Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೀನರ ಆಳಾದ ಕರ್ನಾಟಕದ ಅರಸು

ದೀನರ ಆಳಾದ ಕರ್ನಾಟಕದ ಅರಸು

ಡಿ. ದೇವರಾಜ ಅರಸು. ಆ ಹೆಸರು ಕೇಳಿದಾಕ್ಷಣ ಹಲವು ಚಿತ್ರಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. “ಅರಸುತನ’ಕ್ಕೆ ತಕ್ಕ ಅಜಾನುಭಾಹು ಶರೀರ, ಹಿಂದುಳಿದ ವರ್ಗದ ಶ್ರೇಯೋಭಿವ್ರದ್ಧಿಯ ಹರಿಕಾರ, ದಾಢಸಿ ಗುಣದ, ಇಂದಿರಾ ಗಾಂಧಿ ಆಪ್ತ ರಾಜಕಾರಣಿಯ, ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ರಾಜ್ಯದಲ್ಲಿಕ್ರಾಂತಿಯನ್ನು ಮಾಡಿದ, ಪ್ರಾದೇಶಿಕ ಪಕ್ಷವನ್ನು ಕಟ್ಟಿದ, ಇಂದಿರಾರಂಥಾ ಇಂದಿರಾರಿಗೇ ಸೆಡ್ಡುಹೊಡೆದ, ರಾಜ್ಯಕ್ಕೆ ’ಕರ್ನಾಟಕ’ ಎಂಬ ನಾಮಕರಣ ಮಾಡಿದ ಮುಖ್ಯಮಂತ್ರಿಯ ಚಿತ್ರ ಕಣ್ಣಮುಂದೆ ಬರುತ್ತದೆ. ದೇವರಾಜ ಅರಸರು ಎಂದರೆ ಇಂಥ ಹಲವು ಚಿತ್ರಣಗಳ ಒಟ್ಟು ಮೊತ್ತ. ಕರ್ನಾಟಕದಲ್ಲಿ ತೀವ್ರವಾಗಿಟೀಕೆಗೊಳಪಟ್ಟ ಮತ್ತು ಅಷ್ಟೇ ಶ್ಲಾಘನೆಗೆ ಒಳಪಟ್ಟ ದೇವರಾಜ ಅರಸರನ್ನು ಜನ ’ಭ್ರಷ್ಟಾಚಾರದ ಹರಿಕಾರ’ ಎಂದಷ್ಟೇ ’ಕರ್ನಾಟಕದ ಅರಸು’ ಎಂದು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅವರ ಬಡಬಗ್ಗರ ಬಗೆಗಿನ ಕಾಳಜಿಯನ್ನು ಪ್ರತ್ಯಕ್ಷ ಕಂಡವರು ಅವರನ್ನು ನಾಲ್ವಡಿ ಕ್ರೃಷ್ಣರಾಜ ಒಡೆಯರಿಗೆ ಹೋಲಿಸಿದ್ದಾರೆ! ಭೃಹತ್ದಂಡಿನೊಡನೆ ಕಾರಿನಲ್ಲಿ ಸಾಗುತ್ತಿದ್ದ ಅರಸರು ದಾರಿಬದಿಯ ಬಡವನ ಕಂಡು ಕಾರುನಿಲ್ಲಿಸಿ ಮಾತಾಡಿದ ಎಷ್ಟೋ ಘಟನೆಗಳಿವೆ. ಅವರ ಹಲವು ನಡೆಗಳನ್ನು ನೋಡಿದವರು ಅವರನ್ನು ನೈಜ ಸಮಾಜವಾದಿ ಸಿದ್ಧಾಂತದ ಅನುಷ್ಠಾನಿಕನೆಂದು ವಿಶ್ಲೇಷಣೆ ಮಾಡಿದವರಿದ್ದಾರೆ. ಕರ್ನಾಟಕವನ್ನು ಸರಿಯಾಗಿ ಗ್ರಹಿಸಿದ ಮೊದಲಮುಖ್ಯಮಂತ್ರಿಯಾಗಿ, ನಾಡು-ನುಡಿಗಳನ್ನು ಕೇವಲ ಭಾವನೆಗಳ ಕಣ್ಣಿಂದ ನೋಡದೆ ವಾಸ್ತವದ ನೆಲೆಗಟ್ಟಿನಿಂದ ನೋಡಿದವರಾಗಿ, ರಾಜ್ಯ ಪುನರ್ನಾಮಕರಣದಲ್ಲಿ ಸ್ವತಃ ಮೈಸೂರಿಗರಾದರೂ ಭಾವನೆಗಳನ್ನು ಅದುಮಿಟ್ಟ ಸ್ಥಿತಪ್ರಜ್ಞನಾಗಿ, ಜೀತದಿಂದ ಬದುಕು ಸವೆಸುತ್ತಿದ್ದ ಅದೆಷ್ಟೋ ಜನರ ’ಬುದ್ಧಿ’ಯವರಾಗಿ, ರಾಜ್ಯದಲ್ಲಿಸರ್ವಾಧಿಕಾರದ ಪೋಷಕರಾಗಿ, ಕೊನೆಗೆ ಅದೇ ಸರ್ವಾಧಿಕಾರಕ್ಕೆ ಬಲಿಯಾದವರಾಗಿ, ನಂಬಿದವರಿಂದ ಬೆಳೆಸಿದವರಿಂದ ಹೊರದೂಡಲ್ಪಟ್ಟವರಾಗಿ, ದೇಶದ ಚುಕ್ಕಾಣಿ ಹಿಡಿದವರ ಅಧಿಕಾರ ಕಾಪಾಡಿದವರಾಗಿ ಕಾಣುವ ಕಲ್ಲಹಳ್ಳಿಯ ಡಿ. ದೇವರಾಜ ಅರಸರು ಇಂದಿಗೂ ಹಲವು ದೋಷಗಳ ಹೊರತಾಗಿಯೂ ಜನರಮೆಚ್ಚಿನ ಮುಖ್ಯಮಂತ್ರಿಯಾಗಿ ನಿಲ್ಲುತ್ತಾರೆ.

