Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ!

ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ!

ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ!

ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ, ಅಭಿಪ್ರಾಯಭೇದ, ಟೀಕೆ-ಟಿಪ್ಪಣಿಗಳು ಸಹಜ ಹಾಗೂ ಸಹ್ಯ ಕೂಡ ಹೌದು. ಆದರೆ ಮಾತುಗಳು ಅಥವಾ ಟೀಕೆ ಎಲ್ಲೆ ಮೀರಿದಾಗ ಅಸಹ್ಯವೆನಿಸಿಬಿಡುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು, ತಮ್ಮ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಳ್ಳಲೇಬೇಕು. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಮಾಮೂಲು. ಆದರೆ ತಮ್ಮ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರ ಬಾಯಿಂದ ಬಂದಿರುವ ಮಾತುಗಳು ಖಂಡಿತ ಅವರಿಗೆ ಶೋಭೆ ತರುವುದಿಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಚೆಕ್ ಅಪ್ ಮಾಡಿಸಿಕೊಳ್ಳಬೇಕು’ ಇವೆಲ್ಲ ಒಬ್ಬ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಡುವಂಥ ಮಾತುಗಳೇ? ‘ಯಡಿಯೂರಪ್ಪನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ನಿರಾಧಾರ ಆರೋಪ ಮಾಡಬಾರದು’ ಅಥವಾ ‘ನಾವು ಯಾವುದೇ ತನಿಖೆಗೆ ಸಿದ್ಧ’ ಎಂದು ಮರುತ್ತರ ನೀಡಬಹುದಿತ್ತು. ಅದನ್ನು ಬಿಟ್ಟು ವೈಯ್ಯಕ್ತಿಕ ನಿಂದನೆಗೆ ಇಳಿದಿದ್ದೇಕೆ? ಈ ರಾಜ್ಯವನ್ನು ಸಮರ್ಥವಾಗಿ ಹಾಗೂ ಜನಾನುರಾಗಿಯಾಗಿ ಆಳಿರುವ ಬಿಎಸ್‌ವೈರಂಥ ಹಿರಿಯ ವ್ಯಕ್ತಿಯ ವಯಸ್ಸಿಗಾದರೂ ಬೆಲೆ ಕೊಡಬಹುದಿತ್ತಲ್ಲವೆ?

ಇವರ ಮಟ್ಟಕ್ಕೇ ಇಳಿದು ನಾವೂ ಕೇಳುವುದಾದರೆ, ಸನ್ಮಾನ್ಯ ಯಡಿಯೂರಪ್ಪನವರಂತೆ ದಿನೇಶ್ ಅವರ ತಂದೆ ಗುಂಡೂರಾಯರೂ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು ತಾನೆ? ಇವತ್ತು ಯಡಿಯೂರಪ್ಪನವರೆಂದರೆ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ಕೊಟ್ಟಿದ್ದು, ರೈತರ ಸಾಲ ಮತ್ತು ಬಡ್ಡಿ ಮನ್ನಾ, ಕೆರೆಗಳಿಗೆ ನೀರು ತುಂಬಿಸಿದ್ದು, ಸುವರ್ಣಗ್ರಾಮ, ನಮ್ಮ ಊರು-ನಮ್ಮ ರಸ್ತೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ವಿತರಣೆ, ಸಕ್ಕರೆ ಕಾರ್ಖಾನೆಗಳ ಪುನರುಜ್ಜೀವನ ಮತ್ತು ರೈತನ ಬೆಳೆಗೆ ಉತ್ತಮ ಬೆಂಬಲ ಬೆಲೆ, ಪ್ರತಿ ಲೀಟರ್ ಹಾಲಿಗೆ ರೈತನಿಗೆ 2 ರು. ಹೆಚ್ಚುವರಿ ನೀಡಿದ್ದು, ಸಂಧ್ಯಾಸುರಕ್ಷಾ ಯೋಜನೆ, ಯಕ್ಷಗಾನ ಮತ್ತು ಚಲನಚಿತ್ರ ಅಕಾಡೆಮಿ ಸ್ಥಾಪನೆ ಇನ್ನು ಮುಂತಾದ ಹತ್ತಾರು ಜನಪರ ಯೋಜನೆಗಳು ನೆನಪಿಗೆ ಬರುತ್ತವೆ. ಆದರೆ ಗುಂಡೂರಾಯರೆಂದರೆ? ಲಂಗೋಟಿ ಹಾಕಿಕೊಂಡು ಬೆಂಗಳೂರಿನ ಬಸವನಗುಡಿ ಈಜುಕೋಳಕ್ಕೆ ಜಿಗಿದಿದ್ದು ಮತ್ತು ರೌಡಿಗಳನ್ನು ಹುಟ್ಟುಹಾಕಿದ್ದು ಮಾತ್ರ ನೆನಪಿಗೆ ಬರುತ್ತದೆ ಅಷ್ಟೇ! ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ನಿಮ್ಮ ತಂದೆ ಮಾಡಿದ್ದೇನು ಎಂಬುದನ್ನೂ ಸ್ವಲ್ಪ ನೆನಪು ಮಾಡಿಕೊಳ್ಳಿ!

