Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಈ ಸುದಿನ ಕಾರ್ಯಪ್ಪನವರ ಜನ್ಮದಿನ!

ಈ ಸುದಿನ ಕಾರ್ಯಪ್ಪನವರ ಜನ್ಮದಿನ!

ಈ ಸುದಿನ ಕಾರ್ಯಪ್ಪನವರ ಜನ್ಮದಿನ!

ಅದು 1965ರ ಭಾರತ-ಪಾಕಿಸ್ತಾನದ ನಡುವಿನ ಯುದ್ಧ!
ಆಗ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ಕಾರ್ಯಪ್ಪನವರ ಪುತ್ರ ಕೆ.ಸಿ. ನಂದ ಕಾರ್ಯಪ್ಪನವರಿದ್ದ ಹಂಟರ್ ವಿಮಾನವನ್ನು ಪಾಕ್ ಕೆಳಗುರುಳಿಸಿತು. ನಂದ ಅವರು ಕಾರ್ಯಪ್ಪನವರ ಪುತ್ರ ಎಂದು ತಿಳಿದ ಕೂಡಲೇ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ಜನರಲ್ ಕಾರ್ಯಪ್ಪನವರಿಗೆ ಕರೆ ಮಾಡಿ, ಮಗನನ್ನು ಬಿಡುಗಡೆಗೊಳಿಸುವ ಪ್ರಸ್ತಾಪವನ್ನಿಟ್ಟರು. ಏಕೆಂದರೆ ಅವಿಭಜಿತ ಭಾರತವಿದ್ದಾಗ ಅಯೂಬ್ ಖಾನ್ ಬ್ರಿಟಿಷ್ ಸೇನೆಯಲ್ಲಿ ನಮ್ಮ ಜನರಲ್ ಕಾರ್ಯಪ್ಪನವರ ಕೆಳಗೆ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಹಳೆಯದ್ದನ್ನು ನೆನೆದುಕೊಂಡು ಅಯೂಬ್ ಖಾನ್ ನಂದರನ್ನು ಬಿಡುಗಡೆ ಮಾಡಲು ಮುಂದಾಗಿದ್ದರು.
ಆದರೆ…
“He is my son no longer… He is the child of this country, a soldier fighting for his motherland like a true patriot.
 ಅವನೀಗ ಕೇವಲ ನನ್ನ ಮಗನಲ್ಲ… ನಮ್ಮ ದೇಶದ ಪುತ್ರ. ನಿಜವಾದ ದೇಶಭಕ್ತನಂತೆ ತಾಯ್ನೆಲದ ರಕ್ಷಣೆಗಾಗಿ ಹೋರಾಡುತ್ತಿರುವ ಸೈನಿಕ ಅವನು. ನಿಮ್ಮ ಕೊಡುಗೆಗೆ ನನ್ನ ಧನ್ಯವಾದಗಳು. ಬಿಡುಗಡೆ ಮಾಡುವುದಾದರೆ ಎಲ್ಲರನ್ನೂ ಮಾಡಿ. ಇಲ್ಲವಾದರೆ ಯಾರನ್ನೂ ಬೇಡ. ನನ್ನ ಮಗನನ್ನು ವಿಶೇಷವಾಗಿ ನಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಫೋನ್ ಕೆಳಗಿಟ್ಟರು ಕಾರ್ಯಪ್ಪ. ಇಂಥ ಘಟನೆಗಳನ್ನು ನೆನಪಿಸಿಕೊಂಡರೆ ಹೆಮ್ಮೆಯಿಂದ ಎದೆಯುಬ್ಬುತ್ತದೆ. ಈ ರೀತಿಯ ಗುಣ ಕೊಡಗಿನ ಜನರ ರಕ್ತದಲ್ಲೇ ಇದೆ. ದೇಶದ ಅತ್ಯಂತ ಪುಟ್ಟ ಜಿಲ್ಲೆಗಳಲ್ಲಿ ಒಂದಾಗಿದ್ದರೂ ಕೊಡುವ ನಮ್ಮ ದೇಶದ ಸೇನಾಪಡೆಗೆ ಇಬ್ಬರು ಜನರಲ್‌ಗಳನ್ನು ಕೊಟ್ಟಿದೆ. 26 ಲೆಫ್ಟಿನೆಂಟ್ ಜನರಲ್‌ಗಳನ್ನು ಕೊಟ್ಟಿದೆ. ಅಸಂಖ್ಯ ಸೈನಿಕರನ್ನು ನೀಡಿದೆ. ನಾವೆಲ್ಲ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಹಾಕಿಗೆ 5 ಕ್ಯಾಪ್ಟನ್‌ಗಳನ್ನು, 56 ಆಟಗಾರರನ್ನು ಕೊಟ್ಟಿದೆ!
