Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ದುರಂತಮಯ ಬದುಕು, ಆದರೂ ಜನರಿಗೆ ಕೊಟ್ಟರು ಕುಚುಕು!

ಮೇಜರ್ ಬಾರ್ಬರಾ!
ಇದು ವಿಶ್ವವಿಖ್ಯಾತ ಲೇಖಕ, ವಿಮರ್ಶಕ, ನೊಬೆಲ್ ಪುರಸ್ಕೃತ ಜಾರ್ಜ್ ಬರ್ನಾರ್ಡ್ ಷಾ ಅವರ ನಾಟಕ. ಈ ಬರ್ನಾರ್ಡ್ ಷಾ ಅವರಿಗೂ ಬ್ರಿಟನ್‌ನ ಲೆಜೆಂಡರಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್‌ಗೂ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತಿತ್ತು. ಅದು ಬಹಳಷ್ಟು ಸಲ ಅವಹೇಳನಕಾರಿಯಾಗಿರುತ್ತಿದ್ದರೂ ಆ ನಿಂದನೆಯಲ್ಲೂ ಒಂದು  Class,, ಶ್ರೇಷ್ಠತೆ ಇರುತ್ತಿತ್ತು. ಒಮ್ಮೆ ‘ಮೇರ್ಜ ಬಾರ್ಬರಾ’ ನಾಟಕ ಏರ್ಪಡಾಯಿತು. ಸಾಮಾನ್ಯವಾಗಿ ನಾಟಕಗಳು ರಾತ್ರಿ ವೇಳೆಯೇ ಹೆಚ್ಚಾಗಿ ನಡೆಯುತ್ತವೆ. ವಿನ್‌ಸ್ಟನ್ ಚರ್ಚಿಲ್‌ಗೆ ಟೆಲಿಗ್ರಾಂ ಮಾಡಿದ ಬರ್ನಾರ್ಡ್ ಷಾ, ‘ಫ್ಟ್ ನೈಟ್’ಗೆ (ಮೊದಲ ಪ್ರದರ್ಶನಕ್ಕೆ) ನಿಮಗಾಗಿ 2 ಆಸನಗಳನ್ನು ಕಾದಿರಿಸಿದ್ದೀನಿ, ಜತೆಗೊಬ್ಬ ಸ್ನೇಹಿತರನ್ನೂ ಕರೆದುಕೊಂಡು ಬನ್ನಿ. ಒಂದು ವೇಳೆ ಇರುವುದೇ ಆದರೆ… ಎಂಬ ಕುಟುಕು ಸಂದೇಶ ಕಳುಹಿಸಿದರು! ಅದಕ್ಕೆ ಪ್ರತಿಯಾಗಿ ಚರ್ಚಿಲ್ ಕೂಡ ಚಚ್ಚಿದರು- ‘ಫ್ಟ್ ನೈಟ್’ಗೆ ಬರುವುದಕ್ಕಂತೂ ಸಾಧ್ಯವಿಲ್ಲ, ‘ಸೆಕೆಂಡ್ ನೈಟ್’ಗೆ ಖಂಡಿತಾ ಬರುತ್ತೇನೆ, ಒಂದು ವೇಳೆ ಅದನ್ನು ನೀವು ಇಟ್ಟುಕೊಂಡರೆ…
ಇವರಿಬ್ಬರ ತಾಕಲಾಟಗಳು ಇಂದು ದಂತಕತೆಯಾಗಿವೆ. ನಮ್ಮಲ್ಲೂ ಒಬ್ಬರು ಕರ್ನಾಟಕದ ಬರ್ನಾರ್ಡ್ ಷಾ ಎಂದು ಖ್ಯಾತರಾಗಿದ್ದರು. ಅವರೇ ರಾಯಸಂ ಭೀಮಸೇನ ರಾವ್ ಅಲಿಯಾಸ್ ಬೀchi! ಅವರದ್ದು ದುರಂತಮಯ ಬಾಲ್ಯ. ಅದನ್ನು ಅವರ ಆತ್ಮಚರಿತ್ರೆ ‘ನನ್ನ ಭಯಾಗ್ರಫಿ’ಯಲ್ಲಿ ಮಾರ್ಮಿಕವಾಗಿ ವರ್ಣಿಸುತ್ತಾರೆ. ‘ಅರ್ಜುನ ಅದೆಲ್ಲಿಗೋ ಹೋದ, ಚಿತ್ರಾಂಗದೆ ಸಿಕ್ಕಿದಳು. ಅವಳೊಟ್ಟಿಗೆ ಸುಖ ಕೆಲಕಾಲ-ದೈವಾಂಶವಿರುವವ ವ್ಯವಹಾರ-ಗಾಂಧರ್ವ ವಿವಾಹ ಆದರು. ಸುಖ ಸಾಕಾಯಿತು, ಅರ್ಜುನ ಅಲ್ಲಿಂದ ಕಾಲ್ತೆಗೆದ. ಗರ್ಭವತಿಯಾಗಿದ್ದ ಚಿತ್ರಾಂಗದೆ ಗಂಡು ಮಗುವಿಗೆ ಜನ್ಮವಿತ್ತಳು, ಅವನೇ ಬಭ್ರುವಾಹನ.
