*/
Date : 21-03-2015, Saturday | no Comment
ಮುಖ್ಯಮಂತ್ರಿಯವರೇ, ಸದನದಲ್ಲಿ ತೋಳು ತಟ್ಟುವಾಗ, ಬಳ್ಳಾರಿ ಪಾದಯಾತ್ರೆ ಕೈಗೊಂಡಾಗ ನಿಮ್ಮಲ್ಲಿದ್ದ ಪೌರುಷ, ಪ್ರಾಮಾಣಿಕತೆ ಈಗ ಎಲ್ಲಿ ಹೋಯಿತು ?
ನೀವು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಸದನದಲ್ಲಿ ತೋಳು ತಟ್ಟಿದ್ದನ್ನು ನಾವು ನೋಡಿದ್ದೇವೆ. ಬಳ್ಳಾರಿಯನ್ನು ಕೊಳ್ಳೆ ಹೊಡೆಯುತ್ತಿದ್ದ ರೆಡ್ಡಿ ಬದ್ರರ್ಸ್ ವಿರುದ್ಧ ಪಾದಯಾತ್ರೆ ಮಾಡಿದ್ದನ್ನೂ ಕಂಡು ಮೆಚ್ಚಿದ್ದೇವೆ. ಆ ನಿಮ್ಮ ಪೌರುಷ, ಪ್ರಾಮಾಣಿಕತೆ, ಭ್ರಷ್ಟಾಚಾರ ವಿರುದ್ದದ ಆಕ್ರೋಶ ಈಗ ಎಲ್ಲಿ ಹೋಗಿದೆ ಸ್ವಾಮಿ? ಇವತ್ತು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ ಮಾಡಿದ್ದೂ ಕೂಡ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಅಲ್ಲವೆ? ಬಳ್ಳಾರಿ ರೆಡ್ಡಿಗಳ ವಿರುದ್ಧ ಹೋರಾಟ ಮಾಡುವಾಗ ನೀವು ಭ್ರಷ್ಟಾಚಾರದ ವಿರುದ್ಧ ತೋರಿದ ಸಾತ್ವಿಕ ಸಿಟ್ಟು, ವ್ಯವಸ್ಥೆಯೊಳಗಿನ ಭ್ರಷ್ಟಾಚಾರವನ್ನು ಹೊಡೆದುಹಾಕುತ್ತಿದ್ದ ಪ್ರಾಮಾಣಿಕ ಅಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದಾಗ ಏಕೆ ವ್ಯಕ್ತವಾಗುತ್ತಿಲ್ಲ ದಯವಿಟ್ಟು ಹೇಳಿ? ನಿಮ್ಮ ರಾಜಕೀಯ ಸಿದ್ಧಾಂತದ ಚೌಕಟ್ಟಿನ ಒಳಕ್ಕೆ ಇಳಿದು ಕೇಳುವುದಾದರೆ, ಗುಲ್ಬರ್ಗದಲ್ಲಿ ಮಡಿದ ಮಲ್ಲಿಕಾರ್ಜುನ ಬಂಡೆ, ಮೈಸೂರಿನಲ್ಲಿ ಹಲ್ಲೆಗೊಳಗಾಳಗಾದ ರಶ್ಮಿ ಮಹೇಶ್ ಹಾಗೂ ಬೆಂಗಳೂರಿನಲ್ಲಿ ಮಡಿದ ಡಿ.ಕೆ. ರವಿಯವರು ನಿಮ್ಮ ಅಹಿಂದದ ಗುಂಪಿಗೆ ಸೇರಿದ್ದರೆ ಮಾತ್ರ ಹತ್ಯೆಗೈದವರ ವಿರುದ್ಧ ನೀವು ತೋಳುತಟ್ಟುತ್ತಿದ್ದಿರಾ? ನಿಮ್ಮ ರಾಜಕೀಯ, ನಿಮ್ಮ ಬಜೆಟ್ಟು ಎಲ್ಲವೂ ಅಹಿಂದ. ನಿಮ್ಮ ಸಂವೇದನೆಗೂ ಅಹಿಂದ ಹಾಗೂ ಅಹಿಂದೇತರ ಎನ್ನುವ ಆಯ್ಕೆಗಳಿವೆಯಾ?
ಏಕಾಗಿ ಇಡೀ ರಾಜ್ಯ ಇವತ್ತು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ ಗೊತ್ತಾ?
