Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು?

ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು?

ಅಯ್ಯರ್ ಉಚ್ಛಾಟನೆ ಆಯ್ತು, ಹಾಗಾದರೆ ಗದ್ದಾರ್ ಎಂದವರು?

ಅಂದು ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಹಿಂದೂ ವಾದಿ ಎಂದು ಫತ್ವಾಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಶಿಸ್ತು ಉಲ್ಲಂಘನೆ, ಪಕ್ಷದ ಘನತೆ, ಸಭ್ಯತೆಯ ಮಾತುಗಳು? ಮಣಿಶಂಕರ ಅಯ್ಯರ್‌ನೆಂಬ ಹಲ್ಲಿಲ್ಲದ ಹಾವನ್ನು ಮುಲಾಜಿಲ್ಲದೆ ಕಿತ್ತು ಬಿಸಾಡಿದಾದ ಇದ್ದ ಧೈರ್ಯ ಈ ಮೊದಲಿನ ಯಾವ ಕಾಂಗ್ರೆಸಿನ ಶಿಸ್ತು ಸಮಿತಿಗೂ ಇರಲಿಲ್ಲ! ಈಗ ಏಕಾಏಕಿ ಉಂಟಾದ ಶಿಸ್ತು ಆಗೆಲ್ಲಿ ಹೋಗಿತ್ತು? ಮೊದಲೆಲ್ಲಾ ಮೋದಿಯನ್ನೂ ಅವರ ಪಕ್ಷವನ್ನೂ ಅತ್ಯಂತ ಹೀನಾಯವಾಗಿ ತೆಗಳುತ್ತಿದ್ದಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದವರು ಈಗ ಕಟು ನಿರ್ಣಯ ತೆಗೆದುಕೊಂಡರೇಕೆ? ಹಾಗಾದರೆ ಕಾಂಗ್ರೆಸಿನಲ್ಲಿರುವ ಆಂತರಿಕ ಪ್ರಜಾಪ್ರಭುತ್ವವೇನು? ವಂಶಪಾರಂಪರ್ಯವೇ ಕಾಂಗ್ರೆಸಿನಲ್ಲಿ ಅಂತಿಮವೇ? ಅದರ ಪ್ರತೀ ನಡೆಗಳೂ ಹಾಗೇ ಹೇಳುತ್ತವೆ. ಅದಕ್ಕೆ ತಾಜಾ ಉದಾಹರಣೆ ಮಣಿಶಂಕರ್ ಅಯ್ಯರ್ ಉಚ್ಛಾಟನೆ.
ಅದೊಂದು ಸಂಸತ್ ಅಧಿವೇಶನ. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಪ್ರಧಾನಿ ಮೋದಿಯವರ ಉತ್ತರ ಸುದೀರ್ಘ 2 ಗಂಟೆಗಳ ಕಾಲ ನಡೆದು ಮೂರು ಗಂಟೆಗೆ ಮುಕ್ತಾಯವಾದಾಗ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ನಿರ್ಜೀವ ಭಾವ ಮೂಡಿತ್ತು, ಸಾಮಾನ್ಯವಾಗಿ ಸದಾ ಸಭ್ಯತೆಯ ಗೆರೆ ದಾಟಿಯೇ ಮಾತನಾಡುವ ಮಲ್ಲಿಕಾರ್ಜುನ ಖರ್ಗೆಯವರು ಪೆಚ್ಚುಮುಖ ಹಾಕಿಕೊಳ್ಳುವಷ್ಟು ದಾಳಿ ಮಾಡಿದ್ದರು ಪ್ರಧಾನಿ ಮೋದಿ. ಮರುದಿನ ಸಂಜೆ ರಾಜ್ಯಸಭೆಯಲ್ಲಿ ಮೋದಿಯವರ ಉತ್ತರವಿತ್ತು. ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನೋಟು ರದ್ದತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡಿದ್ದರು. ಅವರನ್ನು ಎದುರಿಸಲು ಮೋದಿಯವರಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹುರುಪಿನಲ್ಲಿತ್ತು.
