Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಂದಿನ ತಂತ್ರಗಾರಿಕೆಯೂ ಇರಲಿಲ್ಲ, ಎದೆಗಾರಿಕೆಯೂ ಇರಲಿಲ್ಲ, ಇದು ಅರವತ್ತೆರಡರ ಭಾರತವೂ ಅಲ್ಲ

ಇಂದಿನ ತಂತ್ರಗಾರಿಕೆಯೂ ಇರಲಿಲ್ಲ, ಎದೆಗಾರಿಕೆಯೂ ಇರಲಿಲ್ಲ, ಇದು ಅರವತ್ತೆರಡರ ಭಾರತವೂ ಅಲ್ಲ

ಇಂದಿನ ತಂತ್ರಗಾರಿಕೆಯೂ ಇರಲಿಲ್ಲ, ಎದೆಗಾರಿಕೆಯೂ ಇರಲಿಲ್ಲ, ಇದು ಅರವತ್ತೆರಡರ ಭಾರತವೂ ಅಲ್ಲ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದಾಗ ಆಡಿದ ಒಂದು ಮಾತು ಮುಂದಿನ ಸವಾಲು ಮತ್ತು ಭಾರತದ ನಡೆಯನ್ನು ಸ್ಪಷ್ಟವಾಗಿ ತಿಳಿಸುವಂತಿತ್ತು. ತಜ್ಞರಿಗೆ ಅದರ ಮುನ್ಸೂಚನೆಯೂ ಅಂದೇ ಸಿಕ್ಕಿಬಿಟ್ಟಿತ್ತು. ಅಷ್ಟಕ್ಕೂ ಮೋದಿಯವರು ಹೇಳಿದ್ದು ಇಷ್ಟೇ. ‘ವಿಶ್ವದಲ್ಲಿ ಕೆಲವರು ಶಾಂತಿ-ಸೌಹಾರ್ಧಕ್ಕೆ ಹಾತೊರೆಯುತ್ತಿದ್ದರೆ ಇನ್ನು ಕೆಲವರು ವಿಸ್ತರಣಾವಾದವನ್ನು ಪ್ರತಿಪಾದಿಸುತ್ತಿದ್ದಾರೆ’ ಎಂದಿದ್ದರು. ಅದು ನೇರವಾಗಿ ಚೀನಾವನ್ನುದ್ದೇಶಿಸಿ ಆಡಿದ ಮಾತು ಎಂಬುದರಲ್ಲಿ ಯಾರಿಗೂ ಸಂಶಯ ಉಳಿದಿರಲಿಲ್ಲ. ಚೀನಾದ ಶತ್ರು ದೇಶದಲ್ಲಿ ನಿಂತು ಚೀನಾ ವಿರುದ್ಧ ಚಾಟಿ ಬೀಸಿದ್ದರು.

ಮೋದಿಯವರ ಮಾತಿನಲ್ಲೇನೂ ವ್ಯಂಗ್ಯವಿರಲಿಲ್ಲ, ಜಪಾನಿಯರನ್ನು ಮೆಚ್ಚಿಸುವ ಉಮೇದೂ ಇರಲಿಲ್ಲ. ಆದರೆ ಕಾಂಗ್ರಸಿಗರಲ್ಲಿ ಕೆಲವರು, ಭಾರತೀಯ ಕಮ್ಯುನಿಸ್ಟರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಆಕ್ಷೇಪದ ಮೂಲಕ ಭಾರತ-ಚೀನಾ ಗಡಿ ವಿವಾದವೇಕೆ ಏಳು ದಶಕಗಳು ಕಳೆದರೂ ಮುಗಿಯದ ಸರಕು ಎಂಬುದನ್ನು ತಿಳಿಸಿಕೊಟ್ಟಿದ್ದರು. ಅಂದು ಮೋದಿಯವರು ಆಡಿದ ಮಾತನ್ನು ಮೊದಲೇ ಯಾರಾದರೊಬ್ಬರು ಆಡುವ ಧೈರ್ಯ ಮಾಡಿದ್ದರೆ ಇಂದು ಯಾವುದನ್ನು ವಿವಾದ, ಬಿಗು ಎಂದು ಕರೆಯುತ್ತಿದ್ದೇವೋ ಅದು ಖಂಡಿತಾ ಇರುತ್ತಿರಲಿಲ್ಲ. ಭಾರತದ ನಿಷ್ಕ್ರೀಯತೆಯೇ ಚೀನಾಕ್ಕೆ ಶಕ್ತಿಯಾಗಿ ಗಡಿಯಲ್ಲಿ ಆಡಿದ್ದೇ ಆಟ ಎಂಬ ಹಂತಕ್ಕೆ ಮುಟ್ಟಿದ್ದರ ಹಿಂದೆ ಇಂಥ ಹಳೆಯ ಹಲವು ಆಕ್ಷೇಕಣೆಗಳು, ಆಕ್ಷೇಪಕರ ಮನಸ್ಸುಗಳೂ ಕೆಲಸ ಮಾಡಿವೆ. ಚೀನಾದ ಧೋರಣೆ ವಿಸ್ತರಣಾವಾದವಲ್ಲದೇ ಇನ್ನೇನು?