ನಿಮ್ಮ ಬೆಂಗಳೂರು ಪೋಲಿಸ್ ಕಮಿಷನರ್ ಎಂ.ಎನ್. ರೆಡ್ಡಿ ಸಾಹೇಬರು, ರವಿ ಸಾವಿನ ಆಘಾತಕಾರಿ ಘಟನೆ ನಡೆದ ಸ್ಥಳಕ್ಕೆ ಭೇಟಿ ಕೊಟ್ಟು ಹೊರಬಂದ ಕೂಡಲೇ, ಪ್ರೈಮಾಫೇಶಿ ಅಥವಾ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಗೋಚರಿಸುತ್ತದೆ ಎನ್ನುತ್ತಾರಲ್ಲಾ, ಜನಕ್ಕೆ ಅನುಮಾನ ಮೂಡದೇ ಇರುತ್ತದಾ? ಮರಣೋತ್ತರ ಪರೀಕ್ಷೆ ನಡೆಯದೆ, ಫಾರೆನ್ಸಿಕ್ ರಿಪೋರ್ಟ್ ಬರದೇ ಹೀಗೆ ಹೇಳಿಕೆ ಕೊಡಲು ಕಾರಣವೇನು? ಅಥವಾ ರೆಡ್ಡಿ ಬಾಯಲ್ಲಿ ಹೊರಟಿದ್ದು His Master’s Voice ಅಂತಾರಲ್ಲಾ ‘ಧಣಿಯ ಧ್ವನಿ’ಯಾ? ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದುಬರುತ್ತದೆ ಎಂದು ಮುಖ್ಯಮಂತ್ರಿಯಾದ ನೀವೂ ಹೇಳಿದಿರಿ. ನಿಮ್ಮ ಗೃಹಸಚಿವ ಕೆ.ಜೆ. ಜಾರ್ಜ್ ಹೇಳಿದರು. ಅದನ್ನು ನಿಮ್ಮ ಕ್ಯಾಬಿನೆಟ್ ಸಹೋದ್ಯೋಗಿಯಾದ ದಿನೇಶ್ ಗುಂಡೂರಾವ್ ಅವರು ಟಿವಿ ಚರ್ಚೆಗಳಲ್ಲಿ ಪುನರುಚ್ಚರಿಸಿದರು ಹಾಗೂ ಸಮರ್ಥನೆಗೆ ನಿಂತರು. ಹೀಗೆ ಸಾಲುಸಾಲಾಗಿ ಒಂದೇ ಥರಾ ಪ್ರತಿಸಿದಿರಲ್ಲಾ ಅದನ್ನು ನೋಡಿದ ರಾಜ್ಯದ ಜನರಿಗೆ ಕಮಿಷನರ್ ರೆಡ್ಡಿ ಬಾಯಿಂದ ಹೊರಟಿದ್ದು ಧಣಿಯ ಧ್ವನಿ ಇರಬಹುದು ಎಂದು ಸಹಜವಾಗಿಯೇ ಅನಿಸುವುದಿಲ್ಲವೆ? ಆ ಧಣಿ ಯಾರು ಸಾರ್? ನೀವೋ, ನಿಮ್ಮ ಗೃಹಸಚಿವರೋ ಅಥವಾ ನಿಮ್ಮ ಪಕ್ಷದಲ್ಲಿರುವ ಶಾಸಕರೆಂಬ ಕೆಲ ಭೂಗಳ್ಳರೋ? ಇಲ್ಲವಾದರೆ ಏಕಾಗಿ ಸಾಂತ್ವನ ಹೇಳುವ ಬದಲು ಸಾವಿನ ಕಾರಣ ಹೇಳಲು ಹೊರಟಿರಿ?
ಇಷ್ಟಕ್ಕೂ ಸಾವಿಗೆ ಬಂದವರು ಹೇಗೆ ಪ್ರತಿಕ್ರಿಯಿಸಬೇಕು ಹಾಗೂ ಪ್ರತಿಕ್ರಿಯಿಸುತ್ತಾರೆ ?
