Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಹಾತ್ಮ ಗಾಂಧಿಗೇ ಸೊಪ್ಪುಹಾಕದ ಜಿನ್ನಾ ರತ್ತಿಗೆ ಸೋತಿದ್ದರು!

ಮಹಾತ್ಮ ಗಾಂಧಿಗೇ ಸೊಪ್ಪುಹಾಕದ ಜಿನ್ನಾ ರತ್ತಿಗೆ ಸೋತಿದ್ದರು!

JINNAH ಮೈ ಬ್ರದರ್, ದಿ ಮ್ಯಾನ್ ಹೂ ಡಿವೈಡೆಡ್ ಇಂಡಿಯಾ,  100 ಗ್ರೇಟ್ ನೇಮ್ಸ್ ಫ್ರಮ್ ಇಂಡಿಯಾಸ್ ಪಾಸ್ಟ್,  ಇಂಡಿಯಾ ವಿನ್ಸ್ ಫ್ರೀಡಂ, ಫ್ರೀಡಂ ಅಟ್ ಮಿಡ್‌ನೈಟ್, ದಿ ಟ್ರಯಲ್ ಆಫ್ ಭಗತ್ ಸಿಂಗ್, ದಿ ಐಡಿಯಾ ಆಫ್ ಪಾಕಿಸ್ತಾನ ಆಂಡ್ ಇಕ್ಬಾಲ್, ಸ್ಟಡೀಸ್ ಇನ್ ಇಸ್ಲಾಮಿಕ್ ಕಲ್ಚರ್ ಇನ್ ದಿ ಇಂಡಿಯನ್ ಎನ್ವಿರಾನ್‌ಮೆಂಟ್, ವೈ ಐ ಸಪೋರ್ಟೆಡ್ ದಿ ಎಮರ್ಜೆನ್ಸಿ, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಷನ್,  ಇಂಡಿಯನ್ ಕಾಂಟ್ರೊವರ್ಸೀಸ್, ಫ್ಯಾಕ್ಟ್ಸ್ ಆರ್ ಫ್ಯಾಕ್ಟ್ಸ್; ದಿ ಅನ್ ಟೋಲ್ಡ್ ಹಿಸ್ಟರಿ ಆಫ್ ಇಂಡಿಯಾಸ್ ಪಾರ್ಟಿಷನ್, ಬಿಸ್ಮಾರ್ಕ್ ಆಫ್ ಇಂಡಿಯಾ, ಮೆನ್ ಹೂ ರೂಲ್ಡ್ ಇಂಡಿಯಾ, ಕೌಂಟ್‌ಡೌನ್ ಟು ಪಾರ್ಟಿಷನ್, ಮೆನ್ ಐ ಮೆಟ್, ಗಾಂಧಿ ಆಂಡ್ ಅನಾರ್ಕಿ, ಅಂಡರ್‌ಸ್ಟಾಂಡಿಂಗ್ ದಿ ಮುಸ್ಲಿಂ ಮೈಂಡ್, ರೋಝಸ್ ಇನ್ ಡಿಸೆಂಬರ್….

ಪ್ರಸ್ತುತ ಭುಗಿಲೆದ್ದಿರುವ ಜಿನ್ನಾ ಮೇಲಿನ ಜಸ್ವಂತ್ ಸಿಂಗ್ ಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಇತಿಹಾಸದ ಮೇಲೆ ಒಂದು Dispassionate  ದೃಷ್ಟಿಹಾಯಿಸಬೇಕು, ನಮ್ಮ ಕಿಸೆಯಿಂದ ಒಂದು ಅಕ್ಷರವನ್ನೂ ಹಾಕದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿ ರುವ ಸತ್ಯಾಸತ್ಯತೆಯನ್ನು ಯಥಾವತ್ತಾಗಿ ಕೊಡಬೇಕು, ಜನ ಮುಕ್ತ ಮನಸ್ಸಿನಿಂದ ತಣ್ಣಗೆ ಕುಳಿತು ಇತಿಹಾಸವನ್ನು ಓದಬೇಕು ಎಂಬ ದೃಷ್ಟಿಯಿಂದ ಡಾ. ಜಿ.ಬಿ. ಹರೀಶ್ ಮತ್ತು ನಾನು ಮೇಲಿನ ೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಹರವಿಕೊಂಡು ಕುಳಿತಾಗ ಒಂದೊಂದು ಪುಸ್ತಕ, ಪುಟಗಳೂ ಇತಿಹಾಸದ ವಿವಿಧ ಮಗ್ಗಲುಗಳನ್ನು ತೆರೆದಿಡುತ್ತಾ ಹೋದವು. “ಸಾರೇ ಜಹಾಂಸೆ ಅಚ್ಛಾ, ಯೇ ಹಿಂದೂಸ್ಥಾನ್ ಹಮಾರಾ” ಎಂಬ ದೇಶಪ್ರೇಮ ಉಕ್ಕಿಸುವ ಗೀತೆ ಬರೆದಿದ್ದ ಸರ್ ಮಹಮದ್ ಇಕ್ಬಾಲ್ ಹೇಗೆ ದೇಶವನ್ನೇ ಒಡೆಯುವ ಹುನ್ನಾರಕ್ಕೆ ಭಾಷ್ಯ ಬರೆದರು, ಜಿನ್ನಾಗೆ ವಿಷಪ್ರಾಶನ ಮಾಡಿಸಿದರು ಎಂಬ ಸತ್ಯ ಬೆತ್ತಲಾಗಿ ನಿಂತಿತು. ಇತ್ತ ಬದುಕಿರುವವರೆಗೂ ಬಾಲಗಂಗಾಧರ ತಿಲಕರು ನಮ್ಮ ಸ್ವಾತಂತ್ರ್ಯ ಹೋರಾಟದ ಮೇರು ನಾಯಕರಾಗಿದ್ದರು. ಅವರಿರುವವರೆಗೂ ಗಾಂಧೀಜಿ ಕಾಂಗ್ರೆಸ್‌ನ  ನಾಯಕರುಗಳಲ್ಲಿ ಒಬ್ಬರಾಗಿದ್ದರು. 1920ರಲ್ಲಿ ಯಾವಾಗ ತಿಲಕರು ತೀರಿಕೊಂಡರೋ ಗಾಂಧೀಜಿ ಬಹಳ Convenient  ಆಗಿ ಆ ಸ್ಥಾನಕ್ಕೆ ಬಂದು ಕುಳಿತುಕೊಂಡರು. ಗಾಂಧೀಜಿಗೆ ತಾನೇ ಮೇರು, ಏಕಮೇವ ನಾಯಕನೆಂಬ ಪಟ್ಟ ಬೇಕಿತ್ತು, ರಾಜಕೀಯ ಅಧಿಕಾರದ ಆಸೆ ಇರಲಿಲ್ಲ. ಜವಾಹರಲಾಲ್ ನೆಹರು ಸ್ವಾತಂತ್ರ್ಯಾ ನಂತರದ ಅಧಿಕಾರದ ಮೇಲೆ ಕಣ್ಣಿಟ್ಟಿದ್ದರು. ಹಾಗಾಗಿ ಗಾಂಧಿ-ನೆಹರು ನಡುವೆ ತಾಕಲಾಟವಿರಲಿಲ್ಲ. ಇತ್ತ ಗಾಂಧೀಜಿ ಹಾಗೂ ನೆಹರು ಅವರಂತೆ ಮಹಮದ್ ಅಲಿ ಜಿನ್ನಾ ಪದವಿಯಿಂದ ಮಾತ್ರ ಬ್ಯಾರಿಸ್ಟರ್ ಆಗಿರಲಿಲ್ಲ. ಅವರು ಕೋರ್ಟ್ ಹಾಲ್‌ನಲ್ಲಿ ವಾದಕ್ಕೆ ನಿಂತರೆ ನ್ಯಾಯಾಧೀಶರೇ ತಲೆದೂಗುವಂತಿರುತ್ತಿತ್ತು. ಅದು ಶೋಕಿ ಇರಬಹುದು, ಮಾತುಗಾರಿಕೆ ಆಗಿರಬಹುದು, ಇಂಗ್ಲಿಷ್ ಮೇಲಿನ ಪ್ರಭುತ್ವವಿರಬಹುದು, ಜಿನ್ನಾಗೆ ಸರಿಸಮನಾಗಿ ನಿಲ್ಲುವ ತಾಕತ್ತು ಗಾಂಧೀಜಿ-ನೆಹರು ಇಬ್ಬರಿಗೂ ಇರಲಿಲ್ಲ. ಹಾಗೆಂದ ಮೇಲೆ ಜಿನ್ನಾಗೂ ನಾಯಕತ್ವ, ರಾಜಕೀಯ ಅಧಿಕಾರದ ಆಸೆ ಇರದೇ ಹೋದೀತೆ? ಎಲ್ಲಿ ತಮ್ಮ ಉದ್ದೇಶಕ್ಕೆ ಅಡ್ಡಿಯಾದಾರೋ ಎಂಬ ಭಯದಿಂದ ಗಾಂಧಿ-ನೆಹರು ಸೇರಿ ಜಿನ್ನಾರನ್ನು ಕಾಂಗ್ರೆಸ್‌ನಿಂದ ಏಕೆ ದೂರತಳ್ಳಿರಬಾರದು? ಅಷ್ಟಕ್ಕೂ 1906ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯಾದಾಗ ಒಂದು ಕೋಮಿನ ಸಂಘಟನೆಗೆ ಸೇರಲು ನಿರಾಕರಿಸುತ್ತಾ, ‘ನಾನು ಮೊದಲು ಭಾರತೀಯ’ ಎಂದಿದ್ದ ಜಿನ್ನಾ ಕೊನೆಗೆ ಮುಸ್ಲಿಮರ ನಾಯಕನಾಗಿದ್ದೇಕೆ? ಅಥವಾ ರಾಷ್ಟ್ರವಾದಿ ಜಿನ್ನಾರನ್ನು ನೆಹರು-ಗಾಂಧಿ ಮುಸ್ಲಿಂ ನಾಯಕನನ್ನಾಗಿ ಮಾಡಿದರೇ? ಪವರ್ ಪಾಲಿಟಿಕ್ಸ್‌ನಿಂದಾಗಿ ನೊಂದುಕೊಂಡ ಜಿನ್ನಾ, ಗಾಂಧಿ-ನೆಹರು ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಧರ್ಮವನ್ನು ಕೈಗೆತ್ತಿಕೊಂಡರೆ? ಅದು ದೇಶವನ್ನೇ ಒಡೆಯುವ ಮಟ್ಟಕ್ಕೆ ಹೋಯಿತೆ?

