Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನೆಹರು ಸಂಬಂಧಿ ಸೆಹಗಲ್ ಹಾಗೂ ಇತರ ಸೋಗಲಾಡಿಗಳು!

ನೆಹರು ಸಂಬಂಧಿ ಸೆಹಗಲ್ ಹಾಗೂ ಇತರ ಸೋಗಲಾಡಿಗಳು!

 

ನೆಹರು ಸಂಬಂಧಿ ಸೆಹಗಲ್ ಹಾಗೂ ಇತರ ಸೋಗಲಾಡಿಗಳು!
“ಇಡೀ ದೇಶಾದ್ಯಂತ ಸರಣಿ ಹಿಂಸಾ ಘಟನೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ತಳೆದಿದ್ದಾರೆ. ಇಂದು ದೇಶವನ್ನಾಳುತ್ತಿರುವುದು ಒಂದು ಫ್ಯಾಸಿಸ್ಟ್ ಸರ್ಕಾರ. ಇಂಥ ಫ್ಯಾಸಿಸ್ಟ್ ಸರ್ಕಾರ ಇತಿಹಾಸದಲ್ಲಿ ಎಂದೂ ದೇಶವನ್ನಾಳಿಲ್ಲ. ಇಷ್ಟಾಗಿಯೂ ಸಾಹಿತ್ಯ ಅಕಾಡೆಮಿ ಮೌನ ತಳೆದಿರುವುದು ಬಹಳ ದುಖಃಕರ ಸಂಗತಿ. ಹಾಗಾಗಿ ನಾನು ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ”.
ವ್ಹಾರೆ ವ್ಹಾ!
ಅಕ್ಟೋಬರ್ 6 ರಂದು ಇಂಥದ್ದೊಂದು ಪತ್ರಿಕಾ ಹೇಳಿಕೆಯನ್ನು ಹೊರಡಿಸಿ ರಾಷ್ಟ್ರಾದ್ಯಂತ ಸುದ್ದಿಯಾಗುವ ಮೊದಲು ನಯನತಾರಾ ಸೆಹಗಲ್ ಜನರ ಸ್ಮøತಿಪಟಲದಿಂದ ಮರೆಯಾಗಿ ಒಂದೆರಡು ದಶಕಗಳೇ ಆಗಿದ್ದವು. ಆದರೆ ಈಗ ಎಂಭತ್ತೆಂಟು ವರ್ಷದ ಈ ನೆಹರು ಸಂಬಂಧಿ ಎಂಟೇ ನಿಮಿಷದಲ್ಲಿ ಮೋದಿ ವಿರೋಧಿ ಪಡೆಯ ನಯನದಲ್ಲಿ ಬಹುದೊಡ್ಡ ತಾರೆಯಾಗಿ ಹೊಮ್ಮಿಬಿಟ್ಟಿದ್ದಾರೆ. ಇಂದು ಪ್ರಚಾರಕ್ಕಾಗಿ ಎಲ್ಲರೂ ಹಪಹಪಿಸುತ್ತಾರೆ. ಚಲನಚಿತ್ರ ಬಿಡುಗಡೆಗೆ ಮೊದಲು ತಮ್ಮದೇ ಎಂಎಂಎಸ್ ಮಾಡಿಕೊಂಡು ಹರಿಬಿಡುವ ಚಿತ್ರತಾರೆಯರು, ರಾಜಕಾರಣಿಗಳು, ರೈಟರ್‍ಗಳಿಂದ ಹಿಡಿದು ಹೆಸರು ಸಂಪಾದನೆ ಮಾಡಿದವರ ವಿರುದ್ಧ ಆರೋಪ ಮಾಡಿ ಪ್ರಚಾರ ಗಿಟ್ಟಿಸುವ ಸಾಮಾನ್ಯರವರೆಗೂ ಎಲ್ಲರಿಗೂ ಈ ಹುಚ್ಚು ಇರುತ್ತದೆ. ಆದರೆ ನಮ್ಮನ್ನು ಬಹುವಾಗಿ ಕಾಡುತ್ತಿರುವುದು, ಮನಸ್ಸನ್ನು ಕದಡಿರುವುದು ಹಾಗೂ ಆಕ್ರೋಶವನ್ನುಂಟು ಮಾಡಿರುವುದು ಅಕಾಡೆಮಿ ಪುರಸ್ಕಾರವನ್ನು ಹಿಂದಿರುಗಿಸುವಾಗ ಆಕೆ ಕೊಟ್ಟಿರುವ ಕ್ಷುಲ್ಲಕ ಕಾರಣಗಳು.