ಇನ್ನು ದಿನೇಶ್ ಗುಂಡೂರಾವ್ ಅವರ ವಿಚಾರಕ್ಕೇ ಬರುವುದಾದರೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರಾಗಿದ್ದಾಗ ತಾವು ಮಾಡಿದ ಘನ ಕಾರ್ಯವಾದರೂ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನೀವೊಬ್ಬ ನಿಷ್ಕ್ರಿಯ ಮಂತ್ರಿ ಎಂಬ ಕಾರಣಕ್ಕೇ ಅಲ್ಲವೆ ಸಚಿವ ಸ್ಥಾನದಿಂದ ನಿಮ್ಮನ್ನು ಪದಚ್ಯುತಿಗೊಳಿಸಿದ್ದು? ಕೇಂದ್ರ ಸರಕಾರ ಒಂದೆರಡು ರುಪಾಯಿಗೆ ಕೊಡುವ ಅಕ್ಕಿ, ಗೋಧಿ, ಸಕ್ಕರೆ, ಉಪ್ಪು, ಎಣ್ಣೆ ಪ್ಯಾಕ್ ಮೇಲೆ ತಮ್ಮ ಭಾವಚಿತ್ರ ಹಾಕಿಕೊಂಡು ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದು ಬಿಟ್ಟು ಯಾವ ಕೆಲಸ ಮಾಡಿದ್ದೀರಿ ಸ್ವಾಮಿ?

ಬಿ.ಎಸ್. ಯಡಿಯೂರಪ್ಪನವರನ್ನು ಉಗಾಂಡದ ಇದಿ ಅಮೀನ್‌ಗೆ ಹೋಲಿಸುತ್ತಾ, ಅವನೊಬ್ಬ ಸರ್ವಾಧಿಕಾರಿ, ಸಿಕ್ಕ ಸಿಕ್ಕವರನ್ನೆಲ್ಲ ಜೈಲಿಗೆ ಹಾಕುತ್ತಿದ್ದ ಎಂದಿದ್ದೀರಲ್ಲಾ ನಿಮಗೇನಾಗಿದೆ? ಸ್ವತಂತ್ರ ಭಾರತದ ಇತಿಹಾಸದಲ್ಲಿ ಸರ್ವಾಧಿಕಾರಿಗಳಂತೆ ನಡೆದುಕೊಂಡವರು ಯಾರು? 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಸಿಕ್ಕ ಸಿಕ್ಕವರನ್ನೆಲ್ಲಾ ಅರೆಸ್ಟ್ ಮಾಡಿದ್ದು ಯಾರು ಸಾರ್? ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿಟ್ಟಿದ್ದ ಇಂದಿರಾ ಗಾಂಧಿಯವರಲ್ಲವೇ? ಅವರಲ್ಲವೇ ನಿಜವಾದ ಸರ್ವಾಧಿಕಾರಿ? ಅಕ್ಸಯ್‌ಚಿನ್ ಚೀನಾದ ವಶವಾದರೂ, ಅಲ್ಲಿ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದ ನೆಹರು, ಇಂದಿರಾ ಗಾಂಧಿ ಸಾವಿನ ಬೆನ್ನಲ್ಲೇ ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ ಎಂದು ಸಿಖ್ ಹತ್ಯಾಂಕಾಂಡವನ್ನು ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿ ಮತ್ತು ಕಾಮನ್‌ವೆಲ್ತ್, 2 ಜಿ, ಕಲ್ಲಿದ್ದಲು ಹಗರಣದಲ್ಲಿ ಲಕ್ಷಾಂತರ ರು. ಲೂಟಿಯಾದರೂ ಯಾರಿಗೂ ಉತ್ತರ ಕೊಡದ ಸೋನಿಯಾ ಗಾಂಧಿ ನಿಜವಾದ ಸರ್ವಾಧಿಕಾರಿಗಳೇ ಹೊರತು ಬಿಎಸ್‌ವೈ ಅಲ್ಲ.

