Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕನ್ನಡ ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಆಚರಿಸುವುದೂ ಒಂದೇ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಆಚರಿಸುವುದೂ ಒಂದೇ!

ಕನ್ನಡ ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಆಚರಿಸುವುದೂ ಒಂದೇ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಆಚರಿಸುವುದೂ ಒಂದೇ!

ಕನ್ನಡ ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಆಚರಿಸುವುದೂ ಒಂದೇ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಆಚರಿಸುವುದೂ ಒಂದೇ!

=================
2006, ಸೆಪ್ಟಂಬರ್.
ಶಿಕ್ಷಣ ಬಚಾವೋ- ಶಿಕ್ಷಣವನ್ನು ರಕ್ಷಿಸಿ ಎಂಬ ಶೀರ್ಷಿಕೆ ಹೊಂದಿದ ವಿಚಾರ ಸಂಕಿರಣವೊಂದು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ಅದನ್ನು ಉದ್ಘಾಟನೆ ಮಾಡಿದ ಆಗಿನ ಉನ್ನತ ಶಿಕ್ಷಣ ಖಾತೆ ಸಚಿವ ಡಿ.ಎಚ್. ಶಂಕರಮೂರ್ತಿಯವರು, ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ದ್ರೋಹಿ, ಮೈಸೂರು ಸಂಸ್ಥಾನದಲ್ಲಿ ರಾಜಭಾಷೆಯಾಗಿದ್ದ ಕನ್ನಡವನ್ನು ಕಡೆಗಣಿಸಿ ಪರ್ಷಿಯನ್ ಅನ್ನು ಆಡಳಿತ ಭಾಷೆಯಾಗಿ ಹೇರಿದ ಟಿಪ್ಪು ಕನ್ನಡ ವಿರೋಧಿ. ಆತನಿಗೆ ಕರ್ನಾಟಕ ಇತಿಹಾಸದಲ್ಲಿ ಯಾವುದೇ ಸ್ಥಾನಮಾನ ನೀಡುವ ಅಗತ್ಯವಿಲ್ಲ. ಆತನನ್ನು ವಿಜೃಂಭಿಸುವುದು ತಪ್ಪು. ರಾಷ್ಟ್ರದ ಇತಿಹಾಸ ದಲ್ಲಿ ಟಿಪ್ಪು ಸುಲ್ತಾನ, ಅಕ್ಬರ್, ಔರಂಗಜೇಬ್ ಮುಂತಾದವರನ್ನು ದೇಶಭಕ್ತನೆಂದು ಬಿಂಬಿಸಲಾಗುತ್ತಿದೆ. ಅಲೆಕ್ಸಾಂಡರ್, ಅಕ್ಬರನನ್ನು ದಿ ಗ್ರೇಟ್ ಎಂದು ಸಂಬೋಧಿಸಲಾಗುತ್ತಿದೆ. ದೇಶದ ಮೇಲೆ ದಂಡೆತ್ತಿ ಬಂದವರಿಗೆ, ನಮ್ಮವರನ್ನು ಸೋಲಿಸಿದವರಿಗೆ ಗೌರವ ಮರ್ಯಾದೆ ಕೊಡಲಾಗುತ್ತಿದೆ. ಇದಕ್ಕೆ ಬದಲು ದೇಶಕ್ಕೆ ಒಳ್ಳೆಯದು ಮಾಡಿದವರ ಬಗೆಗೆ ಪಠ್ಯ ಇರಬೇಕು. ನಾಡಿನ ಅಭಿವೃದ್ಧಿಗೆ ಕಾರಣರಾದ ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಮೈಸೂರಿನ ಮಹಾರಾಜ ಕೃಷ್ಣದೇವರಾಜರ ಸಾಧನೆಯನ್ನು ಸಾರುವ ಪಠ್ಯಗಳು, ಇತಿಹಾಸ ಪಠ್ಯಗಳು ಇತಿಹಾಸ ವಿಷಯದಲ್ಲಿರಬೇಕು. ಈಗ ಆಗುತ್ತಿರುವುದು ಚರಿತ್ರೆಯ ವಿಕೃತಿ ಎಂದುಬಿಟ್ಟರು.

ಅಷ್ಟು ಸಾಕಾಯಿತು ನೋಡಿ…ಎಂದಿನಂತೆ ತಥಾಕಥಿತ ವಿರೋಧಿಗಳು, ಟಿಪ್ಪುವನ್ನು ಆರಾಧಿಸುವ ಧರ್ಮಾಂಧ ಮನಸ್ಸು ಗಳು, ಟಿಪ್ಪುವಿಗೆ ಆರಾಧ್ಯ ಗುಣಗಳನ್ನು ಸಮರ್ಪಿಸಿ ಬಾಯಿಚಪ್ಪರಿ ಸುವ ಸಾಹಿತ್ಯ ಲೋಕದ ಸಣ್ಣಮನಸ್ಸುಗಳು, ಅದರಲ್ಲೂ ಟಿಪ್ಪುವನ್ನು ಗುತ್ತಿಗೆ ತೆಗೆದುಕೊಂಡಿರುವ ಜ್ಞಾನಪೀಠಿಗಳೆಲ್ಲರೂ ದಂಗೆಯೇಳಲು ಸಿದ್ಧರಾದರು. ಅಷ್ಟರಲ್ಲಿ ಶಂಕರಮೂರ್ತಿಯವರು ತಮ್ಮ ಹೇಳಿಕೆ ಯನ್ನು ಸಮರ್ಥಿಸಿಕೊಂಡು, ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದರು. ಅದರ ಬೆನ್ನಲ್ಲೇ    21-9-2006 ರಂದು ಕೆ. ಮರುಳಸಿದ್ಧಪ್ಪ, ಪ್ರೊ . ಬಿ.ಕೆ ಚಂದ್ರಶೇಖರ್ ಜತೆಗೂಡಿ ಪತ್ರಿಕಾಗೋಷ್ಠಿಯೊಂದನ್ನು ಕರೆದ ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡರು ಟಿಪ್ಪು ಕುರಿತು ನಾಟಕ ಬರೆದಿರುವ ನಾನು ಶಂಕರಮೂರ್ತಿಯವರೊಡನೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದರು.
ಆದರೆ ಚರ್ಚೆ ನಡೆಯುವ ಯಾವ ಲಕ್ಷಣಗಳೂ ಕಾಣಲಿಲ್ಲ!

