Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೊಡಗಿನ ಕಾಫಿ ಕುಡಿಯಿರಿ, ಒಳ್ಳೇ ಹಾಕಿ ಆಡಿರಿ !

ಕೊಡಗಿನ ಕಾಫಿ ಕುಡಿಯಿರಿ, ಒಳ್ಳೇ ಹಾಕಿ ಆಡಿರಿ !

ಕೊಡಗಿನ ಕಾಫಿ ಕುಡಿಯಿರಿ, ಒಳ್ಳೇ ಹಾಕಿ ಆಡಿರಿ !

ಬ್ರಿಟೀಷರ ಕಾಲದಲ್ಲೇ ಕೊಡಗಿಗೆ Coorg-the nursery of Indian hockey ಎಂಬ ಕಿರೀಟ ಇತ್ತು. ಕೊಡಗು ಆ ಹೇಳಿಕೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ಭಾರತೀಯ ಹಾಕಿಗೆ ಅಮೂಲ್ಯ ರತ್ನಗಳನ್ನು ಕೊಡುತ್ತಲೂ ಬಂತು ಕೂಡ. ಮಾಳೆಯಂಡ ಮುತ್ತಪ್ಪನವರು, ಪೈಕೇರ ಕಾಳಯ್ಯನವರು, ಮಹಾ ತಡೆಗೋಡೆ ಅಂಜಪರವಂಡ ಸುಬ್ಬಯ್ಯನವರು, ಹಾಕಿ ಮಾಂತ್ರಿಕ ಭಾರತ ತಂಡದ ಯಶಸ್ವೀ ನಾಯಕ ಗೋವಿಂದನವರು, ಮಾಜಿ ಕ್ಯಾಪ್ಟನ್ ಮನೆಯಪಂಡ ಸೋಮಯ್ಯನವರು, ಮೊಳ್ಳೆಯ ಗಣೇಶ್ ರವರು, ಅರ್ಜುನ್ ಹಾಲಪ್ಪನವರು, ಒಲಂಪಿಯನ್ ಚೆಪ್ಪುಡಿರ ಪೂಣಚ್ಚನವರು, ಅಂತಾರಾಷ್ಟ್ರೀಯ ತಂಡವೊಂದರ ಕೋಚ್ ಆಗಿ ಮಿಂಚಿದ್ದ ಮತ್ತು ಭಾರತ ತಂಡದ ಬೆನ್ನೆಲುಬು ಎಂದೇ ಖ್ಯಾತರಾಗಿದ್ದ ಕೂತಂಡ ಪೂಣಚ್ಚನವರು, ಭಾರತ ತಂಡದ ಅತ್ಯುತ್ತಮ ಪೆನಾಲ್ಟಿ ಕಾರ್ನರ್ ಸ್ಪೆಶಲಿಸ್ಟ್ ಆಗಿದ್ದ ಬಲ್ಲಚಂಡ ಲೆನ್ ಅಯ್ಯಪ್ಪನವರು, ಸಿಡಿಗುಂಡಿನಂತೆ ಚೆಂಡನ್ನು ಹಿಟ್ ಮಾಡುವ ಪಳಂಗಂಡ ಅಮರ್ ಅಯ್ಯಮ್ಮನವರು, ಸ್ಕೋರ್ ಬೋರ್ಡಿನಲ್ಲಿ ಕಡ್ಡಾಯವಾಗಿ ಕಾಣಿಸುವ ರಘುನಾಥ್ ಮತ್ತು ಸುನಿಲ್, ಮೊನ್ನೆಯ ಅಜ್ಲಾನ್ ಷಾ ಟೂರ್ನಿಯಲ್ಲಿ ಹ್ಯಾಟ್ರಿಕ್ ಭಾರಿಸಿ ಭರವಸೆ ಮೂಡಿಸಿದ ನಿಕ್ಕಿನ್ ತಿಮ್ಮಯ್ಯ, ಕಿರಿ ವಯಸ್ಸಲ್ಲೇ ಭಾರತ ತಂಡ ಪ್ರತಿನಿಧಿಸಿದ ಆಲೇಮಾಡ ಚೀಯಣ್ಣ, ಸಣ್ಣುವಂಡ ಉತ್ತಪ್ಪ…. ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇವಿಷ್ಟೇ ಅಲ್ಲ…