ವಿಸ್ತಾರದಲ್ಲಿ ದೊಡ್ಡದಾಗಿರುವ ಚೀನಾ ತನ್ನ ಗಡಿಗಳನ್ನು 16 ದೇಶಗಳೊಡನೆ ಹಂಚಿಕೊಂಡಿದೆ. ಮತ್ತು ಆ ಹದಿನಾರೂ ದೇಶಗಳೊಡನೆಯೂ ಅದರ ಸಂಬಂಧ ಉತ್ತಮವಾಗಿಲ್ಲ ಮತ್ತು ಗಡಿ ವಿವಾದವನ್ನು ಸೃಷ್ಟಿಸಿಕೊಂಡಿದೆ. ವಿಚಿತ್ರ ಎಂದರೆ ಚೀನಾ ತನ್ನೊಂದಿಗೆ ಗಡಿಗಳನ್ನು ಹಂಚಿಕೊಳ್ಳದ ಇನ್ನಿತರ ಆರು ದೇಶಗಳೊಡನೆ ಕೂಡಾ ಗಡಿ, ಜಲ ಮುಂತಾದ ಕಾರಣಗಳಿಂದ ವೈರತ್ವ ಕಟ್ಟಿಕೊಂಡಿದೆ. ತನ್ನದಲ್ಲದ ದಕ್ಷಿಣ ಚೀನಾ ಸಾಗರವನ್ನು ಕೂಡಾ ಚೀನಾ ತನ್ನದು ಎಂದುಕೊಳ್ಳುತ್ತದೆ! ಹೇಗೆ ಭಾರತ ಸಮಸ್ತ ಹಿಂದೂ ಮಹಾಸಾಗರ ಭಾರತದ ಸ್ವತ್ತಲ್ಲವೋ ದಕ್ಷಿಣ ಚೀನಾ ಸಾಗರ ಕೂಡಾ ಚೀನಾದ ಸ್ವತ್ತಲ್ಲ. ಚೀನಾದ ಸಾಮ್ರಾಜ್ಯದಾಹ ಅಂಥದ್ದು. ಇನ್ನು ಅದು ಬಗಲಲ್ಲಿರುವ ಟಿಬೆಟನ್ನು ಹೇಗೆ ಬಿಟ್ಟೀತು? ಹಿಮಾಲಯದತ್ತ ಕಣ್ಣುಹಾಯಿಸದೆ ಹೇಗಿದ್ದೀತು?

ಕಮ್ಯುನಿಸ್ಟ್‌ ಪ್ರಭೇದದ ಹುಟ್ಟುಗುಣ ಅತಿಯಾದ ದಾಹದ ಎಲ್ಲಾ ಬುದ್ಧಿಗಳೂ ಚೀನಾಕ್ಕಿದೆ. ಅದಕ್ಕಾಗಿ ಸಾಧ್ಯವಿರುವ ಎಲ್ಲಾ ಎಲ್ಲಾ ದಾರಿಗಳನ್ನೂ ಅದು ಹುಡುಕುತ್ತದೆ. ಕಿಂಡಿಯೊಳಗೂ ನುಸುಳುತ್ತದೆ. ಹಾಗಾಗಿ ಭಾರತ-ಭೂತಾನ್ ಗಡಿಯತ್ತ ಅದರ ಕಣ್ಣುಬಿದ್ದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಮತ್ತು ಇದು ನಿನ್ನೆಮೊನ್ನೆ ನಿಶ್ಚಯವಾದ ಸಂಗತಿಯೂ ಅಲ್ಲ. ಹಾಗಾದರೆ ಈಗೇಕೆ ಅದು ಬೃಹದಾಕಾರವಾಗಿ ಬೆಳೆದುನಿಂತಿದೆ? ಯುದ್ಧೋನ್ಮಾನದ ಸ್ಥಿತಿ ಈಗಲೇ ಏಕೆ ನಿರ್ಮಾಣವಾಗಿದೆ ಎಂಬ ಪ್ರಶ್ನೆಯಲ್ಲಿ ಭಾರತ ಮತ್ತು ಚೀನಾಗಳು ಪ್ರತಿಪಾದಿಸುವ ವಾದಗಳು ಎಂಬ ಉತ್ತರವಿದೆ. ಅದಕ್ಕೆ ಮತ್ತಷ್ಟು ಸ್ಪಷ್ಟವಾದ ಉತ್ತರವನ್ನು ನಮ್ಮ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರೇ ಕೊಟ್ಟಿದ್ದರು. ಈಗಿರುವ ಭಾರತ 1962ರದ್ದಲ್ಲ, 2017ರ ಭಾರತ. ಈ ಉತ್ತರದ ಹಿಂದೆ ಎಲ್ಲವೂ ಅಡಗಿದೆ. ಸದ್ಯ ಚೀನಾದ ವಿಸ್ತರಣಾವಾದಕ್ಕೆ ಡೊಕ್ಲಂ ಒಂದು ನೆಪವೇ ಹೊರತು, ಅದೇನೂ ಒಂದು ರಾತ್ರಿಯಲ್ಲಾದ ಬೆಳವಣಿಗೆಯಲ್ಲ.