ಅದನ್ನೆಲ್ಲ ಪುಸ್ತಕದಲ್ಲಿ ಓದಿಕೊಳ್ಳುವಿರಂತೆ…

ಆದರೆ  “ರತ್ತಿ ಜಿನ್ನಾ: ದಿ ಸ್ಟೋರಿ, ಟೋಲ್ಡ್  ಆಂಡ್ ಅನ್‌ಟೋಲ್ಡ್”, “ರತ್ತಿ ಜಿನ್ನಾ: ದಿ ಸ್ಟೋರಿ ಆಫ್ ಎ ಗ್ರೇಟ್ ಫ್ರೆಂಡ್‌ಶಿಪ್” ಮತ್ತು “ರೋಝಸ್ ಇನ್ ಡಿಸೆಂಬರ್”- ಈ ಮೂರು ಪುಸ್ತಕಗಳಲ್ಲಿರುವ ಅಮರ ಪ್ರೇಮವೊಂದರ ಬಗ್ಗೆ ಹೇಳಬೇಕೆನಿಸಿದೆ. ಅವುಗಳನ್ನು ಓದುತ್ತಾ ಹೋದಂತೆ ಸುಖಾಂತ್ಯ ಕಾಣದ ಒಂದು ಪ್ರೇಮ ಕಥೆಯನ್ನು ಬಿಚ್ಚಿಟ್ಟವು. ಅದರಲ್ಲೂ ಜಿನ್ನಾ ಪತ್ನಿ ಮರಣಶಯ್ಯೆಯಲ್ಲಿ ಮಲಗಿಕೊಂಡು ಬರೆದ ಕೊನೆಯ ಪತ್ರ ಕಣ್ಣೀರು ತರಿಸುತ್ತದೆ.

ಹೌದು, ಸೌತ್ ಆಫ್ರಿಕಾದಲ್ಲಿ ಸತ್ಯಾಗ್ರಹ ಮಾಡಿ, ಅಷ್ಟೋ- ಇಷ್ಟೋ ಹೆಸರು ಗಳಿಸಿಕೊಂಡು ೧೯೧೫ರಲ್ಲಿ ಗಾಂಧೀಜಿ ಭಾರತಕ್ಕೆ ಬಂದಿಳಿಯುವ ವೇಳೆಗೆ ಮಹಮದ್ ಅಲಿ ಜಿನ್ನಾ ಭಾರತದಲ್ಲಿ ದೊಡ್ಡ ಹೆಸರು ಗಳಿಸಿಕೊಂಡಿದ್ದರು. ಬಾಲ ಗಂಗಾಧರ ತಿಲಕರ ಪ್ರೀತಿಗೂ ಪಾತ್ರರಾಗಿದ್ದರು. 1913ರಲ್ಲಿ ಮುಸ್ಲಿಂ ಲೀಗ್ ಸೇರಿ ಹಿಂದೂ-ಮುಸ್ಲಿಮರ ಮಧ್ಯೆ ಏಕತೆಯನ್ನು ಮೂಡಿಸಿ ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡಲು ಅಣಿಗೊಳಿಸುತ್ತಿದ್ದರು. “ಹಿಂದೂ-ಮುಸ್ಲಿಂ ಏಕತೆಯ ರಾಯಭಾರಿ” ಎಂಬ ಹೆಸರು ಗಳಿಸಿಕೊಂಡಿದ್ದರು. ಕಾಂಗ್ರೆಸ್‌ನ ಚರ್ಚೆ, ಸಭೆಗಳಲ್ಲೂ ಜಿನ್ನಾಗೆ ಆಹ್ವಾನ, ಮಾತಿಗೆ ಮನ್ನಣೆ ಇರುತ್ತಿತ್ತು. 1916ರಲ್ಲಿ ಜಿನ್ನಾ ಮುಸ್ಲಿಂ ಲೀಗ್‌ನ ಅಧ್ಯಕ್ಷರಾದರು, ಇತ್ತ ಕಾಂಗ್ರೆಸ್ ನಾಯಕ ಮೋತಿಲಾಲ್ ನೆಹರು ಅಲಹಾಬಾದ್‌ನಲ್ಲಿದ್ದ ತಮ್ಮ ಭವ್ಯ ಬಂಗಲೆಯಲ್ಲಿ ಸಭೆಯೊಂದನ್ನು ಏರ್ಪಡಿಸಿದರು. ಜಿನ್ನಾ ಅವರಿಗೂ ಆಹ್ವಾನ ನೀಡಿದರು. ಆ ಕಾಲದಲ್ಲಿ ಸರ್ ದಿನ್ಷಾ ಮಾನೋಕ್‌ಜಿ ಪೆಟಿಟ್ ಅಂದರೆ ಬಾಂಬೆಯಲ್ಲಿ ದೊಡ್ಡ ಹೆಸರು. ಅತ್ಯಂತ ಶ್ರೀಮಂತ ಪಾರ್ಸಿಗಳಲ್ಲಿ ಒಬ್ಬರಾಗಿದ್ದರು. ಬಾಂಬೆಯಲ್ಲೇ ವಕೀಲಿ ವೃತ್ತಿ ಮಾಡುತ್ತಿದ್ದ ಜಿನ್ನಾ-ದಿನ್ಷಾ ನಡುವೆ ಆಪ್ತ ಸ್ನೇಹವೂ ಇತ್ತು. ಸರ್ ದಿನ್ಷಾ ಬೇಸಿಗೆ ಬಂತೆಂದರೆ ತಮ್ಮ ವಾಸ್ತವ್ಯವನ್ನು ಡಾರ್ಜಿಲಿಂಗ್‌ಗೆ ಸ್ಥಳಾಂತರಿಸುತ್ತಿದ್ದರು. ಅಲ್ಲೊಂದು ಸುಂದರ ಮನೆಯಿತ್ತು. ಮೋತಿಲಾಲ್ ನೆಹರು ಕರೆದಿದ್ದ ಸಭೆಗೆಂದು ಅಲಹಾಬಾದ್‌ಗೆ ತೆರಳಿದ್ದ ಜಿನ್ನಾಗೆ ಡಾರ್ಜಿಲಿಂಗ್‌ಗೆ ಬಂದು ಒಂದಷ್ಟು ಕಾಲ ಇದ್ದು ಹೋಗಿ ಎಂದು ಸರ್ ದಿನ್ಷಾ ಆಹ್ವಾನ ನೀಡಿದರು.

ಹದಿನಾರರ ಹರಯದ ರತ್ತಿಬಾಯಿಯನ್ನು ಜಿನ್ನಾ ಮೊಟ್ಟ ಮೊದಲು ನೋಡಿದ್ದೇ ಅಲ್ಲಿ!

ರತ್ತಿಬಾಯಿ ಸರ್ ದಿನ್ಷಾ ಪೆಟಿಟ್ ಅವರ ಏಕಮಾತ್ರ ಪುತ್ರಿ.  ಪ್ರೀತಿಯಿಂದ ರತ್ತಿ ಎನ್ನುತ್ತಿದ್ದರು. ಆಕೆ ಜನಿಸಿದ್ದು 1900, ಫೆಬ್ರವರಿ 20ರಂದು. ರತ್ತಿ ತುಂಬಾ ಚೂಟಿ. ನೋಡುವುದಕ್ಕೂ ಅಷ್ಟೇ ಸುಂದರ. ಸಂಸ್ಕಾರವಂತೆ. ವಯಸ್ಸನ್ನು ಮೀರಿದ ಬುದ್ಧಿ ವಂತಿಕೆ. ಕವಿತೆಗಳೆಂದರೆ ಪ್ರಾಣ. ಚಿಕ್ಕ ವಯಸ್ಸಿಗೇ ಚೆನ್ನಾಗಿ ಓದಿಕೊಂಡಿದ್ದಳು. ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದಳು. ಕಟ್ಟಾ ರಾಷ್ಟ್ರವಾದಿಯಾಗಿದ್ದಳು. ಇತ್ತ ಜಿನ್ನಾಗೆ ಅದಾಗಲೇ ಮದುವೆಯಾಗಿತ್ತು. ಗ್ರಹಾಮ್ಸ್ ಶಿಪ್ಪಿಂಗ್ ಆಂಡ್ ಟ್ರೇಡಿಂಗ್ ಕಂಪನಿಯಲ್ಲಿ ಅಪ್ರೆಂಟಿಸ್‌ಶಿಪ್ ಮಾಡಲು 1892ರಲ್ಲಿ ಲಂಡನ್‌ಗೆ ತೆರಳುವಾಗಲೇ 16 ವರ್ಷದ ಜಿನ್ನಾಗೆ 14 ವರ್ಷದ ಎಮಿಬಾಯಿ ಜತೆ ವಿವಾಹವಾಗಿತ್ತು. ಆದರೆ ಜಿನ್ನಾ ಲಂಡನ್‌ಗೆ ಹೋಗಿ 8 ತಿಂಗಳಾಗುವಷ್ಟರಲ್ಲೇ ಇತ್ತ ಭಾರತದಲ್ಲಿದ್ದ ಪತ್ನಿ ಎಮಿಬಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಎಲ್ಲಿ ಬ್ರಿಟನ್ನಿನ ಬಿಳಿ ತೊಗಲಿನ ಹುಡುಗಿಯನ್ನು ಕಟ್ಟಿಕೊಳ್ಳುತ್ತಾನೋ ಎಂಬ ಹೆದರಿಕೆಯಿಂದ ಹಠಹಿಡಿದ ಅಮ್ಮನ ಮಾತಿಗೆ ಕಟ್ಟುಬಿದ್ದು ವಿವಾಹವಾಗಿದ್ದ ಕಾರಣ ಹಾಗೂ ಆಕೆಯ ಜತೆ ಕಳೆದಿದ್ದು ಕೆಲವು ವಾರಗಳಷ್ಟೇ ಆಗಿದ್ದರಿಂದ ಎಮಿ ಅಗಲಿಕೆ ಜಿನ್ನಾಗೆ ಅಷ್ಟಾಗಿ ನೋವು ತರಲಿಲ್ಲ. ಮಿಗಿಲಾಗಿ ಜಿನ್ನಾ ಆಕೆಯನ್ನೆಂದೂ ಪ್ರೀತಿಸಿದವರಲ್ಲ. ಒಂದು ಹೆಣ್ಣನ್ನು ಪ್ರೀತಿಸುವ ಜಾಯಮಾನವೂ ಅವರದ್ದಾಗಿರಲಿಲ್ಲ. ಅಪ್ರೆಂಟಿಸ್‌ಶಿಪ್‌ಗೆಂದು ಹೋಗಿ ಬ್ಯಾರಿಸ್ಟರ್ ಪದವಿಯೊಂದಿಗೆ ಬ್ರಿಟನ್‌ನಿಂದ ಹಿಂದಿರುಗಿದ ಮೇಲೂ ವೃತ್ತಿ ಮತ್ತು ಅದರ ಯಶಸ್ಸಿನಲ್ಲೇ ಎಲ್ಲವನ್ನೂ ಕಂಡುಕೊಳ್ಳಲಾರಂಭಿಸಿದ್ದ ಜಿನ್ನಾ ವೈಯಕ್ತಿಕ ಬದುಕಿನ ಬಗ್ಗೆಯೇ ಮರೆತುಬಿಟ್ಟಿದ್ದರು. ಅಂತಹ ಜಿನ್ನಾ ಡಾರ್ಜಿಲಿಂಗ್‌ನ ಸುಂದರ ಪ್ರಕೃತಿಯ ಮಧ್ಯೆ ಅಪ್ಸರೆಯಂತಿದ್ದ ರತ್ತಿಯ ಬಾಹ್ಯ ಹಾಗೂ ಬೌದ್ಧಿಕ ಸೌಂದರ್ಯಕ್ಕೆ ಸೋತುಹೋಗಿದ್ದರು!