ಅರ್ಜುನನಿಗೆ ಚಿತ್ರಾಂಗದೆಯ ನೆನಪಿಲ್ಲ, ಬಭ್ರುವಾಹನ ಅಪ್ಪ ಯಾರೆಂದು ಕೇಳಿದರೆ ಏನಾಶ್ಚರ್ಯ? ನಮ್ಮ ಪುರಾಣ ಪುಣ್ಯಕಥೆಗಳ ತುಂಬ ಬರೀ ಇಂಥ ಕಥೆಗಳೇ. ನನ್ನ ಕಥೆಯೂ ಈ ಒಂದು ದೃಷ್ಟಿಯಲ್ಲಿ ಪೌರಾಣಿಕವೇ- ಆದರೆ ಆ ಪುರಾಣ ಪುರುಷರಂತೆ ನನ್ನ ತಂದೆ ನನ್ನ ತಾಯಿಗೆ ಗರ್ಭದಾನ ಉಪಕಾರದ ಹೊರೆ ಹೊರಿಸಿ ಓಡಿ ಹೋಗಲಿಲ್ಲ, ಸತ್ತುಹೋದ. ಇದು ದೈವಾಂಶವಿಲ್ಲದವರ ಕಥೆ, ಆದುದರಿಂದ ವ್ಯಥೆ. ನಾನು ಹುಟ್ಟಿದೊಡನೆ ನನ್ನ ತಂದೆ ಸಾಯಲಿಲ್ಲ. ಆದರೆ ನಾನು ಅವರನ್ನು ಗುರುತಿಸುವ ಒಳಗಾಗಿಯೇ ಸತ್ತರು. ಒಂದು ರೀತಿಯಿಂದ ಇದು ನನಗೆ ಒಳಿತೇ ಆಯಿತು, ಪಿತೃಶೋಕದ ಅರಿವೂ ನನಗಾಗಲಿಲ್ಲ. ಅಪ್ಪ ಸತ್ತ ಎಂದು ನಾನಳಲಿಲ್ಲ. ಆಗ ನಾನು ಅತ್ತಿದ್ದರೆ ಹಸಿವಿನಿಂದ ಇರಬೇಕು ಅಷ್ಟೇ’ ಎನ್ನುತ್ತಾರೆ ಬೀchi
ತಾಯಿಯ ಬಗ್ಗೆಯೂ ಅವರಿಗೆ ಅಷ್ಟಕ್ಕಷ್ಟೇ. ಆಕೆ ಸತ್ತಾಗ ಬೀchiಗೆ ಆರೇಳು ವರ್ಷ. ಸಾವು ಎಂದರೇನು ಎಂಬುದೇ ತಿಳಿಯದ ವಯಸ್ಸು. ಅವರಿವರು ಅಳುವುದನ್ನು ನೋಡಿ ಅಳುವ ಏಜು ಅದು. ಕ್ಷಯ ರೋಗಕ್ಕೆ ತುತ್ತಾಗಿದ್ದ ತಾಯಿಯಿಂದ ಬೀchiಯವರನ್ನು ದೂರವೇ ಇರಿಸಿದ್ದರು. ಸೋದರತ್ತೆ ರಿಂದತ್ತಿಯ ಜತೆಯೇ ಬೆಳೆದರು. ‘ಬದುಕಲ್ಲಿ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿದ್ದ ನನ್ನ ತಾಯಿಗೆ ಮಕ್ಕಳನ್ನು ಹೊಡೆಯುವುದು ಅಭ್ಯಾಸವಾಗಿ ಹೋಗಿತ್ತು. ನನ್ನ ತಾಯಿಯ ಬದಲು ರಿಂದತ್ತಿ ಸತ್ತಿದ್ದರೆ ಪ್ರಾಯಶಃ ನಾನು ಅಳುತ್ತಿದ್ದೆ’ ಎಂದು