Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನೋಟು ರದ್ದೇನೋ ಸರಿ, ಆದರಿಂದ ನಮಗೇನು ಸಿಗುತ್ತೇ ರೀ?!

ನೋಟು ರದ್ದೇನೋ ಸರಿ, ಆದರಿಂದ ನಮಗೇನು ಸಿಗುತ್ತೇ ರೀ?!

 

ನೋಟು ರದ್ದೇನೋ ಸರಿ, ಆದರಿಂದ ನಮಗೇನು ಸಿಗುತ್ತೇ ರೀ?!
ಎರಡು ವರ್ಷ ಕಳೆಯಿತು, ನಮಗೇನು ದೊರೆಯಿತು? ಈ ಪ್ರಶ್ನೆ ಕೆಲ ತಿಂಗಳ ಹಿಂದೆ ನಿಮ್ಮನ್ನು ಕಾಡಿತ್ತು, ಅದರ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಯಿತು, ನಿಮಗೂ ಸಮಾಧಾನವಾಯಿತು. ಅದಾಗಿ ಕೆಲವೇ ತಿಂಗಳಲ್ಲಿ 500, 1000 ರೂಪಾಯಿ ನೋಟನ್ನು ರದ್ದು ಮಾಡಿದ್ದಾರೆ ಮೋದಿ, ಕೆಲವರಿಗೆ ಒಳಗೊಳಗೇ ಬೇಗುದಿ, ಮುಂದೇನು ಕಾದಿದೆ ಎಂಬ ಆತಂಕ. ಇನ್ನು ನೋಟು ರದ್ದು ಮಾಡಿದ್ದೇನೋ ಸರಿ, ಆದರೆ ನಮಗೇನು ಸಿಗುತ್ತೇ ರೀ? ಎಂಬ ಪ್ರಶ್ನೆ ಮತ್ತೆ ಕೆಲವರನ್ನು, ಅಂದರೆ ನಮ್ಮನ್ನು ನಿಮ್ಮನ್ನು ಕಾಡುತ್ತಿದೆ ಅಲ್ಲವೆ?
ಖಂಡಿತ ತಪ್ಪಲ್ಲ!
14.94 ಲಕ್ಷ ಕೋಟಿಯ 500, 1000 ರೂಪಾಯಿ ನೋಟು ಏಕಾಏಕಿ ರದ್ದು. 712,465,787 ಡೆಬಿಟ್ ಕಾರ್ಡುಗಳು, 26,378,940 ಕ್ರೆಡಿಟ್ ಕಾರ್ಡುಗಳು, 125 ಕೋಟಿ ಜನಸಂಖ್ಯೆ. ಆದರೆ ಇದ್ದಿದ್ದು ಕೇವಲ 1,25,857 ಬ್ಯಾಂಕ್ ಬ್ರಾಂಚುಗಳು, 2,02,201 ಎಟಿಎಂ! ಜಗತ್ತಿನ ಮುಂದುವರಿದ ದೇಶಗಳಲ್ಲಿ 1 ಲಕ್ಷ ಜನರಿಗೆ 43.9 ಎಟಿಎಂಗಳಿದ್ದರೆ, ನಮ್ಮಲ್ಲಿರುವುದು ಕೇವಲ 18! ಅವುಗಳಲ್ಲೂ ಸರಿಯಾಗಿ ದುಡ್ಡಿಲ್ಲ, 25 ದಿನ ಕಳೆದರೂ!  ಆದರೂ ತಾಳ್ಮೆಯಿಂದ ಎಟಿಎಂ, ಬ್ಯಾಂಕ್ ಬ್ರಾಂಚುಗಳ ಮುಂದೆಯೇ ನಿಂತಿದ್ದೀರಿ, ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು!! ಈ ನಡುವೆ ನೋಟು ರದ್ದತಿ ವಿರುದ್ಧ ಕರ್ನಾಟಕದ ಸನ್ಯಾನ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮೋದಿ ದುಡ್ಡು ಕೊಡುತ್ತೇವೆ ಎಂದು ಬೆಳಗಾವಿಯ ಕೊಳಗೇರಿಗಳಿಂದ ಮಹಿಳೆಯರನ್ನು ಕರೆದುಕೊಂಡು ಬಂದು ಮೋಸ ಮಾಡಿದ ಘಟನೆಯನ್ನು ನೀವೆಲ್ಲ ಟೀವಿಯಲ್ಲಿ ನೋಡಿರುತ್ತೀರಿ. ಕಾಂಗ್ರೆಸ್ಸಿನಿಂದ ಮೋಸಹೋಗಿದ್ದ ಮಹಿಳೆಯನ್ನು ನೋಟು ರದ್ದತಿಯಿಂದ ನಿಮಗೆ ತೊಂದರೆಯಾಗುತ್ತಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದರೆ, ಇಷ್ಟು ವರ್ಷಗಳನ್ನು ಅರೆಹೊಟ್ಟೆಯಲ್ಲೇ ಕಳೆದಿದ್ದೇವೆ, ಇನ್ನೊಂದು ತಿಂಗಳು ಕಾಯುತ್ತೇವೆ, ಮೋದಿ ಚಲೋ ಮಾಡಿದ್ದಾರೆ ಎಂದು ಆಕೆ ಕೂಡಾ ಹೊಗಳುತ್ತಾಳೆ!
