Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪಾಕ್ ಪಾಲಿಗೆ ಮತ್ತೊಂದು ಬಾಂಗ್ಲಾವಾಗಲಿದೆಯೇ ಬಲೂಚಿಸ್ತಾನ?

ಪಾಕ್ ಪಾಲಿಗೆ ಮತ್ತೊಂದು ಬಾಂಗ್ಲಾವಾಗಲಿದೆಯೇ ಬಲೂಚಿಸ್ತಾನ?

 

ಪಾಕ್ ಪಾಲಿಗೆ ಮತ್ತೊಂದು ಬಾಂಗ್ಲಾವಾಗಲಿದೆಯೇ ಬಲೂಚಿಸ್ತಾನ?

“You do one more Mumbai, you lose Balochistan”, ಮತ್ತೊಂದು ಮುಂಬೈನಂಥ ದಾಳಿ, ಬಲೂಚಿಸ್ತಾನವನ್ನು ಮರೆತುಬಿಡಿ! ಹಾಗೆಂದಿದ್ದರು ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ 2015ರಲ್ಲಿ!! ಈಗ್ಗೆ  ಒಂದು ತಿಂಗಳ ಹಿಂದೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲೂಚಿಸ್ತಾನ್ ಬಗೆಗಿನ ಸ್ಪಷ್ಟ ಪ್ರಸ್ತಾಪದ ಬಗ್ಗೆ ದೇಶ ವಿದೇಶಗಳಲ್ಲಿ ಗಂಭೀರ ಚರ್ಚೆಗಳು ನಡೆದವು. ಆಂಗ್ಲ ವೆಬ್‍ಸೈಟೊಂದು ಅದನ್ನು ಹೀಗೆ ವಿಶ್ಲೇಷಣೆ ಮಾಡಿತ್ತು. “ಆನೆ ಯಾವತ್ತೂ ಸುಲಭಕ್ಕೆ ಉದ್ರೇಕ ಹೊಂದುವುದಿಲ್ಲ. ತನ್ನಿಂದ ತಾನೇ ದಾಳಿ ಪ್ರಾರಂಭಿಸುವುದಿಲ್ಲ. ಅದನ್ನು ಉದ್ರೇಕಿಸಿದರೆ ಅದನ್ನು ಹಿಡಿದು ಕಟ್ಟಿಹಾಕುವುದು ಕಷ್ಟ. ಸಾಮಾನ್ಯ ಹೊಡೆತಗಳನ್ನು ಬಾರಿ ಬಾರಿ ತಿಂದರೂ ಆನೆ ತನ್ನ ಪಾಡಿಗೆ ತಾನು ಸಹಿಸಿಕೊಂಡಿರುತ್ತದೆ. ಆದರೆ ಅದರ ಸಹನೆಗೂ ಒಂದು ಮಿತಿ ಎಂಬುದಿರುತ್ತದೆ”

ಭಾರತ, ಪಾಕಿಸ್ತಾನ, ಕಾಶ್ಮೀರ ಮತ್ತು ಬಲೂಚಿಸ್ತಾನ- ಈ ನಾಲ್ಕು ಪ್ರದೇಶಗಳ ವಸ್ತುಸ್ಥಿತಿಯನ್ನು ಆನೆಯೆಂಬ ರೂಪಕ ಚೆನ್ನಾಗಿ ಕಟ್ಟಿಕೊಡುತ್ತದೆ. ಏಕೆಂದರೆ ಇದುವರೆಗಿನ ಎಲ್ಲಾ ಪ್ರಧಾನಮಂತ್ರಿಗಳೂ ಪಾಕಿಸ್ತಾನ ಮತ್ತು ಕಾಶ್ಮೀರವನ್ನು ಒಂದೇ ತಟ್ಟೆಯಲ್ಲಿಟ್ಟು ಮಾತನಾಡುತ್ತಿದ್ದರು. ನಮ್ಮಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಹುತೇಕ ಮರೆತುಬಿಟ್ಟವರೇ ಅಧಿಕ. ಜನರೂ ಭಾರತ ಭೂಪಟವನ್ನು ಸುಂದರವಾಗಿ ಬಿಡಿಸುತ್ತಿದ್ದರೂ ವಾಸ್ತವವನ್ನು ಮರೆತುಬಿಟ್ಟಿದ್ದರು. ಅಂಥಲ್ಲಿ ನಮ್ಮ ಕಾಲದಲ್ಲೇ ಬಲೂಚಿಸ್ತಾನದ ಬಗ್ಗೆ ಧ್ವನಿ ಎತ್ತಿದ ಪ್ರಧಾನಮಂತ್ರಿಯನ್ನು ನಾವು ಕಂಡೆವು. ಕೆಂಪುಕೋಟೆಯ ಮೇಲೆ ಅವರಾಡಿದ ಮಾತು ದೇಶವನ್ನೂ ದಾಟಿ ಬಲೂಚ್‍ವರೆಗೂ ಮುಟ್ಟಿತು.

