Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ಈ ಬಾರಿ ದಸರಾ ಉದ್ಘಾಟನೆಗೆ ಡಾ.ಎಸ್.ಎಲ್.ಬೈರಪ್ಪ ಅವರನ್ನೇ ಆಮಂತ್ರಿಸಿ : ಸಂಸದ ಪ್ರತಾಪ ಸಿಂಹ ಪತ್ರ,,,

ಈ ಬಾರಿ ದಸರಾ ಉದ್ಘಾಟನೆಗೆ ಡಾ.ಎಸ್.ಎಲ್.ಬೈರಪ್ಪ ಅವರನ್ನೇ ಆಮಂತ್ರಿಸಿ : ಸಂಸದ ಪ್ರತಾಪ ಸಿಂಹ ಪತ್ರ,,,

ಈ ಬಾರಿ ದಸರಾ ಉದ್ಘಾಟನೆಗೆ ಡಾ.ಎಸ್.ಎಲ್.ಬೈರಪ್ಪ ಅವರನ್ನೇ ಆಮಂತ್ರಿಸಿ : ಸಂಸದ ಪ್ರತಾಪ ಸಿಂಹ ಪತ್ರ,,,
ಮೈಸೂರು, ಆ.07 : ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ ಡಾ.ಎಸ್.ಎಲ್.ಬೈರಪ್ಪ ಅವರನ್ನು ಆಮಂತ್ರಿಸುವಂತೆ ಸರಕಾರಕ್ಕೆ ಮನವಿ ಪೂರ್ವಕ ಒತ್ತಾಯ ಮಾಡಲಾಗಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಈ ಬಗ್ಗೆ ಹೇಳಿಕೆ ನೀಡಿದ್ದು, ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೂ ಆಗಿರುವ ಬೈರಪ್ಪ ಅವರಿಗೆ ದಸರಾ ಬಗ್ಗೆ ಅಪಾರವಾದ ಅಭಿಮಾನ. ಆದ್ದರಿಂದ ದಸರಾ ಉದ್ಘಾಟನೆಗೆ ಅವರೇ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖುದ್ದು ಪತ್ರವನ್ನು ಸಹ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಬರೆದಿರುವ ಪತ್ರದ ವಿವರ ಹೀಗಿದೆ……

ಮಾನ್ಯ ಮುಖ್ಯಮಂತ್ರಿಗಳಿಗೆ ಆದರಪೂರ್ವಕ ನಮಸ್ಕಾರಗಳು,

ನಾಡಹಬ್ಬ ದಸರಾ ಸಮೀಪಿಸುತ್ತಿದೆ. ಜನ ಮತ್ತೊಮ್ಮೆ ಸಡಗರದಿಂದ ಉತ್ಸವಕ್ಕಾಗಿ ಕಾಯಲು ಆರಂಭಿಸಿದ್ದಾರೆ. ನಿಮಗೆ ನೆನಪಿರಬಹುದು. ಕಳೆದ ಬಾರಿಯ ದಸರಾ ಹಬ್ಬದ ಪೂರ್ವಭಾವಿ ಸಭೆ ಬೆಂಗಳೂರಿನಲ್ಲಿ ನಡೆದಿದ್ದಾಗ ದಸರಾ ಉದ್ಘಾಟನೆಯ ಬಗ್ಗೆ ಚರ್ಚಿಸಿದ್ದೆವು. ಆಗ ನಾನು ಜನಪ್ರಿಯ ಸಾಹಿತಿಗಳೂ, ಅಂದಿನ ಹೊತ್ತಿಗೆ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪುರಸ್ಕೃತ ಏಕೈಕ ಕನ್ನಡ ಸಾಹಿತಿಗಳೂ ಆದ ಡಾ.ಎಸ್.ಎಲ್ ಭೈರಪ್ಪನವರ ಹೆಸರನ್ನು ಸೂಚಿಸಿದ್ದೆ. ದಸರಾ ಹಬ್ಬದ ಬಗ್ಗೆ ಅತ್ಯಂತ ಗೌರವಾದರಗಳನ್ನು ಇಟ್ಟುಕೊಂಡಿರುವ ಭೈರಪ್ಪನವರೇ ದಸರಾ ಉದ್ಘಾಟನೆಗೆ ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದೆ. ಆ ಬಗ್ಗೆ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಕೇಳಿದ ತಾವು ‘ಮುಂದಿನ ಬಾರಿಗೆ’ ಎಂಬ ಉತ್ತರವನ್ನು ಕೊಟ್ಟಿದಿರಿ. ಕಳೆದ ಬಾರಿ ನನ್ನ ಅಭಿಪ್ರಾಯಕ್ಕೆ ನಿಮ್ಮ ಪಕ್ಷದ ಶಾಸಕರಾದ ಮಾನ್ಯ ತನ್ವೀರ್ ಶೇಠ್ ಮತ್ತು ವಾಸು ಅವರು ಕೂಡ ಸಹಮತ ವ್ಯಕ್ತಪಡಿಸಿದ್ದರು.