ಇನ್ನೊಂದೆಡೆ ಮಮತಾ, ಜಯಲಲಿತಾ, ಮಾಯಾವತಿ, ಕೇಜ್ರೀವಾಲ್, ರಾಹುಲ್ ಗಾಂಧಿ. ಇವರಷ್ಟೇ ಅಲ್ಲ, ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ಕೂಡ ಪುಢಾರಿಯಂತೆ ಮಾತನಾಡಿದರು! ರಸ್ತೆ ರಸ್ತೆಗಳಲ್ಲಿ ದಂಗೆಯಾದೀತು ಎಂದ ಅವರ ಮಾತು, ಸರ್ಕಾರದ ನೀತಿಯ ಬಗ್ಗೆ ಟಿಪ್ಪಣಿ ಮಾಡಿದರೋ ಅಥವಾ ಸರ್ಕಾರದ ವಿರುದ್ಧ ದಂಗೆಗೆ ಚಿತಾವಣೆ ನೀಡುತ್ತಿದ್ದಾರೋ ಎಂಬ ಅನುಮಾನ ಸೃಷ್ಟಿ ಮಾಡಿತು! ದೇಶದಲ್ಲೇ ಅತಿ ಹೆಚ್ಚು ಪ್ರಸಾರ ಸಂಖ್ಯೆ ಹೊದಿರುವ ಇಂಗ್ಲಿಷ್ ದಿನಪತ್ರಿಕೆಯೊಂದಂತೂ ಯಾವ ಮಟ್ಟಕ್ಕೆ ಇಳಿಯಿತೆಂದರೆ 73 ವರ್ಷದ ವ್ಯಕ್ತಿಯೊಬ್ಬರು ಬ್ಯಾಂಕ್ ಮುಂದೆ ಬಿಸಿಲಿನಲ್ಲಿ ನಿಂತು ಸಾವಿಗೀಡಾದ ಎಂದು ಬರೆಯಿತು. ಆದರೆ ವ್ಯಕ್ತಿ ಬಳಿ ಬ್ಯಾಂಕ್ ಖಾತೆಯೇ ಇದ್ದಿರಲಿಲ್ಲ ಎಂಬ ಸತ್ಯ ಗೊತ್ತಾದ ಕೂಡಲೇ ಸ್ಪಷ್ಟೀಕರಣವನ್ನು ಸಣ್ಣದಾಗಿ ಪ್ರಕಟಿಸಿತು! ಅಷ್ಟು ಮಾತ್ರವಲ್ಲ, “Demonetisation breaks young bride’s  dream wedding in Delhi   ” ಎಂಬ ಶೀರ್ಷಿಕೆಯಡಿ ಭಾರೀ ವರದಕ್ಷಿಣೆ ಕೊಟ್ಟು ಮಾಡಲಿದ್ದ ಮದುವೆಯನ್ನೂ ವೈಭವೀಕರಿಸಿ ಬರೆಯಿತು ಆ ಲಜ್ಜೆಗೆಟ್ಟ ಪತ್ರಿಕೆ.
ಆದರೂ…
ನೀವ್ಯಾರೂ ತಾಳ್ಮೆ ಕಳೆದುಕೊಳ್ಳಲಿಲ್ಲ, ನಿಮ್ಮ ವಿಶ್ವಾಸ ಕರಗಲಿಲ್ಲ, ದಂಗೆ ಆರಂಭವಾಗಲಿಲ್ಲ. ಅಷ್ಟೇಕೆ, ದಂಗೆ ಎಬ್ಬಿಸಲು ಭಾರತ್ ಬಂದ್‍ಗೆ ಕರೆ ಕೊಟ್ಟಿದ್ದವರೇ ಎಲ್ಲಿ ಗೂಸಾ ತಿನ್ನಬೇಕಾಗುತ್ತದೋ ಎಂಬ ಭಯದಿಂದ ಬಂದ್ ಹಿಂತೆಗೆದುಕೊಂಡರು. ಆ ಒಬ್ಬ ವ್ಯಕ್ತಿಯ(ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ) ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ಯಾವ ಬಳುವಳಿ ಕೊಟ್ಟರೂ ಸಾಲದು ಬಿಡಿ. ಅದಕ್ಕಾಗಿಯೇ ಘೋಷಣೆಯಾಗಿದೆ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ”. ಈ ದುಡ್ಡಪ್ಪಗಳು ಒಂದು ಕೋಟಿ ಖಾತೆಗೆ ಜಮಾ ಮಾಡಿದರೆ, ನಾವು ಸಂಸತ್ತಿನಲ್ಲಿ ಮೂರು ದಿನಗಳ ಹಿಂದೆ ಪಾಸು ಮಾಡಿರುವ ಹೊಸ ಆದಾಯ ತೆರಿಗೆ ಕಾಯಿದೆ ಪ್ರಕಾರ 50 ಪರ್ಸೆಂಟ್ ಟ್ಯಾಕ್ಸ್ (30% ಟ್ಯಾಕ್ಸ್, ಅದರ ಮೇಲೆ 33 ಪರ್ಸೆಂಟ್ ಸರ್ಚಾರ್ಜ್, ಅದು 10 ಪರ್ಸೆಂಟ್ ಆಗುತ್ತದೆ, 10 ಪರ್ಸೆಂಟ್ ದಂಡ) ಉಳಿದ 25 ಲಕ್ಷವನ್ನು ಕೂಡಲೇ ಬಿಡಿಸಿಕೊಳ್ಳಬಹುದು, ಮಿಕ್ಕಿದ 25 ಲಕ್ಷವನ್ನು 4 ವರ್ಷದವರೆಗೂ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ನಂತರ ಬಡ್ಡಿರಹಿತವಾಗಿ ಸರ್ಕಾರ ಹಿಂದಿರುಗಿಸುತ್ತದೆ. ಅದುವರೆಗೂ ಆ 25 ಲಕ್ಷ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ವಿನಿಯೋಗವಾಗುತ್ತದೆ! 2022ಕ್ಕೆ ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತದೆ, ಅಷ್ಟರೊಳಗೆ ಪ್ರತಿಯೊಂದೂ ಕುಟುಂಬಕ್ಕೂ ಮನೆಕೊಡುತ್ತೇನೆ ಎಂದು ಇತ್ತೀಚೆಗೆ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯನ್ನು ಮೋದಿಯವರು ಘೋಷಣೆ ಮಾಡಿದರಲ್ಲಾ ಅದರ ಸಾಕಾರಕ್ಕೆ ಬಳಕೆಯಾಗುತ್ತದೆ. 50 ಪರ್ಸೆಂಟ್ ತೆರಿಗೆ ಕಟ್ಟಿಸಿಕೊಂಡಿದ್ದಲ್ಲದೆ, ಕನಿಷ್ಟ 25 ಪರ್ಸೆಂಟ್ ದುಡ್ಡನ್ನು ಬಡ್ಡಿಯಿಲ್ಲದೆ 4 ವರ್ಷ ಬಡವರ ಕಲ್ಯಾಣಕ್ಕೆ ಕೊಟ್ಟು ಪಾಪ ತೊಳೆದುಕೊಳ್ಳಿ ಎಂಬ ಸಂದೇಶವನ್ನು ಕೊಟ್ಟಿದ್ದಾರೆ ಮೋದಿ!
