Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ !

ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ !

ಸಂಕಷ್ಟಕ್ಕೆಲ್ಲ ‘ಸಂಘ’ ಕಾರಣ, ಇದೇ ಸೆಕ್ಯುಲರ್ ರಾಜಕಾರಣ !

ಮೋದಿ ಸರಕಾರದಿಂದಾಗುತ್ತಿರುವ ಜನಪರ ಕೆಲಸಗಳು ಚರ್ಚೆಯ ವಿಷಯವಾಗಿ ಮೆಚ್ಚುಗೆ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಮಾಧ್ಯಮಗಳ ಮೂಲಕ ನಕಾರಾತ್ಮಕ ಪ್ರಚಾರಾಂದೋಲನ ನಡೆಯುತ್ತಿದೆ. ಸುಮಾರು ಹದಿನಾಲ್ಕುವರೆ ಸಾವಿರ ಎನ್‌ಜಿಓಗಳಿಗೆ ಹರಿದು ಬರುತ್ತಿದ್ದ ದೇಣಿಗೆಗೆ ಕತ್ತರಿ ಹಾಕಿರುವುದರಿಂದ ಕುಪಿತಗೊಂಡಿರುವವರ ಹುನ್ನಾರವಿದು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಅದು 1998, ಸೆಪ್ಟೆಂಬರ್ 23. ಮಧ್ಯಪ್ರದೇಶದ ಜಬುಲಾ ಜಿಲ್ಲೆಯ ನವಪರಾ ಗ್ರಾಮದಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಅತ್ಯಾಚಾರ ನಡೆದುಹೋಯಿತು. ಆಗ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್. ಕಾನೂನು ಸುವ್ಯವಸ್ಥೆ ಕಾಪಾಡು­ವುದು ರಾಜ್ಯ ಸರ್ಕಾರದ ಜವಾಬ್ದಾರಿ. ಇಷ್ಟಾಗಿಯೂ ಮಾಧ್ಯಮಗಳು ತಮ್ಮ ದಾಳಿಯ ಗುರಿಯನ್ನು ಕೇಂದ್ರ ಸರಕಾರದತ್ತ ತಿರುಗಿಸಿ­ದವು. ಸಂಘಪರಿವಾರ, ಅದರಲ್ಲೂ ಸಂಘದ ಅಂಗಸಂಸ್ಥೆಯಾದ ವಿಶ್ವಹಿಂದು ಪರಿಷತ್ತನ್ನು ಹಿಗ್ಗಾಮುಗ್ಗಾ ಜಾಡಿಸಿದರು. ವಾಜಪೇಯಿ ಸರಕಾರದ ಇಮೇಜಿಗೆ ಹೊಡೆತ ಕೊಡಲು ಆರಂಭಿಸಿ­ದರು. ಅತ್ಯಾಚಾರದಂಥ ಹೀನಕೃತ್ಯವನ್ನು ಸಮಾಜ­ದಲ್ಲಿ ಯಾರೂ ಒಪ್ಪುವುದಿಲ್ಲ. ಇಂಥ ನೀಚ ಕೆಲಸವನ್ನು ಸಂಘಪರಿವಾರ­ದವರು ಎಸಗಿದ್ದಾರೆ ಎಂದು ಬೊಬ್ಬಿರಿದು ವರ್ಚಸ್ಸಿಗೇ ಧಕ್ಕೆ ತರಲು ಪ್ರಯತ್ನಿಸಿದರು. ಈ ನಡುವೆ “Communal outrages in M.P.” ಎಂಬ ವಿಶೇಷ ವರದಿಯನ್ನು ಪ್ರಕಟಿಸಿದ ಫ್ರಂಟ್‌ಲೈನ್ ಮ್ಯಾಗಝಿನ್, ಕಾಂಗ್ರೆಸ್ ನಾಯಕರ ಅರೋಪವನ್ನೇ ಹೂರಣವಾಗಿಟ್ಟು­ಕೊಂಡು ಸಂಘಪರಿವಾರ­ವನ್ನು ಕಟಕಟೆಗೆ ತಂದು ನಿಲ್ಲಿಸಿತು. ಸತತ ಒಂದೂವರೆ ತಿಂಗಳ ಕಾಲ ಜಬುವಾ ಅತ್ಯಾಚಾರವ­ನ್ನಿಟ್ಟುಕೊಂಡು ಆರೆಸ್ಸೆಸ್‌ನ ಚಾರಿತ್ರ್ಯವಧೆ ನಡೆಯಿತು. ಅಟಲ್ ಸರ್ಕಾರವನ್ನು ಮುಜುಗರ­ಕ್ಕೀ­ಡು ಮಾಡುವ ವ್ಯವಸ್ಥಿತ ಷಡ್ಯಂತ್ರ ಮುಂದು­ವರಿಯಿತು. ರಾಷ್ಟ್ರೀಯ ಹಾಗೂ ಅಂತಾ­ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರತಿಭಟನೆಗಳನ್ನು ಮಾಡಿ ಅಟಲ್ ಮೇಲೆ ಒತ್ತಡ ಹೇರಿದರು.