ದೇಶದ ಪ್ರಮುಖ ಹಾಕಿ ತಂಡಗಳಾದ ಸರ್ವೀಸಸ್, ಎಂಇಜಿ, ಎಎಸಿ, ರೈಲ್ವೆ, ಏರ್ ಇಂಡಿಯಾ, ಕೆನರಾ ಬ್ಯಾಂಕ್, ಎಸ್.ಬಿ.ಐ, ಹೆಚ್.ಎ.ಎಲ್, ಟಾಟಾ ತಂಡಗಳಲ್ಲಿ ಕೂಡ ಕೊಡಗಿನ ಆಟಗಾರದ್ದೇ ಪಾರುಪತ್ಯ. ದೇಶದಲ್ಲಿ ಯಾವುದೇ ಹಾಕಿ ತಂಡವಿರಲಿ ಅಲ್ಲಿ ಒಂದಾದರೂ ಕೊಡಗಿನ ಹೆಸರು ಇಲ್ಲದಿದ್ದರೆ ಕೇಳಿ. ಇವಲ್ಲದೆ ರಾಜ್ಯದ ಎಲ್ಲೇ ಹಾಕಿ ಕ್ಲಬ್ಬುಗಳಿದ್ದಲ್ಲಿ ಒಂದಾದರೂ ಅಪ್ಪಣ್ಣ, ಬೋಪಣ್ಣ ಹೆಸರುಗಳು ಇದ್ದೇ ಇರುತ್ತವೆ. ಕರ್ನಾಟಕದ ವಿಶ್ವವಿದ್ಯಾಲಯ ತಂಡಗಳಲ್ಲಿ ಒಮ್ಮೊಮ್ಮೆ ಸಂಪೂರ್ಣ ಕೊಡಗಿನ ಆಟಗಾರರೇ ಇರುವ ಕೌತುಕವೂ ಇದೆ. ಇದಕ್ಕೆ ಕಾರಣವೂ ಸರಳವಾಗಿದೆ. ಚೀನಾದಲ್ಲಿ ಪುಟ್ಟಮಕ್ಕಳನ್ನು ಒಲಂಪಿಕ್‌ಗೆ ತಯಾರು ಮಾಡುವಂತೆ ನಮ್ಮ ಕೊಡಗು ಹಾಕಿ ಆಟಗಾರರನ್ನು ತಯಾರು ಮಾಡುತ್ತದೆ. ಇಲ್ಲಿ ಪ್ರೈಮರಿಗೆ ಹೋಗುವ ಬಾಲಕನ ಕೈಯಲ್ಲೂ ಹಾಕಿ ಸ್ಟಿಕ್, ಶಾಲೆಗೆ ರಜೆ ಬಂತೆಂದರೆ ಹಾಕಿ ಶಿಬಿರ, ಊರ ಮೈದಾನದಲ್ಲಿ ಸಂಜೆ ಹಾಕಿ ಪಂದ್ಯ! ಸರ್ವವೂ ಇಲ್ಲಿ ಹಾಕಿಮಯ. ಏಕೆಂದರೆ ಇಲ್ಲಿ ಹಾಕಿ ಎಂದರೆ ಎಲ್ಲವೂ. ಜೀವನದಲ್ಲಿ ಒಮ್ಮೆಯಾದರೂ ಹಾಕಿ ಆಡಲಾರದವನನ್ನು ನೀವು ಕೊಡಗಲ್ಲಿ ಕಾಣಲಾರಿರಿ. ಅಷ್ಟರಮಟ್ಟಿಗೆ ಹಾಕಿ ಇಲ್ಲಿನ ಜನರ ಉಸಿರು. Coorg-the nursery of Indian hockey ಎಂಬ ಬ್ರಿಟೀಷರ ಮಾತು ಇಂದಿಗೂ ಅರ್ಥಪೂರ್ಣವಾಗಿಯೇ ಇದೆ. ಹೇಗೆ ಕೊಡಗಿನ ಜನರು ತೋಟದ ಕಾಫಿಗೆ ಪ್ರಾಮುಖ್ಯತೆ ಕೊಡುತ್ತಾರೋ ಗ್ರೌಂಡಿನ ಹಾಕಿಗೂ ಅಷ್ಟೇ ಪ್ರಾಮುಖ್ಯವನ್ನು ಕೊಡುತ್ತಾರೆ. ಬ್ರಿಟೀಷರು ಪರಿಚಯಿಸಿದ ಕಾಫಿ ಮತ್ತು ಹಾಕಿ ಕೊಡಗಿನಲ್ಲಿ ಸಮ್ರದ್ಧ ಫಸಲನ್ನೇ ಬಿಟ್ಟಿತು. ಕಾಲಕಾಲಕ್ಕೆ ಕಾಫಿಯ ಕಾಳಜಿ ಮಾಡುವಂತೆ ಇಲ್ಲಿನ ಜನ ಹಾಕಿಯ ಕಾಳಜಿಯನ್ನು ಮಾಡಲು ಮರೆಯಲಿಲ್ಲ. ಹೇಗೆ ಕಾಫಿ ಇಲ್ಲಿನ ಜನರ ಅವಿಭಾಜ್ಯ ಅಂಗವೋ ಹಾಕಿಯೂ ಅವರ ಜೀವನದ ಅವಿಭಾಜ್ಯ ಅಂಗ. ಇಲ್ಲಿ ಮನೆಗೊಂದು ಕೋವಿ ಇರುವಂತೆ ಮನೆಗೆ ಕನಿಷ್ಠ ಒಂದಾದರೂ ಹಾಕಿ ಸ್ಟಿಕ್ ಇದ್ದೇ ಇರುತ್ತದೆ. ಇರಬೇಕೆಂಬ ನಂಬಿಕೆಯೂ ಕೊಡವರಲ್ಲಿದೆ. ಅವಿಲ್ಲದ ಕೊಡವರ ಮನೆಗಳನ್ನು ನೀವು ಕಾಣಲಾರಿರಿ.
ಹಾಕಿಯನ್ನು ಕೊಡಗಿನ ಜನ ಆರಾಧಿಸಿಕೊಂಡು ಬಂದ ಮತ್ತು ಅದನ್ನು ತಮ್ಮ ಜನಜೀವನದಲ್ಲಿ ಅಳವಡಿಸಿಕೊಂಡು ಬಂದ ಪ್ರೇರಣಾದಾಯಿ ಉದಾಹರಣೆಗಳೆಷ್ಟೋ ಇಲ್ಲಿ ಸಿಗುತ್ತವೆ. ಕೊಡಗಿನಲ್ಲಿ ಹಾಕಿ ಜನಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾದ ಸಂಗತಿಯೆಂದರೆ ಹಾಕಿಯನ್ನು ಅರ್ಥೈಸಿಕೊಳ್ಳದೆ ಕೊಡಗನ್ನು ಅರ್ಥೈಸಿಕೊಳ್ಳಲಾಗದು ಎಂಬಷ್ಟು. ಕೊಡಗಿನ ಪಲ್ಸ್ ಅನ್ನು ತಿಳಿಯಬೇಕೆಂದರೆ ಕಾಫಿಯಂತೆ ಹಾಕಿಯನ್ನೂ ಅರಿಯಬೇಕು. ಕೊಡಗಿನ ಇತಿಹಾಸದ ಹಿಂದೆ ಕಂಡೂ ಕಾಣದಂತೆ ಈ ಹಾಕಿಯ ಕಥೆ ಬೆರೆತುಕೊಂಡಿದೆ. ಒಂದು ಪುಟ್ಟ ಜಿಲ್ಲೆ ಹಾಕಿಯನ್ನು ಈ ಪರಿಯಲ್ಲಿ ಹಚ್ಚಿಕೊಳ್ಳಬಹುದೇ ಎಂದು ಆಶ್ಚರ್ಯವೂ ಆಗುತ್ತದೆ. ಏಕೆಂದರೆ ಕೊಡಗು ಭಾರತೀಯ ಹಾಕಿಗೆ ತಮ್ಮಲ್ಲಿಂದ ಮಹಾನ್ ಆಟಗಾರರನ್ನು ಕೊಟ್ಟಿತು. ಅದೂ ಬಹು ದೀರ್ಘ ಸಮಯದವರೆಗೆ. ಫಿಲ್ಡ್ ಮಾರ್ಷಲ್ ಕಾರ್ಯಪ್ಪಜ್ಜ ಮತ್ತು ಜನರಲ್ ತಿಮ್ಮಯ್ಯನವರು ಮೊದಲು ಹಾಕಿಂದಲೇ ಬ್ರಿಟೀಷ್ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದರು ಎಂಬುದು ಇತಿಹಾಸದ ಒಂದು ಮಹತ್ವದ ಸಂಗತಿ. ಕಾಲದ ಪ್ರವಾಹದಲ್ಲಿ ಎಲ್ಲವೂ ಮಗ್ಗುಲು ಬದಲಿಸಿಕೊಂಡರೂ ಕೊಡಗಿನಲ್ಲಿ ಹಾಕಿ ಬದಲಾಗಲೇ ಇಲ್ಲ.