ಇನ್ನು ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಎಂಬ 30 ರೂ. ಕೊಟ್ಟರೆ ಕುಟುಂಬವೊಂದಕ್ಕೆ 30 ಸಾವಿರ ಆರೋಗ್ಯ ವಿಮೆ ನೀಡುವ ಯೋಜನೆ ಇತ್ತು. ಆದರೆ ಅದರ ಅನುಷ್ಠಾನ ಯಾವತ್ತೂ 25-30 ಪರ್ಸೆಂಟ್ ದಾಟುತ್ತಿರಲಿಲ್ಲ. ಇಂದು ಜನದನ್ ಯೋಜನೆ ಮೂಲಕ 25.5 ಕೋಟಿ ಬ್ಯಾಂಕ್ ಖಾತೆಗಳನ್ನು ಕುಟುಂಬಕ್ಕೊಂದರಂತೆ ತೆರೆದಿದ್ದಾರೆ. ಇಂತಹ ಒಂದೊಂದು ಕುಟುಂಬಕ್ಕೂ ಯಾವುದೇ ಶುಲ್ಕವಿಲ್ಲದೆ 1 ಲಕ್ಷ ರೂಪಾಯಿ ವಿಮೆ ಕೊಡಲು ಮೋದಿ ತಯಾರಿ ನಡೆಸುತ್ತಿದ್ದಾರೆ! ಇನ್ನು ಕೆಲವೇ ತಿಂಗಳಲ್ಲಿ ದೇಶದ ಪ್ರತಿ ಪಂಚಾಯಿತಿಗೂ ಒಂದೊಂದು ಬ್ಯಾಂಕ್, ಪೋಸ್ಟ್ ಆಫೀಸು, ಅವುಗಳಿಗೆ ಇಂಟರ್‍ನೆಟ್ ಸೌಲಭ್ಯ ನೀಡುವ ಕೆಲಸ ಮುಗಿಯಲಿದೆ. ಪ್ರತಿಯೊಂದು ಸೇವೆಯೂ ಆನ್‍ಲೈನ್ ಮೂಲಕವೇ ದೊರೆಯುವಂತಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹೊರಟಿದ್ದಾರೆ. ನಿಮಗೆ ಸರ್ಕಾರದಿಂದ ಸಿಗುವ ಪಿಂಚಣಿ, ಗ್ಯಾಸ್ ಸಬ್ಸಿಡಿ ನೇರವಾಗಿ ಖಾತೆಗೆ ತುಂಬಿದ್ದರಿಂದಾಗಿ 36 ಸಾವಿರ ಕೋಟಿ ಉಳಿತಾಯವಾಗಿರುವುದು ಮಾತ್ರವಲ್ಲ, ತಂದುಕೊಟ್ಟವನ ಕೈಬಿಸಿ ಮಾಡಬೇಕಾದ ಅನಿವಾರ್ಯತೆ ನಿಮ್ಮಿಂದ ದೂರವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ದೇಶದ ಪ್ರತಿಯೊಂದು ಕುಟುಂಬಕ್ಕೂ ಉಚಿತ ಗ್ಯಾಸ್ ಸಂಪರ್ಕ ದೊರೆಯಲಿದೆ. ಒಬ್ಬ ಮನೆಗೆಲಸದಾಕೆಯ ಮಗನಾಗಿ ಹುಟ್ಟಿದ ಮೋದಿಯವರಿಗೆ ನಿಮ್ಮ ಕಷ್ಟ ಗೊತ್ತು. ಭ್ರಷ್ಟ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಹೆಂಡದ ದೊರೆಗಳು, ಬಡ್ಡೀದಾರರು, ಗೋಲ್ಡ್ ವ್ಯಾಪಾರದ ಹೆಸರಲ್ಲಿ ರಾಜಕಾರಣಿಗಳ ಕಳ್ಳ ದುಡ್ಡನ್ನು ಮೇನೇಜ್ ಮಾಡುವವರ ಆರ್ಭಟವನ್ನು ನೋಡಿ ನಿಮಗೆ ಸಿಟ್ಟು ಬರುತ್ತಿತ್ತೋ ಇಲ್ಲವೋ? ಇವರ ಬಳಿ ಇದ್ದ 500, 1000 ನೋಟು ಕಸಿದುಕೊಂಡಿರುವ ಮೋದಿ ನಿಮ್ಮ ಪರವಾಗಿ ಸೇಡು ತೀರಿಸಿಕೊಂಡಿದ್ದಾರೆ ಎಂಬುದನ್ನು ಮರೆಯಬೇಡಿ!
ಇನ್ನು, ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತೊಂದು ಸುದ್ದಿ ಪ್ರಕಟವಾಯಿತು. ಹೌಸಿಂಗ್ ಲೋನ್ ಅಥವಾ ಗೃಹ ಸಾಲದ ಮೇಲಿನ ಬಡ್ಡಿ 6 ಅಥವಾ 7 ಪರ್ಸೆಂಟ್‍ಗೆ ಇಳಿಯಲಿದೆ ಅಂತ! ಹದಿನಾರು ವರ್ಷದ ಹಿಂದೆ ಮನೆ ಕಟ್ಟುವುದಕ್ಕೆ, ಫ್ಲಾಟ್ ಅಥವಾ ಸೈಟ್ ಖರೀದಿಗೆ 6 ಪರ್ಸೆಂಟ್ ಬಡ್ಡಿಯಲ್ಲಿ ಸಾಲ ಕೊಡುವಂತೆ ಮಾಡಿ ಹೌಸಿಂಗ್ ಸೆಕ್ಟರ್‍ಗೆ ದೊಡ್ಡ ಒತ್ತು ನೀಡಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ ಇತ್ತೀಚೆಗೆ ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು? ಒಬ್ಬ ಸಾಮಾನ್ಯ ನೌಕರ ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಬೇಕೆಂದರೆ ಬಿಡದಿ, ನೆಲಮಂಗಲ ಅಥವಾ ದೇವನಹಳ್ಳಿಯನ್ನು ದಾಟಿ ಹೋಗಬೇಕಿತ್ತು. ನೋಟು ರದ್ದತಿಯಿಂದ ರಿಯಲ್ ಎಸ್ಟೇಟ್ ಹಾಗೂ ರಾಜಕಾರಣಿಗಳ ಆರ್ಭಟವೇ ನಿಂತುಹೋದಂತಾಗಿದೆ. ಸೈಟು ಬೆಲೆ ಕನಿಷ್ಟ 25-30 ಪರ್ಸೆಂಟ್ ಬೀಳುತ್ತದೆಂದು ಅಂದಾಜು ಮಾಡಲಾಗಿದೆ. ಅದರ ಜತೆಗೆ ಮತ್ತೆ 6-7 ಪರ್ಸೆಂಟ್‍ಗೆ ಹೌಸಿಂಗ್ ಲೋನ್ ಸಿಕ್ಕಿದರೆ ಎಲ್ಲರಿಗೂ ಲಾಭ ತಾನೇ? ಜತೆಗೆ ಲೋಡು ಮರಳಿಗೆ 50-60 ಸಾವಿರ ಹೇಳುತ್ತಿದ್ದರಲ್ಲಾ ಇನ್ನು ಮುಂದೆ ನಡೆಯುವುದಿಲ್ಲ ದಂಧೆ. ನೀವು ಜೀವ ತೇದು ಮಕ್ಕಳನ್ನು ಓದಿಸಿದ್ದೀರಿ. ಕನಿಷ್ಠ ಅವರಾದರೂ ಸ್ವಂತ ಮನೆ ಕಟ್ಟಿಕೊಂಡು ಬದುಕುವಂಥ ಭವ್ಯ ಭಾರತವನ್ನು, ಕಲ್ಯಾಣ ರಾಜ್ಯವನ್ನು ಕಟ್ಟಲು ಮೋದಿ ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಮರೆಯದಿರಿ. ಕಷ್ಟಪಟ್ಟು ದುಡಿದದ್ದಕ್ಕೆ ಬಂದ ಸಂಬಳಕ್ಕೆ ತೆರಿಗೆ ಕಟ್ಟುತ್ತಿದ್ದ ಉದ್ಯೋಗಿಗಳ ಕೂಗಿಗೆ ಮೋದಿ ಸ್ಪಂದಿಸಿದ್ದಾರೆ. ಇನ್ನು ಮುಂದೆ ವೈಯಕ್ತಿಯ ಆದಾಯ ತೆರಿಗೆಯ ಮಿತಿ ಹೆಚ್ಚಾಗುವುದು ಮಾತ್ರವಲ್ಲ, ನೋಟು ರದ್ದತಿಯಿಂದ ಕುಸಿಯುವ ಮನೆ, ಸೈಟಿನ ಲಾಭವೂ ಅವರಿಗೆ ದೊರೆಯಲಿದೆ. ಬಹಳಷ್ಟು ಜನ ಅರ್ಥವ್ಯವಸ್ಥೆಯ ವೇಗ ಕಡಿಮೆಯಾಗಲಿದೆ, ಷೇರು ಮಾರುಕಟ್ಟೆ ಕುಸಿಯಲಿದೆ ಎಂದೆಲ್ಲ ಬೊಬ್ಬೆಹಾಕುತ್ತಿದ್ದರು. ನರೇಂದ್ರ ಮೋದಿಯವರು ಹೆಚ್ಚು ಮಾಡಲು ಹೊರಟಿರುವುದು ಕೆಲವೇ ಕಂಪನಿಗಳ ಆದಾಯದ ಏರಿಳಿತವನ್ನು ತೋರುವ ಷೇರು ಮಾರುಕಟ್ಟೆ ಸೂಚ್ಯಂಕವನ್ನಲ್ಲ, ಬಡವರ ಜೀವನಮಟ್ಟವನ್ನ!