1962ರ ನಂತರ ಭಾರತದ ಬಹುತೇಕ ಎಲ್ಲಾ ಸರಕಾರಗಳೂ ಚೀನಾದೊಂದಿಗೆ ಒಂದು ಸುರಕ್ಷಿತ ಅಂತರವನ್ನಿಟ್ಟುಕೊಂಡೇ ಬಂದಿತ್ತು. ಅದೊಂದು ಭಯಂಕರ ಸೋಲು ಎಂಬ ಭಯವನ್ನು ಎಲ್ಲೋ ಮೂಲೆಯಲ್ಲಿ ಹೊತ್ತುಕೊಂಡೇ ಬಂತು. ಹಾಗಾಗಿ ಚೀನಾ ಆಗಾಗ ಅರುಣಾಚಲ, ಸಿಕ್ಕಿಂಗಳನ್ನು ತನ್ನ ಭೂಪಟದಲ್ಲಿ ಸೇರಿಸಿಕೊಳ್ಳುವುದನ್ನು ಮುಂದುವರಿಸುತ್ತಾ ಬಂತು. ಇನ್ನೊಂದೆಡೆ ದಲೈ ಲಾಮಾ ಅನುಯಾಯಿಗಳೆನಿಸಿಕೊಂಡ ನಿರಾಶ್ರಿತ ಟಿಬೇಟಿ ವಿದ್ಯಾರ್ಥಿಗಳು ವರ್ಷಕೊಮ್ಮೆ ಮೊಂಬತ್ತಿ ಬೆಳಗಿ ಚೀನಾ ವಿರುದ್ಧ ಘೋಷಣೆ ಕೂಗುವುದಕೊಂದಿಗೆ ಎಲ್ಲವೂ ಮುಗಿದುಹೋಗುತ್ತಿತ್ತು. ಆದರೆ ಎಂದಾದರೊಮ್ಮೆ ದೇಶ ಇಂಥ ಸ್ಥಿತಿಯನ್ನು ಎದುರಿಸಬೇಕೆಂಬುದರಲ್ಲಿ ಯಾವ ರಾಜತಾಂತ್ರಿಕನಿಗೂ ಸಂಶಯ ಉಳಿದಿರಲಿಲ್ಲ. ಆದರೆ ರಿಸ್ಕ್‌ ತೆಗೆದುಕೊಳ್ಳುವ ನಾಯಕನೇ ದೇಶದಲ್ಲಿರಲಿಲ್ಲ. ಆ ಸ್ಥಾನವನ್ನು ತುಂಬಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು.