ವಿಚಾರ ನಪುಂಸಕರಾದ ಈ ಬುದ್ಧಿಜೀವಿಗಳು ಒಂಥರಾ ಮೈಕ್ ಇದ್ದ ಹಾಗೆ. ಬರೀ ಬೊಬ್ಬೆ ಹಾಕುವುದು. ಅನ್ಯರನ್ನು ಏಕಮುಖವಾಗಿ ಜರಿಯುವುದು ಇವರಿಗೆ ಗೊತ್ತೇ ಹೊರತು ಮೈಕ್‍ನಂತೆಯೇ ಕೇಳಿಸಿಕೊಳ್ಳುವುದು ಗೊತ್ತಿಲ್ಲ! ಇವರ ಜಾಯಮಾನವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ… ಒಂದೇ ಬುದ್ಧಿಯವರು ಒಂದೆಡೆ ಸೇರಿ ಒಕ್ಕೊರಲಿನಿಂದ ಬೊಬ್ಬೆ ಹಾಕಿ ಪತ್ರಿಕೆಗಳಲ್ಲಿ ಸುದ್ದಿ ಮಾಡುತ್ತಾರೆಯೇ ಹೊರತು, ಪರಸ್ಪರ ಚರ್ಚೆಗೆ, ಬಹಿರಂಗ ತರ್ಕಕ್ಕೆ ಬಂದಿದ್ದನ್ನು ಎಂದಾದರೂ ನೋಡಿದ್ದೀರಾ? 2006ರಲ್ಲೂ ಹಾಗೇ ಆಗುವ ಲಕ್ಷಣಗಳು ಗೋಚರಿಸಿದ್ದವು. ಇದನ್ನು ಗಮನಿಸಿದ ಅಂದಿನ ನಾಡಿನ ನಂಬರ್ 1 ಪತ್ರಿಕೆಯ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರು ಟಿಪ್ಪುವಿನ ಬಗ್ಗೆ ಸತ್ಯಾಸತ್ಯಗಳೇನೆಂದು ಜನರಿಗೆ ತಿಳಿಯಲಿ, ಸತ್ಯದ ಅನಾವರಣವಾಗಲಿ ಎಂದು ಪತ್ರಿಕೆಯ ಮೂಲಕ ಸಾರ್ವಜನಿಕ ಚರ್ಚೆಗೆ ಆಹ್ವಾನ ಕೊಟ್ಟರು. ಪತ್ರಿಕೆಯಲ್ಲೇ  ವೇದಿಕೆ ಕಲ್ಪಿಸಿಕೊಡಲು ಮುಂದಾದರು. ಇದಕ್ಕೆ ಸ್ಪಂದಿಸಿದ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಎಸ್.ಎಲ್. ಭೈರಪ್ಪನವರು 2006ರ ಸೆಪ್ಟಂಬರ್ 24ರಂದು ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆ ಗಟ್ಟಿಗೊಳಿಸುವುದು ಅಸಾಧ್ಯ ಎಂಬ ಶೀರ್ಷಿಕೆಯಡಿ ಟಿಪ್ಪುವಿನ ನಿಜಸ್ವರೂಪವನ್ನು ತೆರೆದಿಟ್ಟರು. ಆ ಲೇಖನದಲ್ಲಿ ಅವರು ಹೇಳಿದ್ದೇನು ಗೊತ್ತೇ?