ಯಡಿಯೂರಪ್ಪನವರನ್ನು ಯಾವಾಗಲೂ ‘ಜೈಲಿಗೆ ಹೋಗಿ ಬಂದವರಿಂದ ಪಾಠ ಬೇಕಿಲ್ಲ’ ಎಂದು ಜರಿಯುತ್ತೀರಲ್ಲಾ, ಕೆಲವರ ಪಿತೂರಿಯಿಂದ ಅವರ ಜೈಲಿಗೆ ಹೋಗಬೇಕಾಗಿ ಬಂತೇ ಹೊರತು ಕೋರ್ಟಿನಿಂದ ದೋಷಿಯೆಂದು ಘೋಷಣೆಯಾಗಿಲ್ಲ. ಇಷ್ಟಾಗಿಯೂ ಕುಹಕವಾಡುವ ನೀವು ಕೋರ್ಟಿನಿಂದ ದೋಷಿ ಎಂದು ಘೋಷಣೆಯಾಗಿ ಒಂದೂವರೆ ವರ್ಷ ಜೈಲಲ್ಲಿದ್ದು ಬಂದ ದೇಶದ ಏಕಮಾತ್ರ ಪ್ರಧಾನಿ ಇಂದಿರಾ ಗಾಂಧಿಯವರನ್ನು ಯಾವ ನೈತಿಕತೆಯೊಂದಿಗೆ ಆರಾಧನೆ ಮಾಡುತ್ತಿದ್ದೀರಿ? ಮುಖ್ಯಮಂತ್ರಿ ವಿರುದ್ಧ ಎಷ್ಟೇ ಗುರುತರ ಆರೋಪಗಳಿದ್ದರೂ ಪ್ರಕರಣ ದಾಖಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯನವರಿಗೆ ಸಾಚಾ ಎಂದು ಸರ್ಟಿಫಿಕೆಟ್ ಕೊಡುತ್ತಿದ್ದೀರಲ್ಲಾ, ಕೇಸು ದಾಖಲು ಮಾಡಬೇಕಾದ ಲೋಕಾಯುಕ್ತವನ್ನೇ ಕತ್ತು ಹಿಸುಕಿ ಸಾಯಿಸಿದ್ದೇಕೆ?

ಭ್ರಷ್ಟಾಚಾರವನ್ನು ಮಟ್ಟಹಾಕಬೇಕಾದ ಲೋಕಾಯುಕ್ತವನ್ನೇ ಬರ್ಖಾಸ್ತು ಮಾಡಿದ ಸಿದ್ದರಾಮಯ್ಯನವರಲ್ಲಿ ಯಾವ ನೈತಿಕತೆ ನಿಮಗೆ ಕಾಣುತ್ತಿದೆ? ಮರಿಗೌಡನನ್ನು ಒಂದೂವರೆ ತಿಂಗಳ ಕಾಲ ಬಚ್ಚಿಟ್ಟಿದ್ದು ಹಾಗೂ ಎಲ್ಲಿ ಬಂಡವಾಳ ಬಯಲಾಗುತ್ತದೋ ಎಂಬ ಭಯದಿಂದ ಚಿಕ್ಕರಾಯಪ್ಪನವರನ್ನು ಅಡಗಿಸಿಟ್ಟಿರುವುದು ಮುಖ್ಯಮಂತ್ರಿಯವರಲ್ಲದೆ ಮತ್ತಾರು? ಡೈರಿಯಲ್ಲಿ ನನ್ನ ಹೆಸರಿಲ್ಲ ಎಂದು ಮುಖ್ಯಮಂತ್ರಿ ಹೇಳಲಿ ನೋಡೋಣ? ಬಡವರಿಗೆ ಆರೋಗ್ಯ ಸೇವೆ ನೀಡುವ ಯಶಸ್ವಿನಿಗೆ ಬಾಕಿ ಕೊಡುವುದಕ್ಕೆ ದುಡ್ಡಿಲ್ಲ, ಆದರೆ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬರುತ್ತದೆ? ನರೇಂದ್ರ ಮೋದಿಯವರನ್ನು ನರಹಂತಕ ಎಂದ ಸಿದ್ದರಾಮಯ್ಯನವರಿಗೆ ಜನ ಯಾವ ಪಾಠ ಕಲಿಸಿದರು ಎಂಬುದು ಗೊತ್ತಲ್ಲವೆ? ಬಿಎಸ್‌ವೈರನ್ನು ನಿಂದಿಸುವುದನ್ನು ನಿಲ್ಲಿಸದಿದ್ದರೆ 2018ರಲ್ಲಿ ಜನ ಮತ್ತೊಮ್ಮೆ ಪಾಠ ಕಲಿಸುತ್ತಾರೆ, ಜೋಕೆ!

20170223_082233

Comments are closed.