ಬರೆದುಕೊಳ್ಳುತ್ತಾರೆ ಬೀchi. ಇಂಥ ದುರಂತಮಯ ಬಾಲ್ಯವನ್ನು ಕಂಡರೂ ಒಬ್ಬ ಬರಹಗಾರರಾಗಿ ಬೀಇಜಿ ಓದುಗರ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸಿದರು. ಬಹುಶಃ ಅವರಿಗಿದ್ದ ಹಾಸ್ಯಪ್ರಜ್ಞೆ, ವಿಡಂಬನಾಶಕ್ತಿ ಆ ಕಾಲದ ಯಾವ ಸಾಹಿತಿಗಳಿಗೂ ಇರಲಿಲ್ಲ. ಅವರ ನಂತರ ಬಂದ ಕನ್ನಡದ ಸಾಹಿತಿಗಳಲ್ಲೂ ಆ ವಿಷಯದಲ್ಲಿ ಬೀchiಗೆ ಸರಿಸಮಾನಾಗಿ ನಿಲ್ಲುವ ಸಾಮರ್ಥ್ಯವಿಲ್ಲ.
ಇವತ್ತು ಇಂಟರ್‌ನೆಟ್‌ನಲ್ಲಿ ಎಲ್ಲವೂ ಲಭ್ಯವಿದೆ. ಪೋಲಿ ಜೋಕಿನಿಂದ ಹಿಡಿದು ಎಲ್ಲವೂ ಸಿಗುತ್ತದೆ. ಆದರೆ ಆ ಕಾಲಕ್ಕೆ ಇಂಟರ್‌ನೆಟ್ ಎಂಬುದು ಕಲ್ಪನೆಗೂ ನಿಲುಕದ ವಿಷಯವಾಗಿತ್ತು. ಟಿವಿ ಕೂಡ ಶೈಶವಾವಸ್ಥೆಯಲ್ಲಿತ್ತು. ಅಂತಹ ಕಾಲದಲ್ಲಿ ಓದುಗರಿಗೆ ಕುಚುಕು ಕೊಡುವ, ಕಚಗುಳಿ ಹಾಕುವ ಜೋಕುಗಳನ್ನು ಬರೆದವರು ಬೀಇಜಿ.ಅವರ ‘ತಿಂಮನ ತಲೆ’ ಬಂದಿದ್ದು 1950ರಲ್ಲಿ. ಅದು ಹಾಗೂ ‘ಬೆಳ್ಳಿ ತಿಂಮ ನೂರೆಂಟು ಹೇಳಿದ’, ‘ತಿಂಮನ ತಲೆ’, ‘ತಿಮ್ಮಿಕ್ಷನರಿ’ ಪುಸ್ತಕಗಳಲ್ಲಿರುವ ಅದ್ಭುತ ಜೋಕುಗಳನ್ನು ಕನ್ನಡ ಸಾರಸ್ವತ ಲೋಕದಲ್ಲಿ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ.
ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಹಾಸ್ಯಕ್ಕೆ ಹೊಸ ಭಾಷ್ಯ ಬರೆದವರು ಆರ್ಟ್ ಬುಕ್‌ವಾಲ್ಡ್. ಅವರದ್ದು ರಾಜಕೀಯ ವಿಡಂಬನೆ. ಆದರೆ ಬೀchiಯವರು ಎಲ್ಲ ಗಂಭೀರ ವಿಷಯಗಳ ಬಗ್ಗೆಯೂ ವಿಡಂಬನೆ ಮಾಡುತ್ತಿದ್ದರು.
