Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಮ್ಮ ಕಾರ್ಯಕರ್ತರ ಕ್ಷಮೆಯಾಚಿಸುತ್ತಾ ಹೀಗೊಂದು ಮನದಾಳದ ವಿನಮ್ರ ಅರಿಕೆ!

ನಮ್ಮ ಕಾರ್ಯಕರ್ತರ ಕ್ಷಮೆಯಾಚಿಸುತ್ತಾ ಹೀಗೊಂದು ಮನದಾಳದ ವಿನಮ್ರ ಅರಿಕೆ!

ನಮ್ಮ ಕಾಲದಲ್ಲಿ…. ಅನ್ನುತ್ತಾ ಬಹಳ ವರ್ಷಗಳ ಅಥವಾ ದಶಕಗಳ ಹಿಂದಕ್ಕೆ ಹೋಗಬೇಕಿಲ್ಲ. ಮೊನ್ನೆ ಮೊನ್ನೆ ಅಂದರೆ ಕಳೆದ ಡಿಸೆಂಬರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ವೈರಲ್ ಆಗಿದ್ದು ನಿಮ್ಮೆಲ್ಲರಿಗೂ ನೆನಪಿರಬಹುದು.
ಅಂದು ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಬೈಠಕ್ ಒಂದು ನಡೆಯುವುದಿತ್ತು. ಮುಂಬರುವ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ಚರ್ಚಿಸಲು ಆ ರಾಜ್ಯದ ಸುಮಾರು 26,000ಕ್ಕೂ ಹೆಚ್ಚಿನ ಕಾರ್ಯಕರ್ತರು ಬೈಠಕಿಗೆ ಅಪೇಕ್ಷಿತರಿದ್ದರು. ಅದರ ಹಿಂದಿನ ದಿನ ಪಕ್ಷ ತನ್ನ ಎಲ್ಲಾ ಕಾರ್ಯಕರ್ತರಿಗೂ ಸಭೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ, ಎಲ್ಲರೂ ತಮ್ಮ ಊಟ-ಉಪಹಾರವನ್ನು ಮನೆಯಿಂದ ತರತಕ್ಕದ್ದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಇದರಿಂದ ಕೆಲವು ಕಾರ್ಯಕರ್ತರು ಒಳಗೊಳಗೆ ಸಿಡಿಮಿಡಿಗೊಂಡರು. ಕೆಲವರು ಒಳಗೊಳಗೇ ಅಸಮಾಧಾನಗೊಂಡರು. ಒಪ್ಪೊತ್ತಿನ ಊಟ ಕೊಡಲಾಗದಿದ್ದರೆ ಚುನಾವಣೆಯಲ್ಲಿ ಗೆಲ್ಲುವುದಾದರೂ ಹೇಗೆ ಎಂದು ಕೆಲವರು ಗೊಣಗಿಕೊಂಡರು. ಆದರೆ ಸಭೆಯ ದಿನ ಕಾರ್ಯಕರ್ತರು ತಮ್ಮ ತಮ್ಮ ಬುತ್ತಿ ಬಿಚ್ಚುತ್ತಿರುವಾಗ ಎಲ್ಲರಿಗೂ ಅಚ್ಚರಿ, ಎಲ್ಲರ ಬಾಯಿಯೂ ಕಟ್ಟಿಹೋಗಿತ್ತು. ಏಕೆಂದರೆ ಸಾಕ್ಷಾತ್ ಪ್ರಧಾನಮಂತ್ರಿಗಳೇ ಸಭೆಗೆ ಊಟದ ಡಬ್ಬಿಯನ್ನು ತಂದಿದ್ದರು! ದೇಶಾದ್ಯಂತ ಅದು ಸುದ್ಧಿಯಾಯಿತು. ಅಂದು ಇಡೀ ದೇಶದ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರು ಖುಷಿ ಪಟ್ಟಿದ್ದರು. ಹಳೆಯ ಕಾರ್ಯಕರ್ತರಿಗೆ ಅಂದಿನ ಪ್ರಧಾನಿಗಳ ಊಟದ ಬುತ್ತಿ ತಮ್ಮ ಜನಸಂಘದ ಕಾಲವನ್ನು ನೆನಪಿಗೆ ತಂದಿತ್ತು. ಇದು ಯಾವ ಕಾಲಕ್ಕೂ ಕೆಟ್ಟುಹೋಗುವ ಪಕ್ಷವಲ್ಲ , ಯಾವತ್ತಿದ್ದರೂ ನಮ್ಮದು ವಿಭಿನ್ನ ಪಕ್ಷ ಎಂದು ಹೆಮ್ಮೆ ಪಟ್ಟುಕೊಂಡಿದ್ದರು. ನಮ್ಮ ಕಾರ್ಯಕರ್ತರು ಖುಷಿಯಾಗಿದ್ದರೆ ಎಂತಹ ಮಾಯೆ ಸಂಭವಿಸಬಹುದು ಅನ್ನುವುದಕ್ಕೆ ಮಾರ್ಚ್ 11ರ ಫಲಿತಾಂಶ ಸಾಕ್ಷೀಭೂತವಾಯಿತು. ಬಿಜೆಪಿ 325 ಸೀಟುಗಳನ್ನು ಗೆದ್ದು ಉತ್ತರ ಪ್ರದೇಶದಲ್ಲಿ ದಾಖಲೆ ನಿರ್ಮಾಣ ಮಾಡಿತು.