ಅದರೆ ಆ ದಿನ ನಿಜಕ್ಕೂ ನಡೆದಿದ್ದೇನು? ಪ್ರೀತಿ ಶರನ್ ಎಂಬ ಚರ್ಚ್ ಹಾಗೂ ದವಾಖಾನೆಗೆ ಔಷಧ ಬೇಕೆಂದು ಗುಂಪೊಂದು ಬಂದಿದ್ದು ನಿಜ, ಔಷಧದ ನೆಪದಲ್ಲಿ ಒಳನುಗ್ಗಿ ಕ್ರೈಸ್ತ ಸನ್ಯಾಸಿನಿ­ಯರ ಮೇಲೆ ಅತ್ಯಾಚಾರವೆಸಗಿದ್ದೂ ನಿಜ. ಆದರೆ ಅವರ‍್ಯಾರು? ಸಂಘಪರಿವಾರದವರೇ? ವಿಶ್ವಹಿಂದೂ ಪರಿಷತ್‌ನವರೇ? ಅಥವಾ ಕನಿಷ್ಠ ಹಿಂದುಗಳೇ? ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಬೇಕೆಂದು ಅಟಲ್ ಸರ್ಕಾರ ನೀಡಿದ ಸೂಚನೆ ಮೇರೆಗೆ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ತನಿಖೆಗೆ ಆದೇಶಿಸಿದರು. 24 ಜನರ ಬಂಧನವಾಯಿತು. ಕೇಂದ್ರ ಸರಕಾರಕ್ಕೆ ಸೇರಿದ ಪ್ರೆಸ್ ಇನರ್ಮೇಶನ್ ಬ್ಯುರೋ ಎಲ್ಲ 24 ಜನರ ಹೆಸರನ್ನು ಅವರ ಧರ್ಮದೊಂದಿಗೆ ಮಾಧ್ಯಮ­ಗಳ ಮುಂದಿಟ್ಟಿತು. ಆದರೆ ಮರುದಿನ ಅತ್ಯಾಚಾರಿಗಳ ಧರ್ಮ ಯಾವುದು ಎಂಬುದನ್ನು ಯಾವೊಂದು ಪತ್ರಿಕೆಯೂ ಪ್ರಕಟಿ­ಸಲಿಲ್ಲ! ಏಕೆಂದರೆ… 24 ಅತ್ಯಾಚಾರಿಗಳಲ್ಲಿ 12 ಜನ ಕ್ರೈಸ್ತರೇ ಆಗಿದ್ದರು!! ಉಳಿದವರು ಇನ್ನೂ ಮತಾಂತರಗೊಳ್ಳಬೇಕಿದ್ದ ಬುಡಕಟ್ಟು ಜನಾಂಗದವರಾಗಿದ್ದರು! ಹೀಗಿದ್ದಾಗ್ಯೂ ಮಾಧ್ಯಮ­­­­ಗಳು ತಮ್ಮ ಎಂದಿನ ಪ್ರವೃತ್ತಿಯನ್ನು ಬಿಡಲಿಲ್ಲ.

ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಅದರ ಹಿಂದೆ ಸಂಘಪರಿವಾರದ ಕೈವಾಡವಿದೆ ಎಂದು ಅನುಮಾನಿಸಲು, ದೂರಲು ಆರಂಭಿಸಿದವು. ಈ ನಡುವೆ 2000, ಜೂನ್ 8ರಂದು ಗುಲ್ಬರ್ಗ ಜಿಲ್ಲೆಯ ವಾಡಿ ಬಳಿಯ ಸೇಂಟ್ ಆನ್ ಚರ್ಚ್‌ನಲ್ಲಿ 2 ಕಚ್ಚಾ ಬಾಂಬುಗಳು ಸೋಟಗೊಂಡವು. ಚರ್ಚ್ ಹಾನಿಗೊಳಗಾಗಿ ಇಬ್ಬರು ಗಾಯಗೊಂಡರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ.ಕೃಷ್ಣ. ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗರನ್ನು ಹೇಗೆ ಮಾಧ್ಯಮ­ಗಳು ರಕ್ಷಿಸಿದವೋ ಅದರಂತೆಯೇ ಇಲ್ಲೂ ಎಸ್.ಎಂ. ಕೃಷ್ಣರ ಬದಲು ಸಂಘಪರಿವಾರ ಹಾಗೂ ಅಟಲ್ ಸರ್ಕಾರವನ್ನು ಪ್ರಶ್ನಿಸಲಾರಂಭಿದವು. ಅದರ ಬೆನ್ನಲ್ಲೇ 2000, ಜುಲೈ 8ರಂದು ಹುಬ್ಬಳ್ಳಿಯ ಸೇಂಟ್ ಜಾನ್ ಲೂಥರ್ನ್ ಚರ್ಚ್‌ನಲ್ಲಿ ಬಾಂಬ್ ಸ್ಪೋಟವಾಯಿತು . ಮರುದಿನ ಬೆಂಗಳೂರಿನ ಜಗಜೀವನ್‌ರಾಮ್‌ನಗರದ ಸೇಂಟ್ ಪೌಲ್ ಚರ್ಚ್‌ನಲ್ಲಿ ಬಾಂಬ್ ಸ್ಪೋಟಗೊಂಡವು. ಹೀಗೆ ಒಂದು ಕಡೆ ಭಯೋತ್ಪಾದಕರು ಸರಣಿ

ಚರ್ಚ್ ದಾಳಿ ಮಾಡಿದರೆ, ಇನ್ನೊಂದೆಡೆ ಮಾಧ್ಯಮಗಳು ಆರೆಸ್ಸೆಸ್ ಮೇಲೆ ಸತತ ದಾಳಿ ಮಾಡಲಾರಂಭಿಸಿದವು.