ವಿದ್ಯಾಮಂತ್ರಿ ಶಂಕರಮೂರ್ತಿಯವರು, ಮೊದಲು ಇದ್ದ ಕನ್ನಡದ ಬದಲಿಗೆ ಪರ್ಷಿಯನ್ ಭಾಷೆಯನ್ನು ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿ ಮಾಡಿಕೊಂಡ ಟಿಪ್ಪು ಸುಲ್ತಾನನು ಒಬ್ಬ ಕನ್ನಡ ವಿರೋಧಿ ಎಂದು ಹೇಳಿರುವುದಕ್ಕೆ ನಿರೀಕ್ಷಿತ ವಲಯದಲ್ಲಿ ನಿರೀಕ್ಷಿತ ಗುಂಪುಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು, ಅವರು ರಾಜೀನಾಮೆ ಕೊಡದಿದ್ದರೆ, ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡದಿದ್ದರೆ, ಉಗ್ರ ಹೋರಾಟ ಪ್ರಾರಂಭಿಸುವು ದಾಗಿ ಎಚ್ಚರಿಕೆ ಕೊಡುತ್ತಿರುವುದು ಕರ್ನಾಟಕ ರಾಜಕೀಯದ ಸದ್ಯದ ರಂಜಕ ಸುದ್ದಿಯಾಗಿದೆ. ಈ ವಿಷಯದಲ್ಲಿ ತಾವು ಸಾರ್ವಜನಿಕ ಚರ್ಚೆಗೆ ಸಿದ್ಧವಿರುವುದಾಗಿ ಸಚಿವರು ಪುನಃ ಸಮರ್ಥಿಸಿಕೊಂಡಿದ್ದಾರೆ. ಇತ್ತ ಅದಕ್ಕಾಗಿಯೇ ತಮ್ಮ ಸಂಗಡಿಗರಾದ ಕೆ. ಮರುಳ ಸಿದ್ದಪ್ಪ, ಕಾಂಗ್ರೆಸಿನ ಮಾಜಿ ಪ್ರಾಥಮಿಕ ವಿದ್ಯಾಮಂತ್ರಿ ಪ್ರೋ  ಬಿ.ಕೆ. ಚಂದ್ರಶೇಖರ್ ಸಂಗಡ ಒಂದು ಪತ್ರಿಕಾಗೋಷ್ಠಿಯನ್ನು ಕರೆದ ನಟ, ನಿರ್ದೇಶಕ, ನಾಟಕಕಾರ ಗಿರೀಶ್ ಕಾರ್ನಾಡರು ಟಿಪ್ಪು ಕುರಿತು ನಾಟಕ ಬರೆದಿರುವ ತಾವು ಶಂಕರಮೂರ್ತಿ ಅವರೊಡನೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಅದನ್ನು ನಾನು ಮೆಚ್ಚುತ್ತೇನೆ. ಆದರೆ ಅವರು ಮತ್ತು ಅವರ ಸಂಗಡಿಗರು ಶಂಕರಮೂರ್ತಿಗಳ ಮಾತು ಅಪಾಯಕಾರಿ, ರಾಷ್ಟ್ರಘಾತುಕ ಎಂಬ ತೀರ್ಪನ್ನೂ ನೀಡಿಬಿಟ್ಟಿದ್ದಾರೆ. ಈ ಚರ್ಚೆಯ ರಾಜಕೀಯ ಒಳಸುಳಿಗ ಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶವಲ್ಲ. ಕಾರ್ನಾಡ ರನ್ನು ಒಬ್ಬ ಸಾಹಿತಿ, ಕಲಾವಿದ ಎಂದು ಮಾತ್ರ ಭಾವಿಸಿ, ನಾನು ಕೆಳಗಿನ ನಾಲ್ಕು ಮಾತುಗಳನ್ನು ಹೇಳಲಿಚ್ಛಿಸುತ್ತೇನೆ.
ಅವರ ತುಘಲಕ್ ನಾಟಕವು ಪ್ರಕಟವಾದ ಹೊಸತರಲ್ಲಿಯೇ ನಾನು ಓದಿದೆ. ಅದರ ರಚನಾಕೌಶಲ್ಯ ಚೆನ್ನಾಗಿದೆ. ಹಾಸ್ಯ ಗಂಭೀರಗಳ ಮಿಶ್ರಣ ಪರಿಣಾಮಕಾರಿಯಾಗಿದೆ. ನಿರ್ದೇಶನಕ್ಕೆ ತುಂಬ ಅವಕಾಶವಿದೆ. ಆಗ ಯುರೋಪಿನಲ್ಲಿ ಪ್ರಭಾವಶಾಲಿ ಲೇಖಕನಾಗಿದ್ದ ಎಕ್ಸಿಸ್ಟೆಂಶಿಯಲಿಸ್ಟ್ ಕಾಮೂನ ಕಾಲಿಗುಲ ನಾಟಕದ ಮಾದರಿಯಲ್ಲಿ ಅದರ ಪ್ರಭಾವದಿಂದ ರಚಿತವಾಗಿದೆ. ನಾನು ತಿಳಿದ ಐತಿಹಾಸಿಕ ಮಹಮ್ಮದ್ ಬಿನ್ ತುಘಲಕ್‍ನ ಪಾತ್ರಕ್ಕಿಂತ ಇಲ್ಲಿ ಅವನನ್ನು ಆದರ್ಷೀಕರಿಸಿದ್ದಾರೆ ಎಂಬುದು ನನ್ನ ಭಾವನೆಯಾಗಿದೆ. ಈ ಕುರಿತು ಹೆಚ್ಚು ಸಂಶೋಧನೆ ಮಾಡುವ ಆಸಕ್ತಿಯಾಗಲಿ ವ್ಯವಧಾನವಾಗಲಿ ನನಗೆ ಇರಲಿಲ್ಲ.
ಅನಂತರ, ಸುಮಾರು ನಲ್ವತ್ತು ವರ್ಷಗಳ ಮೇಲೆ, ಅವರ ಟಿಪ್ಪು ಸುಲ್ತಾನ ಕಂಡ ಕನಸು ಎಂಬ ನಾಟಕವನ್ನು ಓದಿದೆ. ನಾನು ತಿಳಿದಮಟ್ಟಿಗೆ ಅವರು ಸಂಪೂರ್ಣವಾಗಿ ಬಿಳಿ ಬಣ್ಣ ಬಳಿದು ಅವನನ್ನೊಬ್ಬ ಧೀರೋದಾತ್ತ ದುರಂತ ನಾಯಕನನ್ನಾಗಿ ಮಾಡಿದ್ದಾರೆ ಎನಿಸಿತು. ಏಕೆಂದರೆ ಹಳೆ ಮೈಸೂರಿನವನಾದ ನನಗೆ ಟಿಪ್ಪುವಿನ ವಿಷಯ ಸಹಜವಾಗಿಯೇ ಹೆಚ್ಚು ವಿವರವಾಗಿ ತಿಳಿದಿತ್ತು.

