Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

Reddys remain Sushma’s blue-eyed boys!

ಅದು ಬಿಜೆಪಿಯ ಅತ್ಯುನ್ನತ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಹೊರಬಿದ್ದ ಸ್ಪಷ್ಟ ಸಂದೇಶ-ಬಳ್ಳಾರಿ ರೆಡ್ಡಿ ಸಹೋದರರಷ್ಟೇ ಆಕೆಗೆ ಪ್ರೀತಿಪಾತ್ರರು! ಬಿಜೆಪಿಯ ಎರಡು ವರ್ಷಗಳ ಸಾಧನಾ ಸಮಾವೇಶದ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡ ಆಕೆ, ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಹಾಗೂ ಗಾಲಿ ಸೋಮಶೇಖರ ರೆಡ್ಡಿಯೇ ತಮ್ಮ ನಂಬಿಕಸ್ತ ಬಂಟರು ಎಂಬುದನ್ನು ಪುನರುಚ್ಚರಿಸಿದರು. ಇವರೆಲ್ಲ ಸಚಿವರಾಗಿರುವ ಆರೋಗ್ಯ, ಕಂದಾಯ, ಮೂಲಭೂತ ಸೌಕರ್ಯ ಇಲಾಖೆ ಹಾಗೂ ಕೆಎಂಎಫ್ ಅನ್ನು ಮಾತ್ರ ಬೊಟ್ಟು ಮಾಡಿ ಹೊಗಳಿದರು. ಸಮಯದ ಅಭಾವದಿಂದ ಎಲ್ಲ ಇಲಾಖೆಗಳ ಬಗ್ಗೆಯೂ ಹೇಳಲಾಗುತ್ತಿಲ್ಲ ಎಂದು ಭಾಷಣ ಮುಗಿಸಿದರು!

ಜೂನ್ 25ರಂದು ನಡೆದ ಬಿಜೆಪಿ ಸಾಧನಾ ಸಮಾವೇಶದಲ್ಲಿ ರೆಡ್ಡಿಗಳು ಹಾಗೂ ಶ್ರೀರಾಮುಲು ಅವರನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಸಿಗೆ ಬರುವಂತೆ ಹೊಗಳಿದ್ದನ್ನು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ತನ್ನ ಮುಖಪುಟದಲ್ಲಿ ಈ ಮೇಲಿನ ಶೀರ್ಷಿಕೆಯಡಿ ಪ್ರಕಟ ಮಾಡಿತು. ಅದನ್ನು ಓದಿ ನಿಜಕ್ಕೂ ಆಶ್ಚರ್ಯವಾಯಿತು. ಈ ಸರಕಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡಿದವರಿದ್ದಾರಾ ಎಂದು ಯಾರನ್ನೇ ಕೇಳಿದರೂ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ನಿಸ್ಸಂಶಯವಾಗಿ ಹೇಳುತ್ತಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾತಿಗೆ ನಿಂತಿದ್ದ ಬಿಜೆಪಿಯ ‘ಮಹಾನ್’ ನಾಯಕಿ ಸುಷ್ಮಾಸ್ವರಾಜ್ ಕಣ್ಣಿಗೆ ಇವರ್‍ಯಾರೂ ಕಾಣಲಿಲ್ಲವೆ? ಇವರು ಮಾಡುತ್ತಿರುವ ಒಳ್ಳೆಯ ಕೆಲಸಗಳು ಅವರ ಗಮನಕ್ಕೇ ಬಂದೇ ಇಲ್ಲವೆ? ತಾನು ಯಾರನ್ನು ಹೊಗಳುತ್ತಿದ್ದೇನೆ, ಅವರ ಹಿನ್ನೆಲೆ ಎಂಥದ್ದು, ಕರ್ನಾಟಕದ ಮಹಾಜನತೆ ಈ ನಾಲ್ವರ ಬಗ್ಗೆ ಯಾವ ಅಭಿಪ್ರಾಯ ಹೊಂದಿದೆ ಎಂಬುದರ ಅರಿವಾದರೂ ಆಕೆಗಿದೆಯೇ? ಪ್ರತಿ ಸಾರಿಯೂ, ನಾಮ್ ಕೇ ವಾಸ್ಥೆಗೆ ಯಡಿಯೂರಪ್ಪನವರ ಬಗ್ಗೆ ತುಟಿಯಂಚಿನಲ್ಲಿ ಒಂದೆರಡು ಮಾತನಾಡಿ ಅಂತರಾತ್ಮದಿಂದ ರೆಡ್ಡಿ ಸಹೋದರರನ್ನು ಹೊಗಳಲು ಆರಂಭಿಸುತ್ತಾರೆ. ಏಕೆ?

ನಿಮಗೆ ದಿಲೀಪ್ ಸಿಂಗ್ ಜುದೇವ್ ಹೆಸರು ನೆನಪಿರಬಹುದಲ್ಲವೆ?

ಛತ್ತೀಸ್‌ಗಢದ ಜುದೇವ್, ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದಲ್ಲಿ ಪರಿಸರ ಹಾಗೂ ಅರಣ್ಯ ಖಾತೆ ಸಚಿವರಾಗಿದ್ದರು. ಛತ್ತೀಸ್‌ಗಢದಲ್ಲಿ ಮೈನಿಂಗ್ ಲೈಸೆನ್ಸ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾದ ಕಂಪನಿಯೊಂದರಿಂದ ಜುದೇವ್ ಲಂಚ ಪಡೆದಿದ್ದಾರೆ ಎಂದು 2003ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ದೊಡ್ಡ ವರದಿ ಮಾಡಿತು. ಆ ಹುಸಿ ಲಂಚ ಪ್ರಕರಣದ ಹಿಂದೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಮಗ ಅಮಿತ್ ಜೋಗಿಯ ಕೈವಾಡವಿತ್ತು. ಆದರೂ ದೋಷಮುಕ್ತರಾಗಿ ಹೊರ ಬನ್ನಿ ಎಂದ ವಾಜಪೇಯಿ, ಜುದೇವ್ ಅವರ ರಾಜೀನಾಮೆ ಪಡೆದುಕೊಂಡರು. ಅದೇ ವೇಳೆಗೆ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯೂ ಮುಗಿದು, ಫಲಿತಾಂಶ ಹೊರಬರಬೇಕಿತ್ತು. ಜುದೇವ್ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಮುನ್ನಡೆಸಿದ್ದರು. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಬಹುಮತ ಗಳಿಸಿದರೂ ಜುದೇವ್ ಮುಖ್ಯಮಂತ್ರಿಗಾದಿಯನ್ನು ತಿರಸ್ಕರಿಸಿದರು. ಮುಂದೆ 2005ರಲ್ಲಿ ಜುದೇವ್ ದೋಷಮುಕ್ತರೆಂದು ಸಿಬಿಐ ವರದಿ ನೀಡಿದ್ದು ಬೇರೇ ಮಾತು, ಆದರೆ ಅಂದು ಬಿಜೆಪಿಯ ಕೇಂದ್ರ ನಾಯಕತ್ವ ನೈತಿಕತೆಯನ್ನು ಎತ್ತಿ ಹಿಡಿದಿತ್ತು. ಬಂಗಾರು ಲಕ್ಷಣ್ ಸಿಕ್ಕಿಬಿದ್ದಾಗ ನಿರ್ದಾಕ್ಷಿಣ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಅಷ್ಟೇಕೆ, ತಮ್ಮ ಮೇಲೆ ಹವಾಲಾ ಹಗರಣದ ಆರೋಪ ಬಂದಾಗ ದೋಷಮುಕ್ತರಾಗುವವರೆಗೂ ತಾನು ಯಾವ ಹುದ್ದೆಯನ್ನೂ ಅಲಂಕರಿಸುವುದಿಲ್ಲ ಎಂದು ಆಡ್ವಾಣಿಯವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ೬ ವರ್ಷ ಪ್ರಧಾನಿಯಾಗಿದ್ದರೂ ಅವರ ವಿರುದ್ಧ ಸಣ್ಣ ಆರೋಪ ಮಾಡುವುದಕ್ಕೂ ಅವಕಾಶ ನೀಡಲಿಲ್ಲ. ಅಟಲ್, ಆಡ್ವಾಣಿಯವರಂತಹ ಮೇರು ನಾಯಕರು ಎಂತಹ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂಬುದರ ಕನಿಷ್ಠ ಪರಿeನವಾದರೂ, ಅವರ ಉತ್ತರಾಧಿಕಾರಿಯಾಗುವ ಕನಸು ಕಾಣು ತ್ತಿರುವ ಸುಷ್ಮಾ ಸ್ವರಾಜ್‌ಗಿಲ್ಲವೆ?

ಇಷ್ಟಕ್ಕೂ ಆಕೆ ಹೊಗಳುತ್ತಿರುವುದಾದರೂ ಯಾರನ್ನು? ಈ ಶ್ರೀರಾಮುಲು, ರೆಡ್ಡಿ ಸಹೋದರರು ಬಿಜೆಪಿಗೆ ಬಂದಿದ್ದಾದರೂ ಯಾವ ಹಿನ್ನೆಲೆ, ತತ್ತ್ವಸಿದ್ಧಾಂತವನ್ನಿಟ್ಟುಕೊಂಡು?

ಒಂದು ಇ-ಮೇಲ್ ಓದಿ…

“1987ರಲ್ಲಿ ಹೀಗೊಂದು ಕೊಲೆ ನಡೆದುಹೋಯಿತು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಬಳ್ಳಾರಿಯ ಕಾಂಗ್ರೆಸ್ ಕೌನ್ಸಿಲರ್ ರೈಲ್ವೆ ಬಾಬು ಹಾಡಹಗಲೇ, ಎಲ್ಲರ ಎದುರೇ ಕೊಲೆಯಾಗಿ ಹೋದ. ಆತ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಮುನ್ಸಿಪಲ್ ಕೌನ್ಸಿಲ್‌ನ ವಾರ್ಡ್‌ಗೆ ಮಧ್ಯಂತರ ಚುನಾವಣೆ ಏರ್ಪಾಡಾಯಿತು. ರೈಲ್ವೇ ಬಾಬು ಅವರ ಸಂಬಂಧಿಕ ಹಾಗೂ ಆತನ ಗ್ಯಾಂಗ್ ಸದಸ್ಯನೂ ಆಗಿದ್ದ ರಮಣ್‌ಜಿನಿ ಅಲಿಯಾಸ್ ಕುಂಟ ರಮಣ್‌ಜಿನಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಆ ಕಾಲದಲ್ಲಿ ಬಳ್ಳಾರಿಯಲ್ಲಿ ಯಾವ ಬಲಾಬಲವನ್ನೂ ಹೊಂದಿರದ ಬಿಜೆಪಿ ಪ್ರತಿಷ್ಠಿತ ಆರ್ಕಿಟೆಕ್ಟ್ ಎಂ.ಎಸ್. ರಾವ್ ಅವರನ್ನು ಕಣಕ್ಕಿಳಿಸಿತು. ಅವರಿಗಿದ್ದ ಏಕೈಕ ಅರ್ಹತೆಯೆಂದರೆ ಪ್ರಾಮಾಣಿಕತೆ ಹಾಗೂ ಸಮಗ್ರತೆ. ಆ ಕಾಲದಲ್ಲಿ ಬಿಜೆಪಿಯಲ್ಲಿ ಇದ್ದವರೆಲ್ಲ ಅಂತಹವರೇ ಎಂಬುದು ಬೇರೆ ಮಾತು! ವೋಟಿಂಗ್ ದಿನ ಮತಗಟ್ಟೆಗಳ ಬಳಿ ಸೇರಿದ್ದ ಆರೆಸ್ಸೆಸ್, ಎಬಿವಿಪಿ ಹಾಗೂ ಬಿಜೆಪಿಯ 15 ಕಾರ್ಯಕರ್ತರಲ್ಲಿ ನಾನೂ ಒಬ್ಬನಾಗಿದ್ದೆ. ನನಗಾಗ ಕೇವಲ 18 ವರ್ಷ. ಬಿಜೆಪಿಯ ಏಜೆಂಟನಾಗಿ ಮತಗಟ್ಟೆ ಯೊಳಗೆ ನನ್ನನ್ನು ಕುಳ್ಳಿರಿಸಲಾಯಿತು. ಇದ್ದಕ್ಕಿದ್ದಂತೆಯೇ ಕಾಂಗ್ರೆಸ್‌ನ ಗೂಂಡಾಗಳು ನಕಲಿ ಮತದಾನ ಮಾಡಲು ಆರಂಭಿಸಿದರು. ನಾನು ವಿರೋಧಿಸಿದಾಗ ಸರಿಸುಮಾರು ನನ್ನ ವಯಸ್ಸಿನವನೇ ಆದ ಕುಖ್ಯಾತ ರೌಡಿಯೊಬ್ಬ ನನ್ನನ್ನು ಚೆನ್ನಾಗಿ ಚಚ್ಚಿದ. ಈ ಬಗ್ಗೆ ನನ್ನ ಪಕ್ಷದ ನಾಯಕರಾದ ಶ್ರೀ ರಂಗಣ್ಣ ಶೆಟ್ಟಿಯವರಿಗೆ ದೂರು ಹೇಳಿದೆ. 1999ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಕಾಲಿಡುವವರೆಗೂ ಜಿಲ್ಲೆಯಲ್ಲಿ ರಂಗಣ್ಣ ಶೆಟ್ಟಿಯವರದ್ದು ದೊಡ್ಡ ಹೆಸರು. 4 ದಶಕಗಳ ಕಾಲ ಬಳ್ಳಾರಿಯಲ್ಲಿ ಜನಸಂಘ ಮತ್ತು ಬಿಜೆಪಿಯ ಧ್ವನಿಯಾಗಿದ್ದರು. “ಅವರಿಗೆ ಅಧಿಕಾರ ಇದೆ, ಅವರು ಹೊಡಿತಾರೆ. ನಮಗೆ ಅಧಿಕಾರ ಬಂದಾಗ ಖಂಡಿತ ನಾವೂ ಅವರಿಗೆ ಹೊಡಿಯೋಣ. ನೀನು ಸುಮ್ಮನೆ ಇರು ತಮ್ಮಾ…” ಎಂದು ಅವರು ನನ್ನನ್ನು ಸಮಾಧಾನ ಪಡಿಸಿದ್ದರು. ಅವರು ಹೇಳಿದಂತೆ ಒಂದಲ್ಲ ಒಂದು ದಿನ ನಾವೂ ಅಧಿಕಾರಕ್ಕೆ ಬರುತ್ತೇವೆ, ಪ್ರತಿಕಾರ ತೆಗೆದುಕೊಳ್ಳುವ ಅವಕಾಶ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದೆ. ಅಂತಹ ಅವಕಾಶ ಬರಲೇ ಇಲ್ಲ.

ಏಕೆಂದರೆ….