ಆಗ ಪತ್ನಿ ವಿರಹಿತ ಜಿನ್ನಾಗೆ 39 ವರ್ಷ, ರತ್ತಿಗೆ 16!!

Love has no logic ಅನ್ನುವ ಹಾಗೆ ವಯಸ್ಸಿನ ಅಂತರ ಪ್ರೀತಿಗೆ ಅಡ್ಡಿಯಾಗಲಿಲ್ಲ. ಆಕೆ ಜಿನ್ನಾರನ್ನು “ಜೆ”(J) ಎಂದು ಕರೆಯಲಾರಂಭಿಸಿದಳು. ಜಿನ್ನಾ ಕೂಡ ತಮ್ಮ ಹೆಸರನ್ನು ಮಹಮದ್ ಅಲಿ ಜಿನ್ನಾ ಬದಲು, ‘ಎಂ.ಎ. ಜಿನ್ನಾ’ ಎಂದು ಬದಲಾಯಿಸಿಕೊಂಡಿದ್ದರು. ಹಲವಾರು ವಿಷಯಗಳಲ್ಲಿ ಆಸಕ್ತಿ ಹೊಂದಿದ್ದ ರತ್ತಿ, ಜಿನ್ನಾ ಜತೆ ರಾಜಕೀಯ, ಜೀವನ ಶೈಲಿ ಮುಂತಾದುವುಗಳ ಬಗ್ಗೆ ಚರ್ಚೆ ನಡೆಸಲಾರಂಭಿಸಿದಳು. ಖ್ಯಾತ ವಕೀಲರಾಗಿದ್ದ, ಉರ್ದುಗಿಂತ ಇಂಗ್ಲಿಷ್‌ನಲ್ಲೇ ಚೆನ್ನಾಗಿ ಮಾತನಾಡುತ್ತಿದ್ದ ಜಿನ್ನಾ ಮಾತಿಗೆ ಕುಳಿತರೆ ಕಡಿಮೆಯೇ! ಷೇಕ್ಸ್‌ಪಿಯರ್ ನಾಟಕಗಳ ಬಗ್ಗೆ ಗೀಳು ಅಂಟಿಸಿಕೊಂಡಿದ್ದ ಜಿನ್ನಾಗೆ ನಟನಾಗಬೇಕೆಂಬ ಆಸೆಯಿತ್ತು. ಲಂಡನ್‌ನಲ್ಲಿದ್ದಾಗ ನಾಟಕಗಳಲ್ಲಿ ಪಾತ್ರಗಳನ್ನೂ ಮಾಡಿದ್ದರು.  ಇಬ್ಬರಲ್ಲೂ ಸಮಾನ ಆಸಕ್ತಿಗಳಿದ್ದವು. ಮೋಹ, ವೈಚಾರಿಕ ಸಹಮತ, ಬ್ರಿಟಿಷ್ ಜೀವನಶೈಲಿಯ ಬಗೆಗಿನ ಆಸಕ್ತಿ ಇಬ್ಬರನ್ನೂ ಹತ್ತಿರಕ್ಕೆ ತಂದವು. ಆದರೆ ಸ್ನೇಹಿತರಾದ ಸರ್ ದಿನ್ಷಾ ಏನಂದುಕೊಂಡಾರೋ ಎಂಬ ಭಯ. ಒಂದು ದಿನ ಗೋಜಲು ಗೋಜಲಾಗಿದ್ದ ಪ್ರಶ್ನೆಯೊಂದನ್ನು ಕೇಳಿದರು.

ಜಿನ್ನಾ: ಅಂತರ್ ಧರ್ಮೀಯ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸರ್ ದಿನ್ಷಾ: ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಸಂಘರ್ಷದ ಹಿನ್ನೆಲೆಯಲ್ಲಿ ಅದೊಂದು ಅದ್ಭುತ ಪರಿಹಾರ!

ಅಹಾ! ಜಿನ್ನಾಗೆ ಅದಕ್ಕಿಂತ ಸದವಕಾಶ ಇನ್ನೆಲ್ಲಿಂದ ಸಿಕ್ಕೀತು! ನಿಮ್ಮ ಮಗಳನ್ನು ನನಗೆ ವಿವಾಹ ಮಾಡಿಕೊಡಿ ಎಂದು ಕೇಳಿಯೇ ಬಿಟ್ಟರು!! ದಿನ್ಷಾ ದಂಗಾಗಿ ಹೋದರು. ಮರು ಕ್ಷಣದಲ್ಲೇ ಕೆಂಡಾಮಂಡಲವಾದರು. ಇನ್ನೂ ಅಪ್ರಾಪ್ತ ವಯಸ್ಕಳಾಗಿರುವ ತನ್ನ ಮಗಳನ್ನು ಭೇಟಿಯಾಗದಂತೆ ಕೋರ್ಟ್‌ನಿಂದ ತಡೆಯಾe (Injunction) ತಂದರು. ಆದರೆ ರತ್ತಿ-ಜಿನ್ನಾ ಪ್ರೇಮಕಥನ ಕೊನೆಯಾಗಲಿಲ್ಲ. ಈ ಘಟನೆ ನಡೆದು ಎರಡು ವರ್ಷದವರೆಗೂ ಇಬ್ಬರೂ ಸುಮ್ಮನಿದ್ದರು. ಹದಿನೆಂಟು ವರ್ಷ ತುಂಬುತ್ತಲೇ ಮನೆ ಯಿಂದಲೇ ಹೊರ ನಡೆದ ರತ್ತಿ ಇಸ್ಲಾಂಗೆ ಮತಾಂತರಗೊಂಡು 1918, ಏಪ್ರಿಲ್ 18ರಂದು 42 ವರ್ಷದ ಜಿನ್ನಾರನ್ನು ವರಿಸಿದಳು. ಇಬ್ಬರ ಮಧ್ಯೆ ವಯಸ್ಸಿನಲ್ಲಿ 24 ವರ್ಷ ವ್ಯತ್ಯಾಸವಿದ್ದರೂ ತುಂಬ ಖುಷಿಯಿಂದಲೇ ಹೊಸಜೀವನ ಆರಂಭಿಸಿದರು. ಎಲ್ಲ ಪಾರ್ಟಿಗಳಲ್ಲೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಮುಸ್ಲಿಮನನ್ನು ಮದುವೆಯಾದಳೆಂಬ ಕಾರಣಕ್ಕೆ ಕುಟುಂಬ ವರ್ಗ ಹಾಗೂ ಬಾಂಬೆಯ ಪಾರ್ಸಿ ಸಮುದಾಯ ರೊಚ್ಚಿಗೆದ್ದು ರತ್ತಿಯನ್ನು ಅಘೋಷಿತವಾಗಿ ಬಹಿಷ್ಕರಿಸಿತು ಎಂಬ ತೊಡಕನ್ನು ಬಿಟ್ಟರೆ ಇಬ್ಬರ ನಡುವೆ ಯಾವುದೇ ಸಮಸ್ಯೆಗಳಿರಲಿಲ್ಲ. ಶ್ರೀಮಂತ ಕುಟುಂಬದಿಂದ ಬಂದಿದ್ದ ರತ್ತಿಯ ಸ್ವಾತಂತ್ರ್ಯಕ್ಕೆ ಜಿನ್ನಾ ಎಂದೂ ಅಡ್ಡವಾಗಲಿಲ್ಲ. ರತ್ತಿ ಕೂಡ ಪತಿಯ ರಾಜಕೀಯ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತನ್ನ ಕೈಲಾದ ಸಹಕಾರ, ಪ್ರೋತ್ಸಾಹ ನೀಡತೊಡಗಿದಳು. 1920ರಲ್ಲಿ ನಾಗಪುರದಲ್ಲಿ ನಡೆದ  ಕಾಂಗ್ರೆಸ್ ಅಧಿವೇಶನಕ್ಕೆ ಪತಿಯ ಜತೆ ಆಕೆ ಕೂಡ ಬಂದಿದ್ದಳು. 1925ರ ಬಾವ್ಲಾ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ನಿರ್ದೋಷಿಯೆಂದು ಸಾಬೀತುಪಡಿಸಲು ಬಾಂಬೆ ಹೈಕೋರ್ಟ್ ನಲ್ಲಿ ಜಿನ್ನಾ ಮಾತಿಗೆ ನಿಂತಾಗ ರತ್ತಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದಳು.

