Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಧೀರೇಂದ್ರ ಬ್ರಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?

ಧೀರೇಂದ್ರ ಬ್ರಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?

ಸುಮಾರು 900 ವರ್ಷಗಳ ಹಿಂದಿನ ಸನ್ನಿವೇಶ. ಅದು 11ನೇ ಶತಮಾನ. ಮೊದಲಿಗೆ ಮೊಹಮದ್ ಘಜ್ನಿ ಬಂದ, ನಂತರ ಮೊಹಮದ್ ಘೋರಿ, ತದನಂತರ ಉಳಿದವರು. ಮುಸ್ಲಿಂ ಆಕ್ರಮಣಕಾರರ ದಾಳಿಗೆ ಮೊದಲ ತುತ್ತಾಯಿತು ಉತ್ತರ ಭಾರತ.  ಹಾಗಂತ ಸಂಪತ್ತಿನ ಲೂಟಿಯೊಂದೇ ಅವರ ಗುರಿಯಾಗಿರಲಿಲ್ಲ. ಇಲ್ಲೇ ಸಾಮ್ರಾಜ್ಯವನ್ನೂ ಸ್ಥಾಪಿಸಿದರು, ಇಸ್ಲಾಮನ್ನು ಹರಡುವುದಕ್ಕೂ ಆರಂಭಿಸಿದರು. ಹಿಂದು ದೇವಾಲಯಗಳು ನಾಶಗೊಂಡವು, ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು, ಕಗ್ಗೊಲೆಗಳು ನಡೆದವು. ಖಡ್ಗದಿಂದ ಧರ್ಮಪ್ರಸಾರ ಮಾಡ ಹೊರಟವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವಿತ್ತು? ಉತ್ತರ ಭಾರತವನ್ನು ಆಕ್ರಮಿಸಿದವರ ಮುಂದಿನ ಗುರಿ ಸಹಜವಾಗಿಯೇ ದಕ್ಷಿಣವಾಗಿತ್ತು. ದೆಹಲಿ ಸುಲ್ತಾನರಾಗಿ ದರ್ಬಾರು ನಡೆಸಲಾರಂಭಿಸಿದ ಖಿಲ್ಜಿ, ತುಘಲಕ್ ವಂಶಗಳ ದೊರೆಗಳು ದಕ್ಷಿಣ ಭಾರತದ ಮೇಲೆ ಆಗಿಂದಾಗ್ಗೆ ದಾಳಿ ನಡೆಸಲಾರಂಭಿಸಿದರು. ವಾರಂಗಲ್್ನ ಕಾಕತೀಯ ಸಾಮ್ರಾಜ್ಯದ ಮೇಲೆರಗಿದ ಮೊಹಮದ್ ಬಿನ್ ತುಘಲಕ್್ನ ಸೇನೆ ಇಡೀ ನಾಡನ್ನೇ ನಾಶಪಡಿಸಿತು, ಅದರ ಪ್ರಸಿದ್ಧ ರಾಜ ಪ್ರತಾಪ ರುದ್ರನನ್ನು ಸೆರೆ ಹಿಡಿದರು. ಆತ ಅತ್ಮಹತ್ಯೆ ಮಾಡಿಕೊಂಡ. ಆನೆಗೊಂದಿಯ ಜಂಬುಕೇಶ್ವರನ ಕಂಪಿಲಿ ಸಾಮ್ರಾಜ್ಯದ ಮೇಲೂ ದಾಳಿ ನಡೆಯಿತು. ವೀರ ಬಲ್ಲಾಳನಿಗೂ ಅಪಾಯ ಎದುರಾಯಿತು. ಒಬ್ಬರ ಹಿಂದೆ ಒಬ್ಬರಂತೆ ಹಿಂದು ರಾಜರು ಸೋತು ಸುಣ್ಣವಾದರು, ಹಿಂದು ಸಾಮ್ರಾಜ್ಯಗಳು ಪತನಗೊಂಡವು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಮುಸ್ಲಿಂ ದಾಳಿಕೋರರು ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬರುವುದನ್ನು, ಹಿಂದು ದೇವಾಲಯಗಳ ಮೇಲೆ ಆಕ್ರಮಣ ಮಾಡುವುದನ್ನು, ಹಿಂದುಗಳ ಕಗ್ಗೊಲೆಗೈಯ್ಯುವುದನ್ನು ತಡೆಯಲು ಹಾಗೂ ಮುಸ್ಲಿಂ ಸಾಮ್ರಾಜ್ಯಶಾಹಿತ್ವವನ್ನು ಮೆಟ್ಟುವುದಕ್ಕೆಂದೇ ಅವತರಿಸಿದವರಂತೆ ಹೊರಹೊಮ್ಮಿದವರೇ ಶೃಂಗೇರಿ ಶ್ರೀಗಳಾದ ವಿದ್ಯಾರಣ್ಯರು. 1336ರಲ್ಲಿ ಈಗಿನ ಹಂಪಿಯಲ್ಲಿ “ವಿಜಯನಗರ ಸಾಮ್ರಾಜ್ಯ’ ಸ್ಥಾಪಿಸಲು ಹಕ್ಕ ಮತ್ತು ಬುಕ್ಕರಿಗೆ ಪ್ರೇರಣೆ, ಪ್ರೋತ್ಸಾಹ, ಆತ್ಮಸ್ಥೈರ್ಯ ಕೊಟ್ಟವರೇ ವಿದ್ಯಾರಣ್ಯರು. ಆ ವಿಜಯನಗರ ಸಾಮ್ರಾಜ್ಯ 300 ವರ್ಷಗಳ ಕಾಲ ಮುಸ್ಲಿಮರ ದಾಳಿಯನ್ನು ಮೆಟ್ಟಿನಿಂತಿತು. ಅಷ್ಟೂ ವರ್ಷಗಳ ಕಾಲ ಮುಸ್ಲಿಮರ ಕಿರುಕುಳ, ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರವನ್ನು ತಪ್ಪಿಸಿತು.