ಭಾಜಪಾ ಮತ್ತು ಅದರ ಹಿಂದಿನ ಜನಸಂಘ ಎಂದರೆ ಹಾಗೆ!
ಅದು ಕಾರ್ಯಕರ್ತರದ್ದೇ ಬೆವರಿನ ಫಲ. ಕಾರ್ಯಕರ್ತರೇ ಉತ್ತು, ಬಿತ್ತಿ, ನೀರುಣಿಸಿ, ಬೆವರು ಹರಿಸಿ ಕಟ್ಟಿದ ಪಕ್ಷ. ಅದಿಂದು ಹೆಮ್ಮರವಾಗಲು ಕಾರಣ ಅಂದಿನ ಆ ಬೆವರು, ನೀರುಣಿಸಿದ ಕಾರ್ಯಕರ್ತರ ಪ್ರಯತ್ನ. ನೀವು ಭಾಜಪಾದ ಹುಟ್ಟು, ಬೆಳವಣಿಗೆಯ ಕಥೆಯನ್ನು ದೇಶದ ಯಾವುದೇ ಭಾಗದ ಉದಾಹರಣೆ ಕೊಟ್ಟು ಹೇಳಿದರೂ ಒಂದು ಭಗೀರಥ ಪ್ರಯತ್ನದ ಕಥೆಯಿಲ್ಲದೆ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ಕೊಡಗಿನ ಶ್ರೀಮಂತ ಕಾಫಿ ಪ್ಲಾಂಟರುಗಳ ಪಾದಯಾತ್ರೆ, ಮನೆಯಿಂದ ಹೊತ್ತೊಯ್ದ ಊಟದ ಬುತ್ತಿಯನ್ನು ಎಲ್ಲೋ  ಹೊಳೆಬದಿಯಲ್ಲಿ ಕುಳಿತು ಉಂಡಂತೆ, ಎಲ್ಲೋ  ಉತ್ತರದಲ್ಲಿ ಅನಾಮಿಕ ಕಾರ್ಯಕರ್ತನೊಬ್ಬ ಊರೂರು ತಿರುಗಿ ಪಕ್ಷವನ್ನು ಕಟ್ಟಿರುತ್ತಾನೆ. ಹಲವು ಬಾರಿ ಆತ ಪ್ರಾಣವನ್ನೂ ಕಳೆದುಕೊಂಡಿದ್ದಾನೆ. ತಮ್ಮ ನಾಯಕರುಗಳೇ (ಶಾಮ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ) ಪ್ರಾಣವನ್ನು ಕೊಟ್ಟಿರುವಾಗ ಈ ಪ್ರಾಣದ ಮೇಲೇಕೆ ಹಂಗು ಎನ್ನುವ ಭಾವದ ಕಾರ್ಯಕರ್ತನನ್ನು ವಿಶ್ವ ರಾಜಕೀಯದಲ್ಲಿ ಕಾಣುವುದು ಬಹುಶಃ ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ಎಲ್ಲರೂ ಕಾರ್ಯಕರ್ತರೇ. ಯಾರಲ್ಲೂ ರಾಗವಿಲ್ಲ, ಯಾರಲ್ಲೂ ದ್ವೇಷವಿಲ್ಲ. ಯಾರಿಗೆ ಯಾರೂ ಪ್ರತಿಸ್ಪರ್ಧಿಯಲ್ಲ. ಇನ್ನು ಚುನಾವಣೆಗೆ ಅಭ್ಯರ್ಥಿ ಯಾರು? ಇಂಥ ಸಂದಿಗ್ದವನ್ನು ಪದೇ ಪದೆ ಅನುಭವಿಸಿದ್ದು ಮತ್ತು ಎದುರಿಸಿದ್ದೂ ಕೂಡಾ ಬಿಜೆಪಿ-ಜನಸಂಘ ಬಿಟ್ಟರೆ ಬೇರೆ ಪಕ್ಷಗಳಿಲ್ಲ! ಸೋಲಲೆಂದೇ ಸ್ಪರ್ಧಿಸುವ ಆ ಅಭ್ಯರ್ಥಿಯ ಮನಸ್ಥಿತಿಯನ್ನು ಇಂದಿನ ಕಾಲಮಾನದಲ್ಲಿ ನಿಂತು ಆಲೋಚಿಸಿದರೆ ‘ಪಾರ್ಟಿ ವಿಥ್ ಡಿಫರೆನ್ಸ್’ ಎನ್ನುವ ಮಾತು ಸುಲಭವಾಗಿ ಅರ್ಥವಾಗುತ್ತದೆ. ಒಂದು ಕಾಲದಲ್ಲಿ ಕೇವಲ ಎರಡು ಸೀಟುಗಳಿಂದ ಇಡೀ ಸಂಸತ್ತಿನಲ್ಲಿ ತಮ್ಮ ಛಾಪು ಒತ್ತಿದ್ದ ಪಕ್ಷದ ಹಿಂದಿದ್ದ ಶಕ್ತಿಯೆಂದರೆ ಇಂಥ ಕಾರ್ಯಕರ್ತರ ಬದ್ಧತೆ, ಶ್ರಮ ಮತ್ತು ನಿಷ್ಠೆಯೊಂದೇ. ಆ ಶಕ್ತಿ ಮುಂದೊಂದು ದಿನ ಇಡೀ ಸಂಸತ್ತನ್ನು ಆವರಿಸಿಕೊಳ್ಳುವಂತೆ ಬೆಳೆಯಿತು. ಪಕ್ಷ ಬೆಳೆದಂತೆಲ್ಲಾ ಕಾರ್ಯಕರ್ತ ವಿವರಿಸಲಾಗದ ಆನಂದವನ್ನು ಅನುಭವಿಸಿದ. ತನ್ನ ಪಕ್ಷ ಅಧಿಕಾರ ಹಿಡಿಯುವುದನ್ನು ನೋಡಬೇಕೆಂದು ಆಸೆಪಟ್ಟ. ದೇಶಾದ್ಯಂತ ಇಂಥ ಅದೆಷ್ಟು ಉದಾಹರಣೆಗಳು ನಮ್ಮ ಮುಂದಿವೆಯೆಂದರೆ ಭಾಜಪಾ ಎಂದರೆ ರಾಜಕೀಯ ವಿಶ್ಲೇಷಕರಲ್ಲೂ ಒಂದು ಆಪ್ತವಾದ ಭಾವ ಮೂಡುವಷ್ಟು.
