Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇವರ ಪಾಪದ ಕೊಳೆ ತೊಳೆಯಲು ‘ಯಾವ’ ದೇವರು ಬರಬೇಕು?!

ಇವರ ಪಾಪದ ಕೊಳೆ ತೊಳೆಯಲು ‘ಯಾವ’ ದೇವರು ಬರಬೇಕು?!

ಕೆ ಇಂದು ನಮ್ಮೊಂದಿಗಿಲ್ಲ.

ಅಕಾಲಿಕವಾಗಿ ಕೊಲೆಯಾಗಿ ೧೬ ವರ್ಷಗಳೇ ಕಳೆದವು. ಅಂದು ಆಕೆ ಅಸಹಜವಾಗಿ ಹೆಣವಾಗಿ ಬಿದ್ದಾಗ ೧೭ ದಿನಗಳ ಕಾಲ ತನಿಖೆ ನಡೆದಿತ್ತು. ಕೊನೆಗೆ ಸತ್ಯವನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲಾಯಿತು. ಆದರೆ ವಾಸ್ತವದಲ್ಲಿ ನಡೆದಿದ್ದೇನು ಎಂಬುದನ್ನು ಬೆಳಕಿಗೆ ತರುವ ಬದಲು ಸತ್ಯವನ್ನೇ ಹೊಸಕಿ ಹಾಕಿದ ಸಿಬಿಐ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯಿತು. ಆ ತಪ್ಪಿಗಾಗಿ ಕಟಕಟೆಗೆ ತಂದು ನಿಲ್ಲಿಸುವ ಕೇಂದ್ರ ತನಿಖಾ ದಳವೇ(ಸಿಬಿಐ), ಬರುವ ಆಗಸ್ಟ್ ೧೨ರಂದು ಕೇರಳ ಹೈಕೋರ್ಟ್ ಮುಂದೆ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದಿದೆ. ನ್ಯಾಯಮೂರ್ತಿ ವಿ. ರಾಮಕುಮಾರ್ ಕೇಳುವ ಪ್ರಶ್ನೆಗಳಿಗೆ ಖುಲ್ಲಂಖುಲ್ಲ ಉತ್ತರಿಸಬೇಕು, ಎಲ್ಲ ದಾಖಲೆಗಳನ್ನೂ ತೆರೆದು ತೋರಿಸಬೇಕು.
ಅಷ್ಟಕ್ಕೂ ೧೯೯೨, ಮಾರ್ಚ್ ೨೭ರಂದು ರಾತ್ರಿ ನಡೆದಿದ್ದೇನು?

ಕ್ಯಾಥೋಲಿಕ್ ಕ್ರೈಸ್ತರಲ್ಲಿ ಒಂದು ಒಳ್ಳೆಯ ವ್ಯವಸ್ಥೆಯಿದೆ. ಕಲಿಯುವ ಆಸಕ್ತಿ ಇದ್ದರೂ ಕಲಿಕಾ ವೆಚ್ಚವನ್ನು ಭರಿಸುವ ಸಾಮರ್ಥ್ಯ ಕುಟುಂಬಕ್ಕಿಲ್ಲ ಎಂದಾದರೆ ಅಂತಹ ಬಡ ವಿದ್ಯಾರ್ಥಿಗಳು ‘ಸೆಮಿನರಿ’(ಪಾದ್ರಿಗಳನ್ನು ರೂಪಿಸುವ ಕೇಂದ್ರ)ಗಳನ್ನು ಸೇರಿಕೊಳ್ಳಬಹುದು. ಅಲ್ಲಿ ನಿಮ್ಮ ವಿದ್ಯಾ ಭ್ಯಾಸಕ್ಕೆ ಸಂಬಂಧಿಸಿದ ಎಲ್ಲ ಖರ್ಚು, ವೆಚ್ಚಗಳನ್ನೂ ನೋಡಿ ಕೊಳ್ಳಲಾಗುತ್ತದೆ. ನೀವು ಎಲ್ಲಿಯವರೆಗೆ ಕಲಿಯುತ್ತೀರೋ ಅಲ್ಲಿಯವರೆಗೂ ಓದಿಸುತ್ತಾರೆ. ಊಟ, ವಸತಿ ಮುಂತಾದ ಸೌಲಭ್ಯಗಳನ್ನೂ ಒದಗಿಸುತ್ತಾರೆ. ಇಪ್ಪತ್ತೊಂದು ವರ್ಷದ ಅಭಯಾ ಕೂಡ ಕೇರಳದ ಕೊಟ್ಟಾಯಂನಲ್ಲಿರುವ St. Pius Xth Convent
ಎಂಬ ಇಂತಹದ್ದೇ ಸೆಮಿನರಿಯಲ್ಲಿದ್ದರು. ಆಕೆಯ ತಂದೆ ಎಂ. ಥಾಮಸ್ ಐಕ್ಕರಕುನ್ನೆಲ್ ಕೊಟ್ಟಾಯಂ ಜಿಲ್ಲೆಗೇ ಸೇರಿರುವ ಅರೀಕರ ಎಂಬ ಸ್ಥಳದ ನಿವಾಸಿ. ಅವರದ್ದು ಬಡ ಕುಟುಂಬ. ಮಗಳಿಗೆ ಉತ್ತಮ ಶಿಕ್ಷಣ ಕೊಡಿ ಸುವ ಸಾಮರ್ಥ್ಯ ಅವರಿಗಿರಲಿಲ್ಲ. ಹಾಗಾಗಿ  ಅಭಯಾಳನ್ನು ಸೆಮಿನರಿಗೆ ಸೇರಿಸಿದ್ದರು. ಸನ್ಯಾಸ ಸ್ವೀಕರಿಸಿದ ಮೇಲೆ ಆಕೆ ‘ಸಿಸ್ಟರ್ ಅಭಯಾ’ ಆಗಿದ್ದರು. ಕೊಟ್ಟಾಯಂನಲ್ಲಿ ಬಿಸಿಎಂ ಓದುತ್ತಿದ್ದರು.