ಇತ್ತ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಿಂದ ಸಂಸತ್ತಿಗೆ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅಹಮದಾಬಾದಿಗೆ ಹೋಗಿದ್ದರು. ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಅಂದು ಊರಿಗೆ ಊರೇ ಸೇರಿತ್ತು. ಆ ಜನಸ್ತೋಮವನ್ನು ಉದ್ದೇಶಿಸಿ ಮಾತಾನಾಡಿದ ಪ್ರಧಾನಮಂತ್ರಿಗಳು ನಮ್ಮೂರು ಯಾವತ್ತಿಗೂ ನಮಗೆ ಅತ್ಯಂತ ಪ್ರೀತಿಪಾತ್ರವಾಗಿರುತ್ತದೆ ಎಂಬುದಕ್ಕೆ ಉದಾಹರಣೆಯನ್ನು ಕೊಡುತ್ತಾ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದರೂ ತಮ್ಮ ನಿವೃತ್ತ ಜೀವನವನ್ನು ತಮ್ಮ ಊರಿನಲ್ಲಿ ಕಳೆಯಲು ಇಷ್ಟಪಟ್ಟಿದ್ದರು’ ಎಂದಿದ್ದರು! ಕಾರ್ಯಪ್ಪನವರು ಅಂದು ಮಡಿಕೇರಿಗೆ ಬಂದು ನೆಲೆಸಲು ತೀರ್ಮಾನಿಸಿದಾಗ ಹಲವರಿಗೆ ಆಶ್ಚರ್ಯವೆನಿಸಿತ್ತು.
ಅಂದು ಆ ಸಂಗತಿ ದೇಶಾದ್ಯಂತ ಸುದ್ದಿಯೂ ಆಗಿತ್ತು. ‘ನಾನು ಹುಟ್ಟಿದ ಮಣ್ಣಲ್ಲೇ ಕೊನೆ ದಿನಗಳನ್ನು ಕಳೆಯುತ್ತೇನೆ’ ಎಂದಿದ್ದ ಕೊಡಂದೇರ ಮುದ್ದಪ್ಪ ಕಾರ್ಯಪ್ಪ, ಮನೆಯವರ-ನೆಂಟರಿಷ್ಟರ ನೆಚ್ಚಿನ ‘ಚಿಪ್ಪ’, ಬ್ರಿಟಿಷ್ ಗೆಳೆಯರೊಡನೆ ಪೋಲೋ ಆಡುತ್ತಿದ್ದ ‘ಕ್ಯಾರಿ’, ಸಮಸ್ತ ಭಾರತೀಯ ಸೈನ್ಯದ ಪ್ರೀತಿಯ ‘ಕಿಪ್ಪರ್’! ಅವರು ಮಡಿಕೇರಿಗೆ ಬಂದು ಹಳೆಯ ಬಂಗಲೆಯನ್ನು ದುರಸ್ತಿ ಮಾಡಿಸಿ ಹಿತ್ತಲಿನಿಂದ ತಲಕಾವೇರಿ ಕಾಣುವಂತೆ ‘ರೋಷನಾರಾ’ಕ್ಕೆ ಸೇರಿಕೊಂಡರು. ಇಡೀ ಜಿಲ್ಲೆಯ ಜನರಿಗೆ ‘ಅಜ್ಜ’ ಆಗಿಹೋದರು. ದಂತಕತೆಯಾದರು. ಅವರು ದೇಶಕ್ಕೆ ಕಮಾಂಡರ್ ಇನ್ ಚೀಫ್ ಆಗಿರಬಹುದು, ಮಿಲಿಟರಿಗೆ ‘ಕಿಪ್ಪರ್’ ಆಗಿರಬಹುದು. ಆದರೆ ಕಾರ್ಯಪ್ಪನವರು ಮಡಿಕೇರಿಯ ರೋಷನಾರಾದಲ್ಲಿ ನೆಲೆಸಿದ್ದಂದಿನಿಂದ ಇಂದಿನವರೆಗೂ ಕೊಡಗಿನ ಜನರಿಗೆ ಅವರು ಪ್ರೀತಿಯ ‘ಅಜ್ಜ’ನೇ. ಕೊಡಗಿನಲ್ಲಿ ಅಜ್ಜ ಎಂದರೆ ಮತ್ತೊಂದು ಅಜ್ಜನೇ ಇಲ್ಲವೆನ್ನುವಂತೆ ಎಲ್ಲಾ ಜನರು ಹೇಳುವುದು ಒಬ್ಬನೇ ಒಬ್ಬ ಕಾರ್ಯಪ್ಪಜ್ಜರನ್ನು. ಆ ಅಜ್ಜ ಕಮಾಂಡರ್ ಇನ್ ಚೀಫ್‌ಗಿಂತ ಜನರಿಗೆ ಅಪ್ಯಾಯಮಾನವಾದ ಪದ.