ಅಂದು ಶೃಂಗೇರಿ ಯತಿಗಳಾದ ವಿದ್ಯಾರಣ್ಯರು ಕೊಟ್ಟ ಪ್ರೇರಣೆಯಿಂದಾಗಿ ಧರ್ಮರಕ್ಷಣೆಯೂ ಆಯಿತು, ಧರ್ಮ ಸಂಸ್ಥಾಪನಾ ಕಾರ್ಯವೂ ನಡೆಯುವಂತಾಯಿತು.

ಅವರ ನಂತರ ಅಂತಹ ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದ್ದು ಮಹಾರಾಷ್ಟ್ರದಲ್ಲಿ ಸಮರ್ಥ ರಾಮದಾಸ್. ಅವರೊಬ್ಬ ವಿಭಿನ್ನ ಸಂತ. ರಾಮನನ್ನೂ ಆರಾಧಿಸುತ್ತಿದ್ದರು, ಮಾರುತಿಯನ್ನೂ ಭಜಿಸುತ್ತಿದ್ದರು. ರಾಮ ಆದರ್ಶಕ್ಕಾದರೆ ಶಕ್ತಿಗೆ ಮಾರುತಿಯಾಗಿದ್ದ. ಶ್ರೀರಾಮ ಜಯರಾಮ, ಜಯ ಜಯ ರಾಮ… ಎನ್ನುತ್ತಿದ್ದ ಅವರು, ಧರ್ಮರಕ್ಷಕ ಶಿವಾಜಿ ಮಹಾರಾಜನ ಪ್ರೇರಕ ಶಕ್ತಿಯಾದರು. ಆತ ರಾಮದಾಸರನ್ನು ಎಷ್ಟು ಅವಲಂಬಿಸಿದ್ದನೆಂದರೆ ಗುರುವರ್ಯರು ತಮ್ಮ ನಿವಾಸವನ್ನೇ ಕೋಟೆಗೆ ವರ್ಗಾಯಿಸುವಂತೆ ಮಾಡಿದ್ದ. ಶಿವಾಜಿ ಮಹಾರಾಜನಂಥ ಅಪ್ರತಿಮ ದೇಶಪ್ರೇಮಿಯ ಹಿಂದೆ ರಾಮದಾಸರಂತಹ ಗುರುಗಳಿದ್ದರೆ, ಧರ್ಮಜಾಗೃತಿಗೆಂದೇ ಅವತರಿಸಿದ ಯುಗಪುರುಷ ಸ್ವಾಮಿ ವಿವೇಕಾನಂದರನ್ನು ರೂಪಿಸಿದ್ದೂ ರಾಮಕೃಷ್ಣ ಪರಮಹಂಸರೆಂಬ ಗುರುಗಳು. ಇಂತಹ ಗುರುವರ್ಯರಿಂದಾಗಿ ನಮ್ಮ ಸಮಾಜದಲ್ಲಿ ಸಾಧು-ಸಂತರು, ಸ್ವಾಮೀಜಿಗಳ ಬಗ್ಗೆ ಅಪಾರ ಗೌರವ, ಆದರಗಳು ಬೆಳೆದವು. ಅವರ ಮಾತಿಗೆ ಸಮಾಜದಲ್ಲಿ ಅಪಾರ ಮನ್ನಣೆ, ಮಾನ್ಯತೆಗಳು ಸಿಗಲಾರಂಭಿಸಿದವು.