ಭೈರಪ್ಪನವರ ತರ್ಕದಲ್ಲಿ ಬಲವಿತ್ತು. ಏಕೆಂದರೆ ಹಳೆ ಮೈಸೂರಿನ ವಾತಾವರಣವನ್ನು ಬಾಲ್ಯದಿಂದಲೇ ಕಂಡಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಹಳೆ ಮೈಸೂರಿನ ಸಂತೆ ಜಾತ್ರೆಗಳಲ್ಲಿ ಮಾರುಕಟ್ಟೆಯ ಮೂಲೆಗಳಲ್ಲಿ ಇತಿಹಾಸದ ಅಧ್ಯಯನವಿಲ್ಲದ, ಅರೆ ಓದು ಬರಹ ಬಲ್ಲ ಲಾವಣಿಕಾರರು ಟಿಪ್ಪುವನ್ನು ವೈಭವೀಕರಿಸಿ ಬರೆದ ಲಾವಣಿಗಳನ್ನು ದಮಡಿ ಭಾರಿಸಿಕೊಂಡು ಹಾಡುತ್ತಿದ್ದರು. ಮುಸಲ್ಮಾನರು ಅದರಲ್ಲೂ ಮುಸಲ್ಮಾನ ವ್ಯಾಪಾರಿಗಳು ಈ ಲಾವಣಿಕಾರರಿಗೆ ಹಣ ಕೊಟ್ಟು  ಪ್ರೋತ್ಸಾಹಿಸಿದರು  . ಹಾಗೆಯೇ ಟಿಪ್ಪುವನ್ನು ವೈಭವೀಕರಿಸಿ ನಾಟಕಗಳು, ಬ್ರಿಟಿಷರ ವಿರುದ್ಧ ಚಳವಳಿ ಮಾಡುತ್ತಿದ್ದಾಗ ಅವರ ವಿರುದ್ಧ ಹೋರಾಡಿದನೆಂಬ ಏಕೈಕ ಕಾರಣದಿಂದ ಆತನನ್ನು ಭಾರತ ದೇಶದ ಭಕ್ತನೆಂದು ಚಿತ್ರಿಸಿ ನಾಟಕ ಬರೆದರು. ಪ್ರೇಕ್ಷಕರು ಆ ಚಿತ್ರವನ್ನೆಲ್ಲಾ ನಿಜವಾದ ಇತಿಹಾಸವೆಂದು ನಂಬಿದರು. ಸ್ವಾತಂತ್ರ್ಯಾನಂತರವಂತೂ ಮಾರ್ಕಿಸ್ಟರು, ಓಟು ಬ್ಯಾಂಕಿನವರೂ, ನಿಷ್ಠ ಮುಸ್ಲಿಂ ಕಲಾವಿದರೂ, ನಾಟಕಕಾರರು, ಚಲನಚಿತ್ರ ತಯಾರಕರು ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಬಿಂಬಿಸಿದರು. ನಿಜವಾದ ಇತಿಹಾಸ ಸತ್ತೇಹೋಯಿತು. ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಪ್ರಸಂಗವನ್ನು ಎತ್ತಿಕೊಂಡು ಬ್ರಿಟಿಷರು ಎಂಥ ಕಟುಕರೆಂದು ಚಿತ್ರಿಸಿದರು. ಮೇಲೆ ಹೇಳಿದ ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಚಿತ್ರಿಸುವ ಸಂಪ್ರದಾಯಕ್ಕೆ ಬದ್ಧರಾದ ಗಿರೀಶ್ ಕಾರ್ನಾಡರೂ ಈ ಪ್ರಸಂಗವನ್ನು ಎತ್ತಿಕೊಂಡು ಟಿಪ್ಪುವಿನ ಬಾಯಲ್ಲಿ ನಮ್ಮ ನಾಡಿನಲ್ಲೊಂದು ಹೊಸ ಭಾಷೆ ಬಂದಿದೆ. ಹೊಸ ಸಂಸ್ಕೃತಿ ಬಂದಿದೆ. ಅಂಗ್ರೇ ಜಿ! ಏಳು ವರ್ಷದ ಕಂದಮ್ಮಗ ಳನ್ನು ಯುದ್ಧ ಕೈದಿಯಾಗಿ ಬಳಸಬಲ್ಲ ಸಂಸ್ಕೃತಿ ಎಂಬ ಸಮಾಜಶಾ ಸ್ತ್ರದ ದಾರ್ಶನಿಕ ಮಾತನ್ನು ಹಾಕುತ್ತಾರೆ ಎಂದು ಚಾಟಿ ಬೀಸಿದ್ದರು.