ಅದೇನಾಯಿತೋ ಏನೋ.

೧೯೯೨, ಮಾರ್ಚ್ ೨೭ರ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ೨೧ ವರ್ಷದ ಸಿಸ್ಟರ್ ಅಭಯಾ St. Pius Xth Conventನ ಬಾವಿಯೊಳಗೆ ಹೆಣವಾಗಿ ತೇಲುತ್ತಿದ್ದರು. ಇದ್ದಕ್ಕಿದ್ದಂತೆಯೇ ವಿನಾಕಾರಣ ಆಕೆ ಹೆಣವಾಗಿದ್ದು ಸಹಜ ವಾಗಿಯೇ ಅನುಮಾನಕ್ಕೆಡೆ ಮಾಡಿತು. ಇತ್ತ ಚರ್ಚ್‌ನ ಆಡಳಿತ ಮಂಡಳಿ ‘ಆತ್ಮಹತ್ಯೆ’ಯ ಕಥೆ ಹೇಳತೊಡಗಿತು! ಇಷ್ಟಾಗಿಯೂ ಅಭಯಾಳ ಬಡ ಪೋಷಕರು ಚರ್ಚ್ ವಿರುದ್ಧ ಧ್ವನಿಯೆತ್ತುವ ಸ್ಥಿತಿಯಲ್ಲಿರಲಿಲ್ಲ. ಆದರೇನಂತೆ ಆತ್ಮಹತ್ಯೆ ನಾಟಕದ ವಿರುದ್ಧ ರೊಚ್ಚಿಗೆದ್ದ ಸ್ಥಳೀಯ ಜನರೇ ಹೋರಾಟಕ್ಕೆ ಮುಂದಾದರು. ೧೯೯೨, ಮಾರ್ಚ್ ೩೧ರಂದು ಸ್ಥಳೀಯರು, ಚಳವಳಿಗಾರರು ಸೇರಿಕೊಂಡು ‘ಕ್ರಿಯಾ ಮಂಡಳಿ’ ಎಂಬ ಸೂರೊಂದನ್ನು ರಚಿಸಿಕೊಂಡರು. ಅಭಯಾ ಕೊಲೆಗೆ ಕಾರಣರಾಗಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಪ್ರಧಾನಮಂತ್ರಿ, ಕೇರಳ ಮುಖ್ಯಮಂತ್ರಿ, ಕೇರಳ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಡೈರೆಕ್ಟರ್ ಜನರಲ್ ಆಫ್ ಪೊಲೀಸ್‌ಗೆ(ಡಿಜಿಪಿ) ಮನವಿ ಮಾಡಿಕೊಂಡರು. ಇತ್ತ ಮೊದಲ ಹಂತದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಈ ಸಾವು ಕೊಲೆಯೆಂಬುದನ್ನು ಸಾಬೀತುಪಡಿಸಲು ಬೇಕಾದ ಯಾವ ಸಾಕ್ಷ್ಯಾಧಾರಗಳನ್ನೂ ಕಲೆಹಾಕಲಿಲ್ಲ. ಹಾಗಾಗಿ ‘ಕ್ರಿಯಾ ಮಂಡಳಿ’ ತನ್ನ ಹೋರಾಟವನ್ನು ತೀವ್ರಗೊಳಿಸಿತು, ಒಂದರ ಹಿಂದೆ ಮತ್ತೊಂದರಂತೆ ಮನವಿ ಸಲ್ಲಿಸತೊಡಗಿತು. ಇಂತಹ ಒತ್ತಡಕ್ಕೆ ಮಣಿದ ಡಿಜಿಪಿ, ೧೯೯೨, ಏಪ್ರಿಲ್ ೭ರಂದು ಪೊಲೀಸರಿಂದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ರಾಜ್ಯ ಅಪರಾಧ ದಳಕ್ಕೆ(ಕ್ರೈಮ್ ಬ್ರ್ಯಾಂಚ್) ಸೂಚಿಸಿದರು. ೧೯೯೩, ಜನವರಿ ೩ರಂದು ಉಪವಿಭಾಗೀಯ ನ್ಯಾಯಾಧೀಶರೆದುರು ತನ್ನ ವರದಿಯನ್ನಿಟ್ಟ ಅಪರಾಧ ದಳ, ಅಪರಾಧವನ್ನು ಪತ್ತೆಹಚ್ಚುವ ಬದಲು ಚರ್ಚ್‌ನ ನನ್(ಸನ್ಯಾಸಿನಿಯರ)ಗಳ ಅಭಿಪ್ರಾಯವನ್ನು ಸಂಗ್ರಹಿಸಿ, ‘ಆತ್ಮಹತ್ಯೆ’ ಎಂದು ಷರಾ ಬರೆದಿತ್ತು!!