ಬಿಎಸ್‌ಇ ಪದವಿಧರರಾದರ ಕ್ರಷಿಕರಾಗಿದ್ದ ಅರಸರಿಗೆ ಗ್ರಾಮಜೀವನದ ಬುಡದ ಅರಿವಿತ್ತು. ದುಡಿಯುವ ವರ್ಗದ ಸಂಕಷ್ಟಗಳು ಗೊತ್ತಿತ್ತು. ಹೀಗೆ ಶ್ರಮ ಸಂಸ್ಕ್ರತಿಯನ್ನು ಹತ್ತಿರದಿಂದ ಕಂಡಿದ್ದ ಅವರು ಭೂಸುಧಾರಣೆಯ ಪಿತಾಮಹರಾದರು. ಭೂಸುಧಾರಣೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಜನತಾನ್ಯಾಯಮಂಡಳಿಗಳ ಸ್ಥಾಪನೆ ಸ್ವತಃ ಅರಸರ ದೂರದ್ರಷ್ಟಿತ್ವಕ್ಕೆ ಹಿಡಿದ ಕೈಗನ್ನಡಿ. ಊಳುವವನೇ ಭೂಮಿಯೊಡೆಯ ಕಾನೂನಿಗೆ ತೀವ್ರ ವಿರೋಧ ವ್ಯಕ್ತವಾದರೂ, ಅರಸರ ರಾಜಕಾರಣದ ಆಪ್ತರೇ ಅದನ್ನು ವಿರೋಧಿಸಿದರೂ ಅವರು ಕೊನೆಗೆ ನಿಂತದ್ದು ನೇಗಿಲಯೋಗಿಯ ಕಡೆಗೆ. ಅರಸರ ಆಪ್ತರಾಗಿದ್ದವರು,ಮಂತ್ರಿಮಂಡಳದ ಸಹೋದ್ಯೋಗಿಗಳು, ನೆಂಟರಿಸ್ಟರು ಕೂಡ ಭೂಮಿಯನ್ನು ಕಳೆದುಕೊಂಡರು. ಆದರೆ ಈ ನೀತಿ ಹಿಂದುಳಿದವರಿಗೆ ನ್ಯಾಯ ಒದಗಿಸುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ಅರಸರು ಎಲ್ಲಾ ವಿರೋಧವನ್ನು ಮೆಟ್ಟಿನಿಂತರು. ಇಂಥ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅರಸರಿಗೆ ಯಾವುದೇ ರಾಜಕೀಯಆಲೋಚನೆ, ವೋಟ್ ಬ್ಯಾಂಕಿನ ಚಿಂತನೆ, ಓಲೈಕೆಯ ರಾಜಕಾರಣ ಬರಲಿಲ್ಲವೆನ್ನುವುದು ಗಮನಾರ್ಹ ಸಂಗತಿ. ಏಕೆಂದರೆ ಅಂದು ಭೂಮಿ ಕಳೆದುಕೊಂಡಿದ್ದವರೆಲ್ಲರೂ ಸಮಾಜದ ಪ್ರತಿಷ್ಠಿತ ಮತ್ತು ಪ್ರಭಾವಿ ವರ್ಗದವರು. ರಾಜಕಾರಣವನ್ನು ಅವರು ದೀನರ ಉದ್ದಾರಕ್ಕೆ ಬಳಸಿಕೊಂಡರು. ಭೂಸುಧಾರಣೆ ಕಾಯ್ದೆಯಸಂದರ್ಭದ ಅರಸು ನಮಗೆ ರಿಯಲ್ ಹೀರೋ ಆಗಿ ಕಾಣುತ್ತಾರೆ. ಕೆಲವೆಡೆ ಊಳುವವನೇ ಭೂಮಿಯೊಡೆಯ ಕಾನೂನು ಅವೈಜ್ಞಾನಿಕವಾಗಿದ್ದರೂ ಆ ಹೊತ್ತಿನ ಅರಸರ ನಡೆಗಳಿಗೆ ಸಲಾಂ ಎನ್ನಲೇಬೇಕು. ಆ ಮೂಲಕ ಅರಸರು ಒಂದು ಚಾರಿತ್ರಿಕ ಸುಧಾರಣ ಕ್ರಮಕ್ಕೆ ಚಾಲನೆ ನೀಡಿದರು. ನೇಗಿಲಯೋಗಿಗೆ ನೀಡಿದವರವಾಗಿ ಕಾಣುವ ಅರಸರ ಭೂಸುಧಾರಣಾ ಕಾಯ್ದೆ ಅರಸರನ್ನು ನಾಡಿನ ಚಿರಸ್ಮರಣೀಯರ ಸಾಲಿನಲ್ಲಿ ನಿಲ್ಲಿಸುತ್ತದೆ. ಅವರ ಇಂಥ ದಿಟ್ಟ ಸುಧಾರಣಾ ಕ್ರಮಗಳಿಂದ ಅವರನ್ನು ಕೆಲವರು ನಾಲ್ವಡಿಯವರಿಗೆ ಹೋಲಿಸುವುದರಲ್ಲಿ ಅತಿಶಯೋಕ್ತಿಯೇನಲ್ಲ. ಉಳುವವನೇ ಭೂಮಿಯೊಡೆಯ ಕಾಯ್ದೆ ಜಾರಿಮಾಡುವಲ್ಲಿ ಅರಸರುಗಂಡೆದೆಯ ಕ್ರಮಗಳನ್ನೇ ಕೈಗೊಂಡರು. ಆ ಸಮಯದಲ್ಲಿ ಅರಸರು ಸ್ವಪಕ್ಷದವರಿಂದಲೇ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಏಕೆಂದರೆ ಅದಾಗಲೇ ಕಮ್ಯುನಿಸ್ಟ್ ಆಡಳಿತದ ರಾಜ್ಯಗಳನ್ನು ಬಿಟ್ಟರೆ ಅಂಥದ್ದೊಂದು ಕಾನೂನನ್ನು ಬೇರಾವ ರಾಜ್ಯಗಳೂ ಅನುಷ್ಟಾನಕ್ಕೆ ತಂದಿರಲಿಲ್ಲ. ಅಲ್ಲದೆ ಅದು ಸೂಕ್ಷ್ಮ ವಿಚಾರಕೂಡ. ರಾಜ್ಯದ ಚರಿತ್ರೆಯನ್ನೇ ತಿದ್ದಿ ಬರೆಯುವೆ ಎಂಬಂತೆ ಅರಸರು ಊಳುವವನೇ ಭೂಮಿಯೊಡೆಯ ಕಾನೂನನ್ನು ಅನುಷ್ಠಾನಕ್ಕೆ ತಂದರು. ಕಾನೂನನ್ನು ವಿರೋಧ ಮಾಡುತ್ತಿದ್ದ ಸ್ವಪಕ್ಷೀಯರನ್ನು ಪಕ್ಷಬಿಟ್ಟು ಹೊರನಡೆಯುವಂತೆ ನಿಷ್ಟುರವಾಗಿ ಹೇಳಿದರು. ವಾಸ್ತವದ ನೆಲೆಯಲ್ಲಿ ಯೋಚಿಸುವ ಸಾಮರ್ಥ್ಯ ಮತ್ತುಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಳ್ಳುವ ಗುಣ ಅವರಿಂದ ಇಂಥ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಂತೆ ಮಾಡಿತು.