ಆದರೆ ಸತ್ಯ ಬೇರೆಯೇ ಆಗಿತ್ತು! ಅದೃಷ್ಟವಶಾತ್, ಮತ್ತೊಂದು ಚರ್ಚನ್ನು ಸೋಟಿಸಲು ಬಾಂಬ್ ಹೊತ್ತೊಯ್ಯು­ತ್ತಿದ್ದ ಮಾರುತಿ ವ್ಯಾನ್ ಮಾರ್ಗಮಧ್ಯದಲ್ಲೇ ಸೋಟ­ಗೊಂಡಿತು. ಜಾಕಿರ್ ಹಾಗೂ ಸಿದ್ದಿಕಿ ಎಂಬವರು ಸ್ಥಳದಲ್ಲೇ ಸತ್ತರೆ, ಎಸ್.ಎಂ. ಇಬ್ರಾಹಿಂ ಎಂಬಾತ ಗಾಯಗೊಂಡು ಪೊಲೀಸರ ಸೆರೆಯಾದ. ಆಗ ಸತ್ಯಹೊರಬಿತ್ತು. ಮೂರೂಚರ್ಚ್ ದಾಳಿಗಳ ಹಿಂದಿದ್ದುದು ಯಾರ ಕೈವಾಡ ಎಂಬುದು ಬೆಳಕಿಗೆ ಬಂತು, ಅದು ಇಸ್ಲಾಮಿಕ್ ಸಂಘಟನೆ ದೀನ್‌ದಾರ್ ಅಂಜುಮಾನ್ ಆಗಿತ್ತು! ಬಂಧಿತರಾದ 45 ಆರೋಪಿಗಳೂ ಮುಸಲ್ಮಾನರಾಗಿದ್ದರು! ಆರೆಸ್ಸೆಸ್‌ಗೂ ಈ ಘಟನೆಗಳಿಗೂ ಯಾವ ಸಂಬಂಧವೂ ಇರಲಿಲ್ಲ. ಸಂಬಂಧವಿದ್ದಿದ್ದು ದೀನ್‌ದಾರ್‌ಗೂ ಹಾಗೂ ಪಾಕಿಸ್ತಾನದ ಐಎಸ್‌ಐಗೂ ಆಗಿತ್ತು! ಏಕಾಗಿ ಐಎಸ್‌ಐ ದೀನ್‌ದಾರನ್ನು ಬಳಸಿಕೊಂಡು ಚರ್ಚ್ ದಾಳಿ ಮಾಡಿತ್ತು ಅಂದುಕೊಂಡಿರಿ? ಚರ್ಚ್ ದಾಳಿ ಮಾಡಿದರೆ ಸಹಜವಾಗಿಯೇ ಎಲ್ಲರೂ ಸಂಘಪರಿವಾರವನ್ನು ಹಾಗೂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರವನ್ನು ದೋಷಿ ಮಾಡುತ್ತಾರೆ. ಚರ್ಚ್ ದಾಳಿ ಎಂದ ಕೂಡಲೇ ಜಗತ್ತಿನಾದ್ಯಂತ ಇರುವ ಕ್ರೈಸ್ತ ಲಾಬಿಗಳು ಜಾಗೃತಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಪ್ರದರ್ಶನ, ಪ್ರತಿಭಟನೆ ಮಾಡಿ ಭಾರತದಲ್ಲಿ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡುತ್ತದೆ. ಅದು ಬಂಡವಾಳ ಹೂಡಿಕೆದಾರರಿಗೆ ಭಯವನ್ನು ಮೂಡಿಸು­ತ್ತದೆ ಹಾಗೂ ಭಾರತಕ್ಕೆ ಬಂಡವಾಳ ಹರಿದು ಬರುವುದು ನಿಂತು ಅಭಿವೃದ್ಧಿ ಕುಂಠಿತವಾಗುತ್ತದೆ. ಒಂದು ಕಡೆ ಖೋಟಾ ನೋಟು­ಗಳನ್ನು ಹರಿಬಿಟ್ಟು ನಮ್ಮ ಅರ್ಥವ್ಯವಸ್ಥೆಯನ್ನು ಹಾಳುಗೆಡವು­ತ್ತಿದ್ದ ಐಎಸ್‌ಐ, ಮತ್ತೊಂದು ಕಡೆ ಚರ್ಚ್ ದಾಳಿಗಳ ಮೂಲಕ ಭಾರತಕ್ಕೆ ಬಂಡವಾಳ ಹರಿದುಬರುವುದನ್ನು ನಿಲ್ಲಿಸಲು ಮುಂದಾ­­ಗಿತ್ತು! ಇವತ್ತು ಮೋದಿ ಸರ್ಕಾರದ ವಿರುದ್ಧ ನಡೆಯು­ತ್ತಿರುವ ದಾಳಿಯ ಹಿಂದೆ ಕೂಡ ಅಂಥದ್ದೇ ಉದ್ದೇಶ, ಗುರಿ ಹಾಗೂ ಕೆಟ್ಟ ಹೆಸರು ತರುವ ಪ್ರಯತ್ನ ಕಾಣುತ್ತಿಲ್ಲವೆ?!