‘ಹೆಚ್ಚೂ ಕಡಿಮೆ ಕಳೆದ 35 ವರ್ಷಗಳಿಂದ ಭಾರತದ ಅರ್ಥವ್ಯವಸ್ಥೆ ಮತ್ತು ಆರ್ಥಿಕ ನೀತಿಗಳ ಮೇಲೆ ಡಾ.ಮನಮೋಹನ್ ಸಿಂಗ್ ಅತೀವ ಪ್ರಭಾವ ಬೀರಿದ್ದಾರೆ. ಎಷ್ಟಾದರೂ ಲಕ್ಷ ಕೋಟಿ ಹಗರಣಗಳು ಸಂಭವಿಸಲಿ, ಅವರ ಮೇಲೆ ಸಣ್ಣ ಭ್ರಷ್ಟಾಚಾರ ಹಗರಣವೂ ಇಲ್ಲ! ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಬಹುಶಃ ಡಾ.ಸಿಂಗ್ ಅವರಿಂದ ಮಾತ್ರ ಕಲಿಯಬಹುದಷ್ಟೇ!’ ಪ್ರಧಾನಿ ಮೋದಿ ಹೇಳಿದ್ದು ಇಷ್ಟೇ. ಎರಡೇ ನಿಮಿಷದಲ್ಲಿ ಸಭಾತ್ಯಾಗ ಮಾಡಿ ಪಲಾಯನ ಮಾಡಿತು ಕಾಂಗ್ರೆಸ್. ಎರಡೇ ನಿಮಿಷದಲ್ಲಿ ಇಂಥ ಹೊಡೆತ ಬಿದ್ದರೆ, ಮುಂದಿನ ಒಂದೂವರೆ ಗಂಟೆಗಳಲ್ಲಿ ಇನ್ನು ಎಂತೆಂಥಾ ಹೊಡೆತ ಬೀಳಬಹುದೋ ಎಂಬ ಭಯ ಅವರಿಗೆ ಕಾಡಿತ್ತು! ರಾಜ್ಯಸಭೆಯಿಂದ ಹೊರ ನಡೆದ ಕಾಂಗ್ರೆಸ್, ಪ್ರಧಾನಿ ಸ್ಥಾನದ ಘನತೆ, ಗೌರವ, ಸಭ್ಯತೆ, ಸಂಸ್ಕಾರಗಳ ಮಾತನಾಡಿತು!
1962ರ ಯುದ್ಧದಲ್ಲಿ ಅಕ್ಸಯ್-ಚಿನ್ ಚೀನಾ ಪಾಲಾದಾಗ, ತಪ್ಪನ್ನು ಒಪ್ಪಿಕೊಳ್ಳುವ ಬದಲು ಅಲ್ಲಿ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ ಎಂದು ತಾನು ಪ್ರಧಾನಿ ಎಂಬುದನ್ನೂ ಮರೆತು ಲಜ್ಜೆಗೆಟ್ಟು ಹೇಳಿದ್ದ ನೆಹರು ಮತ್ತು 1984ರ ಸಿಖ್ ಹತ್ಯಾಕಾಂಡವನ್ನು ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ ಎಂದು ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರನ್ನು ಆದರ್ಶವಾಗಿಟ್ಟುಕೊಂಡಿರುವ ಕಾಂಗ್ರೆಸ್‌ನಿಂದ ನೀಚತನವನ್ನಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಆದರೆ ಅವರಿಗೆಲ್ಲಾ ಇಂದು ನೀಚತನದ ಮಾತಾಡಿದ ಅಯ್ಯರ್ ಮಾತು ಅಸಹನೀಯವಾಯಿತು. ಅಯ್ಯರ್‌ನ ಮಾತು ಕೀಳುದರ್ಜೆಯದೆಂದಾಮೇಲೆ ಇವರೆಲ್ಲರ ಮಾತೂ ಕೀಳುದರ್ಜೆಯದ್ದೇ ಅಲ್ಲವೇ?
