Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಾಧನೆ ಮೇಲೆ ಸವಲತ್ತು ಎಂದ ವ್ಯಕ್ತಿಗೇ ವ್ಯೆವಸ್ಥೆಯ ಹೊಣೆ ಹೊರಿಸಿದ ಮೋದಿ!

ಸಾಧನೆ ಮೇಲೆ ಸವಲತ್ತು ಎಂದ ವ್ಯಕ್ತಿಗೇ ವ್ಯೆವಸ್ಥೆಯ ಹೊಣೆ ಹೊರಿಸಿದ ಮೋದಿ!

ಸಾಧನೆ ಮೇಲೆ ಸವಲತ್ತು ಎಂದ ವ್ಯಕ್ತಿಗೇ ವ್ಯೆವಸ್ಥೆಯ ಹೊಣೆ ಹೊರಿಸಿದ ಮೋದಿ!

ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ.

ಅದು 2011, ಜೂನ್ 29. ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಲೇಸು ಎಂದು ಆಗಾಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯಭೀತರಾಗಿ ಮೌನ ಮುರಿದಿದ್ದರು. ಐದು ಪ್ರಮುಖ ಮಾಧ್ಯಮ ಸಂಸ್ಥೆಗಳ ಸಂಪಾದಕರ ಜತೆ ತಮ್ಮ ನಿವಾಸದಲ್ಲಿ ನಡೆಸಿದ ಸಂವಾದ/ಗೋಷ್ಠಿಯಲ್ಲಿ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರು(ಸಿಎಜಿ) ಹದ್ದುಮೀರಿ ನಡೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ತಮ್ಮ ಕಾರ್ಯವ್ಯಾಪ್ತಿ ದಾಟಿ ಸರಕಾರದ ನೀತಿನಿರೂಪಣೆಗಳ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಿಎಜಿ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಅಷ್ಟರೊಳಗೆ ಕೇಂದ್ರ ಸರಕಾರದ ಮಂತ್ರಿಗಳು ಒಬ್ಬರ ಹಿಂದೆ ಒಬ್ಬರಂತೆ ರಾಜಿನಾಮೆ ಇತ್ತು ಕೆಳಗಿಳಿಯುತ್ತಿದ್ದರು. ಇನ್ನು ಕೆಲವರು ತಮ್ಮ ಬುಡಕ್ಕೆ ಯಾವಾಗ ಕುತ್ತು ಬರುತ್ತದೋ ಎಂದು ಆತಂಕದಿಂದ ಕುಳಿತಿದ್ದರು. ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ತಮ್ಮ ಲಾಯರ್ ಬುದ್ಧಿ ಪ್ರಯೋಗಿಸಿ ‘ಝೀರೋ ಲಾಸ್ ಥಿಯರಿ’ ಮಂಡಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದರು. ಆಗಿನ ಗೃಹ ಸಚಿವ ಪಿ. ಚಿದಂಬರಂ ಆ ಮೊದಲು ಹಣಕಾಸು ಸಚಿವರಾಗಿದ್ದಾಗ ಮಾಡಿದ ಪಾಪ ಕಾಡಲು ಆರಂಭಿಸಿತ್ತು. ಒಂದು ವೇಳೆ ಚಿದಂಬರಂ ಅವರು ರಾಜೀನಾಮೆ ನೀಡಬೇಕಾಗಿ ಬಂದರೆ ಕುತ್ತು ಕೊನೆಗೆ ಬಂದು ನಿಲ್ಲುವುದು ತನ್ನ ಕುರ್ಚಿಯ ಬಳಿಯೇ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಭಯಭೀತಿಗೊಂಡಿದ್ದರು! ಅವರ ಪ್ರಾಮಾಣಿಕತೆ, ಕಾರ್ಯದಕ್ಷತೆ ಬಗ್ಗೆ ಜನರ ಮನದಲ್ಲೂ ಅನುಮಾನಗಳು ಮನೆಮಾಡಿದ್ದವು, ದೊಡ್ಡ ದೊಡ್ಡ ಕಂಪನಿಗಳ ಸಿಇಓಗಳು ತಿಹಾರ್ ಜೈಲು ಸೇರಿದ್ದರು, ಎ. ರಾಜ, ಕನಿಮೋಳಿ, ಕಲ್ಮಾಡಿ ಜೈಲೇ ಶಾಶ್ವತವಾಗಿ ಬಿಡುತ್ತದೇನೋ ಎಂಬ ಆತಂಕದಲ್ಲಿದ್ದರು, ಮಾಜಿ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಮ್ಮನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಮಾಡುವಂತಾಗಿ ಬಿಟ್ಟಿತ್ತು, ತಮ್ಮ ಇಲಾಖೆಯಲ್ಲಿ ನುಂಗಿರುವುದನ್ನು ಯಾವ ಕ್ಷಣಕ್ಕೂ ಹೊರಹಾಕಬಹುದು ಎಂದು ಅಧಿಕಾರಶಾಹಿಗಳು, ಮಂತ್ರಿಗಳು ನಡುಗಲು ಆರಂಭಿಸಿದ್ದರು.

ಹಾಗಾದರೆ…ರಾಷ್ಟ್ರದ ಪ್ರಧಾನಿ ಕೋಪತಾಪ ವ್ಯಕ್ತಪಡಿಸುವ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದ್ದ, ಸರಕಾರದ ಮೈಯಲ್ಲಿ ಬೆವರೂರುವಂತೆ ಮಾಡಿದ್ದ, ಭ್ರಷ್ಟರಿಗೆ ಇಷ್ಟೆಲ್ಲ ತ್ರಾಸ ಕೊಟ್ಟ ವ್ಯಕ್ತಿಯಾದರೂ ಯಾರೆಂದುಕೊಂಡಿರಿ?
ನಿಮ್ಮ ಊಹೆ ಸರಿಯಾಗಿಯೇ ಇದೆ… 2ಜಿ ತರಂಗಾತರ ನೀಡಿಕೆಯಲ್ಲಿ 1.76 ಲಕ್ಷ ಕೋಟಿ, ಕಲ್ಲಿದ್ದಲು ಗುತ್ತಿಗೆಯಲ್ಲಿ 1.86 ಲಕ್ಷ ಕೋಟಿ, ಕಾಮನ್ವೆಲ್ತ್ ಹಗರಣದಲ್ಲಿ ಸಾವಿರಾರು ಕೋಟಿಯನ್ನು ನುಂಗಲಾಗಿದೆ ಎಂಬ ದಿಗ್ಭ್ರಮೆಯುಂಟು ಮಾಡುವಂಥ ಅಂಶವನ್ನು ಬೆಳಕಿಗೆ ತಂದ ವಿನೋದ್ ರಾಯ್!2008, ಜನವರಿ 7ರಂದು ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿನೋದ್ ರಾಯ್ ಮಾಡಿದ್ದೇನು ಗೊತ್ತೆ?

1. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ (NHRM) ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತಂದಿದ್ದೇವೆ ಎಂಬ ಕೇಂದ್ರ ಸರಕಾರದ ಪ್ರತಿಪಾದನೆ ಎಂತಹ ಹಸಿ ಸುಳ್ಳು ಎಂಬ ವರದಿಯನ್ನು ಸಿಎಜಿ 2009ರಲ್ಲಿ ನೀಡಿತು. ವಾಸ್ತವದಲ್ಲಿ ದೇಶದ 71 ಪರ್ಸೆಂಟ್ ಜಿಲ್ಲೆಯಲ್ಲಿ ಈ ಯೋಜನೆಯೇ ಚಾಲ್ತಿಯಲ್ಲಿಲ್ಲ ಎಂಬ ಅಂಶವನ್ನು ಅದು ಹೊರಹಾಕಿತು!