ಗ್ವಾಡಾರ್ ಬಂದರಿಗೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಆರ್ಥಿಕ ಕಾರಿಡಾರ್ ಯೋಜನೆ, ಶ್ರೀಲಂಕಾ, ಮಯನ್ಮಾರ್‌ಗಳಲ್ಲಿ ಸುಸಜ್ಜಿತ ಬಂದರು, ಹಿಂದೂ ಮಾಹಾಸಾಗರದತ್ತ ಅದರ ಕಾಕ ದೃಷ್ಟಿ ಎಲ್ಲವೂ ಭಾರತವನ್ನು ಕಟ್ಟಿಹಾಕುವ ಯೋಜನೆಗಳೆಂಬುದು ಹಿಂದೆ ಸಾಮಾನ್ಯನಿಗೆ ಅರ್ಥವಾಗಿದ್ದರೂ ನಾಯಕರು ಕೈಕಟ್ಟಿ ಕುಳಿತಿದ್ದರು. ಭಾರತವನ್ನು ಪರಮಾಣು ಪೂರೈಕೆದಾರ ರಾಷ್ಟ್ರವನ್ನಾಗಿ ಘೋಷಿಸಲು ಚೀನಾ ವಿರೋಧ ವ್ಯಕ್ತಪಡಿಸಿದಾಗಲೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನಕ್ಕೆ ಅಡ್ಡಗಾಲು ಹಾಕಿದಾಗಲೂ ಭಾರತ ಸಮರ್ಥ ಹೆಜ್ಜೆ ಇಡಲಿಲ್ಲ. ಎದುರಾಳಿ ತೀರಾ ಬಗ್ಗಿಬಿಟ್ಟರೆ ಜಗಳ ಕೊನೆ ಎಂಬ ತಂತ್ರಕ್ಕೆ ಎಲ್ಲರೂ ಬಿದ್ದಿರುವಂತೆ ದೇಶ ವರ್ತಿಸಿತು. ಅವೆಲ್ಲವನ್ನೂ ಮೋದಿ ನಿಭಾಯಿಸಿದ ರೀತಿಯ ಪರಿಣಾಮವೇ ಸದ್ಯದ ಬೆಳವಣಿಗೆ. ಭಾರತ ಮತ್ತು ಭೂತಾನ್ ಹಳೆಯ ಗೆಳೆಯನಾದರೂ ಕೆಲವು ಸರಕಾರಗಳು ಭೂತಾನಿನೊಡನೆ ಒಂದು ಅಂತರವಿಟ್ಟುಕೊಂಡೇ ಬಂತು.

ಈ ಅವಧಿಯಲ್ಲಿ ಚೀನಾ ಭೂತಾನಿನ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರುತ್ತಿತ್ತು. ಭಾರತ-ಟಿಬೆಟ್ ಮತ್ತು ಭೂತಾನ್ ಗಡಿಗಳು ಸೇರುವ ಡೊಕ್ಲಾಂ ಮೇಲೆ ಚೀನಾಕ್ಕೆ ಕಣ್ಣಿತ್ತು. ಡೊಕ್ಲಾಂ ಎನ್ನುವ ಕೇಂದ್ರಬಿಂದುವಿನಲ್ಲಿ ತನ್ನ ಪ್ರಭಾವ ಸಾಧಿಸಿದರೆ ಆಯಕಟ್ಟಿನ ಪ್ರದೇಶದಲ್ಲಿ ತನ್ನ ಶಕ್ತಿ ಸ್ಥಾಪಿಸಿದಂತೆ ಎನ್ನುವುದನ್ನು ಚೀನಾ ಕಂಡುಕೊಂಡಿತ್ತು. ಪ್ರಬಲ ಚೀನಾದೆದುರು ಪೇಲವದಂತೆ ಕಾಣುವ ಭೂತಾನ್ ಚೀನಾದ ಒತ್ತಡವನ್ನು ಸಹಿಸುವಷ್ಟು ಸಹಿಸಿಕೊಳ್ಳುತ್ತಲೇ ಇತ್ತು. ಭಾರತದತ್ತ ಆರ್ತ ನೋಟ ಬೀರುತ್ತಲೇ ಇತ್ತು. ಸುಮಾರು ಎರಡು ದಶಕಕ್ಕೂ ಹಿಂದಿನ ಈ ಅಂತರವನ್ನು ಮೊಟ್ಟಮೊದಲು ಕಡಿಮೆ ಮಾಡಿದವರು ಮೋದಿಯವರು. ಅದಕ್ಕಾಗಿ ಅವರು ಪ್ರಧಾನಮಂತ್ರಿಯಾದ ಮೊದಲ ದಿನವನ್ನೇ ಆರಿಸಿಕೊಂಡರು. ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ತನ್ನ ಮೊದಲ ವಿದೇಶಿ ಪ್ರವಾಸವನ್ನು ಹಿಮಾಲಯ ವಲಯದಿಂದಲೇ ಆರಂಭಿಸಿರು. ಯಾವಾಗ ಮೋದಿಯವರು ಭೂತಾನ್ ಪ್ರವಾಸ ಕೈಗೊಂಡರೋ ಚೀನಾಕ್ಕೆ ಎಲ್ಲವೂ ಸ್ಪಷ್ಟವಾಗತೊಡಗಿತ್ತು. ಅದೇ ಕಾರ್ಯವನ್ನು ಮೋದಿ ನೇಪಾಳದಲ್ಲೂ ಮಾಡಿದ್ದರು.

