನ್ನು ಬಾಯಿ ಮುಚ್ಚಿಸಲು ಭಾರತದ ಮೇಲೆ ಯುದ್ಧ ಸಾರುವುದು ಯೋಗ್ಯ ಮಾರ್ಗ ಎಂದು ಮಾವೋ ಭಾವಿಸಿದರು. ಅದೇ ವೇಳೆಯಲ್ಲಿ 1962 ರ ಅಕ್ಟೋಬರ್‌ನಲ್ಲಿ ಕ್ಯೂಬಾಕ್ಕೆ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ವರ್ಗಾಯಿಸಿ ನಿಯೋಜನೆ ಮಾಡಿದ್ದಕ್ಕಾಗಿ, ಸೋವಿಯತ್ ರಷ್ಯಾ ನಾಯಕ ನಿಕಿತಾ ಕ್ರುಶ್ಚೇವ್ ಮತ್ತು ಅಮೇರಿಕ ಅಧ್ಯಕ್ಷ ಜಾನ್ ಕೆನಡಿ ನಡುವೆ ತೀವ್ರ ಭಿನ್ನಾಾಭಿಪ್ರಾಯವುಂಟಾಗಿತ್ತು. ಕ್ಷಿಪಣಿಗಳನ್ನು ಹಿಂತೆಗೆದುಕೊಳ್ಳದಿದ್ದರೆ ಅಣ್ವಸ್ತ್ರ ದಾಳಿ ಮಾಡುವುದಾಗಿ ಕೆನಡಿ ಬೆದರಿಕೆ ಹಾಕಿದ್ದರು. ಹೀಗೆ ಜಗತ್ತಿನ ಗಮನವೆಲ್ಲ ಕ್ಯೂಬಾದತ್ತ ಕೇಂದ್ರೀಕೃತವಾಗಿತ್ತು. ಇಂತಹ ಸಂದರ್ಭದಲ್ಲಿ ಆಕ್ರಮಣ ಮಾಡಿದರೆ ಜಗತ್ತಿನ ಎರಡು ಬೃಹತ್ ಶಕ್ತಿಿಗಳಾಗಿದ್ದ ರಷ್ಯಾವಾಗಲಿ ಅಥವಾ ಅಮೆರಿಕವಾಗಲಿ ಭಾರತದ ಸಹಾಯಕ್ಕೆ ಮುಂದಾಗುವುದಿಲ್ಲ ಎಂಬುದು ಮಾವೋ ಲೆಕ್ಕಾಚಾರವಾಗಿತ್ತು.
1962ರ ಅಕ್ಟೋಬರ್ 20 ರಂದು ಲಡಾಕ್ ಮೂಲಕ ಆಕ್ರಮಣ ಮಾಡಿದ ಚೀನಾ ನಮ್ಮ 37 ಸಾವಿರ ಚದರ ಕಿ.ಮೀ. ಜಾಗವನ್ನು ಕಬಳಿಸಿತು. ಕಟ್ಟಾ ವಾಮವಾದಿಯಾಗಿದ್ದ ರಕ್ಷಣಾ ಸಚಿವ ಮೆನನ್ ಆಕ್ರಮಣದ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ, ದೇಶವನ್ನು ದಾರಿ ತಪ್ಪಿಸಿದರು. ದಿಕ್ಕೆಟ್ಟ ನೆಹರೂ ಸಹಾಯ ಯಾಚಿಸಿದರೂ ಲಭ್ಯವಾಗಲಿಲ್ಲ. ಮೂರೂ ವಾರಗಳ ನಂತರ ಈಶಾನ್ಯ ಭಾಗದ ಮೇಲೆ ಆಕ್ರಮಣ ಮಾಡಿದ ಚೀನಾ, ನವೆಂಬರ್ 21 ರಂದು ಏಕಪಕ್ಷೀಯ ಕದನ ವಿರಾಮ ಘೋಷಿಸಿತು. ಏಕೆಂದರೆ ಆ ವೇಳೆಗಾಗಲೇ ಕ್ರುಶ್ಚೇವ್ ಹಿಮ್ಮೆಟ್ಪುವುದರೊಂದಿಗೆ ಕ್ಯೂಬಾ ಬಿಕ್ಕಟ್ಟು ಪರಿಹಾರದತ್ತ ಸಾಗಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ, ರಷ್ಯಾ ಮೀನ-ಮೇಷ ಎಣಿಸಿದಾಗ ನೆಹರೂ ಅಮೆರಿಕಾದ ಸಹಾಯ ಯಾಚಿಸಿದರು. ಕರೆಗೆ ಓಗೊಟ್ಟು ಅಮೆರಿಕ ಅಧ್ಯಕ್ಷ ಜಾನ್ ಕೆನಡಿ ಸೇನಾ ತುಕಡಿಯೊಂದನ್ನು ಹೊತ್ತ ಹಡಗನ್ನು ಬಂಗಾಳ ಕೊಲ್ಲಿಯತ್ತ ಕಳುಹಿಸಿದರು. ಹೀಗೆ ಅಮೆರಿಕದ ಹಸ್ತಕ್ಷೇಪದ ಭೀತಿಯಿಂದ ಚೀನಾ ಕದನ ವಿರಾಮ ಘೋಷಿಸಿತು.
ಡೊಕಾ ಲಾ ಬಿಕ್ಕಟ್ಟು ಮತ್ತು ಬ್ರಿಕ್ಸ್‌ ಸಮ್ಮೇಳನದಲ್ಲಿ ಮೋದಿಯವರು ನಡೆದುಕೊಂಡ ರೀತಿ ಇಂಥ ತಪ್ಪು ನಡೆಗಳ ನೆನಪಿನಲ್ಲಿ ಮಹತ್ವದ್ದಾಗಿ ಕಾಣುತ್ತದೆ. ಚೀನಾದೊಂದಿಗೆ ಹೇಗೆ ನಡೆದುಕೊಳ್ಳಬೇಕೋ ಹಾಗೆ ಮೋದಿಯವರು ನಡೆದುಕೊಂಡಿದ್ದಾರೆ. ತಪ್ಪಿನಿಂದ ಪಾಠ ಕಲಿಯದ ನೆಹರೂ ಸಮಸ್ಯೆಗಳ ಗೊಂಚಲನ್ನು ದೇಶಕ್ಕೆ ಬಿಟ್ಟುಹೋದರು. ಇತಿಹಾಸದ ಎಚ್ಚರದಿಂದ ಮೋದಿ ಡೋಕ್ಲಾಂ ಅನ್ನು ಪ್ರಬುದ್ಧತೆಯಿಂದ ನಿಭಾಯಿಸಿದರು. ಅದನ್ನು ನಿಭಾಯಿಸಲು ಪ್ರಧಾನಮಂತ್ರಿಗಳೇನೂ ವಿಶೇಷ ಕಾರ್ಯತಂತ್ರವನ್ನು ಹೆಣೆದಿರಲಿಲ್ಲ. 60ರ ದಶಕದಲ್ಲಿ ಭಾರತ ಹೇಗೆ ನಡೆದುಕೊಂಡಿತ್ತೋ ಅದರ ಬಗ್ಗೆ ಎಚ್ಚರದಿಂದಿದ್ದರು ಅಷ್ಟೆ.

Comments are closed.