ಇಲ್ಲಿ ಕಾರ್ಯಕರ್ತ ಎಂದರೆ ಯಾರೂ ದೊಡ್ಡವರಲ್ಲ ಎಂಬ ಮೌಲ್ಯಗಳನ್ನು ಹೊತ್ತವರ ಒಂದು ಪಡೆ, ಅದೆಷ್ಟೋ ಪ್ರತಿಭಟನೆಗಳು, ಹೋರಾಟಗಳು, ಹರತಾಳಗಳು, ಲಾಠಿಯ ಏಟು, ಎದುರಾಳಿಗಳ ಹೊಡೆತಗಳ ತರುವಾಯವೂ ಕಾರ್ಯಕರ್ತ ಇಟ್ಟ ಹೆಜ್ಜೆ ಹಿಂದಿಡುತ್ತಿರಲಿಲ್ಲ. ದೇಶಾದ್ಯಂತ ಮೂಲ ಸೌಲಭ್ಯಗಳಿಂದ ಹಿಡಿದು ವಿದೇಶಾಂಗ ನೀತಿಯವರೆಗೂ ತೀವ್ರವಾದ ಪ್ರತಿಭಟನೆಗಳು ನಡೆಯುತ್ತಿದ್ದವು. ಮೌಲ್ಯಾನುಷ್ಠಾನಕ್ಕಾಗಿ ಯೋಜಿತ ಕಾರ್ಯತಂತ್ರಗಳು ರೂಪುಗೊಳ್ಳುತ್ತಿದ್ದವು. ಕೆಲವು ಪೈಸೆಗಳಷ್ಟು ಬಸ್ ಪ್ರಯಾಣ ದರ ಹೆಚ್ಚಾದರೂ ರಸ್ತೆ ತಡೆ ನಡೆಯುತ್ತಿದ್ದವು. ಮಂಗಳೂರಿನಲ್ಲಿ ಕರಂಬಳ್ಳಿ ಸಂಜೀವ ಶೆಟ್ಟರು ಕೇವಲ ಕಾರ್ಯರಾಗಿದ್ದುಕೊಂಡೇ ಸಹಕಾರಿ ರಂಗದಲ್ಲಿ ಕ್ರಾಂತಿಯನ್ನು ಮಾಡಿದ್ದರು, ಪ್ರಭಾಕರ ಘಾಟೆಯವರು ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳನ್ನು ಎದುರುಹಾಕಿಕೊಂಡು ಸಂಘಟನೆಯನ್ನು ಕಾರ್ಮಿಕರ ಮಧ್ಯೆ ಕೊಂಡೊಯ್ದಿದ್ದರು. ಪ್ರತಿ ಜಿಲ್ಲೆಯಲ್ಲಿ ಪ್ರತಿ ಊರಲ್ಲೂ ಅಂಥ ಹತ್ತಾರು ಕಾರ್ಯಕರ್ತರು. ಪ್ರತಿ ಕಾರ್ಯಕರ್ತನೂ ಮತ್ತೊಬ್ಬ ಕಾರ್ಯಕರ್ತನನ್ನು ದೇವರಂತೆ ಕಂಡರು. ಅಂಕೆ ಸಂಖ್ಯೆಗಳ ಆಟಕ್ಕಿಂತ, ಅಧಿಕಾರಕ್ಕಿಂತ ಮಿಗಿಲಾಗಿ ನಂಬಿದ ಸಿದ್ಧಾಂತದ ಅನುಷ್ಟಾನಕ್ಕಾಗಿ ದುಡಿದರು. ಹಾಗಾಗಿ ಮೊದಲು ಪಕ್ಷ ಸೋತಾಗ ಯಾರೂ ಟೀಕೆ ಮಾಡಬೇಕೆನಿಸುತ್ತಿರಲಿಲ್ಲ. ಪ್ರತೀ ಫಲಿತಾಂಶ ಘೋಷಣೆಯಾದಾಗಲೂ ವಿಜೃಂಭಣೆಯ ವಿಜಯೋತ್ಸವ ನಡೆಯುತ್ತಿತ್ತು. ಕಾರಣ ಪಕ್ಷದ ಮತಗಳ ಪ್ರಮಾಣದಲ್ಲಿ ಏರಿಕೆಯಾಗಿದೆ ಅಂತ!