ಈ ನಡುವೆ, ನೋಟು ರದ್ದತಿ ಬಗ್ಗೆ ಮೊದಲೇ ಮಾಹಿತಿ ಕೊಡಬೇಕಿತ್ತು ಎಂದು ಆಲವತ್ತುಕೊಳ್ಳುತ್ತಿದ್ದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿರುವ ಚಿಕ್ಕರಂಗಪ್ಪ ಮತ್ತು ಜಯಚಂದ್ರ ಎಂಬ ಇಬ್ಬರು ಅಧಿಕಾರಿಗಳಿಂದ ಇನ್‍ಕಮ್ ಟ್ಯಾಕ್ಸ್‍ನವರು 4 ಕೋಟಿ ರೂ. ಹೊಸ ನೋಟನ್ನೇ ವಶಪಡಿಸಿಕೊಂಡಿದ್ದಾರೆ! ಅಯ್ಯೋ, ಈ ಕಳ್ಳರು ಯಾವುದಾದರೊಂದು ಮಾರ್ಗವನ್ನು ಕಂಡುಹುಡುಕಿಕೊಳ್ಳುತ್ತಾರೆ, ಮೋದಿ ಚಾಪೆ ಕೆಳಗೆ ನುಸುಳಿದರೆ, ಇವರು ರಂಗೋಲಿ ಕೆಳಗೆ ನುಸುಳುತ್ತಾರೆ, 2000 ನೋಟು ಮತ್ತೆ ಬ್ಲ್ಯಾಕ್‍ಮನಿ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ಆತಂಕಕ್ಕೆ ಇದು ಮತ್ತಷ್ಟು ಇಂಬುಕೊಟ್ಟಿದೆ. ನಿಮ್ಮ ಅನುಮಾನ ನಿಜ ಕೂಡ ಹೌದು. ಆದರೆ ಒಮ್ಮೆ ಆಧಾರ್ ಕಾರ್ಡ್ ನ  ಜನಕ ನಂದನ್ ನಿಲೇಕಣಿಯವರು ಮೂರು ದಿನಗಳ ಹಿಂದೆ ಎನ್‍ಡಿಟೀವಿಗೆ ಕೊಟ್ಟಿರುವ ಸಂದರ್ಶನವನ್ನು ನೋಡಿ. ಅವರೀಗ ಮೋದಿ ಟೀಮನ್ನೂ ಸೇರಿದ್ದಾರೆ. ಅವರು ಪ್ರತಿಪಾದಿಸಿದ ಹಾಗೂ ಮೋದಿಯವರು ಹೇಳುತ್ತಿರುವ ಪ್ಲಾಸ್ಟಿಕ್ ಮನಿ, ಡಿಜಿಟಲ್ ಅಥವಾ ಅನ್‍ಲೈನ್ ವ್ಯವಹಾರದ ಬಗ್ಗೆ ಹೇಳುವ ಮೊದಲು 2000 ನೋಟಿನ ಬಗ್ಗೆ ಸ್ವಲ್ಪ ಕೇಳಿ. 500 ರೂ. ನೋಟನ್ನು ಮುದ್ರಿಸಲು ಆರಂಭಿಸಿದ್ದು ಮೋದಿಯವರು 500, 1000 ರದ್ದು ಮಾಡಿದ ಮೂರ್ನಾಲ್ಕು ದಿನಗಳ ನಂತರ. ಒಂದು ವೇಳೆ ಹೊಸರೂಪದ 500 ರೂ. ನೋಟುಗಳುನ್ನು ಮೊದಲೇ ಮುದ್ರಿಸಿದ್ದರೆ ಈ ಕಳ್ಳಕಾಕರಿಗೆ ನೋಟು ರದ್ದಾಗುವ ಸುಳಿವು ಸಿಗುತ್ತಿತ್ತು! ಸರ್ಕಾರ ಹೊಸ ಮೊತ್ತದ ನೋಟು ಬಿಡುಗಡೆ ಮಾಡಲಿದೆ ಎಂಬ ತಪ್ಪು ಕಲ್ಪನೆಯನ್ನು ಮೂಡಿಸುವುದಕ್ಕಾಗಿಯೇ 2000 ರೂ. ನೋಟನ್ನು ಮುದ್ರಿಸಲಾಯಿತು. ಇದು ತಾತ್ಕಾಲಿಕ ತಂತ್ರವಷ್ಟೇ. 500, 1000 ರೂ. ಗತಿಯೇ 2000ರ ನೋಟಿಗೆ ಬರುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ, ಕೆಎಸ್‍ಆರ್‍ಟಿಸಿ, ಕೆಎಂಎಫ್, ಕೆಪಿಟಿಸಿಎಲ್, ಸರ್ಕಾರಿ ಹೆಂಡದಂಗಡಿ ಇವುಗಳಲ್ಲೆಲ್ಲ ಬರುವ ಹಳೆಯ 50-100ರ, ಹೊಸದಾದ 2000 ರೂ. ನೋಟುಗಳನ್ನು ಕೆಲವರು ಮತ್ತೆ ಸಂಗ್ರಹಿಸುತ್ತಿದ್ದಾರೆ. ಅವುಗಳ ಮಾಹಿತಿಯನ್ನು ಮೋದಿ ಸರ್ಕಾರ ಕಲೆ ಹಾಕುತ್ತಿದೆ, ಡಿಸೆಂಬರ್ 30ರ ನಂತರ ದೇಶಾದ್ಯಂತ ವ್ಯಾಪಕ ದಾಳಿಗಳೂ ಆಗಲಿವೆ. ನಮ್ಮ ಫಟಿಂಗ ರಾಜಕಾರಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ದೇಶಾದ್ಯಂತ ಇರುವ 367 ಡಿಸಿಸಿ ಬ್ಯಾಂಕು ಹಾಗೂ ಅಸಂಖ್ಯ ಸಹಕಾರಿ ಬ್ಯಾಂಕುಗಳಿಗೆ ನೋಟು ಬದಲಾವಣೆ ಹಕ್ಕು ಕೊಟ್ಟಿರಲಿಲ್ಲ ಮೋದಿ. ಏಕೆಂದರೆ ಇಷ್ಟೂ ಡಿಸಿಸಿ ಹಾಗೂ ಕೋಪರೇಟವಿವ್ ಬ್ಯಾಂಕುಗಳು ಇರುವುದು ರಾಜಕಾರಣಿಗಳ ಕೈಯಲ್ಲೇ. ನವೆಂಬರ್ 8ರ ನೋಟು ರದ್ದತಿಯ ನಂತರ ಕೆಲವು ರಾಜಕಾರಣಿಗಳು ಹಳೇ ಡೇಟ್ ಹಾಕಿ ಕೋಪರೇಟಿವ್ ಬ್ಯಾಂಕುಗಳಲ್ಲಿ ದೊಡ್ಡ ಠೇವಣಿ ಇಟ್ಟಿದ್ದಾರೆ ಎಂಬ ಬಲವಾದ ಗುಮಾನಿ ಇದೆ, ಅವರನ್ನೂ ಮೋದಿ ಬಿಡುವುದಿಲ್ಲ, ನೋಡ್ತಾ ಇರಿ!