ಅವತ್ತು ನನ್ನನ್ನು ಬಡಿದು, ಬೆದರಿಕೆ ಹಾಕಿದ್ದ ವ್ಯಕ್ತಿ ಇಂದು ಕರ್ನಾಟಕ ಸರಕಾರದ ಗೌರವಾನ್ವಿತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ! ಅದೂ ನಮ್ಮದೇ ಸರಕಾರದಲ್ಲಿ!! ಅಂದು ಕೊಲೆ, ದರೋಡೆ, ಸುಲಿಗೆ, ಅಪಹರಣದಲ್ಲಿ ತೊಡಗಿದ್ದ ಆ ಕುಖ್ಯಾತ ಗ್ಯಾಂಗ್‌ನ ‘ರಿಂಗ್‌ಮಾಸ್ಟರ್’ ಸಣ್ಣ ಫಕೀರಪ್ಪ ಮುಂದೆ ರಾಯಚೂರು ಜಿಲ್ಲೆಯಿಂದ ನಮ್ಮ ಪಕ್ಷದ ಸಂಸದರಾಗಬಹುದು!! ಕೊಲೆಯಾಗಿದ್ದ ಗೂಂಡಾ ಕೌನ್ಸಿಲರ್ ರೈಲ್ವೇ ಬಾಬುನ ಮಗನೇ ನಮ್ಮ ಪಕ್ಷದ ಕಂಪ್ಲಿ ಎಮ್ಮೆಲ್ಲೆ ಟಿ.ಎಚ್. ಸುರೇಶ್ ಬಾಬು!!”

ಇಂಥದ್ದೊಂದು ಇ-ಮೇಲ್, 2009ರ ಸಂಸತ್ ಚುನಾವಣೆಗೂ ಸ್ವಲ್ಪ ಮುಂಚೆ ಬಿಜೆಪಿಯ ನಾಯಕರೆಲ್ಲರ ‘ಇನ್‌ಬಾಕ್ಸ್’ಗೆ ಬಂದು ಸೇರಿತು. ಬಿಜೆಪಿಯ ಬಲವರ್ಧನೆಗಾಗಿ ಜೀವನದ ಅತ್ಯಮೂಲ್ಯ ವರ್ಷಗಳನ್ನು ಸವೆಸಿದ, ಪೆಟ್ಟನ್ನೂ ತಿಂದಿದ್ದ ವ್ಯಕ್ತಿಯೊಬ್ಬರು ಅದನ್ನು ಬರೆದಿದ್ದರು. ಎಂಥೆಂಥ ಅನರ್ಹರು ಬಿಜೆಪಿಯನ್ನು ಸೇರಿದ್ದಾರೆ, ಯಾರೋ ಶ್ರಮಿಸಿ ಕಟ್ಟಿದ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರು ಅಧಿಕಾರ ಅನುಭವಿಸುತ್ತಿದ್ದಾರೆ ಎಂಬುದನ್ನು ಅದರಲ್ಲಿ ಅನಾವರಣ ಮಾಡಿದ್ದರು. ಆ ಮಿಂಚಂಚೆಯನ್ನು ಬಿಜೆಪಿಯ ಬಹಳಷ್ಟು ಮಂತ್ರಿಗಳು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿಯ ಟಾಪ್‌ಬ್ರಾಸ್ ಗಮ ನಕ್ಕೂ ತಂದಿದ್ದರು. ಸುಷ್ಮ ಸ್ವರಾಜ್ ಕೂಡ ಓದಿರುತ್ತಾರೆ ಬಿಡಿ.

೧೯೯೯ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುವವರೆಗೂ ‘108’ ಶ್ರೀರಾಮುಲು ಹಿನ್ನೆಲೆ ಮೇಲಿನಂತೆಯೇ ಇತ್ತು. ಇತ್ತ “ಎನ್ನೋಬಲ್ ಇಂಡಿಯಾ ಸೇವಿಂಗ್ ಅಂಡ್ ಇನ್‌ವೆಸ್ಟ್‌ಮೆಂಟ್ ಕಂಪನಿ ಲಿಮಿಟೆಡ್” ಎಂಬ ‘ಚೀಟ್’ಫಂಡ್ ಕಂಪನಿ ಹುಟ್ಟು ಹಾಕಿದ್ದ ಜನಾರ್ದನ ರೆಡ್ಡಿ ನೆತ್ತಿಗೆ 1998ರಲ್ಲಿ ರಿಸರ್ವ್ ಬ್ಯಾಂಕ್ ಕುಟ್ಟಿ ಕಡಿವಾಣ ಹಾಕಿತ್ತು. ಅದ್ಯಾವ ಕ್ಷಣದಲ್ಲಿ ಆ ಮಹಾತಾಯಿ(!!) ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದರೋ, ಸೋನಿಯಾ ಗಾಂಧಿಯವರನ್ನು ಸೋಲಿಸಲೇಬೇಕೆಂಬ ಕಾರಣಕ್ಕೆ ಕಳ್ಳರು, ಸುಳ್ಳರು, ದಗಾಕೋರರು, ಕೊಲೆಗಡುಕರು ಎಲ್ಲರ  ಸಹಾಯವನ್ನೂ ತೆಗೆದುಕೊಂಡಿತು ಬಿಜೆಪಿ. ಈ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಸುಷ್ಮಾ ಸ್ವರಾಜ್ ಸಂಪರ್ಕಕ್ಕೆ ಬಂದಿದ್ದು ಆಗಲೇ. ಸೋತ ಸುಷ್ಮಾ ಪ್ರತಿ ವರ್ಷ ಬಳ್ಳಾರಿಗೆ ಬರುತ್ತೇನೆ ಎಂದು ಹೇಳಿ ದಿಲ್ಲಿಗೆ ಮರಳಿದರು, ಅದಕ್ಕೂ ಮುನ್ನ ರೆಡ್ಡಿ-ಶ್ರೀರಾಮುಲುಗೆ ಜಿಲ್ಲೆಯ ರಾಜ್ಯಭಾರ ವಹಿಸಿಕೊಟ್ಟರು. ಇತ್ತ 2001ರಲ್ಲಿ 10 ಲಕ್ಷ ಪ್ರಾರಂಭಿಕ ಬಂಡವಾಳದೊಂದಿಗೆ ಮೈನಿಂಗ್ ವಹಿವಾಟು ಆರಂಭಿಸಿದ ರೆಡ್ಡಿ ಸಹೋದರರು ಇವತ್ತು 25 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮಿಣಿ ಉಕ್ಕು ಸ್ಥಾವರ ನಿರ್ಮಾಣ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ! ಇಷ್ಟೆಲ್ಲಾ ಹಣವನ್ನು ನ್ಯಾಯಯುತವಾಗಿ ಮಾಡಲು ಸಾಧ್ಯವೆ? ಇನ್ಫೋಸಿಸ್, ವಿಪ್ರೊ, ಟಿಸಿಎಸ್‌ನಂತಹ ಸಾಫ್ಟ್‌ವೇರ್ ಕಂಪನಿಗಳಿಗೇ ಸಾಧ್ಯವಾಗದ ಚಮತ್ಕಾರ, ಪವಾಡ ರೆಡ್ಡಿಗಳಿಗೆ ಹೇಗೆ ಸಾಧ್ಯವಾಯಿತು? ನನ್ನ ರಾಜೀನಾಮೆಗೆ ಮೈನಿಂಗ್ ಮಾಫಿಯಾವೇ ಕಾರಣ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಬೇಲೆಕೇರಿ ಬಳಿ ಸಂಗ್ರಹಿಸಿಡಲಾಗಿದ್ದ ಅದಿರು ಯಾರದ್ದಾ ಗಿತ್ತು, ಅದನ್ನು ಯಾರು ನಾಪತ್ತೆ ಮಾಡಿದರು ಎಂಬುದು ನಮ್ಮ ರಾಜ್ಯದ ಒಬ್ಬ ಅನಕ್ಷರಸ್ತನಿಗೂ ಗೊತ್ತು. ಹಾಗಿದ್ದರೂ ಸುಷ್ಮಾ ಸ್ವರಾಜ್ ಅದ್ದೇಗೆ ರಾಮುಲು, ರೆಡ್ಡಿಗಳನ್ನು ನಿರ್ಲಜ್ಜೆಯಿಂದ ಹೊಗಳುತ್ತಾರೆ? ಈ ರೆಡ್ಡಿಗಳು ಹಾಗೂ ಸುಷ್ಮಾ ಸ್ವರಾಜ್ ನಡುವೆ ಯಾವುದಾದರೂ ‘ಕೊಡು-ಕೊಳ್ಳುವ’ ವ್ಯವಹಾರವಿದೆಯೇ?

ಕಳೆದ ಅಕ್ಟೋಬರ್‌ನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ.

2009ರಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಭಾರೀ ನೆರೆಗೆ ಸಿಲುಕಿ ಸಂಕಷ್ಟಕ್ಕೀಡಾದಾಗ, ನಷ್ಟವನ್ನು ಸರಿದೂಗಿಸುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಕಬ್ಬಿಣದ ಅದಿರು ಸಾಗಿಸುವ ಪ್ರತಿ ಲಾರಿಗಳ ಮೇಲೆ 1 ಸಾವಿರ ರೂ. ಸೆಸ್(ಸುಂಕ) ವಿಧಿಸಲು ನಿರ್ಧ ರಿಸಿದರು. ಈ ನಿರ್ಧಾರವನ್ನು ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಖಂಡಿಸಿ ಬಿಟ್ಟರು. ಅಲ್ಲಿಗೆ ಕದನ ಕಹಳೆ ಮೊಳಗಿತು. ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ ಬಿಜೆಪಿಯ ಮೊದಲ ಸರಕಾರ ಅಧಿಕಾರಕ್ಕೆ ಬಂದು 18 ತಿಂಗಳಲ್ಲೇ ಕುಸಿದುಬೀಳುವ ಅಪಾಯಕ್ಕೆ ಸಿಲುಕಿತು. ರೆಡ್ಡಿಗಳು ಬಲಾಬಲ ಪ್ರದರ್ಶನಕ್ಕೆ ಮುಂದಾದರು. ಇದಾಗಿ ಮೂರೇ ದಿನಗಳಲ್ಲಿ ಬಿಜೆಪಿ ತನ್ನ ಹಿರಿಯ ನಾಯಕ ಹಾಗೂ ಕರ್ನಾಟಕ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿದ್ದ ಅರುಣ್ ಜೇಟ್ಲಿಯವರನ್ನು ರಾಜ್ಯಕ್ಕೆ ದೌಡಾಯಿಸಿತು. ಊಹೂಂ, ರೆಡ್ಡಿಗಳು ಅವರನ್ನು ಭೇಟಿ ಮಾಡುವುದಕ್ಕೂ ಬರಲಿಲ್ಲ. ಬಿಜೆಪಿಯ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು, ಆಗಿನ ಹಾಲಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಯಾರೇ ಪ್ರಯತ್ನಿಸಿದರೂ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣಲಿಲ್ಲ. ಆಗ ಕಣ್ಣಿಗೆ ಕಂಡಿದ್ದು ಸುಷ್ಮಾ ಸ್ವರಾಜ್! ಅಷ್ಟಕ್ಕೂ, ಬಳ್ಳಾರಿ ಸಹೋದರರ ದತ್ತು ಅಮ್ಮ ಅವರೇ ಅಲ್ಲವೆ?! 2009, ನವೆಂಬರ್ 9ರಂದು ಸಂಧಾನ ನಾಟಕ ನಡೆಯಿತು. ವಿಧೇಯ ಮಕ್ಕಳಂತೆ ಅಮ್ಮ ಸುಷ್ಮಮ್ಮನ ಮಾತಿಗೆ ತಲೆಯಾಡಿಸಿದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಯಡಿಯೂರಪ್ಪನವರ ಕೈ ಕೈ ಹಿಡಿದುಕೊಂಡು, ಕುಟುಂಬದೊಳಗಿನ ಸಮಸ್ಯೆ ಎಂದು ಕ್ಯಾಮೆರಾಗಳಿಗೆ ಪೋಸು ಕೊಟ್ಟರು. ಪ್ರಶ್ನೆಯಿಷ್ಟೇ- ಇದೆಂಥಾ ತಾಯಿ-ಮಕ್ಕಳ ಸಂಬಂಧ? ಯಾವ ಮುಖ್ಯಮಂತ್ರಿಯ ಮುಖವನ್ನೂ ನೋಡುವುದಿಲ್ಲ ಎಂದು ಸಾರ್ವಜನಿಕವಾಗಿ ಕೊಟ್ಟಿದ್ದ ಹೇಳಿಕೆಯನ್ನೇ ಮರೆತು ಆ ವ್ಯಕ್ತಿಯನ್ನೇ ಜನಾರ್ದನ ರೆಡ್ಡಿ ಬಿಗಿದಪ್ಪುತ್ತಾ ರೆಂದರೆ ಈ ಅಮ್ಮ ಅದೆಂಥ ಮಹಾತಾಯಿ ಇರಬಹುದು? ಅದಿರಲಿ, ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಣೆ ಮಾಡಿಸಿದ್ದಕ್ಕೆ ಸುಷ್ಮಾ ಸ್ವರಾಜ್‌ಗೆ ಸಿಕ್ಕ ಫಲವೇನು ಗೊತ್ತೆ? ಅವರ ಪತಿ ಸ್ವರಾಜ್ ಕೌಶಲ್‌ರನ್ನು ಕರ್ನಾಟಕ ಸರಕಾರದ ವಕೀಲರನ್ನಾಗಿ 2009, ಡಿಸೆಂಬರ್ 5ರಂದು ಆದೇಶ ಹೊರಡಿಸಲಾಯಿತು! ಈಕೆಯೇನು ಸಾಮಾನ್ಯ ಮಹಿಳೆ ಎಂದುಕೊಳ್ಳಬೇಡಿ. ತಾನು ಅರುಣ್ ಜೇಟ್ಲಿಗಿಂತಲೂ ಪವರ್‌ಫುಲ್, ನನ್ನ ಮಾತಿಗೇ ಹೆಚ್ಚು ಬೆಲೆ, ತಾನೇ ಬಿಜೆಪಿಯ ದೊಡ್ಡ ನಾಯಕಿ ಎಂಬ ಭ್ರಮೆ ಇದೆ. ಆ ಭ್ರಮೆಯನ್ನು ಜನರಲ್ಲೂ ಮೂಡಿಸಬೇಕೆಂಬ ತುಡಿತವಿದೆ. ಬಳ್ಳಾರಿ ರೆಡ್ಡಿಗಳನ್ನು ಇಷ್ಟೆಲ್ಲಾ ಹೊಗಳುವ ಈಕೆ ದೇಶದ ನಂಬರ್-1 ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಒಂದಾದರೂ ಒಳ್ಳೆಯ ಮಾತನಾಡಿದ್ದನ್ನು ಕೇಳಿದ್ದೀರಾ? ಏಕೆ ಈ ಅಮ್ಮಾ ರೆಡ್ಡಿಗಳನ್ನು ಮಾತ್ರ ಹೊಗಳುತ್ತಾರೆ? ಈಕೆಯನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವುದೇ ರೆಡ್ಡಿಗಳ ಗುರಿಯೆಂದು ತೆಹೆಲ್ಕಾ ಪತ್ರಿಕೆ ಬರೆದಿತ್ತು!  ಹಾಗಾಗಿ, ಯಡಿಯೂರಪ್ಪನವರ ಉತ್ತರಾಧಿಕಾರಿಯನ್ನಾಗಿ ಜನಾರ್ದನ ರೆಡ್ಡಿಯವರನ್ನು ಬಿಂಬಿಸುವುದೇ ಈಕೆಯ ಉದ್ದೇಶ ಎಂಬ ಅನುಮಾನ ಕಾಡುವುದಿಲ್ಲವೆ? ಮಕ್ಕಳು ದಾರಿ ತಪ್ಪಿದಾಗ, ಕೆಟ್ಟ ಹೆಸರು ತಂದಾಗ ಬದುಕಿರುವಾಗಲೇ ಮಕ್ಕಳ ಶ್ರಾದ್ಧ ಮಾಡಿದ, ಸಾರ್ವಜನಿಕವಾಗಿ dis-own ಮಾಡಿದ ತಂದೆ-ತಾಯಂದಿರು ನಮ್ಮ ಸಮಾಜದಲ್ಲಿದ್ದಾರೆ. ಅಂಥದ್ದರಲ್ಲಿ ಬಳ್ಳಾರಿ ಸಹೋದರರನ್ನು ಅದ್ಯಾವ ಮುಖ ಇಟ್ಟುಕೊಂಡು ಸುಷ್ಮಾ ಸ್ವರಾಜ್, ತಮ್ಮ ಮಾನಸ ಪುತ್ರರು ಎಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ? 2004ರಲ್ಲಿ ಸೋನಿಯಾ ಗಾಂಧಿಯವರು ಇನ್ನೇನು ಪ್ರಧಾನಿಯಾಗಿ ಬಿಡುವ ಸಂದರ್ಭ ಸೃಷ್ಟಿಯಾದಾಗ, ‘ಆಕೆಯೇನಾದರೂ ಪ್ರಧಾನಿಯಾದರೆ ನಾನು ವಿಧವೆಯಂತೆ ಬಿಳಿ ವಸ್ತ್ರ ಧರಿಸುತ್ತೇನೆ. ಬಳೆ ಒಡೆಯುತ್ತೇನೆ, ಕಾಳು ತಿನ್ನುತ್ತೇನೆ, ನೆಲದ ಮೇಲೆ ಮಲಗುತ್ತೇನೆ’ ಎಂದು ಮೌಲ್ಯಕ್ಕೆ ಮಹಾಬೆಲೆ ಕೊಡುವಂತೆ ವರ್ತಿಸಿದ್ದ ಈಕೆ, ತನ್ನ ಬಳ್ಳಾರಿ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯದಿರುವಷ್ಟು ಮುಗ್ಧರೇ?  ಮಂದಿರದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಪಕ್ಷದ ಮೇರು ನಾಯಕಿಯಾದ ಈಕೆಗೆ ತನ್ನ ಮಕ್ಕಳು ನಾಶ ಮಾಡಿರುವ ಸುಂಕುಳಮ್ಮನ ದೇವಾಲಯದ ಕಥೆ ತಿಳಿದಿಲ್ಲವೆ? ಈಕೆಯೇನಾದರೂ ಪ್ರಧಾನಿಯಾದರೆ ಈ ದೇಶದ ಗತಿಯೇನಾದೀತು? 2007-08ನೇ ಸಾಲಿನಲ್ಲಿ 3 ಸಾವಿರ ಕೋಟಿ ಮೌಲ್ಯದ ಸುಮಾರು 47.33 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ಪು ಮಾಡಲಾಗಿದೆ. ಹೀಗೆ ಅಕ್ರಮ ಗಣಿಗಾರಿಕೆ ಮಾಡಿ, ಅದಿರು ಸಾಗಾಟ ಮಾಡುತ್ತಿರು ವವರನ್ನು ಒಟ್ಟಾಗಿ ಬಲಿಹಾಕೋಣ ಬನ್ನಿ ಎಂದು ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವುದನ್ನು ಕೇಳಿದರೆ ಅವರಿಗೂ ಅಕ್ರಮ ಗಣಿಗಾರಿಕೆ ಬಗ್ಗೆ ಅಸಮಾಧಾನ, ಹತಾಶೆ, ನೋವು ಎಲ್ಲವೂ ಇವೆ. ಆದರೆ ಬಿಜೆಪಿ ಸಂಸದೀಯ ಪಕ್ಷದ ನಾಯಕಿಯೇ ರೆಡ್ಡಿಗಳ ಬೆಂಬಲಕ್ಕೆ ನಿಂತಿರುವಾಗ ಅವರು ತಾನೇ ಏನು ಮಾಡಿಯಾರು?