ಪ್ರವಾಸಕ್ಕಿಂತ ಮೊದಲು ಭಾರತಕ್ಕೆ ಸಾರ್ಕ್ ದೇಶಗಳ ದೊಡ್ಡಣ್ಣ ಎಂಬ ಬಿರುದೊಂದಿತ್ತೇ ಹೊರತು ವಾಸ್ತವದಲ್ಲಿ ಹಾಗೇನಿರಲಿಲ್ಲ. ಏಕೆಂದರೆ ಭಾರತ ಸಾರ್ಕ್ ದೇಶಗಳ ದೊಡ್ಡಣ್ಣನಾಗಿದ್ದರೆ ಚೀನಾ ಶ್ರೀಲಂಕಾದಂಥ ದೇಶದಲ್ಲಿ ಬಂದರು, ನೇಪಾಳದ ರಾಜಕೀಯದಲ್ಲಿ ಹಸ್ತಕ್ಷೇಪವನ್ನು ಮಾಡುತ್ತಲೇ ಇರಲಿಲ್ಲ. ನಿಜಕ್ಕೂ ಭಾರತ ಸಾರ್ಕಿನ ದೊಡ್ಡಣ್ಣನನ್ನಾಗಿ ಮಾಡಿದವರು ಮೋದಿಯವರೇ. ಹಿಮಾಲಯ ವಲಯದ ಪ್ರವಾಸದ ನಂತರ ಅವರು ಭೂತಾನ್ ಮತ್ತು ನೇಪಾಳಗಳಲ್ಲಿ ಹಲವು ಮಹತ್ವಪೂರ್ಣ ಒಪ್ಪಂದಗಳನ್ನು ಕೈಗೊಂಡರು. ಪ್ರಕೃತಿ ವಿಕೋಪ ನಿರ್ವಹಣೆ, ತಂತ್ರಜ್ಞಾನ ಅಭಿವೃದ್ಧಿ, ಶಸ್ತ್ರಾಸ್ತ್ರಗಳ ಪೂರೈಕೆ, ವಿಮಾನ ಪೂರೈಕೆ, ಜಿಸ್ಯಾಟ್ ಉಪಗ್ರಹಗಳನ್ನು ನೀಡಿತು. ಚೀನಾದ ಅಸಹನೆ ಮತ್ತಷ್ಟು ಹೆಚ್ಚಾಯಿತು. 1962ರ ಭಾರತವನ್ನು ಬಿಡಿ, ಕೇವಲ ಮೂರು ವರ್ಷಗಳ ಹಿಂದಿನ ಭಾರತದಂತೆ ಇಂದಿನ ಭಾರತವಿಲ್ಲ ಎಂಬುದು ಅದಕ್ಕೆ ತಿಳಿಯತೊಡಗಿತು. ಅಷ್ಟೇ ಅಲ್ಲ ದಲೈ ಲಾಮಾರನ್ನು ದಾಳವನ್ನಾಗಿ ಬಳಸಿಕೊಂಡ 56 ಇಂಚಿನ ಎದೆಗಾರಿಕೆ ತೋರಿದವರು ಮೋದಿವರು. ಏಕೆಂದರೆ ಚೀನಾಕ್ಕೆ ಭಾರತದೊಂದಿಗಿರುವ ಮುಖ್ಯ ಆಕ್ರೋಶವೆಂದರೆ ಟಿಬೆಟಿನದ್ದು. ಬಹಳ ಹಿಂದೆಯೇ ಮಾವೋತ್ಸೆ ತುಂಗ ಟಿಬೇಟನ್ನು ನಮಗೆ ಇದೊಂದು ಹಲ್ಲು ನೋವಿನಂತೆ ಎಂದು ಹೇಳಿಕೆ ಕೊಟ್ಟಿದ್ದ.