ಆದರೆ…

ಈಗಿನ ಯಾವ ಸ್ವಾಮಿಗಳಲ್ಲಿ ಒಬ್ಬ ವಿದ್ಯಾರಣ್ಯ, ಒಬ್ಬ ಸಮರ್ಥ ರಾಮದಾಸ, ಒಬ್ಬ ಪರಮಹಂಸರನ್ನು ಕಾಣಲು ಸಾಧ್ಯವಿದೆ? ಇವರು ನಡೆದುಕೊಳ್ಳುತ್ತಿರುವ ರೀತಿಯಾದರೂ ಹೇಗಿದೆ? ಇವರಿಂದ ಸಮಾಜ ನಿರೀಕ್ಷಿಸುವುದಾದರೂ ಏನನ್ನು? ಸಾಧು, ಸಂತ, ಸ್ವಾಮೀಜಿಗಳ ಸ್ಥಾನವಾದರೂ ಎಂಥದ್ದು?

ಈ ಭರತ ಖಂಡವನ್ನು ರಾಜರು ಆಳುತ್ತಿದ್ದ ಕಾಲವನ್ನು ನೆನಪಿಸಿಕೊಳ್ಳಿ. ಪಟ್ಟಾಭಿಷೇಕವಾಗಿ ರಾಜ, ಮಹಾರಾಜರು ಸಿಂಹಾಸನವೇರುವಾಗ “ಅದಂಡ್ಯೋಡಹಂ, ಅದಂಡ್ಯೋಡಹಂ, ಅದಂಡ್ಯೋಡಹಂ….’ ಅಂದರೆ ನಾನು ಕಾನೂನಿಗಿಂತ ಮೇಲು  (I am beyond law) ಎಂದು ಮೂರು ಬಾರಿ ಹೇಳುತ್ತಿದ್ದ. ಆಗ ಅವನ ಗುರುವಾದವರು ಧರ್ಮದ ದಂಡವನ್ನು ತೆಗೆದುಕೊಂಡು ರಾಜನ ತಲೆಗೆ 3 ಬಾರಿ ಹೊಡೆದು “ಧರ್ಮದಂಡ್ಯೋಡಸಿ, ಧರ್ಮದಂಡ್ಯೋಡಸಿ, ಧರ್ಮದಂಡ್ಯೋಡಸಿ…’ ಎನ್ನುತ್ತಿದ್ದರು. ಅಂದರೆ ಜನಸಾಮಾನ್ಯರು ತಪ್ಪೆಸಗಿದಾಗ ರಾಜನಿಂದ ಶಿಕ್ಷೆಗೊಳಗಾಗುತ್ತಾರೆ. ರಾಜನೇ ತಪ್ಪೆಸಗಿದಾಗ ಆತ ಧರ್ಮದಿಂದ ಶಿಕ್ಷೆಗೊಳಗಾಗುತ್ತಾನೆ. ರಾಜನಾದ ನೀನೂ ಕೂಡ  ಧರ್ಮದ ಪರಿಧಿಯಲ್ಲೇ ಇರುವೆ (You are within the purview of global ethics) ಎಂದು ಆತನಿಗೆ ಎಚ್ಚರಿಕೆ ಕೊಡುತ್ತಿದ್ದರು, ಮನವರಿಕೆ ಮಾಡಿಕೊಡುತ್ತಿದ್ದರು. ನಿನಗೆ ಅಧಿಕಾರ ಸಿಕ್ಕಿದೆ ಎಂಬ ಮಾತ್ರಕ್ಕೆ ಎಲ್ಲೆಮೀರಿ ವರ್ತಿಸಬೇಡ, ಮೆರೆಯಬೇಡ, ನೀನೂ ನೀತಿ-ನಿಯಮಗಳ ಒಳಗೆ ಇರಬೇಕು ಎಂದು ಸಾರ್ವಜನಿಕವಾಗಿ ಹೇಳುತ್ತಿದ್ದರು.