ಹಲವು ರಾಜಕೀಯ ವಿಶ್ಲೇಷಕರು ಭೂಸುಧಾರಣಾ ಕಾಯ್ದೆಯನ್ನು ಮತ್ತೊಂದು ಕೋನದಿಂದ ವಿಮರ್ಶಿಸುತ್ತಾರೆ. ಅರಸರು ಇಂದಿರಾಗಾಂಧಿಯವರ ಆಪ್ತರಾಗಿದ್ದರು, ಅರಸರ ಎಲ್ಲಾ ಬೇಡಿಕೆಗಳಿಗೆ ಇಂದಿರಾಗಾಂಧಿ ಸುಲಭ ಒಪ್ಪಿಗೆಯನ್ನು ಕೊಟ್ಟುಬಿಡುತ್ತಿದ್ದರು ಎನ್ನುವವರಿದ್ದಾರೆ. ಆದರೆ ಅಂಥದ್ದೊಂದು ಕಾಯ್ದೆಯನ್ನು ಜಾರಿಗೆತರಲು ಸ್ವತಃ ನೆಹರೂ ಸರ್ಕಾರವೇ ಹೆದರುತ್ತಿತ್ತು. ಸ್ವತಃ ಸಮಾಜವಾದಿಯಾದರೂ ನೆಹರೂ ಸರ್ಕಾರದಲ್ಲಿದ್ದ ದಿಗ್ಗಜರಾದ ರಾಜಾಜಿ, ಪಟೇಲ್, ಕಾಮರಾಜ್, ಜಿ.ವಿ ಪಂತ್‌ರಂಥ ಘಟಾನುಘಟಿಗಳೇ ಈ ವಿಷಯದಲ್ಲಿ ನೆಹರೂ ವಿರುದ್ಧವಾಗಿ ನಿಂತಿದ್ದರು. ಹಾಗಾಗಿ ನೆಹರೂಗೆ ಮನಸ್ಸಿದ್ದರೂ ಭೂಸುಧಾರಣಾ ಕಾಯ್ದೆಈಡೇರಲಿಲ್ಲ. ಸ್ವತಃ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗಲೂ ಹೊಸ ಭೂಸುಧಾರಣಾ ಕಾಯ್ದೆಯನ್ನು ಮಂಡಿಸಿದರಾದರೂ ಅದು ಕಾಂಗ್ರೆಸಿನೊಳಗಿನ ಭೂಮಾಲಿಕ ವರ್ಗಕ್ಕೆ ತೊಂದರೆಯಾಗದಂತೆ ಇತ್ತು. ಇನ್ನೊಂದೆಡೆ ಭೂಸುಧಾರಣೆಯ ಕೆಲವು ನಿಯಮಗಳು ಉತ್ಪತ್ತಿದರವನ್ನು ಕುಗ್ಗಿಸುತ್ತವೆ, ಬಂಡವಾಳದಕೊರತೆಯಾಗುತ್ತವೆ, ಅಭಿವೃದ್ಧಿ ಕುಂಠಿತವಾಗುತ್ತವೆ ಎಂಬ ಟೀಕೆಗಳ ಭಯ ಕಾಂಗ್ರೆಸಿಗೆ ಇತ್ತು ಮತ್ತು ಅದಕ್ಕೂ ಮಿಗಿಲಾಗಿ ಭೂಮಿ ಕಳೆದುಕೊಂಡ ವರ್ಗ ಕಾಂಗ್ರೆಸ್ ವಿರೋಧಿಯಾಗುವುದೆಂಬ ಭಯ ಆಳುವವರಿಗೆ ಇದ್ದೇ ಇತ್ತು.
ಆ ಹೆದರಿಕೆಯನ್ನು ಮೆಟ್ಟಿನಿಂತವರು ಅರಸರು. ಅಂಥದ್ದೊಂದು ಕಾಯ್ದೆಯನ್ನು ಕಾಂಗ್ರೆಸ್ ಜಾರಿಗೆ ತರಲು ಅರಸುತನವೇ ಬೇಕಿತ್ತು! ಅಂದರೆ ನೆಹರೂಗೂ ಸಾಧ್ಯವಾಗದ, ಇಂದಿರಾಗೂ ಸಾಧ್ಯವಾಗದ ಸುಧಾರಣೆಯನ್ನು ಜಾರಿಗೆ ತಂದವರು ಕಾಂಗ್ರೆಸಿನಲ್ಲಿ ಒಬ್ಬನೇ ಒಬ್ಬ ಅರಸು. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದುಹಲವು ಬಾರಿ ನಿರಂಕುಷತೆ ಎಂಬ ಹಣೆಪಟ್ಟಿಯನ್ನು ಹೊತ್ತುಕೊಳ್ಳುವುದು ರಾಜಕಾರಣದಲ್ಲಿ ಸಾಮಾನ್ಯ. ಅಂಥ ’ನಿರಂಕುಷತೆ’ಯನ್ನು ಹಲವು ಬಾರಿ ಮುಖಾಮುಖಿಯಾಗಿ ಎದುರಿಸಿದವರು ಅರಸರು. ರಾಜಕಾರಣದಲ್ಲಿ ಅಪರೂಪಕ್ಕೆ ಸಿಗುವಂಥ ವ್ಯಕ್ತಿತ್ವ ಅವರದೆನ್ನಲು ಅವರ ಈ ಗುಣವೇ ಸಾಕ್ಷಿ.

