Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ‘ಕ್ಯಾಪ್ಟನ್’ನನ್ನೇ ಔಟ್ ಮಾಡಿದ ‘ಟ್ವೆಲ್ತ್‌ಮ್ಯಾನ್’ ಯಾರು?

‘ಕ್ಯಾಪ್ಟನ್’ನನ್ನೇ ಔಟ್ ಮಾಡಿದ ‘ಟ್ವೆಲ್ತ್‌ಮ್ಯಾನ್’ ಯಾರು?

AK
1. ವಿ.ಪಿ. ಬಳಿಗಾರ್ ಎತ್ತಂಗಡಿಯಾಗಬೇಕು.
2. ಶೋಭಾ ಕಂರದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕು.
3. ಇತ್ತೀಚೆಗೆ ಮಾಡಿದ ಅಧಿಕಾರಿಗಳ ವರ್ಗಾವಣೆಯನ್ನು ರದ್ದು ಮಾಡಬೇಕು.
4. ನಾವು ಹೇಳಿದ ಇನ್ನೂ ಕೆಲವು ಸಚಿವರನ್ನು ಕೈಬಿಟ್ಟು, ನಾವೇ ಸೂಚಿಸಿದ ಕೆಲವರಿಗೆ ಸಚಿವ ಸ್ಥಾನ ನೀಡಬೇಕು.
5. ಸಂಪುಟ ಸಮನ್ವಯ ಸಮಿತಿ ರಚನೆಯಾಗಬೇಕು.

ಇವಿಷ್ಟು ರೆಡ್ಡಿ ಸಹೋದರರು ಮುಂದಿಟ್ಟಿದ್ದ ಒಟ್ಟಾರೆ ಬೇಡಿಕೆ ಗಳು. ಹಾಗಾದರೆ “ಕರ್ನಾಟಕ ವಿಶನ್ 20:20″ ಮೂಲಭೂತ ಅಭಿವೃದ್ಧಿ ಸಮಿತಿಯ ಛೇರ್‍ಮನ್ ಕ್ಯಾಪ್ಟನ್ ಗೋಪಿನಾಥ್ ಅವರನ್ನು ಎತ್ತಂಗಡಿ ಮಾಡಿದ್ದು ಯಾರು?! ಖಂಡಿತ ರೆಡ್ಡಿ ಸಹೋದರರಿಗೆ ಗೋಪಿನಾಥ್ ಜತೆ ಕೊಟ್ಟು-ತರುವ ಯಾವ ವ್ಯವಹಾರವೂ ಇಲ್ಲ, ಗೋಪಿನಾಥ್ ಬಗ್ಗೆ ಅವರಿಗೆ ಯಾವ ಹಳೇ ವೈಷಮ್ಯವೂ ಇಲ್ಲ. ಅಧಿಕಾರ ಹಂಚಿಕೆ ವಿಷಯದಲ್ಲೂ ತಾಕಲಾಟವಿಲ್ಲ. ಗೋಪಿನಾಥ್ ಕೈಗೆತ್ತಿಕೊಂಡಿರುವ ಮೂಲಭೂತ ಅಭಿವೃದ್ಧಿ ಕಾರ್ಯಗಳು ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಈ ಯಾರ ಖಾತೆಗಳಿಗೂ ಸಂಬಂಧಪಟ್ಟಿಲ್ಲ. ಆದರೂ ಗೋಪಿನಾಥ್ ಅವರನ್ನು ಏಕಾಏಕಿ ಮನೆಗೆ ಕಳುಹಿಸಿದ್ದೇಕೆ? ಸಜ್ಜನರಾದ ಗೋಪಿನಾಥ್ ಅವರನ್ನು ದ್ವೇಷಿಸುವಂತಹ ಅತೃಪ್ತ ಆತ್ಮ ಅದ್ಯಾವುದಿದ್ದೀತು?

ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಾರಣ ಮತ್ತು ಕಾರಣಕರ್ತನನ್ನು ಹುಡುಕಿಕೊಂಡು ಹೊರಟರೆ ಎಲ್ಲ ಮಾರ್ಗಗಳೂ ಹೋಗಿ ಸೇರುವುದು ಕರ್ನಾಟಕದ ಬಿಜೆಪಿಯ ರಾಷ್ಟ್ರೀಯ ನಾಯಕ ಅನಂತು ಬಗಲನ್ನು!! ಹೌದು, ಗೋಪಿನಾಥ್ ಬಗ್ಗೆ ಬಿಜೆಪಿಯಲ್ಲಿ ಯಾರಿಗಾದರೂ ಅಸಮಾಧಾನ ಇದ್ದರೆ ಅದು ಅನಂತುಗೆ ಮಾತ್ರ. ಕಳೆದ ಲೋಕಸಭೆ ಚುನಾವಣೆಯನ್ನೇ ತೆಗೆದುಕೊಳ್ಳಿ. ಈ ಸಾರಿ ಅನಂತು ಗಿಮಿಕ್ಕುಗಳಿಗೆ ಬಿಜೆಪಿಯ ಕಟ್ಟಾ ಬೆಂಬಲಿಗರೇ ಸೊಪ್ಪುಹಾಕುವುದಿಲ್ಲ, ಅವರು ಸೋಲುವುದು ಖಚಿತ ಎಂಬ ಭಾವನೆ ಕ್ಷೇತ್ರದಲ್ಲಿ ದಟ್ಟವಾಗಿತ್ತು. ಎಸ್.ಎಂ. ಕೃಷ್ಣ ಅವರೇ ನಾದರೂ ಎದುರಾಳಿಯಾದರೆ ಮತದಾನಕ್ಕಿಂತ ಮೊದಲೇ ಅನಂತು ಔಟ್ ಎಂದು ತೀರ್ಪು ಕೊಡಬಹುದು ಎಂಬ ವಾತಾವರ ಣವೂ ಸೃಷ್ಟಿಯಾಯಿತು. ಆ ಸಂದರ್ಭದಲ್ಲಿ ಕೃಷ್ಣ ಜತೆ ಹೊಂದಿದ್ದ ಹಳೆ ಸ್ನೇಹ ಅನಂತು ಅವರ ಸಹಾಯಕ್ಕೆ ಬಂತು. ಆದರೆ ಕ್ಯಾಪ್ಟನ್ ಗೋಪಿನಾಥ್ ಕಣಕ್ಕಿಳಿಯುವ ಮೂಲಕ ಅನಂತುಗೆ ಹೊಸ ತಲೆನೋವಾದರು. ಗೋಪಿನಾಥ್ ಅವರಿಂದಾಗಿ ಬ್ರಾಹ್ಮಣ ಮತಗಳೂ ಒಡೆದು ಹೋಗುತ್ತವೆ, ಪ್ರeವಂತ ಮತದಾರರ ವೋಟೂ ಕೈತಪ್ಪುತ್ತವೆ ಎಂಬ ಭಯ ಕಾಡಿತು. ಅನಂತು ಗೋಪಿನಾಥ್ ಬಗ್ಗೆ ಮುನಿಸಿಕೊಳ್ಳಲು ಇದೇ ಮೂಲ ಕಾರಣ. ದುರದೃಷ್ಟವಶಾತ್, ಗೆದ್ದ ನಂತರವೂ ಹಳೆ ಸಿಟ್ಟನ್ನು ಬಿಡಲಿಲ್ಲ.