ಆದರೆ ಯುದ್ಧಬಂಧಿಗಳನ್ನು ತೆಗೆದುಕೊಳ್ಳುವುದು ಭಾರತವನ್ನಾಳಿದ ಮುಸ್ಲಿಂ ದೊರೆಗಳ ಸಂಪ್ರದಾಯವೇ ಆಗಿತ್ತು. ಅದನ್ನು ಬ್ರಿಟಿಷರು ಇಲ್ಲಿ ಅನುಸರಿಸಿದರು ಎಂಬ ಸತ್ಯ ಕಾರ್ನಾಡರಿಗೆ ತಿಳಿದಿಲ್ಲ. ಅಥವಾ ತಿಳಿದಿದ್ದರೂ ಮರೆಮಾಚಿದ್ದರು. ಔರಂಗಜೇಬನ ಸೇನಾಪತಿ ಮೀರ್ ಜುಮ್ಲಾನು ಅಸ್ಸಮಿನ ರಾಜನನ್ನು ಸೋಲಿಸಿದಾಗ ಅವನಲ್ಲಿದ್ದ ಚಿನ್ನ, ಬೆಳ್ಳಿ, ನಗದನ್ನೆಲ್ಲಾ ದೋಚಿ, ಬಲವಂತವಾಗಿ ಕೇಳಿದ ಇನ್ನಷ್ಟು ನಗದನ್ನು ಒಪ್ಪಿಸುವವರೆಗೆ ರಾಜನ ಮಗಳು ಮತ್ತು ಗಂಡು ಮಕ್ಕಳು; ಬುರ್ಹಾ ಗೋಹೆನ್, ಬಾರ ಗೋಹೆನ್, ಘಡ ದೂನಿಯಾಪುಖಾನ್ ಮತ್ತು ಬಡಾ ಪಕ್ರಾಖಾನ್ ಎಂಬ ನಾಲ್ವರು ಸಾಮಂತರ ಮಕ್ಕಳನ್ನು ಯುದ್ಧ ಬಂಧಿಗಳಾಗಿರುವಂತೆ ಬಲಾತ್ಕರಿಸಿ ಕೊಂಡೊಯ್ದನೆಂದು ಔರಂಗಜೇಬನ ಅಧಿಕೃತ ಇತಿಹಸದಲ್ಲೇ ಬರೆದಿದೆ. (ಮಾಸಿರ್-ಇ-ಆಲಂಗೀರಿ, ಮುಸ್ತಾದ್ ಖಾನ್ ಐದನೆಯ ವರ್ಷ, 5ನೇ ಜಮಾದ್, ಅಲ್ ಹಿಜಿರಾ 1072, 5 ಜನವರಿ 1663) ಮೊಘಲರ ಕಾಲದಲ್ಲಿ ರಜಪೂತ ರಾಜರುಗಳು ತಮ್ಮ ಒಬ್ಬನಾದರೂ ಮಗನನ್ನು ಬಾದಶಾಹರಿಗೆ ಕೊಟ್ಟು ಮದುವೆ ಮಾಡಬೇಕಾದದ್ದು ಕೂಡಾ ವಸ್ತುತಃ ಯುದ್ಧ ಬಂಧಿಯಾಗಿಯೇ, ಮಹಾರಾಣಾ ಪ್ರತಾಪನು ಒಪ್ಪಲಿಲ್ಲ. ಮುಂದೆ ಶಹಜಹಾನನೆಂದು ನಾಮಕರಣಗೊಂಡ ಖುರ್ರಮನ ಒಬ್ಬರು ಮಕ್ಕಳು ಎಂದರೆ ತನ್ನ ಮೊಮ್ಮಕ್ಕಳು, ದಾದಾ ಮತ್ತು ಔರಂಗಜೇಬರುಗಳನ್ನು ಯುದ್ಧ ಖೈದಿಗಳನ್ನಾಗಿ ತೆಗೆದುಕೊಂಡಿದ್ದ. ಬ್ರಿಟಿಷನಾದ ಕಾರ್ನ್‍ವಾಲಿಸನು ಟಿಪ್ಪುವಿನ ಇಬ್ಬರು ಮಕ್ಕಳನ್ನು ನೋಡಿಕೊಂಡಷ್ಟು ಮುಚ್ಚಟೆಯಿಂದ, ಮುಸ್ಲಿಂ ದೊರೆಗಳು ತಮ್ಮ ಯುದ್ಧಬಂಧಿಗಳನ್ನು ಎಂದೂ ನೋಡಿಕೊಳ್ಳುತ್ತಿರಲಿಲ್ಲ. ಯುದ್ಧ ಬಂಧಿಗಳು ಅನ್ಯ ಧರ್ಮೀಯರಾದರೆ ಅವರನ್ನು ಧರ್ಮಾಂತರಿಸದೆ ಬಿಡುತ್ತಿರಲಿಲ್ಲ.
ಟಿಪ್ಪುವು ಮಕ್ಕಳನ್ನು ಯುದ್ಧಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡಿದ್ದ. ಸದ್ಯದಲ್ಲಿ ಕೈಯಲ್ಲಿ ಹಣವಿರಲಿಲ್ಲ. ಹೊಂದಿಸಿಕೊಡುವ ತನಕ ಒತ್ತೆ ಇಡಲು ಬೇರೇನೂ ಇರಲಿಲ್ಲ. ಅವನ ಬರಿ ಮಾತನ್ನು, ಆಣೆ ಪ್ರಮಾಣಗಳನ್ನು ಬ್ರಿಟಿಷರು ನಂಬಿ ಹೋಗಬಹುದಿತ್ತೇ? ಮಕ್ಕಳನ್ನು ಒಯ್ಯುವುದು ಬ್ರಿಟಿಷರ ಉದ್ದೇಶವಾಗಿರಲಿಲ್ಲ. ಒತ್ತೆ ಇಡಲು ಟಿಪ್ಪುವಿನ ಬಳಿ ಬೇರೇನೂ ಇರಲಿಲ್ಲ. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು.

