Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Latest News > ನಾಡು ನುಡಿಯ ಜಾತ್ರೆಯಾಗಬೇಕಿದ್ದ ಸಮ್ಮೇಳನ ಸಿದ್ದರಾಮಯ್ಯನ ಜಾತ್ರೆಯಾಗಿದೆ

ನಾಡು ನುಡಿಯ ಜಾತ್ರೆಯಾಗಬೇಕಿದ್ದ ಸಮ್ಮೇಳನ ಸಿದ್ದರಾಮಯ್ಯನ ಜಾತ್ರೆಯಾಗಿದೆ

ನಾಡು ನುಡಿಯ ಜಾತ್ರೆಯಾಗಬೇಕಿದ್ದ ಸಮ್ಮೇಳನ ಸಿದ್ದರಾಮಯ್ಯನ ಜಾತ್ರೆಯಾಗಿದೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಎಲ್ಲ ಕನ್ನಡದ ಮನಸ್ಸುಗಳು ಸಮ್ಮೇಳನದಲ್ಲಿ ಒಂದೆಡೆ ಸೇರಿವೆ. ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲ (ಚಂಪಾ) ಅವರು ಸಮ್ಮೇಳನ ಕುರಿತು ಮಾಡಿದ ಭಾಷಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಮ್ಮ ನೆಲ,ಜಲ, ಭಾಷೆ ಬಗ್ಗೆ ಚರ್ಚಿಸಬೇಕಿದ್ದ ವೇದಿಕೆಯನ್ನು ರಾಜಕೀಯವಾಗಿ ಬಳಸಿಕೊಂಡಿರುವ ಬಗ್ಗೆ ರಾಜ್ಯವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡದ ಕುರಿತು ಚರ್ಚಿಸಲು ಸಾಕಷ್ಟು ವಿಷಯ ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಲು ವೇದಿಕೆ ಬಳಸಿಕೊಂಡಿದ್ದಕ್ಕೆ ಟೀಕೆಗಳ ಮಹಾಪೂರ ಹರಿದು ಬರುತ್ತಿದೆ. ಈ ಬಗ್ಗೆ ಮೈಸೂರಿನ ಸಂಸದ ‘ಪ್ರತಾಪ್ ಸಿಂಹ’ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆಯೇ?
ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮ ನಾಡಿನ ಹೆಮ್ಮೆಯ ವಿಷಯ. ಈ ಸಮ್ಮೇಳನದಲ್ಲಿ ನುಡಿ, ನೆಲ,ಜಲ, ಸಂಸ್ಕೃತಿ ಬಗ್ಗೆ ಚರ್ಚೆಯಾಗಬೇಕು. ನಮ್ಮ ಸಂಸ್ಕೃತಿಗೆ ಎದುರಾಗಿರುವ ಅಪಾಯದ ಬಗ್ಗೆ ಎಲ್ಲ ಸಾಹಿತಿಗಳು ಒಟ್ಟಾರೆ ಸೇರಿ ಸರಕಾರವನ್ನು ಎಚ್ಚರಗೊಳಿಸುವ ಕೆಲಸ ಮಾಡಬೇಕು. ನಮ್ಮ ಭಾಷೆಗೆ ತೊಂದರೆ ನೀಡಲು ಬರುವವರಿಗೆ ಹೇಗೆ ಬುದ್ಧಿ ಕಲಿಸಬೇಕು ಹಾಗೂ ಭಾಷೆಯನ್ನು ಯಾವ ರೀತಿ ಉಜ್ವಲಗೊಳಿಸಬೇಕು, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆಸುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣವಾಗಿಸಬೇಕು. ಯುವ ಪೀಳಿಗೆಗೆ ಈ ಸಮ್ಮೇಳನ ಪ್ರೇರಣೆಯಾಗಬೇಕು.