ಇದರ ಕನಿಷ್ಠ ಅರಿವಾದರೂ ನಮ್ಮ ಕರ್ನಾಟಕದ ಖಾವಿಧಾರಿಗಳಿಗಿದೆಯೇ?

ರಾಜನ ತಲೆಗೆ ಕುಟ್ಟಿ ಬುದ್ಧಿ ಹೇಳುವ ಸ್ಥಾನಮಾನ ನಮ್ಮ ಗುರುಗಳಿಗಿತ್ತು. ಅಂತಹ “ರಾಜಗುರು’ಗಳಾಗಬೇಕಾದವರು ಇಂದು ಯಾಕಾಗಿ “ರಾಜಕೀಯ ಗುರು’ಗಳಾಗುತ್ತಿದ್ದಾರೆ? ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಡುವೆ ನಡೆಯುತ್ತಿರುವ ಆಣೆ-ಪ್ರಮಾಣದಾಟದಲ್ಲಿ ನಮ್ಮ ಖಾವಿಧಾರಿಗಳು ವಹಿಸುತ್ತಿರುವ ಪಾತ್ರವನ್ನು ನೋಡಿದಾಗ ಅವರ ಯೋಗ್ಯಾಯೋಗ್ಯತೆ, ನಿಷ್ಪಕ್ಷಪಾತತೆ ಬಗ್ಗೆ ಇಂತಹ ಅನುಮಾನ ನಿಮ್ಮನ್ನು ಕಾಡುವುದಿಲ್ಲವೆ? ಖಾವಿಧಾರಿಗಳ ಬಗ್ಗೆ ಅಹಸ್ಯ ಮೂಡುತ್ತಿಲ್ಲವೆ? ರೇಜಿಗೆ ಹುಟ್ಟುತ್ತಿಲ್ಲವೆ? ಆಣೆಯ ಸವಾಲು ಹಾಕಿದ್ದು ಯಡಿಯೂರಪ್ಪ, ಸವಾಲನ್ನು ಸ್ವೀಕರಿಸಿದ್ದು ಕುಮಾರಸ್ವಾಮಿ. ಇವರಿಬ್ಬರ ಮಧ್ಯೆ ಸ್ವಾಮೀಜಿಗಳೇಕೆ ಮೂಗುತೂರಿಸಬೇಕು? ಆಣೆ ವಿಷಯ ಬಂದಾಗ ಧರ್ಮವನ್ನು ಮುಂದಿಟ್ಟುಕೊಂಡು ಕೂಡದು, ಸಲ್ಲದು ಎಂದು ಹೇಳಿಕೆ, ಬುದ್ಧಿವಾದ ಹೇಳುತ್ತಾರಲ್ಲಾ ಈ ಸರಕಾರ ಎಷ್ಟೆಲ್ಲಾ ಅನೈತಿಕ ಕೆಲಸ ಮಾಡಿದಾಗ ಧರ್ಮ-ಅಧರ್ಮ, ನ್ಯಾಯ-ಅನ್ಯಾಯದ ಪ್ರಶ್ನೆ ನಮ್ಮ ಸ್ವಾಮೀಜಿಗಳನ್ನು ಕಾಡಲಿಲ್ಲವೆ? ಇವತ್ತು ಒಬ್ಬ ಸ್ವಾಮೀಜಿ ಬಾಯ್ಬಿಟ್ಟರೆ ಅವರ ಹೇಳಿಕೆಯಲ್ಲೇ ಅವರು ಯಾವ ಪಕ್ಷದ ಪರ ಇದ್ದಾರೆ ಎಂಬುದು ಬಹಳ ಢಾಳಾಗಿ ಕಂಡುಬಿಡುತ್ತದೆ. ಈಗ ಆಗುತ್ತಿರುವುದೂ ಅದೇ. ಇಷ್ಟೆಲ್ಲಾ ಹಗರಣಗಳು ಹೊರಬೀಳುತ್ತಿದ್ದರೂ ಮಠಗಳೊಳಗೇ ಹೊಕ್ಕಿಕೊಂಡಿದ್ದ ನಮ್ಮ ಯತಿವರ್ಯರು, ಯಡಿಯೂರಪ್ಪನವರು ಸವಾಲು ಹಾಕಿ ಅನಿಶ್ಚಿತತೆಗೆ ಬಿದ್ದ ಕೂಡಲೇ ಪ್ರತ್ಯಕ್ಷವಾಗಿ ಬಿಟ್ಟಿದ್ದಾರೆ! ಈ ಸ್ವಾಮೀಜಿಗಳು ಆಣೆ,  ಪ್ರಮಾಣ ಬೇಡವೆನ್ನುತ್ತಿದ್ದಾರಲ್ಲಾ ಒಂದು ವೇಳೆ ಕುಮಾರಸ್ವಾಮಿ ಅವರೇನಾದರೂ  ಸವಾಲು ಸ್ವೀಕರಿಸದೇ ಹಿಂದೆ ಸರಿದಿದ್ದರೆ ಸುಮ್ಮನೆ ಬಿಡುತ್ತಿದ್ದರೆ? ಸುಳ್ಳುಗಾರ ಎಂದು ಜರಿಯದೇ ಕುಳಿತುಕೊಳ್ಳುತ್ತಿದ್ದರೆ? ಆಣೆ-ಪ್ರಮಾಣ ನಮ್ಮ ಸಮಾಜದಲ್ಲಿ ಹೊಸ ಬೆಳವಣಿಗೆಯೇನಲ್ಲ. ಅದಕ್ಕೊಂದು ಪರಂಪರೆಯೇ ಇದೆ. ಹಾಗಿರುವಾಗ ಕುಮಾರಸ್ವಾಮಿ-ಯಡಿಯೂರಪ್ಪ ಆಣೆ ಮಾಡಿಕೊಂಡರೆ ಖಾವಿಧಾರಿಗಳು ಕಳೆದುಕೊಳ್ಳುವುದೇನು? ನಮ್ಮ ಸ್ವಾಮೀಜಿಗಳು ಎಷ್ಟು ಚೆನ್ನಾಗಿ “ಫಿಕ್ಸ್ ಆಗಿದ್ದಾರೆ ಎಂಬುದನ್ನು ಹಾಲಿ “ಆಣೆ’ ಪ್ರಕರಣ ಬಹಳ ಚೆನ್ನಾಗಿ ಬಯಲು ಮಾಡಿದೆಯಷ್ಟೇ.

ಇವತ್ತು ಒಬ್ಬ ಖಾದಿಧಾರಿಗೂ ಖಾವಿಧಾರಿಗೂ ಯಾವ ವ್ಯತ್ಯಾಸ ಉಳಿದಿದೆ ಹೇಳಿ?

ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಕೊಳಗೇರಿಗಳಿಗೆ ಹೋಗಿ ಸ್ಲಂ ಲೀಡರನ್ನು ಪಾಕೆಟ್ ಮಾಡಿಕೊಳ್ಳುತ್ತವೆ. ಆತನನ್ನು ಖರೀದಿಸಿದರೆ ಅಲ್ಲಿನ ವೋಟುಗಳು ಸಾರಾಸಗಟಾಗಿ ಕಿಸೆಗೆ ಬೀಳುತ್ತವೆ ಎಂಬುದು ಅಭ್ಯರ್ಥಿಗಳಿಗೆ ಗೊತ್ತಿರುತ್ತದೆ. ಇಂತಹ ಕೊಳಗೇರಿ ನಾಯಕರಿಗೂ ಜಾತಿ ಸ್ವಾಮಿಗಳಿಗೂ ಹೆಚ್ಚು ವ್ಯತ್ಯಾಸ ಉಳಿದಿಲ್ಲ, ವ್ಯತ್ಯಾಸವೇನಾದರೂ ಇದ್ದರೆ ಅದು ಧಿರಿಸಿನಲ್ಲಿ ಮಾತ್ರ. ಒಂದು ಸಮುದಾಯ, ಪಂಗಡವನ್ನು ಪ್ರತಿನಿಧಿಸುವ ಸ್ವಾಮೀಜಿ ಕೂಡ ಇಂದು ಪವರ್ ಬ್ರೋಕರ್ಸ್ ಕೆಲಸ ಮಾಡುತ್ತಿದ್ದಾರೆ. ಇವನಾರವ ಇವನಾರವ ಎಂದರೆ ಇವ ನಮ್ಮ ಜಾತಿಯವ ಎನ್ನುವ ಪರಿಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದ್ದಾರೆ. ತಮ್ಮ ಹೆಸರಿನ ಪ್ರಾರಂಭದಲ್ಲಿ “ಧರ್ಮಗುರು’, “ಜಗದ್ಗುರು’ ಎಂಬ ಉದ್ಗಾರಗಳನ್ನು ಹಾಕಿಕೊಂಡು ಜಾತಿ ಸ್ವಾಮಿಗಳಾಗಿರುವುದು ಮಾತ್ರ ವಾಸ್ತವದ ಒಂದು ದೊಡ್ಡ ಅಣಕ. ಈ ಸ್ವಾಮಿಗಳಿಗೂ ಬೇಕೆ ಜಾತಿ, ಕುಲ? ಸ್ವಾಮೀಜಿಗಳು ಜಾತಿವಾದ ಮಾಡುವುದನ್ನು, ಪಕ್ಷಪಾತಿಯಾಗಿ ನಡೆದುಕೊಳ್ಳುವುದನ್ನು ನಮ್ಮ ಪರಂಪರೆಯ ಯಾವ ಭಾಗದಲ್ಲಾದರೂ ಕಂಡಿದ್ದೀರಾ? ಬಹಳ ಹಿಂದಿನಿಂದಲೂ ನಮ್ಮ ಗುರುವರ್ಯರು ರಾಜಕೀಯ ಸಲಹೆ ನೀಡುತ್ತಿದ್ದರು. ಎಂದು ಸಮರ್ಥನೆ ಕೊಡುತ್ತಾರಲ್ಲಾ, ನಮ್ಮ ಪುರಾಣ-ಪುಣ್ಯಕಥೆಗಳಲ್ಲಿ ಬರುವ ಯಾವ ರಾಜಗುರು ಜಾತಿ ವಾದ ಮಾಡಿದ್ದ? ಚಂದ್ರಗುಪ್ತನೆಂಬ ಸಾಕ್ಯ ಕುಲದ ಹುಡುಗನನ್ನು ತಕ್ಷಶಿಲೆಗೆ ಕರೆದುಕೊಂಡು ಹೋಗಿ, ವಿದ್ಯೆ ಕೊಡಿಸಿ ಮಹಾನ್ ರಾಜನಾಗಿ ರೂಪಿಸಿದ್ದು ಚಾಣಕ್ಯ. ಸಳನೆಂಬ ಒಬ್ಬ ಸಾಮಾನ್ಯ ಯುವಕನನ್ನು ಹೊಯ್…ಸಳ ಎಂದು ಹುರಿದುಂಬಿಸಿದ್ದು, ಆತನೇ ದೊಡ್ಡ ಸಾಮ್ರಾಜ್ಯ ಕಟ್ಟುವಂತೆ ಮಾಡಿದ್ದು ಸುದತ್ತ ಎಂಬ ಜೈನ ಮುನಿ. ವಿದ್ಯಾರಣ್ಯರು ಪ್ರೇರಣೆ ಕೊಟ್ಟ ಹಕ್ಕ-ಬುಕ್ಕರು ಕುರುಬ ಜನಾಂಗಕ್ಕೆ ಸೇರಿದವರು. ರಾಮಕೃಷ್ಣ ಪರಮಹಂಸರು ರೂಪಿಸಿದ ಸ್ವಾಮಿ ವಿವೇಕಾನಂದ ಕಾಯಸ್ಥರು! ಇಂತಹ ಗುರು ಪರಂಪರೆ ಹೊಂದಿರುವ ಹಿಂದು ಧರ್ಮದಲ್ಲಿ ಈ ಜಾತಿ ಗುರುಗಳು ಯಾವಾಗ ನುಸುಳಿಕೊಂಡರು?

