Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ!

ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ!

ಮರೆಗುಳಿ ಮನಸಿನವರಲ್ಲೂ ‘ರಾಯ’ರ ಆರಾಧನೆ!

ಮಣಿಶಂಕರ್ ಐಯ್ಯರ್‌ಗೆ ಸದಾ ಒಂದು ಚಾಳಿ ಇದ್ದೇ ಇದೆ. ಮೋದಿಯನ್ನು ವಿರೋಧಿಸುವುದು. ಲೋಕಸಭೆ ಚುನಾವಣೆಗೆ ಮುನ್ನ ಮಣಿಶಂಕರ್ ಐಯ್ಯರ್‌ರನ್ನು ಎಬಿಪಿ ನ್ಯೂಸ್ ಮಾತನಾಡಿಸಿದಾಗ, ‘ಮೋದಿ ಪ್ರಧಾನಿಯಾಗುವುದೇ ಇಲ್ಲ’ ಎಂದು ಬುರುಡೆ ಭವಿಷ್ಯ ನುಡಿದಿದ್ದರು. ಐಯ್ಯರ್ ಸಾಹೇಬರ ಹೆಸರು ಸುದ್ದಿಯಲ್ಲಿದ್ದದ್ದು ಇಂಥದ್ದೇ ಮಾತುಗಳಿಂದ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲೊಬ್ಬರಾಗಿದ್ದ ಪಿವಿ ನರಸಿಂಹ ರಾವ್ ಬಗ್ಗೆ ಲೇಖನ ಬರೆದಿದ್ದಾರೆ. ಅದರಲ್ಲಿ ರಾವ್ ‘ಭಾರತ ಹಿಂದೂ ರಾಷ್ಟ್ರ’ ಎಂದು ತಮಗೆ ಹೇಳಿದ್ದರು ಎಂದು ಬರೆದು, ಅದೇ ದೊಡ್ಡ ಸುದ್ದಿ ಮಾಡಿದ್ದಾರೆ.

ಎನ್‌ಡಿಟಿವಿ ಜಾಲತಾಣದಲ್ಲಿ ಪ್ರಕಟಗೊಂಡ ಈ ಲೇಖನವನ್ನು ನಾವು ಓದಿ ಮುಗಿಸುವ ಹೊತ್ತಿಗೆ, ಐಯ್ಯರ್ ಮತ್ತೆ ತಮ್ಮ ಚಾಳಿ ಮುಂದುವರಿಸಿದರಾ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ, ಐಯ್ಯರ್ ಅವರು ನರಸಿಂಹ ರಾವ್‌ರ ಆಡಳಿತ ವೈಖರಿಯನ್ನು ನೋಡುವುದು ದೂರದ ಮಾತು, ಕೇವಲ ಸರಿಯಾಗಿ ಓದಿ ತಿಳಿದುಕೊಂಡಿದ್ದರೂ ಇಂಥದ್ದೊಂದು ಲೇಖನ ಬರೆಯುವ ಪ್ರಯತ್ನ ