Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆ ಮಾತುಗಳನ್ನು ಕೇಳುತ್ತಿದ್ದರೆ ಮಾರ್ಟಿನ್ ಲೂಥರ್ ನೆನಪಾಗುತ್ತಿದ್ದ!

ಆ ಮಾತುಗಳನ್ನು ಕೇಳುತ್ತಿದ್ದರೆ ಮಾರ್ಟಿನ್ ಲೂಥರ್ ನೆನಪಾಗುತ್ತಿದ್ದ!

ನನ್ನಲ್ಲೊಂದು ಕನಸಿದೆ…
ನನ್ನ ನಾಲ್ವರು ಪುಟ್ಟ ಮಕ್ಕಳನ್ನು ಅವರ ಚರ್ಮದ ಬಣ್ಣಕ್ಕೆ ಬದಲು ಚಾರಿತ್ರ್ಯದಿಂದ ಅಳೆ ಯುವ ಕಾಲ ಒಂದಲ್ಲ ಒಂದು ದಿನ ಬಂದೇ ಬರುತ್ತದೆ.
ನನ್ನಲ್ಲೊಂದು ಕನಸಿದೆ…
ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಮಾಜಿ ಗುಲಾ ಮರು ಹಾಗೂ ಅವರನ್ನು ಗುಲಾಮರನ್ನಾಗಿ ಮಾಡಿದವರ ಮಕ್ಕಳು ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ ಕುಳಿತು ಮಾತನಾಡಿಕೊಳ್ಳುವಂತಹ ಕಾಲ ಬಂದೇ ಬರು ತ್ತದೆ.
ನನ್ನಲ್ಲೊಂದು ಕನಸಿದೆ…
ಈ ರಾಷ್ಟ್ರ ಒಂದಲ್ಲ ಒಂದು ದಿನ ‘ಎಲ್ಲರೂ ಸಮಾನರು’ ಎಂಬ ಮಾನವತೆಯ ನೈಜ ಆಶಯವನ್ನು ಎತ್ತಿಹಿಡಿಯುತ್ತದೆ ಹಾಗೂ ಅದಕ್ಕನುಗುಣವಾಗಿ ಬದುಕುತ್ತದೆ.

ಅದೇ ನಮ್ಮ ಭರವಸೆ. ಇಂತಹ ಭರವಸೆಯೊಂದಿಗೇ ಒಡೆದ ಸಮಾಜವನ್ನು ಒಂದುಗೂಡಿಸಿ ಸಹೋದರತೆಯ ಬಾಂಧವ್ಯವನ್ನು ಬೆಸೆಯಲು ನಾವು ಯತ್ನಿಸಬೇಕು. ಇಂತಹ ಭರವಸೆಯನ್ನು ಇಟ್ಟುಕೊಂಡೇ ನಾವೆಲ್ಲ ಸಾಂಘಿಕವಾಗಿ ಪ್ರಯತ್ನಿಸಬೇಕು, ಪ್ರಾರ್ಥಿಸಬೇಕು, ಹೋರಾಡಬೇಕು, ಜೈಲು ಸೇರಬೇಕು ಹಾಗೂ ಒಂದಲ್ಲ ಒಂದು ದಿನ ದಾಸ್ಯದ ಸಂಕೋಲೆಯಿಂದ ನಮಗೆ ಮುಕ್ತಿ ಸಿಗುತ್ತದೆ ಎಂಬ ಆಶಯವನ್ನು ಇಟ್ಟುಕೊಂಡಿರಬೇಕು. ಅಂತಹ ಕಾಲ ಬಂದೇ ಬರುತ್ತದೆ ಎಂಬ ಭರವಸೆ ನನಗಿದೆ. ಅಂತಹ ಭರವಸೆಯ ನಾಡು ನನ್ನ ಕಣ್ಣಿಗೆ ಕಾಣುತ್ತಿದೆ. ಅಲ್ಲಿಗೆ ನಾನು ನಿಮ್ಮ ಜತೆ ಬಂದು ತಲುಪದೇ ಇರಬಹುದು. ಇಂದು ನಾನು ಹೇಳುವುದಿಷ್ಟೇ-ನಾವೆಲ್ಲ ಒಂದಾಗಿ ಅಲ್ಲಿಗೆ ಹೋಗಿ ಸೇರೋಣ. ಸ್ವಾತಂತ್ರ್ಯದ ಘಂಟಾನಾದ ಮೊಳಗಲಿ. ಹಾಗೆ ಮೊಳಗಿದಾಗ ಕರಿಯರು, ಬಿಳಿಯರು, ಯಹೂದಿಗಳು, ಹಿಸ್ಪ್ಯಾನಿಯಾಕ್‌ಗಳು, ಪ್ರೊಟೆಸ್ಟಂಟರು, ಕ್ಯಾಥೋಲಿಕ್ಕರು ಹೀಗೆ ದೇವರ ಎಲ್ಲ ಮಕ್ಕಳೂ ಕೈ ಕೈ ಜೋಡಿಸಿ “Free at last! free at last! thank God, we are free at last!” ಎಂಬ ನೀಗ್ರೋನೊಬ್ಬನ ಕವನವನ್ನು ಹಾಡಬಹುದು.
ಅಂತಹ ದಿನ ಬಂದೇ ಬರುತ್ತದೆ.

೧೯೬೩, ಆಗಸ್ಟ್ ೨೮ರಂದು ವಾಷಿಂಗ್ಟನ್‌ನ ಲಿಂಕನ್ ಮೇಮೋರಿಯಲ್‌ನೆದುರು ಡಾ. ಮಾರ್ಟಿನ್ ಲೂಥರ್ ಕಿಂಗ್ ಮಾಡಿದ್ದ ಭಾಷಣದ ಧ್ವನಿ ಮುದ್ರಣವನ್ನು ನೀವೇನಾದರೂ ಕೇಳಿದ್ದಿದ್ದರೆ, ಬುಧವಾರ ಬೆಳಗ್ಗೆ ೧೦ ಗಂಟೆಗೆ ಸಿಎನ್‌ಎನ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ವಿಜಯದ ಭಾಷಣವನ್ನು ಮಾಡುತ್ತಿರುವುದು ಬರಾಕ್ ಒಬಾಮನೋ, ಡಾ. ಕಿಂಗ್ ಅವರೋ ಎಂಬ ಅನುಮಾನ ಖಂಡಿತ ನಿಮ್ಮನ್ನು ಕಾಡಿರುತ್ತದೆ,  ನಿಮ್ಮ ಕಣ್ಣುಗಳೂ ಜಿನುಗಿರುತ್ತವೆ.
ತತ್ತ್ವeನಿಯಂತೆ ಮಾತನಾಡುತ್ತಿದ್ದ ಒಬಾಮ.

“ಅಮೆರಿಕದಲ್ಲಿ ಎಲ್ಲವೂ ಸಾಧ್ಯ ಎಂಬ ಸತ್ಯದ ಬಗ್ಗೆ ಇನ್ನೂ ಯಾರಲ್ಲಾದರೂ ಅನುಮಾನವಿದ್ದರೆ, ನಮ್ಮ ರಾಷ್ಟ್ರ ನಿರ್ಮಾತೃಗಳ ಆಶಯ ನಮ್ಮ ಕಾಲದಲ್ಲೂ ಜೀವಂತವಾಗಿದೆ ಎಂಬ ಬಗ್ಗೆ ಯಾರಾದರು ಇನ್ನೂ ಅನುಮಾನ ಪಡುತ್ತಿದ್ದರೆ, ನಮ್ಮ ದೇಶದ ಪ್ರಜಾತಂತ್ರದ ಶಕ್ತಿಯ ಬಗ್ಗೆ ಇನ್ನೂ ಯಾರ ಮನದಲ್ಲಾದರೂ ಪ್ರಶ್ನೆಗಳಿದ್ದರೆ ಇಂದು ಉತ್ತರ ದೊರೆತಿದೆ. ಈ ಉತ್ತರದಿಂದ ನಾವೆಲ್ಲ ಒಂದಾದರೆ, ಒಂದಾಗಿ ಇತಿಹಾಸದ ಆಗಸದಲ್ಲಿ ಸುಂದರ ಭವಿಷ್ಯದ ರಂಗವಲ್ಲಿ ಹಾಕಬಹುದು ಎಂಬುದರ ಬಗ್ಗೆ ನಮ್ಮಲ್ಲೇ ಇದ್ದ ಸಿನಿಕತೆ, ಸಂಶಯಗಳು ಇಂದು ನಿವಾರಣೆಯಾಗಿವೆ. ಅಂತಹ ಕಾಲ ಬರಲು ಬಹಳ ಸಮಯ ಬೇಕಾಯಿತು. ಆದರೆ ಈ ರಾತ್ರಿ, ಈ ಚುನಾವಣೆಯಲ್ಲಿ, ಇಂತಹ ನಿರ್ಣಾಯಕ ಕ್ಷಣದಲ್ಲಿ, ಈದಿನ ಏನು ಮಾಡಿದೆವೋ ಅದರಿಂದಾಗಿ ಬದಲಾವಣೆ ಅಮೆರಿಕಕ್ಕೆ ಆಗಮಿಸಿದೆ. ಎರಡು ಶತಮಾನ ಕಳೆದರೂ “ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರಕಾರ” ಎಂಬ ಪ್ರಜಾತಂತ್ರದ ಅಶಯ ಈ ಭುವಿಯಿಂದ ನಶಿಸಿ ಹೋಗಿಲ್ಲ ಎಂಬುದನ್ನು ನೀವು ಸಾಬೀತು ಮಾಡಿದ್ದೀರಿ.

ಇದು ನಿಮ್ಮ ವಿಜಯ.

ನನಗೆ ಗೊತ್ತು. ನೀವು ಹಾಗೆ ಮಾಡಿದ್ದು ಕೇವಲ ಒಂದು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಅಲ್ಲ. ನನಗೆ ಗೊತ್ತು, ನೀವು ನನಗಾಗಿಯೂ ಹಾಗೆ ಮಾಡಿದ್ದಲ್ಲ. ಆದರೆ ಮುಂದಿರುವ ಜವಾಬ್ದಾರಿಯ ಆಳ, ಅಂದಾ ಜಿನ ಅರಿವು ನಿಮಗಾಗಿದೆ. ಇಂದು ರಾತ್ರಿ ನಾವು ಸಂಭ್ರಮಿಸಿ ಕೊಳ್ಳುತ್ತಿದ್ದರೂ ನಾಳೆಯೆಂಬುದು ಒಡ್ಡಲಿರುವ ಸವಾಲುಗಳು ನಮ್ಮ ಜೀವಮಾನದಲ್ಲಿಯೇ ಅತ್ಯಂತ ದೊಡ್ಡದಾದವುಗಳು ಎಂಬುದು ನಮಗೆಲ್ಲ ತಿಳಿದಿದೆ. ಎರಡು ಯುದ್ಧಗಳು, ಸಂಕಷ್ಟದಲ್ಲಿರುವ ಭುವಿ, ಶತಮಾನದಲ್ಲಿಯೇ ಅತಿದೊಡ್ಡ ಸಂಕಷ್ಟವೆನಿಸಿರುವ ಹಣಕಾಸು ಬಿಕ್ಕಟ್ಟು ನಮ್ಮ ಮುಂದಿವೆ. ನಾವಿಲ್ಲಿ ನಿಂತಿರಬಹುದು, ಆದರೆ ಇರಾಕ್ ಮರುಭೂಮಿಯಲ್ಲಿ, ಅಫ್ಘಾನಿಸ್ತಾನದ ಪರ್ವತಶ್ರೇಣಿಗಳಲ್ಲಿ ನಮ್ಮ ಸೈನಿಕರು ನಮಗಾಗಿ ಜೀವವನ್ನೇ ಒತ್ತೆಯಾಗಿಟ್ಟು ಹೋರಾಡುತ್ತಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ. ಮುಂದಿನ ಹಾದಿ ಬಲುದೂರ. ನಾವು ಕಡಿದಾದ ಎತ್ತರ ವನ್ನು ಏರಬೇಕಿದೆ. ಹಾಗೆ ಏರಿ ತಲುಪಲು ಒಂದು ವರ್ಷವೂ ಬೇಕಾಗಬಹುದು, ಒಂದು ಅವಧಿಯೂ (೪ ವರ್ಷ) ಸಾಕಾಗದೇ ಇರಬಹುದು. ಆದರೆ ನನ್ನಲೀಗ ಹಿಂದೆಂದಿಗಿಂತಲೂ ಹೆಚ್ಚಿನ ವಿಶ್ವಾಸವಿದೆ, ನಾವು ಆ ಎತ್ತರವನ್ನು ತಲುಪಿಯೇ ತೀರುತ್ತೇವೆ. ನಾವೆಲ್ಲ ಒಂದಾಗಿ ಹೋಗಿ ಸೇರೋಣ. ೨೨೧ ವರ್ಷಗಳ ಹಿಂದೆ ಮಾಡಿದಂತೆ ನಾವೆಲ್ಲ ಒಂದಾಗಿ ಸೇರಿ ಈ ದೇಶವನ್ನು ಪುನರ್‌ನಿರ್ಮಾಣ ಮಾಡೋಣ. ಕೈ ಕೈ ಸೇರಿಸಿ, ಇಟ್ಟಿಗೆಯ ಮೇಲೆ ಇಟ್ಟಿಗೆಯ ನ್ನಿಟ್ಟು ದೇಶ ಕಟ್ಟೋಣ. ಈ ಗೆಲುವೊಂದೇ ನಾವು ಬಯಸಿದ ಬದಲಾವಣೆಯಲ್ಲ. ಇದು ಬದಲಾವಣೆಯನ್ನು ತರಲು ದೊರೆತಿರುವ ಅವಕಾಶವಷ್ಟೇ.