ಇದು ನಟನೆಯಲ್ಲ
ತಿಂಮ ಕಂಡಿದ್ದ ಜೀವನದ ನಾನಾ ಮುಖಗಳಲ್ಲಿ ನಾಟಕ ಕಂಪನಿಯ ಬಾಳೂ ಒಂದು. ಹರಿಶ್ಚಂದ್ರನಲ್ಲಿ ನಕ್ಷತ್ರಿಕ, ರಾಮಾಯಣದಲ್ಲಿ ಮಾರೀಚ, ಕೃಷ್ಣಲೀಲೆಯಲ್ಲಿ ಕಂಸ ಮುಂತಾದ ‘ಪಾರ್ಟು’ಗಳು ತಿಂಮನವು.
ಸಿನಿಮಾ ಯುಗದಲ್ಲಿ ತಿಂಮನ ನಾಟಕವನ್ನು ಯಾರು ನೋಡಬೇಕು? ಸಾಯುವಷ್ಟು ಜೀವವಿಲ್ಲದ ಕಾರಣ, ಹಾಗೂ-ಹೀಗೂ ಬದುಕಿದ್ದಿತು ನಾಟಕ ಕಂಪನಿ.
ಅದೇನೋ ಕಾಯಿಲೆ ಎಂದು ತಿಂಮ ಬಂದ ಡಾಕ್ಟರರ ಬಳಿ. ಕಾಂಪ್ಲಿಮೆಂಟರಿ ‘ಪಾಸ್’ನಿಂದ ನಾಟಕ ನೋಡಿದ್ದ ಡಾಕ್ಟರರು ಮುಲಾಜಿಗೆ ಔಷಧ ಕೊಡಲೇಬೇಕಾಯಿತು.
ಮೂರು ಗುಳಿಗೆಗಳನ್ನು ಕೈಗಿಟ್ಟು ಹೇಳಿದರು,
‘ಊಟವಾದ ಮೇಲೆ ಒಂದೊಂದರಂತೆ ಮೂರು ಬಾರಿ ಇವನ್ನು ತೆಗೆದುಕೊ. ಆಮೇಲೆ ನನಗೆ ಬಂದು ಹೇಳು. ತಿಳಿಯಿತೇನಯ್ಯಾ?’
ತಲೆಯಾಡಿಸಿ ಹೋದ ತಿಂಮ. ಆಮೇಲೆ ಅವನೆಲ್ಲಿಯೋ, ಡಾಕ್ಟರೆಲ್ಲಿಯೋ!
ಎರಡು ತಿಂಗಳ ನಂತರ ರಸ್ತೆಯಲ್ಲಿ ಸಿಕ್ಕ ಡಾಕ್ಟರರು ಕೇಳಿದರು,
‘ಕಾಣಲೇ ಇಲ್ಲವಲ್ಲಯ್ಯ ಮತ್ತೆ? ನನಗೆ ಹೇಳಬೇಡವೇ ನೀನು ಗುಳಿಗೆಯ ಪರಿಣಾಮವೇನೆಂಬುದ?’
‘ಮೂರು ಗುಳಿಗೆಗಳು ಮುಗಿದ ನಂತರ ಅಲ್ಲವೇನು ಸ್ವಾಮೀ, ನಾನು ನಿಮ್ಮನ್ನು ಕಾಣಬೇಕಾದುದು?’
ಜೇಬಿನಿಂದ ಹೊರತೆಗೆದು ಎರಡು ಗುಳಿಗೆಗಳನ್ನು ತೋರಿಸಿದ.
‘ಏಕಯ್ಯಾ ತೆಗೆದುಕೊಳ್ಳಲಿಲ್ಲ? ನಾನು ಕೊಟ್ಟೇ ಎರಡು ತಿಂಗಳಾಗುತ್ತ ಬಂದಿತು?’
‘ಉಂಡ ನಂತರ ತೆಗೆದುಕೋ ಎಂದು ಹೇಳಿದ್ದಿರಿ. ಊಟ?’