ಆ ಹೇಳಿಕೆಯ ಆಧಾರದಲ್ಲೇ ಚೀನಾದ ರಾಜಕೀಯ ನಡೆ ಮುಂದುವರಿಯಿತು. ಕಮ್ಯುನಿಸ್ಟ್‌ ಚೀನಾ ಹುಟ್ಟಿದಂದಿನಿಂದ ಅಂದರೆ 1949ರಿಂದಲೇ ಇದು ಆರಂಭವಾಗಿತ್ತು. 1952ರಲ್ಲಿ ಭಾರತದ ಗಡಿಯಲ್ಲಿ ಅದು ರಸ್ತೆ ನಿರ್ಮಾಣ ಕಾರ್ಯಕ್ಕಿಳಿಯಿತು. ಈಗ ಯಾವ ಬಿಗುವಿನ ಪರಿಸ್ಥಿತಿಯಿದೆಯೋ ಅಂಥದ್ದೇ ಬಿಗುವಿನ ಪರಿಸ್ಥಿತಿ ಆಗಲೂ ಕಂಡುಬಂದಿತ್ತು. ಕೊನೆಗೆ ಮಾತುಕತೆಗಳು ನಡೆದು ಟಿಬೆಟನ್ನು ಸ್ವತಂತ್ರ ದೇಶವೆಂದೂ ಹಳೆಯ ಮ್ಯಾಕ್‌ಮೋಹನ್ ರೇಖೆಯನ್ನು ಗಡಿಯೆಂದೂ ಒಪ್ಪಿಕೊಳ್ಳಲಾಯಿತು. ಮತ್ತು ಉಭಯ ದೇಶಗಳಲ್ಲಿ ಶಾಂತಿಗಾಗಿ ಪಂಚಶೀಲ ತತ್ತ್ವಗಳಿಗೆ ಸಹಿ ಹಾಕಲಾಯಿತು. ಆದರೆ ಕೆಲವೇ ವರ್ಷಗಳಲ್ಲಿ ಚೀನಾ ಟಿಬೆಟನ್ನು ಆಕ್ರಮಿಸಿಕೊಂಡಿತು. ಧರ್ಮಗುರು ದಲೈಲಾಮ ಮತ್ತು ಸಹಸ್ರಾರು ಅನುಯಾಯಿಗಳು ಭಾರತಕ್ಕೆ ಓಡಿ ಬಂದರು. ಇದರಿಂದ ಚೀನಾಕ್ಕೆ ತನ್ನ ವಿಸ್ತರಣಾವಾದಕ್ಕೊಂದು ಶಾಶ್ವತ ನೆಪ ಸಿಕ್ಕಿಬಿಟ್ಟಿತ್ತು. ಮುಂದೆ 62ರ ಯುದ್ಧಕ್ಕೆ ಅದೂ ಒಂದು ಕಾರಣವಾಗಿ, ತನ್ನ ಭೂಪಟದಲ್ಲಿ ಭಾರತದ ಭೂಭಾಗಗಳನ್ನು ಸೇರಿಸುವ ಧೂರ್ತತನ ಮೆರೆದು, ಬ್ರಹ್ಮಪುತ್ರಕ್ಕೆ ಅಲ್ಲಲ್ಲಿ ಒಡ್ಡುಗಳನ್ನು ಕಟ್ಟುವುದು ಮುಂದುವರಿಯುತ್ತಲೇ ಹೋಯಿತು.

ಕೊನೆಗೂ 1998ರಲ್ಲಿ ಚೀನಾ ಮತ್ತು ಭಾರತದ ನಡುವೆ ನಡೆದ ಒಪ್ಪಂದದ ಪ್ರಕಾರ ಚೀನಾ ಟಿಬೆಟ್ ಗಡಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ನಡೆಸುವುದಿಲ್ಲ ಎಂದು ಮಾತು ಕೊಟ್ಟಿತ್ತು. ಆದರೆ ನಂತರ ಚೀನಾ ಈ ಒಪ್ಪಂದವನ್ನು ಮುರಿದು ರಸ್ತೆ ನಿರ್ಮಾಣ ಕಾರ್ಯಕ್ಕಿಳಿಯಿತು. ಭಾರತ-ಭೂತಾನ್-ಟಿಬೆಟ್ ಗಳು ಸಂಧಿಸುವ ಪ್ರದೇಶದಲ್ಲಿ ಚೀನಾ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಬಾರದೆಂದು ಭೂತಾನ್ ಚೀನಾಕ್ಕೆ ಹೇಳುತ್ತಲೇ ಇತ್ತಾದರೂ ಭೂತಾನಿನದ್ದು ಅರಣ್ಯರೋಧನವಾಗಿತ್ತು. ಚೀನಾ ಅದನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇರಲಿಲ್ಲ. ಆದರೆ ಯಾವಾಗ ನರೇಂದ್ರ ಮೋದಿ ಪ್ರಧಾನಮಂತ್ರಿಯದರೋ ಆಗ ಚೀನಾ ಭಾರತ ಭೂತಾನಿನ ಬಾಯಲ್ಲಿ ಇಂಥ ಮಾತನ್ನು ಹೇಳಿಸುತ್ತಿದೆ ಎನ್ನಲಾರಂಭಿಸಿತು. ಚೀನಾ ಹಾಗೆ ಹೇಳಲೊಂದು ಕಾರಣವಿತ್ತು. ಎರಡು ದಶಕಗಳ ಹಿಂದೆ ಚೀನಾ ಭೂತಾನಿನೊಡನೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲು ಸತತ ಒತ್ತಡ ಹೇರಿತ್ತು.