ಟಿಪ್ಪು ಕನ್ನಡದ ಕುವರನೆಂದು ಕೆಲವು ರಾಜಕಾರಣಿಗಳು ಭಾಷಣ ಮಾಡುವುದು ಹೊಸತಲ್ಲ. ಆದರೆ ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಪರ್ಷಿಯನ್ ಭಾಷೆಯನ್ನು ತಂದ. ಹಳೆ ಮೈಸೂರಿನ ಕಂದಾಯ ಇಲಾಖೆಗೆ ಸೇರಿದ ಶ್ಯಾನುಭೋಗರ ಮನೆತನದ ನನಗೆ ಆಗಿನ ಕಂದಾಯಗಳ ಲೆಕ್ಕಗಳ ಪರಿಚಯವಿದೆ. ಖಾತೆ, ಖಿರ್ದಿ, ಪಹಣಿ, ಖನೀಸುಮಾರಿ, ಗುರ್ದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮಲ್ದಾರ, ಶಿರಸ್ತೇದಾರ ಹೀಗೆ ಆಡಳಿತದ ಪ್ರತಿಯೊಂದು ಶಬ್ದವೂ ಪರ್ಷಿಯನ್ ಆದದ್ದು ಟಿಪ್ಪುವಿನ ಕಾಲದಲ್ಲಿ.
ಹೈದರಾಲಿಯ ಬಳಿಕ ತನ್ನ ಕೈಗೆ ಅಧಿಕಾರವೆಂಬುದು ಬಂದ ದಿನದಿಂದಲೂ ಮತಾಂಧ ಯೋಜನೆಯನ್ನು ಬಹಳ ವ್ಯವಸ್ಥಿತವಾಗಿ ಜಾರಿ ಮಾಡಲು ಟಿಪ್ಪು ಯತ್ನಿಸಿದ. ಇಂಥ ಅಂದಾ ದರ್ಬಾರ್‍ಗೆ ಇರುವ ಸಾಕ್ಷ್ಯ, ಪುರಾವೆಗಳು ಅಸಂಖ್ಯ. ತನ್ನ ಆಡಳಿತದ ಐದನೆಯ ವರ್ಷದಲ್ಲೇ ದಿನ, ತಿಂಗಳು, ವರ್ಷಗಳನ್ನು ಲೆಕ್ಕಾ ಹಾಕುವ ಪದ್ಧತಿಯನ್ನೇ ಬದಲಿಸಿದ. ಹಾಗಂತ ಟಿಪ್ಪುವಿನ ಈ ಕ್ಯಾಲೆಂಡರು ಪಕ್ಕಾ ಇಸ್ಲಾಮಿನ ಕ್ಯಾಲೆಂಡರ್ ಆಗಿರಲಿಲ್ಲ. ಇಸ್ಲಾಂನ ಹಿಜ್ರೀ ಕ್ಯಾಲೆಂಡರಿನ ಬದಲು ಟಿಪ್ಪು ಆವಿಷ್ಕರಿಸಿದ ಹೊಸ ಶಕೆಯು ಪ್ರವಾದಿ ಮಹಮದ್ ಪೈಗಂಬರರು ಜನ್ಮ ತಾಳಿದ ವರ್ಷದಿಂದ ಪ್ರಾರಂಭವಾಗುತ್ತದೆ. ಬಹುಶಃ ಟಿಪ್ಪು ಸುತ್ತ ಇದ್ದ ಇಸ್ಲಾಂ ಪಂಡಿತರು, ಮುಲ್ಲಾಗಳು ಈ ವಿಚಿತ್ರ ಐಡಿಯಾವನ್ನು ಟಿಪ್ಪುವಿಗೆ ಕೊಟ್ಟಿರಬೇಕು. ದಿನಗಳಿಗೆ, ತಿಂಗಳುಗಳಿಗೆ, ವರ್ಷಗಳಿಗೆ ಅರೆಬಿಕ್ ಹೆಸರು ನೀಡಿದ ಟಿಪ್ಪು ವರ್ಷಗಳ ಸಂಖ್ಯೆಯನ್ನು ಬಲಗಡೆಯಿಂದ ಎಡಗಡೆಗೆ ಓದುವ ಪದ್ಧತಿಯನ್ನು ಚಾಲ್ತಿಗೆ ತಂದ. ಇನ್ನು ತನ್ನದೇ ಆದ ನಾಣ್ಯಗಳನ್ನು ಜಾರಿಗೆ ತಂದ. ಇವುಗಳ ಪೈಕಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳಿಗೆಲ್ಲಾ ಮುಸ್ಲಿಂ ಸಂತರ ಹೆಸರಿಟ್ಟ. ತಾಮ್ರದ ನಾಣ್ಯಗಳಿಗೆ ಅರೆಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ನಕ್ಷತ್ರಗಳ ಹೆಸರಿಟ್ಟ. ಆಗಿನ ಕಾಲದಲ್ಲಿ ಚಲಾವಣೆಯಲ್ಲಿದ್ದ ಪಗೋಡ ಎಂಬ ಹೆಸರಿನ ನಾಣ್ಯಗಳಿಗೆ ಅಹ್ಮದಿ ಅಂತ ಹೆಸರಿಟ್ಟ. ಇದು ಪ್ರವಾದಿಯವರ ಅನೇಕ ಹೆಸರುಗಳಲ್ಲಿ ಒಂದು. ಎರಡು ಪಗೋಡಾ ಬೆಲೆ ಇರುವ ನಾಣ್ಯಕ್ಕೆ ಸಾದಿಕ್ ಎಂದು ಹೆಸರಿಟ್ಟ. ಇದು ಮೊದಲ ಖಲೀಫರ ಹೆಸರು. ಒಂದು ಪೈಸೆ ನಾಣ್ಯಕ್ಕೆ ಝೆಹ್ರಾ, ಎರಡು ಪೈಸೆ ನಾಣ್ಯಕ್ಕೆ ಔತ್ಮಾನಿ ಇತ್ಯಾದಿ ಹೆಸರುಗಳನ್ನಿಡುತ್ತಾ ಹೋದ. ಕೆಲವೊಮ್ಮೆ ತಾನೇ ಇಟ್ಟ ಹೆಸರುಗಳನ್ನು ಬದಲಿಸಿ ಹೊಸ ಹೆಸರಿಟ್ಟ. ಫಾರೂಕಿ, ಝಾಫರ್ ಇತ್ಯಾದಿ ಹೆಸರಿನ ನಾಣ್ಯಗಳೂ ಇದ್ದವು. ಹೈದರಿ ಎಂಬ ಹೆಸರಿನ ರುಪಾಯಿ ಇತ್ತು. ಇಮಾಮಿ ಎಂಬ ನಾಣ್ಯವೂ ಇತ್ತು. ಅಬ್ಜುದ್, ಹೌಝ್, ಹಟ್ಟಿ ಮುಂತಾದ ಅಳತೆಯ ಪದ್ಧತಿಗಳು ಟಿಪ್ಪುಗಿಂತ ಬಹಳ ಹಿಂದೆ ಜಾರಿಯಲ್ಲಿತ್ತು. ಟಿಪ್ಪು ಅಧಿಕಾರಕ್ಕೆ ಬಂದ ನಂತರ ಈ ಅಳತೆ ಪದ್ಧತಿಗಳನ್ನು ಬದಲಿಸಿ ಹಳೆ ಜಾಗಗಳಿಗೆ ಹೊಸ ಹೆಸರಿಟ್ಟ. ಈ ಹೆಸರುಗಳೆಲ್ಲವೂ ಇಸ್ಲಾಮಿ ಹೆಸರುಗಳಾಗಿದ್ದವು.