ಈ ಮಧ್ಯೆ ಹೈಕೋರ್ಟ್ ಕದ ತಟ್ಟಿದ ಕ್ರಿಯಾ ಮಂಡಳಿ, ದೇಶದ ಮುಂಚೂಣಿ ತನಿಖಾ ಸಂಸ್ಥೆಯಾದ ಸಿಬಿಐಗೆ ತನಿಖೆಯ ಜವಾಬ್ದಾರಿಯನ್ನು ಒಪ್ಪಿಸಬೇಕೆಂದು ಮನವಿ ಮಾಡಿಕೊಂಡಿತು. ಕೊನೆಗೂ ೧೯೯೩, ಮಾರ್ಚ್ ೨೯ರಂದು ಸಿಬಿಐ ತನಿಖೆ ಆರಂಭಿಸಿತು. ಸಿಬಿಐನ ಡೆಪ್ಯುಟಿ ಸೂಪರಿಂ ಟೆಂಡೆಂಟ್ ಆಫ್ ಪೊಲೀಸ್(ಡಿವೈಎಸ್ಪಿ) ವರ್ಗೀಸ್ ಪಿ. ಥಾಮಸ್‌ಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಹೀಗೆ ತನಿಖೆ ಆರಂಭವಾದ ಸಮಯದಲ್ಲೇ ಆ ಮೊದಲು ತನಿಖೆ ನಡೆಸಿ ‘ಆತ್ಯಹತ್ಯೆ’ ಎಂದು ವರದಿ ನೀಡಿದ್ದ ಅಪರಾಧ ದಳದ ಎಸ್ಪಿ ಕೆ.ಟಿ. ಮೈಕೆಲ್, ಸಿಸ್ಟರ್ ಅಭಯಾ ಅವರ ಡೈರಿ, ಬಟ್ಟೆ-ಬರೆ ಮುಂತಾದ ವೈಯಕ್ತಿಕ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಬಿಟ್ಟರು! ಚರ್ಚ್‌ನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ಬೆಳಕಿಗೆ ತರುವಲ್ಲಿ ಅತ್ಯಂತ ಅಮೂಲ್ಯ ಸಾಕ್ಷ್ಯಾಧಾರವಾಗಬಹುದಾಗಿದ್ದ ಆಕೆಯ ಡೈರಿ ಮೈಕೆಲ್ ಕೈಸೇರಿದ ಮೇಲೆ ಕಾಣೆಯಾಗಿ ಬಿಟ್ಟಿತು. ಅಷ್ಟೇ ಅಲ್ಲ, ಶಿಸ್ತು ಹಾಗೂ ದಕ್ಷತೆಗಾಗಿ ರಾಷ್ಟ್ರಪತಿ ಪದಕ ಪಡೆದಿದ್ದ ಸಿಬಿಐ ಡಿವೈಎಸ್ಪಿ ವರ್ಗೀಸ್ ಪಿ. ಥಾಮಸ್ ೧೯೯೩, ಡಿಸೆಂಬರ್ ೩೦ರಂದು ಅನಿರೀಕ್ಷಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇನ್ನೂ ೭ ವರ್ಷ ಸೇವಾವಧಿ ಇರುವಾಗಲೇ, ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲೇ ಅವರು ನೀಡಿದ ರಾಜೀನಾಮೆ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ೧೯೯೪, ಜನವರಿ ೧೯ರಂದು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಕರೆದ ವರ್ಗೀಸ್ ಥಾಮಸ್, “ಸಿಬಿಐ ಡೈರಿಯಲ್ಲಿ ಅಭಯಾ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸುವಂತೆ ಸಿಬಿಐನ ಕೊಚ್ಚಿನ್ ದಳದ ನನ್ನ ಮೇಲಧಿಕಾರಿ ವಿ. ತ್ಯಾಗರಾಜನ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಆದರೆ ಹಾಗೆ ಮಾಡಲು ನನ್ನ ಆತ್ಮಸಾಕ್ಷಿ ಒಪ್ಪದ ಕಾರಣ ರಾಜೀನಾಮೆ ನೀಡಿದೆ” ಎಂದು ತಿಳಿಸಿದರು. ಇಂತಹ ಪತ್ರಿಕಾಗೋಷ್ಠಿಯ ನಂತರ ಪ್ರಕರಣ ಮಾಧ್ಯಮಗಳ ಗಮನ ಸೆಳೆಯಿತು, ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಪ್ರಸ್ತಾಪವಾಯಿತು. ಹಾಗಾಗಿ, ಒತ್ತಡಕ್ಕೊಳಗಾದ ಸಿಬಿಐ ‘ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುವುದು’ ಎಂದು ಘೋಷಣೆ ಮಾಡಿತು!
ಆದರೆ ಏನೂ ಆಗಲಿಲ್ಲ.

