Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇವರಿಬ್ಬರೆಂದರೆ ವಿರೋಧಿಗಳೂ ಬೆಚ್ಚುತ್ತಾರೆ, ಏಕೆಂದರೆ…

ಇವರಿಬ್ಬರೆಂದರೆ ವಿರೋಧಿಗಳೂ ಬೆಚ್ಚುತ್ತಾರೆ, ಏಕೆಂದರೆ…

ಇವರಿಬ್ಬರೆಂದರೆ ವಿರೋಧಿಗಳೂ ಬೆಚ್ಚುತ್ತಾರೆ, ಏಕೆಂದರೆ…

ಒಂದು ಕಾಲವಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗುವವರನ್ನು ಕೆಲಸವಿಲ್ಲದವರು ಎಂದು ಹಂಗಿಸಲಾಗುತ್ತಿತ್ತು. ಕ್ರಮೇಣ ಜನ ಸಾಮಾನ್ಯನೂ ಅದರತ್ತ ಆಕರ್ಷಿತನಾಗುತ್ತಿದ್ದಾಗ ಲೈಕು, ಶೇರುಗಳ ಆಸೆಬುರುಕರು, ಪ್ರಚಾರ ವ್ಯಸನಿಗಳು ಎಂದು ಹಂಗಿಸುವ ಕಾಲ ಆರಂಭವಾಯಿತು. ವರ್ಷ ಕಳೆದಂತೆ ಜಾಲತಾಣಗಳಲ್ಲಿ ಇಲ್ಲದ ವ್ಯಕ್ತಿಯನ್ನು ಅನಕ್ಷರಸ್ಥನ ಧಾಟಿಯಲ್ಲಿ ನೋಡುವ ವರ್ಗ ಸೃಷ್ಟಿಯಾಯಿತು. ಅನಂತರ ವ್ಯಕ್ತಿ ನಿಂದೆ, ಸಿದ್ಧಾಂತ ನಿಂದೆ, ಅವಹೇಳನಕಾರಿ ಪ್ರಕಟಣೆಗಳು, ಕೊಲೆಬೆದರಿಕೆಗಳಿಗೂ ಜಾಲತಾಣಗಳು ಬಳಕೆಯಾದಾಗ ಕೆಲವರು ಇದು ಅಪಾಯಕಾರಿ ಎಂದು ಕರೆದರು. ಇವೆಲ್ಲವನ್ನೂ ಮೀರಿ ನೋಡಿದರೆ ಸಾಮಾಜಿಕ ಜಾಲತಾಣಗಳು ಬೇರೇನೋ ಒಂದು ಸ್ಥಾನದಲ್ಲಿ ನಿಂತಂತೆ ಕಾಣಿಸುತ್ತವೆ. ಸುದ್ಧಿ ಮಾಧ್ಯಮವಾಗಿ, ಸಂದೇಶ ವಾಹಕವಾಗಿ, ಸುದ್ಧಿ ಮೂಲವಾಗಿ, ಪ್ರಚಾರದ ಭಾಗವಾಗಿ, ಜಾಗೃತಿಯ ಸಾಧನವಾಗಿ ಬೆಳೆದಿರುವ ಜಾಲತಾಣಗಳು ಬಳಸುವವನ ಮಾನಸಿಕತೆಯ ಮೇಲೆ ನಿಂತಿದೆ ಎಂದು ಅದರ ವಿಶ್ಲೇಷಕರು ಬಣ್ಣಿಸುವ ಮಟ್ಟಕ್ಕೆ ಇಂದು ನಿಂತಿದೆ. ಹೌದು, ಎಲ್ಲವೂ ಬಳಸುವವನ ಕೈಯಲ್ಲಿದೆ. ರಾಕ್ಷಸನ ಕೈಗೆ ಕೊಟ್ಟ ಆಯುಧದಂತೆ ಜಾಲತಾಣಗಳೂ ದಿಕ್ಕುತಪ್ಪಬಹುದು. ಅದಕ್ಕೆ ಹೊಣೆ ಅದನ್ನು ಬಳಸುವಾತನೇ ಹೊರತು ಬಳಲ್ಪಡುವ ಸರಕಲ್ಲ.