ಹೊಸ ಪ್ರದೇಶಗಳು ತನ್ನ ಕೈವಶವಾದ ಬಳಿಕ ಹಳೆ ಹೆಸರುಗಳನ್ನು ಕಿತ್ತುಹಾಕಿ ಹೊಸ ಹೆಸರುಗಳನ್ನಿಡಲಾರಂಬಿಸಿದ. ತನ್ನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣಕ್ಕೆ ಪಟ್ಟಣ್ ಎಂಬ ಹೆಸರಿಟ್ಟ. ಆತ ಯಾವ ಸ್ಥಳಗಳ ಹೆಸರನ್ನು ಬದಲಾಯಿಸಿದ ಎಂಬುದನ್ನು ನೋಡಿ…

ಮೈಸೂರಿಗೆ ನಜರಾಬಾದ್, ಮಂಗಳೂರಿಗೆ ಜಮಾಲಾಬಾದ್, ಧಾರವಾಡಕ್ಕೆ ಖುರ್ಷಿದ್ ಸವಾದ್, ಹಾಸನಕ್ಕೆ ಖಯೀಮಾಬಾದ್, ಹೊನ್ನಾವರಕ್ಕೆ ಸದ್ದೈ ಹಾಸ್ ಗಢ, ಕುಂದಾಪುರಕ್ಕೆ ನಸ್ತುಲ್ಲಾಬಾದ್, ಬಳ್ಳಾಪುಅರಕ್ಕೆ ಅಝ್ಮತ್ ಶುಕೋ, ಗುರ್ರಂಕೊಂಡಕ್ಕೆ ಜಾಫರಾಬಾದ್, ಗುತ್ತಿಗೆ ಫೈಝ್ಹಿಸ್ಸಾರ್, ಮೊಳಕಾಲ್ಮೂರಿಗೆ ಮಹಮ್ಮಾದಬಾದ್, ಕ್ಯಾಲಿಕಟ್ಟಿಗೆ ಇಸ್ಲಾಮಾಬಾದ್, ದಿಂಡಿಗಲ್ಲಿಗೆ ಕಾಲಿಕಬಾದ್, ಮಡಿಕೇರಿಗೆ ಜಾಫರಾಬಾದ್, ಬಿದನೂರಿಗೆನಗರ್, ಸದಾಶಿವಗಢಕ್ಕೆ ಮಝೀದಾಬಾದ್, ಸತ್ಯಮಂಗಲಕ್ಕೆ ಸಲಾಮಾಬಾದ್, ಪವನಗಢಕ್ಕೆ ಹಫೀಝ್ಹಾಬಾದ್, ದೇವನಹಳ್ಳಿಗೆ ಯೂಸೋಫಾಬಾದ್, ಕ್ರಷ್ಣಗಿರಿಗೆ ಫುಲ್ಕ್-ಉಲ್-ಅಝಂ, ರತ್ನಗಿರಿಗೆ ಮುಸ್ತಫಾಬಾದ್, ಚಕ್ರಗಿರಿಗೆ ಅಸೀಫಾಬಾದ್, ಚಂದ್ರಗಿರಿಗೆ ಶುಕೂರಾಬಾದ್, ನಂದಿಗುರ್ಗಕ್ಕೆ ಗುರ್ದೂಮ್ ಶುಕೋ, ಚಿತ್ರದುರ್ಗಕ್ಕೆ ಫರೋಕ್ ಯಾಬ್ ಹಿಸ್ಸಾರ್, ಮಹಾರಯನದುರ್ಗಕ್ಕೆ ಅಸಬರಾಬಾದ್, ಕವಲೇದುರ್ಗಕ್ಕೆ ಇಸ್ಕೀಝ್ ಘರ್, ಕಬ್ಬಲೇ ದುರ್ಗಕ್ಕೆ ಜಾಪೊರಾಬಾದ್, ದೇವರಾಯನದುರ್ಗಕ್ಕೆ ಬಲ್ಲಾಶುಕೋ, ಬೀರನದುರ್ಗಕ್ಕೆ ಅಝೀಮಾಬಾದ್, ಮೇಕೇರಿ ದುರ್ಗಕ್ಕೆ ಫುಲ್ಲೋಕ್ ಶುಕೋ, ಹೊಳೆಯೂರು ದುರ್ಗಕ್ಕೆ ಯೀಫರಾಬಾದ್, ಶಿರಾಕ್ಕೆ ರುಸ್ತುಮಾಬಾದ್, ಬಸ್ರೂರಿಗೆ ವಝೀರಾಬಾದ್, ಧನಾಯಕಕೋಟೆಗೆ ಹುಸೇನ್ಬಾದ್, ಆಂಡಿಯೂರಿಗೆ ಅಹಮದಾಬಾದ್, ಬೇಕಲಿಗೆ ರುಮುಟಾಬಾದ್, ಸಕಲೇಶಪುರಕ್ಕೆ ಮಂಜ್ರಾಬಾದ್, ಚಂದ್ರಗುತ್ತಿಗೆ ಶೂಕುರಾಬಾದ್… ಹೀಗೆ ಉದ್ದಕ್ಕೂ ಮುಸ್ಲಿಂ ಹೆಸರಿಡುತ್ತಾ ಹೋದ ಟಿಪ್ಪು ಕೆಲವೊಂದು ಪ್ರದೇಶಗಳಿಗೆ ಒಂದೇ ಹೆಸರುಗಳನ್ನಿಟ್ಟು ಗೊಂದಲ ಹುಟ್ಟುಹಾಕಿದ.