ರತ್ತಿ ತುಂಬಾ ಬುದ್ಧಿವಂತೆ, ರಾಷ್ಟ್ರವಾದಿಯಾಗಿದ್ದಳು ಎಂಬುದು ಬರೀ ಬಾಯಿ ಮಾತಲ್ಲ. 1921ರಿಂದ 26ರವರೆಗೂ ಭಾರತದ ವೈಸ್‌ರಾಯ್ ಆಗಿದ್ದ ಲಾರ್ಡ್ ರೀಡಿಂಗ್ ಜತೆಗಿನ ಒಂದು ಸಂವಾದವನ್ನು ನೋಡಿ…
ಲಾರ್ಡ್ ರೀಡಿಂಗ್:  ಜರ್ಮನಿಗೆ ಹೋಗಲು ನಾನು ಬಹಳ ಕಾತರನಾಗಿದ್ದೇನೆ. ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದನಿಸುತ್ತಿದೆ.
ರತ್ತಿ: ಏಕೆ ಹೋಗುವುದಕ್ಕಾಗುವುದಿಲ್ಲ?
ಲಾರ್ಡ್ ರೀಡಿಂಗ್: ನೋಡಿ… ಜರ್ಮನ್ನರಿಗೆ ಬ್ರಿಟಿಷರಾದ ನಮ್ಮನ್ನು ಕಂಡರಾಗದು. ಅದರಲ್ಲೂ ಮೊದಲನೇ ಮಹಾಯುದ್ಧದ (ಜರ್ಮನಿ ಸೋತು ಅವಮಾನ ಹಾಗೂ ರೋಷಕ್ಕೊಳಗಾಗಿತ್ತು) ನಂತರ ನಾನಲ್ಲಿಗೆ ಹೋಗಲು ಸಾಧ್ಯವೇ ಇಲ್ಲ.
ರತ್ತಿ: ಓ… ಹಾಗಾ, ಅದಕ್ಕೇ ಭಾರತಕ್ಕೆ ಬಂದಿದ್ದೀರಾ?!
ಬಹುಶಃ ರೀಡಿಂಗ್‌ಗೆ ಕಪಾಳಮೋಕ್ಷ ಮಾಡಿಸಿಕೊಂಡಂತಾಗಿರಬಹುದು!

ರೀಡಿಂಗ್‌ಗಿಂತ ಮೊದಲು ವೈಸ್‌ರಾಯ್ ಆಗಿದ್ದ ಲಾರ್ಡ್ ಚೆಮ್ಸ್ ಫರ್ಡ್ ಅವರನ್ನು ಒಮ್ಮೆ ರತ್ತಿಗೆ ಪರಿಚಯ ಮಾಡಿಕೊಡಲಾಯಿತು. ಆ ಕಾಲದಲ್ಲಿ ಪಾಶ್ಚಾತ್ಯರಲ್ಲಿ ಒಂದು ಶಿಷ್ಟಾಚಾರವಿತ್ತು. ಯಾರಾದರೂ ಗಣ್ಯ ವ್ಯಕ್ತಿಗಳನ್ನು ಮಹಿಳೆಯರಿಗೆ ಪರಿಚಯ ಮಾಡಿಕೊಟ್ಟರೆ ಹಸ್ತಲಾಘವ ಕೊಟ್ಟ ನಂತರ ಆಕೆ ಸ್ವಲ್ಪ ದೇಹ ಬಾಗಿಸಿ ಗೌರವ ಸೂಚಿಸಬೇಕಿತ್ತು. ಆದರೆ ಚೆಮ್ಸ್‌ಫರ್ಡ್‌ರನ್ನು ಪರಿಚಯಿಸಿದಾಗ ರತ್ತಿ ಮಂಡಿ ಬಾಗಿಸಿ ಗೌರವ ಸೂಚಿಸುವ ಬದಲು, ಹಸ್ತಲಾಘವದ ನಂತರ ಕೈಮುಗಿದು ನಮಸ್ಕರಿಸಿದಳು. ಅದನ್ನು ಕಂಡ ಚೆಮ್ಸ್‌ಫರ್ಡ್, “ನೋಡು…. ರೋಮ್‌ನಲ್ಲಿರುವಾಗ ನೀನು ರೋಮನ್ನರಂತೆಯೇ ನಡೆದುಕೊಳ್ಳಬೇಕು” ಎಂದು ಛೇಡಿಸಿದರು. “ನಾನು ಮಾಡಿದ್ದೂ ಅದನ್ನೇ ಮಹಾಪ್ರಭುಗಳೇ… ಇದು ಭಾರತ, ಭಾರತೀಯ ಶೈಲಿಯಲ್ಲೇ ನಮಸ್ಕರಿಸಿದ್ದೇನೆ!!” ಎಂದು ಮಾರುತ್ತರ ನೀಡಿದ್ದಳು.