ಸಾವಿಗೆ ಕಾರಣ ಏನೇ ಇರಬಹುದು. ಅದು ವೈಯುಕ್ತಿಕ, ಖಾಸಗಿ, ಸಾರ್ವಜನಿಕ ಏನೇ ಆಗಿರಲಿ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕಳೇಬರವನ್ನು ನೋಡಲು ಬಂದಾಗ ಏನು ಹೇಳಬೇಕು? ದುಃಖತಪ್ತ ಕುಟುಂಬದ ಜತೆ ಇಡೀ ರಾಜ್ಯವಿದೆ . ಇಡೀ ರಾಜ್ಯದ ಸಾಂತ್ವನ ಅಗಲಿದ ರವಿ ಕುಟುಂಬದ ಜತೆಗಿದೆ. ಇಡೀ ರಾಜ್ಯವೂ ನೊಂದಿದೆ ಹಾಗೂ ಕುಟುಂಬದ ಜತೆ ದುಃಖವನ್ನು ಹಂಚಿಕೊಳ್ಳುತ್ತದೆ ಎಂದು ಧ್ಯೆರ್ಯ ತುಂಬಬೇಕಲ್ಲವೆ? ಅಂಥ ಸೌಜನ್ಯ, ಸಂವೇದನೆ ಬಿಟ್ಟು ನೀವು ಹಾಗೂ ನಿಮ್ಮ ಗೃಹಮಂತ್ರಿ ಹೇಳಿದ್ದೇನು? ರವಿ ಕುಟುಂಬಕ್ಕೆ ನಿಮ್ಮ ಸಾಂತ್ವನ, ಸಮಾಧಾನ ಪಡೆದುಕೊಳ್ಳುವ ಹಕ್ಕೂ ಇರಲಿಲ್ಲವೆ? ಅದು ಆತ್ಮಹತ್ಯೆಯೇ ಆಗಿರಬಹುದು. ಇಲ್ಲವೆ ಕೊಲೆಯೇ ಇದ್ದಿರಬಹುದು. ಒಂದು ವೇಳೆ, ಕೊಲೆಯಾಗಿದ್ದರೆ ಇದರ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತೇವೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಬಿಡುವುದಿಲ್ಲ. ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಕುಣಿಕೆಯಿಂದ ಅವರನ್ನು ಬಿಗಿಯುತ್ತೇವೆ ಎಂದು ಹೇಳಬಹುದಿತ್ತ ಲ್ಲವೆ? ಅಕಸ್ಮಾತ್, ಆತ್ಮಹತ್ಯೆಯಾಗಿದ್ದರೂ ಆ ಆತ್ಮಹತ್ಯೆಯ ಹಿಂದೆಯೂ ಒಂದು ಬಲವಾದ ಕಾರಣವಿರಬೇಕಲ್ಲವೆ? ನಮ್ಮ ಭ್ರಷ್ಟ, ದರಿದ್ರ ವ್ಯವಸ್ಥೆಯನ್ನೇ ಎದುರುಹಾಕಿಕೊಂಡವನು ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳಲು ಗಟ್ಟಿ ಕಾರಣ(ವೈಯ್ಯಕ್ತಿಕ/ಸಾರ್ವಜನಿಕ)ವಿ
ಈಗ ಅರ್ಥವಾಯೇ, ಜನಕ್ಕೇಕೆ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಅಂತ?
ಇನ್ನೂ ಒಂದು ಮಾತು: ಪೋಲಿಸರ ಸಾಮರ್ಥ್ಯದ ಬಗ್ಗೆ ಯಾರಿಗೂ ಶಂಕೆಯಿಲ್ಲ. ಆದರೆ ಆ ಪೋಲಿಸ್ ಇಲಾಖೆಯನ್ನು ತನ್ನ ಕಪಿಮುಷ್ಠಿಯಲ್ಲಿರುವ ರಾಜಕಾರಣಿ ಎಂಬ ಖದೀಮನ ಮೇಲೆ ಎಲ್ಲರಿಗೂ ಅನುಮಾನವಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದನಿಸುತ್ತಿದೆ ಎಂದು ಕಮಿಷನರ್ ರೆಡ್ಡಿಯವರು ಷರಾ ಬರೆದಿರುವಾಗ ಅವರ ಕೆಳಗಿನ ಅಧಿಕಾರಿಗೆ ತನಿಖೆಯನ್ನು ವಹಿಸಿದರೆ ಆಕೆ ತನ್ನ ಬಾಸ್‌ನ ಮಾತಿಗೆ ತದ್ವಿರುದ್ಧವಾದ ವರದಿ ನೀಡಲು ಸಾಧ್ಯವೆ? ಪಾಪ, ತೀರ್ಥಳ್ಳಿಯ ಆ ಹಸುಳೆ ನಂದಿತಾಳ ಸಾವನ್ನು ಆತ್ಮಹತ್ಯೆ ಎಂದು ವರದಿ ಕೊಡಿಸಿದಾಗಲೇ, ದನಗಳ್ಳ ಕಬೀರನ ಕುಟುಂಬಕ್ಕೆ 10 ಲಕ್ಷ ಪರಿಹಾರ, ಕರ್ತವ್ಯ ಪಾಲಿಸಿದ ಪೋಲಿಸ್ ಕಾನ್‌ಸ್ಟೆಬಲ್‌ಗೆ ಅಮಾನತ್ತು ಕೊಡುಗೆ ಕೊಟ್ಟ್ಟಾಗಲೇ ನಿಮ್ಮ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಮುಖ್ಯಮಂತ್ರಿಗಳೇ. .