ವ್ಯತ್ಯಾಸವಿಷ್ಟೇ-ಅಂದು ಐಎಸ್‌ಐ ದೀನ್‌ದಾರನ್ನು ಬಳಸಿ­ಕೊಂಡು ಭಾರತದ ವರ್ಚಸ್ಸನ್ನು ಹಾಳುಗೆಡವಿ, ಬಂಡವಾಳ ಹರಿವನ್ನು ತಡೆಯಲು ಪ್ರಯತ್ನಿಸಿತ್ತು, ಇಂದು ಆ ಕೆಲಸವನ್ನು ಐಎಸ್‌ಐ ಜತೆ ಸೌದಿಯ ವಹಾಬಿಸಂ, ಮಿಷನರಿಗಳು ಹಾಗೂ ಎನ್‌ಜಿಓಗಳ ಕಾಸು, ಕಾಂಗ್ರೆಸ್ಸಿನ ಪ್ರೊಪಗಾಂಡಾ ಮಷಿನರಿ ಮಾಡುತ್ತಿದೆ. 16 ಪಕ್ಷಗಳನ್ನೊಳಗೊಂಡ ವಾಜಪೇಯಿಯವರ ಅನಿಶ್ಚಿತ ಸರ್ಕಾರದ ಮೇಲೆಯೇ ಆ ಪರಿ ದಾಳಿ ನಡೆಯ­ಬಹುದಾದರೆ ಸ್ವಂತಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಟ್ಟಾ ರಾಷ್ಟ್ರವಾದಿ ಮೋದಿಯವರ ಸರಕಾರದ ಮೇಲೆ ಇನ್ನೆಂಥಾ ದಾಳಿ ನಡೆಯಬಹುದು, ಎಷ್ಟೆಲ್ಲಾ ಜನ ಕೈಜೋಡಿಸಬಹುದು ಊಹಿಸಿ? ನಿಮಗೆಲ್ಲ ತಿಳಿದಿರುವಂತೆ 2014, ಮೇ 26ರಂದು ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪದಗ್ರಹಣ ಮಾಡಿ ಒಂದು ತಿಂಗಳು ತುಂಬುವ ಮೊದಲೇ ಅಂದರೆ ಜೂನ್ 24ರಂದು,

“30 days of Narendra Modi Sarkar: Top 10 controversies” ಎಂದು ಖ್ಯಾತ ಇಂಗ್ಲಿಷ್ ದಿನಪತ್ರಿಕೆ­ಯೊಂದು ಅಪಸ್ವರವೆತ್ತಿತು! ಮೋದಿ­ಯವರು ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಮೊದಲ ಸಂಪುಟ ಸಭೆ­ಯಲ್ಲೇ ಕಪ್ಪುಹಣದ ತನಿಖೆಗೆ ಎಸ್‌ಐಟಿ ರಚನೆ ಮಾಡುವ ನಿರ್ಧಾರ ಕೈಗೊಂಡು, ಸುಪ್ರೀಂ ಕೋರ್ಟ್ 2011ರಲ್ಲೇ ಹೇಳಿದ್ದ ಕೆಲಸವನ್ನು ಮೋದಿ ಮೊದಲ ದಿನವೇ ಮಾಡಿದರೂ ಈ ಪತ್ರಿಕೆಗೆ ಮೆಚ್ಚುಗೆಯ ವಿಷಯವಾಗಿ ಕಾಣಲಿಲ್ಲ. ಕಾರ್ಯಾ­ರಂಭದ ಹಂತಕ್ಕೆ ಬಂದಿದ್ದ ಕೂಡನ್‌ಕುಲಂ ಅಣುವಿದ್ಯುತ್ ಸ್ಥಾವರ­ವನ್ನು ಬಂದ್ ಮಾಡಲು ಪ್ರಯತ್ನಿಸುತ್ತಿದ್ದ ಗ್ರೀನ್‌ಪೀಸ್ ಹಾಗೂ ಕ್ರೈಸ್ತ ಎನ್‌ಜಿಓಗಳು ಭಾರತದಲ್ಲಿನ ಆರ್ಥಿಕ ಪ್ರಗತಿ­ಯನ್ನು ತಡೆಯಲು ಪ್ರಯತ್ನಿ­ಸುತ್ತಿವೆ ಎಂಬ ಇಂಟೆಲಿಜೆನ್ಸ್ ಬ್ಯೂರೋದ(ಐಬಿ) ಆತಂಕಕಾರಿ ವರದಿಯನ್ನು ಆಧರಿಸಿ ಈ ಎನ್‌ಜಿಓಗಳ ಮೇಲೆ ನಿರ್ದಾಕ್ಷಿಣ್ಯ­ವಾಗಿ ನಿಷೇಧ ಹೇರಿದರು. ಅದೂ ಈ ಪತ್ರಿಕೆಗೆ ಮೆಚ್ಚುವಂಥ ಕೆಲಸವಾಗಿ ಕಾಣಲಿಲ್ಲ. ಒಂದೊಂದು ಸಣ್ಣಪುಟ್ಟ ದರೋಡೆ, ಕಳ್ಳತನಗಳಿಗೂ ಸಂಘಪರಿವಾರದ ಮೇಲೆ ದೋಷಾರೋಪ ಮಾಡಿ ಮೋದಿ ಸರಕಾರವನ್ನು ಹಣಿಯುವ ಕೆಲಸ ಆರಂಭವಾಯಿತು.

2014, ಡಿಸೆಂಬರ್ 1ರಂದು ರಾಜಧಾನಿ ದೆಹಲಿಯ ದಿಲ್ಷಾದ್ ಗಾರ್ಡನ್‌ನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದಾಗಲೂ ಸಂಘಪರಿವಾರದ ಮೇಲೆ ಅನುಮಾನಿಸಿತು ಮಾಧ್ಯಮ. ಆದರೆ ವಾಸ್ತವದಲ್ಲಿ ಅದು ವಿದ್ಯುತ್ ಸಂಪರ್ಕ ದೋಷದಿಂದಾದ ಘಟನೆಯಾಗಿತ್ತು. 2014, ಡಿಸೆಂಬರ್ 6ರಂದು -ತಿಮಾ ಚರ್ಚ್‌ನ ಮೇಲೆ ಕಲ್ಲು ಬಿದ್ದು ಕಿಟಕಿ ಗಾಜು ಒಡೆಯಿತು. ಆಗಲೂ ಹಿಂದುತ್ವವಾದಿಗಳ ಮೇಲೆ ಗೂಬೆ ಕೂರಿಸಿದರು. ಆದರೆ ಚರ್ಚ್ ಬಳಿ ಆಟವಾ­ಡುತ್ತಿದ್ದ ಮಕ್ಕಳು ಬಿಸಾಡಿದ ಕಲ್ಲು ಅದಾಗಿತ್ತು. ಇವೆಲ್ಲಕ್ಕಿಂತ ಮಾಧ್ಯಮಗಳ ಮೇಲೆ ಅಸಹ್ಯ ಹುಟ್ಟಿಸುವ ಸಂಗತಿಯೆಂದರೆ 2015, ಮಾರ್ಚ್ 14ರಂದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಿಂದ 100 ಕಿ.ಮೀ. ದೂರದಲ್ಲಿರುವ ಕ್ರೈಸ್ತ ಕಾನ್ವೆಂಟ್­­ನಲ್ಲಿ 72 ವರ್ಷದ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ನಡೆಯಿತು. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸು­ವಂಥ ಘಟನೆ ಅದಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ.

ಮಮತಾ ಬ್ಯಾನರ್ಜಿಯ ಮೂಗಿನ ಕೆಳಗೆ ನಡೆಯುವ ಘಟನೆಗಳಿಗೂ ಮೋದಿಯನ್ನು ದೂರುವುದು ಎಷ್ಟರಮಟ್ಟಿಗೆ ಸರಿ? ಮೋದಿ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ದೂರಿದರು. ಪಂಜಾಬ್ ಹಾಗೂ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಜೂಲಿಯಸ್ ರಿಬೆರೋ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಮಾರಣಹೋಮವೇ ಆರಂಭವಾಗಿದೆಯೆಂಬಂತೆ ಬೊಬ್ಬೆ ಹಾಕಿದರು. ವ್ಯಾಟಿಕನ್‌ನಿಂದ ನಿಯೋಗವೊಂದು ಭಾರತಕ್ಕೆ ಬಂತು. ಕೋಲ್ಕತಾದ ಆರ್ಚ್ ಬಿಶಪ್ ಮಮತಾ ಸರಕಾರಕ್ಕೆ ನಿರ್ದೋಷಿ ಎಂದು ಸರ್ಟಿಫಿಕೆಟ್ ಕೊಟ್ಟು ಮೋದಿ ಸರಕಾರ, ಆರೆಸ್ಸೆಸ್ಸು, ವಿಎಚ್‌ಪಿ, ಘರ್ ವಾಪಸ್ಸಿ ಮೇಲೆ ಗೂಬೆ ಕೂರಿಸಿದರು.