“ಶ್ರೀರಾಮುಲು ಜತೆ ಮಾತನಾಡಬೇಕೆಂದಾಗಲೆಲ್ಲ 108ಕ್ಕೆ ಸಂಪರ್ಕಿಸಿ ಎಂದು ನಾನು ಸೂಚಿಸುತ್ತೇನೆ. ಇವತ್ತು ಕರ್ನಾಟಕದಲ್ಲಿ ಶ್ರೀರಾಮುಲು ಎಂದರೆ 108 ಎಂದೇ ಜನ ಗುರುತಿಸುವಷ್ಟು ಪ್ರಸಿದ್ಧ ರಾಗಿದ್ದಾರೆ” ಎಂದು ಸುಷ್ಮಾ ಹೊಗಳಿದ್ದಾರಲ್ಲಾ, ‘ಆಂಬುಲೆನ್ಸ್ ಸೇವೆ’ ಯನ್ನು ಈ ದೇಶದಲ್ಲಿ ಪ್ರಾರಂಭಿಸಿದ್ದೇ ಶ್ರೀರಾಮುಲು ಅವರೇನು? ದಿ ಎಮರ್ಜೆನ್ಸಿ ಮೇನೇಜ್‌ಮೆಂಟ್ ಆಂಡ್ ರೀಸರ್ಚ್ ಇನ್‌ಸ್ಟಿಟ್ಯೂಟ್(EMRI) ಎಂಬ ಸ್ವಯಂ ಸೇವಾಸಂಸ್ಥೆಯನ್ನು  ಸ್ಥಾಪಿಸಿದ ‘ಸತ್ಯಂ’ ಸಾಫ್ಟ್‌ವೇರ್ ಕಂಪನಿಯ ಮಾಲೀಕ ರಾಮಲಿಂಗರಾಜು, ೨೦೦೫ರಲ್ಲೇ ಬಡವರಿಗೆ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದರು. ಸುಮಾರು ೮ ರಾಜ್ಯಗಳಲ್ಲಿ 1534 ಆಂಬುಲೆನ್ಸ್‌ಗಳನ್ನು ಈ ಸಂಸ್ಥೆ ಓಡಾಟಕ್ಕೆ ಬಿಟ್ಟಿದೆ. ಈಗ ರಾಜು ಎಲ್ಲಿದ್ದಾರೆ ಗೊತ್ತಲ್ಲವೆ?! ಜನರಿಗೆ ಮೋಸವೆಸಗಿ ದುಡ್ಡು ಮಾಡಿದವರಿಗೆ ಸಮಾಜಸೇವೆ ಎಂಬುದು ಒಂದು ಮುಖವಾಡವಷ್ಟೇ. ರಾಜು ಸತ್ಯಂ ಕಂಪನಿಯನ್ನು ಮುಳುಗಿಸಿ ಸಮಾಜ ಸೇವೆ ಹೆಸರಿನಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರು, ರಾಮುಲು ಸರಕಾರಿ ದುಡ್ಡಿನಲ್ಲಿ ಸೇವೆಯ ಮುಖವಾಡ ಹಾಕಿಕೊಂಡು ಹೆಸರು ಗಳಿಸಲು ಯತ್ನಿಸುತ್ತಿದ್ದಾರೆ ಅಷ್ಟೇ. ಇಂತಹ ಉದಾಹರಣೆಗಳಿದ್ದರೂ ಏಕೆ ವಾಸ್ತವಕ್ಕೆ ದೂರವಾದ ಚಿತ್ರಣ ನೀಡಿ ಭ್ರಾಮಕ ಜಗತ್ತನ್ನು ಸೃಷ್ಟಿಸಲು ಯತ್ನಿಸುತ್ತಿದ್ದೀರಿ ಸುಷ್ಮಾ ಸ್ವರಾಜ್? ನಿಮ್ಮ ದತ್ತು ಪುತ್ರರ ವ್ಯಾಮೋಹದಲ್ಲಿ ಬಿಜೆಪಿಗಾಗಿ ಜೀವತೇದ ಕರುಳ ಕುಡಿಗಳೇ ಮೂಲೆಗುಂಪಾಗುತ್ತಿದ್ದಾರಲ್ಲಾ ಇದ್ಯಾವ ನ್ಯಾಯ?