ಅಮದು ಪ್ರಧಾನಿಯ ಮಾತುಗಳನ್ನು ಕಾಂಗ್ರೆಸ್ ಕೀಳು ದರ್ಜೆಯದ್ದು ಎಂದು ಆಡಿಕೊಂಡಿತ್ತು. ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಬಹುಶಃ ಡಾ. ಸಿಂಗ್‌ರಿಂದ ಮಾತ್ರ ಕಲಿಯಬಹುದಷ್ಟೇ ಎಂಬುದನ್ನೇ ಘನತೆಗೆ ತಕ್ಕುದಲ್ಲದ ಮಾತುಗಳು ಎನ್ನುವುದಾದರೆ, 1998ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾತನಾಡುತ್ತಾ ಪ್ರಧಾನಿ ಅಟಲ್ ಬಿಹಾರಿಯವರನ್ನು ‘ಗದ್ದಾರ್’ (ದೇಶದ್ರೋಹಿ) ಎಂದು, 2007ರಲ್ಲಿ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಗಾಂಧಿಯವರು ಕರೆದಾಗ ಅವು ಘನತೆವೆತ್ತ ಮಾತುಗಳಾಗಿದ್ದವೇ? ಆಗೇಕೆ ಯಾರೂ ಪಕ್ಷದಿಂದ ಉಚ್ಛಾಟನೆಯಾಗಿಲ್ಲ?
ನರೇಂದ್ರ ಮೋದಿ ಭಾರತದ ಪ್ರಧಾನಿಯಂತೂ ಆಗೋಲ್ಲ, ಎಐಸಿಸಿ ಸಭೆಯಲ್ಲಿ ಮೋದಿ ಟೀ ಮಾರಲು ಒಪ್ಪಿದರೆ ಅದಕ್ಕೆ ಅವಕಾಶ ಮಾಡಿ ಕೊಡುತ್ತೇವೆ ಎಂದು ಅಂದೇ ಮಣಿಶಂಕರ್ ಅಯ್ಯರ್ ಜರಿದಾಗಲೇ ಏಕೆ ಆತನನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಲಿಲ್ಲ? ಮೋದಿ ಅವರು ‘ಆರೆಸ್ಸೆಸ್’ನ ಗೂಂಡಾ, ರಾಜನಾಥ್ ಸಿಂಗ್ ಅವರ ಗುಲಾಮ ಎಂದು ಬೇಣಿ ಪ್ರಸಾದ್ ವರ್ಮಾ ತುಚ್ಛ ಮಾತುಗಳನ್ನಾಡಿದಾಗ, ಮೋದಿಯವರ ವಿರುದ್ಧ ಫತ್ವಾ ಹೊರಡಿಸಿದಾಗ ಎಲ್ಲಿ ಹೋಗಿತ್ತು ಈ ಶಿಸ್ತು ಕ್ರಮ? ಕಳೆದ ಒಂದೂವರೆ ದಶಕಗಳಿಂದ ಮೋದಿ ವಿರುದ್ಧ ಅಸಹ್ಯಕರ, ಅಶ್ಲೀಲ ಮಾತುಗಳನ್ನು ಆಡುತ್ತಿದ್ದಾಗ ಕಾಂಗ್ರೆಸಿನ ಯಾವ ಸಮಿತಿಗಳಿಗೂ ಶಿಸ್ತು ಕ್ರಮ ಕೈಗೊಳ್ಳುವ ಮನಸ್ಸು ಬರಲೇ ಇಲ್ಲ. ಆದರೆ ಈಗ ಧಿಡೀರ್ ಶಿಸ್ತಿನ ನೆನಪಾಗಿಬಿಟ್ಟಿದೆ!
2002ರಿಂದಲೂ ಮೋದಿ ಸತತ 15 ವರ್ಷಗಳು ಎಲ್ಲ ಥರದ ಟೀಕೆ, ನಿಂದನೆ, ಬೈಗುಳ, ಅಸಭ್ಯ ಮಾತುಗಳಿಗೆ ಗುರಿಯಾಗುತ್ತಾ ಬಂದಿದ್ದಾರೆ. ಆಗೆಲ್ಲಾ ಕಾಂಗ್ರೆಸ್ ನರೇಂದ್ರ ಮೋದಿಯವರ ಸ್ಥಾನದಲ್ಲಿ ನಿಂತು ಅವರಿಗೇನನಿಸಬಹುದು ಎಂದು ಒಮ್ಮೆಯಾದರೂ ಯೋಚಿಸಲಿಲ್ಲ. ಆದರೆ ಈಗ ನೆನಪಾಯಿತೇ? ಗುಜರಾತ್ ಚುನಾವಣೆ ಅದನ್ನು ನೆನಪು ಮಾಡಿದೆ? ಅಮೆರಿಕದ ಕಪ್ಪುವರ್ಣೀಯ ಕವಯತ್ರಿ ಮಾಯಾ ಏಂಜೆಲೋ ಬರೆದ ಅವರ Still I’ll rise ಎಂಬ ಕವಿತೆಯನ್ನು ಬಹಳಷ್ಟು ಬಾರಿ ಹೇಳುತ್ತೇನೆ. ಏಕೆಂದರೆ ಅಂಥ ಸಂದರ್ಭ ಆಗಾಗ ಬರುತ್ತಿರುತ್ತದೆ.