ಸಾಮಾಜಿಕ ಜಾಲತಾಣಗಳು ಹೀಗೂ ಬಳಕೆಯಾಗುತ್ತವೆ. ಅದನ್ನು ಹೀಗೂ ಬಳಸಬಹುದು. ಇದನ್ನೇ ಉಪಯೋಗಿಸಿ ಸಮಾಜಕ್ಕೆ ಸಂದೇಶವನ್ನು ಕೊಡಬಹುದು ಎಂದು ತೋರಿಸಿಕೊಟ್ಟವರು ನಮ್ಮ ನಡುವೆ ಇದ್ದಾರೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ನೀವು ಏನೇ ಕೆಲಸ ಮಾಡಿ, ಆದರೆ ಆ ಕೆಲಸ ದೇಶಹಿತಕ್ಕೆ ಮುಡಿಪಾಗಿರಲಿ’ ಎಂಬ ಸಂದೇಶವನ್ನು ಚಾಚೂ ತಪ್ಪದೆ ಪಾಲಿಸುವ ಯುವಕರಿದ್ದಾರೆ. ಅವರು ಬೇರೆ ಬೇರೆ ಕೆಲಸದಲ್ಲಿದ್ದಾರೆ, ದೇಶದ ನಾನಾ ಕಡೆಗಳಲ್ಲಿದ್ದಾರೆ. ಅವರೆಲ್ಲರ ನಡುವೆ ಈಗ ಹೇಳಲಿರುವ ಇಬ್ಬರು ವಿಶೇಷವಾಗಿ ಕಾಣಿಸುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸಮಾಜ ಹಿತದ ಪ್ರಶ್ನೆ ಬಂದಾಗ, ಧರ್ಮದ ವಿಷಯ ಬಂದಾಗ, ನಂಬಿ ನಡೆದ ಸಿದ್ಧಾಂತಗಳ ವಿಷಯ ಬಂದಾಗ ಇವರಿಬ್ಬರೂ ರಾಜಿಯಾದ್ದದೇ ಇಲ್ಲ. ಎಷ್ಟೋ ಬೆದರಿಕೆಗಳು ಬಂದಾಗಲೂ ಇವರು ಮೂಲೆ ಸೇರಿಲ್ಲ. ವಿರೋಧಿಗಳು ಎಷ್ಟೇ ಪ್ರಬಲರಾದರೂ ಅವರಿಗೆ ಮಣಿದಿಲ್ಲ. ವ್ಯವಸ್ಥಿತ ಜಾಲ ಹೆಣೆದರೂ ಇವರ ಜನಪ್ರೀಯತೆಯ ಗುಟ್ಟು ಬೇರೆಯವರಿಗೆ ಅರ್ಥಮಾಡಿಕೊಳ್ಳಲಾಗಿಲ್ಲ. ಬಹುತೇಕರು ಇವರ ಹೆಸರು ಕೇಳಿದ್ದರೂ ಇವರಾರೆಂಬುದು ತಿಳಿದಿಲ್ಲ. ಒಂದು ಊರಲ್ಲ, ಜಿಲ್ಲೆಯಲ್ಲ , ರಾಜ್ಯವಲ್ಲ, ಇಡೀ ದೇಶವೂ ಅಲ್ಲ, ವಿದೇಶಗಳಲ್ಲೂ ಇವರು ಹೆಸರಾದವರು. ಅದೆಷ್ಟೋ ವರುಷಗಳಿಂದಲೂ ಸಿದ್ಧಾಂತಕ್ಕೆ ತಲೆ ಬಾಗಿ ನಡೆಯುತ್ತಿರುವ ಆ ವ್ಯಕ್ತಿಗಳ ಹೆಸರು ಮಹೇಶ್ ವಿಕ್ರಮ್ ಹೆಗ್ಡೆ ಹಾಗೂ ವಿವೇಕ್ ಶೆಟ್ಟಿ.