ಅಹಾ, ಎಂಥಾ ಅಮ್ಮ ನೀನಮ್ಮಾ?

ರಾಮುಲು-ರೆಡ್ಡಿಗಳಂಥ ಮಕ್ಕಳನ್ನು ಪೋಷಿಸುತ್ತಿರುವ ನಿನ್ನಂಥ ಇನ್ನೊಂದಿಷ್ಟು ಅಮ್ಮಂದಿರಿದ್ದರೆ ನಮ್ಮ ರಾಜ್ಯ ‘ಬೇಕಾರ್’, ‘ಬೆಗ್ಗರ್’ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ ಕಣಮ್ಮಾ…

18 Responses to “ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!”

 1. balaji says:

  hai pratap sir,
  superb…every sentence makes me burn with anger and dejection towards my countrymen..its 2.50 am but u r article awakes me into this hell of mining mafia…plz feature ur article in the main page sothat many will not miss it….take care god bless…

 2. ಪ್ರಸಾದ್ says:

  ಪ್ರತಾಪ್ ರವರೆ,

  ನಾನು ಇಲ್ಲಿ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ಈ ಲೇಖನಕ್ಕೆ ಸಂಬಂಧ ಪಟ್ಟಿರುವುದಿಲ್ಲ. “Your Views” section ಅಲ್ಲಿ comment ಹಾಕಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಮೊದಲೇ ಕ್ಷಮೆ ಕೇಳುತ್ತಿದ್ದೇನೆ.

  ತಮ್ಮ ನೇರ ಹಾಗೂ ಮೊನಚು ಲೇಖನಗಳಿಂದ ಹಲವರ ನಿಷ್ಠುರ ಕಟ್ಟುಕೊಂಡಿರುತ್ತೀರಿ. ಇದರ ಜೊತೆಗೆ ಹಲವಾರು ಕಾರಣಗಳಿಂದಾಗಿ ತಾವು ಪ್ರಾಮಾಣಿಕರೆಂದು ನಂಬಿ ಈ ಕೆಳಗಿನ ವಿಚಾರವನ್ನು ತಮ್ಮ ಬಳಿಗೆ ತರುತ್ತಿದ್ದೇನೆ.

  ಇದು 20 ದಿನಗಳ್ಗ ಹಿಂದೆ ತಮ್ಮ ಪತ್ರಿಕೆ “ವಿಜಯ ಕರ್ನಾಟಕ” ದಲ್ಲಿ ಮೂಗರ್ಜಿ ವಿಚಾರವಾಗಿ ನಡೆದ ಚರ್ಚೆಯ ಬಗ್ಗೆ.

  DGಯವರ ಗಮನಕ್ಕೆ ಬರದೆ, ಅವರ ಕೆಳಗಿನ ಅಧಿಕಾರಿಗಳು ಒಬ್ಬ ಪೇದೆಯನ್ನು ತನಿಖೆಗೆ ಕಳುಹಿಸಿದ ವಿಚಾರವನ್ನು ಅಷ್ಟು ದೊಡ್ಡದು ಮಾಡುವ ಅಗತ್ಯವಿತ್ತೇ? ಪ್ರಕಟಣೆಗೆ ಮೊದಲು DG ಅಥವಾ ಅವರ ಕಛೇರಿಯ ಸ್ಪಷ್ಟನೆ ಕೇಳಬಹುದಿತ್ತು. ಅದು ಬಿಟ್ಟು ನೇರವಾಗಿ ಅವರ ಮೇಲೆ ಟೀಕಾ ಪ್ರಹಾರ ಮಾಡಿದಿರಿ. DGಯವರು ರಜೆಯಲ್ಲಿದ್ದಾರೆಂದು ಗೊತ್ತಿದ್ದೂ “DG ಮಿಸ್ಸಿಂಗ್” ಎಂಬಂತಹ ಅವಹೇಳನಕಾರಿ ಹೆಡ್ ಲೈನ್ ಪ್ರಕಟಿಸಿದ್ದೀರಿ. “DG ಮಿಸ್ಸಿಂಗ್” ಎಂದು ಹೇಳಲು ಅವರೇನು ಓಡಿ ಹೋಗಿ ತಲೆ ಮರೆಸಿಕೊಂಡಿದ್ದರೇ?

  DGಯವರು ರಜೆಯಿಂದ ಮರಳಿದ ನಂತರ 21/06/2010 ರಂದು ಈ ಬಗ್ಗೆ ನಿಮ್ಮ ಸಂಪಾದಕರಿಗೆ ಒಂದು ಪತ್ರ ಬರೆದರು. ಈ ಪತ್ರವನ್ನು ಯಾವುದೋ ಒಂದು ಮೂಲೆಯಲ್ಲಿ-ವಾಚಕರ ವಿಜಯ ವಿಭಾಗದಲ್ಲಿ ಪ್ರಕಟಿಸಿದ್ದೀರಿ. 3/4 ದಿನ ಸತತವಾಗಿ ಅವರ ವಿರುದ್ಧದ ಟೀಕಾ ಪ್ರಹಾರವನ್ನು ಮುಖಪುಟದಲ್ಲಿ ಪ್ರಕಟಿಸಿ ಇದರ ಸ್ಪಷ್ಟೀಕರಣವನ್ನು ಯಾವುದೋ ಮೂಲೆಯಲ್ಲಿ ಪ್ರಕಟಿಸಿರುವುದು ಎಷ್ಟು ಸರಿ? ಒಬ್ಬ ಓದುಗರ ಅನಿಸಿಕೆಯನ್ನು 17/06/2010 ರಂದು ಮುಖಪುಟದಲ್ಲೇ ಪ್ರಕಟಿಸಿರುತ್ತೀರಿ. ಆ ಪತ್ರಕ್ಕಿರುವ ಬೆಲೆ, 6 ಕೋಟಿ ಕನ್ನಡಿಗರ ರಕ್ಷಣೆಯ ಹೊಣೆ ಹೊತ್ತ ಈ ರಾಜ್ಯದ DG ಯವರ ಪತ್ರಕ್ಕಿಲ್ಲವೇ?