ಆದರೆ, ಕಾಂಗ್ರೆಸ್ ಸರಕಾರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಸ್ತಕ್ಷೇಪ ಮಾಡಿದೆ. ಕಳೆದ ನಾಲ್ಕು ವರ್ಷದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದಾರೆ. ಸಾಹಿತ್ಯ ಸಮ್ಮೇಳನ ಎಂದರೆ ಅದೊಂದು ಜಾತ್ರೆ ಇದ್ದಂತೆ. ಅಲ್ಲಿ ಕನ್ನಡದ ವಿಚಾರಗಳು ಹರಿದಾಡಬೇಕು. ಆದರೆ, ಮೈಸೂರಿನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಮಾತ್ರ ರಾಜಕೀಯ ಜಾತ್ರೆ ನಡೆಯುತ್ತಿದೆ. ರಾಜಕೀಯ ಧುರೀಣರು ತಮಗೆ ಬೇಕಾದ ರೀತಿಯಲ್ಲಿ ಭಾಷಣ ಮಾಡುತ್ತಿದ್ದಾರೆ. ಸಮ್ಮೇಳನದ ಮೂಲ ಆಶಯವನ್ನೇ ಮರೆತು, ರಾಜಕೀಯ ಸಮಾರಂಭದಂತೆ ಇತರೆ ಪಕ್ಷವನ್ನು, ನಾಯಕರನ್ನು ನಿಂದಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ. ಸಮ್ಮೇಳನದ ಅಧ್ಯಕ್ಷರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಆದರೆ, ಚಂಪಾ ಅವರು ಮಾತ್ರ ಕಾಂಗ್ರೆಸ್‌ನ ಪರಿಚಾರಕರಂತೆ ವರ್ತಿಸುತ್ತಿದ್ದಾರೆ.

* ಸಮ್ಮೇಳನಾಧ್ಯಕ್ಷ ಚಂಪಾ ಅವರು ನಾಡು,ನುಡಿಯ ಬಗ್ಗೆ ಚರ್ಚಿಸದೆ ಪ್ರಧಾನಿ ಅವರನ್ನು ನಿಂದಿಸಿದ್ದು ಸರಿಯೇ?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಅವರ ಕಾರ್ಯವೈಖರಿಗೆ ಎಲ್ಲರೂ ಬೆರಗಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ನ್ಯಾಯಾಲಯದಲ್ಲಿ ನಮ್ಮ ದೇಶದ ನ್ಯಾಯಾಧೀಶರನ್ನು ನೇಮಿಸಲು ಮುಂದುವರೆದ ದೇಶಗಳೊಂದಿಗೆ ಸ್ಪರ್ಧೆ ನೀಡಿದ್ದಾರೆ. ನಮ್ಮ ದೇಶದ ಪತಾಕೆಯನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಮೋದಿ ಬಗ್ಗೆ ಕೆಲ ಕ್ಷುಲ್ಲಕ ಮನಸ್ಸುಗಳು ತಮ್ಮ ಸ್ಥಾನವನ್ನು ಎತ್ತರಕ್ಕೆ ಏರಿಸಿಕೊಳ್ಳುವ ಭರದಲ್ಲಿ ಮೋದಿಯನ್ನು ನಿಂದಿಸುವ ಕೆಲಸ ಮಾಡುತ್ತಿವೆ. ಅದು ಅವರವರ ಯೋಗ್ಯತೆಯನ್ನು ತೋರುತ್ತದೆ ಅಷ್ಟೆ. ಇದರಿಂದ ಮೋದಿ ಅವರ ಜನಪ್ರಿಯತೆಗೆ ಹಾಗೂ ಅವರ ಕೆಲಸಕ್ಕೆ ಕಿಂಚಿತ್ತೂ ಕೆಡುಕು ಮಾಡಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್‌ಗೂ ಯಾವುದೇ ಸಂಬಂಧವಿಲ್ಲ. ಆದರೂ ಚಂಪಾ ಅವರು ತಮ್ಮ ಭಾಷಣದಲ್ಲಿ ಈ ವಿಚಾರ ಎಳೆದು ತಮ್ಮ ಗೌರವವನ್ನು ಅವರೇ ಕುಂದಿಸಿಕೊಂಡಿದ್ದಾರೆ ಅಷ್ಟೆ.

* ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪವೇ ಬದಲಾಗುತ್ತಿದೆಯಾ?
ಸಾಹಿತ್ಯ ಸಮ್ಮೇಳನ ಎನ್ನುವುದೇ ಒಂದು ಕನ್ನಡ ಜಾತ್ರೆ ಇದ್ದಂತೆ. ಪ್ರತಿ ವರ್ಷದ ಈ ಜಾತ್ರೆಗೆ ನಾಡಿನ ಮೂಲೆ ಮೂಲೆಯಿಂದಲೂ ಕನ್ನಡದ ಮನಸ್ಸುಗಳು ಬರುತ್ತವೆ. ಕನ್ನಡದ ಬಗ್ಗೆ , ಸಮಸ್ಯೆ ಬಗ್ಗೆ ಚರ್ಚೆಯಾಗುತ್ತವೆ ಎಂಬ ಆಶಯ ಹೊಂದಿರುತ್ತಾರೆ. ಸರಕಾರ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡರೆ ಸಮ್ಮೇಳನದ ಸ್ವರೂಪ ಬದಲಾಗದೇ ಇನ್ನೇನಾಗಲಿದೆ? ಕೇಂದ್ರೀಯ ಹಾಗೂ ಸಿಬಿಎಸ್‌ಸಿ ಸಿಲಬಸ್‌ನಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗುತ್ತಿಿದೆ. ಈ ಬಗ್ಗೆ ರಾಜ್ಯ ಸರಕಾರ ಏನು ಕ್ರಮ ಕೈಗೊಂಡಿದೆ? ಕಳೆದ ನಾಲ್ಕೂವರೆ ವರ್ಷದ ಇವರ ಆಡಳಿತದಲ್ಲಿ ನಾಡು,ನುಡಿ,ಜಲದ ವಿಷಯದಲ್ಲಿ ಯಾವ ರೀತಿ ಕೊಡುಗೆ ನೀಡಿದ್ದಾರೆ? ಕಾವೇರಿ, ಮಹದಾಯಿ ವಿಚಾರದಲ್ಲಿ ಸರಕಾರ ಸೋಲು ಕಂಡಿದೆ. ಇನ್ನೂ ಬೆಳಗಾವಿ ಗಡಿಯಲ್ಲಿ ಮರಾಠಿಗರ ಅಟ್ಟಹಾಸ ಕೂಡ ಮಿತಿ ಮೀರಿದೆ. ಇವರ ಆಡಳಿತದಲ್ಲಿ ಕನ್ನಡ ಭಾಷೆ, ಜಲಕ್ಕೆ ಆದ ಅನ್ಯಾಯಗಳಿವು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಮೊದಲು ಕೆಜೆಪಿ ಸೇರಿದ್ದರು. ಈಗ ಕಾಂಗ್ರೆಸ್‌ನ ಕಟ್ಟಾಳುವಿನಂತೆ ನಡೆದುಕೊಳ್ಳುತ್ತಿದ್ದಾರೆ. ಅವರು ಯಾವ ಪಕ್ಷದವರೇ ಆಗಲಿ. ಅದು ನನಗೆ ಬೇಕಿಲ್ಲ. ಆದರೆ, ಸಮ್ಮೇಳನದಲ್ಲಿ ರಾಜಕೀಯ ಬೆರೆಸುವುದನ್ನು ನಾನು ಸಹಿಸುವುದಿಲ್ಲ.