1861 ರಲ್ಲಿ ಯುರೋಪಿನಲ್ಲಿ ಪ್ರಾರಂಭವಾದ ಹಾಕಿಯನ್ನು ಬ್ರಿಟೀಷರು ತಮ್ಮ ವಸಹಾತುಗಳಿಗೆ ಕೊಂಡೊಯ್ದರು. ಆರಂಭದಲ್ಲಿ ಕಲ್ಕತ್ತಾ, ಪಂಜಾಬ್, ಮುಂಬೈಗಳಲ್ಲಿ ಹಾಕಿ ಕ್ಲಬ್ಬುಗಳು ಶುರುವಾದವು. ಆದರೆ ಅಲ್ಲೆಲ್ಲಾ ಹಾಕಿ ಕೇವಲ ಕ್ಲಬ್ಬುಗಳಿಗೆ ಮಾತ್ರ ಸೀಮಿತವಾಯಿತು. ಆದರೆ ಕೊಡಗು ಮತ್ತು ಪಂಜಾಬು ಹಾಕಿಯನ್ನು ಮಗುವಿನಂತೆ ತಬ್ಬಿಕೊಂಡಿತು. ಬ್ರಿಟಿಷರ ನೆಚ್ಚಿನ “ಟೈನಿ ಮಾಡಲ್ ಸ್ಟೇಟ್” ಆಗಿದ್ದ ಕೊಡಗಿನ ಮಡಿಕೇರಿಗೆ ಹಾಕಿ 1885-86 ರ ಹೊತ್ತಿನಲ್ಲಿ ಹಾಕಿ ಕಾಲಿಟ್ಟಿತು. ಯುರೋಪಿನಿಂದ ತರಿಸಿದ ಚೆಂಡು ಮತ್ತು ಸ್ಟಿಕ್‌ಗಳು ಇಲ್ಲಿ ಈ ಪರಿಯಲ್ಲಿ ಮೋಡಿ ಮಾಡುತ್ತವೆ ಎಂದು ಯಾವ ಬ್ರಿಟೀಷ್ ಅಧಿಕಾರಿಯೂ ಅಂದುಕೊಂಡಿರಲಿಲ್ಲ. ನೋಡ ನೋಡುತ್ತಲೇ ಹಾಕಿಯ ಕಲರವ ಕೊಡಗಿಗೆ ಪಸರಿಸಿತು. ದನ ಮೇಯಿಸುವ ಹುಡುಗರೂ ಹಾಕಿ ಆಡತೊಡಗಿದರು. ಮರದ ಕೊಂಬೆಗಳೇ ಹಾಕಿ ಸ್ಟಿಕ್ಕುಗಳಾದವು. ಕಾಡು ಕಾಯಿಗಳೇ ಚೆಂಡುಗಳಾದವು. ಇನ್ನೊಂದೆಡೆ ಕೊಡವರ ಮಾರ್ಷಲ್ ಗುಣವನ್ನು ಅರಿತಿದ್ದ ಬ್ರಿಟೀಷರು ಸೈನ್ಯದಲ್ಲಿ ಕೊಡವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸತೊಡಗಿದರು. ಹಾಕಿಯ ಶಿಸ್ತು, ಹೊಸ ನಿಯಮಗಳು ಊರೊಳಗೂ ಬಂದವು.