ಈ ಚುನಾವಣೆ ಹಲವಾರು ಪ್ರಥಮಗಳಿಗೆ ಹಾಗೂ ತಲತಲಾಂತರಗಳವರೆಗೂ ಹೇಳಬಹುದಾದ ಹಲವು ಕಥೆಗಳಿಗೆ ಸಾಕ್ಷಿಯಾಗಿದೆ. ಅಂಟ್ಲಾಂಟದಲ್ಲಿ ಮತ ಹಾಕಿದ ಒಬ್ಬ ಮಹಿಳೆಯ ಬಗ್ಗೆ ನಿಮಗೆ ಹೇಳಬೇಕಿನಿಸಿದೆ. ಉದ್ದದ ಸಾಲಿನಲ್ಲಿ ನಿಂತು ಮತಹಾಕಿದ ಲಕ್ಷಾಂತರ ಅಮೆರಿಕನ್ನರಲ್ಲಿ ಆಕೆಯೂ ಒಬ್ಬಳಾಗಿದ್ದರೂ ಒಂದು ವ್ಯತ್ಯಾಸವಿದೆ. ಆನ್ ನಿಕ್ಸನ್ ಕೂಪರ್‌ಗೆ ೧೦೬ ವರ್ಷ! ಗುಲಾಮಗಿರಿ ಅಂತ್ಯಗೊಂಡ ತದನಂತರದ ತಲೆಮಾರಿಗೆ ಆಕೆ ಸೇರಿದ್ದಾಳೆ. ಆ ಕಾಲದಲ್ಲಿ ರಸ್ತೆಗಳಲ್ಲಿ ಕಾರುಗಳಿರಲಿಲ್ಲ, ಆಗಸದಲ್ಲಿ ವಿಮಾನಗಳಿರಲಿಲ್ಲ. ಎರಡು ಕಾರಣಕ್ಕಾಗಿ ಆಕೆಗೆ ಮತದಾನ ಮಾಡುವ ಹಕ್ಕೂ ಇರಲಿಲ್ಲ-ಮಹಿಳೆ ಎಂಬ ಕಾರಣಕ್ಕೆ ಹಾಗೂ ಆಕೆಯ ಚರ್ಮದ ಬಣ್ಣದ(ಕಪ್ಪು) ಸಲುವಾಗಿ. ೧೦೬ ವರ್ಷದ ಆಕೆ ಒಂದು ಶತಮಾನದಲ್ಲಿ ಕಂಡುಬಂದ ಎಲ್ಲ ಬದಲಾವಣೆಗಳಿಗೂ ಸಾಕ್ಷಿಯಾಗಿದ್ದಾಳೆ. ಗುಲಾಮಗಿರಿಯ ಸಂಕಷ್ಟಗಳನ್ನು ಅನುಭವಿಸಿದ್ದಾಳೆ, ದೇಶ ಕಂಡ ಅತ್ಯಂತ ಕಷ್ಟಕರ ಆರ್ಥಿಕ ಹಿನ್ನಡೆಯನ್ನು ದಾಟಿ ಬಂದಿದ್ದಾಳೆ, ಎರಡನೇ ಮಹಾಯುದ್ಧವನ್ನೂ ನೋಡಿದ್ದಾಳೆ, ಹೋರಾಟ ಹಾಗೂ ಪ್ರಗತಿಗಳೆರಡಕ್ಕೂ ಸಾಕ್ಷೀಭೂತಳಾಗಿದ್ದಾಳೆ. ಮಹಿಳೆಯರ ಮತದಾನ ಹಕ್ಕನ್ನು ಕಿತ್ತುಕೊಂಡ, ಮಹಿಳೆಯರ ಧ್ವನಿಯನ್ನು ಉಡುಗಿಸಿದ ಕಾಲವನ್ನು ಮೀರಿಬಂದಿದ್ದಾಳೆ. ಈ ಅವಧಿಯಲ್ಲಿ ಚಂದ್ರನ ಮೇಲೆ ಮಾನವ ಕಾಲಿಟ್ಟ, ಬರ್ಲಿನ್ ಗೋಡೆ ಕೆಳಗುರುಳಿತು, ನಮ್ಮ ವಿeನ ಮತ್ತು ಭವಿಷ್ಯದ ಕಲ್ಪನೆ ಜಗತ್ತನ್ನೇ ಒಂದಾಗಿಸಿತು. ಇಂತಹ ಎಲ್ಲ ಕಾಲಘಟ್ಟಗಳನ್ನು ದಾಟಿ ಬಂದ ಆಕೆ ಈ ವರ್ಷ, ಈ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿ ಬಂದಿದ್ದಾಳೆ. ಏಕೆಂದರೆ ಆಕೆಗೆ ಗೊತ್ತು-ಅಮೆರಿಕ ಬದಲಾಗಬಲ್ಲದು.

Yes we can.

ಅಮೆರಿಕಾ… ನಾವು ಬಲುದೂರ ಬಂದಿದ್ದೇವೆ. ಬಹಳಷ್ಟನ್ನು ನೋಡಿದ್ದೇವೆ. ಆದರೆ ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ. ಹಾಗಾಗಿ ಇಂದು ನಮ್ಮನ್ನು ನಾವೇ ಕೇಳಿಕೊಳ್ಳೋಣ. ಒಂದು ವೇಳೆ ನಮ್ಮ ಮಕ್ಕಳು ಮುಂದಿನ ಒಂದು ಶತಮಾನವನ್ನು ಕಾಣಬೇಕೆಂದಾದರೆ, ನನ್ನ ಇಬ್ಬರು ಹೆಣ್ಣುಮಕ್ಕಳು ಶತಾಯುಷಿ ಆನ್ ನಿಕ್ಸನ್‌ಳಷ್ಟು ಅದೃಷ್ಟವಂತರಾಗಿದ್ದರೆ ಅವರು ಎಂತಹ ಬದಲಾವಣೆ, ಪ್ರಗತಿಯನ್ನು ನೋಡಬೇಕು? ಅವರಿಗೆ ನಾವು ಅಂದೆಂಥಾ ಭವಿಷ್ಯ, ಬದುಕನ್ನು ಕಟ್ಟಿಕೊಡಬೇಕು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ಅವಕಾಶ ಇದಾಗಿದೆ. ಇದು ನಮ್ಮ ಕ್ಷಣ. ನಮ್ಮ ಜನರಿಗೆ ಉದ್ಯೋಗವನ್ನು ಕಲ್ಪಿಸುವ, ನಮ್ಮ ಮಕ್ಕಳಿಗೆ ಅವಕಾಶಗಳ ಬಾಗಿಲನ್ನೂ ತೆರೆಯುವ, ಪ್ರಗತಿ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸುವ, ಶಾಂತಿ-ನೆಮ್ಮದಿ ಯನ್ನು ನೆಲೆಗೊಳಿಸುವ, ನಾವೆಲ್ಲ ಒಂದೇ ಎನ್ನುವ ಧ್ಯೇಯಕ್ಕೆ ಮತ್ತೆ ಬದ್ಧತೆ ವ್ಯಕ್ತಪಡಿಸಬೇಕಾಗಿರುವ ಕಾಲವಿದು.

Yes we can.

ಮೊನ್ನೆ ಮಂಗಳವಾರ ರಾತ್ರಿ(ಅಮೆರಿಕದ ಕಾಲಮಾನ) ಕರಿ-ಬಿಳಿಯರೆನ್ನದೆ ಷಿಕಾಗೋದಲ್ಲಿ ನೆರೆದಿದ್ದ ೭೫ ಸಾವಿರ ಬೆಂಬಲಿಗರು ಹಾಗೂ ದೇಶವಾಸಿಗಳನ್ನುದ್ದೇಶಿಸಿ ಒಬಾಮ ಮಾತನಾಡುತ್ತಿದ್ದರೆ ಡಾ. ಮಾರ್ಟಿನ್ ಲೂಥರ್ ಕಿಂಗ್ ಪರಾಕಾಯ ಪ್ರವೇಶ ಮಾಡಿ ಒಬಾಮನ ಮೂಲಕ ಮಾತ ನಾಡುತ್ತಿದ್ದಾರೋ ಏನೋ ಎಂಬ ಗೊಂದಲ ಮನವನ್ನು ಕಾಡುತ್ತಿತ್ತು. ಒಬಾಮನ ಮಾತನ್ನು ಕೇಳುತ್ತಿದ್ದ ಖ್ಯಾತ ಸಾಮಾಜಿಕ ಹಕ್ಕುಗಳ ಹೋರಾಟಗಾರ ಜೆಸ್ಸಿ ಜಾಕ್ಸನ್ ಬಿಕ್ಕಳಿಸಿ ಅಳುತ್ತಿದ್ದರು, ವಿಶ್ವವಿಖ್ಯಾತ ಟಿವಿ ಕಾರ್ಯಕ್ರಮ ನಿರೂಪಕಿ ಓಪ್ರಾ ವಿನ್‌ಫ್ರೇ ಕಣ್ಣುಗಳು ಜಿನುಗುತ್ತಿದ್ದವು, ನೆರೆದ ಜನರ ಕಣ್ಣುಗಳಿಂದಲೂ ಅಶ್ರುಧಾರೆ ಸುರಿಯುತ್ತಿತ್ತು. ಒಂದು ವೇಳೆ ರೋಸಾ ಪಾರ್ಕ್, ಮಾರ್ಟಿನ್ ಲೂಥರ್ ಕಿಂಗ್ ಬದುಕಿರುತ್ತಿದ್ದಿದ್ದರೆ ಧನ್ಯತಾ ಭಾವನೆಯಿಂದ ಅವರ ಕಣ್ಣುಗಳೂ ಒದ್ದೆಯಾಗಿರುತ್ತಿದ್ದವು. ಆದರೇನಂತೆ, ೪೫ ವರ್ಷಗಳ ಹಿಂದೆ ಡಾ. ಕಿಂಗ್ ಹಂಚಿಕೊಂಡಿದ್ದ  ಕನಸು ನನಸಾಗಿದೆ. ಅಮೆರಿಕನ್ನರು ಚರ್ಮದ ಬಣ್ಣದ ಬದಲು ಚಾರಿತ್ರ್ಯದಿಂದ ವ್ಯಕ್ತಿಯನ್ನು ಅಳೆದಿದ್ದಾರೆ. ಒಬಾಮ ಅವರನ್ನು ಆಯ್ಕೆ ಮಾಡಿದ್ದಾರೆ.