ಭ್ರಷ್ಟ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಹೆಂಡದ ದೊರೆಗಳು, ಬಡ್ಡೀದಾರರು, ದೊಡ್ಡ ದೊಡ್ಡ ಗೋಲ್ಡ್ ವ್ಯಾಪಾರಿಗಳ ಕಪಿಮುಷ್ಠಿಯಿಂದ ವ್ಯವಸ್ಥೆಯನ್ನು ವಿಮುಕ್ತಿಗೊಳಿಸಿ ಕಪ್ಪುಹಣ ಸೃಷ್ಟಿಗೆ ತಡೆಹಾಕಬೇಕೆಂದರೆ ಮೋದಿಯವರು ಹೇಳುತ್ತಿರುವ ಹಾಗೂ ನಂದನ್ ನಿಲೇಕಣಿಯವರು ತಮ್ಮ ಸಂದರ್ಶನದಲ್ಲಿ ಪ್ರತಿಪಾದಿಸಿರುವ ಡಿಜಿಲೈಜೇಶನ್‍ಗೆ ನೀವೆಲ್ಲ ತೆರೆದುಕೊಳ್ಳಲೇಬೇಕು ಹಾಗೂ ಅಂತಹ ಅನಿವಾರ್ಯತೆಯನ್ನು ಮೋದಿ ಸೃಷ್ಟಿಸುತ್ತಾರೆ. ಇಲ್ಲವಾದರೆ ಇನೈದು ವರ್ಷಗಳಲ್ಲಿ ಮತ್ತದೇ ಸ್ಥಿತಿ ನಿರ್ಮಾಣವಾಗುತ್ತದೆ. ನಮ್ಮ ಮಕ್ಕಳಿಗಾದರೂ ಒಳ್ಳೆಯ ಭವಿಷ್ಯವನ್ನು ಸೃಷ್ಟಿಸಿಕೊಡುವ ಹಾಗೂ ನಮ್ಮ ಇನ್ನುಳಿದ ಬದುಕಿನಲ್ಲಿ ಒಳ್ಳೆಯ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಸ್ವಲ್ಪ ಕಷ್ಟವನ್ನು ಅನುಭವಿಸಿ. ಬಹುಶಃ ಇನ್ನು ಮುಂದೆ 50 ಸಾವಿರವೋ ಅಥವಾ ಒಂದು ಲಕ್ಷಕ್ಕಿಂತಲೋ ಹೆಚ್ಚಿನ ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಳ್ಳುವುದಕ್ಕೇ ಸರ್ಕಾರ ಕಡಿವಾಣ ಹಾಕಬಹುದು! ಅದರಿಂದ ಖಂಡಿತ ತೊಂದರೆಯಾಗುವುದಿಲ್ಲ. ನಿಮ್ಮ ಮಗಳ ಮದುವೆಯ ಶಾಮಿಯಾನದವನಿಗೆ, ಕೇಟರಿಂಗ್‍ನವನಿಗೆ, ಅಲಂಕಾರದವನಿಗೆ, ಒಡವೆ-ವಸ್ತ್ರಗಳ ಖರೀದಿಗೆ ಡೆಬಿಟ್ ಕಾರ್ಡ್ ಬಳಸಿ ಅಥವಾ ಚೆಕ್ ಕೊಡಿ, ಸಮಸ್ಯೆಯೇ ಇಲ್ಲ. ರಸಗೊಬ್ಬರ, ಭಿತ್ತನೆ ಬೀಜ, ಔಷಧಿ ಎಲ್ಲಾ ಕಡೆಯೂ ಕಾರ್ಡ್ ಬಳಸಿದರೆ ಕಾಳಧನ ಸೃಷ್ಟಿಯಾಗುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಸೈಟ್ ಖರೀದಿ ಮಾಡುವಾಗಲೂ ಸಂಪೂರ್ಣ ಹಣವನ್ನು ಚೆಕ್ ಅಥವಾ ಡಿಡಿಯಲ್ಲಿ ಕೊಡಿ. ವ್ಯವಹಾರ ನೈತಿಕವಾಗಿ ನಡೆಯುತ್ತದೆ, ಸರ್ಕಾರಕ್ಕೆ ಆದಾಯ ಹೆಚ್ಚಾಗುತ್ತದೆ, ಅದು ದೇಶದ ಒಳಿತಿಗೇ ವಿನಿಯೋಗವಾಗುತ್ತದೆ.
ಪ್ರಸ್ತುತ ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಇದಾದ ಬಳಿಕ ಕರ್ನಾಟಕದ ಪ್ರತಿಯೊಂದು ಹೋಬಳಿ, ತಾಲೂಕು ಹಾಗೂ ಜಿಲ್ಲೆಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಡಿಜಿಟಲ್ ಟ್ರ್ಯಾನ್‍ಸ್ಯಾಕ್ಸನ್ ಬಗ್ಗೆ, ಎ-ವ್ಯಾಲೆಟ್ ಬಗ್ಗೆ ಬಿಜೆಪಿ ಯುವಮೋರ್ಚಾದಿಂದ ನಾವು ಕಾರ್ಯಾಗಾರ ಮಾಡಲಿದ್ದೇವೆ, ಸುಲಭ ಹಾಗೂ ಸರಳವಾಗಿ ನೋಟಿಲ್ಲದೆ ಮಾರಾಟ, ಖರೀದಿ ಮಾಡುವ ವಿಧಾನವನ್ನು ಮನವರಿಕೆ ಮಾಡಿಕೊಡಲಿದ್ದೇವೆ ಇನ್ನು ಕೆಲವೇ ದಿನಗಳಲ್ಲಿ.