ದೇಶದಲ್ಲಿ ಮೀಸಲಾತಿ ತರಲು ಕಾಲೇಕ್ಕರ್ ವರದಿಯನ್ನು ಸಮರ್ಪಕವಾಗಿ ಜಾರಿಗೆ ತಂದವರು ನಮ್ಮ ಕಲ್ಲಹಳ್ಳಿಯ ಅರಸು. ದೇಶದ ಉಳಿದ ರಾಜ್ಯಗಳು ಅದನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿದ್ದಾಗ ಕರ್ನಾಟಕದಲ್ಲಿ ಅರಸರು ಕಾಲೇಕ್ಕರ್ ವರದಿಯನ್ನು ಜಾರಿಗೆ ತರಲು ಹಾವನೂರ್ ವರದಿಯನ್ನು ರಚಿಸಿಮೀಸಲಾತಿಯನ್ನು ಅನುಷ್ಠಾನಗೊಳಿಸಿದರು. ಉಳಿದ ರಾಜ್ಯಗಳು ಅರಸರ ಪ್ರಯೋಗವನ್ನು ಗಮನಿಸಿ ’ಕರ್ನಾಟಕ ಮಾಧರಿ’ಯಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಅಂದರೆ ದೇಶದ ಉಳಿದ ರಾಜ್ಯಗಳು ಕರ್ನಾಟಕಕ್ಕಿಂತ ಮೂರು ವರ್ಷ ಹಿಂದಿದ್ದವು! ವಿಶೇಷವೆಂದರೆ ಅರಸರ ಕಾಲವಾಗಿ ಎಷ್ಟೋ ವರ್ಷಗಳಾದನಂತರ ಕೇಂದ್ರದಲ್ಲಿದ್ದ ವಿ.ಪಿ ಸಿಂಗ್ ಸರ್ಕಾರ ಅರಸರ ಮಾಧರಿಯನ್ನು ಜಾರಿಗೆ ತರಲೆತ್ನಿಸಿತ್ತು. ಅದು ಮುಂದೆ ೧೯೯೨ರಲ್ಲಿ ನರಸಿಂಹ ರಾಯರ ಕಾಲದಲ್ಲಿ ನೆರವೇರಿತು. ಅಂದರೆ ಪಿ.ವಿ. ನರಸಿಂಹ ರಾವ್ ಮತ್ತು ವಿ.ಪಿ ಸಿಂಗರಿಗಿಂತಲೂ ಮೊದಲು ಅದನ್ನು ಸಾಧಿಸಿ ತೋರಿಸಿದವರು ನಮ್ಮ ಕರ್ನಾಟಕದ ಅರಸು. ಜೀತಪದ್ಧತಿಯ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಅರಸರು ಸುಮಾರು ೬೦ ರಿಂದ ೭೦ ಸಾವಿರ ಜನರನ್ನು ಜೀತ ಮುಕ್ತಗೊಳಿಸಿದ್ದರು. ಆ ಪುಣ್ಯ ಅವರ ಮೇಲಿದೆ. ಆ ಸಾವಿರಾರು ಕುಟುಂಬ ಇಂದಿಗೂ ಅರಸರನ್ನು ಇಂದಿಗೂ ನೆನಪಿಸಿಕೊಳ್ಳುತ್ತಿದೆ.

ದೇವರಾಜ ಅರಸರನ್ನು ಕರ್ನಾಟಕದ ಅರಸು ಕರೆಯಲು ಇನ್ನೂ ಕಾರಣಗಳಿವೆ. ನಾಡಿನ ಅಪೇಕ್ಷೆಯಂತೆ ರಾಜ್ಯಕ್ಕೆ ’ಕರ್ನಾಟಕ’ ಎಂದು ನಾಮಕರಣ ಮಾಡಿದ್ದು, ಸರ್ಕಾರಿ ನೌಕರರ ವೇತನವನ್ನು ಹೆಚ್ಚಿಸಿದ್ದು, ಇಂದಿಗೂ ಪ್ರಸ್ತುತವೆನಿಸುವ ’ಭಾಗ್ಯಜ್ಯೋತಿ’ ಯೋಜನೆ, ಪ್ರಾಥಮಿಕ ಶಿಕ್ಷಣಕ್ಕೆ ಕೊಟ್ಟ ಒತ್ತು, ಮಲಹೊರುವಪದ್ದತಿಯ ನಿರ್ಮೂಲನೆಗೆ ಕೈಗೊಂಡ ಕ್ರಮಗಳು, ಜೀತ ಪದ್ದತಿಯ ನಿಷೇಧ…ಇವೆಲ್ಲವೂ ಇಂದಿಗೂ ರಾಜ್ಯದ ಆಡಳಿತದಲ್ಲಿ ಪ್ರಮುಖ ಮೈಲುಗಲ್ಲುಗಳೆನಿಸಿವೆ.