ಅದಕ್ಕೂ ಮಿಗಿಲಾಗಿ, ಯಡಿಯೂರಪ್ಪನವರೇ ಕ್ಯಾಪ್ಟನ್ ಗೋಪಿ ನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬ ಗುಮಾನಿ ಎಲೆಕ್ಷನ್ ಘೋಷಣೆಯಾದಾಗಲೇ ಅನಂತುಗಿತ್ತು. ಚುನಾವಣೆ ಬಳಿಕ “ಕರ್ನಾಟಕ ವಿಶನ್ 20:20″ ಮೂಲಭೂತ ಅಭಿವೃದ್ಧಿ ಸಮಿತಿಯ ಛೇರ್‍ಮನ್ ಹುದ್ದೆಯನ್ನು ಅವರಿಗೆ ನೀಡಿದಾಗಲಂತೂ ಅನಂತುಗೆ ತಮ್ಮ ಅನುಮಾನ, ಗುಮಾನಿ ನಿಜವೆನಿಸಿಬಿಟ್ಟಿತು. ಬಳ್ಳಾರಿ ರೆಡ್ಡಿಗಳ ಪ್ರಹಸನದಿಂದಾಗಿ ಭುಗಿಲೆದ್ದಿದ್ದ ಸಮಸ್ಯೆಯ ನಿವಾರಣೆಗೆ ಮೊನ್ನೆ ದಿಲ್ಲಿ ಉಭಯ ಬಣಗಳ ನಡುವೆ ಚರ್ಚೆ, ಹೊಡೆದಾಟ, ಸಂಧಾನ ನಡೆಯುತ್ತಿದ್ದಾಗ “ನನ್ನ ವಿರುದ್ಧ ಸ್ಫರ್ಧಿಸಿದ್ದ ಗೋಪಿನಾಥ್‌ರನ್ನು ಮೂಲಸೌಕರ್ಯ ಅಭಿವೃದ್ಧಿ ಸಮಿತಿಗೆ ಹೇಗೆ ಛೇರ್‍ಮನ್ ಮಾಡಿದಿರಿ? ನನ್ನ ಅಭಿಪ್ರಾಯ ಕೇಳದೆ ಹೇಗೆ ನೇಮಕ ಮಾಡಿದ್ದು?” ಎಂದು ಅನಂತು ಹಳೆಯ ಹುಣ್ಣನ್ನು ತುರಿಸಿ ಕೊಂಡರು. ರೆಡ್ಡಿಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾದರು. ಅದರ ಫಲವೇ ಗೋಪಿನಾಥ್ ಎತ್ತಂಗಡಿ!

ಆದರೆ ಗೋಪಿನಾಥ್ ಅವರನ್ನು ಛೇರ್‍ಮನ್ ಹುದ್ದೆಯಿಂದ ಪದಚ್ಯುತಗೊಳಿಸಿದ್ದರಿಂದ ಯಾರಿಗೆ ನಷ್ಟ?

ಸಂಸದೀಯ ಪ್ರಜಾತಂತ್ರ ಉತ್ತಮ ಆಡಳಿತದ ಮೇಲೆ ನಿಂತಿದೆ. ಎಲೆಕ್ಟೋರಲ್ ಪಾಲಿಟಿಕ್ಸ್ (ಮತರಾಜಕೀಯ) ಅಥವಾ ಚುನಾ ವಣಾ ರಾಜಕೀಯವೆಂಬುದು ಅದರ ಒಂದು ಭಾಗವಷ್ಟೆ. “ನಾನು ಗೆಲ್ಲುವವರೆಗೂ ನನ್ನ ಪರ ಹಾಗೂ ವಿರುದ್ಧದ ಮತದಾರರು ಎಂಬುವರಿರುತ್ತಾರೆ. ಗೆದ್ದ ನಂತರ ನಾನು ಎಲ್ಲರನ್ನೂ ಪ್ರತಿನಿಧಿಸುತ್ತೇನೆ” ಎಂದು 1774ರಲ್ಲೇ ಇಂಗ್ಲೆಂಡ್‌ನ ಎಡ್ಮಂಡ್ ಬರ್ಕ್ ಹೇಳಿದ್ದರು. ಗೆದ್ದ ನಂತರ ಬರಾಕ್ ಒಬಾಮ ಹೇಳಿದ್ದೂ ಅದನ್ನೇ. “ಇನ್ನು ರಿಪಬ್ಲಿಕನ್ನರು, ಡೆಮೊಕ್ರಾಟರು ಎಂಬ ಭೇದವಿಲ್ಲ. ನಾನು ಎಲ್ಲರ ಅಹವಾಲನ್ನೂ ಸ್ವೀಕರಿಸುತ್ತೇನೆ. ಅದರಲ್ಲೂ ನನ್ನ ಜತೆ ಅಭಿಪ್ರಾಯಭೇದ ಹೊಂದಿರುವವರ ಮಾತಿಗೆ ಹೆಚ್ಚು ಕಿವಿಗೊಡು ತ್ತೇನೆ” ಎಂದಿದ್ದರು. ಇದು ನಮ್ಮ ಅನಂತುಗೇಕೆ ಅರ್ಥವಾಗುವು ದಿಲ್ಲ? ತಮ್ಮ ವಿರುದ್ಧ ಸ್ಪರ್ಧಿಸಿದರೆಂಬ ಕಾರಣಕ್ಕೆ ಗೋಪಿನಾಥ್ ಅವರ ಹುದ್ದೆಯನ್ನೇ ಬಲಿತೆಗೆದುಕೊಳ್ಳಲು ಮುಂದಾಗಿದ್ದೇಕೆ? ಅವರ ಇಂತಹ ವೈಷಮ್ಯ ಸಾಧನೆಯಿಂದ ನಷ್ಟವಾಗಿದ್ದು ರಾಜ್ಯಕ್ಕೇ ಅಲ್ಲವೆ?