ಭಾರತೀಯರಾದ ನಾವು ಎರಡು ಸಾವಿರ ವರ್ಷಗಳ ಕಾಲ ಹಿಂದುಳಿದ ಜಾತಿಗಳ ಮೇಲೆ ಎಸಗಿದ ದೌರ್ಜನ್ಯಕ್ಕಿಂತ ಹೀನ ಪಾಪವನ್ನು ಅಮೆರಿಕ ಕಳೆದ ಎರಡು ಶತಮಾನಗಳಲ್ಲಿ ಮಾಡಿದೆ. ಆದರೆ ಕಾಲಾಂತರದಲ್ಲಿ ಅಂತಹ ಪ್ರತಿ ತಪ್ಪು ಗಳನ್ನೂ ಗುರುತಿಸಿ, ಸರಿಪಡಿಸಿಕೊಳ್ಳುತ್ತಾ ಬಂತು. ಕರಿಯ ರಿಗೆ ಗುಲಾಮ ಗಿರಿಯಿಂದ ಮುಕ್ತಿಯನ್ನೂ ನೀಡಿದರು, ಮತದಾನದ ಹಕ್ಕನ್ನೂ ಕೊಟ್ಟರು, ಸಮಾನ ಹಕ್ಕು ಮತ್ತು ಸೌಲಭ್ಯ-ಸವಲತ್ತುಗಳನ್ನೂ ಕೊಡಮಾಡಿದರು, ಅಂತಿಮವಾಗಿ ಮನಸ್ಸಿನಿಂದಲೂ ಬಿಳಿ-ಕರಿ ತೊಗಲೆಂಬ ತಾರತಮ್ಯವನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ. ಬಿಳಿಯರು ಇಂತಹ ಸಂವೇದನೆಯನ್ನು ಬೆಳೆಸಿಕೊಳ್ಳುವಲ್ಲಿ, ತೋರ್ಪಡಿಸುವಲ್ಲಿ ಕರಿಯರ ಸನ್ನಡತೆಯ ಪಾತ್ರವೂ ಇದೆ. “ನಮಗೂ ಸಮಾನ ಹಕ್ಕು ಕೊಡಿ” ಎಂದು  ಕರಿಯರು ಹೋರಾಡಿದರೇ ಹೊರತು ಪ್ರತೀಕಾರ ತೆಗೆದುಕೊಳ್ಳಲು ಎಂದೂ ಪ್ರಯತ್ನಿಸಲಿಲ್ಲ. ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ತುಳಿದರೇ ಹೊರತು ಸಾಮಾಜಿಕ ಸಂಘರ್ಷಕ್ಕೆ ಮುಂದಾಗಲಿಲ್ಲ.

ಮೊನ್ನೆ ನಡೆದ ಅಮೆರಿಕದ ೪೪ನೇ ಅಧ್ಯಕ್ಷೀಯ ಚುನಾವಣೆ ಹಾಗೂ ಬರಾಕ್ ಒಬಾಮ ಆಯ್ಕೆಯಿಂದ ಭಾರತೀಯರಾದ ನಮಗೂ ಒಂದು ಪಾಠವಿದೆ.

ಅಲ್ಲಿನ ಶ್ವೇತವರ್ಣೀಯರು ಗುಲಾಮಗಿರಿಯ ಮೂಲಕ ದೌರ್ಜನ್ಯವೆಸಗಿದರೆ ನಮ್ಮಲ್ಲಿನ ಅಸ್ಪೃಶ್ಯತೆ ಗುಲಾಮಗಿರಿಗಿಂತ ಹೀನ ಆಚರಣೆಯಾಗಿತ್ತು. ಇಂತಹ ಕಾಲಘಟ್ಟವನ್ನು ದಾಟಿ ನಾವೂ ಮುಂದೆ ಬಂದಿದ್ದರೂ ಜಾತಿಯೆಂಬ ಬೇರುಗಳು ಸಾಮಾಜಿಕ ಏಕತೆಗೆ ಇಂದಿಗೂ ತೊಡಕಾಗಿವೆ. ಆದರೆ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಪ್ರತಿ ದೌರ್ಜನ್ಯದ ಮೂಲಕ ಲೆಕ್ಕ ಚುಕ್ತಾ ಮಾಡುವ ಮನಸ್ಥಿತಿ ನಮ್ಮಲ್ಲಿ ಕಂಡು ಬರುತ್ತಿದೆ! ‘ಬ್ರಾಹ್ಮಣರು ಎರಡು ಸಾವಿರ ವರ್ಷಗಳ ಕಾಲ ನಮ್ಮ ಮೇಲೆ ದೌರ್ಜನ್ಯವೆಸಗಿದರು, ಇನ್ನು ಮುಂದೆ ನಾವು ಅವರ ಮೇಲೆ ಪ್ರತೀಕಾರ ತೆಗೆದುಕೊಳ್ಳೋಣ. ಬ್ರಾಹ್ಮಣರು ನಮ್ಮನ್ನು ವಿದ್ಯೆಯಿಂದ ವಂಚಿಸಿದರು, ನಾವು ಮಿತಿಯಿಲ್ಲದ ಮೀಸಲಾತಿಯ ಮೂಲಕ ಅವರನ್ನು ಉದ್ಯೋಗದಿಂದಲೇ ವಂಚಿಸೋಣ’. ಇಂತಹ ಧೋರಣೆಗಳು ನಮ್ಮಲ್ಲಿ ಕಾಣ ಸಿಗುತ್ತವೆಯೇ ಹೊರತು, ನಾವೆಲ್ಲ ಒಂದಾಗಬೇಕು ಎಂಬ ‘ಒಳಗೊಳ್ಳುವಿಕೆ’ ಮನಸ್ಥಿತಿಯನ್ನು ಮೇಲ್ಜಾತಿ-ಕೆಳಜಾತಿಗಳೆರಡರಲ್ಲೂ ಕಾಣಲು ಕಷ್ಟವಾಗುತ್ತಿದೆ.