* ಜಾತ್ಯತೀತ ಪಕ್ಷಗಳಿಗೆ ಮತ ಹಾಕುವಂತೆ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು ಎಷ್ಟು ಸರಿ?
ಸಮ್ಮೇಳನದಲ್ಲಿ ರಾಜಕೀಯ ಭಾಷಣ ಮಾಡುವುದು ಸಂಬಂಧವಿಲ್ಲದ ಕಾರ್ಯಕ್ರಮದಲ್ಲಿ ಇನ್ನೇನೋ ಮಾಡಿದಂತೆ. ಎಲ್ಲೆಲ್ಲಿ ಏನೇನು ಮಾಡಬೇಕೋ ಅದನ್ನಷ್ಟೇ ಮಾಡಬೇಕು. 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಅನುದಾನ ನೀಡಿರುವ ಬಗ್ಗೆ ಸ್ವಲ್ಪವೂ ತಕರಾರಿಲ್ಲ. ಏಕೆಂದರೆ ಕನ್ನಡದ ಕೆಲಸಕ್ಕೆ ಎಷ್ಟೇ ಹಣ ನೀಡಿದರೂ ಸಾಲದು. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗಲೂ ಸಹ ಸಾಕಷ್ಟು ಅನುದಾನ ನೀಡಿದ್ದೇವೆ. ಆದರೆ, ನೀಡುವ ಹಣ ಕನ್ನಡದ ಕೆಲಸಕ್ಕಷ್ಟೇ ಬಳಕೆಯಾಗಬೇಕು ಎಂಬುದು ಕನ್ನಡ ನಾಡಿನ ಪ್ರತಿಯೊಬ್ಬರ ಆಶಯ. ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ರಾಜಕೀಯವಾಗಿಯೂ ಈ ವೇದಿಕೆಯನ್ನು ಬಳಸಿಕೊಳ್ಳಲು ನಾವು ಬಿಡುವುದಿಲ್ಲ. ರಾಷ್ಟ್ರೀಯತೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಕೂಡ ಸರಿಯಲ್ಲ. ಮೊದಲೇ ಹೇಳಿದಂತೆ ಸಾಕಷ್ಟು ಸಮಸ್ಯೆಗಳನ್ನು ಕನ್ನಡಿಗರು, ಕನ್ನಡ ಭಾಷೆ,ನೆಲ,ಜಲದ ವಿಚಾರದಲ್ಲಿ ಎದುರಿಸುತ್ತಿದ್ದೇವೆ. ಅದರ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕು. ಸಮ್ಮೇಳನದ ಉದ್ದೇಶ ಕೂಡ ಅದೇ ಆಗಿರುವುದರಿಂದ ರಾಜಕೀಯ ಬೆರೆಸುವ ಕೆಲಸ ಮಾಡಕೂಡದು. ಇದನ್ನು ನಾಡಿನ ಜನ ಮೆಚ್ಚುವುದಿಲ್ಲ.

* ಮತ್ತೊಮ್ಮೆ ಕನ್ನಡ ಧ್ವಜದ ದನಿ ಕೂಡ ಸಮ್ಮೇಳನದಲ್ಲಿ ಮೊಳಗುತ್ತಿದೆಯಲ್ಲಾ?
ನಮ್ಮಲ್ಲಿ ಈಗಾಗಲೇ ಕನ್ನಡ ಬಾವುಟ ಹಾರಾಡುತ್ತಿದೆ. ಅರಿಶಿಣ, ಕುಂಕುಮ ಬಣ್ಣದ ಬಾವುಟವೆಂದರೆ ಅದು ಕನ್ನಡ ಧ್ವಜ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದು. ಅದಕ್ಕೆ ಸಿಎಂ ಸಿದ್ದರಾಮಯ್ಯನವರು ಹೊಸದಾಗಿ ಧ್ವಜ ಬೇಕು ಎಂದು ಹೇಳುವ ಅಗತ್ಯವಿಲ್ಲ. ಬಹುಶಃ ಅವರಿಗೆ ಮುಸಲ್ಮಾನರ ಧ್ವಜದ ಬಣ್ಣದ ಮೇಲೆ ಹೆಚ್ಚು ವ್ಯಾಮೋಹ. ಹಸಿರು ಬಣ್ಣದ ಬಾವುಟ ಮಾಡುವ ಇಂಗಿತವಿರಬೇಕು. ಅದಕ್ಕಾಗಿಯೇ ಅವರು ಕನ್ನಡ ಧ್ವಜ ಬೇಕು ಎಂದು ಹೇಳುತ್ತಿದ್ದಾರೆ. ನವೆಂಬರ್ ಬಂತೆಂದರೆ ಕನ್ನಡ ರಾಜ್ಯೋತ್ಸವವನ್ನು ನಮ್ಮ ನಾಡ ಗೀತೆಯೊಂದಿಗೆ ಹಳದಿ-ಕೆಂಪು ಬಣ್ಣದ ಬಾವುಟವನ್ನು ಎಲ್ಲೆಡೆ ಹಾರಿಸುವ ಮೂಲಕ ನಮ್ಮ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯುತ್ತಲೇ ಬಂದಿದ್ದೇವೆ. ನಮಗೆ ಎಂದೆಂದೂ ಕನ್ನಡ ಧ್ವಜ ಇದ್ದೇ ಇರುತ್ತದೆ. ಅದಕ್ಕೆ ಅಧಿಕೃತ ಮುದ್ರೆ ಬೀಳದೇ ಇದ್ದರೂ ಅದು ನಮ್ಮ ಧ್ವಜ.

* ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರದಿಂದ ನಡೆದ ಸಮ್ಮೇಳನಗಳಲ್ಲಿ ಕೇವಲ ಎಡಪಂಥೀಯರನ್ನು ಮಾತ್ರ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆಯೇ?
ಎಸ್.ಎಲ್. ಭೈರಪ್ಪ ಅವರು ಕರ್ನಾಟದಲ್ಲಿ ಅತ್ಯಂತ ಅಧಿಕ ಓದುಗರನ್ನು ಸಂಪಾದಿಸಿಕೊಂಡಿರುವ ಸಾಹಿತಿಗಳು. ಕರ್ನಾಟಕದಲ್ಲಿ ಬದುಕಿರುವ ಸಾಹಿತಿಗಳೆಲ್ಲರು ತಾವು ಬರೆಯುವ ಒಂದು ವರ್ಷದ ಒಟ್ಟಾರೆ ಪುಸ್ತಕಗಳ ಮಾರಾಟ ಎಸ್.ಎಲ್.ಭೈರಪ್ಪ ಅವರ ಒಂದು ಕೃತಿಯ ಮಾರಾಟಕ್ಕೆ ಸಮವಾಗಿಲ್ಲ. ಭೈರಪ್ಪ ಅವರು ಯಾವುದಾದರು ಹೊಸ ಕೃತಿ ಬಿಡುಗಡೆಯಾಗುತ್ತಿದೆ ಎಂದರೆ ಇಡೀ ಕನ್ನಡಾಸ್ತಕ ಮನಸ್ಸುಗಳು ಕೃತಿ ಎಂದು ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅಂಥ ಒಬ್ಬ ಮಾಹಾನ್ ಸಾಧಕರು, ಸಾಹಿತಿಗಳು ಮೈಸೂರಿನವೇ. ಇಲ್ಲಿಯೇ ನೆಲೆಯೂರಿದ್ದಾರೆ.

ಇವರನ್ನು ಸಾಹಿತ್ಯ ಸಮ್ಮೇಳನಕ್ಕೆ ಸೌಜನ್ಯಕ್ಕೂ ಆಹ್ವಾನಿಸದೇ ಇರುವುದು ನಾಚಿಕೆಗೇಡಿನ ಸಂಗತಿ. ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಬೇಕಾದವರು. ಅಂಥವರನ್ನು ಸಮ್ಮೇಳನಕ್ಕೆ ಆಹ್ವಾನಿಸದೇ ಇರುವುದು ಕನ್ನಡ ಸಾಹಿತ್ಯ ಲೋಕಕ್ಕೇ ಮಾಡಿದ ಅವಮಾನವಿದು. ಕಾಂಗ್ರೆಸ್ ಸರಕಾರ ಬಂದ ನಂತರ ಸಂಪೂರ್ಣ ಅವರ ಪರ ಇರುವ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಈ ಸಮ್ಮೇಳನದ ಅಧ್ಯಕ್ಷರೂ ಸಹ ಅದೇ ರೀತಿಯಲ್ಲಿ ಅಧ್ಯಕ್ಷರಾದವರು. ನಿಜವಾದ ಸಾಹಿತಿಗಳಿಗೆ ಈ ಸರಕಾರ ಕಿಂಚಿತ್ತೂ ಗೌರವ ನೀಡದೇ ಇರುವುದು ಬೇಸರದ ಸಂಗತಿ.