ಸಾಮಾಜಿಕ ಜಾಲತಾಣದಲ್ಲಿರುವವರಿಗೆ ಇವರ ಹೆಸರುಗಳು ಚಿರಪರಿಚಿತ. ಮಹೇಶ್ ವಿಕ್ರಮ್ ಹೆಗ್ಡೆ ಮೂಡಬಿದಿರೆಯ ಸಾಮಾನ್ಯ ಹಳ್ಳಿಯಿಂದ ಬಂದರೆ ವಿವೇಕ್ ಶೆಟ್ಟಿ ಕೂಡ ಕುಂದಾಪುರದ ಮಟ್ಯಾಡಿ ಎಂಬ ಹಳ್ಳಿಯಿಂದ ಬಂದವರು. ವೃತ್ತಿಗಳು ಬೇರೆ ಬೇರೆಯಾದರೂ, ಆಲೋಚನೆಗಳ ದೃಷ್ಟಿ ಬೇರೆ ಬೇರೆ ತೆರನಾದರೂ ನಂಬಿದ ಸಿದ್ಧಾಂತ ಮಾತ್ರ ಒಂದೇ. ‘ಮೋದಿ ಹಾಗೂ ಹಿಂದುತ್ವ’. ಇಬ್ಬರಿಗೂ ಮೋದಿ ಕನಸಿನ ಯುವ ಭಾರತ ಕಟ್ಟುವ ಹುಮ್ಮಸ್ಸು. ಅವರಿಬ್ಬರೂ ಕೂಡಿ ಮಾಡಿದ ಒಂದಷ್ಟು ಸಾಮಾಜಿಕ ಕಾರ್ಯಗಳು ಮತ್ತು ಜಾಗೃತಿ ಮೂಡಿಸಿದ ಬಗೆಯಿದೆಯಲ್ಲ ಅದು ಇನ್ನೊಂದಿಷ್ಟು ಜನರಿಗೆ ಹಾದಿ ನಿರ್ಮಿಸಿ ಕೊಡುವುದು ಖಂಡಿತ. ನರೇಂದ್ರ ಮೋದಿಯವರ ಕನಸ್ಸಿನ ಭಾರತವನ್ನು ಯುವ ಸಮುದಾಯಗಳ ಮೂಲಕ ಪಸರಿಸುವ ರೀತಿ ಅವರಿಬ್ಬರನ್ನು ಇಡೀ ದೇಶಕ್ಕೆ ಪರಿಚಯಿಸಿದೆ. ಕೇಂದ್ರ ಸರ್ಕಾರದ ಯಾವುದೇ ಹೊಸ ಯೋಜನೆಗಳು, ಘೋಷಣೆಗಳು, ವಿರೋಧಿಗಳ ದೌರ್ಬಲ್ಯ-ಷಡ್ಯಂತ್ರಗಳನ್ನು ಮರುಗಳಿಗೆಯಲ್ಲಿಯೇ ದೇಶದ ಚರ್ಚಿತ ಸಂಗತಿಯನ್ನಾಗಿ ಮಾಡಬಲ್ಲವರು ಇವರು. ಜಾಲತಾಣಿಗರಿಗೆ ಮೋದಿಯವರ ಆಶಯಗಳು ಮೊದಲು ಮುಟ್ಟುವುದೇ ಇವರಿಬ್ಬರಿಂದ. ಮಹೇಶ್ ವಿಕ್ರಮ್ ಹೆಗ್ಡೆಗೆ ಟ್ವಿಟ್ಟರ್‍ನಲ್ಲಿ 67 ಸಾವಿರಕ್ಕೂ ಮೇಲ್ಪಟ್ಟು ಹಿಂಬಾಲಕರಿದ್ದಾರೆ. ಸ್ವತಃ ನರೇಂದ್ರ ಮೋದಿ ಕೂಡ ಟ್ವಿಟ್ಡರ್‍ನಲ್ಲಿ ಇವರನ್ನು ಫಾಲೋ ಮಾಡಿದ್ದಾರೆಂದರೆ ಇವರ ಪ್ರಚಾರದ ತೀವ್ರತೆ ಎಷ್ಟಿರಬಹುದು. ವಿವೇಕ್ ಶೆಟ್ಟಿಯವರಿಗೆ ಫೇಸ್‍ಬುಕ್ಕಿನಲ್ಲಿ 2,80,000 ಹಿಂಬಾಲಕರಿದ್ದಾರೆ. ಹಿಂಬಾಲಕರೆಲ್ಲರೂ ಸುಖಾಸುಮ್ಮನೆ ಇವರನ್ನು ಹಿಂಬಾಲಿಸಲಿಲ್ಲ. ಅವರ ಪ್ರತಿ ನಡೆಯಿಂದ ಪ್ರೇರೇಪಿತರಾಗಿ ಹಿಂಬಾಲಿಸಿದ ಬಗೆ ಬಹುಷಃ ಇವರಿಬ್ಬರ ಸಾಮಾಜಿಕ ಕಳಕಳಿ ಅದೆಷ್ಟು ಆಳವಾಗಿರಬಹುದು? ದೇಶ ದ್ರೋಹಿ ಕೃತ್ಯಗಳು, ದೇಶದ್ರೋಹಿ ಹೇಳಿಕೆಗಳು, ಮಾರಕ ಸುಳ್ಳುಗಳು, ಮೋದಿಯವರನ್ನು ತೆಗಳುವವರು, ಹಿಂದೂ ಅವಹೇಳನ ದೇಶದ ಯಾವ ಭಾಗದಲ್ಲೇ ನಡೆಯಲಿ ಅದಕ್ಕೆ ತತ್ ತಕ್ಷಣ ಸ್ಪಂದನೆ ಮತ್ತು ಉತ್ತರಗಳನ್ನು ಇವರು ಕೊಡುತ್ತಾರೆ. ಸರಕಾರಿ ಧೋರಣೆಗಳನ್ನು ಆಧಾರಬದ್ಧವಾಗಿ, ಭಾಷೆಯನ್ನು ಹಿಡಿತದಲ್ಲಿಟ್ಟುಕೊಂಡು ಜನ ಜಾಗೃತಿಗೊಳಿಸುವ ಇವರ ಕೆಲಸಕ್ಕೆ ಎಷ್ಟು ಶ್ಲಾಘನೆಗಳು ವ್ಯಕ್ತವಾಗಿದೆಯೋ ಅಷ್ಟೇ ಇವರ ಬಗ್ಗೆ ಟೀಕೆಗಳು, ಬೆದರಿಕೆಗಳೂ ಇವರಿಗೆ ಬಂದಿದೆ. ಸೈನಿಕರ ಅವಹೇಳನವಾದಾಗ, ಪ್ರತ್ಯೇಕತೆಯ ಕೂಗೆಬ್ಬಿಸಿದಾಗ, ಮತಾಂಧತೆ ಕ್ರೌರ್ಯಕ್ಕಿಳಿದಾಗ ಇವರ ಚತುರ ಮತ್ತು ಚಾಟಿಯಂಥಾ ಪೋಸ್ಟ್ ಗಳು ದೇಶಾದ್ಯಂತ ಸಂಚಲನ ಮೂಡಿಸಿವೆ. ಅನ್ಯಾಯಕ್ಕೊಳಗಾದವರಲ್ಲಿ ಕಾನೂನಿನ ಭರವಸೆ ಬತ್ತಿದಾಗ ಇವರು ಅಂಥವರಿಗೆ ಆಸರೆಯಾಗಿದ್ದಾರೆ. ಅಬಲರಿಗೆ ರಕ್ಷಕರಾಗಿದ್ದಾರೆ . ಇಷ್ಟೆಲ್ಲಾ ಮಾಡುವ ಇವರಿಗೂ ಸಂಸಾರವಿದೆ. ಇಬ್ಬರಿಗೂ ಮದುವೆಯಾಗಿದೆ. ವ್ಯಯಕ್ತಿಕ ಬದುಕೆಂಬುದು ಇವರಿಗೂ ಇದೆ. ಆದರೂ ಇವರು ದಿನದ 18 ಗಂಟೆ ಜಾಲತಾಣಗಳಿಗೆ ಮೀಸಲಿಡುತ್ತಾರೆ. ಇವರ ಬಗೆ ಅರಿಯದ ಕೆಲವರು ಇವರಿಬ್ಬರನ್ನೂ ಜಾಲತಾಣ ವ್ಯಸನಿಗರು ಎಂದು ಹಂಗಿಸಿದ್ದೂ ಇದೆ. ಆದರೆ ಇವರದ್ದು ಚಟವಲ್ಲ, ನಿಜವಾದ ಸಮಾಜಮುಖಿ ಅರಿವಿನ ಕೈಂಕರ್ಯ. ಅಂಥ ಒಂದು ಘಟನೆ ಇವರಲ್ಲೂ ನಡೆಯಿತು.