ಕೇರಳದಲ್ಲಿ ಕ್ರೈಸ್ತರು ೨೨ ಪರ್ಸೆಂಟ್ ಇದ್ದಾರೆ, ಬಹುತೇಕ ಎಲ್ಲ ಶೈಕ್ಷಣಿಕ ಸಂಸ್ಥೆಗಳೂ ಅವರದ್ದೇ ಆಗಿವೆ. ಅವರು ಸಂಖ್ಯಾ ಬಲದಿಂದಾಗಿ ರಾಜಕೀಯವಾಗಿಯೂ ಬಲಿಷ್ಠರು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲಿನ ಹಿಡಿತದಿಂದಾಗಿ ಹಣ ಬಲವೂ ಇದೆ. ಸರಕಾರವನ್ನೇ ನಲುಗಿಸುವ, ಸರಕಾರದ ಮೇಲೆ ಪ್ರಭಾವ ಬೀರುವ ತಾಕತ್ತು ಅವರಿಗಿದೆ. ಇದೇನೇ ಇರಲಿ, ಈ ಮಧ್ಯೆ ಹುದ್ದೆಗೆ ರಾಜೀನಾಮೆ ನೀಡಿದ್ದ ವರ್ಗೀಸ್ ಥಾಮಸ್ ಕೂಡ ‘ಕ್ರಿಯಾ ಮಂಡಳಿ’ಯ ಜತೆಗೂಡಿ ಹೋರಾಟಕ್ಕಿಳಿದರು. ಸಿಬಿಐ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಮಾಜಿ ಮುಖ್ಯಮಂತ್ರಿ ಇ.ಕೆ. ನಾಯನಾರ್ ನೇತೃತ್ವದಲ್ಲಿ ತಿರುವನಂತಪುರದಲ್ಲಿ ದೊಡ್ಡ ರ್‍ಯಾಲಿಯನ್ನೂ ಮಾಡಲಾಯಿತು. ಅಲ್ಲದೆ ಸಿಬಿಐನ ನಿರಾಸಕ್ತಿ, ಜಡತ್ವದ ವಿರುದ್ಧ ಹೈಕೋರ್ಟ್‌ನ ಮೊರೆ ಹೋಗಲಾಯಿತು. ಮೂರು ತಿಂಗಳೊಳಗಾಗಿ ತನಿಖೆಯನ್ನು ಮುಗಿಸಿ, ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ಸೂಚಿಸಿತು. ಹೀಗೆ ಸಿಬಿಐ ಮೇಲಿನ ಒತ್ತಡ ಹೆಚ್ಚಾಗತೊಡಗಿತು. “ಅಭಯಾ ಪ್ರಕರಣದ ವಿಷಯದಲ್ಲಿ ಯಾರಾದರೂ ಖಚಿತ ಮಾಹಿತಿ ನೀಡಿದರೆ ೩ ಲಕ್ಷ ಇನಾಮು ನೀಡಲಾಗುವುದು’ ಎಂದು ಸಿಬಿಐ ಘೋಷಣೆ ಮಾಡಿತು. ಕೊನೆಗೆ ೧೯೯೬, ಡಿಸೆಂಬರ್ ೬ರಂದು ಮ್ಯಾಜಿಸ್ಟ್ರೇಟ್ ಮುಂದೆ ಮನವಿಯೊಂದನ್ನು ಸಲ್ಲಿಸಿದ ಸಿಬಿಐ, ಸಾಕ್ಷ್ಯಾಧಾರಗಳ ಕೊರತೆಯ ನೆಪವೊಡ್ಡಿ ಪ್ರಕರಣದ ತನಿಖೆಗೆ ತೆರೆ ಎಳೆಯಲು ಅನುಮತಿ ಕೇಳಿತು! ಆದರೆ ತನಿಖೆಯನ್ನು ಕೊನೆಗೊಳಿಸುವ ಸಿಬಿಐ ನಿರ್ಧಾರದ ವಿರುದ್ಧ ಸಿಸ್ಟರ್ ಅಭಯಾ ಅವರ ತಂದೆಯ ಮೂಲಕ ಮೊಕದ್ದಮೆ ಹಾಕಿಸಲಾಯಿತು. ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಪ್ರಕರಣದ ಮರು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತು.