ಈ ಮಧ್ಯೆ, 1919, ಆಗಸ್ಟ್ 15ರಂದು ಮಗಳು ದಿನಾ ಜನಿಸಿದಳು. ಅದೇನಾಯಿತೋ ಗೊತ್ತಿಲ್ಲ, ಕ್ರಮೇಣ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲಾರಂಭಿಸಿತು. ಬಹುಶಃ ವಯೋಮಾನದಲ್ಲಿನ ವ್ಯತ್ಯಾಸ ನಿಧಾನವಾಗಿ ತೊಂದರೆ ಕೊಡಲಾ ರಂಭಿಸಿತು. ಜಿನ್ನಾ ಕುಟುಂಬಕ್ಕಿಂತ ರಾಜಕೀಯಕ್ಕೆ ಹೆಚ್ಚು ಸಮಯ ಕೊಡುತ್ತಿದ್ದಾರೆ ಎಂದು ರತ್ತಿಗೆ ಅನಿಸಿತು. ಅದರಲ್ಲೂ ಸತ್ಯವಿತ್ತು. ಹಿಂದೂ-ಮುಸ್ಲಿಂ ಏಕತೆ, ಬ್ರಿಟಿಷರ ವಿರುದ್ಧ ಸಾಂಘಿಕ ಹೋರಾಟ ಎನ್ನುತ್ತಾ ಜಿನ್ನಾ ಕೂಡ ಮನೆಯಾಚೆಯೇ ಹೆಚ್ಚು ಸಮಯ ಕಳೆಯಲಾರಂಭಿಸಿದರು. ಇದರಿಂದ ರತ್ತಿಗೆ ಎಷ್ಟು ಕೋಪ, ಹತಾಶೆಯುಂಟಾಯಿತೆಂದರೆ 1922, ಸೆಪ್ಟೆಂಬರ್ ನಲ್ಲಿ ಗಂಟುಮೂಟೆ ಕಟ್ಟಿಕೊಂಡು ಲಂಡನ್‌ಗೆ ಹೋಗಿ ಬಿಟ್ಟಳು! ಆದರೂ ಕೆಲಕಾಲದಲ್ಲಿಯೇ ಗಂಡನ ಸಾಮೀಪ್ಯಕ್ಕಾಗಿ ಪರಿತಪಿಸ ತೊಡಗಿದಳು. ಕುಟುಂಬ ಆಪ್ತ ಸ್ನೇಹಿತರಾಗಿದ್ದ ಕಾಂಜೀ ದ್ವಾರಕದಾಸ್‌ಗೆ ಪತ್ರ ಬರೆದು ಗಂಡನ ಯೋಗಕ್ಷೇಮವನ್ನು ವಿಚಾರಿಸತೊಡಗಿದಳು. ಕೊನೆಗೂ ಮನಸ್ಸು ತಡೆಯಲಾಗದೆ ಲಂಡನ್‌ನಿಂದ ವಾಪಸ್ಸಾದಳು. ಆದರೆ ಗಂಡ ರಾಜಕೀಯದಲ್ಲೇ ಮುಳುಗಿ ಹೋಗಿದ್ದ. ಬಾಂಬೆ ಪ್ರೆಸಿಡೆನ್ಸಿಯಿಂದ ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿನ್ನಾಗೆ ಪತ್ನಿಯ ಬಗ್ಗೆ ಪರಿವೇ ಇರಲಿಲ್ಲ. ಅದರಲ್ಲೂ ಮುಸ್ಲಿಂ ಲೀಗ್‌ನ ಮುಖ್ಯ ಕಚೇರಿ ಬಾಂಬೆಯಿಂದ ದಿಲ್ಲಿಗೆ ಸ್ಥಳಾಂತರಗೊಂಡ ನಂತರ ಇಬ್ಬರ ನಡುವಿನ ಕಂದಕ ಸರಿಪಡಿಸಲಾಗದಷ್ಟು ದೊಡ್ಡದಾಗಿ ಬಿಟ್ಟಿತು. ರತ್ತಿ ಸೋತುಹೋದಳು, ಅಪಾರವಾಗಿ ನೊಂದುಕೊಂಡಳು. ಏಳು ವರ್ಷಗಳ ದಾಂಪತ್ಯದ ನಂತರ ಪರಸ್ಪರ ವಿಚ್ಛೇದನೆ ಪಡೆದುಕೊಳ್ಳಲು ಮುಂದಾದರು. ಆಗ ಜಿನ್ನಾಗೆ 48, ರತ್ತಿಗೆ 25 ವರ್ಷ.

1927ರಲ್ಲಿ ವಿಚ್ಛೇದನೆ ಪಡೆದ ರತ್ತಿ, ಬಾಂಬೆಯ ಇಂಡಿಯಾ ಗೇಟ್ ಬಳಿಯಿರುವ ಹೋಟೆಲ್ ತಾಜ್‌ಮಹಲ್‌ನ ಕೊಠಡಿ ಸೇರಿದಳು. ಅನಾರೋಗ್ಯವೂ ಬೆನ್ನಿಗಂಟಿಕೊಂಡಿತು. ಆಕೆಗೆ ಕ್ಯಾನ್ಸರ್ ಆಗಿತ್ತು. ಚಿಕಿತ್ಸೆಗೆಂದು ಫ್ರಾನ್ಸ್‌ಗೆ ಹೋದಳು. ಅದು ಫಲಕಾರಿಯಾಗಲಿಲ್ಲ. ಯಾರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದಳೋ ಅಂತಹ ವ್ಯಕ್ತಿ ಪ್ರಾಣವೇ ಹೋಗುವಂತಹ ಸಂದರ್ಭದಲ್ಲಿ ಜತೆಗಿರಲಿಲ್ಲ. ತುಂಬಾ ನೊಂದುಕೊಂಡ ರತ್ತಿ, ಫ್ರಾನ್ಸ್‌ನ ಮಾರ್ಸೆಲ್ಸ್‌ನಿಂದ ಹಡಗಿನಲ್ಲಿ ವಾಪಸ್ ಬರುವಾಗ  1928, ಅಕ್ಟೋಬರ್ 5ರಂದು ಜಿನ್ನಾಗೆ ಪತ್ರವೊಂದನ್ನು ಬರೆಯುತ್ತಾಳೆ. ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರಿಂದಾಗಿ ಇಷ್ಟೊಂದು ಕಷ್ಟ ಅನುಭವಿಸಿದೆ ಎಂದು ತನ್ನ ಅಂತರಾಳದ ನೋವನ್ನು ಆ ಪತ್ರದಲ್ಲಿ ತೋಡಿಕೊಂಡಿದ್ದಾಳೆ..

ಮಾರ್ಸೆಲ್ಸ್ 5 ಅಕ್ಟೋಬರ್ 1928,
ಡಾರ್ಲಿಂಗ್, ನನಗಾಗಿ ಮಿಡಿದ ನಿನಗೆ ನನ್ನ ಆಪ್ತ ವಂದನೆ. ನನ್ನೊಂದಿಗಿನ ಒಡನಾಟದಲ್ಲಿ, ನಿನ್ನ ಸೂಕ್ಷ್ಮ ಮನಸ್ಸಿಗೆ ಒಂದಿನಿತು ಘಾಸಿಯಾಗಿದ್ದರೆ, ನೋವಾಗಿದ್ದರೆ, ಕ್ಷಮಿಸು. ನಿನ್ನ ಕುರಿತು ನನ್ನ ಮನಸ್ಸಿನಾಳದಲ್ಲಿ ಹೆಪ್ಪುಗಟ್ಟಿರುವುದು ಕಾಳಜಿ, ಕಳಕಳಿ, ಪ್ರೀತಿ ಮತ್ತು ಕೊಂಚ ವೇದನೆ, ಅದೂ ಘಾತವಲ್ಲದ ವೇದನೆ ಮಾತ್ರ. ಬದುಕಿನ ಪರಮ ಸತ್ಯದ (ಸಾವಲ್ಲದೆ ಮತ್ತೇನು) ಸಾಕ್ಷಾತ್ಕಾರದ ಹೊಸ್ತಿಲು ತುಳಿದು ಬಂದಂಥ ಮನಸ್ಸುಗಳಿಗೆ (ನನ್ನಂತೆ) ಜೀವನದ ಮಧುರ ಕ್ಷಣಗಳ ನೆನಕೆಯ ಮುಂದೆ ಉಳಿದೆಲ್ಲ ಅನುಭವ, ಘಟನೆಗಳು ಬಣ್ಣ ಕಳೆದುಕೊಂಡ ಕಾಮನಬಿಲ್ಲಿನಂತೆ ಮಾಸಿಹೋಗುತ್ತವೆ. ಆಗಷ್ಟೇ ಅರಳಿ ನಿಂತ ನಿನ್ನಿಷ್ಟದ ಹೂವನ್ನು ನೀನೇ ಕೈಯಾರ ಕಿತ್ತು ಜತನ ಮಾಡಿದಂತೆ ನನ್ನ ನೆನಪು ನಿನ್ನಲ್ಲಿರಲಿ. ಹಾದು ಹೋಗುವಾಗ, ಕಾಲಡಿಗೆ ಸಿಲುಕಿ ನಲುಗುವ ಹೂವಿನ ತೆರದಿ ನಿನ್ನ ಮನಸಿನಲ್ಲಿ ನಾನು ನೆಲೆಸುವುದು ಬೇಡ.