ಕರ್ನಾಟಕ ರಾಜಕಾರಣದಲ್ಲಿ ಗುಂಪುಗಾರಿಕೆ, ರುಷುವತ್ತಿನ ಹರಿವುಗಳನ್ನು ಪ್ರಾರಂಭಿಸಿದ ಕುಖ್ಯಾತಿ ದೇವರಾಜ ಅರಸರ ಆಡಳಿತಕ್ಕೆ ಎಷ್ಟೊಂದು ಅಂಟಿಕೊಂಡಿತ್ತೆಂದರೆ ಅಂದು ಅದರ ಮುಂದೆ ಅವರ ಆಡಳಿತ ವ್ಯವಸ್ಥೆ, ದೂರದ್ಟೃಗಳೆಲ್ಲವೂ ಮಸುಕಾದವು. ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ರಾಜಕೀಯಶಕ್ತಿಯಾಗಿ ಕ್ರೋಡೀಕರಿಸಿದರಾದರೂ ಇಂದಿರಾ ಮಾಯೆಯಲ್ಲಿ ಅದೂ ಕೂಡ ಮಸುಕಾತು. ಪ್ರಬಲ ಜಾತಿಗಳ ರಾಜಕೀಯ ಪ್ರಾಬಲ್ಯವನ್ನು ಮಟ್ಟಹಾಕಲು ಪ್ರಯತ್ನಿಸಿದರಾದರೂ ಅವರ ಅಧಿಕಾರಾವಧಿಯ ನಂತರ ಜಾತಿ ಆಧಾರಿತ ರಾಜಕಾರಣ ಮೇರೆ ಮೀರತೊಡಗಿತು. ದಲಿತ ಮತ್ತು ಹಿಂದುಳಿದ ವರ್ಗಗಳ ಯುವನಾಯಕರನ್ನು ಬೆಳೆಸಿದರಾದರೂ ಅರಸರ ಕಷ್ಟಕಾಲದಲ್ಲಿ ಅವರಾರೂ ನೆರವಿಗೆ ಬರಲಿಲ್ಲ. ಮೊರಾರ್ಜಿ ದೇಸಾ ಸರ್ಕಾರ ಇಂದಿರಾ ಗಾಂಧಿಯವರನ್ನು ಎಲ್ಲೂ ಸಲ್ಲದಂತೆ ಮಾಡಿತಷ್ಟೆ. ಜೊತೆಗೆ ಇಂದಿರಾಗೆ ಕೂಡ ಸ್ವತಃ ಅಮೇಠಿಯಲ್ಲಿ ಸ್ಪರ್ಧಿಸಲು ಧೈರ್ಯವಿರಲಿಲ್ಲ. ಕಾಂಗ್ರೆಸ್ ಆಡಳಿತವಿದ್ದ ಯಾವ ಸರ್ಕಾರಗಳೂಇಂದಿರಾ ಗಾಂಧಿಯನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿ ಉಪಚುನಾವಣೆಯಲ್ಲಿ ನಿಲ್ಲಿಸುವ ಧೈರ್ಯ ಮಾಡಲಿಲ್ಲ. ಆಗ ಇಂದಿರಾಗೆ ನೆಲೆ ಕೊಟ್ಟವರು ದೇವರಾಜ ಅರಸರು. ಚಿಕ್ಕಮಗಳೂರಿನಲ್ಲಿ ಉಪಚುನಾವಣೆಗೆ ನಿಲ್ಲಿಸಿ ನೇಪತ್ಯಕ್ಕೆ ಸರಿದುಹೋಗುತ್ತಿದ್ದ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ಜನ್ಮವನ್ನು ಕೊಟ್ಟವರುಅರಸರು. ಪಕ್ಷಕ್ಕಾಗಿ ಎಂಥ ಸವಾಲನ್ನಾದರೂ ಸ್ವೀಕರಿಸಲು ಹಿಂಜರಿಯದ ಅರಸರು ಮುಂದೆ ಅದೇ ಇಂದಿರಾ ಗಾಂಧಿಯವರಿಂದ ರಾಜಕೀಯ ನೆಲೆಕಳೆದುಕೊಳ್ಳಬೇಕಾಗಿ ಬಂದುದು ದುರಂತ. ತಾವು ಬೆಳೆಸಿದ ಯಾವ ನಾಯಕರೂ ಕೊನೆಗೆ ಅರಸರಿಗಾಗಲಿಲ್ಲ. ತಾವು ಕಟ್ಟಿದ ’ಕ್ರಾಂತಿರಂಗ’ವೂ ಕೈಹಿಡಿಯಲಿಲ್ಲ. ಅರಸರುಚುನಾವಣೆಯಲ್ಲಿ ಸೋತರು. ಅವರ ರಾಜಕೀಯ ಬದುಕು ದುರಂತ ಅಂತ್ಯ ಕಂಡಿತು. ಅವರ ಸರ್ವಾಧಿಕಾರ, ಭೃಷ್ಟಾಚಾರಕ್ಕೆ ದಾರಿಮಾಡಿಕೊಟ್ಟ ದಾರಿಗಳ ಹೊರತಾಗಿಯೂ ಅರಸರು ನಮಗೆ ಇಷ್ಟವಾಗಲು ಕಾರಣಗಳಿವೆ.

ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಅವರು ತಮ್ಮ ಕುಟುಂಬವನ್ನು ಅಧಿಕಾರದಿಂದ ದೂರ ಇಟ್ಟರು. ಕಾಂಗ್ರೆಸಿನಲ್ಲಿದ್ದುಕೊಂಡು ವಂಶಪಾರಂಪರ್ಯ ಆಡಳಿತವನ್ನು “ರೋಧಿಸುವ ತಾಕತ್ತು ಅವರಿಗಿತ್ತು. ಅರಸರ ಅಳಿಯನೊಬ್ಬ ರಾಜಕೀಯ ಮಾಡುತ್ತಿದ್ದರೂ ಚುನಾವಣೆಯಲ್ಲಿ ಆತನಿಗೆಟಿಕೇಟು ನೀಡದೆ ಪಕ್ಷಕ್ಕೆ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದರು. ಇಂದಿರಾರಿಂದ ಸರ್ವಾಧಿಕಾರ ಧೋರಣೆಯನ್ನು ಬೆಳೆಸಿಕೊಂಡಿದ್ದ ಅರಸರು ಇಂದಿರಾ ರಾಜಕಾರಣದ ವಂಶಪಾರಂಪರ್ಯವನ್ನು ಮೈಗೂಡಿಸಿಕೊಳ್ಳಲಿಲ್ಲ.
ದಾಢಸಿತನದ ವ್ಯಕ್ತಿತ್ವ ಅರಸರಿಗೆ ಹೇಗೆ ವರವಾಗಿತ್ತೋ ಹಾಗೆಯೇ ಶಾಪವೂ ಆಗಿತ್ತು ಎನ್ನಬೇಕು. ಸೂಕ್ಷ್ಮ ನಿರ್ಧಾರಗಳನ್ನು ಯಾರ ಮುಲಾಜಿಗೂ ಒಳಪಡದೆ ಕೈಗೊಳ್ಳುತ್ತಿದ್ದ ಅರಸರು ಇಂದಿರಾ ಸರ್ವಾಧಿಕಾರದ ಸಾರಥಿ ಎಂದೇ ಖ್ಯಾತರಾಗಿದ್ದರು. ಸರ್ವಾಧಿಕಾರಕ್ಕೆ ಬೆಂಬಲ ನೀಡಿ ಇಂದಿರಾಗೆ ಆಪ್ತರಾಗಲು ಅವರದಾಢಸಿತನವೇ ಮೊದಲ ಕಾರಣವಾಗಿತ್ತು. ಒಂದೆಡೆ ರಾಜ್ಯದಲ್ಲಿ ಅನೇಕ ಸುಧಾರಣೆಗಳಾಗುತ್ತಿದ್ದರೆ ಇನ್ನೊಂದೆಡೆ ರಾಜ್ಯ ಹಿಂದೆಂದೂ ಕಾಣದ ಭೃಷ್ಟಾಚಾರ, ಕಮಿಶನ್ ವ್ಯವಸ್ಥೆ, ದಳ್ಳಾಳಿಗಳ ಪ್ರವೇಶ, ಟೆಂಡರ್ ಗಳಲ್ಲಿ ಅವ್ಯವಹಾರಗಳು ಮಿತಿಮೀರಿದ್ದವು. ಅಲ್ಲೂ ಅವರ ದಾಢಸಿತನ ಎದ್ದು ಕಾಣುತ್ತಿತ್ತು. ಒಮ್ಮೆ ಈ ಬಗ್ಗೆಪತ್ರಕರ್ತರು ಅರಸರನ್ನು ಪ್ರಶ್ನಿಸಿದಾಗ ’ಏನು ಮಾಡೋದು? ದೊಡ್ಡ ಗುಂಪನ್ನು ಸಾಕಬೇಕಲ್ಲಾ’ ಎಂದು ಉತ್ತರಿಸಿದ್ದರು. ಅದು ಅಂದಿನ ಪತ್ರಿಕೆಗಳಲ್ಲಿ ಬಹುಚರ್ಚಿತ ಸುದ್ದಿಯಾಗಿತ್ತು. ದೆಹಲಿಯ ನಿರಂಕುಶ ಆಡಳಿತವನ್ನು ಹತ್ತಿರದಿಂದ ಕಂಡಿದ್ದ ಅರಸು ಕೆಲವು ಸಂದರ್ಭಗಳಲ್ಲಿ ಕರ್ನಾಟಕದಲ್ಲಿ ಅವರಂತೆಯೇಆಗಿಹೋದವರಂತೆ ಕಾಣುತ್ತಾರೆ. ಇಷ್ಟಾಗಿಯೂ ಅರಸರು ಕರ್ನಾಟಕದಲ್ಲಿ ’ಮರೆಯಲಾರದ ಬುದ್ಧಿ’ಯವರಾಗಿ ಜನಮಾನಸದಲ್ಲಿ ನಿಲ್ಲುತ್ತಾರೆ.