ಕೊನೆಗೆ ಆಗಿದ್ದೇನು? ಆರು ದಿನಗಳ ಸತತ ಮಾಧ್ಯಮಗಳ ದಾಳಿಯ ನಂತರ, ಶಬ್ದಕೋಶದಲ್ಲಿರುವ ಎಲ್ಲ ಕೆಟ್ಟ ಪದಗಳನ್ನು ಸಂಘಪರಿವಾರದ ಮೇಲೆ ಬಳಸಿದ ಮೇಲೆ ಮಮತಾ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತು. ಸಿಬಿಐ ತನಿಖೆಗೆ ಕೇಂದ್ರ ಅಸ್ತು ನೀಡುವ ಮೊದಲೇ ಸಿಐಡಿ ಇಬ್ಬರನ್ನು ಬಂಧಿಸಿತು. ಅವರಲ್ಲಿ ಒಬ್ಬನಾದ ಸಲೀಂ ಶೇಕ್ ಘಟನೆ ನಡೆದಾಗ ತಾನಿದ್ದೆ ಎಂಬುದನ್ನು ಒಪ್ಪಿಕೊಂಡ! ಜೂನ್‌ನಲ್ಲಿ ಬಂಧಿತನಾದ 28 ವರ್ಷದ ನಝರುಲ್ ಇಸ್ಲಾಂ ತಾನೇ ಅತ್ಯಾಚಾರವೆಸಗಿದ್ದು ಎಂಬುದನ್ನು ಒಪ್ಪಿಕೊಂಡ!! ಆದರೆ ಸತತವಾಗಿ ಆರೆಸ್ಸೆಸ್, ಘರ್ ವಾಪಸಿ, ಮೋದಿ ಮೇಲೆ ಟೀಕಾಪ್ರಹಾರ ಮಾಡಿದ್ದ ಮಾಧ್ಯಮಗಳು ನಿಜವಾಗಿಯೂ ಕೃತ್ಯವೆಸಗಿದ್ದವರ ಧರ್ಮವನ್ನಾಗಲಿ, ಬಾಂಗ್ಲಾದೇಶಿ ಅಕ್ರಮ ವಲಸಿಗರೆಂಬುದನ್ನಾಗಲಿ ಹೇಳುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ! ಇತ್ತ ಇದು ಮಾನವತೆಯ ಮೇಲಿನ ಆಕ್ರಮಣ ಎಂದಿದ್ದ ಮಮತಾ ಸಂಪುಟದಲ್ಲಿ ಸಚಿವರಾಗಿರುವ ಫಿರ್ಹಾದ್ ಹಕೀಮ್, ಕೃತ್ಯವೆಸಗಿದವರು ಸ್ವಧರ್ಮೀಯರೇ ಎಂದು ತಿಳಿದ ಕೂಡಲೇ ಮೌನಕ್ಕೆ ಶರಣಾದರೆ, ಸಂಘಪರಿವಾರವನ್ನು ದೂರಿದ್ದ ಆರ್ಚ್ ಬಿಶಪ್ ಮತ್ತೆ ಮುಖ ತೋರಲೇ ಇಲ್ಲ.