ಆದರೆ ಬರಾಕ್ ಒಬಾಮ ನಡೆದುಕೊಂಡ ರೀತಿಯನ್ನು ನೋಡಿ.

ಒಂದಾನೊಂದು ಕಾಲದಲ್ಲಿ ಬಿಲ್ ಆಯೆರ್‌ನಂತಹ ಮೂಲಭೂತವಾದಿಗಳ ಜತೆ ಒಬಾಮ ಕೈಜೋಡಿಸಿದ್ದ ಎಂದು ರಿಪಬ್ಲಿಕನ್ ಪಕ್ಷದ ಉಮೇದುವಾರ ಜಾನ್ ಮೆಕೇನ್ ಸಾರ್ವಜನಿಕವಾಗಿ ಆರೋಪ ಮಾಡಿದರೂ ಒಬಾಮ ಪ್ರತಿಕ್ರಿಯಿಸಲಿಲ್ಲ. ಜನಾಂಗೀಯ ವಾದವನ್ನು ಎಳೆದು ತರಲು ಪ್ರಯತ್ನಿಸಿದರೂ ಒಬಾಮ ಓಗೊಡಲಿಲ್ಲ. “ಹುಸೇನ್” ಎಂಬ ಆತನ ಮಧ್ಯದ ಹೆಸರನ್ನು ಎಳೆದು ತಂದು ಪಕ್ಕಾ ಕ್ರೈಸ್ತನಾದ ಆತನನ್ನು ಮುಸ್ಲಿಮನೆಂದು ಚಿತ್ರಿಸಲು ಯತ್ನಿಸಿದಾಗಲೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಅಷ್ಟು ಮಾತ್ರವಲ್ಲ, ತಾನೊಬ್ಬ ಬ್ಲ್ಯಾಕ್, ತುಳಿಕ್ಕೊಳಗಾದವನು, ದೌರ್ಜನ್ಯಕ್ಕೀಡಾದವನು. ಹಾಗಾಗಿ ನನಗೆ ಮತ ನೀಡಿ ಎಂದು ನಮ್ಮ ರಾಜಕಾರಣಿಗಳಂತೆ ಆತನೆಂದೂ ಅಂಗಲಾಚಲಿಲ್ಲ. ಆದರೆ ಉದ್ಯೋಗ ಸೃಷ್ಟಿಯ ಮಾತನಾಡಿದ, ಜನರ ಮನದಲ್ಲಿ ಹೊಸ ಕನಸುಗಳನ್ನು ಬಿತ್ತಿದ, ಅಮೆರಿಕವೆಂತಹ ಮಹಾನ್ ರಾಷ್ಟ್ರ ಎಂಬುದನ್ನು ವಿವರಿಸಿದ ಹಾಗೂ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ. ಹಾಗಾಗಿ ಜನರಿಗೂ ಆತನ ಮೇಲೆ ವಿಶ್ವಾಸ ಮೂಡಿತು, ಆತನ ತೊಗಲಿನ ಬಣ್ಣ ಅವರಿಗೆ ಮುಖ್ಯವಾಗಲಿಲ್ಲ. ಆತನ ಮಾತುಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುವಂತಿದ್ದವು. ಯೋಗಿಯಂತೆ, ತತ್ತ್ವeನಿ ಯಂತೆ ಮಾತನಾಡುವ ಆತನ ಮೋಡಿಯಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇಂತಹ ಒಬಾಮನಿಗೆ ಸ್ವತಂತ್ರವಾಗಿ ನಾಲ್ಕು ಸಾಲುಗಳನ್ನು ಹೇಳಲು ಬಾರದ ನಮ್ಮ ಮಾಯಾವತಿಯವರನ್ನು ಹೋಲಿಸುತ್ತಿದ್ದಾರೆ!! “ದಿ ಹಿಂದೂ” ಪತ್ರಿಕೆಯಲ್ಲಂತೂ “Can Mayawati do a Barack Obama?” ಎಂಬ ಶೀರ್ಷಿಕೆಯಡಿ ಲೇಖನವೊಂದು ಪ್ರಕಟವಾಗಿದೆ. “ಅವರಿಗೆ ಒಬಾಮ, ನಮಗೆ ಮಾಯಾವತಿ” ಎಂಬ ಹೊಸ ವಾದ ಸರಣಿ ಕೇಳಿ ಬರುತ್ತಿದೆ. ಜಾತಿ ಹೆಸರು ಹೇಳಿಕೊಂಡೇ ರಾಜಕೀಯ ಮಾಡುವ, ಮತ ಕೇಳುವ, ಜಾತಿಯನ್ನೇ ಮಾನದಂಡವನ್ನಾ ಗಿಟ್ಟುಕೊಂಡು ಭಾರತವನ್ನು ಆಳುವ ಕನಸು ಕಾಣುತ್ತಿರುವ, ಮೇಜ್ಜಾತಿಯವರನ್ನು ತೆಗಳುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಮಾಯಾವತಿ, ಮುಲಾಯಂ, ಲಾಲು, ಪಾಸ್ವಾನ್‌ಗಳಿಗೆ ಒಬಾಮನಂತಹ “ಇನ್‌ಕ್ಲೂಸಿವ್” ನಾಯಕನನ್ನು ಹೋಲಿಸುವುದು ಆತನಿಗೆ ಮಾಡುವ ಅಪಚಾರವಲ್ಲದೆ ಮತ್ತೇನು?

ಇದನ್ನು ಅರ್ಥಮಾಡಿಕೊಂಡು, ಒಬಾಮನನ್ನು ಮಾದರಿಯಾಗಿಟ್ಟು ನಮ್ಮ ನಾಯಕರೂ ದೇಶವನ್ನು ಮುನ್ನಡೆ ಸಲು ಮುಂದಾದರೆ ಎಲ್ಲ ಜಾತಿ, ಮತ, ಧರ್ಮಗಳ ಅಭ್ಯುದಯವೂ ಆಗುತ್ತದೆ, ದೇಶಕ್ಕೂ ಒಳಿತಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಮಾತನಾಡಿದಾಗ ಜಾತಿ, ಧರ್ಮಗಳ ಲೆಕ್ಕ ಬಿಟ್ಟು ಎಲ್ಲರೂ ವೋಟು ಹಾಕುತ್ತಾರೆ.

ಇದೇನೇ ಇರಲಿ, ಕಳೆದ ಸೆಪ್ಟೆಂಬರ್‌ನಲ್ಲಿ “ಫಾಕ್ಸ್ ನ್ಯೂಸ್”ಗೆ ನೀಡಿದ್ದ ಸಂದರ್ಶನದಲ್ಲಿ “ಯಾವ ಪೂರ್ವ ಷರತ್ತು, ಜವಾಬ್ದಾರಿಗಳನ್ನು ನೀಡದೆ ನಾವು ಪಾಕಿಸ್ತಾ ನಕ್ಕೆ ಮಿಲಿಟರಿ ಸಹಾಯ ನೀಡುತ್ತಿದ್ದೇವೆ. ಆದರೆ ಪಾಕಿಸ್ತಾನಿಯರು ದೇಶ ರಕ್ಷಣೆಗೆ ಅದನ್ನು ಬಳಸಿಕೊಳ್ಳುವ ಬದಲು ಭಾರತದೊಂದಿಗೆ ಯುದ್ಧಕ್ಕೆ ಸಿದ್ಧರಾಗಲು ಉಪಯೋಗಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದರು ಬರಾಕ್ ಒಬಾಮ. ಈ ಮಾತನ್ನು ಗಮನಿಸಿದರೆ ಅವರಿಗೆ ಪಾಕಿಸ್ತಾನದ ನಿಜಬಣ್ಣದ ಅರಿವು ಇದೆ ಎಂಬುದು ಗೊತ್ತಾಗುತ್ತದೆ. ಈಗಾಗಲೇ ಸಾಕಷ್ಟು ಬಾರಿ ಒಸಾಮ ಬಿನ್ ಲಾಡೆನ್‌ನನ್ನು ಪತ್ತೆ ಹಚ್ಚಿ ಕೊಲ್ಲುವ ಮಾತನ್ನೂ ಆಡಿದ್ದಾರೆ, ಅಗತ್ಯ ಬಿದ್ದರೆ ಪಾಕಿಸ್ತಾನದ ಭೂಭಾಗದ ಮೇಲೆ ದಾಳಿ ಮಾಡುವುದಾಗಿಯೂ ಹೇಳಿದ್ದಾರೆ. ಅವರು ಮಾತಿನಂತೆಯೇ ನಡೆದುಕೊಂಡರೆ ಅಮೆರಿಕವೊಂದೇ ಅಲ್ಲ, ನಮ್ಮ ಭಾರತಕ್ಕೂ ಒಳಿತಾಗುತ್ತದೆ. ಆದರೆ ಈಗ ಏನನ್ನೂ ಹೇಳಲು, ಊಹೆ ಮಾಡಲು ಸಾಧ್ಯವಿಲ್ಲ.