ಜನರೇ, ಬನ್ನಿ ಹಳೆಯದ್ದನ್ನು ಸ್ವಲ್ಪ ನೆನಪು ಮಾಡಿಕೊಳ್ಳೋಣ. 2013 ರ ಕರ್ನಾಟಕ ” ವಿಧಾನಸಭೆ ಚುನಾವಣೆ ಪ್ರಚಾರಾಂದೋಲನದ ಸಂದಭದಲ್ಲಿ ಕೆಜೆಪಿ ಅಭ್ಯರ್ಥಿ ಕಾಪು ಸಿದ್ಧಲಿಂಗ ಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾದಲ್ಲಿ ಸೆರೆಸಿಕ್ಕ ಸಿದ್ದರಾಮಯ್ಯನವರ ಮಗ ರಾಕೇಶ್ ವಿರುದ್ಧ ವಿಧಿಯಿಲ್ಲದೆ ಎಫ್‌ಐಆರ್ ದಾಖಲಿಸಿದ ಪೋಲಿಸ್ ಇನ್‌ಸ್ಪೆಕ್ಟರ್ ಕಥೆ ಏನಾಯಿತು? ಮುಖ್ಯಮಂತ್ರಿಯಾದ ಕೂಡಲೇ ಸಿದ್ದರಾಮಯ್ಯನವರು ಮಾಡಿದ ಮೊದಲ ಕೆಲಸ ಮೈಸೂರು ಪೋಲಿಸ್ ಕಮಿಷನರ್ ಕೆ.ಎಲ್. ಸುಧೀರ್ ಅವರನ್ನು ರಜೆ ಮೇಲೆ ಕಳುಹಿಸಿದರು. ಎಫ್‌ಐಆರ್ ದಾಖಲಿಸಿದ ನಜ಼ರಾಬಾದ್ ಠಾಣೆಯ ಇನ್‌ಸ್ಪೆಕ್ಟರ್ ಮೋಹನ್ ಕುಮಾರ್‌ರನ್ನು ಸಸ್ಪೆಂಡ್ ಮಾಡಿ ಜೀವನವನ್ನು ಬರ್ಬಾದ್ ಮಾಡಿದರು. ಆನಂತರ ಗುಲ್ಬರ್ಗದ ಧೀರ ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಕೊಲೆಯಾದರು. ಗುಲ್ಬರ್ಗವೇ ಪ್ರತಿಭಟಿಸಿದರೂ ಸರ್ಕಾರ ಕ್ಯಾರೇ ಅನ್ನಲಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ಪರಿಹಾರವನ್ನು ಹೆಚ್ಚಿಸಬೇಕೆಂದು ಜನ ಬೀದಿಗಿಳಿಯಬೇಕಾ ಯಿತು. ಜುಲೈನಲ್ಲಿ ಮತ್ತೊಬ್ಬ ನಿಷ್ಠಾವಂತ, ದಕ್ಷ, ಶುದ್ಧಹಸ್ತ ಮೈಸೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆಯಾಗಿದ್ದ ರಶ್ಮಿ ಮಹೇಶ್ ಅವರ ಮೇಲೆ ಅಮಾನವೀಯ ಹಲ್ಲೆ ನಡೆಯಿತು. ಮುಖ್ಯಮಂತ್ರಿಯವರು ಕನಿಷ್ಠ ಖಂಡಿಸುವ ಸೌಜನ್ಯವನ್ನೂ ತೋರಲಿಲ್ಲ. ಅವರ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಎಂಬ ಮಹಾಶಯ, ಘಟನೆಯನ್ನು ಖಂಡಿಸುವ ಬದಲು ಮಾಧ್ಯಮಗಳ ಮುಂದೆ ಮಾತನಾಡಿದ್ದೇಕೆ ಎಂದು ರಶ್ಮಿಯವರನ್ನೇ ಟೀಕಿಸಿದರು. ಒಬ್ಬ ವಿಧವೆ, ಒಬ್ಬ ಹಿರಿಯ ಐಎಎಸ್ ಅಧಿಕಾರಿಗೆ ರಕ್ಷಣೆ ನೀಡಬೇಕು, ಮಾನಸಿಕ ಸ್ಥೈರ್ಯ ತುಂಬಬೇಕು ಎಂಬುದನ್ನು ಮರೆತು ಆಕೆಯಿಂದ ಹೆಚ್ಚುವರಿ ಜವಾಬ್ದಾರಿಯನ್ನೇ ಕಸಿದುಕೊಳ್ಳಲಾತು. ಈಗ್ಗೆ ಕೆಲ ತಿಂಗಳ ಹಿಂದೆ ಹಸುಳೆಗಳ ಮೇಲೆ ಬೆಂಗಳೂರಿನಲ್ಲಿ ಸರಣಿ ಅತ್ಯಾಚಾರಗಳಾದವು. ಮಾಧ್ಯಮಗಳು ಪ್ರಶ್ನಿಸಿದರೆ, ನಿಮಗೆ ಇರುವುದು ಇದೊಂದೇ ವಿಷಯವಾ ಎಂದುಬಿಟ್ಟರು ಮುಖ್ಯಮಂತ್ರಿ. ನಂದಿತಾಳ ಜತೆ ಕೇಸೂ ನಂದಿಹೋಯಿತು. ಆ ಕೆಲಸ ಮಾಡಿದ್ದೂ ಇದೇ ನಿಮ್ಮ ಸಿಐಡಿ.
ಹೀಗಿರುವಾಗ ಡಿ.ಕೆ. ರವಿ ಸಾವಿನ ಹಿಂದಿರುವ ರಹಸ್ಯವನ್ನು ಭೇದಿಸುವ ಪ್ರಾಮಾಣಿಕ ಇರಾದೆ ನಿಮ್ಮ ಸರ್ಕಾರಕ್ಕಿದೆ ಎಂದು ಜನ ಹೇಗೆ ತಾನೇ ನಂಬಿಯಾರು? ಅದು ಆತ್ಮಹತ್ಯೆಯೇ ಇರಬಹುದು, ಆದರೆ ಸಿಬಿಐಗೆ ಕೊಡುವುದಕ್ಕೇನು ಸರ್ಕಾರಕ್ಕೆ ಧಾಡಿ? ಕರ್ನಾಟಕದ ಪೋಲಿಸರು ಸಮರ್ಥರು ಎಂಬ ಇಗೋ ಮುಖ್ಯವೋ, ಜನರ ಭಾವನೆ ಮುಖ್ಯವೋ?