2. ಕಾಮನ್ವೆಲ್ತ್ ಹಗರಣವನ್ನು ಬೆಳಕಿಗೆ ತಂದಿದ್ದೇ 2009ರ ಸಿಎಜಿ ವರದಿ! ಎಷ್ಟೊಂದು ಅವ್ಯವಹಾರಗಳು ನಡೆದಿವೆ ಹಾಗೂ ನಡೆಯುತ್ತಿವೆ ಎಂಬುದನ್ನು ರಾಷ್ಟ್ರದ ಮುಂದಿಟ್ಟ ಸಿಎಜಿ, ಭಾರತೀಯ ಒಲಿಂಪಿಕ್ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ಜೈಲು ಸೇರಲು ಭಾಷ್ಯ ಬರೆಯಿತು.

3. 2009ರಲ್ಲಿ ಅಡ್ಮಿರಲ್ ಗೋರ್ಶ್ಕೋವ್ (ರಷ್ಯಾದಿಂದ ಹಳೇ ಹಡಗು ಖರೀದಿ) ಹಗರಣ ಬಹಿರಂಗ.

4. 2009ರಲ್ಲಿ ಶಸ್ತ್ರಾಸ್ತ್ರ ಖರೀದಿ ಹಗರಣ ಹಾಗೂ ಸರಕಾರದ ಬೊಕ್ಕಸಕ್ಕೆ 9 ಸಾವಿರ ಕೋಟಿ ರು.ನಷ್ಟವುಂಟುಮಾಡಿದ ಅವ್ಯವಹಾರ ಬೆಳಕಿಗೆ.

5. 2011ರಲ್ಲಿ ಇಸ್ರೇಲ್‌ನಿಂದ ನಮ್ಮ ಬಾಹ್ಯ ಗುಪ್ತಚರ ಸಂಸ್ಥೆ ‘ರಾ’ (RAW) ಮಾಡಿದ ಚಾಲಕ ರಹಿತ ವಿಮಾನ ಖರೀದಿಯಲ್ಲಿ ಎಸಗಲಾದ 450 ಕೋಟಿ ಅವ್ಯವಹಾರ ಹೊರಕ್ಕೆ.