ಕಡೇ ಪರೀಕ್ಷೆ
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ- ‘ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?’
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.
‘ಹೌದು. ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ- ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!’
ಮಾತು ಕೇಳುವ ಹೆಂಡತಿ
‘ತಿಂಮಾ?’
‘ಏನು ಸ್ವಾಮಿ?’
‘ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ. ನಿನ್ನ ಹೆಂಡತಿ?’
‘ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?’
‘ಹೌದು. ಕೇಳುತ್ತಾಳೇನಯ್ಯಾ ನಿನ್ನ ಮಾತು?’
‘ಏನು ಸ್ವಾಮಿ. ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಗೊಟ್ಟು ಕೇಳುತ್ತಾಳೆ ಗೊತ್ತೆ?!’
ಅನುಮಾನ ಪರಿಹಾರ
‘ನೀವು ನನಗೆ ಮೋಸ ಮಾಡಬೇಡಿ. ನನ್ನನ್ನು ಬಿಟ್ಟು ಬೇರಾರನ್ನೂ ಪ್ರೀತಿಸುತ್ತಿಲ್ಲ ತಾನೆ?’
‘ಛೆ! ಎಲ್ಲಾದರೂ ಉಂಟೆ?’
ತಿಂಮ ತನ್ನ ಪ್ರೇಯಸಿಗೆ ಸಮಾಧಾನ ಹೇಳಿದ.
‘ಹಾಗಿದ್ದರೆ ನನಗೆ ಈಗಲೇ ಹೇಳಿಬಿಡಿ. ನಂಬಿಕೆ ಹುಟ್ಟಿಸಿ ಆಮೇಲೆ ನನ್ನ ಎದೆ ಒಡೆಯುವಂತೆ ಮಾಡಬೇಡಿ.’
‘ನಿಜವಾಗಿಯೂ ಮತ್ತಾರೂ ಇಲ್ಲ. ನೀನೇಕೆ ಹಾಗೆಲ್ಲ ಮನೋವ್ಯಥೆ ಮಾಡಿಕೊಳ್ಳುತ್ತೀ?’
‘ಅಹುದು. ನನಗೆ ಸುಳ್ಳು-ಠಕ್ಕು, ಮೋಸ-ವಂಚನೆ ಸರಿ ಬರುವುದಿಲ್ಲ. ಅಂತಹುದೇನಾದರೂ ಇದ್ದರೆ ಈಗಲೇ ಹೇಳಿಬಿಡಿ.’
‘ಯಾರನ್ನೂ ನಾನು ಕಣ್ಣೆತ್ತಿ ಕೂಡ ನೋಡುವುದಿಲ್ಲ ಮಹರಾಯಿತಿ. ಈ ಹುಚ್ಚು ನಿನಗೆಲ್ಲಿಂದ ಹಿಡಿಯಿತು?’
‘ಬೇರಾರೂ ಇಲ್ಲವೆಂದು ಆಣೆ ಮಾಡಿ ಹಾಗಾದರೆ.’
ತಿಂಮ ಹತ್ತು ಬಾರಿ ಆಣೆ, ಪ್ರಮಾಣ ಮಾಡಿದ.
ಪ್ರೇಯಸಿಯ ಮನಸ್ಸಿಗೆ ಆಗ ನೆಮ್ಮದಿಯಾಯಿತು.
‘ಆ ಅನುಮಾನವೇಕೆ ಬಂತು ರಾಧಾ?’
‘ರಾಧಾ! ಅದು ಯಾರ ಹೆಸರು? ಯಾರವಳು?’
ಅದು ಮುಖ್ಯ
ಹೊಸದಾಗಿ ಮಂತ್ರಿಯಾದೊಬ್ಬರ ಸಂದರ್ಶನಕ್ಕೆ ಬಂದ, ಪತ್ರಿಕಾ ವರದಿಗಾರನಾದ ತಿಂಮ.
‘ಏನಾದರೊಂದು ಹೇಳಿಕೆ ಕೊಡಿ, ಮಹಾಸ್ವಾಮೀ!’