ಏಕಾಗಿ ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ ಯೆಂದರೆ… ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವ ಜನಪರ ಕೆಲಸಗಳು ಚರ್ಚೆಯ ವಿಷಯವಾಗಿ ಜನರ ಮೆಚ್ಚುಗೆ ಪಡೆಯಬಾರದು ಎಂಬ ಏಕಮಾತ್ರ ಉದ್ದೇಶದಿಂದ ಮಾಧ್ಯಮ­ಗಳ ಮೂಲಕ ನಕಾರಾತ್ಮಕ ಪ್ರಚಾರಾಂದೋಲನ ನಡೆಯುತ್ತಿದೆ. ಆದಕಾರಣವೇ ಸಿದ್ದರಾಮಯ್ಯನವರ ಸುಪರ್ದಿ­­ನಲ್ಲಿದ್ದ ರಾಜ್ಯದಲ್ಲಿ ಕಲ್ಬುರ್ಗಿ ಹತ್ಯೆಯಾದರೂ ಸಂಘಪರಿವಾರ ಹಾಗೂ ಮೋದಿ­ಯವರನ್ನು ದೂರುತ್ತಾರೆ, ಕಾಂಗ್ರೆಸ್ಸಿನ ಪೃಥ್ವಿರಾಜ್ ಚವ್ಹಾಣ್ ಮುಖ್ಯಮಂತ್ರಿಯಾಗಿದ್ದಾಗ ಕೊಲೆಯಾದ ನರೇಂದ್ರ ದಾಭೋಲ್ಕರ್ ಹತ್ಯೆಗೂ ಪರಿವಾರ ಕಾರಣವೆನ್ನುತ್ತಾರೆ. ಇಲ್ಲಿ ಮತ್ತೊಂದು ಆರ್ಥಿಕ ಕಾರಣವೂ ಇದೆ. ನಮ್ಮ ದೇಶದಲ್ಲಿ 400 ಜನರಿಗೊಂದರಂತೆ 24 ಲಕ್ಷ ಎನ್‌ಜಿಓಗಳಿವೆ! ಇವುಗಳಲ್ಲಿ ಬಹಳಷ್ಟು ಎನ್‌ಜಿಓಗಳಿಗೆ ದೇಶವಿರೋಧಿ ಚಟುವಟಿಕೆಗಳಿಗಾಗಿ ಕೋಟ್ಯಂತರರು. ವಿದೇಶಿ ದೇಣಿಗೆ ಹರಿದು ಬರುತ್ತಿದೆ.

ಇಂಥ ಎನ್‌ಜಿಓಗಳ ಜತೆ ಪತ್ರಕರ್ತರು, ಚಳವಳಿಕಾರರು, ಅಂಕಣಕಾರರು, ಮತಾಂತರಿಗಳು ಸಂಪರ್ಕ ಹೊಂದಿದ್ದು ವಿದೇಶಿ ದೇಣಿಗೆಯ ಫಲಾನುಭವಿಗಳಾಗಿದ್ದಾರೆ. ನರೇಂದ್ರ ಮೋದಿ­ ಅಧಿಕಾರಕ್ಕೆ ಬಂದ ನಂತರ ಅಪಾರ ದೇಣಿಗೆ ಪಡೆಯುತ್ತಿರುವ ಇಂಥ ಎನ್‌ಜಿಓಗಳನ್ನು FCRA ವ್ಯಾಪ್ತಿಗೆ ತಂದು ಲೆಕ್ಕ ಕೇಳಿದರು ಹಾಗೂ ಲೆಕ್ಕಕೊಡುವವರೆಗೂ ನಿಷೇಧ ಹೇರಿದರು. ಸುಮಾರು ಹದಿನಾಲ್ಕುವರೆ ಸಾವಿರ ಎನ್‌ಜಿಓಗಳಿಗೆ ಹರಿದು ಬರುತ್ತಿದ್ದ ದೊಡ್ಡ ಮಟ್ಟದ ದೇಣಿಗೆಗೆ ಕತ್ತರಿ ಹಾಕಿರುವುದರಿಂದ ಕುಪಿತಗೊಂಡಿರುವವರು ನಡೆಸುತ್ತಿರುವ ನಕಾರಾತ್ಮಕ ಪ್ರಚಾರಾಂದೋಲನವೇ ಇದಾಗಿದೆ.

ಇದನ್ನೆಲ್ಲ ಗಮನಿಸಿದಾಗ “A nation can survive its fools, and even the ambitious. But it cannot survive treason from within”,ಅಂದರೆ ಒಂದು ದೇಶ ತನ್ನಲ್ಲಿರುವ ಮೂರ್ಖರು, ಮಹತ್ವಾಕಾಂಕ್ಷಿ­ಗಳನ್ನು ಜೀರ್ಣಿಸಿಕೊಳ್ಳಬಹುದು, ಆದರೆ ಒಳಶತ್ರುಗಳಿದ್ದರೆ ಯಾವ ದೇಶವೂ ಉಳಿಯುವುದಿಲ್ಲ ಎಂಬ ಸಿಸೆರೋ ಮಾತು ನೆನಪಾಗುತ್ತದೆ ಅಲ್ಲವೆ?27789

Comments are closed.