ನಿನ್ನನ್ನು ಉತ್ಕಟವಾಗಿ ಪ್ರೀತಿಸಿ, ಆ ಪ್ರೀತಿಯ ಅಬ್ಬರದಲ್ಲಿ ನಾನು ಸಾಕಷ್ಟು ಉಡುಗಿಹೋಗಿದ್ದೇನೆ. ನನ್ನ ವೇದನೆಯ ಆಳ ಆ ಪ್ರೀತಿಯ ಅಗಾಧತೆಗೆ ಸಮ.

ಡಾರ್ಲಿಂಗ್, ಐ ಲವ್ ಯು… ಐ ಲವ್ ಯು… ಬಹುಶ: ಆ ಪ್ರೀತಿ ಅಷ್ಟು ತೀವ್ರವಾಗಿರದಿದ್ದರೆ ನಿನ್ನೊಂದಿಗೆ ಇನ್ನಷ್ಟು ದಿನ ಬಾಳಬಹುದಿತ್ತೇನೋ. ಅದ್ಭುತ ಕಲಾಕೃತಿ ರಚಿಸಿದ ಯಾವುದೇ ಕಲಾವಿದ ಅದರ ಮುಖಕ್ಕೆ ಮಸಿ ಬಳಿವ ಕೆಲಸ ಮಾಡಲಾರ. ಧ್ಯೇಯ ಎತ್ತರವಿದ್ದಷ್ಟು ಮನುಷ್ಯ ಅದರ ಭಾರಕ್ಕೇ ಕುಸಿಯುತ್ತಾನೆ ಎಂಬುದು ದಿಟ. ನಿನ್ನನ್ನು ಬಹುವಾಗಿ ಪ್ರೀತಿಸಿದೆ, ಎಲ್ಲೋ ಅಪರೂಪದ ವ್ಯಕ್ತಿಗಳು ಮಾತ್ರ ಈ ಪರಿಯ ಪ್ರೀತಿ ಕೊಟ್ಟು ಪಡೆಯಲು ಸಾಧ್ಯ. ನಾನು ವಿಧೇಯಳಾಗಿ ಹೇಳುವುದಿಷ್ಟೇ, ಪ್ರೀತಿ ಯಿಂದ ಆರಂಭವಾದ ಪತನ ಅದರಿಂದಲೇ ಕೊನೆಯಾಗಲಿ.

ಡಾರ್ಲಿಂಗ್, ಗುಡ್‌ನೈಟ್ ಆಂಡ್ ಗುಡ್‌ಬೈ
ರತ್ತಿ

(Marseilles 5 Oct 1928

Darling – thank you for all you have done. If ever in my bearing your once tuned senses found any irritability or unkindness – be assured that in my heart there was place only for a great tenderness and a greater pain – a pain my love without hurt. When one has been as near to the reality of Life (which after all is Death) as I have been dearest, one only remembers the beautiful and tender moments and all the rest becomes a half veiled mist of unrealities. Try and remember me beloved as the flower you plucked and not the flower you tread upon.

I have suffered much sweetheart because I have loved much. The measure of my agony has been in accord to the measure of my love.

Darling I love you – I love you – and had I loved you just a little less I might have remained with you – only after one has created a very beautiful blossom one does not drag it through the mire. The higher you set your ideal the lower it falls.

I have loved you my darling as it is given to few men to be loved. I only beseech you that the tragedy which commenced in love should also end with it.

Darling Goodnight and Goodbye

Ruttie)

ಭಾರತಕ್ಕೆ ಮರಳಿದ ರತ್ತಿ, ನೋವು ತಡೆದುಕೊಳ್ಳಲಾಗದೆ ಮಾರ್ಫೀನ್ (ನೋವು ನಿರೋಧಕ ಡ್ರಗ್) ತೆಗೆದುಕೊಂಡಳು. ಅದು ಮಿತಿಮೀರಿತು. 1929, ಫೆಬ್ರವರಿ 20ರಂದು ಜನ್ಮದಿನದಂದೇ ರತ್ತಿಯನ್ನು ಸಾವು ಬಲಿತೆಗೆದುಕೊಂಡು ಬಿಟ್ಟಿತು.

ಮಹಮದ್ ಅಲಿ ಜಿನ್ನಾ ಅವರು ತಮ್ಮ ಭಾವನಾತ್ಮಕ ಮುಖ ವನ್ನು ಯಾವತ್ತೂ, ಯಾರಿಗೂ ತೋರಿಸಿದವರಲ್ಲ. ಆದರೆ ರತ್ತಿಯ ಅಂತ್ಯಸಂಸ್ಕಾರದ ದಿನ ಹೆಣವನ್ನು ತಬ್ಬಿಕೊಂಡು ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಅಳುತ್ತಾರೆ. ಮತ್ತೆ ಜಿನ್ನಾ ಕಣ್ಣಲ್ಲಿ ನೀರು ಜಿನುಗಿದ್ದು 1947ರಲ್ಲಿ. ಅಂದು ದೇಶವನ್ನು ತೊರೆದು ಪ್ರತ್ಯೇಕ ಪಾಕಿಸ್ತಾನಕ್ಕೆ ಹೋಗುವ ಮೊದಲು ಬಾಂಬೆಯಲ್ಲಿರುವ ಪತ್ನಿ ರತ್ತಿಯ ಸಮಾಧಿಗೆ ಭೇಟಿ ನೀಡಿದ ಜಿನ್ನಾ ಎಲ್ಲರ ಎದುರು ಅಳುತ್ತಾರೆ.

ಕೆಲವರಿಗೆ ಹೀರೋ, ಮತ್ತೆ ಕೆಲವರಿಗೆ ಖಳನಾಗಿ ಕಾಣುವ ಜಿನ್ನಾ ಅವರಲ್ಲಿ ಒಬ್ಬ ಸೂಕ್ಷ್ಮ ಪ್ರೇಮಿಯೂ ಇದ್ದ.

12 Responses to “ಮಹಾತ್ಮ ಗಾಂಧಿಗೇ ಸೊಪ್ಪುಹಾಕದ ಜಿನ್ನಾ ರತ್ತಿಗೆ ಸೋತಿದ್ದರು!”

 1. ಗುರು says:

  ಪ್ರತಾಪರೆ,

  ದೇಶ ವಿಭಜನೆಯಾದ ಕಾರಣಗಳ ಚರ್ಚೆ ಇತ್ತೀಚೆಗೆ ಸಕತ್ ಹಾಟ್ ಟಾಪಿಕ್. ಜಸ್ವಂತ್ ಸಿಂಗ್, ಬಿ,ಜೆ.ಪಿ. ಇಂದ ಉಚ್ಚಾಟನೆ ಆಗಿದ್ದು ಈ ಚರ್ಚೆಗೆ, ಉರಿತಿರೋ ಬೆಂಕಿಗೆ ತುಪ್ಪದಷ್ಟೇ ಸಹಾಯ ಮಾಡ್ತು.
  ಆ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಸ್ವಲ್ಪ ಭಿನ್ನವಾಗಿ ಇದೆ, ಒಂದು ಪ್ರೇಮ ಕಥೆಯನ್ನ ಎಣೆದಿದ್ದೀರಿ.