ಆದರೆ…
ನಂಜನಗೂಡು, ಗುಂಡ್ಲುಪೇಟೆ ಸೋಲು ಯಾಕೋ ನಮ್ಮ ಕಾರ್ಯಕರ್ತರ ಸಹನೆಯನ್ನೇ ಅಲ್ಲಾಡಿಸಿದಂತೆ ಕಾಣುತ್ತಿದೆ. ಗುರುವಾರ ರಾತ್ರಿ ಫೇಸ್‍ಬುಕ್ ಗೋಡೆಯ ಮೇಲಿದ್ದ ಟೀಕೆ, ಟಿಪ್ಪಣಿಗಳನ್ನು ಒಂದೊಂದೇ ನೋಡುತ್ತಿದ್ದರೆ ನಮ್ಮ ಕಾರ್ಯಕರ್ತರು, ಹಿತೈಷಿಗಳ ಹತಾಶೆ, ನೋವು ತೀಕ್ಷ್ಣವಾಗಿ ಅಲ್ಲಿ ವ್ಯಕ್ತವಾಗಿತ್ತು. ನಮ್ಮ ಮೇಲಿನ ದ್ವೇಷ, ಮತ್ಸರದಿಂದ ಅವರೇನು ಟೀಕಿಸಿರಲಿಲ್ಲ. ಗೆಲ್ಲಲಾಗಲಿಲ್ಲವಲ್ಲಾ ಎಂಬ ಹತಾಶೆಯಿಂದ ನಮ್ಮ ಮೇಲೆ ಹರಿಹಾಯ್ದಿದ್ದರು. ಯಾವತ್ತೂ ಗೆದ್ದ ಹಿನ್ನೆಲೆಯಿಲ್ಲದ ಆ ಕ್ಷೇತ್ರಗಳಲ್ಲಿ ಸಹಜವಾಗಿಯೇ ಎದುರಾದ ಸೋಲಿಗೆ ಸಾಕಷ್ಟು ಕಾರಣಗಳನ್ನು ಕೊಡಬಹುದು. ಆದರೆ ಕಾರ್ಯಕರ್ತರಿಗಾಗಿರುವ ನೋವಿಗೆ ಅದು ಖಂಡಿತ ಮುಲಾಮು, ಸಾಂತ್ವನವಾಗುವುದಿಲ್ಲ. ಹಾಗಾಗಿ ಮೊದಲನೆಯದಾಗಿ ಕಾರ್ಯಕರ್ತರೇ, ದಯವಿಟ್ಟು ಕ್ಷಮಿಸಿ. ನಿಮ್ಮ ಪ್ರೀತಿ, ವಿಶ್ವಾಸ ಎಂಥದ್ದು ಎಂಬುದನ್ನು ಹೊರಗಿನವನಾಗಿಯೂ (ಪತ್ರಕರ್ತನಾಗಿ) ಬಲ್ಲೆ.
2008, ಮೇ 30 ರಂದು ವಿಧಾನಸೌಧದ ಮುಂದೆ ಸೇರಿದ್ದ ಜನಸಾಗರ ಇಂದಿಗೂ ಕಣ್ಣಮುಂದೆ ಬರುತ್ತದೆ.