ದಸರಾ-2015 ಆಗಮಿಸಿದ ಹೊತ್ತಲ್ಲಿ ನಾನು ಈ ಸಂಗತಿಯನ್ನು ತಮ್ಮ ಅವಗಾಹನೆಗೆ ತರಲಿಚ್ಛಿಸುತ್ತೇನೆ. ಮತ್ತು ಕಳೆದ ಬಾರಿಯ ನಮ್ಮ ಬೇಡಿಕೆಯನ್ನು ಈ ಬಾರಿ ಮಾನ್ಯ ಮಾಡಬೇಕೆಂದು ತಮ್ಮಲ್ಲಿ ವಿನಮ್ರ ಮನವಿಯನ್ನು ಮಾಡುತ್ತಿದ್ದೇನೆ.

ಇದೇ ಆಗಸ್ಟ್ 10ಕ್ಕೆ ದಸರಾ ಪೂರ್ವಭಾವಿ ಸಭೆ ನಡೆಯಲಿದೆ. ಸಂಸತ್ ಅಧಿವೇಶನ ನಡೆಯುತ್ತಿದೆ. ಆದ್ದರಿಂದ ನನಗೆ ಸಭೆಯಲ್ಲಿ ಭಾಗವಹಿಸಲಾಗುತ್ತಿಲ್ಲ. ಈ ಸಭೆಯಲ್ಲಿ ತಾವು ಈ ನಿರ್ಣಯವನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಲ್ಲದೆ ಡಾ. ಎಸ್.ಎಲ್. ಭೈರಪ್ಪನವರೇ ದಸರಾ ಉದ್ಘಾಟನೆ ಮಾಡಬೇಕೆಂಬುದು ಕರ್ನಾಟಕದ ಬಹುಸಂಖ್ಯೆಯ ಜನರ ಬೇಡಿಕೆಯೂ ಆಗಿದೆ. ಅಲ್ಲದೆ ಭೈರಪ್ಪನವರಂಥವರೇ ಅದಕ್ಕೆ ಸೂಕ್ತ ವ್ಯಕ್ತಿ ಎಂಬುದು ನನ್ನ ಅಭಿಪ್ರಾಯ ಕೂಡ. ಏಕೆಂದರೆ ಡಾ. ಎಸ್. ಎಲ್ ಭೈರಪ್ಪನವರು ಕನ್ನಡ ಸಾಹಿತ್ಯವನ್ನು ಹೊರನಾಡಿಗೂ ಮುಟ್ಟಿಸಿದವರು. ಪ್ರಪಂಚದ ಕಾದಂಬರಿ ಕ್ಷೇತ್ರದಲ್ಲಿ ವಿಭಿನ್ನ ಛಾಪನ್ನು ಮೂಡಿಸಿದವರು. ಜನಪ್ರಿಯತೆಯಲ್ಲಿ ಅವರು ಶರಶ್ಚಂದ್ರ, ಪ್ರೇಮಚಂದ್ರದ ಸಾಲಿನಲ್ಲಿ ನಿಲ್ಲುವವರು. ಪ್ರಪಂಚದ ಬಹುತೇಕ ಎಲ್ಲಾ ಭಾಷೆಗಳಿಗೆ ಅವರ ಕಾದಂಬರಿಗಳು ಅನುವಾದಗೊಂಡಿರುವುದು ನಮ್ಮ ಕನ್ನಡಕ್ಕೆ ಹೆಮ್ಮೆ. ಅಲ್ಲದೆ ಅವರು ನಮ್ಮ ಐತಿಹಾಸಿಕ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿದವರು ಮತ್ತು ಉಪನ್ಯಾಸಕರಾಗಿದ್ದವರು. ಮೈಸೂರಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮಟ್ಟಗಳನ್ನು ಎತ್ತರಿಸಿದವರು. ಕನ್ನಡ ಸಾಹಿತ್ಯಿಕ ಲೋಕವನ್ನು ವಿಶ್ವಮಾನ್ಯ ಮಾಡಿದ ಮಹನೀಯರಲ್ಲಿ ಮಾನ್ಯ ಭೈರಪ್ಪನವರು ಒಬ್ಬರು. ಕನ್ನಡದ ಓದುಗರನ್ನು ಹೆಚ್ಚು ಮಾಡುವಲ್ಲಿ ಅವರ ಕೊಡುಗೆಯನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಅಂಥವರು ನಮ್ಮ ಮೈಸೂರಿಗೆ ಗೌರವ. ಸತತ ಅಧ್ಯಯನ, ಪ್ರವಾಸಗಳ ಮೂಲಕ ನೆಲದ ಗುಣವನ್ನು ಸಾಹಿತ್ಯದ ಮೂಲಕ ಓದುಗರಿಗೆ ಕಟ್ಟಿಕೊಟ್ಟವರು. ಆದ್ದರಿಂದ ಈ ಬಾರಿಯ ದಸರಾ ಉದ್ಘಾಟನೆಗೆ ಮಾನ್ಯ ಭೈರಪ್ಪನವರನ್ನು ಆಹ್ವಾನಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮ ನಿರ್ಧಾರ ಅವರಿಗೆ ಹರ್ಷ ತರುತ್ತದೆ ಮತ್ತು ಕನ್ನಡದ ಸಾಹಿತ್ಯ ಲೋಕಕ್ಕೆ ಅತೀವ ಹರ್ಷವನ್ನು ತರುತ್ತದೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
(ಪ್ರತಾಪ್ ಸಿಂಹ)

Slbdasara

Comments are closed.