ಕ್ಯಾಪ್ಟನ್ ಗೋಪಿನಾಥ್ ಅವರೇನು ಸಾಮಾನ್ಯ ಮನುಷ್ಯನಲ್ಲ, ಅನಂತು ಅವರಂತೆ ರಾಜಕಾರಣಿಯೂ ಅಲ್ಲ. ದೇಶೀಯ ವಾಯು ಯಾನಕ್ಕೇ ಒಂದು ಹೊಸ ಅರ್ಥ ಕೊಟ್ಟವರು. ಕಿಸೆಯಲ್ಲಿ ಒಂದು ರೂಪಾಯಿ ಇಟ್ಟುಕೊಂಡಿರುವವನೂ ವಿಮಾನದಲ್ಲಿ ಹೋಗ ಬಹುದು ಎಂಬುದನ್ನು ತೋರಿಸಿಕೊಟ್ಟ ವ್ಯಕ್ತಿ. ಆ ಮೂಲಕ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ, ಮೆಚ್ಚುಗೆಯ ವಿಷಯವಾಗಿಸಿದವರು. ತನ್ನ ದೂರದರ್ಶಿತ್ವ ಹಾಗೂ ಪರಿಶ್ರಮದಿಂದ ‘ಡೆಕ್ಕನ್ ಏವಿಯೇಶನ್’ ಕಟ್ಟಿ ಬೆಳೆಸಿದ ಹಾಗೂ ಪ್ರಸ್ತುತ ೪೫೦೦ ಕೋಟಿ ರೂ ಉದ್ಯಮದ ಒಡೆಯ. ಮಾಡಲು ಅವರಿಗೆ ಬೇಕಾದಷ್ಟು ಕೆಲಸಗಳಿವೆ. ಈಗಾಗಲೇ ಕಾರ್ಗೋ ಏರ್‌ಲೈನ್ಸ್ (ಡೆಕ್ಕನ್ 360) ಆರಂಭಿಸಿದ್ದಾರೆ. ಸರಕಾರಿ ಸೇವೆ ಮಾಡುವು ದರಿಂದ ಅವರಿಗೇ ನಷ್ಟ. ಇಷ್ಟಾಗಿಯೂ ನಾಡಿನ ಹಿತದೃಷ್ಟಿಯಿಂದ ಲಾಭವಲ್ಲದ ಕೆಲಸವನ್ನು ಕೈಗೆತ್ತಿಕೊಂಡು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಅವರನ್ನು ಎತ್ತಂಗಡಿ ಮಾಡಿದ್ದರಿಂದ ರಾಜ್ಯಕ್ಕೆ ನಷ್ಟವೇ ಹೊರತು, ಅವರಿಗಲ್ಲ.

ದೇವೇಗೌಡರಿಗೂ ಅನಂತುಗೂ ಏನು ವ್ಯತ್ಯಾಸ?

ದೇವೇಗೌಡರು ಇಲ್ಲ ಸಲ್ಲದ ಆರೋಪ ಮಾಡಿ ‘ಬಿಐಎಎಲ್’ ಲ್ಲಿದ್ದ ಇನ್ಫೊಸಿಸ್ ನಾರಾಯಣಮೂರ್ತಿಯವರು ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು. ಅನಂತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೋಪಿನಾಥ್‌ಗೆ ರಾತ್ರೋ ರಾತ್ರಿ ಗೇಟ್‌ಪಾಸ್ ಕೊಡಿಸಿದ್ದಾರೆ.