ಅದಿರಲಿ, ನಿನ್ನೆ ಟೈಮ್ಸ್ ನೌ ಚಾನೆಲ್‌ನಲ್ಲಿ ಚರ್ಚೆಗೆ ಬಂದಿದ್ದ ನಿಮ್ಮ ವಕ್ತಾರ ಬ್ರಜೇಶ್ ಕಾಳಪ್ಪನವರು, ರವಿಯ ಮಾವ ಹನುಮಂತರಾಯಪ್ಪ ಬಂದು ಮನವಿ ಪತ್ರ ನೀಡಿದ ಕಾರಣಕ್ಕೆ ನಾವು ಅವರನ್ನು ಕೋಲಾರದಿಂದ ವರ್ಗಾವಣೆ ಮಾಡಿದೆವು ಎಂದು ಬಹಳ ಸತ್ಯಸಂಧನಂತೆ ಹೇಳುತ್ತಿದ್ದರು. ಎರಡು ದಿನ ಕೋಲಾರ ಬಂದ್ ಆದರೂ ಜನರ ಭಾವನೆಗೆ ಸ್ಪಂದಿಸದ ಸರ್ಕಾರ ಮಾವ, ಬಾವ, ಅತ್ತೆ, ತಂದೆ, ತಾಯಿ ಪತ್ರ ಕೊಟ್ಟರೆ ಕೇಳಿದಲ್ಲಿಗೆ ವರ್ಗಾವಣೆ ಮಾಡುತ್ತದಾ?! ಸ್ವಾಮಿ, ಮನವಿ ಪತ್ರ ಬಿಡಿ ಮಾನವೀಯ ನೆಲೆಯಲ್ಲಿ ಯಾರನ್ನಾದರೂ ವರ್ಗಾವಣೆ ಮಾಡುವಷ್ಟು ಶುದ್ಧಹಸ್ತರು, ಪ್ರಾಮಾಣಿಕರು ನಮ್ಮ ಮುಖ್ಯಮಂತ್ರಿಗಳಾಗಿದ್ದರೆ (ಹಿಂದಿದ್ದವರೂ ಸೇರಿದಂತೆ) ಕರ್ನಾಟಕ ರಾಮ ರಾಜ್ಯವಾಗಿ ಎಷ್ಟೋ ವರ್ಷಗಳಾಗಿರುತ್ತಿತ್ತು! ನಮ್ಮ ರಾಜಕಾರಣ ಎಷ್ಟು ಪ್ರಾಮಾಣಿಕವೆಂದರೆ, ರವಿಯನ್ನು ಕೋಲಾರದಿಂದ ಎತ್ತಂಗಡಿ ಮಾಡುವುದರಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಅಲ್ಲಿನ ಸಂಸದ ಮಹಾಶಯರೂ ನಿನ್ನೆ ರವಿ ಅಗಲಿಕೆಗೆ ಮಾಧ್ಯಮಗಳೆದುರು ಕಣ್ಣೀರು ಸುರಿಸುತ್ತಿದ್ದರು! ನನಗೆ ಬಹಳ ನೋವಾಗಿದೆ, ದಿಗ್ಬ್ರಮೆಯಾಗಿದೆ, ರವಿ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದರು, ಕೋಲಾರದಲ್ಲಿ ಬಹಳ ಬದಲಾವಣೆ ತಂದಿದ್ದರು ಎನ್ನುತ್ತಿದ್ದರು. ಹಾಗಿದ್ದರೆ ರವಿಯನ್ನು ಕೋಲಾರದಿಂದ ಎತ್ತಂಗಡಿ ಮಾಡಿದಾಗ ಇವರೇಕೆ ಪ್ರಾಮಾಣಿಕ ವ್ಯಕ್ತಿಯನ್ನು ಅಲ್ಲೇ ಉಳಿಸಿಕೊಳ್ಳಲು ಹೋರಾಟಿಕ್ಕಿಳಿದಿರಲಿಲ್ಲ?!
ಒಂದು ಕಾಲದಲ್ಲಿ ಸೈನಿಕರ ಬದುಕು ಕಷ್ಟ ಎನ್ನುತ್ತಿದ್ದೆವು. ಗಡಿ ಕಾಯುವ ಸೈನಿಕ ಸತ್ತಾಗ ಆತ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಂದು ಕರೆಯುತ್ತಿದ್ದೆವು. ಸಾವಿನಲ್ಲಿ ಆತನಿಗೆ ಹುತಾತ್ಮನ ಪಟ್ಟ ಹಾಗೂ ಬದುಕಿಗೆ ಸಾರ್ಥಕ್ಯ ಸಿಗುತ್ತಿತ್ತು. ಇವತ್ತು ನಮ್ಮ ಪ್ರಾಮಾಣಿಕ ಅಧಿಕಾರಿಗಳ ಜೀವನ ನಾಯಿಪಾಡಾಗಿದೆ. ಅತಿ ಪ್ರಾಮಾಣಿಕರಾಗಿದ್ದರಂತೂ ಒಂದೋ ರಾಜೀನಾಮೆ ಕೊಟ್ಟು ಎನ್‌ಜಿಓ ಸ್ಥಾಪಿಸಿ ಸಮಾಜ ಸೇವೆ ಅಂತ ಹೊರಡಬೇಕು, ಇಲ್ಲವೇ ಭ್ರಷ್ಟರ ವಿರುದ್ಧ ಹೋರಾಡಿದ್ದಕ್ಕಾಗಿ ವರ್ಷಕ್ಕೆ ನಾಲ್ಕು ಸಲ ವರ್ಗಾವಣೆ, ಕೊನೆಗೆ ಪ್ರಾಣಹರಣ. ಅಷ್ಟೇ ಅಲ್ಲ, ಸಮರ್ಥನೆ ಮಾಡಿಕೊಳ್ಳಲು ಆತನೇ ಇಲ್ಲದಿರುವ ಅವಕಾಶ ಬಳಸಿಕೊಂಡು ಸತ್ತ ಮೇಲೆ ನಾಲ್ಕು ಗೋಡೆಗಳೊಳಗಿನ ವಿಚಾರ ಎಳೆದು ತಂದು ಮಾನಹರಣವೂ ನಡೆಯುತ್ತದೆ.