ಸದ್ಯಕ್ಕೆ Three Cheers to Obama!

10 Responses to “ಆ ಮಾತುಗಳನ್ನು ಕೇಳುತ್ತಿದ್ದರೆ ಮಾರ್ಟಿನ್ ಲೂಥರ್ ನೆನಪಾಗುತ್ತಿದ್ದ!”

  1. GRTGowda says:

    ಪ್ರತಾಪ್,
    ಒಬಾಮಾನಂತೋರು ಭಾರತದಲ್ಲಿ ಹುಟ್ಟುವ ಮೊದಲು ಈ ಮೇಲ್ಜಾತಿಯವರು ತಮ್ಮ ಸ್ವಂತ ಉಪಯೋಗಕ್ಕೊಸ್ಕರ ಹುಟ್ಟು ಹಾಕಿರುವ “ಜಾತಿ ಪದ್ದತಿಯನ್ನು” ಆವರೇ ನಾಶ ಮಾಡಬೇಕು. ಅದು ಆಗದೆ ಒಬಾಮನಂತೋರು ಭಾರತದಲ್ಲಿ ಹುಟ್ಟುವುದು ಕಷ್ಟ ಸಾದ್ಯ. ಅಕಸ್ಮಾತ್ ಹುಟ್ಟಿದರೂ ಬದುಕುವುದು ಕಷ್ಟ.

    ಈಗಾಗಲೇ ಅವರುಗಳೇ ಸೃಷ್ಟಿಸಿರುವ “ಜಾತಿ ಪದ್ದತಿಯ” ಫಲವನ್ನು ತಿನ್ನುತಿದ್ದಾರೆ, ಇನ್ನೂ ಕೂಡ ಹೆಚ್ಚಿತ್ತು ಕೊಳ್ಳದಿದ್ದರೆ “ಮಾಯಾವತಿ” ಯಂತೋರು ಹುಟ್ತುತಾರೆಯೇ ಹೊರೆತು ಒಬಾಮನಂತೋರು ಹುಟ್ಟೋದು ಕಷ್ಟ. ಆದರೆ ಈಗಿನ ಪರಿಸ್ತಿತಿ ನೋಡಿದರೆ ಮೇಲ್ಜಾತಿಯವರಲ್ಲಿ ಆ ರೀತಿಯ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ, ಅವರಿಗೆಲ್ಲಾ ಇನ್ನೂ ಕೂಡ ಕೆಳ ಜಾತಿಯವರನ್ನು ಗುಲಾಮರಾಗಿ ನಡೆಸಿಕೊಳ್ಳುವ ದುರಾಸೆ ಹೋಗಿಲ್ಲ. ಧರ್ಮದ ಮಟ್ಟದಲ್ಲಿ ಮಾತನಾಡುವ ಸಮಯದಲ್ಲಿ ಎಲ್ಲಾ ಸರಿಯಾಗಿ ಮಾತನಾಡುವ ನಮ್ಮ “ಬುದ್ದಿ ಜೀವಿಗಳು” ಧರ್ಮದ ಒಳಗಡೆ ಬಂದರೆ ಅದೇ ಥರ್ಡ್ ಕ್ಲಾಸ್ ಮೆಂಟಾಲಿಟಿ ತೋರಿಸಿಬಿಡ್ತಾರೆ.

    ಜಾತಿ ಪದ್ದತಿಗೂ ವರ್ಣ ಭೇದ ನೀತಿಗೂ ಹೋಲಿಕೆ ಮಾಡೋದು ನನಗೆ ಅಸ್ಟೂ ಸಮಂಜಸ ಅಂಥ ಅನಿಸುತ್ತಿಲ್ಲ. ವರ್ಣ ಭೇದ ಕೇವಲ ಜನಗಳ ಮೆಂಟಾಲಿಟಿ ಮಟ್ಟದಲ್ಲಿ ಇತ್ತು ಆದರೆ ನಮ್ಮ ಮೇಲ್ಜಾತಿಯವರು ಜಾತಿ ಭೇದವನ್ನು ಅಂಥ ನಂಬಿಸಿ, ಜಾತಿ ಭೇದವನ್ನು ಧರ್ಮದ ಒಂದು ಅಂಗ ಅಂಥ ತಲಾ ತಲಾಂತರಗಳಿಂದ ನಂಬಿಸಿ ಬಿಟ್ಟಿದ್ದಾರೆ. ಜೊತೆಗೆ ಈಗಿನ ರಾಜಕಾರಿಣಿಗಳು ಅದು ಅಳಿಸಿ ಹೋಗದಂತೆ ಶ್ರದ್ದಾ ಭಕ್ತಿಯಿಂದ ನೋಡಿಕೊಳ್ಳುತಿದ್ದಾರೆ. ಯಡ್ಯೂರಪ್ಪನವರಿಗೆ ಪಕ್ಷಕ್ಕಿಂತ ಸ್ವಂತ ಆಸೆಗಳು ಮುಖ್ಯ ಹಾಗು ರಾಜ್ಯಕ್ಕಿಂತ ತನ್ನ ಜಾತಿಯ ಮಠಗಳು ಮುಖ್ಯ. ರಾಜ್ಯದ ರಸ್ತೆಗಳೆಲ್ಲ ಹದಗೆಟ್ಟು ಹೋಗಿದ್ದರು ರೆಪೇರಿ ಮಾಡಿಸಲಿಕ್ಕೆ ಹಣ ಇಲ್ಲ, ವಿದ್ಯುತ್ ಇಲ್ಲದೆ ಈಡೀ ರಾಜ್ಯ ಕತ್ತಲೆಯಲ್ಲಿ ಮುಳುಗಿದ್ದರು ಅವರಿಗೆ ಚಿಂತೆಯಿಲ್ಲ, ಬೆಂಗಳೂರಿನಲ್ಲಿ ಜೀವನ ಮಾಡುವುದು ನರಕವಾಗಿದ್ದರು ತೊಂದರೆ ಇಲ್ಲಾ. ಇದೆಲ್ಲದಕ್ಕಿಂತ ಅವರಿಗೆ ಮುಖ್ಯವಾದದ್ದು ಆವರ ಜಾತಿಯ ಮಠಕ್ಕೆ “ಸೇವೆ”. ಮತ ಹಾಕಿದ ಜನರಿಗಿಂತ ಚುನಾವಣೆಗೆ ಹಣ ಕೊಟ್ಟ “ರೆಡ್ಡಿ”ಗಳು ಮುಖ್ಯ. ನಮ್ಮ ಮುಖ್ಯ ಮಂತ್ರಿಗಳಿಗೆ ಯಾವ ಕೆಲಸ ಮುಖ್ಯ, ಜನ ಯಾವ ಕಾರಣಕ್ಕೆ ಮತ ಹಾಕಿದ್ದಾರೆ ಅಂಥ ತಿಳಿದು ಕೊಳ್ಳುವಸ್ಟು ಬುದ್ದಿ ಇಲ್ಲವೇ? ಇವರಿಗೆ ಶೋಭಾ-ರೆಡ್ಡಿ-ಮಠಗಳ ಆಚೆಗೆ ಯೋಚನೆ ಮಾಡಲಿಕ್ಕೆ ಯಾಕೆ ಆಗೋಲ್ಲ?. ಒಬಾಮ ಯಾವತ್ತು ತನ್ನ ವರ್ಗದವರಿಗೆ ವಿಶೇಷವಾದ ಹೊತ್ತು ಕೊಟ್ಟಿಲ್ಲ, ಆವರ ಮೋದಲ ದ್ಯೇಯ ಅಮೇರಿಕಾದ ಉದ್ದಾರ, ಅದರ ಮೂಲಕ ಆವರ ವರ್ಗದವರ ಉದ್ದಾರ. ಈ ರೀತೀ ಯಾಕೆ ನಮ್ಮ ಮುಖ್ಯ ಮಂತ್ರಿಗಳಿಗೆ ಅನ್ನಿಸೋದಿಲ್ಲ?.