ಇವೆಲ್ಲಾ ಟಿಪ್ಪುವಿನ ರಾಷ್ಟ್ರೀಯತೆಯನ್ನು, ಕನ್ನಡ ನಿಷ್ಠೆಯನ್ನು, ಅನ್ಯಧರ್ಮ ಸಹಿಷ್ಣುತೆಯನ್ನು ತೋರಿಸುತ್ತವೆಯೇ? ಇದೀಗ ರಾಜ್ಯ ಸರಕಾರ ಆಚರಿಸಲು ಹೊರಟಿರುವುದು ಇಂಥವನ ಜಯಂತಿಯನ್ನೇ. ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟಿಪ್ಪುವಿನಲ್ಲಿ ಯಾವ ಕನ್ನಡತನವನ್ನು ಕಂಡಿದೆ? ವಿಪರ್ಯಾಸವೆಂದರೆ ಕರ್ನಾಟಕ ಏಕೀಕರಣವಾದ ನವೆಂಬರ್ ತಿಂಗಳಲ್ಲೇ ಕನ್ನಡ ವಿರೋಧಿಯಾದವನೊಬ್ಬನ ಜನ್ಮದಿನಾಚರಣೆಗೆ ಹೊರಟಿರುವುದು! ಕನ್ನಡದ ಮಟ್ಟಿಗೆ, ಕರ್ನಾಟಕದ ಮಟ್ಟಿಗೆ ನವೆಂಬರ್ ಎಂದರೆ ಕನ್ನಡತನದ ವಿಜೃಂಭಣೆಯ ಆಚರಣೆಯ ಹೊತ್ತು. ತಿಂಗಳು ಪೂರ್ತಿ ವಿವಿಧ ಸಂಘಟನೆಗಳು ರಾಜ್ಯೋತ್ಸವವನ್ನು ಆಚರಿಸುತ್ತವೆ. ಹಲವು ಸರಕಾರಿ ಆಚರಣೆಗಳೂ ತಿಂಗಳುಪೂರ್ತಿ ನಡೆಯುತ್ತಿರುತ್ತವೆ. ಆದರೆ ನವೆಂಬರ್ ಹತ್ತರ ಆಚರಣೆ ನೀಡುವ ಸಂದೇಶವೇನು? ಕನ್ನಡಕ್ಕೂ, ಟಿಪ್ಪು ಜಯಂತಿ ಆಚರಣೆಗೂ ಸಂಬಂಧವೇನಿದೆ?

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಜಪಾ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ತೇಜಸ್ವಿ ಸೂರ್ಯ ಅವರು, ಕನ್ನಡದ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ ಕನ್ನಡ ವಿರೋಧಿ ಟಿಪ್ಪು ಜಯಂತಿಯನ್ನು ಕನ್ನಡ ಸಂಸ್ಕೃತಿ ಇಲಾಖೆ ಆಚರಿಸುವುದೂ ಒಂದೇ, ಕಾಡನ್ನು ದೋಚಿದ ವೀರಪ್ಪನ್ ಜಯಂತಿಯನ್ನು ಅರಣ್ಯ ಇಲಾಖೆ ಆಚರಿಸುವುದೂ ಒಂದೇ ಎಂದು ಮಾರ್ಮಿಕವಾಗಿ ಹೇಳಿರುವುದು ಪರಿಸ್ಥಿತಿಯ ಅಣಕವೇ ಅಲ್ಲವೇ? ಛೆ!

tippu-2

Comments are closed.