6.   2ಜಿ ಸ್ಪೆಕ್ಟ್ರಂ ಹಗರಣ! 2003ರಿಂದ 6 ವರ್ಷಗಳವರೆಗಿನ ದಾಖಲೆ, ಲೆಕ್ಕ ಪತ್ರಗಳನ್ನು ಪರಿಶೀಲಿಸಿ 2ಜಿ ಹಗರಣವನ್ನು ರಾಷ್ಟ್ರದ ಮುಂದೆ ಖುಲ್ಲಂಖುಲ್ಲಾ  ಮಾಡಿದ್ದೇ ಸಿಎಜಿ. ರಾಷ್ಟ್ರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು. ನಷ್ಟವಾಗಿದೆ ಎಂದು ವರದಿ ನೀಡಿದ ಪರಿಣಾಮವೇ ನಮ್ಮ ಮಂತ್ರಿಮಹೋದಯರು ಜೈಲು ಸೇರಿದರು.ಇದೇನು ಸಾಮಾನ್ಯ ಕೆಲಸವೇ? ಅಂತಹ ಅಣ್ಣಾ ಹಜಾರೆಯವರ ಚಾರಿತ್ರ್ಯ ವಧೆ ಮಾಡಲು ಮುಂದಾದ, ಭ್ರಷ್ಟರೆಂದು ಕರೆದ, ಬಾಬಾ ರಾಮ್ ದೇವ್ ಬೆಂಬಲಿಗರ ಮೇಲೆ ಲಾಟಿ ಪ್ರಹಾರ ಮಾಡಿ ಒಬ್ಬರ ಜೀವವನ್ನೇ ತೆಗೆದ ಕಾಂಗ್ರೆಸ್ ಪಕ್ಷ ವಿನೋದ್ ರಾಯ್ ಅವರನ್ನು ಸುಮ್ಮನೆ ಬಿಟ್ಟೀತೆ?ಮೊದಲಿಗೆ 1.76 ಲಕ್ಷ ಕೋಟಿ ರೂ. ನಷ್ಟವೆಂಬುದು ತುಂಬಾ ಉತ್ಪ್ರೇಕ್ಷೆಯ ಅಂದಾಜು ಎಂದು ಕಾಂಗ್ರೆಸ್ ಟೀಕಿಸಿತು. ಆದರೆ ವಿನೋದ್ ರಾಯ್ ಜಗ್ಗಲಿಲ್ಲ. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ಕಾಂಗ್ರೆಸ್ ರಚಿಸಿತಾದರೂ ತನ್ನದೇ ಸಂಸದ ಪಿ.ಸಿ. ಚಾಕೋ ಅವರನ್ನೇ ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಜೆಪಿಸಿ ವಿನೋದ್ ರಾಯ್ ಅವರನ್ನೇ ವಿಚಾರಣೆಗೆ ಬರುವಂತೆ ಸೂಚಿಸಿತು. ಹಾಗಂತ ವಿನೋದ್ ರಾಯ್ ಬಗ್ಗುವವರಲ್ಲ. ನಾನು ಯಾರ ಮುಂದೆ ಬೇಕಾದರೂ ದಾಖಲೆ ಸಮೇತ ಅಂಕಿ-ಅಂಶ ನೀಡುತ್ತೇನೆ ಎಂದರು. ಅದರ ಬೆನ್ನಲ್ಲೇ ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ನಡೆದ 26ನೇ ಸರ್ದಾರ್ ವಲ್ಲಭ ಭಾಯಿ ಜ್ಞಾಪನಾ ಭಾಷಣ ಮಾಡಿದ ವಿನೋದ್ ರಾಯ್, ‘ಈ ಸರಕಾರದ ಸಮಗ್ರತೆ ತಳಕ್ಕಿಳಿದಿದೆ, ಆಡಳಿತ ಪಾತಾಳ ಸೇರಿದೆ, ಸರಕಾರಿ ಅಧಿಕಾರಿಗಳ ಅತ್ಮಸ್ಥೈರ್ಯ ಉಡುಗಿಹೋಗಿದೆ. ಹಾಗಾಗಿ ನಿರ್ಣಯ ಕೈಗೊಳ್ಳುವಿಕೆಯೇ ಬಲಿಪಶುವಾಗಿ ಬಿಟ್ಟಿದೆ’ ಎನ್ನುವ ಮೂಲಕ ಸರಕಾರದ ಜತೆ ಸಂಘರ್ಷಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದರು.ಅವರು ನಮಗೆ ಆಪ್ತರಾಗಿದ್ದೇ ಇಂತಹ ಎದೆಗಾರಿಕೆ ತೋರಿದ್ದರಿಂದ!ಇಷ್ಟಕ್ಕೂ ಒಂದು ವ್ಯವಸ್ಥೆ ಶುಚಿಗೊಳ್ಳಬೇಕಾದರೆ, ರಾಜಕೀಯ ವರ್ಗವನ್ನು ತರಾಟೆಗೆ ತೆಗೆದುಕೊಳ್ಳಬೇಕಾದರೆ ಅದರ ವಿರುದ್ಧ ಹೋರಾಡುವ ಅಣ್ಣಾ ಹಜಾರೆಯವರಂಥ ಬಾಹ್ಯ ಶಕ್ತಿಗಳಂತೆಯೇ ವ್ಯವಸ್ಥೆಯ ಒಳಗಿದ್ದುಕೊಂಡು ಹೋರಾಡುವ ವಿನೋದ್ ರಾಯ್ ಅವರಂಥವರೂ ಬಹುಮುಖ್ಯವಾಗುತ್ತಾರೆ.

ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಸಿಎಜಿ, ಲೋಕಾಯುಕ್ತ, ಮುಂದೆ ಲೋಕಪಾಲ ಮುಂತಾದ ಬಲಿಷ್ಠ ಇನ್‌ಸ್ಟಿಟ್ಯೂಶನ್‌ಗಳ ರಚನೆ ಜತೆಗೆ ಚುನಾವಣಾ ಆಯೋಗ ಬಲಗೊಳಿಸಿದ ಟಿ.ಎನ್. ಶೇಷನ್, ಖ್ಯಾತ ಸಿವಿಸಿ (ಮುಖ್ಯ ಜಾರಿ ಆಯುಕ್ತ) ಎನ್. ವಿಠ್ಠಲ್ ಹಾಗೂ ಸಿಎಜಿ ವಿನೋದ್ ರಾಯ್ ಅವರಂಥ ಕ್ರುಸೇಡರ್ಗಳೂ ಪ್ರಮುಖವಾಗುತ್ತಾರೆ. ನೀವೇ ಯೋಚನೆ ಮಾಡಿ, ಕಾಮನ್ವೆಲ್ತ್ ಹಾಗೂ 2ಜಿ ಬಗ್ಗೆ ಸಿಎಜಿ ಧೈರ್ಯಶಾಲಿ ವರದಿ ನೀಡದೇ ಹೋಗಿದ್ದರೆ ರಾಷ್ಟ್ರಾದ್ಯಂತ ಭ್ರಷ್ಟಾಚಾರ ವಿರೋಧಿ ಭಾವನೆ ವ್ಯಾಪಿಸಲು, ಅಣ್ಣಾ ಹಜಾರೆ ಜನರ ಧ್ವನಿಯಾಗಿ ಹೊರಹೊಮ್ಮಲು ಸಾಧ್ಯವಿತ್ತೇ? ಅವರ ಒಂದು ವರದಿ ಕಲ್ಮಾಡಿಯನ್ನೂ ಜೈಲಿಗೆ ದಬ್ಬಿತು, ಎ. ರಾಜ ಮಂತ್ರಿ ಪದವಿ ಕಳೆದುಕೊಳ್ಳುವ ಜತೆಗೆ ಕೃಷ್ಣನ ಜನ್ಮಸ್ಥಳವನ್ನು ಸೇರುವಂತೆ ಮಾಡಿತು. ಉದ್ಯಮ ಕ್ಷೇತ್ರದ ಮುಖ್ಯಸ್ಥರನ್ನೂ ಕಂಬಿ ಎಣಿಸುವಂತೆ ಮಾಡುವ ಮೂಲಕ ದುಡ್ಡಿದ್ದರೆ ಏನನ್ನೂ ಮಾಡಬಹುದು, ಮಾಡಿ ಜಯಿಸಬಹುದು ಎಂಬ ನಂಬುಗೆಯನ್ನು ಸುಳ್ಳಾಗಿಸಿತು.ಅವರ ಬಗ್ಗೆ ಗೌರವ ಮೂಡುವುದೇ, ನಮ್ಮ ಮನಸ್ಸು ಅವರಿಗೊಂದು ಸಲಾಮು ಹಾಕುವುದೇ ಈ ಕಾರಣಕ್ಕೆ.1972ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದ ವಿನೋದ್ ರಾಯ್ ವೃತ್ತಿಯಲ್ಲಿ, ಜವಾಬ್ದಾರಿಯಲ್ಲೂ ಕುಶಲಮತಿ ಎನಿಸಿಕೊಂಡವರು. ಅದು 2006. ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದರು. ಮುಂಬರುವ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದ್ದರು. ಅಚಾನಕ್ಕಾಗಿ ಪ್ಯಾರಾವೊಂದು ಕಂಡಿತು. ಅದರಲ್ಲಿ ‘ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ’ ಎಂಬ ಕಂಪನಿ ಆರಂಭ ಮಾಡುವ ವಾಗ್ದಾನವಿತ್ತು. ಅಣಕವೆಂದರೆ ಚಿದಂಬರಂ ಹಿಂದಿನ ಬಾರಿಯ ಬಜೆಟ್ ಮಂಡನೆ ವೇಳೆಯೇ ಅಂಥದ್ದಾಂದು ಕಂಪನಿ ಆರಂಭ ಮಾಡುವುದಾಗಿ ಭಾಷಣದಲ್ಲಿ ಹೇಳಿದ್ದರು. ಅದು ನೆನಪಾಗಿ ಕೋಪೋದ್ರಿಕ್ತರಾದ ಅವರು, ‘ನಿಮಗೆ ಒಂದು ಕಂಪನಿ ಆರಂಭಿಸಲು ಎಷ್ಟು ಕಾಲ ಬೇಕು?’ ಎಂದು ರೇಗಿದರು. ಮಾಮೂಲಿ ಕಾರಣ. ಆರ್ಥಿಕ ವ್ಯವಹಾರಗಳ ಇಲಾಖೆ ಹಾಗೂ ಹಣಕಾಸು ಸೇವಾ ಇಲಾಖೆ ನಡುವಿನ ಅಲೆದಾಟದಲ್ಲಿ ಕಡತ ಕೊಳೆಯುತ್ತಿತ್ತು. ಆತಂಕಕ್ಕೊಳಗಾದ ಅಧಿಕಾರಿಗಳು ಬೆಚ್ಚಿ ನಿಂತಿದ್ದಾಗ, ಆ ಸಂದರ್ಭದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದ ವಿನೋದ್ ರಾಯ್ ಹೇಳಿದರು-‘ಈ ವಾರಾಂತ್ಯದೊಳಗೆ?’! ಹಾಗೆ ಹೇಳಿದ ಅವರು ಕಚೇರಿಗೆ ವಾಪಸ್ಸಾಗಿ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನು ಒಳಕರೆದು ಸಂಜೆಯೊಳಗೆ ಕಂಪನಿ ದಾಖಲಾಗಬೇಕು ಎಂದರು. “Next to impossible” ಎಂಬ ಉತ್ತರ ಬಂತು.

‘ನಿಮ್ಮ ಸಹೋದ್ಯೋಗಿಗಳು ಹೇಳುತ್ತಿದ್ದರು- ನೀವೊಬ್ಬ ಬಹಳ ಒಳ್ಳೆಯ, ದಕ್ಷ ಅಧಿಕಾರಿಯಂತೆ. ನಮ್ಮ ಇಲಾಖೆಯ ಪ್ರತಿಷ್ಠೆ ಪಣಕ್ಕಿದೆ. ಈ ಕೆಲಸ ಆಗಲೇಬೇಕು’ ಎಂದು ತಲೆಸವರಿದರು ವಿನೋದ್ ರಾಯ್. ಇಡೀ ಆಡಳಿತಯಂತ್ರ ಕಾರ್ಯಕ್ಕಿಳಿಯಿತು, ವಿದ್ಯುತ್ ಕಡಿತದ ನಡುವೆ ಜನರೇಟರ್ ತಂದು ಹಗಲೂ ರಾತ್ರಿ ಕೆಲಸ ಮಾಡಿದರು. ಮರುದಿನ ಕಂಪನಿ ರಿಜಿಸ್ಟರ್ ಆಗಿ ಚಿದಂಬರಂ ಮೇಜಿನ ಮೇಲೆ ದಾಖಲೆ ಇತ್ತು!ವಿನೋದ್ ರಾಯ್ ಹಣಕಾಸು ಕಾರ್ಯದರ್ಶಿಯಾಗಿದ್ದಾಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಸಾಧನೆ ಆಧಾರಿತ ಸವಲತ್ತು, ಉತ್ತೇಜನೆ ನೀಡಬೇಕೆಂಬ ಪ್ರಸ್ತಾಪವಿಟ್ಟಿದ್ದರು. ಅದಕ್ಕೆ ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿದಾಗಲೂ ಬಿಡಿ ಬಿಡಿಯಾಗಿ ವಿವರಿಸಿ ಸಚಿವರ ಒಪ್ಪಿಗೆ ಪಡೆದಿದ್ದರು. ಇಂತಹ ವಿನೋದ್ ರಾಯ್ ಅವರಿಗೇ ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಕೃತ ಅಥವಾ ಸರ್ಕಾರಿ ನಿಯಂತ್ರಣದಲ್ಲಿರುವ ಬ್ಯಾಂಕುಗಳಿಗೆ ಕಾಯಕಲ್ಪ ನೀಡುವ ಜವಾಬ್ದಾರಿಯನ್ನು ನೀಡಿದ್ದಾರೆ. ಬ್ಯಾಂಕ್ ಬೋರ್ಡ್ ಬ್ಯುರೋ ಎಂಬ ಹೊಸ ವ್ಯವಸ್ಥೆಯನ್ನು ರೂಪಿಸಿ, ಅದರ ಮೊದಲ ಮುಖ್ಯಸ್ಥರನ್ನಾಗಿ ರಾಯ್ ಅವರನ್ನು ನೇಮಕ ಮಾಡಿದ್ದಾರೆ. ಈ ನಿರ್ಧಾರ ನಿಜಕ್ಕೂ ಬಹಳ ಮುಖ್ಯವಾಗುತ್ತದೆ. ಒಂದೆಡೆ ವಿಜಯ್ ಮಲ್ಯ ಅವರಂಥ ಗೌರವಾನ್ವಿತ ರಾಜ್ಯಸಭೆ ಸದಸ್ಯರು ಹಾಗೂ ಉದ್ಯಮಿಗಳು 9 ಸಾವಿರ ಕೋಟಿ ರು.