* ಸಮ್ಮೇಳನಕ್ಕೆ ಮೈಸೂರು ಮಹಾರಾಜರನ್ನು ಆಹ್ವಾನಿಸದೇ ಅಪಚಾರ ವೆಸಗಿದ್ದಾರೆಯೇ?
ಇಂದು ಮೈಸೂರಿನಲ್ಲಿ ಕನ್ನಡ ಕಲುಷಿತವಾಗದೇ ಸ್ವಚ್ಛಂದವಾಗಿರಲು ಕಾರಣ ಮೈಸೂರು ಮಹಾರಾಜರು. ಹಳೇ ಮೈಸೂರು ಭಾಗ ಇಂದಿಗೂ ಕೂಡ ಕನ್ನಡ ಭಾಷೆ ಕಲುಷಿತವಾಗಿಲ್ಲ. ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಉರ್ದು, ಮರಾಠಿ ಭಾಷೆಗಳು ಮಿಶ್ರಣವಿದೆ. ಆದರೆ, ಈ ಭಾಗದಲ್ಲಿ ಕನ್ನಡ ಸ್ವಚ್ಛವಾಗಿದೆ. ಇದಕ್ಕೆ ಮೈಸೂರು ಮಹಾರಾಜರ ಕೊಡುಗೆ ಹೆಚ್ಚಿದೆ. ಹುಬ್ಬಳ್ಳಿಯನ್ನು ಸಂಗೀತಬೀಡು ಮಾಡಿದವರು ಮೈಸೂರಿನ ರಾಜರು. ಮೈಸೂರಿನಲ್ಲಿ ರಾಜ್ಯದ ಹೆಮ್ಮೆಯ ಸಮ್ಮೇಳನ ನಡೆಯುತ್ತಿದ್ದರೂ ಸಾಂಕೇತಿಕವಾಗಿಯೂ ಮೈಸೂರು ಮಹಾರಾಜರನ್ನು ಆಹ್ವಾನಿಸದೇ ಅಪಚಾರ ಎಸಗಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶ, ರೀತಿ ನೀತಿಯನ್ನು ಈ ಸರಕಾರ ಸಂಪೂರ್ಣ ಹಾಳು ಮಾಡುತ್ತಿದೆ.

* ಮೈಸೂರಿನಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಬಿಜೆಪಿಯ ಒಬ್ಬರೂ ಹಾಜರಿರಲಿಲ್ಲ ಏಕೆ ?
ಸಾಹಿತ್ಯ ಸಮ್ಮೇಳನಕ್ಕೆ ಪಕ್ಷಾತೀತವಾಗಿ ಹೋಗಬೇಕು. ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ನಾನೂ ತೆರಳಬೇಕಿತ್ತು. ಆದರೆ, ಕೆಲ ಕಾರಣದಿಂದ ಹೋಗಲು ಸಾಧ್ಯವಾಗಲಿಲ್ಲ. ಸಮಾರೋಪ ಸಮಾರಂಭಕ್ಕೆ ನಾನು ಹೋಗಲಿದ್ದೇನೆ. ಕನ್ನಡ ಹಬ್ಬಕ್ಕೆ ಪ್ರತಿಯೊಬ್ಬರೂ ಹೋಗಬೇಕು. ಇಲ್ಲಿ ರಾಜಕೀಯ ಮಾಡಬಾರದು.

Comments are closed.