‘ಏನಿದೆ ಹೇಳಲು?’
ಪ್ರಾಮಾಣಿಕವಾಗಿ ನುಡಿದು, ಕೈ ತಿರುವಿ ತಾರಮ್ಮಯ್ಯ ಆಡಿಬಿಟ್ಟರು ಆ ಮಂತ್ರಿಗಳು.
‘ಏನೂ ಇಲ್ಲವೆಂಬುದು ಎಲ್ಲರಿಗೂ ಗೊತ್ತಿದೆ ಸ್ವಾಮೀ. ಪತ್ರಿಕೆಯಲ್ಲಿ ಹಾಕಲಂತೂ ಬೇಕಲ್ಲ? ಏನೇ ಆದರೂ ಒಂದು ಹೇಳಿ- ಇಬ್ಬರ ಕೆಲಸವೂ ಉಳಿಯಬೇಕು, ನೋಡಿ.’
ಅಳದ ಮಗು
‘ರಾತ್ರಿ ಎಲ್ಲ ನಿದ್ರೆಯೇ ಇಲ್ಲವೋ ತಿಂಮಾ? ಸಾಕು-ಸಾಕಾಗಿ ಹೋಯಿತು.’
‘ಏಕಮ್ಮಾ, ಏನಾದರೂ ಓದುತ್ತಿದ್ದೀರಾ?’
‘ಓದು! ಈ ಮಗುವನ್ನು ಕಟ್ಟಿಕೊಂಡು ಓದಿದಂತೆಯೇ ಇದೆ. ಅತ್ತದ್ದೇ ಅತ್ತದ್ದು ಇಡೀ ರಾತ್ರಿ ತೆರೆದ ಬಾಯಿ ಮುಚ್ಚಿಲ್ಲ ಇದು’.
‘ನಮ್ಮ ಮಗುವೂ ಹಾಗೆಯೇ ಅಳುತ್ತಿತ್ತು ಆಗೆಲ್ಲವೂ.’
‘ಈಗ ಅಳುವುದಿಲ್ಲವೇ? ಏನು ಮಾಡಿದಿ?’
‘ಮುಚ್ಚಿದ ಬಾಯಿ ತೆರೆದಿಲ್ಲ ನೋಡಿ, ಅವನು.’
ಜೇಬು-ತಲೆ
ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ ಇಲ್ಲಿ ನೋಡುತ್ತ ಊರೆಲ್ಲ ಸುತ್ತಿಿದ, ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು.
ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು ಹಿಡಿದರು,
‘ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು’- ಎಂದರು.
‘ಕೊಡುವುದಿಲ್ಲ’
ತಕರಾರು ಹೂಡಿದ ತಿಂಮ.
‘ನಿನ್ನ ತಲೆ ತೆಗೆಯುತ್ತೇವೆ.’
‘ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ.’
ಜೋಕುಗಳಷ್ಟೇ ಅಲ್ಲ, ಅದ್ಭುತ “One Liners’ಗಳನ್ನೂ ಬರೆಯುತ್ತಿದ್ದರು.
– ವಿದ್ಯೆ ಎನ್ನುವುದು ಮೋಟಾರ್ ಕಾರ್ ಇದ್ದಂತೆ. ಎಲ್ಲಿಯಾದರೂ ಕೆಲಸ ಮಾಡಲು ಹೋಗುವಾಗ ಅದನ್ನು ಹೊರಗಡೆಯೇ ಬಿಟ್ಟು ಒಳಗಡೆ ಹೋಗಬೇಕು.
– ಪ್ರತಿಯೊಬ್ಬನಿಗೂ ಗುಟ್ಟಾಗಿಡಲಾರದಂಥದೊಂದು ಅವನ ಜೀವನದಲ್ಲಿ ಇದ್ದೇ ಇದೆ- ತನ್ನ ಬಗ್ಗೆ ತನಗೇ ಇರುವ ತಪ್ಪು ಅಭಿಪ್ರಾಯ?
– ಆಸ್ಪದವಿಲ್ಲದಾಗ ಎಲ್ಲ ಕಳ್ಳರೂ ಪ್ರಾಮಾಣಿಕನ ಅಪ್ಪಂದಿರೇ!