  ಹೋಗಲಿ ಆ ಪತ್ರವನ್ನಾದರೂ ಸಂಪೂರ್ಣವಾಗಿ ಪ್ರಕಟಿಸಿದ್ದೀರಾ?! ಈ ಪ್ರಕರಣದ ಬಗ್ಗೆ ಅಬಿಪ್ರಾಯ ವ್ಯಕ್ತ ಪಡಿಸಿದವರು “ತಾವು ಹೇಳಿದ್ದೇ ಒಂದಾದರೆ, ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ” ಎಂಬತಹ ಹೇಳಿಕೆಗಳನ್ನು ಕೈ ಬಿಟ್ಟಿರುತ್ತೀರಿ. ಆ ಪತ್ರ ಪ್ರಕಟಣೆಯಿಂದ ತಮ್ಮ ಪತ್ರಿಕೆಗೆ ಮುಜುಗರವಾಗುತ್ತದೆಂದು ಅನಿಸಿದ್ದರೆ DGಯವರೇ ತಮ್ಮ ಪತ್ರದಲ್ಲಿ ಸಲಹೆ ಮಾಡಿರುವಂತೆ ಪತ್ರ ಪ್ರಕಟಣೆಯ ಬದಲು ಮುಖಪುಟದಲ್ಲೇ ಕ್ಷಮೆ/ವಿಷಾದ ವ್ಯಕ್ತಪಡಿಸಬಹುದಿತ್ತು!

  Biased News ಹಾಗೂ ಪತ್ರಕರ್ತರ ಅನೈತಿಕತೆಯ ವಿರುದ್ಧ ತಮ್ಮ ಪತ್ರಿಕೆ ಹಲವಾರು ಬಾರಿ ಅಭಿಪ್ರಾಯ ವ್ಯಕ್ತಪಡಿಸಿರುತ್ತದೆ. ಅಷ್ಟೇ ಯಾಕೆ ತಾವು ಕೂಡ ತಮ್ಮ ಅಂಕಣದಲ್ಲಿ ಪತ್ರಕರ್ತರ ನೈತಿಕತೆಯ ಬಗ್ಗೆ ಹಲವಾರು ಬಾರಿ ಚರ್ಚಿಸಿರುತ್ತೀರಿ. ಹಾಗಾದರೆ “ಮೂಗರ್ಜಿ ಪ್ರಕರಣ”ದಲ್ಲಿ ತಮ್ಮ ಪತ್ರಿಕೆ ನಡೆದುಕೊಂಡ ರೀತಿಗೆ ಏನು ಹೇಳುವಿರಿ?

  ಈ ವಿಚಾರವನ್ನು ನೇರವಾಗಿ ಸಂಪಾದಕರಿಗೆ ಬರೆಯಬಹುದಿತ್ತು, ನನಗೇ ಏಕೆ ಕೇಳುತ್ತಿರುವಿರಿ ಎಂದು ನೀವು ಪ್ರಶ್ನಿಸಬಹುದು, DGಯವರ ಪತ್ರಕ್ಕೇ “ಈ ರೀತಿ”ಯಾದ ಮನ್ನಣೆ ಸಿಕ್ಕಿರುವುದರಿಂದ, ನನ್ನಂತಹ ಸಾಮಾನ್ಯ ಪ್ರಜೆಯ ಪತ್ರಕ್ಕೆ ಯಾವ ಮನ್ನಣೆ ಸಿಗಬಹುದು? – ಇದು ಕೂಡ ನೇರವಾಗಿ ಕಸದ ಬುಟ್ಟಿಗೆ ಹೋಗುತ್ತದೆ.
  ಇನ್ನು, ನನ್ನ ಅಂಕಣಗಳಿಗೆ ಸಂಬಂಧಿಸಿರದ ವಿಚಾರಗಳ ಬಗ್ಗೆ ಮಾತನಾಡುವ ಹಕ್ಕು ನನಗಿಲ್ಲ, ಇಲ್ಲಿ ನಾನೊಬ್ಬ ನೌಕರ ಮಾತ್ರ ಎಂದು ಹೇಳಬಹುದು. ವಿ.ಕ. ಪತ್ರಿಕೆಯ Chief Sub-Editor ಆಗಿರುವ ತಾವೂ ಕೂಡ ಉತ್ತರಿಸಬೇಕಾಗುತ್ತದೆ ಎಂದು ಭಾವಿಸಿರುತ್ತೇನೆ.

  ದಯವಿಟ್ಟು ಉತ್ತರಿಸಿ ಅಥವಾ “ಸಾಮ್ನಾ”/”ಸಾಕ್ಷಿ” ತರಹ ನಿಮ್ಮದೂ ಕೂಡ ಯಾವುದೋ ವ್ಯಕ್ತಿ/ಪಕ್ಷದ ಮುಖವಾಣಿ ಎಂದು ಒಪ್ಪಿಕೊಳ್ಳಿ.

  ಕಡೆಯದಾಗಿ ಒಂದು ಮಾತು : ಈ ಪತ್ರವನ್ನು ಪ್ರಕಟಿಸಿ, ಉತ್ತರಿಸುತ್ತೀರೋ ಅಥವಾ ಕಸದ ಬುಟ್ಟಿಗೆ ಎಸೆಯುತ್ತೀರೋ ನಿಮಗೆ ಬಿಟ್ಟ ವಿಚಾರ!

 3. Swaroop Sagar says:

  Sir,
  Every word in your article is true . Illegal mining mafia is destroying karnataka..
  and sushma swaraj is head of it !

 4. yogish says:

  Response to ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

  Super artical, ಎಬಿವಿಪಿ ಹಾಗೂ ಬಿಜೆಪಿಯ 15 ಕಾರ್ಯಕರ್ತರಲ್ಲಿ ನಾನೂ ಒಬ್ಬನಾಗಿದ್ದೆ. ನನಗಾಗ ಕೇವಲ 18 ವರ್ಷ. ಬಿಜೆಪಿಯ ಏಜೆಂಟನಾಗಿ ಮತಗಟ್ಟೆ ಯೊಳಗೆ ನನ್ನನ್ನು ಕುಳ್ಳಿರಿಸಲಾಯಿತು. ಇ ಮಹಾನ್ ವ್ಯಕ್ತಿ ಯಾರು? ಇ ಬೆತ್ತಲೆ ಜಗತ್ತಿಗೆ ಅವನನ್ನು ಗುರುತಿಸಿ,

 5. Karthik says:

  fantastic. i was only hating Reddy brothers in BJP now even Sushmji is also included in the list. I think BJP should keep it simple & declare Modi as next PM candidate and come to power @ centre.

 6. ಪ್ರತಾಪ್,
  ನಿಮ್ಮ ಲೇಖನ ಹಿಡಿಸಿತು.
  ಆದರೆ ಏನುಣು ಮಾಡೋಣ, ಬೇಸರವನ್ನೊ ತಂದಿತು.