ಗಳನ್ನು ಬ್ಯಾಂಕುಗಳಿಗೆ ಪಂಗನಾಮ ಹಾಕಿರುವ ಸಂದರ್ಭದಲ್ಲಿ, ಉದ್ಯಮಿಗಳು ಬ್ಯಾಂಕುಗಳಿಂದ ಪಡೆದುಕೊಂಡು ಮರುಪಾವತಿ ಮಾಡದ ಸಾಲದ ಪ್ರಮಾಣ 4 ಲಕ್ಷ ಕೋಟಿ ದಾಟಿರುವ ಪರಿಸ್ಥಿತಿಯಲ್ಲಿ ವಿನೋದ್ ರಾಯ್‌ರಂಥವರಿಗೆ ಸ್ಟೇಟ್ ಬ್ಯಾಂಕ್ ಆ- ಇಂಡಿಯಾ, ಐಡಿಬಿಐ, ಭಾರತೀಯ ಮಹಿಳಾ ಬ್ಯಾಂಕು ಸೇರಿದಂತೆ 22 ಸರ್ಕಾರಿ ನಿಯಂತ್ರಿತ ಬ್ಯಾಂಕುಗಳ ಚುಕ್ಕಾಣಿ ನೀಡಿರುವುದು ಶ್ಲಾಘನೀಯ ಕೆಲಸ. ಇವತ್ತು ಮಾನ ಮರ್ಯಾದೆ ಎಲ್ಲಿದೆ ಹಾಗೂ ಯಾರಲ್ಲಿದೆ ಹೇಳಿ? ಒಂದೆರಡು ಲಕ್ಷ ಸಾಲ ಮಾಡಿಕೊಂಡು, ಬಡ್ಡಿ ಕಟ್ಟಲಾರದೆ, ಬ್ಯಾಂಕುಗಳು ಜಫ್ತಿಗೆ ಬಂದಾಗ, ಬಡ್ಡಿಮಕ್ಕಳು ಬಂದು ಬೆದರಿಸಿದಾಗ ಮರ್ಯಾದೆ ಹೋಯಿತೆಂದು ನೇಣಿಗೆ ಶರಣಾಗುತ್ತಾನೆ ನಮ್ಮ ಬಡ ರೈತ. ಅದೇ ಸಾವಿರಾರು ಕೋಟಿ ಸಾಲ ಮಾಡಿ, ಅದರಿಂದಲೇ ಮೋಜು ಮಸ್ತಿ ಮಾಡುವ ಮಲ್ಯರಂಥವರು, ರಾಜಕಾರಣಿಗಳ ದುಡ್ಡನ್ನು ಮೇನೇಜ್ ಮಾಡುವ ಸುಬ್ರತೋ ರಾಯ್‌ರಂಥವರು ಯಾವತ್ತಾದರೂ ಮರ್ಯಾದೆಗೆ ಅಂಜಿದ್ದಾರಾ? ನೇಣುಹಾಕಿಕೊಂಡಿದ್ದಾರಾ?
ಇಂಥ ನಾಚಿಕೆಗೇಡಿಗಳಿಗೆ ಪಾಠ ಕಲಿಸಲು ಮೋದಿಯವರು ನಿಯುಕ್ತಿ ಮಾಡಿದ್ದಾರೆ ವಿನೋದ್ ರಾಯ್‌ರನ್ನು!

vinodrai2

Comments are closed.