70ನೇ ಸ್ವಾತಂತ್ರ ದಿನ ಆಚರಣೆ ಮುಗಿದು ಈಗ ಒಂದು ತಿಂಗಳಾಗಿದೆ. ಆದರೆ ಸ್ವಾತಂತ್ರ್ಯ ದಿನದ ಪ್ರಧಾನ ಮಂತ್ರಿಗಳ ಭಾಷಣದ ಬಿಸಿ ಇನ್ನೂ ಆರಿಲ್ಲ. ಕೆಂಪುಕೋಟೆಯ ಮೇಲೆ ನಿಂತು ಅಂದು ಅವರಾಡಿದ ಮಾತುಗಳು ಕೇವಲ ದೆಹಲಿಗಷ್ಟೇ ಅಲ್ಲ. ಸಮಸ್ತ ಭಾರತವನ್ನು ದಾಟಿ ವಿದೇಶಗಳಲ್ಲೂ ಚರ್ಚೆಯಾಗಿತ್ತು. ಏಕೆಂದರೆ ಅಂದು ಪ್ರಧಾನ ಮಂತ್ರಿಗಳು ಮೊದಲಿನ ಪ್ರಧಾನಮಂತ್ರಿಗಳಂತೆ “ಭಯೋತ್ಪಾದನೆಯನ್ನು ಭಾರತ ಸಹಿಸುವುದಿಲ್ಲ’’ ಎಂದು ನೀರಸವಾಗಿ ಹೇಳಿರಲಿಲ್ಲ. “ತಕ್ಕ ಉತ್ತರವನ್ನು ಕೊಡುತ್ತೇವೆ” ಎಂದು ವಿನಾಕಾರಣ ಘೋಷಣೆ ಮಾಡಿರಲಿಲ್ಲ. ಮೊದಲೆಲ್ಲ  ಹೀಗೆ ಘೋಷಣೆ ಮಾಡುತ್ತಿದ್ದವರು ಮರುದಿನ ತಮ್ಮ ಎಂದಿನ ತುಷ್ಟೀಕರಣನೀತಿಗೆ ಅಂಟಿ ಕಾಶ್ಮೀರವೋ, ಭಯೋತ್ಪಾದನೆಯೋ ಯಾವುದೇ ಆಗಲಿ ಮಾತುಕತೆ ಎಂದು  ಕೂರುತ್ತಿದ್ದರು. ವಿದೇಶಾಂಗ ನೀತಿಯಲ್ಲೂ ತುಷ್ಟೀಕರಣದ ಕೈ ಮೇಲಾಗುತ್ತಿತ್ತು. ಅಂದರೆ ಇದೊಂಥರಾ ಕ್ಷಣಿಕ ಸ್ಮಶಾನ ವೈರಾಗ್ಯದಂತೆ ನಡೆಯುತ್ತಿತ್ತು.

70ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನಮಂತ್ರಿಗಳ ಭಾಷಣ ಯಾಕೆ ಹಿಂದಿನ ಭಾಷಣಗಳಿಗಿಂತ ಭಿನ್ನ ಆಗಿತ್ತೆಂದರೆ ಅವರು ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಸರಿಯಾಗಿ ಮಾಡಿದ್ದರು. ಅದನ್ನು ಬಲೂಚಿಗಳ ಹೋರಾಟಕ್ಕೆ ಸಮೀಕರಣ ಮಾಡಿದ್ದರು. ಪಾಕಿಸ್ತಾನ ಕಳೆದ ಎಪ್ಪತ್ತು ವರ್ಷಗಳಿಂದ ಯಾವ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಕಂಡವರ ಬಾಗಿಲ ಸಂದಿಯಲ್ಲಿ ಇಣುಕುತ್ತಿತ್ತೋ ಅದನ್ನು ಪ್ರಧಾನ ಮಂತ್ರಿಗಳು ಜಗತ್ತಿಗೆ ಎತ್ತಿ ತೋರಿಸಿದ್ದರು. ಭಾರತದತ್ತ ಆಸೆಯ ಕಣ್ಣಿಂದ ನೋಡುವ ಬಲೂಚಿಸ್ತಾನವನ್ನು ಜಗತ್ತಿಗೆ ಘಂಟಾಘೋಷವಾಗಿ ಬೆಂಬಲಿಸಿದ್ದರು.