ಕಾರ್ಯಪ್ಪನವರೂ ಹಾಗೆ ಕರೆಸಿಕೊಳ್ಳಲು ಖುಷಿ ಪಡುತ್ತಿದ್ದರು. ನಿವೃತ್ತಿಯ ನಂತರ ಊರಲ್ಲಿರುವೆ ಎಂದುಕೊಂಡು ಬಂದ ಅಜ್ಜ ಬಂಗಲೆ ಸೇರಿಕೊಳ್ಳಲಿಲ್ಲ. ಊರವರೊಡನೆ ಸೇರಿದರು, ಜನರೊಡನೆ ಬೆರೆತರು. ಕೋಟಿನ ಜೇಬು ತುಂಬಾ ಚಾಕಲೇಟುಗಳನ್ನು ಇಟ್ಟುಕೊಂಡು ನಿಜವಾದ ಅಜ್ಜನಾದರು. ರಸ್ತೆಯಲ್ಲಿ ಕಾರು ನಿಲ್ಲಿಸಿ ಮಕ್ಕಳಿಗೆ ಚಾಕಲೇಟು ಕೊಟ್ಟರು. ಧ್ವಜಕ್ಕೆ ಸೆಲ್ಯೂಟ್ ಮಾಡುವುದನ್ನು ಕಲಿಸಿಕೊಟ್ಟರು. ಮದುವೆ, ನಾಮಕರಣ, ಗೃಹಪ್ರವೇಶಗಳಿಗೆ ಕೊಡವರ ಸಾಂಪ್ರದಾಯಿಕ ಕುಪ್ಯ-ಚೇಲೆಗಳನ್ನು ಉಟ್ಟು ಕೆಂಪು ಪೇಟ ಧರಿಸಿ ನೆಂಟನಂತೆ ಹೋದರು. ಕೊಡವರ ಓಲಗಕ್ಕೆ ಟಿಪಿಕಲ್ ಕೊಡವರಂತೆ ಕುಣಿದರು.
ಆಗ….
ಕಾರ್ಯಪ್ಪನವರು ನಿವೃತ್ತರಾಗಿ ಹಲವು ವರ್ಷಗಳೇ ಆಗಿದ್ದವು. ಒಂದು ದಿನ ರೋಷನಾರಾಕ್ಕೆ ಮಿಲಿಟರಿ ಚಿಹ್ನೆ ಇರುವ ಲಕೋಟೆಯೊಂದು ಬಂತು. ಅದು ಆಗಿನ ಮೇಜರ್ ಜನರಲ್ ತಾರಾಸಿಂಗ್ ಬಾಲ್ ಎಂಬವರು ಬರೆದ ಪತ್ರವಾಗಿತ್ತು. ತಾರಾಸಿಂಗ್ ಬಾಲ್ ಅಪ್ರತಿಮ ಸಾಹಸೀ ಯೋಧ. ತಲೆ ಬೆಳ್ಳಗಾಗುವ ಸಾಕಷ್ಟು ಮೊದಲೇ ಸೇನೆಯ ಮೂರನೇ ಅತಿ ಎತ್ತರದ ರ್ಯಾಂಕ್ ಪಡೆದಿದ್ದವರು ತಾರಾ ಸಿಂಗ್ ಬಾಲ್. ಸಾಕಷ್ಟು ಕಾರ್ಯಾಚರಣೆಗಳಲ್ಲಿ ಅವರ ಹೆಸರು ಕೇಳಿಬಂದಿತ್ತು. ಕಿರಿಯ ಅಧಿಕಾರಿಗಳೊಂದಿಗೆ ಸ್ನೇಹಮಯಿ ವ್ಯಕ್ತಿತ್ವವನ್ನು ಹೊಂದಿದ್ದ ತಾರಾಸಿಂಗ್ ಬಾಲ್ ಅವರ ಹೆಸರು ಸೈನ್ಯದಲ್ಲಿ ದಿನೇ ದಿನೆ ಜನಪ್ರಿಯವಾಗತೊಡಗುತ್ತಿತ್ತು. ತಮ್ಮ ನೇರಾ ನೇರಾ ಮಾತಿನಿಂದ ತಾರಾಸಿಂಗ್ ಬಾಲ್ ಶತ್ರುಗಳನ್ನು ಕೂಡಾ ಸೃಷ್ಟಿಸಿಕೊಂಡಿದ್ದರು.
ನೆಹರು ಸಂಪುಟದ ಕೆಲವು ಮಂತ್ರಿಗಳು ಮತ್ತು ರಕ್ಷಣಾ ಮಂತ್ರಾಲಯದ ಕೆಲವು ಸಿಬ್ಬಂದಿಗಳು ತಾರಾಸಿಂಗ್ ಬಾಲ್ ಅವರನ್ನು ತಣ್ಣಗೆ ದ್ವೇಷಿಸುತ್ತಿದ್ದರು. ಒಂದು ದಿನ ಇವರೆಲ್ಲರೂ ಸೇರಿ ಪ್ರಧಾನ ಮಂತ್ರಿ ನೆಹರು ಅವರಲ್ಲಿ ತಾರಾಸಿಂಗ್ ಬಾಲ್ ಅವರ ಬಗ್ಗೆ ಕಿವಿಯೂದಿದರು. ಪೂರ್ವಾಪರಗಳನ್ನು ನೋಡದೆ ನೆಹರು ತಾರಾಸಿಂಗ್ ಅವರಿಗೆ ‘ತಾವು ಇನ್ನು ನಾಲ್ಕು ವಾರಗಳಲ್ಲಿ ಸೇನೆಯಿಂದ ನಿವೃತ್ತಿ ಹೊಂದಬೇಕು’ ಎಂದು ಪತ್ರವನ್ನೂ ಕೂಡಾ ಬರೆದರು! ಸೇನೆಯೇ ಸರ್ವಸ್ವ ಎಂದುಕೊಂಡ ತಾರಾಸಿಂಗ್ ಬಾಲ್ ಪ್ರಧಾನಮಂತ್ರಿಗಳ ಈ ಪತ್ರದಿಂದ ಬಹುವಾಗಿ ನೊಂದುಕೊಂಡರು. ಸಾಕ್ಷಾತ್ ಪ್ರಧಾನಮಂತ್ರಿಗಳೇ ಪತ್ರ ಬರೆದಿರುವುದರಿಂದ ಯಾರೇನೂ ಮಾಡುವಂತಿಲ್ಲ, ಹೇಳುವಂತಿಲ್ಲ. ತಮ್ಮ ಜನರಲ್ ಕೂಡಾ ಈ ಬಗ್ಗೆ ತಮಗೆ ನ್ಯಾಯ ಒದಗಿಸುವಂತಿಲ್ಲ ಎಂಬುದು ತಾರಾಸಿಂಗ್ ಬಾಲ್ ಅವರಿಗೆ ಗೊತ್ತಿತ್ತು. ಎರಡು ದಿನ ಸುಮ್ಮನೆ ಕುಳಿತ ಬಾಲ್ ಅವರಿಗೆ ಆಶಾಕಿರಣದಂತೆ ಹೊಳೆದಿದ್ದು ದೇಶದ ಪ್ರಪ್ರಥಮ ಮಹಾದಂಡನಾಯಕರಾಗಿದ್ದ ಕೆ. ಎಂ. ಕಾರ್ಯಪ್ಪನವರು. ಈ ದೇಶದಲ್ಲಿ ತನಗೆ ನ್ಯಾಯವನ್ನು ದೊರಕಿಸಿಕೊಡುವ ಏಕೈಕ ವ್ಯಕ್ತಿ ಕಾರ್ಯಪ್ಪ ಒಬ್ಬರೇ ಎಂದುಕೊಂಡ ತಾರಾಸಿಂಗ್ ಅವರು ತಮ್ಮ ಪಾಡನ್ನು ವಿವರಿಸಿ ರೋಷನಾರಾಕ್ಕೆ ಪತ್ರ ಬರೆದಿದ್ದರು. ‘ತಾವು ನನಗೆ ಗೌರವದ ನಿವೃತ್ತಿಯನ್ನು ಒದಗಿಸಿಕೊಡಬೇಕು’ ಎಂದು ಅವರು ಕಾರ್ಯಪ್ಪನವರಲ್ಲಿ ಬೇಡಿಕೊಂಡಿದ್ದರು.
ಕಾರ್ಯಪ್ಪನವರು ಮಡಿಕೇರಿಯಿಂದಲೇ ತಾರಾಸಿಂಗ್ ಅವರ ವಿಷಯದಲ್ಲಿ ಸತ್ಯವನ್ನು ತಿಳಿದುಕೊಂಡರು. ತಾರಾಸಿಂಗ್ ಅವರಿಗೆ ಅನ್ಯಾಯವಾಗಿರುವುದು ಹೌದು ಎಂಬುದು ಅವರಿಗೆ ಗೊತ್ತಾಯಿತು ಮಾತ್ರವಲ್ಲ ಅವರ ಬಗ್ಗೆ ಗೌರವವೂ ಬೆಳೆಯಿತು. ಕಾರ್ಯಪ್ಪನವರು ನೇರವಾಗಿ ಪ್ರಧಾನಿ ನೆಹರು ಅವರಿಗೆ ಖಾರವಾದ ಪತ್ರವನ್ನು ಬರೆದರು. ‘ಮೇ.ಜ. ತಾರಾಸಿಂಗ್ ಬಾಲ್ ಅವರಂಥ ಯೋಧರು ನಮ್ಮ ಸೈನ್ಯಕ್ಕೆ ಹೆಮ್ಮೆ. ಇಂದು ನಮ್ಮ ಸೇನೆ ಹೀಗಿರುವುದಕ್ಕೆ ತಾರಾಸಿಂಗ್ ಅವರ ಕೊಡುಗೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂಬುದನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ . ಒಬ್ಬ ಯೋಧನ ಮನಸ್ಸನ್ನು ಅರ್ಥಮಾಡಿಕೊಳ್ಳದ ಅಧಿಕಾರಿಗಳ ಮಾತುಗಳನ್ನು ನೀವೇಕೆ ನಂಬುತ್ತೀರಿ? ಸಂಗತಿ ನಿಮಗೆ ಅರ್ಥವಾಗಿರುತ್ತದೆ ಎಂದು ನಾನು ನಂಬುತ್ತೇನೆ’ ಮಡಿಕೇರಿಯಿಂದ ಬಂದ ಪತ್ರ ನೋಡಿದ ನೆಹರು ದಂಗಾದರು. ಈ ಮನುಷ್ಯ ಕಮಾಂಡರ್ ಇನ್ ಚೀಫ್ ಆಗಿದ್ದವರಿಗೆ ಪತ್ರ ಬರೆಯುತ್ತಾನೆಂದು ಯಾವ ಸಚಿವನಿಗೂ ಅಧಿಕಾರಿಗೂ ಹೊಳೆದಿರಲಿಲ್ಲ. ಎಲ್ಲರೂ ಗಾಬರಿಗೊಂಡರು. ಕಾರ್ಯಪ್ಪರ ಪತ್ರಕ್ಕೆ ನೆಹರು ಅಚಾತುರ್ಯದಿಂದ ಈ ಘಟನೆ ನಡೆಯಿತೆಂದು ಕಾರ್ಯಪ್ಪನವರಲ್ಲಿ ಕ್ಷಮಾಪಣೆಯನ್ನು ಕೇಳಿದ್ದರು. ತಾರಾಸಿಂಗ್ ಬಾಲ್ ಅವರ ನಿವೃತ್ತಿ ಮುಂದೆಹೋಯಿತು.