ಅದಿರಲಿ, ನಮ್ಮ ಯಾವ ಮಹಾನ್ ಗುರು ಒಬ್ಬ ಭ್ರಷ್ಟ ದೊರೆಯನ್ನು ಸಮರ್ಥಿಸಿಕೊಂಡಿದ್ದರು? ಯಾವ ಗುರು ಪಕ್ಷಪಾತಿಯಾಗಿ ವರ್ತಿಸಿದ್ದರು ಎಂಬುದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ? ಎರಡು ವಾರಗಳ ಹಿಂದೆ “ಕನ್ನಡಪ್ರಭ’ದಲ್ಲಿ ಪ್ರಕಟವಾಗಿರುವ ಪೇಜಾವರ ಶ್ರೀಗಳ ಬುಲೆಟ್ ಸಂದರ್ಶನ ನೋಡಿ… “ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆಯಲ್ಲಾ ನಿಮಗೆ ಬೇಸರ ತರಿಸುವುದಿಲ್ಲವೆ?’ ಎಂಬ ಪ್ರಶ್ನೆಗೆ, “ಇಂದಿರಾ, ರಾಜೀವ್ ಗಾಂಧಿ, ಅರಸು, ಗುಂಡೂರಾವ್ ವಿರುದ್ಧವೂ ಇಂತಹ ಆರೋಪಗಳಿದ್ದವು, ಅವು ಆರೋಪಗಳಷ್ಟೇ’ ಎಂದು ಸಮರ್ಥಿಸುವ ಪೇಜಾವರರು, “ರೆಡ್ಡಿಗಳ ವಿಷಯದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದು ಪಕ್ಷದ ಶಿಸ್ತಿಗೆ ಧಕ್ಕೆ ಉಂಟಾಗಿದೆ ಎಂದನಿಸುವುದಿಲ್ಲವೆ?’ ಎಂಬ ಪ್ರಶ್ನೆಗೆ “ಈ ರಾಜಕೀಯ ನಮಗೇಕೆ? ಅದನ್ನೆಲ್ಲ ಅವರವರೇ ಬಗೆಹರಿಸಿಕೊಳ್ಳುತ್ತಾರೆ’ ಎಂದು ಜಾರಿಕೊಳ್ಳುತ್ತಾರೆ! ರಾಜಕೀಯ ಪಡಸಾಲೆಯಲ್ಲೇ ಸಂಚರಿಸುತ್ತಿದ್ದ ಧೀರೇಂದ್ರ ಬ್ರಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನಾದರು ವ್ಯತ್ಯಾಸವಿದೆಯೇ? ಇಷ್ಟಕ್ಕೂ ಪೇಜಾವರ ಶ್ರೀಗಳು ವೈಯಕ್ತಿಕ ಜೀವನದಲ್ಲಿ, ಅದರಲ್ಲೂ “ದೈಹಿಕ ಸ್ವಾಸ್ಥ್ಯ’ದ ವಿಷಯದಲ್ಲಿ ಬಹಳ ಶುದ್ಧರು ಎಂಬುದು ನಿರ್ವಿವಾದ. ಆದರೆ ಅವರ ರಾಜಕೀಯ ನಿಲುವು, ಹೇಳಿಕೆಗಳಲ್ಲಿ ಮಾತ್ರ ಅದೇ ತೆರನಾದ ಉದ್ದೇಶ ಶುದ್ಧಿಯನ್ನು ಕಾಣಲು ಸಾಧ್ಯವಿಲ್ಲ. ಪಾದಪೂಜೆಗೆ ಬಂದ ಹಣವನ್ನು ಬಡ್ಡಿಗೆ ಬಿಟ್ಟು ಸಿಕ್ಕಿಹಾಕಿಕೊಂಡವರು, ಬಜೆಟ್್ನಲ್ಲಿ ಕೋಟಿ ಕೋಟಿ ಹಣ ಪಡೆದ ಸ್ವಾಮೀಜಿಗಳು ಹೇಗೆ ತಾನೇ ಯಡಿಯೂರಪ್ಪನವರನ್ನು ಕೈಬಿಡಲು ಸಾಧ್ಯ? ಬಹಳ ಬೇಸರದ ಸಂಗತಿಯೆಂದರೆ ಒಂದು ಕಾಲದಲ್ಲಿ ರಾಷ್ಟ್ರವಾದಿಗಳ ಪಕ್ಷವಾಗಿದ್ದ ಬಿಜೆಪಿ ಇವತ್ತು ಏನಾಗುತ್ತಿದೆ? ಕುಮಾರಸ್ವಾಮಿ, ದೇವೇಗೌಡರಿಂದ ಈ ಸಮಾಜ ಏನನ್ನು ನಿರೀಕ್ಷಿಸುತ್ತದೆ, ನಿರೀಕ್ಷಿಸಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಶ್ರೀರಾಮ, ಶಿವಾಜಿ, ರಾಣಾ ಪ್ರತಾಪನ ಕಥೆ ಹೇಳುವ, ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಮಂಡಿಸುವ, ರಾಮರಾಜ್ಯ ನಿರ್ಮಾಣ ಮಾತನಾಡುವ ಬಿಜೆಪಿಯ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಜಾತಿಯನ್ನೇ ದಾಳವಾಗಿಸಿಕೊಂಡಿದ್ದಾರಲ್ಲಾ ಇದೆಂಥಾ ದುರದೃಷ್ಟ? ಇಷ್ಟಾಗಿಯೂ ನಮ್ಮ ಸ್ವಾಮೀಜಿಗಳು ಭ್ರಷ್ಟಾಚಾರಿಗಳ ಪಕ್ಷ ವಹಿಸುತ್ತಿದ್ದಾರಲ್ಲಾ ಇನ್ನು ಖಾವಿಗೆ ಯಾರು ಮರ್ಯಾದೆ ಕೊಡುತ್ತಾರೆ, ಯಾವ ಮರ್ಯಾದೆ ಉಳಿಯಲಿದೆ?