ಇತ್ತ ತನಿಖಾ ಪತ್ರಿಕೋದ್ಯಮಕ್ಕೆ ಹೆಸರಾದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ತಿರುವನಂತಪುರ ಆವೃತ್ತಿಯಲ್ಲಿ ವಿಶೇಷ ವರದಿಯೊಂದು ಪ್ರಕಟವಾಯಿತು. ೧೯೯೭ರಲ್ಲಿ ಪ್ರಕಟವಾದ ಆ ವರದಿ, ‘ಸಿಸ್ಟರ್ ಅಭಯಾ ಮೇಲೆ ಅತ್ಯಾಚಾರ ನಡೆದಿತ್ತು, ಆಕೆ ಕೊಲೆಯಾಗಿದ್ದಳು ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು’ ಎಂಬುದನ್ನು ಜನರ ಮುಂದಿಟ್ಟಿತು. ಅಲ್ಲದೆ ‘ಅದೊಂದು ಕೊಲೆ’ ಎಂಬುದನ್ನು ಸಿಬಿಐ ಅಧಿಕಾರಿ ವರ್ಗೀಸ್ ಥಾಮಸ್ ಕೂಡ ಹೇಳಿದ್ದರು. ಹಾಗಾಗಿ ಸಿಸ್ಟರ್ ಅಭಯಾ ಅತ್ಯಾಚಾರಕ್ಕೊಳಗಾಗಿರುವ ಹಾಗೂ ಕೊಲೆಯಾಗಿರುವ ಬಗ್ಗೆ ಯಾರ ಮನದಲ್ಲೂ ಅನುಮಾನಗಳಿರಲಿಲ್ಲ.

ಆಕೆಯನ್ನು ಕೊಲೆಗೈಯ್ಯುವುದಕ್ಕೂ ಕಾರಣವಿತ್ತು!