  2. Shripathi Bhat says:

    Dear Pratap,
    Thanx for very nice article. Yes as you told this is a lesson for our very dirty politicians. In our ploiticians no body have dreams like Obama. Every body busy with mud clinging on each other. Congrats Obama…..

  3. Venkatesh says:

    ಶ್ರೀ ಪ್ರತಾಪ್ ಅವರೇ, ಈ ಬರಿಯ ಲೇಖನ ಚಿಕ್ಕದಾಗಿ ಚೊಕ್ಕದಾಗಿ ಮುಗಿಸಿದ್ದೀರ, ಆದರೂ ಮಾಮೂಲಿನಂತೆ ಚೆನ್ನಾಗಿದೆ.

    ನಿಜ, ನಮ್ಮ ದೇಶದಲ್ಲಿ ರಾಜಕೀಯಕ್ಕಾಗಿ ಏನೂ ಮಾಡಲು ಹೇಸದ ರಾಜಕಾರಣಿಗಳಿಂದ ದೇಶ ಚೂರು ಚೂರು ಆಗುತ್ತಿದೆ. ಬಹುಶ ಒಂದಾಗುವುದು ಕನಸಿನ ಮಾತು.

    ಧರ್ಮದ / ಜಾತಿಯ ಹೆಸರು ಹೇಳಿಕೊಂಡೇ ಮೀಸಲಾತಿ ಕೊಟ್ಟು ವೋಟ್ ಬ್ಯಾಂಕ್ ಮಾಡುವ ಅರ್ಜುನ್ ಸಿಂಗ್, ಮಾಯಾವತಿ, ದೇವೇಗೌಡ, ಲಾಲು, ಮುಲಾಯಮ್, ಪಾಸ್ವಾನ್, ಎಲ್ಲ ಕಾಂಗ್ರೆಸಿಗರು… ಅಷ್ಟೇಕೆ ನೂರಕ್ಕೆ ೮೦ ಎಲ್ಲಾ ರಾಜ ಕಾರಣಿಗಳು.
    ಇದಕ್ಕೆ ಉಪ್ಪು-ಖಾರ ಹಾಕಲಿಕ್ಕೆ ಕಾರ್ನಾಡ, ಅನಂತ, ಜಿ. ಕೆ.ಗೋವಿಂದ, ಗೌರಿ ಲಂಕೇಶ, ಬೆಳಗೆರೆ ಮುಂತಾದ ಹಿಂದೂ ಹಿತ ಶತ್ರುಗಳು.

    ೨೦ ವರ್ಷಗಳ ಹಿಂದೆ ಬೆಂಗಳೂರಿನ ಕಾಂಪೌಂಡ್ ಗೋಡೆಗಳ ಮೇಲೆ ಓದಿದ ಬರಹ ಇವತ್ತಿಗೂ ನೆನಪಿದೆ. ‘ಬ್ರಾಹ್ಮಣರು ಈ ದೇಶದ ಶತ್ರುಗಳು,ದ್ರೋಹಿಗಳು ಒದ್ದೋಡಿಸಿ.” ಬ್ರಾಹ್ಮಣರು ಇವರಿಗೇನು ಅನ್ಯಾಯ ಮಾಡಿದ್ದಾರೆ ಅಂತ ಕೇಳಿದರೆ ಉತ್ತರವಿಲ್ಲ! ಸುಮ್ಮನೆ ‘ನಮ್ಮನ್ನು ತುಳಿದಿದ್ದಾರೆ’ ಅಂತ ಕಾಂಗ್ರೆಸಿಗರು, ಕಮ್ಯುನಿಷ್ಟರು ಹೇಳಿಕೊಟ್ಟದ್ದನ್ನೇ ಉಚ್ಚರಿಸುತ್ತಾರೆ. ಅವರು ಏನೂ ಮಾಡಲಾರರು ಎಂದೇ?
    ಇವತ್ತಿಗೂ ಬರೀ ೫ ಪರ್ಸೆಂಟ್ ಇರುವ ಬ್ರಾಹ್ಮಣರು ಉಳಿದ ೮೦-೯೦ ಭಾಗ ಜನರಿಗೆ ಅದೇನು ತೊಂದರೆ ಕೊಟ್ಟಾರು? ಇವತ್ತಿಗೂ ಕೆಲವು ದೇಶದ ಭಾಗಗಳಲ್ಲಿ ಜೀತ ಪದ್ಧತಿ ಇದೆ, ಅದನ್ನು ನಡೆಸುತ್ತಿರುವವರು ಶಕ್ತಿವಂತರಾದ ಜಮೀನ್ದಾರರು. ಇವರಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ. ಹಾಗಂತ ಆ ಬೇರೆ ಜಾತಿಯವರ ಮೇಲೆ ಏನಾದರೂ ಹೇಳಲಿ ನೋಡೋಣ? ಕೈಕಾಲು ಮುರಿಯುತ್ತಾರೆ ಅಂತ ಭಯವೇ?

    ಬೇಕಿದ್ದರೆ ನೀವು ಯಾವುದೇ ಹಳ್ಳಿಗಳಿಗೆ ಹೋಗಿ ನೋಡಿ, ಯಾರನ್ನೇ ಕೇಳಿ. ಆ ಊರಿನಲ್ಲಿ ಇರುವ ಒಂದು ಬ್ರಾಹ್ಮಣರ ಮನೆ ಇಡೀ ಊರಿಗೆ ಬೇಕಾಗಿರುತ್ತದೆ! ನ್ಯಾಯ ತೀರ್ಮಾನ ಮಾಡಲು, ಪೂಜೆ ಮಾಡಿಸಲು, ಔಷಧ ಬೇಕಾದರೆ, ಸಲಹೆ ಕೇಳಲು, ಮಕ್ಕಳನ್ನು ಮಾಡುವೆ ಮಾಡಿಸಲು, ಮುಹೂರ್ತ ನೋಡಲು, ಪಾಠ ಹೇಳಿಸಿಕೊಳ್ಳಲು, ಪತ್ರ ಓದಿ ಹೇಳಲು, ಮಗುವಿಗೆ ಹೆಸರಿಡಲು….. ತಮ್ಮ ಮನೆಯಲ್ಲಿಯೇ ಒಂದು ಹೊತ್ತಿನ ಊಟಕ್ಕೆ ಇಲ್ಲದಿದ್ದರೂ ಬಂದವರಿಗೆ ಬರಿ ಕೈಯಲ್ಲಿ ಕಳಿಸುವುದಿಲ್ಲ.