ಯೋಧ ಎಂದೂ ನಿವೃತ್ತನಾಗುವುದಿಲ್ಲ ಎಂಬುದನ್ನು ಕಾರ್ಯಪ್ಪನವರು ತೋರಿಸಿಕೊಟ್ಟಿದ್ದರು. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಕಾರ್ಯಪ್ಪನವರು ಸೇನೆಗಾಗಿ, ಯೋಧನಿಗಾಗಿ ಮಾಡಿದ್ದರು! ಕೊಡವರ ಕೊಡಂದೇರ ಮನೆತನ ಮೊದಲಿನಿಂದಲೂ ಕೊಡಗಿನ ಶ್ರೀಮಂತ ಮನೆತನಗಳಲ್ಲಿ ಒಂದು. ವಿದ್ಯೆ ಮತ್ತು ವಿನಯವಂತಿಕೆಗಳಿಗೂ ಕೊಡಂದೇರ ಮನೆತನ ಹೆಸರುವಾಸಿಯಾದುದು. ಬ್ರಿಟಿಷ್ ಸ್ಟೇಟ್ ಆಗಿದ್ದ ಕೊಡಗಿನಲ್ಲಿ ಕೊಡಂದೇರ ಮನೆತನದ ಹಲವರು ಅಧಿಕಾರಿಗಳಾಗಿದ್ದರು. ಇಂತಹ ಕೊಡಂದೇರ ಮನೆಯಲ್ಲಿ ಹುಟ್ಟಿದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಗೆ ಮಹಾನ್ ಯೋಧರನ್ನು ಕೊಟ್ಟಿತು. ಅವರಲ್ಲಿ ಒಬ್ಬರು ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಮತ್ತೊಬ್ಬರು ನಮ್ಮ ಅಜ್ಜ ಕೊಡಂದೇರ ಮಾದಪ್ಪ ಕಾರ್ಯಪ್ಪ. ಈ ಎರಡೂ ಹೆಸರುಗಳು ಇಂದಿಗೂ ಭಾರತೀಯ ಸೇನೆಯಷ್ಟೇ ಜನರಿಗೆ ಅಕ್ಕರೆಯ, ಹೆಮ್ಮೆಯ ಹೆಸರುಗಳು. 1900ರಲ್ಲಿ ಶನಿವಾರಸಂತೆಯಲ್ಲಿ ಜನಸಿದ ಕಾರ್ಯಪ್ಪನವರು ಕುಶಾಲನಗರ, ವಿರಾಜಪೇಟೆ, ಮಡಿಕೇರಿಗಳಲ್ಲಿ ವ್ಯಾಸಂಗ ಮಾಡಿದರು. ಕ್ರೀಡೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂದು ಹೆಸರು ಗಳಿಸಿದ್ದವರು. ಕಿರಿ ವಯಸ್ಸಲ್ಲೇ ಅವರು ಹಾಕಿ, ಕ್ರಿಕೆಟ್, ಟೆನ್ನಿಸ್, ಪೋಲೋದಂಥ ಆಟವನ್ನು ಮಡಿಕೇರಿಯಲ್ಲಿ ಆಡುತ್ತಿದ್ದರು.
ಭಾರತೀಯ ಸೈನ್ಯವನ್ನು ವಿಶ್ವದರ್ಜೆಯ ಸೈನ್ಯ ಮಾಡಬೇಕೆಂದು ಅವರ ಕನಸ್ಸನ್ನು ಅವರ ಸಾವಿರಾರು ಶಿಷ್ಯರು ಇಂದಿಗೂ ಈಡೇರಿಸುತ್ತಿದ್ದಾರೆ. ಪ್ರತಿಯೊಬ್ಬ ಯೋಧನೂ ಕಾರ್ಯಪ್ಪ ಎಂದಾಗ ಇಂದಿಗೂ ಮುಖ ಅರಳಿಸುತ್ತಾನೆ. ಯಾವುದೇ ಲೇಖಕ ಭಾರತೀಯ ಸೇನೆಯನ್ನು ಉಲ್ಲೇಖಿಸುವಲ್ಲಿ ಕಾರ್ಯಪ್ಪನವರನ್ನು ಉಲ್ಲೇಖಿಸದೇ ಇರಲಾರ ಎಂಬಷ್ಟರಮಟ್ಟಿಗೆ ಇಂಡಿಯನ್ ಆರ್ಮಿ ಮತ್ತುFMKMC(ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ) ನಂಟಿದೆ.