ಶಿವ ಶಿವಾ… ಕೃಷ್ಣ.. ಕೃಷ್ಣಾ…!

54 Responses to “ಧೀರೇಂದ್ರ ಬ್ರಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?”

 1. akashreddy says:

  guruji i also read your article on sat ,not only this i had read tode tode articles in yours bettale jagatu. dayamadi samayasikkarre ondu sala nimage beti maduva chance kodi sir, karana nivalla nimma pen mattu nimma baravanigeyalliriva katu sattya. please sir

 2. king says:

  @ pratapa simha – why dont you write the article on paper and challenge than writing in ur own blog??? you are still immatured and u need to grow up then am sure u wll nt write anything about pejawar swamiji…..
  In olden days we were seeing peots/publishers/artical writers who were nt expecing any thing from society and they use to do a lot of research before writing any article.and those articles use to impact in everyones life……but people like this guy “pratap simha” writes anything which comes to his mind, n people like left wing/cpi/cpm/athiests are supporters ..huh..when he cant be a writer like Satyakama, DVG, DA RA Bendre y is he expecting Sri Pejavar swamiji to be like samarta ram dass etc??

 3. naveen says:

  why should not u write about sirigere swamyji……….. and his politics

 4. anu says:

  ellaru kallre… jaathi ivathu eshtru mattige berooride andre yochane maadidre bhaya aaguthe….
  In some mutt only dat perticular community ppl can have food…. rest r nt allowed… specially madhwa mutt… once my frnd told if u r gona b madhwa for an afternoon u can have food here…
  Ahithi devo bhava elli hoythu??? dharmachathra concept enaithu??? manaviyathe enaithu????? bhikhuka oota maadoku dharma beka??? avanige jaathi tag beka?????