ಇದರ ಇನ್ನೊಂದು ಲಾಭವೇನು ಗೊತ್ತೆ? ನೋಟಿನ ಚಲಾವಣೆಯನ್ನು ತೀವ್ರತರವಾಗಿ ಕಡಿಮೆ ಮಾಡಿ ಎಲ್ಲವನ್ನೂ ಡಿಜಿಟಲೈಸ್ ಮಾಡಿದರೆ ಹಳೆ ಚಪ್ಲಿ, ಹರಕಲು ಬಟ್ಟೆ ಹಾಕಿ, ಮನೆಯಲ್ಲಿ ಹೆಂಡತಿ ಮಕ್ಕಳನ್ನೂ ಉಪವಾಸ ಕೆಡವಿದರೂ ರೇಸ್‍ಕೋರ್ಸ್‍ಗೆ ಹೋಗಿ ಕುದುರೆ ಬಾಲಕ್ಕೆ ಕಟ್ಟಿ ಕಳೆದುಕೊಂಡ ಮೇಲೆ ಕ್ವಾಟರ್ ಏರಿಸಿಕೊಂಡು ಮನೆಗೆ ಬರುತ್ತಿದ್ದ ಗಂಡಸರೂ ತಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ! ಕ್ರಿಕೆಟ್ ಮ್ಯಾಚ್ ಶುರುವಾಯಿತೆಂದರೆ, ಐಪಿಎಲ್ ಆರಂಭವಾದ ಕೂಡಲೇ ಊರೂರಲ್ಲಿ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರೂ. ಸಾಲಕ್ಕೊಳಗಾಗಿ, ಕೊನೆಗೆ ನೇಣಿಗೂ ಶರಣಾಗಿದ್ದ ಪಡ್ಡೆ ಹುಡುಗರ ದಂಧೆಗೂ ಕಡಿವಾಣ ಹಾಕಬಹುದು!! ವಾರಕ್ಕೊಮ್ಮೆ ನಡೆಯುವ ಬಟವಾಡೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾದರೆ, ಸಂಜೆ ಕೆಲಸ ಮುಗಿದ ಕೂಡಲೇ ಸಿಗುತ್ತಿದ್ದ ದಿನಗೂಲಿ ಬಾಟ್ಲಿಗೆ ಬಾಯಿಡದೆ ಮನೆಗೆ ಹೋಗಲು ಬಹುತೇಕ ಗಂಡಸರನ್ನು ಬಿಡುತ್ತಿರಲಿಲ್ಲ ತಾನೆ? ಅದಕ್ಕೂ ಬರಲಿದೆ ಕಷ್ಟಕಾಲ!!
ಇನ್ನೂ ಸಾಕಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಕಳೆದ ವಾರ ನೋಟು ರದ್ದತಿಯ ಬಗ್ಗೆ ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯವಿದೆ, ಯಾವ ಅನಾನುಕೂಲವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕರ್ನಾಟಕದ ಎಲ್ಲ ಸಂಸದರನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಕರೆದಿದ್ದರು. ಅಭಿಪ್ರಾಯ ಪಡೆದುಕೊಂಡ ನಂತರ, 5 ನಿಮಿಷ ನಮ್ಮನ್ನುದ್ದೇಶಿಸಿ ಮಾತನಾಡಿದರು. “ನಾವು ಏಕೆ ಇಂತಹ ರಿಸ್ಕ್ ತೆಗೆದುಕೊಂಡಿದ್ದೇವೆ ಅಂತ ಅಂದುಕೊಂಡಿದ್ದೀರಿ. ನಾವಿಲ್ಲಿರುವುದು ಅಧಿಕಾರವನ್ನು ಚಲಾಯಿಸುವುದಕ್ಕಲ್ಲ, ದೇಶವನ್ನು ಮುನ್ನಡೆಸುವುದಕ್ಕೆ. 1951ರಲ್ಲಿ ನಮ್ಮ ಪಕ್ಷವನ್ನು ಸ್ಥಾಪಿಸಿದಾಗ ಅಧಿಕಾರ ಹಿಡಿಯುವ ಕಲ್ಪನೆಯನ್ನು ಇಟ್ಟುಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಆದರೂ ಏಕೆ ಪಕ್ಷವನ್ನು ಆರಂಭಿಸಿದೆವೆಂದರೆ ಸತ್ತಾ ಚಲಾನೇಕೇಲಿಯೇ ನಹೀ, ದೇಶ್ ಬಡಾನೇ ಕೇಲಿಯೇ! ಕಳೆದ 12 ವರ್ಷಗಳ ಕೇಂದ್ರದ ಬಜೆಟ್ ನೋಡಿ. ಘೋಷಣೆ ಮಾಡಿರುವುದು ಎಷ್ಟೇ ಲಕ್ಷ ಕೋಟಿಯಾದರೂ ಖರ್ಚು ಮಾಡಿರುವ ಸರಾಸರಿ ಮೊತ್ತ 4.19 ಲಕ್ಷದಿಂದ 4.70 ಲಕ್ಷ ಕೋಟಿಯಷ್ಟೇ. ಈ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಬೇಕಾದರೆ ಕನಿಷ್ಟ 10-15 ಲಕ್ಷ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಖರ್ಚು ಮಾಡಬೇಕು. ಕೆರೆ, ಕಟ್ಟೆ, ರಸ್ತೆ, ಹೆದ್ದಾರಿ, ರೈಲು