ವಿವೇಕ್ ಶೆಟ್ಟಿ ಆಗಷ್ಟೆ ಮದುವೆಯಾಗಿದ್ದರು. ಪತ್ನಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಎಷ್ಟೆಂದರೆ ತುರ್ತು ನಿಗಾ ಘಟಕದಲ್ಲಿ ದಾಖಲಾಗುವಷ್ಟು. ಆದರೆ ಈ ಮನುಷ್ಯ ಪತ್ನಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಕಂಪ್ಯೂಟರಿನ ಮುಂದೆ ಕುಳಿತು ದುಷ್ಟರನ್ನು ಸದೆಬಡಿಯುವ ಕೆಲಸಕ್ಕಿಳಿದಿದ್ದರು! ಇಂಥವರು ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವವರೇನು? ಮನೋರಂಜನೆ ಇವರ ಗುರಿಯೇನು? ನರೇಂದ್ರ ಮೋದಿಯವರನ್ನು ದಶಕಗಳ ಕಾಲ ದ್ವೇಷಿಸುತ್ತಿದ್ದ ರಾಜ್‍ದೀಪ್, ಬರ್ಖಾರಂಥವರಿಗೆ ಟ್ವೀಟರ್ ಮೂಲಕ ಖಡಕ್ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದವರ ಶ್ರದ್ಧೆಗೆ, ಭಕ್ತಿಗೆ ಏನನ್ನೋಣ? ಇನ್ನು ದೆಹಲಿಯ ಆಪ್ ಕಾರ್ಯಕರ್ತರು ಹಬ್ಬಿಸುತ್ತಿದ್ದ ನರೇಂದ್ರ ಮೋದಿಯವರ ಅವಹೇಳನಕಾರಿ ನಕಲಿ ಪೋಟೋಗಳ ವಿರುದ್ಧ ದೇಶದಲ್ಲಿ ಮೊಟ್ಟ ಮೊದಲು ದನಿ ಎತ್ತಿ ಅವು ನಕಲಿ ಎಂದು ಸಾಕ್ಷಿ ಒದಗಿಸಿದ ಕೆಲಸ ಸಣ್ಣದೇನು? ಇವರ ಶಕ್ತಿಗೆ ವಿರೋಧಿಗಳೆಷ್ಟು ಹೆದರಿದ್ದರೆಂದರೆ ಸ್ವತಃ ಅರವಿಂದ್ ಕೇಜ್ರೀವಾಲ್‍ನ ಅಧಿಕೃತ ಫೇಸ್‍ಬುಕ್ ಪೇಜ್ ಇವರಿಬ್ಬರ ಮೇಲೆ ಮರುಕೊಂಡು ಬಿತ್ತು. ಶಶಿ ತರೂರ್ ರಂತವರೇ ತಲೆಕೆಡಿಸಿಕೊಂಡರು. ಇವರ ಪ್ರಶ್ನೆಗಳಿಗೆ ಉತ್ತರಲಾಗದೇ ಅವರೆಲ್ಲಾ ಅದೆಷ್ಟು ಹತಾಶರಾಗಿರಬೇಕು? ರಾಜಸಭೆಯಲ್ಲೂ ಇವರನ್ನು ಸುಳ್ಳು ಸುದ್ಧಿ ಹಬ್ಬಿಸುವವರು ಎನ್ನಬೇಕಿದ್ದರೆ ವಿರೋಧಿಗಳು ಎಷ್ಟು ಅಲ್ಲಾಡಿಹೋಗಿರಬೇಕು? ಸಾಮಾಜಿಕ ಜಾಲತಾಣಗಳಲ್ಲಿ ಸಿದ್ಧಾಂತಗಳನ್ನು ಪ್ರತಿಪಾದಿಸುವವರಿಗೆಲ್ಲ, ಕೀ ಬೋರ್ಡ್ ವಾರಿಯರ್ಸ್ ಎಂದು ಅಣಕಿಸುತ್ತಾರಾದರೂ, ಇವರಿಬ್ಬರ ಸಿದ್ಧಾಂತದ ನಡೆಗೆ ಯಾವ ಅಣಕವೂ ಎದುರು ನಿಲ್ಲಲಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲೂ ಯಾವ ಬಗೆಯಲ್ಲಿ ಕ್ರಾಂತಿ ಮೂಡಿಸಬಹುದೆಂಬ ಅರಿವು ಮಾಡಿಕೊಟ್ಟವರು.

ಇವರಿಬ್ಬರ ವಿಷಯದ ಪ್ರಸ್ತಾಪ ಇವತ್ತು ಮಾಡುತ್ತಿರುವುದಕೆ ಕಾರಣ ‘ಭಿಕ್ಷಾಂದೇಹಿ’ ಎಂಬ ರಾಷ್ಟ್ರ ಮಟ್ಟದ ಆಂದೋಲನ.
ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಎಲ್ಲಾ ರಾಜಕೀಯ ನಾಯಕರುಗಳು ಅವರ ಮನೆಗೆ ಅಲೆದರೇ ಹೊರತು ಮನೆಯ ವಸ್ತುಸ್ಥಿತಿ ಅರಿತು ಕಿಂಚಿತ್ತೂ ಸಹಾಯ ಹಸ್ತ ಚಾಚಲಿಲ್ಲ. ಆದರೆ ಅಂದೇ ರಾತ್ರಿ ಮಹೇಶ್ ವಿಕ್ರಮ್ ಹೆಗ್ಡೆ ಪ್ರಶಾಂತ್ ಪೂಜಾರಿ ಮನೆಗೆ ಭೇಟಿ ಕೊಟ್ಟು ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡರು. ಮರುದಿನವೇ ಅಭಿಯಾನ ಪ್ರಾರಂಭಿಸಿದರು. ಪ್ರಶಾಂತ್ ಹತ್ಯೆಯಾದ ಹದಿನೈದು ದಿನಗಳ ಅಭಿಯಾನದ ತರುವಾಯ ಇವರ ಬಳಿ ಬಂದು ಸೇರಿದ್ದು 850 ಕ್ಕೂ ಹೆಚ್ಚು ಬ್ಯಾಕ್ ಜಮಾ ರಶೀದಿಯ ಪ್ರತಿಗಳು ಹಾಗೂ 16 ಲಕ್ಷ ರೂಪಾಯಿಯ ಮೊತ್ತ! ಕೇರಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನ ಹತ್ಯೆಯಾದಾಗ ಮಾಧ್ಯಮದೆದುರು ಅವರ ಮಗಳು ತನ್ನ ಉನ್ನತ ವಿದ್ಯಾಭ್ಯಾಸದ ಕನಸು ನುಚ್ಚುನೂರಾಯಿತೆಂದು ಅತ್ತಾಗ ಮತ್ತದೇ ಮಹೇಶ್ ವಿಕ್ರಮ್ ಹೆಗ್ಡೆ ಎರಡು ದಿನಗಳ ಆಂದೋಲನ ಮಾಡಿ ಆಕೆಗೆ ಆರು ಲಕ್ಷದ ಮೂವತ್ತು ಸಾವಿರ ಮೊತ್ತವನ್ನು ನೀಡಿದ್ದರು. ಈಗ ಕರ್ನಾಟಕ ಸರಕಾರ ಕಲ್ಕಡ್ಕ ಪ್ರಭಾಕರ್ ಭಟ್ಟರ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ, ಭಟ್ಟರ ಮುಂದಾಳತ್ವದಲ್ಲಿ ನಡೆಯುತ್ತಿರುವ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿಯಿಂದ ಬರುತ್ತಿದ್ದ ಬಿಸಿಯೂಟದ ಅನುದಾನವನ್ನು ಕಡಿತಗೊಳಿಸಿದ್ದರು. ಬಡ ಮಕ್ಕಳು ಅತಂತ್ರರಾದರು. ಆಗ ಯಾವ ನಾಯಕನೂ, ಸ್ವಘೋಷಿತ ಹಿಂದೂ ರಕ್ಷಕನೂ ಬಡ ಮಕ್ಕಳ ತುತ್ತಿಗೆ ಬಿಡಿಗಾಸನ್ನೂ ಕೊಟ್ಟಿರಲಿಲ್ಲ. ಪುನಃ ಆಗ ಮಕ್ಕಳ ಪಾಲಿಗೆ ದೇವರಂತೆ ಬಂದವರು ಇದೇ ಮಹೇಶ್ ಹೆಗ್ಡೆ ಹಾಗೂ ವಿವೇಕ್ ಶೆಟ್ಟಿ. ಅದರ ಫಲವೇ ಭೀಕ್ಷಾಂದೇಹಿಯೆಂಬ ರಾಷ್ಟ್ರ ಮಟ್ಟದ ಆಂದೋಲನ. ಇವರಿಬ್ಬರು ಆಗಸ್ಟ್ 11ರಿಂದ ಬಿಕ್ಷಾಟನೆ ಆರಂಭಿಸಿಯೇ ಬಿಟ್ಟರು. ಒಂದೇ ದಿನದಲ್ಲಿ ಈ ಅಭಿಯಾನ ದೇಶಾದ್ಯಂತ ಟ್ವಿಟ್ಟರ್‍ನಲ್ಲಿ ನಂ.1 ಪ್ರಚಲಿತ ಸುದ್ದಿಯಾಗಿದ್ದಲ್ಲದೇ ಕರ್ನಾಟಕ ಸರಕಾರದ ಅನ್ಯಾಯದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಆಕ್ರೋಶ ಹುಟ್ಟುವಂತೆ ಮಾಡಿದರು.