ಭೂತಾನಿನ ಜಕಾರ್ ಲುಂಗ್ ಮತ್ತು ಪಸಲುಂಗ್‌ನತ್ತ ಕಣ್ಣಿಟ್ಟಿದ್ದ ಚೀನಾ ಈ ಎರಡು ಭಾಗಗಳ ಮೇಲೆ ನಾವಿನ್ನು ಯಾವುದೇ ಅಭಿವೃದ್ಧಿ ನಡೆಸುವುದಿಲ್ಲವೆಂದೂ ಅದಕ್ಕೆ ಬದಲಿಯಾಗಿ ಡೋಕ್ಲಂ ಅನ್ನು ನೀಡಬೇಕೆಂದೂ ಷರತ್ತನ್ನು ಹಾಕಿತು. ಏಕೆಂದರೆ ಡೋಕ್ಲಂ ಟಿಬೆಟನ್ನು ಜೋಡಿಸುತ್ತದೆ. ಆದರೆ ಆಗ ಭಾರತದಿಂದ ಯಾವುದೇ ಆಕ್ಷೇಪಣೆ ಅಥವಾ ಖಂಡನೆ ವ್ಯಕ್ತವಾಗಲಿಲ್ಲ. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೇ ಡೋಕ್ಲಂನತ್ತ ಗಮನಹರಿಸಲಾರಂಭಿಸಿದರು. ಸಿಕ್ಕಿಂ ಮತ್ತು ಭೂತಾನ್ ನಡುವೆ ರಸ್ತೆ ನಿರ್ಮಿಸುವ ಯೋಜನೆ ಹಾಕಿದರು. ಭೂತಾನ್‌ನೊಂದಿಗೆ ನಡೆದ ಒಪ್ಪಂದದ ಪ್ರಕಾರ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಾಣಕ್ಕಿಳಿಯಿತು. ಈ ಕಾರಿಡಾರ್ ಚೀನಾಕ್ಕೆ ನೇರ ಸವಾಲನ್ನು ಒಡ್ಡುವಂಥಾದ್ದು. ಏಕೆಂದರೆ ಈ ಭಾಗ ಸಾಮರಿಕ ಮತ್ತು ವ್ಯಾಪಾರಿ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶ. ಚೀನಾದ ವಿಸ್ತರಣಾವಾದವನ್ನು ಸಮರ್ಥವಾಗಿ ತಡೆಯಬಲ್ಲ ಯೋಜನೆ.

ಈ ಕಾರಣದಿಂದ ಚೀನಾ ಡೋಕ್ಲಂ ಸಮೀಪದಲ್ಲೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದನ್ನು ಭಾರತೀಯ ಸೈನಿಕರು ವಿರೋಧಿಸಿದ್ದೇ ಈಗಿನ ಸಂಘರ್ಷಕ್ಕೆ ಮೂಲಕಾರಣ. ತನ್ನ ರಸ್ತೆ ನಿರ್ಮಾಣ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡಿರುವುದು ವಿಶ್ವಾಸದ್ರೋಹ ಎಂದು ಚೀನಾ ಹೇಳುತ್ತಿದೆ. ಹಾಗಾದರೆ ಪಂಚಶೀಲವನ್ನು ಉಲ್ಲಂಸಿದ್ದು, ಒಪ್ಪಂದವನ್ನು ಉಲ್ಲಂಸಿ ಟಿಬೆಟನ್ನು ಆಕ್ರಮಿಸಿಕೊಂಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆರ್ಥಿಕ ಕಾರಿಡಾರ್ ನಿರ್ಮಿಸುತ್ತಿರುವುದೆಲ್ಲವೂ ವಿಶ್ವಾಸದ್ರೋಹವಲ್ಲವೇ? ವಿಸ್ತರಣಾವಾದದ ಅಮಲಲ್ಲಿರುವ ಚೀನಾಕ್ಕೆ ತಾನು ವಿಶ್ವದ ಭೃಹತ್ ಆರ್ಥಿಕ ಶಕ್ತಿ ಎಂಬ ಅಹಂಕಾರವಿದೆ. ಜಗತ್ತಿನ ದೊಡ್ಡ ಸೈನಿಕ ಬಲ ಹೊಂದಿರುವ ದೇಶಗಳಲ್ಲೊಂದು ಎಂಬ ಧೈರ್ಯವಿದೆ. ಕಠೋರ ಕಮ್ಯುನಿಸಂ ಅನ್ನು ಹೇರಿರುವ ಅತಿಯಾದ ವಿಶ್ವಾಸವಿದೆ. ಆದರೆ ನಿಜವೆಂದರೆ ಚೀನಾದ ಮಾತನ್ನು ನಂಬುವ ದೇಶಗಳೇ ಇಲ್ಲ.