ಭಾರತದ ಪ್ರಧಾನಮಂತ್ರಿಗಳು ಬಲೂಚಿಸ್ತಾನದ ಬಗ್ಗೆ ಮಾತಾಡಲು ಪ್ರಬಲ ಕಾರಣವಾದರೂ ಇತ್ತೇ? ನಮ್ಮ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಪರರ ಹೋಲಿಕೆಯಲ್ಲಿ ಮಾಡುವುದೇ? ಹೀಗೊಂದು ಜಿಜ್ನಾಸೆ ಅಂದು ಕೆಲವರಲ್ಲಿ ಮೂಡಿತ್ತು. ಇನ್ನು ಕೆಲವರು ಒಳಗೊಳಗೇ ಉರಿದುಕೊಂಡರು. ಅವರಿಗೆ ಅಸಲಿ ಕಾರಣ ಗೊತ್ತಿತ್ತು. ಆದರೆ ಸುಳ್ಳನ್ನು ಬಿಡಲಾಗುತ್ತಿರಲಿಲ್ಲ. ನಿಜಕ್ಕೂ ನಮ್ಮ ಸ್ವಾತಂತ್ರ್ಯವನ್ನು ಹೇಳಲು ಬಲೂಚಿಸ್ತಾನ ಸೋದಾಹರಣ ಉದಾಹರಣೆಯೇ. ಅಂದಿನ ಅವರ ಮಾತೆಷ್ಟು ಸಮಂಜಸ ಎಂದರೆ ಅಂದಿನ ಮಾತು ಇಂದು ಒಂದು ತಿಂಗಳಾದರೂ ಹೊಗೆಯಾಡುತ್ತಲೇ ಇದೆ. ಅಲ್ಲಲ್ಲಿ ಕಿಡಿ ಹಚ್ಚುತ್ತಲೇ ಇದೆ.

ಏಕೆಂದರೆ ಬಲೂಚಿಸ್ತಾನದ ಇತಿಹಾಸವೇ ಅಂಥದ್ದು.