  ಆಡ್ವಾಣಿಯವರ ರಾಜಕೀಯ ಅವಸಾನ ಆಗಿದೆ. ಭಾಜಪದ ಅವಸಾನವೂ ಆಗುತ್ತದೆಯೇನೋ ಅನ್ನುವ ಅನುಮಾನ ಈಗ ಕಾಡ ತೊಡಗಿದೆ. ಸುಷ್ಮಾ ಸ್ವರಾಜ್, ಒಂದು ಕಾಲದಲ್ಲಿ ನನ್ನಂತಹ ಯುವ ಜನತೆಯ ಅಚ್ಚುಮೆಚ್ಚಿನ ನಾಯಕರಲ್ಲಿ ಒಬ್ಬರಾಗಿದ್ದರು. ಆದರೆ, ಕಾಲಕ್ರಮೇಣ ಆಕೆಗೂ ಕುರ್ಚಿಯ ಆಸೆಯೇ ಎಲ್ಲಕ್ಕಿಂತಲೂ ಮಿಗಿಲಾಗಿ ಕಾಡತೊಡಗಿರುವುದು ಸತ್ಯ. ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಆಕೆ ಮುಂದೊಂದು ದಿನ ತಾನು ಪ್ರಧಾನಿ ಆದರೂ ಆದೇನೇನೋ ಅನ್ನುವ ಹಗಲು ಕನಸು ಕಾಣುತ್ತಿದ್ದಾರೆ, ಅಲ್ಲದೆ ಆಗ, ಈ ಗಣಿಧಣಿಗಳ ಹಣಬಲದ ಸಹಕಾರದ ಅಗತ್ಯ ಇದ್ದೇ ಇರುತ್ತದೆ ಎನ್ನುವ ಲೆಕ್ಕಾಚಾರವನ್ನೂ ಹಾಕುತ್ತಿದ್ದಾರೆ.
  ಈಗ ರಾಜಕೀಯ ಅನ್ನುವುದು ಭ್ರಷ್ಟಾಚಾರಕ್ಕೆ ಪರ್ಯಾಯ ಪದವಾಗಿದ್ದು, ಯಾವ ಪಕ್ಷವೂ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ ಅನ್ನುವುದು ಸಾಬೀತಾಗುತ್ತಿದೆ.

 7. shreyas says:

  sir please tell that who is that person……..please please…………..Great man……….

 8. sandeep says:

  ALL POLITICAL DRAMA,SIR very good article please quote more examples.

 9. jeevan says:

  hi pratap…

  am afraid i have some apprehensions regarding your article… Reddy brothers arent xctly the GOONDAS dat u r trying to protray… the social service that they have done in and around bellary is in no way comparable to the work done by other leaders in our state… N da relationship between shusma swaraj and reddys shows the da much needed value based relationships in the present awful political scenario… hail shushma.. hail reddys…

 10. Krishnaprasad says:

  Dear Prasad,

  Don’t expect anything you’ll never get any reply from Pratap.He doesn’t have the habit of replying to his or his Paper’s critics.

 11. D.M.Sagar,Dr. says:

  ಬಳ್ಳಾರಿ ಗಣಿ ಧಣಿಗಳು, ರಾವಣ, ಕುಮ್ಭಾಕರ್ನರಿದ್ದಂತೆ. ಈ ಸುಷ್ಮಾ ಸ್ವರಾಜ್ ಎನ್ನುವ ರಾಕ್ಷಸಿ, ಕೈಕಸಾ ದೇವಿ. ಪುಲಸ್ತ್ಯ ಬ್ರಹ್ಮ್ಮನನ್ನು ಕೂಡಿ ತನ್ನ ರಾಜಕೀಯ ಮಹಾತ್ವಾಕಂಕ್ಷೆಯನ್ನು ಈಡೇರಿಸಿಕೊಳ್ಳುವ ರಕ್ಕಸಿ

 12. geetha says:

  dear pratap,

  nimma lekana olleyadagide. adare RAVI BELAGERRE yake Reddigalannu Hogali tanna hai bengalore patrikayalli bareyutano gotilla. hai bengalore odallike muguguravaguthe iga.

  good article you have given. keep it up…

 13. siddu says:

  yaddiurappa is helflees these reddy’s r playing with him sushma is supporting them wt u written is 100% true, i agree with ur views…………….

 14. Sumanth Sharma says:

  ಪ್ರತಾಪ,

  ಸತ್ಯಒ೦ದೇ ನನ್ನ ನೆಲೆ೦ದು ಸಾರಿ ಮುನ್ನಡೆಯುವನು ಜ್ನಾನ ಖಡ್ಗವನ್ನೆ ಹಿಡಿದಿರುತ್ತಾನೆ.
  ನಿನ್ನ ನೇರವಾದ ಧಾಟೆ ಬಹಳ ಸತ್ಯಸಮ್ಮತವಾಗಿ ಕಾಣುತ್ತಿದೆ. ಆದರೆ ……

  ಒ೦ದು ತಾರ್ಕಿಕ ಕೊರತೆ ಕ೦ಡುಬರುತ್ತಿದೆ.

  ನೀನು ಸುಶ್ಮಮ್ಮ ಮತ್ತು ಅವರ ಗ್ಯಾ೦ಗ ಅನ್ನು ಬಹಳ ಸರೀಯಾಗಿ ಅನಾವರಣ ಮಾಡಿದ್ದೀಯ, ಆದರೆ, ಭಾ.ಜ.ಪಾ ದ’ ಮೇಲ್ ಪ೦ಕ್ತಿಯ ಸದಸ್ಯರಿಗೆ ನಿನಿಗೆ ತಿಳಿದಿರುವಶ್ಟೂ ತಿಳಿದಿಲ್ಲವೇ ?

  ನೀನು ಅವರನ್ನು ಹೇಗೆ ಈ ಠೀಕೆಯಿ೦ದ ಹೊರಮಾಡಿದೆ ? ದಯವಿಟ್ತು ಸಮಾಧಾನ ನೀಡಬೀಕೆಒದು ಕೋರುತ್ತೇನೆ.

  ಡಾ.ಜೀ ಹಾಗು ಶ್ರೀ ದೀನದಯಾಲ ಉಪಾಧ್ಯಾಯವರ೦ತಹ ಮಹಾಮಹಿಮರಿ೦ದ ಹೊರಹೊಮ್ಮಿದ ತತ್ವ-ನಿಶ್ಠೆ, ರ್ರಶ್ಟ್ರಪ್ರೇಮವೇ ಆದರ್ಶವೆ೦ದು ಪ್ರಾರ೦ಭವಾದ ಈ “ಪಾರ್ಟೀ ವಿತ ಅ ಡಿಫಾರ್ರೆನ್ಸ್” ಎಲ್ಲಿದೇ ಈದಿನ ? ೧೯೯೭ರ್’ ೪೧ ’ರೆಕಮ್ಮೆಡೇಶನ್ಸ್’ ಯಾವವು ಅಡವಳಿಸಿಕೊಳ್ಳದ ಈ ಪಾರ್ಟೀ ಭವಿಶ್ಯ ಅಧೊಗತೆ ಅಲ್ಲದೆ ಮತ್ತಏನಾತು ಹೇಳಪ್ಪ ?

  ಆದ್ದರಿ೦ದ ಕೇವಲ ಸುಶ್ಮಮ್ಮ ಮತ್ತು ಅವರ ತ೦ಡವೇ ಮಾತ್ರವಲ್ಲ ಪ್ರತಿಯೊಬ್ಬ ಸದಸ್ಯರೂ ಇದಕ್ಕೆ ಕಾರಣಾವಾಗಿಲ್ಲವೇ ?

  – ಸುಮ೦ತ

 15. Sumanth Sharma says:

  ಡಾ. ಸಾಗರ್,

  ತಮ್ಮ ಚುಟುಕು ಬಹಳ ಸೊಗಸಾಗಿದೆ.

 16. Kumar says:

  Pratap avare

  Nivu Pralhad avar Patrakke uttar kottiddeero? kottiddare adannu illi yake prakatisilla?

  Nivu aa Time Pass Of India thara uttara kodade sumne iddu biditiro anta?

  dayavitto uttarisi nim pritiya odugarige satyavannu tilis bekagi VINANTI

 17. Manjunatha says:

  It is an true article. Keep it up Dear Friend Prathap, Go ahead.

 18. Manjunath Hegde says:

  GOOD ARTICLE ………