ಕಾರ್ಯಪ್ಪನವರು ಮಹಾದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ಕಾಲಘಟ್ಟವನ್ನು ಒಮ್ಮೆ ನೆನಪಿಸಿಕೊಳ್ಳಿ…
ಒಂದು ದೇಶ ಮೂರು ದೇಶವಾಗಿದ್ದರೆ ಮತ್ತೊಂದು ಕಡೆ ದೇಶದೊಳಗೇ ಹಲವು ಸಂಸ್ಥಾನಗಳು ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುವ ಹುನ್ನಾರದಲ್ಲಿದ್ದವು. ಕಾಶ್ಮೀರದ ರಾಜನ ದ್ವಂದ್ವ ಮಾನಸಿಕತೆಯ ಲಾಭ ಪಡೆದ ಪಾಕಿಸ್ತಾನಿಗಳು ಕಾಶ್ಮೀರಕ್ಕೆ ನುಗ್ಗಲು ಹವಣಿಸುತ್ತಿದ್ದರು. ದಿನಂಪ್ರತಿ ಪಾಕಿಸ್ಥಾನದ ಉಪಟಳ ಹೆಚ್ಚಾಗುತ್ತಲೇ ಇತ್ತು. ಇನ್ನೊಂದೆಡೆ ವಿದೇಶಾಂಗ ವ್ಯವಹಾರಗಳ ಗೊಂದಲಗಳೂ ತಾರಕಕ್ಕೇರುತ್ತಿತ್ತು. ಸರಕಾರ ಮತ್ತು ರಕ್ಷಣೆ ಇವೆರಡರ ನಡುವೆ ಸೇನೆ ಅಡಕತ್ತರಿಯಲ್ಲಿ ಸಿಕ್ಕಿಬಿದ್ದಂತಾಯಿತು.
ಗಾಂಧೀಜಿ ಪಾಕಿಸ್ತಾನದ ಮೇಲೆ ಸೈನಿಕ ಕಾರ್ಯಾಚರಣೆಯನ್ನು ನಡೆಸಬಾರದೆಂದು ಪಟ್ಟುಹಿಡಿದಿದ್ದರು. ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗಗಳು ಪಾಕಿಗಳ ಕೈವಶವಾಗಿದ್ದವು. ಲೇಹ್, ಲದ್ದಾಕ್, ಜೋಜಿಲಾದವರೆಗೂ ಪಾಕ್ ಸೈನಿಕರು ಮುಂದುವರಿದಿದ್ದವು. ಭಾರತದ ಒಂದೊಂದೇ ಭೂಭಾಗವನ್ನು ಆಕ್ರಮಿಸುತ್ತಾ ಪಾಕ್ ಜನಮತಗಣನೆಯ ಅಸ್ತ್ರವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದಿಡುತ್ತಿತ್ತು. ಇವೆಲ್ಲಕ್ಕೂ ಒಂದು ಅಂತ್ಯ ಕಾಣಿಸಬೇಕೆಂದು ಕಾರ್ಯಪ್ಪನವರು ಮಹಾತ್ಮ ಗಾಂಧಿಯವರನ್ನು ಭೇಟಿಯಾಗಲು ತೀರ್ಮಾನಿಸಿದರು. ಆಗ ಗಾಂಧೀಜಿ ಅಹಿಂಸೆಯ ಪ್ರತಿಪಾದನೆಗಾಗಿ ಮೌನ ವೃತವನ್ನು ಆಚರಿಸುತ್ತಿದ್ದರು. ಬಿರ್ಲಾ ಭವನಕ್ಕೆ ತೆರಳಿದ ಕಾರ್ಯಪ್ಪನವರು ಚರಕ ತಿರುಗಿಸುತ್ತಾ ಮೌನದಲ್ಲಿದ್ದ ಗಾಂಧಿ ಎದುರಿನ ಜಮಖಾನಾದಲ್ಲಿ ಕುಳಿತರು.