1948ರ ಮಾರ್ಚ್ 27. ಇತ್ತ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಗಿತ್ತು. ಅದು ಕಾಶ್ಮೀರದತ್ತ ಆಕ್ರಮಣ ಮಾಡಿದಂತೆಯೇ ಅಕ್ರಮವಾಗಿ ನೆರೆಯ ಬಲೂಚಿಸ್ತಾನದ ಮೇಲೂ ಆಕ್ರಮಣ ಮಾಡಿತು. ಇಲ್ಲಿ ಕಾಶ್ಮೀರದಲ್ಲಿ ಮಹಾರಾಜ ಹರಿಸಿಂಗ್ ಇದ್ದಂತೆ ಬಲೂಚಿಸ್ತಾನದಲ್ಲಿ ಕಲತ್ ಇದ್ದ. ಕಾಶ್ಮೀರದಂತೆ ಭಿನ್ನ ಸಂಸ್ಕೃತಿ, ಭಿನ್ನ ಭಾಷೆ, ಭಿನ್ನ ಜನಜೀವನದ ಬಲೂಚ್ ಜನರು ಪಾಕಿಸ್ತಾನದೊಡನೆ ಸೇರುವ ಯಾವ ಆಸೆಯನ್ನೂ ಇಟ್ಟುಕೊಂಡಿರಲಿಲ್ಲ. ಇಸ್ಲಾಮಿಕ್ ರಾಷ್ಟ್ರವಾಗಿ ಹೊರಹೊಮ್ಮಲಿದ್ದ ಪಾಕಿಸ್ತಾನದ ಜತೆ ವಿಲೀನಗೊಳ್ಳಲು ಬಲೂಚಿಗಳು ಮಾತ್ರವಲ್ಲ ಸಿಂಧಿಗಳು, ಪಂಜಾಬಿಗಳು ಮತ್ತು ಪಠಾಣರಿಗೂ ಇಷ್ಟವಿರಲಿಲ್ಲ. ಹೇಗೆ ಬ್ರಿಟಿಷ್ ಸಾಮ್ರಾಜ್ಯದಲ್ಲಿ ನೆಪಾಳ ಇತ್ತೋ ಹಾಗೆ ಅಲ್ಲಿ ಬಲೂಚಿಸ್ತಾನವಿತ್ತು. ಅಷ್ಟಕ್ಕೂ ಪಾಕಿಸ್ತಾನದ ಸಿಂಧ್ ಆಗಲೀ, ಪಂಜಾಬ್ ಆಗಲೀ ಪಾಕಿಸ್ತಾನ ಒಕ್ಕೂಟಕ್ಕೆ ಮನಸೋ ಇಚ್ಛೆ ಸೇರಿರಲಿಲ್ಲ. ಅಂಥಲ್ಲಿ ಬ್ರಿಟಿಷ್ ಸಾಮ್ರಾಜ್ಯದ ನೇರ ವಸಹಾತು ಆಗಿರದಿದ್ದ ಬಲೂಚಿಸ್ತಾನಕ್ಕಂತೂ ಪಾಕಿಸ್ತಾನಕ್ಕಾಗಲೀ, ಭಾರತಕ್ಕಾಗಲೀ ಸೇರುವ ಪ್ರಶ್ನೆಯೇ ಇರಲಿಲ್ಲ. ಆದರೆ ಭಾರತ ವಿಭಜನೆಯಾದಾಗ ಬಲೂಚಿನ ಕುತ್ತಿಗೆಗೆ ಕಂಟಕ ಶುರುವಾಯಿತು. ಪಾಕಿಸ್ತಾನ ಆರ್ಮಿ ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಂತೆ ಬಲೂಚ್ ಮೇಲೂ ಆಕ್ರಮಣ ಮಾಡಿತು. ಆಗ ಹೇಗೆ ಮಹಾರಾಜ ಹರಿಸಿಂಗ್ ಭಾರತದೊಡನೆ ವಿಲೀನಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದನೋ ಹಾಗೆಯೇ ಕಲತ್ ಕೂಡಾ ಭಾರತಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ. ಭಾರತ ಅದನ್ನು ನಿರ್ಲಕ್ಷ್ಯ ಮಾಡಿದ್ದು ಮತ್ತು ವಿಳಂಬ ಮಾಡಿದ್ದು ಏನೇ ಇರಲಿ. ಮುಖ್ಯ ಪ್ರಶ್ನೆ ಇರುವುದು ಮಹಾರಾಜ ಹರಿಸಿಂಗ್ ಭಾರತ ಒಕ್ಕೂಟಕ್ಕೆ ಸೇರುವ ಸಹಿ ಹಾಕಿದ್ದರೂ ಕಾಶ್ಮೀರ ತನ್ನದೆಂದುಕೊಳ್ಳುವ ಅದೇ ಪಾಕಿಸ್ತಾನ ಇನ್ನೊಂದೆಡೆ ಅಕ್ರಮವಾಗಿ ವಶಪಡಿಸಿಕೊಡ ಬಲೂಚಿಸ್ತಾನವನ್ನು ತನ್ನದು ಎಂದುಕೊಂಡಿತು! ಅದರ ಪ್ರಕಾರ ಕಾಶ್ಮೀರದಲ್ಲಿ ಭಾರತದ ನಡೆ ಅಕ್ರಮ ಎಂದುಕೊಳ್ಳುತ್ತಾ ಅದು ಬಲೂಚನ್ನು ವಶಪಡಿಸಿಕೊಂಡಿತು. ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಕಾಶ್ಮೀರ ವಿಷಯವನ್ನು ಮಂಡಿಸುವ ಪಾಕಿಸ್ತಾನ ಬಲೂಚಿನಲ್ಲಿ ನಡೆಯುತ್ತಿರುವುದೇನು ಎಂಬುದನ್ನು ಜಗತ್ತಿನೆದುರು ಮುಚ್ಚಿಟ್ಟಿತು. ಕಳೆದ ಏಳು ದಶಕಗಳಿಂದ ಪರಿಸ್ಥಿತಿ ಹೀಗಿರುವಾಗ ಕಾಶ್ಮೀರದಲ್ಲಿ ಮಾನವ ಹಕ್ಕು, ಮಕ್ಕಳ ಹಕ್ಕು, ಸೈನಿಕರ ದೌರ್ಜನ್ಯ ಮುಂತಾದ ಆಲಾಪಗಳನ್ನು ಮಾಡುವ ಪಾಕಿಸ್ತಾನಕ್ಕೆ ಚಾಟಿ ಏಟು ಕೊಡುವ ಪ್ರಧಾನಿಗಾಗಿ ನಾವು ಎಪ್ಪತ್ತು ವರ್ಷಗಳನ್ನು ಕಾಯಬೇಕಾಯಿತು.