You may write me down in history
With your bittier, twisted lies,
You may trod me in the very dirt
But still, like dust, I’ll rise.
Does my sassiness upset you?
Why are you beset with gloom?
‘Cause I walk like I’ve got oil wells
Pumping in my living room.
Just like moons and like suns,
With the certainty of tides,
Just like hopes springing high,
Still I’ll rise. Did you want to see me broken?
Bowed head and lowered eyes?
Shoulders falling down like teardrops.
Weakened by my soulful cries.
Does my haughtiness off end you?
Don’t you take it awful hard
‘Cause I laugh like I’ve got gold mines
Diggin’ in my own back yard.
You may shoot me with your words,
You may cut me with your eyes,
You may kill me with your hatefulness,
But still, like air, I’ll rise.
ಹೌದು, ಈ ಕವಿತೆಯನ್ನು ಓದಿದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಕಣ್ಣಮುಂದೆ ಬರುತ್ತಾರೆ. ಹಾಗೆಯೇ ಮೋದಿಯವರ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಮಾಯಾ ಏಂಜೆಲೋಳ ಈ ಕವಿತೆ ನೆನಪಾಗುತ್ತದೆ. ಆಕೆ ಬರೆದಿದ್ದು ವರ್ಣಭೇದ ನೀತಿಯ ವಿರುದ್ಧ, ಶ್ವೇತ ವರ್ಣೀಯರ ಮೇಲು-ಕೀಳೆಂಬ ಭಾವನೆಯನ್ನು ಧಿಕ್ಕರಿಸಿಯಾದರೂ ಅದರಲ್ಲಿನ ಬಹುತೇಕ ಪದ, ಪಂಕ್ತಿಗಳು ಮೋದಿಯವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬರೆದಂತೆ ಭಾಸವಾಗುತ್ತವೆ! ಅದರಲ್ಲೂ ಕವಿತೆಯ ಮೊದಲ ಪಲ್ಲವಿಯ ಮೊದಲೆರಡು ಸಾಲುಗಳಾದ You may write me down in history With your bitier, twisted lies ,  ಯಾರಿಗಾದರೂ ನೂರಕ್ಕೆ ನೂರರಷ್ಟು ಅನ್ವಯವಾಗುವುದೇ ಆದರೆ ಅದು ನರೇಂದ್ರ ಮೋದಿಯವರಿಗೆ ಮಾತ್ರ. ಕಳೆದ 15 ವರ್ಷಗಳಿಂದ, ಅಂದರೆ 2002ರಿಂದ ಮೋದಿಯವರ ವಿರುದ್ಧ ಮಾಡದ ಅಪವಾದ, ಆರೋಪಗಳೇ ಇಲ್ಲ. ಅವರನ್ನು ದೂಷಿಸುವಲ್ಲಿ ಬಳಸದೇ ಉಳಿದ ಕೆಟ್ಟ ಶಬ್ದಗಳೂ ಇಲ್ಲ. ಆದರೆ ಅದಕ್ಕಾಗಿ ಕಾಂಗ್ರೆಸ್ ಯಾರನ್ನೂ ಉಚ್ಛಾಟನೆ ಮಾಡಲೇ ಇಲ್ಲ!
ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ನಿಂದ ಕುಮ್ಮಕ್ಕು ಪಡೆದಿರುವ ಮಾಧ್ಯಮದ ಬಹುದೊಡ್ಡ ವರ್ಗ ಬಹಳ ಜತನದಿಂದ ಮೋದಿ ಚಾರಿತ್ರ್ಯವಧೆ ಕೆಲಸ ಮಾಡಿಕೊಂಡು ಬರುತ್ತಿದೆ. ಇಷ್ಟಾಗಿಯೂ ಅವರ ಉದ್ದೇಶ ಈಡೇರಿಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಚುನಾವಣೆಯಲ್ಲೂ ಮೂರನೇ ಎರಡರಷ್ಟು ಬಹುಮತದಿಂದ ಪುನರಾಯ್ಕೆಯಾಗುತ್ತಾ ಬಂದರು. ಅಷ್ಟು ಮಾತ್ರವಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ವಿರೋಧಿಗಳು ಮಾತ್ರವಲ್ಲ, ಸ್ವಪಕ್ಷೀಯ ಶತ್ರುಗಳನ್ನೂ ಮೆಟ್ಟಿ ಕಳೆದ 30 ವರ್ಷಗಳಲ್ಲಿ ಒಂದು ಪಕ್ಷ ಸ್ವಂತ ಶಕ್ತಿಯಿಂದ ಕೇಂದ್ರದಲ್ಲಿ ಅಧಿಕಾರ ಬಂದ ಕೀರ್ತಿಯನ್ನು ಬಿಜೆಪಿಗೆ ತಂದುಕೊಟ್ಟು ಪ್ರಧಾನಿಯಾದರು! ಇಷ್ಟಾಗಿಯೂ ಮಾಧ್ಯಮಗಳು ಹಾಗೂ ವಿರೋಧಿಗಳಿಂದ ಅವರ ಮೇಲಿನ ಆಕ್ರಮಣ ನಿಂತಿಲ್ಲ.
2012ರ ಗುಜರಾತ್ ಚುನಾವಣೆಗೆ ಮುನ್ನಾಾ ಸನ್ನಿವೇಶಕ್ಕೆ ಸ್ವಲ್ಪ ಹೋಗೋಣ. ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಿದ್ದು, 182 ಸದಸ್ಯ ಸಂಖ್ಯೆಯ ಸದನದಲ್ಲಿ ಮೋದಿ ಮತ್ತೆ ಬಹುಮತ ಪಡೆಯುವುದು ನೂರಕ್ಕೆ ನೂರರಷ್ಟು ಖಚಿತವಾಗಿತ್ತು. ಬಹುಮತಕ್ಕೆ 92 ಸೀಟುಗಳನ್ನು ಗೆದ್ದರೆ ಸಾಕು. ಆದರೆ 100ಕ್ಕೂ ಕಡಿಮೆ ಸ್ಥಾನಗಳು ಬಂದರೆ ಅದನ್ನು ಮೋದಿ ಪರಾಜಯ ಎಂದೇ ಬಿಂಬಿಸಲು ಯೋಚಿಸಿದರು. ಆ ಕಾರಣಕ್ಕಾಗಿಯೇ ಯಾವ ಮಟ್ಟಕ್ಕಾದರೂ ಇಳಿದು ಬಿಜೆಪಿ ಬಲಾಬಲವನ್ನು 100ಕ್ಕೂ ಕಡಿಮೆಗೊಳಿಸಲು ಕಾಂಗ್ರೆಸ್ ಹವಣಿಸಿತು. ಅದೇ ಸಂದರ್ಭದಲ್ಲಿ ‘ದಿ ಸಂಡೇ ಗಾರ್ಡಿಯನ್’ನಲ್ಲಿ ಮಾಧವ ನಳಪತ್ ಬರೆದ Congress plans sleaze campaign against Modi ಟೈಮ್ಸ್‌ ಬ್ಲಾಗ್‌ನಲ್ಲಿ ಮಿನಾಝ್ ಮರ್ಚೆಂಟ್ ಬರೆದ Target Modi ಹಾಗೂ ‘ದಿ ಇಂಟರ್ ನ್ಯಾಷನಲ್ ಹೆರಾಲ್ಡ್‌ ಟ್ರಿಬ್ಯೂನ್’ನ ಭಾರತೀಯ ಆವೃತ್ತಿಯಲ್ಲಿ ಆಕಾರ್ ಪಟೇಲ್ ಬರೆದ Spent guns target Modi ಲೇಖನಗಳನ್ನು ಇಂದಿಗೂ ಓದಿದರೆ ಮೋದಿಯವರನ್ನು ಹಣಿಯಲು ಕಾಂಗ್ರೆಸ್ ಎಂತೆಂಥಾ ಹೀನ ಹಾದಿ ಹಿಡಿದಿತ್ತು ಎಂಬುದು ಗೊತ್ತಾಗುತ್ತದೆ.