ಕಾರ್ಯಾಚರಣೆ ನಡೆಸಲು ಸೈನ್ಯ ಸನ್ನದ್ಧವಾಗಿದೆ ಎಂಬ ವಿಷಯವನ್ನು ಗಾಂಧೀಜಿಗೆ ತಿಳಿಸಿದರು. ಗಾಂಧೀಜಿ ಪೇಪರಿನ ತುಂಡಿನಲ್ಲಿ ‘ನೀವು ನನ್ನ ಅಹಿಂಸೆಯ ಬಗೆಗಿನ ಪುಸ್ತಕವನ್ನು ಓದಿದ್ದಿರಾ?’ ಎಂದು ಬರೆದು ಕಾರ್ಯಪ್ಪನವರ ಮುಂದಿಟ್ಟರು. ಅದರ ಅಂತರಾಳ ಕಾರ್ಯಪ್ಪನವರಿಗೆ ತಿಳಿದಿತ್ತು. ಕಾರ್ಯಪ್ಪನವರು ಗಾಂಧೀಜಿಗೆ ‘ಮಹಾತ್ಮ, ನಾವು ಯುದ್ಧ ಮಾಡುವುದೇ ಅಹಿಂಸೆಯ ಪ್ರತಿಷ್ಠಾಪನೆಗಾಗಿ. ಜಗತ್ತಿನಲ್ಲಿ ಯುದ್ಧ ನಡೆಯದಿರಲಿ ಎಂದು ಪ್ರಾರ್ಥಿಸುವ ಏಕೈಕ ಜನಗಳು ಎಂದರೆ ಅದು ನಮ್ಮ ಸೈನ್ಯದವರು ಮಾತ್ರ’ ಎಂದು ಮಾರ್ಮಿಕವಾದ ಉತ್ತರವನ್ನು ಕೊಟ್ಟರು! ಗಾಂಧೀಜಿಯವರಿಗೆ ಆ ಮಾತು ನಾಟಿತು. ಮೂರು ದಿನಗಳು ಕಳೆದು ಬರುವಂತೆ ಅವರು ಕಾರ್ಯಪ್ಪನವರಿಗೆ ತಿಳಿಸಿದರು. ಮೂರು ದಿನದ ನಂತರ ಪುನಃ ಕಾರ್ಯಪ್ಪನವರು ಗಾಂಧೀಜಿ ಬಳಿಗೆ ಹೋದರು. ಆಗ ಅವರ ಮೌನವೃತ ಕೊನೆಗೊಂಡಿತ್ತು. ಕಾರ್ಯಾಚರಣೆಯ ಮಾತೊಂದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಮಾತಾಡಿದ ಗಾಂಧೀಜಿ ‘ಕಾರ್ಯಪ್ಪನವರೇ ನಾನು ಮೊನ್ನೆಯೇ ನಿಮ್ಮನ್ನು ಗಮನಿಸಿದೆ. ನೀವು ಒಳಬರುವಾಗ ನಿಮ್ಮ ಶೂಗಳನ್ನು ಕಳಚಿ ಬಂದಿರಿ. ನನ್ನ ಕಾಲಿಗೆ ನಮಸ್ಕಾರ ಮಾಡಿದ್ದೀರಿ. ಏಕೆ?’ ಕಾರ್ಯಪ್ಪನವರು ‘ಅದು ನನ್ನ ಊರಿನ ಪದ್ಧತಿ. ಹಿರಿಯರನ್ನು ಭೇಟಿಯಾದಾಗ ನಮ್ಮೂರಲ್ಲಿ ಕಾಲಿಗೆ ನಮಸ್ಕಾರ ಮಾಡುವ ಪದ್ಧತಿ ಇದೆ’ ಎಂದು ತಿಳಿಸಿದರು. ಹೀಗೆ ಕೊಡಗಿನ ಸಂಸ್ಕೃತಿಯನ್ನು ಮಹಾತ್ಮ ಗಾಂಧೀಜಿಗೂ ಮನವರಿಕೆ ಮಾಡಿಕೊಟ್ಟರು.
ಇದೇನೇ ಇರಲಿ, ಗಾಂಧೀಜಿಯನ್ನು ಭೇಟಿ ಮಾಡಿ ಬಂದ ಕಾರ್ಯಪ್ಪನವರು ಕಾರ್ಯಾಚರಣೆಯ ರೂಪುರೇಷೆಗಳನ್ನು ನಿರ್ಧರಿಸತೊಡಗಿದರು. ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು. ಮಾತುಕತೆ ನಡೆಯುತ್ತಿದ್ದಂತೆಯೇ ಅಜಾನುಭಾಹು ಮೇ. ಜನರಲ್ ಒಬ್ಬರು ಒಳಪ್ರವೇಶಿಸಿದರು. ಅವರನ್ನು ಉದ್ದೇಶಿಸಿ ಕಾರ್ಯಪ್ಪನವರು ‘ಜನರಲ್ ತಾರಿಕ್ ಇನ್ನಷ್ಟು ಮುಂದೆ ಬರುವುದನ್ನು ನಾನು ಸಹಿಸುವುದಿಲ್ಲ. ಲೇಹ್, ಕಾರ್ಗಿಲ್, ಜೋಜಿ ಪಾಸ್ ಮೂಲಕ ನಾವು ಅವರನ್ನು ಹಿಮ್ಮೆಟ್ಟಿಸಬೇಕು. ಸಮುದ್ರ ಮಟ್ಟದಿಂದ ಕನಿಷ್ಟ 10,500 ಅಡಿ ಎತ್ತರದಲ್ಲಿ ನಾವು ಸೆಣಸಬೇಕಾಗುತ್ತದೆ. ಇದುವರೆಗೆ ಇಂಥ ಯುದ್ಧ ನಡೆದಿಲ್ಲ ಎಂಬುದನ್ನು ಮರೆಯದಿರಿ. ಏ ಡುಬ್ಬು, ನೀನು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕು’ ಎಂದರು. ಕಿಪ್ಪರ್ ಹೇಳಿದರೆಂದರೆ ಮುಗಿಯಿತು.
ಆ ಅಜಾನುಭಾಹು ಯುವಕ ಸೆಟೆದು ನಿಂತು ಸೆಲ್ಯೂಟ್ ಹೊಡೆದ. ಆ ‘ಡುಬ್ಬು’ ಬೇರಾರೂ ಆಗಿರದೆ ಇಡೀ ಭಾರತೀಯ ಸೇನೆಯಲ್ಲಿ ಹೆಸರುವಾಸಿಯಾಗಿದ್ದ ನಮ್ಮ ಕೊಡಗು ದೇಶಕ್ಕೆ ಕೊಟ್ಟ ಅಮೂಲ್ಯ ರತ್ನ ಕೆ. ಎಸ್. ತಿಮ್ಮಯ್ಯ! ಸೈನ್ಯದಲ್ಲಿ ಡುಬ್ಬು ಎಂದೇ ಖ್ಯಾತರಾಗಿದ್ದ ತಿಮ್ಮಯ್ಯನವರು ಈ ಕಾರ್ಯಾಚರಣೆಯ ಮೂಲಕ ಜಗತ್ತೇ ಭಾರತದತ್ತ ನೋಡುವಂತೆ ಮಾಡಿದರು. ಕೊರೆಯುವ ಚಳಿಯಲ್ಲಿ ಸಮುದ್ರ ಮಟದ್ಟದಿಂದ 18,000 ಅಡಿ ಎತ್ತರದಲ್ಲಿ ಟ್ಯಾಂಕರುಗಳನ್ನು ಹತ್ತಿಸಿ ಶತ್ರು ಸೈನಿಕರನ್ನು ಹಿಮ್ಮೆಟ್ಟಿಸಿದರು. ಹೀಗೆ ಗುಬ್ರಿ, ಜೋಜಿಲಾ, ಲದ್ದಾಕ್, ದ್ರಾಸ್, ಫಿಯಾಂಕ್ ಗೊಂಪಾ, ಲೇಹ್ ಸಸರ್ಲಾ, ಚಿಪ್‌ಚಾಪ್‌ಗಳನ್ನು ಭಾರತೀಯ ಸೇನೆ ಮುಕ್ತಗೊಳಿಸಿತು. ಇದರ ಹಿಂದೆ ಇದ್ದ ಶಕ್ತಿ ಕಾರ್ಯಪ್ಪನವರು. ಕಾರ್ಯಪ್ಪನವರು ತಮ್ಮ ಸೈನ್ಯದ ಮೇಲೆ ಎಷ್ಟೊಂದು ನಂಬಿಕೆ ಇಟ್ಟಿದ್ದರೆಂದರೆ ರಾಜಕೀಯ ಮೇಲಾಟಗಳ ಹಂಗಿಲ್ಲದಿರುತ್ತಿದ್ದರೆ ಗಿಲ್ಗಿಟ್, ಬಾಲ್ಟಿಸ್ಥಾನ್‌ಗಳನ್ನೂ ಭಾರತದ ಮುಕ್ತ ಮಾಡಿರುತ್ತಿದ್ದರು. ಅಂಥ ಚಾಕಚಕ್ಯತೆ, ಸಾಹಸ ಪ್ರವೃತ್ತಿ, ನಿಪುಣ ರಣತಂತ್ರ, ಧೈರ್ಯವಂತ ಸೈನಿಕರು ಎಲ್ಲವೂ ಕಾರ್ಯಪ್ಪನವರ ಜತೆಗಿತ್ತು.
ಅವರು ನಮ್ಮ ಸೈನ್ಯಕ್ಕೆ ಹಲವು ಮೊದಲುಗಳನ್ನು ಕೊಟ್ಟವರು. ಸಾಧಾರಣವಾಗಿ ಬಿಳಿಯರೇ ತುಂಬಿರುತ್ತಿದ್ದ ಆರ್ಮಿ ಸ್ಟಾಫ್ ಕಾಲೇಜಿಗೆ ಆಯ್ಕೆಯಾದ ಮೊದಲ ಭಾರತೀಯ, ಭಾರತೀಯ ಸೈನ್ಯದ ಮೊಟ್ಟಮೊದಲ ಕಮಾಂಡಿಂಗ್ ಆಫೀಸರ್ (1942), ಮೊಟ್ಟ ಮೊದಲ ಭಾರತೀಯ ಬ್ರಿಗೇಡಿಯರ್ (1944), ಮೊಟ್ಟ ಮೊದಲ ಭಾರತೀಯ ಜನರಲ್ ಆಫೀಸರ್ (1947), ಮೊಟ್ಟ ಮೊದಲ ಆರ್ಮಿ ಕಮಾಂಡರ್ ಇನ್ ಚೀಫ್ (1948)! ಕಾರ್ಯಪ್ಪನವರಿಗಿಂತ ಮೊದಲು ಡೆಹರಾಡೂನಿನ ಸೈನಿಕ ಶಾಲೆಗೆ ಭಾರತೀಯರು ಪ್ರವೇಶ ಪಡೆದಿದ್ದೇ ಇಲ್ಲ. ಅಂಥಲ್ಲಿ ಕಾರ್ಯಪ್ಪ ಮತ್ತು ತಿಮ್ಮಯ್ಯ ಇಬ್ಬರೂ ಪ್ರವೇಶವನ್ನು ಪಡೆದಿದ್ದು ದಾಖಲೆ. ಮುಂದೆ ಈ ಒಬ್ಬರು ಯೋಧರು ಭಾರತೀಯ ಸೇನೆಯ ಧ್ರುವ ತಾರೆಗಳಾದರು. ಇವತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮದಿನ.

KM Cariappa

Comments are closed.