ಆದರೆ ಬಲೂಚಿಸ್ತಾನದಲ್ಲಿ ವಾತಾವರಣ ಬೇರೆಯೇ ಆಗಿತ್ತು. ಹೊರಜಗತ್ತಿಗೆ ತಿಳೀಯದ ಅನೇಕ ಸಂಗತಿಗಳು ಅಲ್ಲಿ ನಡೆಯುತ್ತಿದ್ದವು. ನಿರಂತರ ಪಾಕಿಸ್ತಾನದ ವಿರುದ್ಧ ಹೋರಾಟವನ್ನು ಬಲೂಚಿಗಳು ಸಂಘಟಿಸಿದ್ದರು. ಅದರ ಬಿಸಿ ಎಷ್ಟಿತ್ತೆಂದರೆ ಬಲೂಚಿಸ್ತಾನದಲ್ಲಿ ನಡೆಯುತ್ತಿದ್ದ ಹೋರಾಟದ ಒತ್ತಡಕ್ಕೆ ಮಣಿದ ಪಾಕಿಸ್ತಾನ 1970ರಲ್ಲಿ ಬಲೂಚಿಗಳಿಗೆ ಕೊಂಚ ಮಟ್ಟಿನ ಸ್ವಾಯತ್ತತೆಯನ್ನು ಕೊಟ್ಟಿತ್ತು. ಆದರೆ 1971ರಲ್ಲಿ ಪೂರ್ವ ಪಾಕಿಸ್ತಾನ ಸ್ವತಂತ್ರಗೊಂಡ ನಂತರ ಭಯಭೀತರಾದ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ 1973ರಲ್ಲಿ ಬಲೂಚಿಸ್ತಾನದ ಪ್ರಾದೇಶಿಕ ಸರ್ಕಾರವನ್ನು ಕಿತ್ತೊಗೆದರು. ಅದೇ ಹೊತ್ತಿಗೆ ಸೋವಿಯತ್ ರಷ್ಯಾ ನೆರವಿನಿಂದ ಬಲೂಚಿಗಳು ಶಸ್ತ್ರಾಸ್ತ್ರ ಹೋರಾಟಕ್ಕೆ ಇಳಿದಿದ್ದರು. ಅದರ ಭಯವೂ ಪಾಕಿಸ್ತಾನಕ್ಕಿತ್ತು. ಈ ಸಂಗತಿಯನ್ನು ಅಮೆರಿಕಾಕ್ಕೆ ತಿಳಿಸಿದ ಪಾಕಿಸ್ತಾನ ಅಮೆರಿಕಾದಿಂದ ಅಪಾರ ಪ್ರಮಾಣದ ಯುದ್ಧ ವಿಮಾನಗಳನ್ನೂ, ಶಸ್ತ್ರಾಸ್ತ್ರಗಳನ್ನೂ ಪಡೆದುಕೊಂಡಿತು. ಬಲೂಚಿಗಳ ಮೇಲಿನ ಪಾಕಿಸ್ತಾನದ ದೌರ್ಜನ್ಯ ಮತ್ತಷ್ಟು ಹೆಚ್ಚಾಯಿತು. 1974ರಲ್ಲಿ ಪ್ರಾರಂಭವಾದ ಈ ದೌರ್ಜನ್ಯ ಬರೋಬ್ಬರಿ ಮೂರು ವರ್ಷಗಳ ಕಾಲ ನಡೆದು ಬಲೂಚಿಸ್ತಾನದ ಐದು ಸಾವಿರ ಪ್ರತ್ಯೇಕತಾವಾದಿಗಳು ಸಾವನ್ನಪ್ಪಿದರು. ಈ ಹೊತ್ತಲ್ಲಿ ಬಾಂಗ್ಲಾ ನಿರ್ಮಾಣದ ಯಶಸ್ಸಿನಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಲೂಚಿಗಳಿಗೆ ಸಹಾಯ ಹಸ್ತವನ್ನು ಚಾಚಿದ್ದರಾದರೂ ಅವರ ಕಾಲಾನಂತರ ಬಲೂಚ್ ಅನಾಥವಾಯಿತು. ಆದರೂ ನಿತ್ಯ ನರಮೇಧ ನಡೆಯುವಾಗಲೆಲ್ಲ ಬಲೂಚ್ ಭಾರತದತ್ತ ಭರವಸೆಯ ಕಣ್ಣುಗಳಿಂದ ನೋಡತೊಡಗಿತು. ಮುಂದೆ ಬಂದ ಸರ್ಕಾರಗಳೆಲ್ಲವೂ ಪಾಕಿಸ್ತಾನದ ಜತೆ ಸ್ನೇಹದ ಕೈಚಾಚತೊಡಗಿತು. ಅಥವಾ ಭಾರತ-ಪಾಕ್ ಮಾತುಕತೆಯಲ್ಲಿ ಕಾಶ್ಮೀರ ವಿಷಯವೊಂದೇ ಮುಖ್ಯವಾಗತೊಡಗಿತು. ಅಂದರೆ ಭಾರತದ ಸ್ನೇಹದ ಹಸ್ತ ಪಾಕಿಸ್ತಾನಕ್ಕೆ ಲಾಭವೇ ಆಗತೊಡಗಿತು. ಆದರೆ ಭಾರತ ಕಾಶ್ಮೀರ ವಿಷಯದಿಂದ ಸಾಧಿಸಿದ್ದೇನೂ ಇರಲಿಲ್ಲ. ಪಾಕಿಸ್ತಾನ ಭಾರತಕ್ಕೆ ತಿಳಿಯದಂತೆ ಬಲೂಚಿನಲ್ಲಿ ತಮ್ಮ ಶಕ್ತಿಯನ್ನು ಬಲಪಡಿಸಿಕೊಳ್ಳತೊಡಗಿತು. ಭಾರತದ ವಿಳಂಭ ಮತ್ತು ಬಲೂಚಿನ ಬಗೆಗಿನ ನಿರ್ಲಕ್ಷ್ಯ ಪಾಕಿಸ್ತಾನದ ಪಾಲಿಗೆ ವರವಾಗತೊಡಗಿತು.