ಈಗ ಆಡಳಿತ ನಡೆಸುತ್ತಿರುವುದು ಒಂದು ಫ್ಯಾಸಿಸ್ಟ್ ಸರ್ಕಾರವಂತೆ. ಈಗಿರುವುದು ತುರ್ತುಪರಿಸ್ಥಿತಿಗಿಂತ ಕರಾಳ ವಾತಾವರಣವಂತೆ. ನಮ್ಮಲ್ಲಿ ಕೆಲವರು ವರ್ತಿಸುವುದನ್ನು ನೋಡಿ ಅರವತ್ತಕ್ಕೇ ಅರಳು-ಮರಳು ಎನ್ನತ್ತಾರೆ. ಇನ್ನು ಎಂಭಂತ್ತೆಂಟು ವರ್ಷದ ನಯನತಾರಾ ಅವರ ಬಗ್ಗೆ ಅಂಥ ಅನುಮಾನ ಕಾಡಿದರೆ ಆಶ್ಚರ್ಯವಿಲ್ಲ ಅಲ್ಲವೆ? ತುರ್ತು ಪರಿಸ್ಥಿತಿಗಿಂತ ಕರಾಳ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಿದ್ದೀರಲ್ಲಾ ನಿಮಗೇನಾಗಿದೆ ಸೆಹಗಲ್? ನೀವು ನೆಹರು ಸೋದರಿ ವಿಜಯಲಕ್ಷ್ಮಿ ಪಂಡಿತ್‍ರ ಮಗಳು ಎಂಬ ಕಾರಣಕ್ಕೆ ಇಂಥ ಹಸಿಸುಳ್ಳನ್ನು ಹೇಳುವ ಅಗತ್ಯವಿದೆಯೇ? ನಿಮ್ಮ ಮಾವನ ಮಗಳು ಇಂದಿರಾ ಗಾಂಧಿಯವರಂತೆ ಪ್ರಧಾನಿ ನರೇಂದ್ರ ಮೋದಿಯವರು ಯಾವ ರಾಜಕೀಯ ಎದುರಾಳಿಗಳನ್ನು ಜೈಲಿಗೆ ಅಟ್ಟಿದ್ದಾರೆ ಹೇಳಿ? ಯಾವ ಪತ್ರಿಕಾ ಸಂಪಾದಕನನ್ನು ಬಂಧಿಸಿದ್ದಾರೆ? ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಟೀಕೆಗೊಳಗಾದ, ನಿಂದನೆ-ಬೈಗುಳಗಳಿಗೆ ಗುರಿಯಾದ, ವಿಂಡಂಬನೆಗೆ ಒಳಗಾದ ಏಕಮಾತ್ರ ವ್ಯಕ್ತಿ ನರೇಂದ್ರ ಮೋದಿ. ಒಂದು ವೇಳೆ ಇಂದಿರಾಗಾಂಧಿಯವರು ಇಂಥ ನಿಂದನೆಗೆ ಒಳಗಾಗಿದ್ದರೆ ಅರ್ಧಕ್ಕರ್ಧ ಪತ್ರಿಕಾ ಸಂಪಾದಕರು, ಟಿವಿ ಆ್ಯಂಕರ್‍ಗಳು, ಸಾಹಿತಿಗಳು, ಬುದ್ಧಿಜೀವಿಗಳು ಜೈಲು ಪಾಲಾಗಿರುತ್ತಿದ್ದರು. ತುರ್ತುಪರಿಸ್ಥಿತಿ ವೇಳೆ, ಇಂದಿರಾ ಗಾಂಧಿಯವರು 1.4 ಲಕ್ಷ ವಿರೋಧ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಜೈಲಿಗೆ ಅಟ್ಟಿದ್ದರು. ಇಂಡಿಯನ್ ಎಕ್ಸ್‍ಪ್ರೆಸ್ ಮಾಲೀಕರಾದ ರಾಮನಾಥ ಗೋಯೆಂಕಾ ಅವರಿಗೆ ಕೊಡಬಾರದ ಕಷ್ಟಕೊಟ್ಟು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಇಂದಿರಾ ಗಾಂಧಿಯವರನ್ನು ಟೀಕಿಸಿ ಬರೆದ ಅರುಣ್ ಶೌರಿ ವಿರುದ್ಧ 300 ಕೇಸು ದಾಖಲಿಸಿದರು. ಇದಕ್ಕಿಂತ ಕರಾಳ ಪರಿಸ್ಥಿತಿ ಈಗ ಸೃಷ್ಟಿಯಾಗಿದೆಯೇ ಸೆಹಗಲ್? ಏಕೆ ಇಲ್ಲಸಲ್ಲದ ಮಾತನಾಡುತ್ತಿದ್ದೀರಿ? ನರೇಂದ್ರ ಮೋದಿಯವರು ನಿಮ್ಮ ಕುಟುಂಬದ ಕೈಯಿಂದ ದೇಶದ ಚುಕ್ಕಾಣಿಯನ್ನು ಕಸಿದುಕೊಂಡರಲ್ಲಾ ಎಂಬ ಮತ್ಸರ, ಸಣ್ಣತನ ನಿಮ್ಮಿಂದ ಇಂಥ ಮಾತುಗಳನ್ನಾಡಿಸುತ್ತಿದೆಯೇ? ಭಾರತವನ್ನು ಬ್ರಿಟಿಷರಿಂದ ನಿಮ್ಮ ಕುಟುಂಬ ಭೋಗ್ಯಕ್ಕೆ ಪಡೆದುಕೊಂಡಿರುವಂತೆ ಏಕೆ ವರ್ತಿಸುತ್ತಿದ್ದೀರಿ? ನಿಮ್ಮ ಮಾತು ಮತ್ತು ನಡೆ ಮೋದಿ ದ್ವೇಷದಿಂದ ಕೂಡಿರುವುದಲ್ಲದೆ ಮತ್ತೇನು?
ನೀವು ಎತ್ತಿರುವ ಒಂದೊಂದು ಪ್ರಕರಣಗಳನ್ನು, ಕೊಟ್ಟಿರುವ ಒಂದೊಂದು ಕಾರಣಗಳನ್ನು ತೆಗೆದುಕೊಳ್ಳಿ. ಡಾ. ಎಂ.ಎಂ. ಕಲ್ಬುರ್ಗಿಯವರ ಪ್ರಕರಣಕ್ಕೆ ಬರೋಣ. ಕರ್ನಾಟಕದ ಕಾನೂನು ಸುವ್ಯವಸ್ಥೆ ಯಾರ ಕೈಯಲ್ಲಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯಲ್ಲೋ ಪ್ರಧಾನಿ ಮೋದಿಯವರ ಸುಪರ್ದಿನಲ್ಲೋ? ಕರ್ನಾಟಕದ ಗೃಹ ಸಚಿವ ಯಾರು? ಜಾತ್ಯತೀತವಾದದ ಮುಕುಟಮಣಿ ಕೆ.ಜೆ. ಜಾರ್ಜ್ ಅವರೋ ಅಥವಾ ರಾಜನಾಥ ಸಿಂಗರೋ? ಸಿದ್ದರಾಮಯ್ಯನವರ ಮೂಗಿನ ಕೆಳಗೆ ನಡೆಯುವ ಪ್ರಕರಣಕ್ಕೂ ಮೋದಿಯವರನ್ನೇ ಏಕೆ ಬೊಟ್ಟು ಮಾಡುತ್ತೀರಿ? ಧಾಭೋಲ್ಕರ್ ಹತ್ಯೆಯಾದಾಗ ಮಹಾರಾಷ್ಟ್ರದ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಪೃಥ್ವಿರಾಜ್ ಚವ್ಹಾಣರಾಗಿದ್ದರು. ಗೃಹ ಸಚಿವ ಎನ್‍ಸಿಪಿಯ ಆರ್.