ಈ ಅಭಿಯಾನ ಹುಟ್ಟಿಸಿದ ಸಂಚಲನದ ತೀವ್ರತೆಯೆಷ್ಟಿತ್ತೆಂದರೆ 72 ರ ಇಳಿ ವಯಸ್ಸಿನ ಅಜ್ಜಿ ಮಕ್ಕಳಿಗಾಗಿ ಮರುಗಿ 1 ಕೆಜಿ ಅಕ್ಕಿ ಹಾಗೂ 1 ರೂಗಳ 72 ನಾಣ್ಯಗಳನ್ನು ನೀಡಿದರು. ಇದು ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆದದ್ದು ಕಂಡ ಕರ್ನಾಟಕ ಸರಕಾರದ ಮಾಜಿ ಮಂತ್ರಿಗಳಾಗಿದ್ದ ಸಿ.ಟಿ.ರವಿಯವರು ಒಂದು ಲಕ್ಷ ರೂಪಾಯಿಗಳನ್ನು ನೀಡಿದರು. ಅಭಿಯಾನ ಆರಂಭ ವಾದ 4 – 5 ದಿನಗಳಲ್ಲಿಯೇ ಆರು ಲಕ್ಷ ಹಣ ಮತ್ತು 2000 ಕೆಜಿ ಅಕ್ಕಿಸಂಗ್ರಹವಾಯಿತು. ಒಂಬತ್ತನೇ ದಿನಕ್ಕೆ 11 ಲಕ್ಷದ 50 ಸಾವಿರ ರೂ ಹಣ ಸಂಗ್ರಹವಾಯಿತು. ಮಾಜಿ ಸಚಿವ ಜನಾರ್ಧನ್ ರೆಡ್ಡಿ ಇದರಿಂದ ಪ್ರೇರಿತರಾಗಿ ಕಲ್ಲಡ್ಕ ಶಾಲೆಗೆ ಇವರಿಬ್ಬರ ಜೊತೆ ಭೇಟಿ ನೀಡಿ 26 ಲಕ್ಷ ಹಣವನ್ನು ಮಕ್ಕಳ ಅನ್ನಕ್ಕಾಗಿ ನೀಡಿದರು. ಹನ್ನೆರಡನೆ ದಿನಕ್ಕೆ ಅಭಿಯಾನದಿಂದ ದಿವಸದ ನಂತರ ಒಟ್ಟು ಸಂಗ್ರಹವಾದ ಮೊತ್ತ 39,90,000 ರೂಪಾಯಿಗಳು ಹಾಗೂ 5,200 ಕೆಜಿ ಅಕ್ಕಿ.

ಇದು ಸಾಮಾಜಿಕ ಜಾಲತಾಣಗಳಲ್ಲಾದ ರಾಷ್ಟ್ರದ ಅತಿ ದೊಡ್ಡ ಮಟ್ಡದ ಯಶಸ್ವೀ ಅಭಿಯಾನ.

ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಸಮಾಜ ಸೇವೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಇವರಿಬ್ಬರು ಯಾವುದೋ ರಾಜಮನೆತನದವರಲ್ಲ, ಉದಮಿಗಳ ಮಕ್ಕಳಲ್ಲ, ರಾಜಕೀಯ ಹಿನ್ನೆಲೆ ಇರುವವರಲ್ಲ. ಇಬ್ಬರೂ ಸಾಮಾನ್ಯ ಕುಟುಂಬದವರು. ಇವರಲ್ಲಿರುವ ತಾಕತ್ತು ಒಂದೇ ಸಿದ್ಧಾಂತ ನಿಷ್ಠೆ ಮತ್ತು ದೇಶ ಪ್ರೇಮ. ಇಂಥವರ ಹೊಟ್ಟೆಯೂ ತಣ್ಣಗಿರಲಿ. ಇಂಥವರ ಸಂಖ್ಯೆ ಹೆಚ್ಚಾಗಲಿ.
ಹ್ಯಾಟ್ಸಾಪ್ ಮಹೇಶ್ ಅಂಡ್ ವಿವೇಕ್

Comments are closed.