ಅದರ ನಂತರ ಬಲೂಚಿಸ್ತಾನದ ಬಗ್ಗೆ ಕೇಳಿಬಂದ ಮೊದಲ ಧ್ವನಿ ಮೋದಿಯವರದ್ದು.

ಯಾವಾಗ ಸ್ವಾತಂತ್ರ್ಯ ದಿನ ಮೋದಿಯವರು ಬಲೂಚಿಸ್ತಾನದ ಪ್ರಸ್ಥಾಪ ಮಾಡತೊಡಗಿದರೋ ಅಂದಿನಿಂದ ಒಂದಿನವೂ ತಪ್ಪದಂತೆ ಬಲೂಚ್ ಸದ್ದು ಮಾಡುತ್ತಿದೆ. ಪಾಕಿಸ್ತಾನ ಮತ್ತು ಚೀನಾ ಕೈಗೊಂಡಿರುವ ಆರ್ಥಿಕ ಕಾರಿಡಾರ್ ಯೋಜನೆಗೆ ಹಿಂದೆಂದೂ ಕಾಣದಂಥ ಭದ್ರತೆಯನ್ನು ಪಾಕಿಸ್ತಾನ ಒದಗಿಸಿದೆ. 7000 ಚೀನಿ ಕಾರ್ಮಿಕರಿಗೆ 15 ಸಾವಿರ ಯೋಧರನ್ನು ಭದ್ರತೆಗೆ ನಿಯೋಜಿಸುವುದು ಎಂದರೆ ಪಾಕಿಸ್ತಾನದ ಭಯವಲ್ಲದೆ ಇನ್ನೇನು ಕಾರಣ? ಅಲ್ಲದೆ ಮೋದಿಯವರ ಬಲೂಚ್ ಪ್ರಸ್ಥಾಪವಾದಂದಿನಿಂದ ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನ ಕೊಂಚ ಮೆತ್ತಗಾಗಿದೆ. ಅಲ್ಲದೆ ಮೋದಿಯವರ ಎಲ್ಲ  ನಡೆಗಳನ್ನೂ ಪಾಕಿಸ್ತಾನ ಮತ್ತು ಅದರ ಹಿಂದಿರುವ ಶಕ್ತಿಗಳು ಬಲೂಚಿನತ್ತ ಜೋಡಿಸಿ ಮಾತಾಡುತ್ತಿವೆ. ಮೊನ್ನೆ ತಾನೇ ಪ್ರಧಾನಮಂತ್ರಿಗಳ ಅಫಘಾನಿಸ್ತಾನ ಮುಖಂಡರೊಡಗಿನ ಭೇಟಿ ಪಾಕಿಸ್ತಾನದ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಒಬ್ಬ ಸಮರ್ಥ ಪ್ರಧಾನಮಂತ್ರಿ ದೇಶದ ಶಕ್ತಿಯನ್ನು ಯುದ್ಧದ ಮೂಲಕವೇ ಪ್ರದರ್ಶಿಸಬೇಕೆಂದೇನೂ ಇಲ್ಲ ಎಂಬುದಕ್ಕೆ ನರೇಂದ್ರ ಮೋದಿಯವರ ಬಲೂಚಿಸ್ತಾನ ಪ್ರಸ್ಥಾಪ ಒಂದು ಉದಾಹರಣೆ.