ಕರ್ನಾಟಕದ ಇತಿಹಾಸವನ್ನು ನೋಡಿದರೆ ಒಂದೊಂದು ಕಾಲಘಟ್ಟಗಳಲ್ಲಿ ಒಂದೊಂದು ಲಾಭಿಗಳು ನಮ್ಮ ರಾಜಕಾರಣವನ್ನು ಆಳಿವೆ. ಮೊದಲಿಗೆ ಲಿಕ್ಕರ್ ಲಾಬಿ(ಹೆಂಡದ ದೊರೆಗಳು), ತದನಂತರ ಎಜುಕೇಶನ್ ಲಾಬಿ. ಆದರೆ ಇವತ್ತು ಲಿಕ್ಕರ್, ಎಜುಕೇಶನ್ ಲಾಬಿಗಳ ಜತೆಗೆ ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ, ಐರನ್‌ಓರ್ ಮಾಫಿಯಾ, ಟ್ರ್ರಾನ್ಸಫರ್ ಮಾಫಿಯಾ, ಕರಪ್ಷನ್ ಮಾಫಿಯಾಗಳು ಒಟ್ಟ್ಟಾಗಿ ನಮ್ಮನ್ನಾಳುತ್ತಿವೆ. ಇವತ್ತು ಯಾವ ರಿಯಲ್ ಎಸ್ಟೇಟ್ ಕಂಪನಿಗಳನ್ನು ತೆಗೆದುಕೊಳ್ಳಿ. ಅವು ಒಂದೋ ಒಬ್ಬ ರಾಜಕಾರಣಿಗೆ(ಎಲ್ಲಾ ಪಕ್ಷಗಳ) ಸೇರಿರುತ್ತದೆ, ಇಲ್ಲವೇ ಅತನ ಭ್ರಷ್ಟ ಹಣ ಅಲ್ಲಿ ಹೂಡಿಕೆಯಾಗಿರುತ್ತದೆ. ಇವತ್ತು ಹೋಬಳಿ ಮಟ್ಟಕ್ಕಿಳಿದಿದೆ ರಾಜಕಾರಣಿಗಳ ಲ್ಯಾಂಡ್ ಡೀಲಿಂಗ್. ಇವುಗಳ ಮಧ್ಯೆ ನಮ್ಮ ಅಧಿಕಾರಿಗಳು ಕೆಲಸ ಮಾಡಬೇಕು. ಸಂಸ್ಕಾರವಿಲ್ಲದ ರಾಜಕಾರಣಿಗಳಿಂದ ಏಕವಚನದಿಂದ ಸಂಭೋದಿಸಿಕೊಳ್ಳಬೇಕು. “ಒಬ್ಬ ರಾಜಕಾರಣಿ ಭ್ರಷ್ಟನಾಗಬೇಕಾದರೆ ಒಬ್ಬ ಅಧಿಕಾರಿಯ ಸಹಿ ಬೇಕು, ಆದರೆ ಒಬ್ಬ ಅಧಿಕಾರಿ ಭ್ರಷ್ಟನಾಗಬೇಕಾದರೆ ಯಾರ ಸಹಾಯವೂ ಬೇಕಿಲ್ಲ” ಎಂದು ಬಹಳ ಅರ್ಥಗರ್ಭಿತವಾಗಿ ಐಎಎಸ್ ಅಧಿಕಾರಿ ಎಂ.ಎನ್. ವಿಜಯ್ ಕುಮಾರ್ ಅವರ ಪತ್ನಿ ಜಯಶ್ರೀಯವರು ಹೇಳಿದರು. ಹೀಗಿದ್ದರೂ ವ್ಯವಸ್ಥೆಯನ್ನು ಬದಲಾಸುತ್ತೇವೆ ಎಂದು ಪ್ರಾಮಾಣಿ ಕತೆಯಿಂದ ಹೊರಡುತ್ತರಲ್ಲಾ ಅಂತ ಅಧಿಕಾರಿಗಳನ್ನು ನಾವು ಬೆಂಬಲಿಸಬೇಕು, ರಕ್ಷಿಸಬೇಕು ಅಲ್ಲವೆ? ಪ್ರಾಮಾಣಿಕರು ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವಂಥ ವಾತಾವರಣ ಸೃಷ್ಟಿ ಮಾಡಿದರೆ ಯಾರೂ ಧ್ಯೆರ್ಯ ತೋರುತ್ತಾರೆ? ಅಲ್ಲಾ ಮುಖ್ಯಮಂತ್ರಿಯವರೇ, ಮನೆಯ ಹಲಸಿನ ಮರ ಮಾರಿ ಮಗನನ್ನು ಓದಿಸಿ ಐಎಎಸ್ ಮಾಡಿಸಿದ ಬಡ ತಾಯಿ ಮಗನನ್ನು ಮಣ್ಣು ಮಾಡಿ ನ್ಯಾಯ ಕೊಡಿಸಿ ಅಂತ ವಿಧಾನಸೌಧದ ಮುಂದೆ ಬಂದು ಕುಳಿತಿದ್ದರೆ ಸ್ವತಃ ಹೋಗುವ ಬದಲು ಆ ಶಾಸಕ ಸೋಮಶೇಖರ್, ಮಂಜು, ಮಟ್ಟುಗಳಂಥ ಏಜೆಂಟರನ್ನು ಕಳುಹಿಸುತ್ತಿರಲ್ಲಾ ನಿಮಗೆ ಅಂತಃಕರಣವೇ ಇಲ್ಲವೆ?
ಕೊನೆಗೂ ಒಂದು ಕೊರಗು ಕಾಡುತ್ತಿದೆ: ಈ ಮಾಫಿಯಾಗಳು ಬಂದ ನಂತರ ಕರ್ನಾಟಕದಲ್ಲಿ ಪ್ರಾಮಾಣಿಕತೆಗೆ ಬೆಲೆಯಿಲ್ಲ ಎಂಬುದು ರವಿಯವರಿಗೆ ತಿಳಿದಿರದ ಸಂಗತಿಯೇನಾಗಿರಲಿಲ್ಲ. ಒಳ್ಳೆಯ ಕೆಲಸ ಮಾಡುತ್ತಿರುವಾಗಲೇ ಕೋಲಾರದಿಂದ ಎತ್ತಂಗಡಿಯಾದಾಗಲೇ ರವಿಗೂ ಇದರ ಅನುಭವವಾಗಿತ್ತು. ಆದರೆ ಏಕೆ ವೇದನೆಯಾಗುತ್ತಿದೆಯೆಂದರೆ ತಾನು ಮಹಾಭ್ರಷ್ಟರು, ಕಳ್ಳರು, ಸುಳ್ಳರು ತುಂಬಿರುವ ವ್ಯವಸ್ಥೆಯಲ್ಲಿದ್ದೇನೆ ಎಂಬುದು ಗೊತ್ತಿದ್ದರೂ ಸಮಾಜಕ್ಕೆ ಒಳ್ಳೆಯದು ಮಾಡಲು ಹೋಗಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡರಲ್ಲಾ ಆ ರವಿಯನ್ನು ಮರಳಿ ಪಡೆಯುವುದಕ್ಕೆ ನಮ್ಮಿಂದಾಗುತ್ತಿಲ್ಲವಲ್ಲಾ ಎಂಬ ಅಸಹಾಯಕತೆಯಿಂದ. ಭ್ರಷ್ಟಾಚಾರಿಗಳ ವಿರುದ್ಧ ಸೆಣೆಸಿ ಸೋತು ಆ ಎಸ್ಪಿ ಮಧುಕರ ಶೆಟ್ಟಿ ದೇಶವನ್ನೇ ಬಿಟ್ಟು ಹೋದರು. ಕನಿಷ್ಟ ರವಿ ಆ ಕೆಲಸವನ್ನಾದರೂ ಮಾಡಿದ್ದರೆ ಆ ಬಡತಾಯಿಗೆ ಪುತ್ರಶೋಕವಾದರೂ ತಪ್ಪುತ್ತಿತ್ತು. ಛೇ!