ಆ ದಿನವನ್ನು ಬಿಜೆಪಿಗೆ ಮತ ಹಾಕದವರೂ ಮರೆಯಲು ಸಾಧ್ಯವಿಲ್ಲ. ಅದುವರೆಗೂ ಈ ರಾಜ್ಯ 18 ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಬಿ.ಎಸ್. ಯಡಿಯೂರಪ್ಪನವರಿಗೆ ಕೊಟ್ಟಷ್ಟು ಪ್ರೀತಿ-ಆದರದಿಂದ ಬಹುಶಃ ಯಾರನ್ನೂ ಗದ್ದುಗೆ ಮೇಲೆ ಕೂರಿಸಿರಲಿಲ್ಲ. 1993ರಲ್ಲಿ ಡಾ. ರಾಜ್‍ಕುಮಾರ್ ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಎಷ್ಟು ಕಳೆಗಟ್ಟಿತ್ತೋ ಅದನ್ನೂ ಮೀರಿಸುವಂತಿತ್ತು ಅಂದಿನ ಸಂಭ್ರಮ. ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ… ಅಂತ ರೈತನ ಹೆಸರಿನಲ್ಲಿ ಪ್ರಮಾಣ ಮಾಡಿ ಪದಗ್ರಹಣ ಮಾಡುವಾಗ ಬಿಜೆಪಿ ಮತದಾರರ ಮುಖದಲ್ಲಿ ಕಂಡ ಆಹ್ಲಾದ ವರ್ಣನೆಗೆ ನಿಲುಕದ್ದು. 4, 17, 38, 42, 79 ಕೊನೆಗೆ 110 ಹೀಗೆ ಹಲವು ದಶಕಗಳ ಹೋರಾಟದ ನಂತರ ಬಿಜೆಪಿಗೆ ಅಧಿಕಾರ ದಕ್ಕಿತ್ತು. ಅಂಥದ್ದೊಂದು ದಿನಕ್ಕಾಗಿ ಜೀವನವಿಡೀ ಕಾದಿದ್ದರೇನೋ ಎಂಬಂತೆ ಬಿಜೆಪಿ ಮತದಾರರು ಅಂದು ಸಂಭ್ರಮಿಸಿದ್ದರು. ಮುಖ್ಯಮಂತ್ರಿಯಾಗಿದ್ದು ಯಡಿಯೂರಪ್ಪನವರಾದರೂ ಅಧಿಕಾರ ತಮಗೇ ದಕ್ಕಿದೆ ಎಂಬಂತೆ ಬಿಜೆಪಿ ಕಾರ್ಯಕರ್ತರು ಖುಷಿಪಟ್ಟಿದ್ದರು. ನಮ್ಮ ಸರಕಾರ ಬಂದಿದೆ, ಇನ್ನು ಮುಂದೆ ಭಯೋತ್ಪಾದನೆ, ಮತಾಂತರ, ಭ್ರಷ್ಟಾಚಾರ, ಅಲ್ಪಸಂಖ್ಯಾತರ ಉಪಟಳ ಇದ್ಯಾವ ವಿಷಯಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೆಗಲ ಭಾರ ಇಳಿಸಿದವರಂತೆ ನಿಟ್ಟುಸಿರು ಬಿಟ್ಟಿದ್ದರು, ಸುಭದ್ರತೆಯ ಭಾವನೆಯೊಂದಿಗೆ ನಿರಾಳಗೊಂಡಿದ್ದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದಾಗಲೂ, ಇನ್ನೂ ಅನನುಭವಿಗಳು ಎಂದು ಜನ ಸರಕಾರವನ್ನು ಮಾಫಿ ಮಾಡಿದ್ದರು. ಅದರ ಬೆನ್ನಲ್ಲೇ ರಸಗೊಬ್ಬರ ಕೊರತೆ ಕಾರಣ ದಾವಣಗೆರೆಯಲ್ಲಿ ರೈತರು ದಂಗೆ ಎದ್ದಾಗಲೂ ಜನ ಶಂಕಿಸಿದ್ದು ವಿರೋಧ ಪಕ್ಷದವರ ಹುನ್ನಾರವನ್ನು. ಆಪರೇಷನ್ ಕಮಲಕ್ಕೆ ಕೈಹಾಕಿದಾಗಲೂ 110 ಸೀಟು ಗೆದ್ದಿದ್ದರೂ ಸುಮ್ಮನೆ ಕುಳಿತುಕೊಳ್ಳಬೇಕಾ, ಕಾಂಗ್ರೆಸ್-ಜೆಡಿಎಸ್‍ನವರಿಗೆ ಅಧಿಕಾರ ಬಿಟ್ಟುಕೊಡಬೇಕಾ ಎಂದು ಜನರೇ ಬಿಜೆಪಿಯ ಸಮರ್ಥನೆಗೆ ನಿಂತಿದ್ದರು. ಬಿಜೆಪಿ ಸರಕಾರದ ಬಗ್ಗೆ ಯಾರಾದರೂ ಟೀಕೆ ಮಾಡಿದರೆ, ಸಾಕು ಬಿಡ್ರೀ… ನಿಮ್ಮ ಕಾಂಗ್ರೆಸ್, ಜೆಡಿಎಸ್‍ನವರು 60 ವರ್ಷ ಮಾಡಿದ್ದೇನು ಅಂತ ಗೊತ್ತು, ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಮುಲಾಜಿಲ್ಲದೆ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು. ನಮ್ಮ ಸರಕಾರ ಬಂದಿದೆ, ಅದನ್ನು ಉಳಿಸಿಕೊಳ್ಳಲು ಆಪರೇಷನ್ ಕಮಲದ ಅಗತ್ಯವಿದೆ, ಅನನುಭವದಿಂದಾಗಿ ಸಣ್ಣಪುಟ್ಟ ತಪ್ಪುಗಳಾಗುತ್ತವೆ, ಅಚಾತುರ್ಯಗಳು ಜರುಗುತ್ತವೆ ಎಂದು ಜನರೇ ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದರು, ಸಮರ್ಥನೆಗೆ ನಿಲ್ಲುತ್ತಿದ್ದರು. ಅಯ್ಯೋ… ಯಾರು ದುಡ್ಡು ಮಾಡಿಕೊಂಡಿಲ್ಲ ಹೇಳಿ, ಈಗ ಅಧಿಕಾರಕ್ಕೆ ಬಂದಿದ್ದಾರೆ ಸ್ವಲ್ಪ ಮಾಡಿಕೊಳ್ಳಲಿ ಬಿಡಿ ಎಂದು ಬಿಜೆಪಿಯವರು ಮಾಡಿದ ಎಡವಟ್ಟೂಗಳನ್ನೂ ಸಹಿಸಿಕೊಂಡರು.