  ಅಭಿನಂದನೆಗಳು.

 2. yogesh says:

  The last sentence in your article is not correct. Muhammad Ali Jinnah was not a true Lover. After reading your article, it seems that Jinnah had only infatuation towards Ratti.

 3. Chaitra Bhat says:

  The article claims that it is about how Jinnah was a sensual lover. But the entire article reflects the depth and heights of how intense a lover Ratti was..

  And yes.. I do not think it was a good idea to create market for your upcoming book in your article.

 4. after reading the article,whole day the picture of Jhinnah crying,holding the dead body of his wife,his love was coming into my mind…….
  also that wonderful lady ‘Ruttie’ was coming into my mind,her personality,her love,the way she died,her letter,everything…i was really disturbed………
  i would like to read those books.
  i don’t know why he cried.did he cry regretting that he lost such a true love?did he cry because he couldn’t understand her love?did he cry because in the quest for success he couldn’t give time for her?Jinnah himself knows the truth……..
  what i knew till now about Jinnah was that,he is the person who is one of the main reason to divide the india.i am not sure that,what i know about him is true or not……..
  please write an article that makes clear what the real Jinnah was,a hero or a traitor,or both.i believe only you can do that job.
  will be waiting for the truth to be disclosed in the ‘Bettale Jagattu’……….
  thanks for publishing that Ruttie’s letter.

 5. preethika says:

  After going through al these books(as stated in d beginning of d article), dis is wat u found worth picking up??…surprising!!!….

 6. ಪ್ರತಾಪ್,

  ಲೇಖನ ಪೊಗದಸ್ತಾಗಿದೆ. ರತ್ತಿಯ ಬಗ್ಗೆ ಹೊಸ ವಿಷಯ ತಿಳಿದಂತಾಯ್ತು.

  ಆದರೆ ಈ ಹೇಳಿಕೆಗಳನ್ನು ಓದಿ:

  >>ಈ ಮಧ್ಯೆ, 1919, ಆಗಸ್ಟ್ 15ರಂದು ಮಗಳು ದಿನಾ ಜನಿಸಿದಳು. ಅದೇನಾಯಿತೋ ಗೊತ್ತಿಲ್ಲ, ಕ್ರಮೇಣ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲಾರಂಭಿಸಿತು.

  >>1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಪತಿಯ ಜತೆ ಆಕೆ ಕೂಡ ಬಂದಿದ್ದಳು.

  >>ಇದರಿಂದ ರತ್ತಿಗೆ ಎಷ್ಟು ಕೋಪ, ಹತಾಶೆಯುಂಟಾಯಿತೆಂದರೆ 1922, ಸೆಪ್ಟೆಂಬರ್ ನಲ್ಲಿ ಗಂಟುಮೂಟೆ ಕಟ್ಟಿಕೊಂಡು ಲಂಡನ್‌ಗೆ ಹೋಗಿ ಬಿಟ್ಟಳು! ಆದರೂ ಕೆಲಕಾಲದಲ್ಲಿಯೇ ಗಂಡನ ಸಾಮೀಪ್ಯಕ್ಕಾಗಿ ಪರಿತಪಿಸ ತೊಡಗಿದಳು. ಕುಟುಂಬ ಆಪ್ತ ಸ್ನೇಹಿತರಾಗಿದ್ದ ಕಾಂಜೀ ದ್ವಾರಕದಾಸ್‌ಗೆ ಪತ್ರ ಬರೆದು ಗಂಡನ ಯೋಗಕ್ಷೇಮವನ್ನು ವಿಚಾರಿಸತೊಡಗಿದಳು. ಕೊನೆಗೂ ಮನಸ್ಸು ತಡೆಯಲಾಗದೆ ಲಂಡನ್‌ನಿಂದ ವಾಪಸ್ಸಾದಳು. ಆದರೆ ಗಂಡ ರಾಜಕೀಯದಲ್ಲೇ ಮುಳುಗಿ ಹೋಗಿದ್ದ. ಬಾಂಬೆ ಪ್ರೆಸಿಡೆನ್ಸಿಯಿಂದ ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜಿನ್ನಾಗೆ ಪತ್ನಿಯ ಬಗ್ಗೆ ಪರಿವೇ ಇರಲಿಲ್ಲ.

  >>1925ರ ಬಾವ್ಲಾ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ನಿರ್ದೋಷಿಯೆಂದು ಸಾಬೀತುಪಡಿಸಲು ಬಾಂಬೆ ಹೈಕೋರ್ಟ್ ನಲ್ಲಿ ಜಿನ್ನಾ ಮಾತಿಗೆ ನಿಂತಾಗ ರತ್ತಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದಳು.

  ಇವು ಒಂದಕ್ಕೊಂದು ವೈರುಧ್ಯ ಉಳ್ಲ ಹೇಳಿಕೆಗಳಲ್ಲವೇ?

  -ಆಸು ಹೆಗ್ಡೆ, ಬೆಂಗಳೂರು.

 7. nita says:

  By looking at the begining paragraph and the length of the article, I was expecting a highly informative article but “oh! my god, I bit chillis from my lunch plate(accidentally),oophs! your article is really shocking.” we r all human beings and love is part of everybodys life and it is a basic animal instinct,but was there any need at present to discuss Jinna’s personal life here that to in your article. Mr. Simha, I’am having high expectations from you that you bring out some truthful treads out hidden in our history. Pl don’t turn into a love story writer. Of course its u r article and u need not have to live up to anybody’s expectations, but u r article is disappointing.

 8. Kiran Balegar says:

  Nice article pratap really, it was worth reading…
  @Bhargavi Bhat for the 1st time u have written a good/nice/less racist comment. Keep it up…

 9. my dear pratap ur artiles were so message oriented but why are u mixing unwanted jinnah’s story in ur articles. write the article which can show path to the people, not there personal life.

 10. Prakash Upadhyaya says:

  ಜಿನ್ನಾಗೆ ಉರ್ದು ಬರುತಿರಲಿಲ್ಲ ವೆಂದು ಕೇಳಿದೇನೆ, ಅದು ನಿಜವೇ? ಲೇಖನ ಚೆನ್ನಾಗಿದೆ

 11. hitler says:

  Namma deshda dodda vyakti yenisi kondavara kahi satya yellarigu nimmindagi tilita yede.

 12. raghavendra says:

  what i want to say is that ravibelegere thinks that he is the one&only pressrepoter in karnataka who is the rightperson others are the foolish reporters,no one tease, this shows how he is arrogent,he is not ready to accept he is false.One think Mr.Belgere ur name is RaviBelgere ur name it’self says ur an Hindu,Our Hindu community has kept quite.In other community if you have teasaed they wouldhave done some thing.So plz accept your false,rember once you was also oonce upon time you was also like PRATAPSIMHA