ಒಂದೆಡೆ ಕೇಂದ್ರದ ಕಾಂಗ್ರೆಸ್ ಸರಕಾರ ನಂದನ್ ನೀಲೇಕಣಿ ಯವರನ್ನು ಇನ್ಫೋಸಿಸ್‌ನಿಂದ ಬಿಡಿಸಿಕೊಂಡು ಹೋಗಿ ಕ್ಯಾಬಿನೆಟ್ ದರ್ಜೆ ಸಚಿವನ ಸ್ಥಾನ ನೀಡಿ ದೇಶವಾಸಿಗಳಿಗೆ ವಿಶಿಷ್ಠ ಹಾಗೂ ಬಹೂಪಯೋಗಿ ‘ಗುರುತಿನ ಚೀಟಿ’ ನೀಡುವ ಕಾರ್ಯಕ್ಕೆ ಹಚ್ಚಿದೆ. ಅವರಿಗೆ ಸರಕಾರದ ಯಾವ ಅಂಗಗಳಾಗಲಿ, ಅಧಿಕಾರಶಾಹಿಗಳಾ ಗಲಿ ಅಡಚಣೆಯುಂಟು ಮಾಡಬಾರದು ಎಂದು ಸೂಚಿಸುವ ಮೂಲಕ ಪ್ರಧಾನಿ ಮನಮೋಹನ್ ಸಿಂಗ್ ಸಾರ್ವಜನಿಕವಾಗಿ ಕಾಳಜಿ ಮೆರೆದಿದ್ದಾರೆ. ಅಷ್ಟೇ ಅಲ್ಲ, ಖ್ಯಾತ ಹೃದಯತಜ್ಞ ದೇವಿಪ್ರಸಾದ್ ಶೆಟ್ಟಿ ಅವರನ್ನು ಕೇಂದ್ರ ಯೋಜನಾ ಆಯೋಗದ ಆರೋಗ್ಯದ ಮೇಲಿನ ಉಪ ಸಮಿತಿಯಲ್ಲಿ ಸ್ಥಾನ ನೀಡಿ ಆರೋಗ್ಯ ಸೇವಾ ಕ್ಷೇತ್ರಕ್ಕೆ ಕಾಯಕಲ್ಪ ಕೊಡುವ ಕಾರ್ಯಕ್ಕೆ ಹಚ್ಚಿದೆ. ರಾಜೀವ್‌ಗಾಂಧಿಯವರು ಹುಡುಕಿತಂದ ಸ್ಯಾಮ್‌ಪಿತ್ರೋಡಾ ಎಂಬ ಇಂಜಿನಿಯರ್ ನಮ್ಮ ದೇಶದಲ್ಲಿ ಸಂಪರ್ಕಕ್ರಾಂತಿಯನ್ನೇ ತಂದರು. ಅನುಭವ, ಆಗಾಧeನ, ಸಾಧನೆಯನ್ನು ಬೆನ್ನಿಗೆ ಕಟ್ಟಿಕೊಂಡಿರುವ ಇಂತಹ ಪರಿಣತರನ್ನು ಸೂಕ್ತ ರೀತಿಯಿಂದ ಬಳಸಿಕೊಂಡರೆ ಮಾತ್ರ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯ.

ಅನಂತು ಮಾಡಿದ್ದೇನು?

ಇಂದಿರಾಗಾಂಧಿಯವರು ಹೇರಿದ ತುರ್ತುಪರಿಸ್ಥಿತಿ, ದರ್ಪ, ದೌರ್ಜನ್ಯಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಅವರು, ಗೋಪಿನಾಥ್ ಹುದ್ದೆಯನ್ನು ಬಲಿತೆಗೆದುಕೊಂಡಿದ್ದು ಎಷ್ಟು ಸರಿ? ಬಿಜೆಪಿಯ ಮುಂದಿನ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಅವರ ಕೈಗೆ ಆಡಳಿತದ ಚುಕ್ಕಾಣಿಯೇನಾದರೂ ಸಿಕ್ಕಿದರೆ ಗತಿ ಯೇನು? ಅಮೆರಿಕದ ಒಬಾಮ ತಮ್ಮ ರಾಜಕೀಯ ಎದುರಾಳಿ ಹಿಲರಿ ಕ್ಲಿಂಟನ್‌ರನ್ನೇ ವಿದೇಶಾಂಗ ಸಚಿವೆಯನ್ನಾಗಿ ನೇಮಕ ಮಾಡಿ ದರು. ಯಾವ ಬುಷ್ ಸರಕಾರವನ್ನು ತೆಗಳುತ್ತಿದ್ದರೋ ಆ ಬುಷ್ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ರಾಬರ್ಟ್ ಗೇಟ್ಸ್‌ರನ್ನು ಅದೇ ಸ್ಥಾನದಲ್ಲಿ ಉಳಿಸಿಕೊಂಡರು. ಏಕೆಂದರೆ ಅವರದ್ದು ದೇಶಚಿಂತನೆ.