ಆದರೆ ಇವತ್ತು ನಮ್ಮ ಕಾರ್ಯಕರ್ತನಲ್ಲಿ ಆ ತಾಳ್ಮೆ ಉಳಿದಿಲ್ಲ. ಏಕೆಂದರೆ ರಾಜ್ಯ ಬಿಜೆಪಿ ನಾಯಕರುಗಳು ಮಾಡಿದ ತಪ್ಪಿಗೆ ಬೀದಿ ಬೀದಿಗಳಲ್ಲಿ ಚುಚ್ಚುಮಾತುಗಳನ್ನು ಕೇಳಿಸಿಕೊಂಡವನು ಅವನು ಮಾತ್ರ. ವೋಟು ಕೇಳಲು ಮನೆ ಮನೆಗೆ ಹೋಗದಂಥ ಪರಿಸ್ಥಿತಿಯನ್ನು ಎದುರಿಸಿದವನೂ ಅವನೇ. ಎಲ್ಲೋ ಹಾಲಾಡಿ ಶ್ರೀನಿವಾಸ ಶೆಟ್ಟರು, ಮರೆಯಾದ ವಿ.ಎಸ್. ಆಚಾರ್ಯರನ್ನು ಬಿಟ್ಟರೆ ಯಾರಿದ್ದಾರೆ ಎಂದು ತಲೆಕೆರೆದುಕೊಳ್ಳಬೇಕಾಯಿತು. ಒಂದು ಕಾಲದಲ್ಲಿ ಹಾಕಲು ಹವಾಯಿ ಚಪ್ಪಲಿ ಇಲ್ಲದವರು ಹವಾ ಕಾರಿನಲ್ಲಿ ಕುಳಿತು, ಬಾರೋ ಎಂದು ಕಾರ್ಯಕರ್ತನನ್ನು ದರ್ಪದಿಂದ ಕರೆಯುವುದನ್ನೂ ಕಾಣಬೇಕಾಯಿತು. ಚುನಾವಣೆ ಬಂತೆಂದರೆ ಬೂತಿಗೆಷ್ಟು ಬಾಟಲಿ, ದುಡ್ಡು ಬಂತು ಎಂದು ಕೇಳುವವರು ಬೇರೆ ಪಕ್ಷದಲ್ಲಿದ್ದರೆ, ನನ್ನ ಬೂತಲ್ಲಿ ಇಷ್ಟು ವೋಟು ಕೊಡಿಸುತ್ತೇನೆ, ಇಷ್ಟು ಲೀಡ್ ಕೊಡಿಸುತ್ತೇನೆ ಎನ್ನುತ್ತಿದ್ದ ನಮ್ಮ ನಿಷ್ಠಾವಂತ ಕಾರ್ಯಕರ್ತರು ಅತೀವವಾಗಿ ನೊಂದುಕೊಡಿದ್ದರು. ಇಂತಹ ಪರಿಸ್ಥಿತಿಯಲ್ಲಿದ್ದಾಗ, ಹಳೇ ಕಾರ್ಯಕರ್ತರಂತೂ ನೊಂದು ಮನೆ ಸೇರಿದ್ದಾಗ, ಪಕ್ಷ ಒಡೆದು ಛಿದ್ರವಾಗಿದ್ದಾಗ ಮತ್ತೆ ಇಡೀ ಮನೆಯನ್ನು ಒಂದು ಮಾಡಿದ್ದು, ಹೆಮ್ಮೆಯಿಂದ ಮತ ಕೇಳಲು ಹೋಗುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದು 2014ರ ಲೋಕಸಭೆ ಚುನಾವಣೆ ಮತ್ತು ನರೇಂದ್ರ ದಾಮೋದರದಾಸ್ ಮೋದಿ! ಹರ್ ಹರ್ ಮೋದಿ, ಘರ್ ಘರ್ ಮೋದಿ ಎಂದು ಊರೆಲ್ಲ ಘೋಷಣೆ ಕೂಗಿದ. ಈಗಂತೂ ಬೆಳಗ್ಗೆ ಎದ್ದು ದೇವರ ಫೋಟೋ ನೋಡದಿದ್ದರೂ, “ಕರಾಗ್ರೇ ವಸತೇ ಲಕ್ಷ್ಮೀ…” ಅಂತ ಹೇಳದಿದ್ದರೂ ಕರದಿಂದ ಮೊಬೈಲ್ ಎತ್ತಿಕೊಂಡು ಮೊದಲು ಸ್ಕ್ರೀನ್‍ಸೇವಿರ್‍ನಲ್ಲಿ ಹಾಕಿಕೊಂಡಿರುವ ಮೋದಿ ಫೋಟೋವನ್ನು ಭಕ್ತಿ ನೋಡುತ್ತಾನೆ.