ಮೋದಿಯವರ ಒಂದು ಮಾತಿನಿಂದ ಈಗ ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗು ಕೇಳಿಸಲಾರಂಭಿಸಿದೆ. ಪಾಕಿಸ್ತಾನದ ಒಟ್ಟು ಭೂಭಾಗದಲ್ಲಿ ಬಲೂಚಿಸ್ತಾನ ಶೇ.43 ರಷ್ಟನ್ನು ಹೊಂದಿದ್ದರೂ ಜನಸಂಖ್ಯೆಯಲ್ಲಿ ಅದರ ಪಾಲು ಶೇ. 5 ಮಾತ್ರ. ಆದರೆ ಇಡೀ ಪಾಕಿಸ್ತಾನಕ್ಕೆ ತೈಲ, ಚಿನ್ನ, ತಾಮ್ರ, ಮುತ್ತು, ಅಪರೂಪದ ಹರಳು ಕಲ್ಲುಗಳ ಪೂರೈಕೆಯಾಗುತ್ತಿರುವುದು ಬಲೂಚಿಸ್ತಾನದಿಂದ. ನಿಜಕ್ಕೂ ಪಾಕಿಸ್ತಾನಕ್ಕೆ ಬಲೂಚಿಸ್ತಾನವೆಂದರೆ ಕಾಮಧೇನು ಇದ್ದಂತೆ. 1998ರಲ್ಲಿ ಪಾಕಿಸ್ತಾನ ಅಣುಸ್ಫೋಟವನ್ನು ನಡೆಸಿದ್ದೂ ಕೂಡಾ ಇದೇ ಬಲೂಚಿಸ್ತಾನದಲ್ಲಿ. ಆಯಕಟ್ಟಿನ ಕಡಲ ಕಿನಾರೆಗಳು ಮಧ್ಯ ಏಷ್ಯಾದೊಂದಿಗೆ ಸಂಪರ್ಕಕ್ಕೆ ಸುಲಭದ ದಾರಿಗಳಾಗಿವೆ. ಇಷ್ಟೆಲ್ಲ ಸಂಪದ್ಭರಿತ ಪ್ರದೇಶವಾಗಿದ್ದರೂ ಬಲೂಚಿಸ್ತಾನದಲ್ಲಿ ಒಂದೇ ಒಂದು ಅಭಿವ್ರದ್ಧಿ ಯೋಜನೆಗಳು ಇನ್ನೂ ಆರಂಭವಾಗಿಲ್ಲ. ಬಲೂಚಿಸ್ತಾನವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದೋ ಹಾಗೆಲ್ಲಾ ಪಾಕಿಸ್ತಾನ ಬಳಸಿಕೊಂಡಿದೆ. ತನ್ನ ವೈಭವಕ್ಕೆ ಧಕ್ಕೆಯಾಗದಂತೆ ಹೇಗೆ ಅಲ್ಲಿನ ವಿರೋಧವನ್ನು ಧಮನಿಸಬಹುದೋ ಹಾಗೆಲ್ಲಾ ದಮನಿಸಿದೆ. ಮಿಲಿಟರಿ ಬಿಟ್ಟು ಬೀದಿಬೀದಿಗಳಲ್ಲಿ ಹೆಣ ಬೀಳಿಸಿದೆ. ವೈಮಾನಿಕ ದಾಳಿ ಮಾಡಿದೆ. ಬಲೂಚಿಗಳನ್ನು ಮನುಷ್ಯರೆಂಬುದನ್ನೇ ಮರೆತಂತೆ ಪಾಕಿಸ್ತಾನ ವರ್ತಿಸಿದೆ. ಒಂದು ವೇಳೆ ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿ, ಪಾಕಿಸ್ತಾನಕ್ಕೆ ಅದು ಸಂಕಟ ತಂದರೆ ಪಾಕಿಸ್ತಾನದ ಎಲ್ಲ ಆರ್ಭಟಗಳಿಗೂ ತೆರೆ ಬೀಳುತ್ತದೆ.