ತಾನು ಪ್ರಾಮಾಣಿಕ ಎಂದು ಬಿಂಬಿಸಿಕೊಳ್ಳಲು ಅದಕ್ಕೆ ಯಾವ ಪುರಾವೆಗಳೂ ಇಲ್ಲ. ಹೇಗೆ ಉತ್ತರ ಕೊರಿಯಾವನ್ನು ಜಗತ್ತು ಒಪ್ಪುವುದಿಲ್ಲವೋ ಹಾಗೆ ಚೀನಾವನ್ನೂ ಜಗತ್ತು ಒಪ್ಪಿಕೊಳ್ಳಲು ವಿಶ್ವದ ಬಹುತೇಕ ರಾಷ್ಟ್ರಗಳು ಹಿಂದೆ ಮುಂದೆ ನೋಡುತ್ತದೆ. ಭಾರತದ ಬಳಿ ಇರುವ ಅತೀ ದೊಡ್ಡ ಅಸ್ತ್ರವೇ ಇದು. ಆ ಅಸ್ತ್ರವನ್ನು ಬತ್ತಳಿಕೆಯಲ್ಲಿ ಸೇರಿಸಿದವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಆ ಅಸ್ತ್ರವನ್ನು ಬಳಸಲು ಮೋದಿ ಇಟ್ಟ ಪ್ರತೀ ಹೆಜ್ಜೆಯಲ್ಲೂ ಒಂದೊಂದು ತಂತ್ರವಿತ್ತು. ಟಿಬೆಟಿ ಯನ್ನರ ಧರ್ಮಗುರು ದಲೈ ಲಾಮಾ ತಾನು ದೇಶಭ್ರಷ್ಟನಾದ ನಂತರ ಹೆಚ್ಚು ಸುದ್ದಿಯಾಗಿದ್ದು ಇತ್ತೀಚಿನ ದಿನಗಳಲ್ಲೇ. ಇಷ್ಟು ವರ್ಷಗಳು ಚೀನಾ-ಟಿಬೆಟ್ ವಿಷಯದಲ್ಲಿ ಮೊಂಬತ್ತಿ ಬೆಳಗುವ ಮೆರವಣಿಗೆಗಳಲ್ಲಿ ಫೋಟೋ ವಾಗಿದ್ದವರನ್ನು ಚೀನಾ ದೆ ದುರು ತಂದು ನಿಲ್ಲಿಸಿದವರು ಮೋದಿಯವರು. ಇದುವರಗಿನ ಸರಕಾರಗಳು ಅವರನ್ನು ತನ್ನದೇ ದೇಶದ ಅರುಣಾಚಲ ಪ್ರದೇಶಕ್ಕೂ ಕರೆದೊಯ್ಯಲು ಭಯಪಡುತ್ತಿದ್ದರೆಂದರೆ ನಮ್ಮ ರಾಜತಾಂತ್ರಿಕ ನಡೆಗಳು ಹೇಗಿದ್ದಿರಬಹುದು? ಎಲ್ಲವೂ ಅಂದುಕೊಂಡಂತೆಯೇ ನಡೆಯಿತು.

ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಟ್ಟರು. ಚೀನಾ ಗುಟುರು ಹಾಕಿತು. ಮೊಟ್ಟಮೊದಲ ಬಾರಿಗೆ ದಲೈಲಾಮಾ ಸಾರ್ವಜನಿಕವಾಗಿ ರಾಜಕೀಯ ಮಾತಾಡಿದರು. ಚೀನಾ ವಿಷಯದಲ್ಲಿ ಸರಕಾರ ಮಾತಾಡುವುದಕ್ಕಿಂತಲೂ ಹೆಚ್ಚಿನ ತೂಕ ದಲೈಲಾಮಾ ಮಾತಲ್ಲಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವಂಥಾದ್ದೆ. ಆದರೆ ಅದನ್ನು ಪ್ರಯೋಗ ಮಾಡಿದವರು ಮೋದಿಯವರು. ಒಂದೆಡೆ ವಿಸ್ತರಣಾವಾದ. ಇನ್ನೊಂದೆಡೆ ತನ್ನೊಂದಿಗೆ ನೆರೆಹೊರೆಯೂ ಅಭಿವೃದ್ಧಿಯಾಗಬೇಕೆಂಬ ವಿಶಾಲ ದೃಷ್ಟಿ. ಈ ದೃಷ್ಟಿ ಇಷ್ಟು ವರ್ಷಗಳಲ್ಲಿ ಆಳುವವರಿಗೆ ಕಂಡಿದ್ದರೆ ಇಂದಿನ ಪರಿಸ್ಥಿತಿ ಯಾವತ್ತೋ ಮುಗಿದು ಭಾರತ-ಚೀನಾ ಗಡಿಯಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ.

Comments are closed.