ಅವರೆಲ್ಲಿ ನಮ್ಮ ಅನಂತು ಎಲ್ಲಿ?!

ಇವತ್ತು ಹತ್ತಾರು ಏರ್‌ಲೈನ್ಸ್‌ಗಳು ನಮ್ಮಲ್ಲಿರಬಹುದು. ಆದರೆ ಭಾರತದ ಬಾನಂಗಳವನ್ನು ನೋಡಿದರೆ ನೆನಪಾಗುವುದು ಗೋಪಿನಾಥ್ ಮಾತ್ರ. ಅವರೊಬ್ಬ ವಿಶನರಿ. ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದು ಯಾರದೋ ಮೇಲಿನ ಸಿಟ್ಟಿನಿಂದಲ್ಲ. ಅವರೇ ಹೇಳಿ ದಂತೆ, ‘ಸಜ್ಜನರೂ ಕೂಡ ರಾಜಕಾರಣಕ್ಕೆ ಬರಬೇಕು’ ಎಂಬ ಕಾರಣಕ್ಕೆ. ಇದು ಅನಂತುಗೆಲ್ಲಿ ಅರ್ಥವಾಗಬೇಕು? ಇಷ್ಟಕ್ಕೂ ಐದು ಬಾರಿ ಲೋಕಸಭೆಗೆ ಆರಿಸಿ ಹೋಗಿರುವ ಅನಂತು ಬೆಂಗಳೂರಿಗೆ ಏನು ಮಾಡಿದ್ದಾರೆ? ಏನಾದರೂ ಮಾಡಿದ್ದಾರಾ ಎಂಬ ಪ್ರಶ್ನೆಯ ನ್ನಿಟ್ಟು ಕೊಂಡು ಹೊರಟರೆ ಅವರ ಸಾಧನೆಗಳನ್ನು ‘ಹುಡ್ಕೋ’ ಪರಿಸ್ಥಿತಿ ಬರುತ್ತದೆ ಅಷ್ಟೇ!

5 Responses to “‘ಕ್ಯಾಪ್ಟನ್’ನನ್ನೇ ಔಟ್ ಮಾಡಿದ ‘ಟ್ವೆಲ್ತ್‌ಮ್ಯಾನ್’ ಯಾರು?”

 1. Chethan, Coorg says:

  It’s very true article. Ananth is one of the worst BJP leader that karnataka ever seen. Recently when BJP was in a big issue, this ananth tried to become CM in joining hands with Reddy and his gang (without knowing to Shetter). He knows very clearly that in another 10 years definitely BJP wont form the govt in central. Let him point out his success as a political leader. What work he and sadananda Gowda has done for Karnataka when BJP was ruling in central? They need to learn from TamilNadu MP’s. One eg: When Mr. Dayanidi maran was Telecom min, he brought many manufaturing units to chennai (Nokia, Motorolla, Hyundai, Honda, many more like this which has provided lakhs of jobs in Chennai). Now, after he became a textile minister, he brought around 5-6 new very big textile industries to Tamil nadu. These are very few to mention.

  What our Karnataka MP’s and Central ministers are doing? Mr. S M Krishna, Muniyappa, Moily, Karge what are you guys waiting for? Give me your chair for 1 month. I will do your work in 1 month what you will do in another 5 years.

  As a kannadiga, its unfortunate for me to give an example of another state minister.

 2. NMankale says:

  This is a very good article. BJP is in bad shape because of people like Ananth Kumar.

 3. anildinde says:

  dear sir u are right ananthkumar lways trying to look after the BJP government he tried almost everything to put yadiyurappa out of the government but he has not succeed in that ahd this is not for the first time he is doingthis he tried this many more time the highcommand has to know this and have to take some serious actions to put controal on him

  thank u.

  anil

 4. Raghu SP says:

  Now BJP is showing real face to the people, no doubt they will loose power in karnataka also very shortly, its a clear witness to everybody what gymics sushma swaraj played in karnataka political uncertainty. Party is full of egoistic maniacs. Really we need people like M singh, chidhu and Pranab

 5. srimathi tantry says:

  Dear sir
  This is a very good article. BJP is in bad shape and bad name because of people like Ananth Kumar.by hook or cook he always want power it may be state or central….

  why bangalore people gave another opportunity to this person