St. Pius Xth Conventನ ಫಾದರ್ ಥಾಮಸ್ ಕೊಟ್ಟೂರ್ ಹಾಗೂ ಇತರರ ಅನೈತಿಕ ಚಟುವಟಿಕೆಗಳನ್ನು ಸಿಸ್ಟರ್ ಅಭಯಾ ಕಣ್ಣಾರೆ ಕಂಡಿದ್ದರು. ಹಾಗಾಗಿ ಸಾಕ್ಷ್ಯ ವಾಗಿದ್ದ ಆಕೆಯನ್ನೇ ಮುಗಿಸಲು ಪೂರ್ವ ಯೋಜನೆ ರೂಪಿಸ ಲಾಗಿತ್ತು. ಆಕೆ ನಿತ್ಯವೂ ನೀರು ಕುಡಿಯಲು ಮುಂಜಾವಿನಲ್ಲಿ ಕೊಠಡಿಯಿಂದ ಹೊರಬರುವುದು ಪಾಪಿಗಳಿಗೆ ಮೊದಲೇ ತಿಳಿದಿತ್ತು. ಕೊಲೆಗೈಯ್ಯಲು ಅದೇ ಸಕಾಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ೧೯೯೨, ಮಾರ್ಚ್ ೨೭ರ ರಾತ್ರಿ ನಡೆದಿದ್ದೂ ಅದೇ. ಇದೇ ಪ್ರಕರಣವನ್ನು ಆಧರಿಸಿ ಮಲೆಯಾಳದಲ್ಲಿ ‘ಕ್ರೈಮ್ ಫೈಲ್’ ಎಂಬ ಚಿತ್ರವೂ ಬಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸುರೇಶ್ ಗೋಪಿ ಈ ಚಿತ್ರದ ನಾಯಕರಾಗಿದ್ದಾರೆ. ಆದರೆ ಒಂದು ವ್ಯತ್ಯಾಸವೆಂದರೆ ಚಲನಚಿತ್ರದಲ್ಲಿ ‘ಎಸ್ಪಿ’ ಸುರೇಶ್ ಗೋಪಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸುತ್ತಾರೆ. ಆದರೆ ನೈಜ ಘಟನೆಯಲ್ಲಿ ತಪ್ಪಿತಸ್ಥರು ಇಂದಿಗೂ ಶಿಕ್ಷೆಗೆ ಒಳಗಾಗಿಲ್ಲ. ಆದರೇನಂತೆ, ಈಗ ಹೊಸ ಆಶಾಕಿರಣವೊಂದು ಕಾಣುತ್ತಿದೆ. ಫಾದರ್ ಥಾಮಸ್ ಕೊಟ್ಟೂರ್, ಫಾದರ್ ಜೋಸ್ ಪೂತ್ರಿಕ್ಕಯಿಲ್, ಸಿಸ್ಟರ್ ಸ್ಟೆಫಿ ಹಾಗೂ ಕೊಲೆಯ ಬಗ್ಗೆ ಅರಿವು ಹೊಂದಿರುವ ಪೊಲೀಸ್ ಅಧಿಕಾರಿಯೊಬ್ಬರನ್ನು ಸಿಬಿಐ ‘ಮಂಪರು ಪರೀಕ್ಷೆ’ಗೆ ಒಳಪಡಿಸಿದ್ದು, ಅದರಲ್ಲಿ ಕೊಲೆಯ ಸುಳಿವೂ ಸಿಕ್ಕಿದೆ! ‘ಕೊಲೆಯಾಗುವ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆದಿದೆ’ ಎಂಬುದನ್ನು ಫಾರೆನ್ಸಿಕ್ ವರದಿ ಕೂಡ ತಿಳಿಸಿದೆ. ಈ ಮಧ್ಯೆ, ಮೊನ್ನೆ ಆಗಸ್ಟ್ ೩ರಂದು ಸಿಎನ್‌ಎನ್-ಐಬಿಎನ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿರುವ ವರ್ಗೀಸ್ ಥಾಮಸ್, ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಂದಲೇ ಮಾಜಿ ಸಿಬಿಐ ನಿರ್ದೇಶಕ ವಿಜಯರಾಮರಾವ್  ಹಾಗೂ ತ್ಯಾಗರಾಜನ್ ಮೂಲಕ ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿಹಾಕಬೇಕೆಂಬ ನಿರ್ದೇಶನ ಬಂದಿತ್ತು ಎಂಬ ಬಲವಾದ ಆರೋಪ ಮಾಡಿ ದ್ದಾರೆ. ಈ ಎಲ್ಲ ಕಾರಣಗಳು ಹಾಗೂ ಸಿಸ್ಟರ್ ಅಭಯಾ ತಂದೆ ಎಂ. ಥಾಮಸ್ ಐಕ್ಕರಕುನ್ನೆಲ್ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ “ಅಭಯಾ ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಪಾದ್ರಿಗಳು ಹಾಗೂ ಒಬ್ಬ ಸನ್ಯಾಸಿನಿಯ ಮೇಲೆ ನಡೆಸಲಾಗಿರುವ ಮಂಪರು ಪರೀಕ್ಷೆಯ ಮೂಲ ‘ಸಿಡಿ’ಯನ್ನು ನೇರವಾಗಿ ಆಗಸ್ಟ್ ೧೨ರಂದು ಕೋರ್ಟ್ ಮುಂದೆ ಸಲ್ಲಿಸಬೇಕು” ಎಂದು ಬೆಂಗಳೂರಿನ ಸೆಂಟ್ರಲ್ ಫಾರೆನ್ಸಿಕ್ ಲ್ಯಾಬೊರೇಟರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಈಗಾಗಲೇ ಸಲ್ಲಿಸಲಾಗಿರುವ ‘ಸಿಡಿ’ಯನ್ನು ಪರಾಮರ್ಶಿಸಿರುವ ನ್ಯಾಯಮೂರ್ತಿ ವಿ. ರಾಮಕುಮಾರ್, ಅದನ್ನು ತಿರುಚಲಾಗಿದೆ ಎಂದಿದ್ದಾರೆ. ಹಾಗಾಗಿ ಪರೀಕ್ಷೆ ನಡೆಯುತ್ತಿರುವಾಗ ರೂಪಿಸಲಾಗಿರುವ ಮೂಲ ‘ಸಿಡಿ’ಯನ್ನೇ ಸಲ್ಲಿಸಬೇಕೆಂದು ಆಗಸ್ಟ್  ೫ರಂದು ನೀಡಿದ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಆಗಸ್ಟ್ ೧೨ರಂದು ಏನಾಗುತ್ತದೋ ಗೊತ್ತಿಲ್ಲ, ಆದರೆ ಒಬ್ಬ ಪ್ರಧಾನಿಯ ಮೇಲೆ ಒತ್ತಡ ತಂದು ಪ್ರಕರಣ ಮುಚ್ಚಿಹಾಕಿಸಲು ಯತ್ನಿಸುತ್ತಾರೆಂದರೆ ಕೇರಳದ ಚರ್ಚ್‌ಗಳ ಪ್ರಭಾವ ಎಷ್ಟಿರಬಹುದು? ಇದೇನು ಭಾರತದ ಯಾವುದೋ ಒಂದು ಭಾಗದಲ್ಲಿ ನಡೆದ ‘Isolated’ (ಅಲ್ಲೊಂದು ಇಲ್ಲೊಂದು) ಪ್ರಕರಣವಲ್ಲ. ಈಗಾಗಲೇ ಸಾಕಷ್ಟು ಪ್ರಕರಣಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಸಲುವಾಗಿ ಕ್ಯಾಥೋಲಿಕ್ ಚರ್ಚ್‌ಗಳು ನ್ಯಾಯಾಲಯಗಳಿಂದ ವಾಗ್ದಂಡನೆಗೆ ಗುರಿಯಾಗಿವೆ, ಭಾರೀ ಪ್ರಮಾಣದ ದಂಡವನ್ನೂ ತೆತ್ತಿವೆ. “ನಿಮ್ಮ ದೇಶದಲ್ಲಿ ಕೆಲವು ಪಾದ್ರಿಗಳು ಮಕ್ಕಳ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ನಮಗೂ ಅವಮಾನವೆನಿಸಿದೆ, ಕ್ಷಮಿಸಿ” ಎಂದು ೨೦೦೮, ಜುಲೈ ೧೯ರಂದು ಪೋಪ್ ಬೆನೆಡಿಕ್ಟ್  ಆಸ್ಟ್ರೇಲಿಯನ್ನರ ಕ್ಷಮೆ ಯಾಚಿಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಇಂತಹದ್ದೇ ಕಾರಣಕ್ಕಾಗಿ ಅಮೆರಿಕನ್ನರ ಕ್ಷಮೆ ಕೇಳಿದ್ದರು.