– ಅನ್ನ ಕೊಡುವ ಪೈರಿನೊಡನೆ ಕಸ-ಕಡ್ಡಿ ಹುಟ್ಟುತ್ತವೆ, ಏನೂ ಕೊಡದ ಕೀರ್ತಿಯೊಡನೆ ಚಿಕ್ಕ, ಪುಟ್ಟ ಶತ್ರುಗಳೂ ಹುಟ್ಟುತ್ತಾರೆ.
– ಯಾರ ಬಗ್ಗೆಯೇ ಆಗಲಿ, ಅವರ ಹಿಂದೆ ಆಡುವುದು ಅಷ್ಟು ಒಳ್ಳೆಯದಲ್ಲ. ಕೆಲವರ ಬಗ್ಗೆಯಂತೂ ಇದಿರಿನಲ್ಲಿ ಆಡುವುದು ಎಷ್ಟೂ ಒಳ್ಳೆಯದಲ್ಲ.
– ನಾಗರಿಕತೆ ಒಂದನ್ನಂತೂ ತಪ್ಪದೆ ಕಲಿಸುತ್ತದೆ- ನಾಗರಿಕತೆಯನ್ನು ಸಹಿಸುವುದು!
– ಇಂದು ಒಂದು ಶಾಲೆಯನ್ನು ಸ್ಥಾಪಿಸು. ಮುಂದೆ ಎಂದಾದರೂ ಎರಡು ಜೈಲು ತಾವಾಗಿಯೇ ಮುಚ್ಚುತ್ತವೆ.
– ಆಳವು ಕಡಿಮೆಯಾದಂತೆಲ್ಲ ಉದ್ದದಲ್ಲಿ ಜಾಸ್ತಿಯಾಗುವ ರಬ್ಬರ್‌ನಂಥದಕ್ಕೆ ಭಾಷಣ ಎಂದು ಹೆಸರು.
– ಮಾನವ ಜೀವನವು ಒಂದು ಟ್ಯಾಕ್ಸಿ, ಆಯುಸ್ಸು ಅದರ ಮೀಟರ್. ಓಡುತ್ತಿರಲಿ ನಿಂತಿರಲಿ, ಅಯುಸ್ಸು ಮತ್ತು ಮೀಟರ್ ಓಡುತ್ತಲೇ ಇರುತ್ತವೆ.
– ‘ಪ್ರೈವೇಟ್ ಟ್ಯೂಷನ್ ’- ವಿದ್ಯಾರ್ಥಿಗೆ ಔಷಧವಾಗಿರಬೇಕು. ಔಷಧವೇ ಅನ್ನವಾದರೆ ಗತಿ?
ಇವತ್ತು ಬೀChiಯವರ ಹಾಸ್ಯ ಚಟಾಕಿಗಳನ್ನು ಹಾರಿಸಿ ಪ್ರಾಣೇಶ ಆಚಾರ್ ‘ಗಂಗಾವತಿ ಬೀChi’ ಎಂದೇ ಖ್ಯಾತರಾಗಿದ್ದಾರೆ. ಸುಧಾ ಬರಗೂರು, ರಿಚರ್ಡ್ ಲೂಯಿಸ್, ಕೃಷ್ಣೇಗೌಡ ಮುಂತಾದವರೂ ಇಂದು ನಮ್ಮನ್ನೆಲ್ಲ ನಗಿಸುತ್ತಿರುತ್ತಾರೆ, ನಗೆಹಬ್ಬಗಳು ನಡೆಯುತ್ತಿರುತ್ತವೆ. ಆದರೆ ನಮ್ಮನ್ನೆಲ್ಲ ಬಾಯ್ತುಂಬ ನಗಿಸಿದ ಮೊದಲ ವ್ಯಕ್ತಿ ಬೀChi. ಏಪ್ರಿಲ್ 23 ಬೀchi ಅವರ ಜನ್ಮದಿನ ಹಾಗಾಗಿ ತಡವಾದರು ಮತ್ತೆ ನೆನಪಿಸಿಕೊಳ್ಳಬೇಕೆನಿಸಿತು.

Comments are closed.