ಬ್ರಿಟೀಷ್ ಅಧಿಕಾರಿಗಳೂ ಕೊಡವರೊಡನೆ ಹಾಕಿಯ ಹುಚ್ಚನ್ನು ಹಿಡಿಸಿಕೊಂಡರು. ಅದಕ್ಕೆ ಉದಾಹರಣೆ ಮಡಿಕೇರಿಯ ಖ್ಯಾತ “ಮ್ಯಾನ್ಸ್ ಕಾಂಪೌಂಡ್” ಎಂಬ ಹಾಕಿ ಮೈದಾನ. ಬ್ರಿಟೀಷ್ ಕಾಫಿ ಬೆಳೆಗಾರನಾಗಿದ್ದ ಮ್ಯಾನ್ ಎಂಬಾತ ಹಾಕಿಯ ಹುಚ್ಚಿನಿಂದ ಎಕರೆಗಟ್ಟಲೆ ಕಾಫಿ ತೋಟವನ್ನು ಬೋಳು ಮಾಡಿ ಮೈದಾನವನ್ನೇ ಮಾಡಿಬಿಟ್ಟಿದ್ದ. ಅದೇ ಇಂದಿನ ಮ್ಯಾನ್ಸ್ ಕಾಂಪೌಂಡ್. ಈ ಮ್ಯಾನ್ಸ್ ಕಾಂಪೌಂಡ್ ಇಂದು ನೂರಾರು ಹಾಕಿಯ ಪ್ರತಿಭೆಗಳನ್ನು ತಯಾರು ಮಾಡುತ್ತಿದೆ. ಇಂದು ಮ್ಯಾನ್ ಮತ್ತು ಆತನ ಕುಟುಂಬ ಮಡಿಕೇರಿಯಲ್ಲಿ ಇಲ್ಲದಿರಬಹುದು. ಆದರೆ ಆತನ ಹೆಸರನ್ನು ಹೊತ್ತ ಹಾಕಿ ಮೈದಾನ ಹಾಕಿಯ ತರಬೇತಿ ತಾಣವಾಗಿ ಆತನ ಆಶಯವನ್ನು ಇಂದಿಗೂ ಈಡೇರಿಸುತ್ತಿದೆ. ಬ್ರಿಟೀಷ್ ಕಾಲದಲ್ಲಿ ಪ್ರತೀ ಆದಿತ್ಯವಾರ ಈ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತು. ದಕ್ಷಿಣ ಕೊಡಗಿನಿಂದಲೂ ಕೊಡವರನ್ನು ಕರೆಸಿಕೊಂಡು ಬ್ರಿಟೀಷರು ತಂಡಗಳನ್ನು ಕಟ್ಟುತ್ತಿದ್ದರು. ಹಿರಿಯ ಅಧಿಕಾರಿಗಳ ಪ್ರವಾಸ, ಕೆಲವರ ಸ್ಮರಣಾರ್ಥ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಆ ಹೊತ್ತಿಗೆ ವೃತ್ತಿಪರ ಹಾಕಿ ಕೊಡಗಿಗೆ ಕಾಲಿಟ್ಟಾಗಿತ್ತು. 19ನೇ ಶತಮಾನದ ಕೊನೆಯ ಭಾಗದಲ್ಲಿ ಪಟ್ಟಡ ಸೋಮಯ್ಯ ಎಂಬ ಮಹಾನ್ ಆಟಗಾರರೊಬ್ಬರು ಎತ್ತಿನ ಗಾಡಿಯಲ್ಲಿ ತಂಡವನ್ನು ಕಟ್ಟಿಕೊಂಡು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಹೋಗುತ್ತಿದ್ದರು! ಕೊಡಗಿನ ಜನರ ಹಾಕಿಯ ಮೇಲಿನ ನಿಷ್ಠೆ, ಬದ್ಧತೆ, ಆಸಕ್ತಿ ಅಂಥದ್ದು. ಅದೆಂದೂ ಕೊನೆಯಾಗಲಿಲ್ಲ. ಬದಲಿಗೆ ಅದು ಹೆಚ್ಚೇ ಆಯಿತು. ಕ್ರಮೇಣ ಕೊಡಗಿನ ಅಲ್ಲಲ್ಲಿ ಹಾಕಿ ಕ್ಲಬ್ಬುಗಳು ಆರಂಭವಾದವು. 60ರ ದಶಕದಲ್ಲಿ ಕೊಡಗಿನ ಪ್ರೈಮರಿ ಶಾಲಾ ಮೇಷ್ಟ್ರುಗಳೇ ಒಂದು ತಂಡಕಟ್ಟಿಕೊಂಡು ದೇಶದ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರು. ಹಲವು ಅಂತಾರಾಷ್ಟ್ರೀಯ ತಂಡಗಳೊಟ್ಟಿಗೆ ಆಡಿದ ಶ್ರೇಯಸ್ಸು ಈ “ಕೂರ್ಗ್ ಟೀಚರ್ಸ್ ಟೀಮ್”ನದ್ದು. ಒಮ್ಮೆ ಮದರಾಸಿನಲ್ಲಿ ಶ್ರೀಲಂಕಾ ತಂಡಕ್ಕೆ ಇಪ್ಪತ್ತು ಗೋಲುಗಳನ್ನು ಭಾರಿಸಿದ ದಾಖಲೆಯನ್ನೂ ಈ ಸ್ಥಳೀಯ ತಂಡ ಮಾಡಿತ್ತು! ಈ ತಂಡದ ಕೆಲವು ಸದಸ್ಯರು ಅನಂತರ ಭಾರತ ತಂಡವನ್ನೂ ಪ್ರತಿನಿಧಿಸಿದ್ದರು. ಇಲ್ಲಿನ ಹಾಕಿಯ ಹುಚ್ಚಿಗೆ ಇದಕ್ಕಿಂತ ಇನ್ನೇನು ಉದಾಹರಣೆ ತಾನೇ ಬೇಕು? ಇಲ್ಲಿ ಹಾಕಿ ಎಂದರೆ ಇಂಥ ಹಲವು ಅದ್ಭುತಗಳ ಕಂತೆ. ಹಾಕಿ ಎಂದರೆ ಸಾಕ್ಷಾತ್ ಸಮರ. ಹಾಕಿ ಎಂದರೆ ಉಳಿದೆಲ್ಲದರ ಮೈಮರೆವು. ಕೊಡಗಿನ ಹಾಕಿಯ ಇಂಥ ಗುಣಗಳಿಗೆ ಆಧುನಿಕ ಕಾಲದಲ್ಲಿ ನೀರೆರೆದು ಪೋಸಿದವರು ಕೊಡಗಿನ ಜನರ ಪ್ರೀತಿಯ ಕುಟ್ಟಣಿ ಅಂಕಲ್.

ಕೊಡವ ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪ!

ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡಂಡ ಕುಟ್ಟಪ್ಪನವರು ಕೊಡಗಿನ ಹಾಕಿಯ ಶಾಶ್ವತ ಅಸ್ತಿತ್ವಕ್ಕಾಗಿ “ಕೊಡವ ಹಾಕಿ ಅಕಾಡೆಮಿ”’ಯನ್ನು ಸ್ಥಾಪಿಸಿದರು. ತಮ್ಮ ಕೈಯಿಂದ ಹಣ ಹಾಕಿ ಪ್ರಥಮ ಬಾರಿಗೆ 1997 ರಲ್ಲಿ ’ಪಾಂಡಂಡ ಕಪ್’ ಹಾಕಿ ಹಬ್ಬವನ್ನು ಆರಂಭಿಸಿದರು. ಆಗ ಸೋದರ ಸಂಬಂಧದ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟ ನಡೆದಾಗ ಇದ್ದದು ಕೇವಲ 59 ತಂಡಗಳು. ಆದರೆ ಕಾಲದಿಂದ ಕಾಲಕ್ಕೆ ತಂಡಗಳ ಸಂಖ್ಯೆ ಹೆಚ್ಚಾಗಿ 285 ತಂಡಗಳವರೆಗೂ ಮುಟ್ಟಿತು ಮತ್ತು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲೂ ಅದು ದಾಖಲಾಯಿತು. ಪ್ರತೀ ವರ್ಷ ಒಂದೊಂದು ಕುಟುಂಬಸ್ಥರು ಅತಿಥ್ಯಕ್ಕೆ ಮುಗಿಬೀಳತೊಡಗಿದರು. ಪಂದ್ಯಾವಳಿಗಳಿಗೆ ಉತ್ಸವದ ಕಳೆ ತರಲೂ ಅಕಾಡೆಮಿ ನಿರ್ಧರಿಸಿತು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟವಾಡಿದವರೂ ತಮ್ಮ ಕುಟುಂಬವನ್ನು ಪ್ರತಿನಿಧಿಸಿ ಕ್ರೀಡಾಕೂಟವನ್ನು ರಂಗೇರಿಸಿದರು. ಹೀಗೆ ನೋಡನೋಡುತ್ತಲೇ ಹಾಕಿ ವೈಭವವನ್ನು ಕಾಣತೊಡಗಿತು. ಪ್ರತೀ ವರ್ಷ ಎಪ್ರಿಲ್ – ಮೇ.ನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಯಿತು. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹ ನೀಡಿತು. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿತು. ಬದಲಾಗುವ ನಿಯಮಗಳು, ಶಿಸ್ತುಗಳು ಮಾಧ್ಯಮಗಳ ಹೊರತಾಗಿಯೂ ಆಟಗಾರನ ಅರಿವಿಗೆ ಬರತೊಡಗಿತು. ಕ್ರೀಡೆಯೊಂದು ಏನೆಲ್ಲಾ ಬದಲಾವಣೆ ತರಬಹುದು ಎಂಬುದಕ್ಕೆ ಕೊಡವ ಹಾಕಿ ಉತ್ಸವದಷ್ಟು ಯೋಗ್ಯ ಉದಾಹರಣೆ ಬಹುಶಃ ವಿಶ್ವದಲ್ಲಿ ಬೇರೆ ಇರಲಿಕ್ಕಿಲ್ಲ.