ಅಣಕವೆಂದರೆ, ದಿವಂಗತ ಪೋಪ್ ಎರಡನೇ ಜಾನ್ ಪಾಲ್ ಏಷ್ಯಾಕ್ಕೆ ಭೇಟಿ ನೀಡಿದ್ದಾಗ, “Harvesting of crosses and souls across Asia”ಕ್ಕೆ ಕರೆ ನೀಡಿದ್ದರು. ಆದರೆ ‘ಕೆಲವು’ ಪಾದ್ರಿಗಳು ಏಷ್ಯಾದಲ್ಲಿ ಕ್ರೈಸ್ತ ಧರ್ಮದ Harvesting  ಜತೆಗೆ ನನ್, ಸಿಸ್ಟರ್‌ಗಳ feasting ಕೂಡ ಮಾಡುತ್ತಿದ್ದಾರೆ! ಇಂತಹ ಲೈಂಗಿಕ ದೌರ್ಜನ್ಯಗಳು ಖಂಡಿತ ಎಲ್ಲ ಜಾತಿ, ಧರ್ಮಗಳಲ್ಲೂ ನಡೆದಿವೆ, ನಡೆಯುತ್ತಿವೆ. ಅನಧಿಕೃತವಾಗಿ ಹೆಂಡತಿ, ಮಕ್ಕಳನ್ನು ಹೊಂದಿರುವ ಸ್ವಾಮಿಗಳು, ‘ಅ’ನಿ‘ಷ್ಟ’ ಮಠಗಳಿಗೇನು ಕಡಿಮೆಯಿಲ್ಲ. ಆದರೆ ಪ್ರಶ್ನೆ ಅದಲ್ಲ. ಜಗತ್ತಿನ ಪಾಪ ತೊಳೆಯಲು ಹೊರಟವರು, ಜೀಸಸ್‌ನನ್ನು ಆರಾಧಿಸಿದರೆ ಪಾಪವಿಮುಕ್ತಿಯಾಗುತ್ತದೆ ಎಂದು ಸಾರುತ್ತಿರುವವರು, ಹಾಗೆ ಹೇಳುತ್ತಾ, ನಂಬಿಸುತ್ತಾ ಇತರರನ್ನು ಮತಾಂತರ ಮಾಡುತ್ತಿರುವವರೂ ಇಂತಹ ಕೆಲಸ ಮಾಡಿದರೆ ಏನರ್ಥ ಸ್ವಾಮಿ? ಯೇಸುವಿನ ಕಾಲ ಬುಡದಲ್ಲೇ ನಡೆಯುತ್ತಿರುವ ಅನೈತಿಕತೆಯ ಬಗ್ಗೆ ಯಾರ ಬಳಿ ‘ಕನ್ಫೆಸ್’ (ಪಾಪ ನಿವೇದನೆ) ಮಾಡಿಕೊಳ್ಳ ಬೇಕು?! ಜೀಸಸ್‌ನ ಸಂದೇಶ ಸಾರುತ್ತಿರುವವರ ಪಾಪ ತೊಳೆಯಲು “ಯಾವ ಧರ್ಮ”ದ ದೇವರ ಮೊರೆ ಹೋಗ ಬೇಕು?!