    ಈ ದೇಶದಲ್ಲಿ ಇದುವರೆಗಿನ ಎಲ್ಲಾ ಮಹತ್ವದ ಆಗು ಹೋಗುಗಳಿಗೆ ಬ್ರಾಹ್ಮಣರೇ ಕಾರಣ.
    ಅದು ಕೆಟ್ಟದ್ದಿರ ಬಹುದು, ಒಳ್ಳೆಯದಿರಬಹುದು. ಬೆಸ್ಟ್ ಆಫ್ ದಿ ಬೆಸ್ಟ್ ಎಲ್ಲವೂ ಬ್ರಾಹ್ಮಣರೇ!
    ಈ ದೇಶ ಕಂಡ ಅತ್ಯುತ್ತಮ ಬರಹಗಾರರರು,ತತ್ವ ಜ್ಯ್ನಾನಿಗಳು, ದಾರ್ಶನಿಕರು, ಧರ್ಮ ಸಂಸ್ಥಾಪಕರು, ಸಿನೆಮ ರಂಗದವರು, ಸ್ವತಂತ್ರ ಹೋರಾಟ ಗಾರರು, ರಾಜಕಾರಣಿಗಳು, ಕ್ರೀಡಾ ಲೋಕದವರು, ವಿಜ್ನ್ಯಾನಿಗಳು, ಹಾಡುಗಾರರು, ಸಂಗೀತ ಗಾರರು, ಸಾಹಿತಿಗಳು, ಕೃಷಿಕರು, ಉದ್ಯಮ ಪತಿಗಳು, ಪತ್ರಿಕೋದ್ಯಮ,ಶಿಕ್ಷಣ, ಆಡಳಿತಗಾರರು ಎಲ್ಲವೂ ಬ್ರಾಹ್ಮಣರೇ.
    ಅಷ್ಟೇಕೆ, ಶಿವಾಜಿ ಮಹಾರಾಜ್, ಅ೦ಬೇಡ್ಕರ, ಸ್ವಾಮಿ ವಿವೇಕಾನಂದ,ಅಶೋಕ, ಚಂದ್ರಗುಪ್ತ ಮೌರ್ಯ, ಹಕ್ಕ-ಬುಕ್ಕ, ಶ್ರೀಕೃಷ್ಣ ದೇವರಾಯ, ಅಬ್ದುಲ್ ಕಲಾಮ್, ಶಿಶುನಾಳ ಶರೀಫ್, ಹೆಚ್ ನರಸಿಂಹಯ್ಯ…..ಇವರೆಲ್ಲರ ಹಿಂದಿನ ಶಕ್ತಿ-ಗುರು ಸ್ವರೂಪ – ಬ್ರಾಹ್ಮಣರು. ಬ್ರಾಹ್ಮಣರಿಲ್ಲದ ಭರತವನ್ನು ನೆನಸಿಕೊಲ್ಲಲೇ ಸಾಧ್ಯವಿಲ್ಲ.
    ಹಾಗಂತ ಅವರ್ಯಾರೂ ನಾನು ಬ್ರಾಹ್ಮಣ, ಅದಕ್ಕೆ ನಿಮಗಿಂತ ಮೇಲೆ ಎಂದು ಹೇಳಿಕೊಂಡು ಬಾಳಲಿಲ್ಲ. ಇವತ್ತೂ ಹೇಳಿಕೊಳ್ಳುತ್ತಿಲ್ಲ.

    ಕೆಟ್ಟವರು ಎಲ್ಲ ಜಾತಿಯಲ್ಲೂ ಇದ್ದರೆ, ಆದರೆ ಬ್ರಾಹ್ಮಣರ ಮೇಲೆ ಯಾಕೆ ಆರೋಪ?

  4. gp says:

    hello brother …

    yavaglu controversy lekhanagalannu bardu maja noduva nimge yaake banthu obama mele preeti ???????????

    yuva janatheya daari thappisi , avrannu udrekisuva nimage obama samanathe isatavadaddadru hege

  5. Ram Sharma fro Texas says:

    Thanks for the Good article.
    Obama said he recognise Americans as Americans only , not by color / religion or proffession and wealth. But he never talked of revange on white comunity.

    That means he is a great leader. The present India has one and only one such high profile leader, MODI of Gujrat.

    When Narendra Modi talks of any problems/solutions, he mentions entire 5 crore population of Gujarat, not by HIndu/muslim/christian or any others.

    We need such a leader to lead our country to bring the CHANGE.

  6. ram says:

    I don’t understand why you have to critize our politicians to compare with other parts of the world. What we should do is only neglect those politicians who talk on those lines and look for better people. Else you have become a good politician/leader on your own if you can’t find one. Otherthan that, if people start talking about Brahmins for everythig as if they are a liability to this country and rest are doing great service, I am not the one to take such critics. Come on, should have sense, why you have to talk aout 3 month old state gov for the legacy of mess for 60 years by previous governament? This only reflects that we don’t believe ourselves and we don’t want to respect the law of the land. That’s because everybody is happy to break the law to their convenience and keep critisizing the governamnets. Show you respect to the society by abiding to the law of the land. Then you don’t need any politicians and also one has to question their conscience before critisizing politicians and whoever else. I am not sure how many of you will agree with my belief.

  7. Ganesh says:

    I would like to say something to Mr. GRT Gowda’s comments. Can I make a statement that you were very confortable if Gowda family was in power? If not, then why are you blaming Yediyurappa & his governament? as if you have seen and worked with him and his colleagues. I feel your commets are just inspired by the news paper statements and articles and not based on facts. Otherwise I can’t imagine you would have brought names like Shobha, Reddy ..etc etc. For information, news papers use these names to create sensation and increase their circulation. Not necessery that they are facts. So better not to believe what the media writes without knowing th ereal facts

  8. Vinod Kumar -Texas says:

    Hi Pratap,
    This speach should inspire lot of young blood all over the globe. Thanks for translating it. I would certainly agree with your views on obama`s way of thinking and approach towards bringing about CHANGE in a very proffessional manner. It will certainly going to take much longer time to generate a new generation of proactive youth spirit in indian political scenario. However, it is too early to speculate about the extent of success of obama as a commander in chief of US. But one thing is sure, in US, politics is not a profession, whereas in India politics is a profession and you may not need a BIG intellectual qualification to get this job.

  9. Dear Pratap,
    Thanx for very nice article.
    -shet

  10. kannadiga says:

    swami pratap avare..ithihadsada putagalanna tiruvu haaki nodi.. ide kariyara hakkugalige horadida kennedy sahodararige yenaithu?? ide neevu hogaluta iro america da pattabhadra raajakarinigalu gunditti kollisidaru..neeve hogalutiruva martin luther king gati yenatiu?gunditti kondaru..indigu ee hatyegalu nigoodavagiye ulidide..satya hora baruvudakke avakashave kodalilla ee deshada rajakarinigalu..ishtondu america vannu hogali lekhana bareyuva agatya iralilla..ee obama na hanebaraha yenendu kaalave uttarisuttade..history repeats iteself annodanna mareyabaradu..