ಅಂಥ ಹಾಕಿ ಹಬ್ಬಕ್ಕೆ ಇದೀಗ 19ನೇ ವರ್ಷ. ವೀರಾಜಪೇಟೆ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ’ಕುಪ್ಪಂಡ ಕಪ್’ ಹಾಕಿ ಉತ್ಸವ ಹಾಕಿಯ ವೈಭವವನ್ನು ಸಾರುತ್ತಿದೆ. ಬರೋಬ್ಬರಿ 255 ತಂಡಗಳು. 3000ಕ್ಕೂ ಅಧಿಕ ಆಟಗಾರರು. ಐವತ್ತಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಗುಣಮಟ್ಟದ ಅಂಪೈರುಗಳು. ಸುಸಜ್ಜಿತ ಎರಡು ಮೈದಾನಗಳು. ಶಿಸ್ತು, ಸಮಯಪಾಲನೆ. ಪ್ರತೀ ತಂಡಕ್ಕೂ ಮ್ಯಾನೇಜರು ಮತ್ತು ಕೋಚ್‌ಗಳು, ಉತ್ಸಾಹಿ ಬೆಂಬಲಿಗರು. ಕೇಕೆ, ನಗು, ಉಲ್ಲಾಸ. ಲಿಂಗಭೇದವಿಲ್ಲ, ವಯಸ್ಸಿನ ಭೇದವಿಲ್ಲ, ವೃತ್ತಿಭೇದವಿಲ್ಲ. ಕೆಲವು ತಂಡಗಳಲ್ಲಿ ನ್ಯೂಟ್ರಿಶನ್ ಮತ್ತು ವೈದ್ಯರುಗಳು! ಎಪ್ಪತ್ತಕೂ ಹೆಚ್ಚಿನ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರು. ಆಡಲೆಂದೇ ಮಿಲಿಟರಿಂದ ಬಂದಿರುವ ಯೋಧರು. ದೊಡ್ಡವರೊಂದಿಗೆ ಮೈದಾನಕ್ಕಿಳಿದ ಪುಟ್ಟಪುಟ್ಟ ಮಕ್ಕಳು, ಅಣ್ಣಂದಿರೊಡಗೂಡಿ ಆಡುವ ತಂಗಿಯರು, ಗಂಡ ಹೆಂಡಿರಿರುವ ತಂಡಗಳು. ಇಂಥ ನೂರಾರು ಕೌತುಕಗಳಿಗೆ ವೀರಾಜಪೇಟೆ ಸಾಕ್ಷಿಯಾಗುತ್ತಿದೆ. ಎಲ್ಲೋ ಟಿವಿಯಲ್ಲಿ ಕಂಡಿದ್ದ ಆಟಗಾರನ ಆಟವನ್ನು ಜನ ಪ್ರತ್ಯಕ್ಷ ನೋಡುವಂತಾಗಿದೆ. ಇಪ್ಪತ್ತೈದು ದಿನಗಳ ಹಬ್ಬದ ಫೈನಲ್ ಇವತ್ತು ನಡೆಯಲಿದೆ, ಬನ್ನಿ ಪ್ರೋತ್ಸಾಹಿಸೋಣ. ಇಷ್ಟಕ್ಕೂ ಕೊಡಗಿನ ವಾಹನಗಳಲ್ಲಿ ಕಾಣುವ Drink coorg coffee and play good hockey ಎಂಬ ಸ್ಟಿಕ್ಕರ್ ಹಿಂದೆ ಕಾಫಿ ಮತ್ತು ಹಾಕಿಯ ಪ್ರೇಮದ ಕಥೆಯಿದೆ!

 

 

ps hockey article

Comments are closed.