ಆರ್. ಪಾಟೀಲರಾಗಿದ್ದರು. ಈ ಪ್ರಕರಣಕ್ಕೂ ಮೋದಿಗೂ ಏನು ಸಂಬಂಧ? ಆ ಘಟನೆ ನಡೆದಾಗ ಮೋದಿ ಪ್ರಧಾನಿಯೇ ಅಗಿರಲಿಲ್ಲ, ಆದರೂ ಮೋದಿಯವರನ್ನೇಕೆ ಹೊಣೆ ಮಾಡುತ್ತಿದ್ದೀರಿ? ಇನ್ನು ದಾದ್ರಿಯಲ್ಲಿ ನಡೆದ ಮೊಹಮದ್ ಇಕ್ಲಾಕ್ ಪ್ರಕರಣಕ್ಕೆ ಬರುವುದಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಎರಡೂ ಆಗಿರುವ ಅಖಿಲೇಶ್ ಯಾದವ್‍ರನ್ನು ದೋಷಿ ಮಾಡುವುದನ್ನು ಬಿಟ್ಟು ಏಕೆ ಮೋದಿಯವರನ್ನು ದೂರುತ್ತಿದ್ದೀರಿ? ಮೋದಿಯೆಂದರೆ ನಿಮಗೆ ಅಷ್ಟೊಂದು ಕೋಪವೇಕೆ? ನಿಮ್ಮ ಕುಟುಂಬದಿಂದ ಅಧಿಕಾರ ಕಸಿದುಕೊಂಡರೆಂಬ ದ್ವೇಷದಿಂದಲಾ? ಇಲ್ಲವಾದರೆ ಬೇರಾವ ಕಾರಣವಿದೆ ಹೇಳಿ?
ಇನ್ನು ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ 1983ರ ಅಸ್ಸಾಂನ ನೆಲ್ಲಿ ಹತ್ಯಾಕಾಂಡ, ಮೂರೂವರೆ ಸಾವಿರ ಸಿಖ್ಖರನ್ನು ಆಹುತಿ ತೆಗೆದುಕೊಂಡ 1984ರ ದೆಹಲಿಯ ಸಿಖ್ ಮಾರಣಹೋಮ, 10 ಸಾವಿರಕ್ಕೂ ಹೆಚ್ಚು ಜನ ಕುಳಿತಲ್ಲೇ, ನಿಂತಲ್ಲೇ ಶವವಾದ 1984ರ ಭೋಪಾಲ್ ಅನಿಲ ದುರಂತ, 42 ಮುಸಲ್ಮಾನ ಯುವಕರನ್ನು ಕೊಂದು ಕೊಳ್ಳಕ್ಕೆ ಹಾಕಿದ 1987ರ ಉತ್ತರ ಪ್ರದೇಶದ ಹಶೀಮ್‍ಪುರ ಕಗ್ಗೊಲೆ, ಒಂದು ಸಾವಿರ ಜನ ಕಗ್ಗೊಲೆಯಾದ 1989ರ ಬಿಹಾರದ ಭಾಗಲ್ಪುರ ಹಿಂಸಾಚಾರ, ಇನ್ನೂರ ಐವತ್ತೇಳು ಜನರನ್ನು ಕ್ಷಣ ಮಾತ್ರದಲ್ಲಿ ಹೊಸಕಿ ಹಾಕಿದ ಹಾಗೂ 1400 ಜನರನ್ನು ಊನಗೊಳಿಸಿದ 1993ರ ಬಾಂಬೆ ಸ್ಫೋಟ, 4 ಲಕ್ಷ ಕಾಶ್ಮೀರಿ ಪಂಡಿತರನ್ನು ತಾಯ್ನೆಲದಲ್ಲೇ ನಿರಾಶ್ರಿತರರನ್ನಾಗಿ ಮಾಡಿದ ಹಾಗೂ ಸಾವಿರ ಜನರನ್ನು ಕಗ್ಗೊಲೆಗೈದ ಕಾಶ್ಮೀರದ ಸಾಮೂಹಿಕ ಮಾರಣಹೋಮ.. ಇವೆಲ್ಲ ನಿಮ್ಮ ಕಣ್ಣೆದುರೇ ನಡೆದುಹೋದವು. ಇಂಥ ಘಟನೆಗಳು ಸಂಭವಿಸಿದಾಗ ನಿಮ್ಮ ಸಂಭಂಧಿಗಳೇ ಪ್ರಧಾನಿಗಳಾಗಿದ್ದರು. ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ ಎಂದು ಸಿಖ್ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಅವಾರ್ಡನ್ನು ಎರಡು ಕೈ ಚಾಚಿ ಪಡೆದುಕೊಂಡಿರಿ. ಆಗೇಕೆ ನೆಲ್ಲಿ ಹಾಗೂ ಸಿಖ್ ಹತ್ಯಾಂಕಾಂಡ ನಡೆದಾಗ್ಯೂ ಸಾಹಿತ್ಯ ಅಕಾಡೆಮಿ ಮೌನ ವಹಿಸಿದೆ ಎಂದು ಪುರಸ್ಕಾರ ತಿರಸ್ಕರಿಸಲಿಲ್ಲ? ಭಾಗಲ್ಪುರ, ಬಾಂಬೆ, ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನಂತರವಾದರೂ ಹಿಂದಿರುಗಿಸಬಹುದಿತ್ತು. ಆಗೆಲ್ಲ ಸುಮ್ಮನಿದ್ದ ನಿಮ್ಮ ಸಂವೇಧನೆ, ಆತ್ಮಸಾಕ್ಷಿಗಳು ಮೋದಿ ಪ್ರಧಾನಿಯಾದ ನಂತರ, ಅದರಲ್ಲೂ ಎಂಭಂತ್ತೆಂಟರ ಇಳಿ ವಯಸ್ಸಿನಲ್ಲಿ ಅದ್ಹೇಗೆ ಜಾಗೃತವಾದವು? ಅದ್ಯಾವ ಕ್ಷಣದಿಂದ ಮೋದಿಗೆ ಸಂಬಂಧವಿಲ್ಲದ ಪ್ರಕರಣಗಳಿಗೂ ನಿಮ್ಮ ಮನ ಮಿಡಿಯಲು ಆರಂಭವಾಯಿತು? ನೆಲ್ಲಿಯಲ್ಲಿ 2 ಸಾವಿರ ಮುಸ್ಲಿಮರನ್ನು ಕೇವಲ 6 ಗಂಟೆಯಲ್ಲಿ ಕುಕ್ಕಿ ಕೊಂದಾಗ ಅಸ್ಸಾಂ ಇಂದಿರಾ ಗಾಂಧಿಯವರ ನೇರ ನಿಯಂತ್ರಣದಲ್ಲಿತ್ತು. ಸಿಖ್ ಹತ್ಯಾಕಾಂಡ ನಡೆದಾಗ ದಿಲ್ಲಿ ರಾಜೀವ್ ಗಾಂಧಿಯವರ ನಿಯಂತ್ರಣದಲ್ಲಿತ್ತು. ಭೋಪಾಲ್ ದುರಂತಕ್ಕೆ ಕಾರಣವಾದ ವಾರೆನ್ ಆ್ಯಂಡರ್‍ಸನ್‍ನ್ನು ದೇಶದಿಂದ ಹೊರಕ್ಕೆ ಕಳುಹಿಸಿದ್ದು ನಿಮ್ಮ ಸಂಬಂಧಿ ರಾಜೀವ್ ಗಾಂಧಿ. ಅಂಥ ವ್ಯಕ್ತಿಯ ರಕ್ತಸಿಕ್ತ ಕೈಗಳಿಂದ ಅಕಾಡೆಮಿ ಪ್ರಶಸ್ತಿ ಪಡೆಯುವಾಗ ಎಲ್ಲಿತ್ತು ನಿಮ್ಮ ಆತ್ಮಸಾಕ್ಷಿ? ಎಲ್ಲಿತ್ತು ನಿಮ್ಮ ಸಂವೇಧನೆ, ಕಾಳಜಿಗಳು? ಈ ದೇಶದಲ್ಲೇ ಅತಿ ಹೆಚ್ಚು ಬಾಂಬ್ ಸ್ಫೋಟಗಳಾಗಿದ್ದರು ಸೋನಿಯಾ ಗಾಂಧಿಯವರು ಯುಪಿಎ ಅಧ್ಯಕ್ಷೆಯಾಗಿದ್ದಾಗ. ಮಹಾರಾಷ್ಟ್ರ, ಮುಂಬೈವೊಂದರಲ್ಲೇ 7 ಸಲ ಬಾಂಬ್ ಸ್ಫೋಟಗಳಾದವು. ಆಗೇಕೆ ಮಾತನಾಡಲಿಲ್ಲ?
ಇನ್ನು ಮೌನದ ಪ್ರಶ್ನೆಗೆ ಬರೋಣ. 1.75 ಲಕ್ಷ ಕೋಟಿಯ 2ಜಿ ಹಗರಣ ಸಂಭವಿಸಿದಾಗ 16 ತಿಂಗಳು ಮನಮೋಹನ್ ಸಿಂಗ್ ಮಾತನಾಡಲೇ ಇಲ್ಲ. 1.86 ಲಕ್ಷ ಕೋಟಿಯ ಕಲ್ಲಿದ್ದಲು ಹಗರಣ ನಡೆದಾಗ 8 ತಿಂಗಳು ಬಾಯಿ ತೆರೆಯಲೇ ಇಲ್ಲ, ಕಾಮನ್ವೆಲ್ತ್ ಹಗರಣದ ಬಗ್ಗೆಯಂತೂ ತುಟಿ ಬಿಚ್ಚಲೇ ಇಲ್ಲ. ಇಡೀ ದೇಶವನ್ನೇ ರೊಚ್ಚಿಗೇಳಿಸಿದ ನಿರ್ಭಯಾ ಪ್ರಕರಣದ ನಡೆದಾಗ ಮನಮೋಹನ್ ಸಿಂಗ್ ಬಾಯಿ ಬಿಟ್ಟಿದ್ದು ಎಂಟು ದಿನಗಳ ನಂತರ. ದೂರದರ್ಶನಕ್ಕೆ ನೀಡಿದ ಯಾಂತ್ರಿಕ ಹೇಳಿಕೆ ವೇಳೆಯಲ್ಲೂ “ಟೀಕ್ ಹೈ” ಎಂದು ನಿರ್ಭಾವುಕವಾಗಿ ಹೇಳಿ ಸಿಕ್ಕಿಹಾಕಿಕೊಂಡು ಜನರಿಂದ ಛೀಮಾರಿ ಹಾಕಿಸಿಕೊಂಡರು. ಇಂಥ ಸಂದರ್ಭಗಳಲ್ಲೆಲ್ಲ ನೀವು ಎಲ್ಲಿದ್ದಿರಿ ಸೆಹಗಲ್ ಅವರೇ? ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ 2012 ಏಪ್ರಿಲ್‍ನಲ್ಲಿ ಜಂತರ್ ಮಂತರ್ ಎದುರು ಉಪವಾಸ ಕುಳಿತಾಗ ಇಡೀ ದೇಶ ಅವರಿಗೆ ಬೆಂಬಲ ಸೂಚಿಸಿತು. ಆ ಸಂದರ್ಭದಲ್ಲಿ ಬಾಯಿ ಬಿಡದೆ ಕುಳಿತಿದ್ದಿರಲ್ಲಾ ನಿಮ್ಮ ಮೌನದ ಹಿಂದಿದ್ದ ಗುಟ್ಟನ್ನೂ ಸ್ವಲ್ಪ ತಿಳಿಸಿ? ನಿಮ್ಮ ಸಂಬಂಧಿ ಸೋನಿಯಾ ಗಾಂಧಿಯವರಿಗೆ ತೊಂದರೆಯಾಗಬಾರದು ಎಂದು ಸುಮ್ಮನಿದ್ದಿರಾ?