ಭಾರತ ಬಲೂಚಿಸ್ತಾನದ ಮೇಲೆ ಕಣ್ಣು ಹಾಕಿದೆ ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಅನಿಸಬಹುದು, ಇರಾನಿನಿಂದ ಬರುವ ಅನಿಲ ಪೈಪ್ ಲೈನಿಗಾಗಿ ಭಾರತ ಬಲೂಚಿಸ್ತಾನದ ಬಗ್ಗೆ ಮಾತಾಡುತ್ತಿದೆ ಎಂದು ಕೆಲವರು ಭಾವಿಸಬಹುದು. ಆದರೆ ವಾಸ್ತವ ಅಷ್ಟೇ ಅಲ್ಲ. ಏಕೆಂದರೆ ಕಾಶ್ಮೀರದಿಂದ ಪಾಕಿಸ್ತಾನದ ಹಸ್ತಕ್ಷೇಪವನ್ನು ನಿವಾರಿಸಲು ಭಾರತದ ಕಣ್ಣಮುಂದಿರುವುದು ಬಲೂಚಿಸ್ತಾನ ಒಂದೇ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಎಂಬ ತಂತ್ರ ಹೂಡಿದರೆ ಪಾಕ್ ಕಾಶ್ಮೀರ ಎಂದಾಗಲೆಲ್ಲ ಭಾರತ ಬಲೂಚ್ ಎನ್ನುವುದರಲ್ಲಿ ಏನೂ ತಪ್ಪಿಲ್ಲ ಎಂದೇ ಅನಿಸುತ್ತದೆ. ಭಾರತ ಹಾಗನ್ನಲು ಐತಿಹಾಸಿಕ ಆಧಾರಗಳಿವೆ, ದಾಖಲೆಗಳಿವೆ, ಮಾನವೀಯತೆಯಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಆಜಾದಿಯ ಬೀಜ ಬಿತ್ತಿರುವ ಪಾಕಿಸ್ತಾನ ಬಲೂಚಿನಲ್ಲಿ ಮಾಡಿರುವುದೇನು ಎಂಬುದನ್ನು ವಿಶ್ವಕ್ಕೆ ಎತ್ತಿತೋರಿಸುವುದು ರಾಜನೀತಿ ತಂತ್ರಜ್ಞನ ನಿಪುಣತೆಗೆ ಸಾಕ್ಷಿಯಲ್ಲವೇ? ಕಾಶ್ಮೀರದ ವಿಷಯದಲ್ಲಿ ಆಗಿಂದಾಗ್ಗೆ ಟೀಕೆ ವ್ಯಕ್ತಪಡಿಸುವ ಹಕ್ಕು ಪಾಕಿಸ್ತಾನಕ್ಕಿದೆಯಾದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿ ದ್ರೃಷ್ಟಿಯಿಂದ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಸರ್ಕಾರಿ ಹತ್ಯಾಕಾಂಡದ ಬಗ್ಗೆ, ಬಲೂಚಿಗಳ ಹಕ್ಕಿನ ಬಗ್ಗೆ ಆತಂಕ ವ್ಯಕ್ತಪಡಿಸುವ ಹಕ್ಕು ಭಾರತಕ್ಕಿಲ್ಲವೇ?

ನರೇಂದ್ರ ಮೋದಿಯವರ ಯಾವುದೇ ವಿದೇಶ ಪ್ರವಾಸವನ್ನು ತೆಗೆದುಕೊಳ್ಳಿ. ಪ್ರತಿ ಚರ್ಚೆಯ ವೇಳೆಯಲ್ಲೂ ಬಲಭಾಗದಲ್ಲಿ ಅಜಿತ್ ದೋವಲ್ ಕುಳಿತಿರುತ್ತಾರೆ. ದೋವಲ್ ಬಾಯಲ್ಲಿ ಬರುವುದು ಮೋದಿಯವರ ಇಂಗಿತವೇ ಆಗಿರುತ್ತದೆ. ” You do one more Mumbai, You lose Balochistan “, ಅಂತ ದೋವಲ್ ಹೇಳಿದ್ದು ಸುಖಾಸುಮ್ಮನೆ ಅಲ್ಲ ಎಂಬುದು ಈಗಲಾದರೂ ಅರಿವಾಗುತ್ತಿದೆಯೇ? ಬಲೂಚಿಸ್ತಾನ ಪಾಕ್ ಪಾಲಿಗೆ ಮತ್ತೊಂದು ಬಾಂಗ್ಲಾದೇಶವಾಗುವ ಕಾಲ ಸನ್ನಿಹಿತವಾಗಿರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆಯಲ್ಲವೆ?

balochisthan

Comments are closed.