ಆ ಪರಂಪರೆಯನ್ನು ಮಣಿಶಂಕರ್ ಅಯ್ಯರ್ ಈ ಚುನಾವಣೆಯಲ್ಲಿ ಮುಂದುವರಿಸಿದ್ದ. ಆದರೆ ಕುಟುಂಬ ರಾಜಕಾರಣ ಮತ್ತೊಂದು ಯೋಚಿಸಿತು. ಅಯ್ಯರ್ ಉಚ್ಛಾಟನೆಗೊಂಡ. ಕಾಂಗ್ರೆಸ್ ಇತಿಹಾಸವನ್ನು ಅವಲೋಕಿಸಿದರೆ ಉಚ್ಛಾಟನೆಗೊಳ್ಳಬೇಕಾದವರ ಸಾಲೆಷ್ಟು ಉದ್ದವಿದೆ ಎನಿಸದೇ ಇರದು.  2014ರಲ್ಲಿ ಮೋದಿಯವರು ಪ್ರಧಾನಿಯಾಗಿದ್ದನ್ನು ಸಹಿಸಿಕೊಳ್ಳಲಾಗದ ಮಾಧ್ಯಮಗಳು ಮೊದಲು ಇನ್‌ಲರೆನ್ಸ್‌‌ನ ವರಾತ ತೆಗೆದವು. ಬಳಿಕ ರೋಹಿತ್ ವೇಮುಲ, ಅದಾದ ನಂತರ ಕನ್ಹಯ್ಯ ಕುಮಾರನೆಂಬ ಸೋಮಾರಿಯನ್ನು ಹೀರೋನಂತೆ ಬಿಂಬಿಸಿದವು. ಕೊನೆಗೆ ಹಾರ್ದಿಕ್ ಪಟೇಲ್, ಕೇಜ್ರಿವಾಲ್. ಎಲ್ಲಾ ಸಾಕಾಗಿ ಸಭ್ಯತೆ, ಘನತೆಯ ಪ್ರಶ್ನೆಗಳನ್ನೆತ್ತಿಕೊಂಡು ಕುಟುಕಲು ಪ್ರಯತ್ನಿಸುತ್ತಿವೆ. ಆದರೆ ಮೋದಿ ಜಗ್ಗುವ ವ್ಯಕ್ತಿಯಲ್ಲ.
ಸಾಮಾನ್ಯವಾಗಿ ಎಲ್ಲ ಯಶಸ್ವಿ ರಾಜಕಾರಣಿಗಳ ಹಿಂದೆ ಒಂದು ಚಾಣಾಕ್ಷ ಮಿದುಳು ಅಥವಾ ಒಳ್ಳೆಯ ಸಲಹೆಗಾರರು ಇರುತ್ತಾರೆ. ಮಹಾರಾಜ ಚಂದ್ರಗುಪ್ತನ ಹಿಂದೆ ಚಾಣಕ್ಯ, ಹಕ್ಕ-ಬುಕ್ಕರ ಹಿಂದೆ ಯತಿಶ್ರೇಷ್ಠ ವಿದ್ಯಾರಣ್ಯರು, ಶಿವಾಜಿ ಹಿಂದೆ ಸಮರ್ಥ ರಾಮದಾಸರು, ವಿವೇಕಾನಂದರ ಹಿಂದೆ ರಾಮಕೃಷ್ಣ ಪರಮಹಂಸರು, ನೆಹರು ಹಿಂದೆ ಗಾಂಧಿ ಇದ್ದಂತೆ. ಈಗಿನ ರಾಜಕಾರಣಿಗಳನ್ನು ತೆಗೆದುಕೊಂಡರೂ ಮಾಯಾವತಿ ಹಿಂದೆ ಸತೀಶ್ಚಂದ್ರ ಮಿಶ್ರಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂದೆ ಪ್ಯಾರಿಮೋಹನ್ ಮಹಾಪಾತ್ರ ಇದ್ದಾರೆ. ಮುಲಾಯಂ ಸಿಂಗ್ ಹಿಂದೆ ಜ್ಞಾನೇಶ್ವರ್ ಮಿಶ್ರಾ, ತದನಂತರ ಅಮರ್‌ಸಿಂಗ್ ಇದ್ದರು. ಎನ್.ಟಿ. ರಾಮ್‌ರಾವ್ ಹಾಗೂ ಚಂದ್ರಬಾಬು ನಾಯ್ಡು ಹಿಂದೆ ರಾಮೋಜಿರಾವ್ ತಲೆ ಕೆಲಸ ಮಾಡುತ್ತಿದ್ದರೆ, ಕರುಣಾನಿಧಿ ಕೂಡ ಎಸ್. ಗುಹನ್ ಹಾಗೂ ಪ್ರೊ. ನಾಗನಾಥನ್ ಅವರನ್ನು ನೆಚ್ಚಿಕೊಂಡಿದ್ದರು.