ದೇವರಾಜ ಅರಸರ ಬಾಲ್ಯದ ಗೆಳೆಯರೂ, ರಾಜ್ಯಕ್ಕೆ ’ಕರ್ನಾಟಕ’ಎಂದು ನಾಮಕರಣ ಮಾಡಬೇಕೆಂದು ಅರಸರಿಗೆ ಸೂಚಿಸಿದ ಮೈಸೂರಿನ ಹೆಮ್ಮೆ, ಕನ್ನಡದ ಖ್ಯಾತ ಸಾಹಿತಿ ಚದುರಂಗರು ಒಂದೆಡೆ ಹೀಗೆ ಬರೆಯುತ್ತಾರೆ: “ಸೀತಾಪಹರಣ ಕಳಂಕವಿಲ್ಲದಿದ್ದರೆ ರಾವಣ ದೇವರಿಗೆ ಅರ್ಪಿಸಬೇಕಾದ ಹಾರ ಎಂದುಹನುಮಂತ ಅಂದುಕೊಳ್ಳುತ್ತಾನೆ. ಅರಸರೂ ಹಾಗೆಯೇ, ಭೃಷ್ಟಾಚಾರದ ಕಳಂಕ ಇಲ್ಲದಿದ್ದರೆ ದೇವರಾಜ ಅರಸು ದೇವರಿಗೆ ಅರ್ಪಿಸಬೇಕಾದ ಹಾರ”. ಹಾಗೆ ಹೇಳುವ ಚದುರಂಗರು  ಅರಸರನ್ನು “ಮಾವಿನ ಹಣ್ಣನ್ನು ತಿಂದು ಮುಖದಲ್ಲಿ ಪ್ರಸನ್ನತೆಯನ್ನು ವ್ಯಕ್ತಪಡಿಸುವವರನ್ನು ಕಂಡಿದ್ದೇನೆ. ಆದರೆ ಬೇವಿನ ಹಣ್ಣನ್ನು ತಿಂದುಪ್ರಸನ್ನತೆಯನ್ನು ವ್ಯಕ್ತಪಡಿಸುವವರು ಅತ್ಯಂತ ವಿರಳ. ಅಂತಹ ವಿರಳ ವ್ಯಕ್ತಿಗಳಲ್ಲಿ ನಾನು ಕಂಡ ಹಾಗೆ ಡಿ. ದೇವರಾಜ ಅರಸರು ಒಬ್ಬರು. ಎನ್ನುವುದನ್ನೂ ಮರೆಯುವುದಿಲ್ಲ.

ಕೊನೆಗಾಲದಲ್ಲಿ ಇಂದಿರಾರಿಂದ ದೂರವಾಗಿ, ತಾನು ಸಾಕಿದವರಿಂದಲೂ ದೂರವಾಗಿ ಅನಾರೋಗ್ಯದಿಂದ ಮಲಗಿದ್ದ ಅರಸರ ಮನೆ ಮುಂದಿನಿಂದಲೇ ಒಂದು ದಿನ ಇಂದಿರಾ ಗಾಂಧಿ ಹಾದುಹೋದರು. ಪ್ರಧಾನಿಗಳ ದಂಡಿನ ಕಾರಿನ ಸೈರನ್ ಅನ್ನು ಮಲಗಿದ್ದಲ್ಲಿಂದಲೇ ಕೇಳಿಸಿಕೊಂಡಿದ್ದ ಕರ್ನಾಟಕದ ಅರಸು ತಮ್ಮಎಂದಿನ ಸ್ಥಿತಪ್ರಜ್ಞತೆಂದಲೇ ಅದನ್ನು ಕೇಳಿಸಿಕೊಂಡಿರಬಹುದೇ ಎನ್ನುವುದು ಕಾಡುವ ಪ್ರಶ್ನೆ. ಯಾಕೋ ಕಲ್ಲಹಳ್ಳಿಯ ಅರಸು ಕೊನೆಗಾಲದಲ್ಲಿ ಪಿ.ವಿ ನರಸಿಂಹರಾಯರನ್ನು ನೆನಪಿಗೆ ತರುತ್ತಾರೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದವರು ಕೊನೆಗಾಲದಲ್ಲಿ ಏನೂ ಇಲ್ಲದವರಂತೆ ದಿನಗಳನ್ನು ಎಣಿಸುವುದು ಅಲ್ಲಿಸಾಮಾನ್ಯವೇನೋ ಎನಿಸುತ್ತದೆ.

 

devarajaurs1

Comments are closed.