ಮಾರ್ಗ ನಿರ್ಮಾಣವಾಗಬೇಕು. ಬಡವರಿಗೆ ಸೂರು, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ, ಕಲಿತ ಮೇಲೆ ಯೋಗ್ಯ ಕೆಲಸ ದೊರೆಯಬೇಕು. ನಮ್ಮ ದೇಶದ ಯಾವುದೇ ಕಂಪನಿಗಳಿರಬಹುದು, ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಆಗಿರಬಹುದು. ಪ್ರತಿಯೊಂದೂ ಕಂಪನಿಗಳು ಮಾಡುತ್ತಿರುವುದು ಮಜ್ದೂರಿ(ಕೂಲಿ). ಇಂಟೆಲೆಕ್ಚುವಲ್ ಪಾಪರ್ಟಿ(ಬೌದ್ಧಿಕ ಆಸ್ತಿ) ಹೊಂದಿರುವವರಿಗೆ ಆದಾಯ ಹೋಗುತ್ತಿದೆ. ನಾವು ದೇಶಾದ್ಯಂತ ಕನಿಷ್ಠ 50 ಅಭಿವೃದ್ಧಿ ಮತ್ತು ಸಂಶೋಧನೆ(ಆರ್ ಅಂಡ್ ಡಿ) ಕ್ಲಸ್ಟರ್‍ಗಳು ಸ್ಥಾಪನೆ ಮಾಡಬೇಕು. ಒಂದೊಂದಕ್ಕೂ ಸರ್ಕಾರ 5-10 ಸಾವಿರ ಕೋಟಿ ನೀಡಿ ಅಷ್ಟೇ ಪ್ರಮಾಣದ ಹಣಹಾಕಿ ಸಂಶೋಧನೆಯಲ್ಲಿ ನಮ್ಮ ಯುವಕರನ್ನು ತೊಡಗಿಸಿ ಎಂದು ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಇನ್ನು ಮುಂತಾದ ಕಂಪನಿಗಳಿಗೆ ಜವಾಬ್ದಾರಿ ಕೊಡಬೇಕು. ಅಮೆರಿಕ, ಬ್ರಿಟನ್‍ನಲ್ಲಿರುವ ನಮ್ಮ ವಿಜ್ಛಾನಿಗಳು ಇಲ್ಲಿಗೆ ವಾಪಸ್ಸಾಗಬೇಕು. ನಮ್ಮದು ಜಗತ್ತಿನ ಅತಿದೊಡ್ಡ ದೊಡ್ಡ ಸೇನೆ ಮಾತ್ರವಲ್ಲ, ಅತ್ಯಂತ ಬಲಿಷ್ಠ ಸೇನೆ, ಅತ್ಯಂತ ಮಾರಕ ಅಸ್ತ್ರಗಳನ್ನು ಹೊಂದಿರುವ ಸೇನೆಯೂ ಆಗಬೇಕು, ನಾವು ಹಾರಿಸಿದ ಕ್ಷಿಪಣಿ ನ್ಯೂಯಾರ್ಕನ್ನು ತಲುಪುವಂತಿರಬೇಕು. ಇದು ನರೇಂದ್ರ ಭಾಯಿ ಯೋಚಿಸುವ ಪರಿ” ಎಂದರು.
ಹೌದು, ಇಂತಹ ಯೋಚನೆಯನ್ನು ಇಟ್ಟುಕೊಂಡಿರುವುದರಿಂದಲೇ ನರೇಂದ್ರ ಮೋದಿಯವರು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು, ಸ್ವಂತ ಜೀವವನ್ನೂ ಅಪಾಯಕ್ಕೆ ತಳ್ಳಿ ನೋಟು ರದ್ದತಿ ಮಾಡಿದ್ದಾರೆ. ಹೀಗೆ ಎಲ್ಲರ ಬಗ್ಗೆಯೂ ಯೋಚನೆ ಮಾಡುವ ಎಷ್ಟು ಜನರು ರಾಜಕಾರಣದಲ್ಲಿದ್ದಾರೆ ಹೇಳಿ? ಒಬ್ಬ ಎಂಎಲ್‍ಎ, ಎಂಪಿ ಆದ ಕೂಡಲೇ ಮೊದಲು ಯೋಚಿಸುವುದು ಅವನ ಕುಟುಂಬದ ಬಗ್ಗೆ, ಮಕ್ಕಳು ಮರಿಗಳ ಬಗ್ಗೆ. ಅವರ ಭವಿಷ್ಯಕ್ಕೆ ಕಾಮಧೇನುವಿನಂತೆ ಸದಾ ಆದಾಯ ಕೊಡುವ ಪೆಟ್ರೋಲ್ ಬಂಕು, ಗ್ಯಾಸ್ ಏಜೆನ್ಸಿ, ಲಾಡ್ಜು-ಹೋಟೆಲ್ಲು, ಚೇಲಾಗಳ ಹೆಸರಿನಲ್ಲಿ ಕಾಂಟ್ರ್ಯಾಕ್ಟು, ರಿಯಲ್ ಎಸ್ಟೇಟು, ಮೈನಿಂಗು, ಮರಳುಗಾರಿಕೆ ಮತ್ತು ಕಾರ್ಯಕರ್ತರಿಗೆ ಟೊಳ್ಳು ಭಾಷಣ, ಇದೇ ತಾನೇ? ಯಾರೂ ಕದಿಯಲಾಗದ, ಲಪಟಾಯಿಸಲಾಗದ ನಿಮ್ಮ ದುಡ್ಡನ್ನು ಬ್ಯಾಂಕು, ಎಟಿಎಂನಲ್ಲಿ ಬಿಡಿಸಿಕೊಳ್ಳುವುದಕ್ಕೇ ತಾಳ್ಮೆ ಇಲ್ಲವೆಂದಾದರೆ, ನಿಮ್ಮನ್ನು ಲೂಟಿ ಮಾಡುತ್ತಿದ್ದವರನ್ನು 70 ವರ್ಷಗಳಿಂದ ಹೇಗೆ ಸಹಿಸಿಕೊಂಡು ಸುಮ್ಮನಿದ್ದಿರಿ ಸ್ವಾಮಿ?! ನೀವು ತಾಳ್ಮೆ ಕಳೆದುಕೊಳ್ಳಬೇಕಾಗಿರುವುದು ಯಾರ ವಿರುದ್ಧ ಅಂತ ಈಗಲಾದರೂ ಗೊತ್ತಾಯಿತು ತಾನೇ?
ಜೈ ಹಿಂದ್!

noteban-and-demonitisation2

Comments are closed.