ಸೆಹಗಲ್ ಅವರೇ ಕಲ್ಬುರ್ಗಿ, ಅಕ್ಲಾಕ್, ಧಾಭೋಲ್ಕರ್, ಪನ್ಸಾರೆ ಹತ್ಯೆಗಳು ಎಷ್ಟು ಆತಂಕದಾಯವೋ, ಪಶ್ಚಿಮ ಬಂಗಾಳದ ಬಡ ಅಪ್ರಾಪ್ತ ಹುಡುಗಿ ಟುಕ್‍ಟುಕಿ ಮೊಂಡಲ್‍ಳನ್ನು ಅಪಹರಿಸಿ ಅತ್ಯಾಚಾರಗೈದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಶಾಂತ್ ಪೂಜಾರಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಮುಸಲ್ಮಾನ ಮೂಲಭೂತವೂ ಅಷ್ಟೇ ಅಪಾಯಕಾರಿ. ಅದಿರಲಿ, ನಿರ್ಭಯಾಳ ಕರುಳನ್ನೇ ಕಿತ್ತುಹಾಕಿದ ಬಾಲಾಪರಾಧಿ ನೀಚನ ಬಗ್ಗೆ ಇಡೀ ದೇಶ ರೊಚ್ಚಿಗೆದ್ದಾಗಲೂ ನೀವು ಮಾತ್ರ ಮಾತನಾಡಲಿಲ್ಲ. ಆತ ಅಲ್ಪಸಂಖ್ಯಾತನೆಂಬ ಕಾರಣಕ್ಕಾ? ಇತ್ತ ಮಂಗಳೂರಿನಲ್ಲಿ ಪಬ್ ದಾಳಿಯಾದರೆ, ಅನ್ಯಧರ್ಮೀಯನೊಂದಿಗೆ ಕಾರಿನಲ್ಲಿ ತೆರಳುವಾಗ ಕೆಳಗಿಸಿದರೆಂಬ ಕಾರಣಕ್ಕೆ ರಾಷ್ಟ್ರೀಯ ಸುದ್ದಿ ಮಾಡುವ, ಅದರೆ ಅದೇ ಮಂಗಳೂರು ಬಳಿ ಮೂವರು ಮುಸಲ್ಮಾನ ಮಹಿಳೆಯರು ಸಮುದ್ರದಲ್ಲಿ ಮುಳುಗುತ್ತಿರುವಾಗ ರಕ್ಷಿಸಿದ ಹಿಂದು ಯುವಕರ ಸಾಹಸದ ಬಗ್ಗೆ ಸುದ್ದಿಯನ್ನೇ ಮಾಡದ ಇಂಗ್ಲಿಷ್ ಮಾಧ್ಯಮಗಳು ನಿಮಗಿಂತ ಅಪಾಯಕಾರಿ. ಈ ಮಧ್ಯೆ, 8ಕ್ಕೂ ಹೆಚ್ಚು ಜನ ಸಾಹಿತಿಗಳು ಧೂಳು ಹಿಡಿದ ಸಾಹಿತ್ಯ ಅಕಾಡೆಮಿಯ ಫಲಕವನ್ನು ಹಿಂದಿರುಗಿಸಿ ನಿಮ್ಮಂಥೆಯೇ 5 ನಿಮಿಷದ ಪ್ರಚಾರಕ್ಕೆ ಮಾರುಹೋಗಿದ್ದಾರೆ. ಅವರಲ್ಲಿ ನಮ್ಮ ಕರ್ನಾಟಕದ ಕಿಲಾಡಿ ಸಾಹಿತಿ ಕುಂ. ವೀರಭದ್ರಪ್ಪನವರೂ ಒಬ್ಬರು. ಕಲ್ಬುರ್ಗಿ ಹತ್ಯೆ ಬಗ್ಗೆ ಅವರಲ್ಲಿ ಸಾತ್ವಿಕ ಆಕ್ರೋಶ ಇರುವುದೇ ಆಗಿದ್ದರೆ ರಾಜ್ಯದ ಸರ್ಕಾರ ನೀಡಿರುವ 7 ಲಕ್ಷದ ನೃಪತುಂಗ ಪ್ರಶಸ್ತಿಯನ್ನು ಹಿಂದಿರುಗಿಸಬಹುದಿತ್ತು! ಅದನ್ನು ಭದ್ರವಾಗಿಟ್ಟುಕೊಂಡು, 50 ಸಾವಿರದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಾಪಸ್ಸು ಮಾಡಿದ್ದೇಕೆ? ಕಲ್ಬುರ್ಗಿ ಹತ್ಯೆಗೆ ಹೊಣೆ ಸಿದ್ದರಾಮಯ್ಯನವರೋ ಅಥವಾ ಮೋದಿಯವರೋ? ನಮ್ಮ ಕನ್ನಡ ಸಾಹಿತಿ ಮಹಾಶಯರು ಇತ್ತೀಚೆಗಂತೂ ನಗೆಪಾಟಲಿನ ವಸ್ತುವಾಗಿದ್ದಾರೆ. ಮಹಾಭಾರತದಲ್ಲಿ ಕೌರ್ಯವಿದೆ ಎನ್ನುತ್ತಾರೆ ಪ್ರೊಫೆಸರ್ ಮಾಲಗತ್ತಿ. ಕಬ್ಬು ಬೆಳೆಗಾರ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡರೆ ಆತ ಕುಡಿದು ಸತ್ತ ಎನ್ನುವ, 550ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಹಾಸಿಗೆ ಹೊದಿಕೆ ಬಗ್ಗೆ ಚಿಂತಿತರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಧೋರಣೆಯಲ್ಲಿರುವ ಕ್ರೌರ್ಯ ಈ ಸಾಹಿತಿಗಳಿಗೆ ಕಾಣುವುದಿಲ್ಲವೆ? ಸಬ್‍ಇನ್‍ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಹತ್ಯೆಯಾದಾಗ, ಮೊನ್ನೆ ಜಗದೀಶ್ ಪ್ರಾಣ ಕಳೆದುಕೊಂಡಾಗ ರಾಜ್ಯದಲ್ಲಿ ಕಾನೂನು ಪಾಲಕರಿಗೇ ರಕ್ಷಣೆ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿರುವುದರ ಬಗ್ಗೆ ಧ್ವನಿಯೆತ್ತದ ಹಾಗೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಂವೇಧನೆ ತೋರದ ನಮ್ಮ ಸಾಹಿತಿಗಳ ಸೋಗಲಾಡಿತನ ಜನಕ್ಕೆ ಅರ್ಥವಾಗಿದೆ, ಸಾಕು ನಿಲ್ಲಿಸಿ.

Sogaladi

Comments are closed.