ಲಾಲು ಪ್ರಸಾದ್ ಯಾದವ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವರ ಬೆನ್ನಹಿಂದೆ ಇದ್ದವರು ಹಾಗೂ ನಿಷ್ಠೆ ಬದಲಿಸಿ ನಿತೀಶ್ ಕುಮಾರ್ ಹಿಂದೆ ಈಗ ಇರುವುದು ಶಿವಾನಂದ್ ತಿವಾರಿ. ಜಯಲಲಿತಾ ಹಿಂದೆ ಚೋ. ರಾಮಸ್ವಾಮಿ, ಅಟಲ್ ಬಿಹಾರಿ ವಾಜಪೇಯಿಯವರ ಹಿಂದೆ ಬ್ರಜೇಶ್ ಮಿಶ್ರಾ. ಈ ನಾಯಕರು ತಮ್ಮ ಚಾಣಕ್ಯರನ್ನು ಕೇಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಅವರ ಒಂದೊಂದು ನಡೆಯ ಹಿಂದೆಯೂ ಈ ಚಾಣಕ್ಯರ ತಲೆ ಕೆಲಸ ಮಾಡಿರುತ್ತದೆ. ಹಾಗೆಯೇ ಮಣಿಶಂಕರನ ಹಿಂದಿನ ಟೀಕೆಗಳ ಹಿಂದೆ ಇದ್ದವರು ಇದೇ ಕಾಂಗ್ರೆಸಿನ ದೊಡ್ಡ ತಲೆಗಳು!
ಆದರೆ ಚಾಣಕ್ಯ-ಚಂದ್ರಗುಪ್ತ ಒಬ್ಬನೇ ವ್ಯಕ್ತಿಯಲ್ಲಿದ್ದರೆ ಆತ ನರೇಂದ್ರ ಮೋದಿಯಾಗುತ್ತಾನೆ! ಹಾಗಾಗಿಯೇ ನೀವು ಘನತೆಯ ಗೆರೆ ದಾಟಿದರೆ, ಅದಕ್ಕೆ ದೊರೆಯುವ ಪ್ರತಿಕ್ರಿಯೆಯನ್ನೂ ಕೇಳಿಸಿಕೊಳ್ಳುವ ಧೈರ್ಯ ನಿಮಗಿರಬೇಕಾಗುತ್ತದೆ. ಮೋದಿಯವರಿಗೆ ಅದಿದೆ. ಇದುವರೆಗಿನ ಟೀಕೆಗಳೇ ಅವರನ್ನು ಬೆಳೆಸಿತು. ಕಾಂಗ್ರೆಸಿಗೆ ಅದು ತಡವಾಗಿ ಅರಿವಾಗಿದೆಯೇನೋ ಎನಿಸುತ್ತಿದೆ. ಆದರೆ ಒಂದಂತೂ ಸತ್ಯ. ನೀಚ ಹೇಳಿಕೆ ನೀಡಿದ ಮಣಿಶಂಕರ್ ಅಯ್ಯರ್‌ನನ್ನು ಉಚ್ಛಾಟಿಸಿದರೂ ಕಾಂಗ್ರೆಸ್ ಶುದ್ಧವಾಗುವುದಿಲ್ಲ. ಎಂದೂ ತೊಳೆದುಹಾಕಲಾರದ ಮಾತುಗಳನ್ನು ಕಾಂಗ್ರೆಸ್ ಮೋದಿ ವಿರುದ್ಧ ಆಡಿದೆ. ಮೋದಿ ಗೆಲ್ಲುತ್ತಾ ಹೋದಂತೆ ಆ ನೆನಪುಗಳು ಹಸಿರಾಗಿರುತ್ತವೆ.

Comments are closed.