ಇವತ್ತು ಕಾರ್ಯಕರ್ತರು ನಮ್ಮ ಒಬ್ಬೊಬ್ಬ ನಾಯಕರಲ್ಲೂ ಮೋದಿಯವರಂಥ ಬದ್ಧತೆ, ಪ್ರಾಮಾಣಿಕತೆ, ಕಾರ್ಯಕ್ಷಮತೆ, ಸಮಾಜಕ್ಕೇ ಎಲ್ಲ, ಸ್ವಂತಕ್ಕೆ ಏನಿಲ್ಲ ಎಂಬ ತತ್ವ, ಅಸಾಧ್ಯವಾದದ್ದನ್ನು ಸಾಧಿಸಿತೋರಿಸುವ ಮೋದಿಯವರ ಶಕ್ತಿಯ ಸಣ್ಣ ಲವಲೇಶವನ್ನಾದರೂ ಕಾಣಲು ಬಯಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಜನರಿಂದ ಅಭಿಪ್ರಾಯ ಪಡೆಯುವ, ಕಾರ್ಯಕರ್ತರ ಶಕ್ತಿಯಿಂದ ಚುನಾವಣೆ ನಡೆಸುವ ಅಮಿತ್ ಶಾ-ಮೋದಿಯವರಂತೆ ನಾವೆಲ್ಲ ನಡೆದುಕೊಳ್ಳಬೇಕು ಎಂಬ ನಿರೀಕ್ಷೆ ಕಾಣುತ್ತಿದೆ.
ಇಷ್ಟಕ್ಕೂ ನಮ್ಮ ವರ್ಚಸ್ಸನ್ನು, ನಮ್ಮ ಮೇಲಿನ ಗೌರವವನ್ನು ಹೆಚ್ಚು ಮಾಡುವ ವ್ಯಕ್ತಿತ್ವಕ್ಕಿಂತ ದೊಡ್ಡ ರಿಯಲ್ ಎಸ್ಟೇಟ್ ಯಾವುದಿದೆ ಹೇಳಿ?!
ಖಂಡಿತ ರಾಜಕೀಯವೆಂದರೆ ಎಲ್ಲರಿಗೂ ಮಹತ್ವಾಕಾಂಕ್ಷೆ ಇದ್ದೇ ಇರುತ್ತದೆ. ಎಂಎಲ್‍ಎ, ಎಂಪಿಯಾದ ಮರುದಿನದಿಂದಲೇ ಮುಖ್ಯಮಂತ್ರಿ ಚೇರು ಬಾಯಲ್ಲಿ ನೀರೂರಿಸುತ್ತದೆ. ಆದರೆ ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಉದ್ದೇಶದಿಂದ ಪದವಿ, ಅಧಿಕಾರಕ್ಕಾಗಿ ಎಷ್ಟು ಜನ ಹಾತೊರೆಯುತ್ತಾರೆ ಹೇಳಿ? ತಮ್ಮ ಸೀಟನ್ನು ಗೆಲ್ಲುವ ಅಥವಾ ಉಳಿಸಿಕೊಳ್ಳುವ ಶಕ್ತಿಯಿರುವ ನಾಯಕರು ಸಾಕಷ್ಟಿದ್ದಾರೆ. ಆದರೆ ಕ್ಷೇತ್ರದಾಚೆಗೆ, ಜಾತಿಯಾಚೆಗೆ ನಾಲ್ಕು ಜನರನ್ನು ಸೆಳೆಯುವ ವರ್ಚಸ್ಸು ತಮಗಿದೆಯೇ ಎಂದು ಎಷ್ಟು ಜನ ಆತ್ಮಾವಲೋಕನ ಮಾಡಿಕೊಂಡಿದ್ದಾರೆ? ಅದು 2013, ಸೆಪ್ಟೆಂಬರ್ 13. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಘೋಷಣೆ ಮಾಡಿದ ದಿನ. ಅವತ್ತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೋದಿಯವರು, “ಜೀವನದಲ್ಲಿ ಏನೋ ಆಗಬೇಕೆಂದು ಹೋಗಬೇಡ, ಏನೋ ಮಾಡಬೇಕು ಅಂತ ಹೋಗು, ಆ ಕೆಲಸವೇ ನಿನ್ನನ್ನು ಏನೋ ಮಾಡಿಬಿಡುತ್ತದೆ” ಎಂದಿದ್ದರು. ಎಂತಹ ಅರ್ಥಪೂರ್ಣ ಮಾತು ಅಲ್ವಾ?