4 Responses to “ಇವರ ಪಾಪದ ಕೊಳೆ ತೊಳೆಯಲು ‘ಯಾವ’ ದೇವರು ಬರಬೇಕು?!”

  1. Vijay Joshi says:

    ನಿಮ್ಮ ಲೇಖನ ಓದಿದ ನಂತರ ನೆನಪಾಗಿದ್ದು ಕಂಚಿ ಶ್ರೀಗಳ ಪ್ರಕರಣ. ಕಾನೂನಿನ ಮುಂದೆ ಎಲ್ಲರೂ ಒಂದೆ ಎನ್ನುತ್ತಾ ಶ್ರೀಗಳನ್ನು ಜೈಲಿಗೆ ದಬ್ಬಲು ಮುಂದಾದವರು ತಪ್ಪಿತಸ್ಥ ಪಾದ್ರಿಗಳನ್ನೂ ಜೈಲಿಟ್ಟುವ ಬಗ್ಗೆ ಒತ್ತಡ ತರಲಿ.
    ಇಂತಹ ನೇರ ನುಡಿಯ ಲೇಖನಕ್ಕಾಗಿ ಧನ್ಯವಾದಗಳು

  2. ಶಂ. ರಾ. ರಮ್ಯಾ says:

    ನೀವು ಹೇಳಿರುವುದು ಸರಿಯಾಗಿದೆ. ಕ್ರೈಸ್ತ ಪಾದ್ರಿಗಳ ಇಂತಹ ಅವ್ಯವಹಾರಗಳು ಇನ್ನೂ ಬೇಕಾದಷ್ಟಿವೆ. ಕ್ರೈಸ್ತ ಚರ್ಚುಗಳ ಬಣ್ಣ ಬಯಲು ಮಾಡಿದ್ದಕ್ಕಾಗಿ ಧನ್ಯವಾದಗಳು. ನಮ್ಮಲ್ಲಿನ ಇಂಗ್ಲಿಷ್‌ ಮಾಧ್ಯಮಗಳು, NDTV ಗಳು ಇಂತಹ ಸುದ್ದಿಗಳ ಬಗ್ಗೆ ತನಿಖೆ ಮಾಡುವಲ್ಲಿ ತಮ್ಮ ಜಾಣ ಕಿವುಡನ್ನು ಪ್ರದರ್ಶಿಸುತ್ತಿರುವುದು ಅವುಗಳ ದುರುದ್ದೇಶವನ್ನು ಸ್ಪಷ್ಟಗೊಳಿಸುತ್ತವೆ. ಹಿಂದೂ ಮಠಗಳ, ಸ್ವಾಮೀಜಿಗಳ ಬಗ್ಗೆ ಇಂತಹದ್ದೇನಾದರೂ ಸುದ್ದಿಯಿದ್ದಲ್ಲಿ ನಾಮುಂದು ತಾ ಮುಂದು ಎನ್ನುವಂತೆ ಎಲ್ಲರೂ ತನಿಖಾ ವರದಿ ಪ್ರಕಟಿಸಿಬಿಡುತ್ತಿದ್ದರು!

  3. Rajesh says:

    ತುಂಬಾ ಉತ್ತಮವಾದ ಲೇಖನ…ಧನ್ಯವಾದಗಳು…ಪಾದ್ರಿಗಳು ಸ್ವತಃ ಲೈಂಗಿಕ ದ್ವರ್ಜನ್ಯ ಮಾಡುತ್ತಾರೆ ಮತ್ತು ಸಿಸ್ಟರ್ ಗಳು ಅವರ ಕಾಮ ತ್ರಷೆಗೆ ಬಲಿಯಾಗುವುದನ್ನು ಕೇಳಿ ತುಂಬಾ ದಿಗಿಲಾಯಿತು…ಇದೊಂದು ಪ್ರಕರಣ ಬಾಹ್ಯ ಜಗತ್ತಿಗೆ ಬಂದಿದೆ..ಇಂತಹ ತುಂಬಾ ಪ್ರಕರಣಗಳು ಇದ್ದಿರಬಹುದು…ಪ್ರಕರಣಕ್ಕೆ ಬೆಳಕು ಚೆಲ್ಲಿದೆ..ಅಭಯಳಿಗೆ ಸತ್ತ ಮೇಲಾದರೂ ನ್ಯಾಯ ದೊರಕಬಹುದು ಎಂದು ಆಶಿಸೋಣ……..

  4. H S PRAKASH says:

    KACHE KAI BAI EVU 3 SARI EDDARE YALLRIGU OLLEYADU