ಏಪ್ರಿಲ್ 24 ಬಂತೆಂದರೆ ಇಡೀ ಕರ್ನಾಟಕ ಡಾ. ರಾಜ್‍ಕುಮಾರ್‍ರ ಹುಟ್ಟುಹಬ್ಬವನ್ನು ಅವರು ಅಗಲಿ ಬಹಳ ವರ್ಷಗಳಾದೂ ವಿಜೃಂಭಣೆಯಿಂದ ಆಚರಿಸುತ್ತದೆ. ಡಾ. ರಾಜ್‍ಗಿಂತ ದೊಡ್ಡ ಸ್ಟಾರ್ ಕನ್ನಡ ಸಿನೆಮಾ ಮಾತ್ರವಲ್ಲ, ಯಾವ ಕ್ಷೇತ್ರದಲ್ಲೂ ಕರ್ನಾಟಕದಲ್ಲಿ ಹುಟ್ಟಲಿಲ್ಲ. ಅಂತ ಡಾ. ರಾಜ್ ಕುಮಾರ್ ವೇದಿಕೆಗೆ ಬಂದರೆ ಎರಡೂ ಕೈಯನ್ನು ಜೋಡಿಸಿ “ಅಭಿಮಾನಿ ದೇವರುಗಳೇ… ” ಎನ್ನುತ್ತಿದ್ದರು. ಏಕೆಂದರೆ ತನ್ನನ್ನು ಸ್ಟಾರ್ ಮಾಡಿರುವುದು, ತನ್ನನ್ನು ಎದೆಗೂಡಲ್ಲಿಟ್ಟು ಆರಾಧಿಸುವುದು, ತನಗೆ ಎಲ್ಲವನ್ನೂ ಕೊಟ್ಟಿರುವುದು ಗೌರವ ತುಂಬಿಕೊಂಡಿರುವ ಅಭಿಮಾನಿಗಳು ಎಂಬುದನ್ನು ಡಾ. ರಾಜ್ ವಿನಮ್ರತೆಯಿಂದ ಸ್ವೀಕರಿಸಿದ್ದರು. ನಮಗೂ ನಮ್ಮ ಕಾರ್ಯಕರ್ತರೇ ದೇವರು. ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಿರಲಿ, ಅದನ್ನು ಕೂತಲ್ಲಿ, ನಿಂತಲ್ಲಿ, ಚಹಾ ಕುಡಿಯುವಲ್ಲಿ, ಮದುವೆ-ಮುಂಜಿಯಲ್ಲಿ, ಸಭೆ-ಸಮಾರಂಭದಲ್ಲಿ ಹೇಳುವವನು, ನಮ್ಮ ಪರವಾಗಿ ವಕಾಲತ್ತು ವಹಿಸುವವನು ಕಾರ್ಯಕರ್ತನೇ. ಮೋದಿಯವರು ಇಂದು ಜಗದೇಕವೀರನಾಗಿದ್ದರೆ ಅದಕ್ಕೆ ಅವರು ಮಾಡಿದ ಕೆಲಸವೊಂದೇ ಕಾರಣವಲ್ಲ, ಅದನ್ನು ಮನೆ-ಮನಕ್ಕೆ ತಲುಪಿಸುವ ಕಾರ್ಯಕರ್ತನ ಪಾತ್ರ ದೊಡ್ಡದಿದೆ. ನಮ್ಮ ಪರವಾಗಿ ವಾದಿಸುತ್ತಾ ಎಷ್ಟು ಜನ ನಮ್ಮ ಕಾರ್ಯಕರ್ತರು ಬೇರೆಯವರ ಜತೆ ಹೊಡೆದಾಟಕ್ಕೆ ಇಳಿದಿಲ್ಲ ಹೇಳಿ? ಇಂಥ ಕಾರ್ಯಕರ್ತ ನೊಂದಿದ್ದಾನೆ, ಮುನಿಸಿಕೊಂಡಿದ್ದಾನೆ, ಟೀಕೆಯ ಮುಖಾಂತರ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾನೆ ಎಂದರೆ ನಾವು ಎಚ್ಚೆತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕೋ ಬೇಡವೋ? ಇಷ್ಟಕ್ಕೂ ನಾವು ಕಾರಿನಿಂದ ಇಳಿದಾಗ ಡೋರ್ ಹತ್ತಿರಕ್ಕೆ ಧಾವಿಸಿ ಬರುವ, ಜೈಕಾರ ಹಾಕುವ ಕಾರ್ಯಕರ್ತನಿಲ್ಲದಿದ್ದರೆ ನಾನೊಬ್ಬ ಲೀಡರ್ ಎನ್ನುವ ಭಿನ್ನಾಣ ಬಿಡಿ, ಯಕಶ್ಚಿತ್ ಎನ್ನುವ ವಾಸ್ತವ ಅರಿವಾಗಿ ಡಿಪ್ರೆಶನ್‍ಗೆ(ಖಿನ್ನತೆ) ಹೋಗಬೇಕಾಗುತ್ತದೆ. ನೀವೆಷ್ಟೇ ದೊಡ್ಡ ನಾಯಕನಾಗಿದ್ದರೂ, ಅದ್ಭುತ ಭಾಷಣಕಾರನಾಗಿದ್ದರೂ ಕುರ್ಚಿಹಾಕುವ, ಜನರನ್ನು ಕರೆದುಕೊಂಡು ಬರುವ, ಸ್ಟೇಟ್ ಕಟ್ಟುವ, ಬ್ಯಾನರ್, ಫ್ಲೆಕ್ಸ್ ಹಾಕುವ ನಿಷ್ಠಾವಂತ ಕಾರ್ಯಕರ್ತನಿಲ್ಲದಿದ್ದರೆ ಬಯಲಲ್ಲಿ ನಿಂತು ಬಾಯಿ ಬಡಿದುಕೊಳ್ಳಬೇಕಾಗುತ್ತದೆ.
ಇಂತಹ ನಿಸ್ವಾರ್ಥ ಕಾರ್ಯಕರ್ತರು ನೊಂದು ಟೀಕಿಸುತ್ತಿದ್ದಾರೆಂದರೆ ನಮ್ಮಲ್ಲೇ ಏನೋ ತಪ್ಪಿದೆ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು ತಾನೇ?

Comments are closed.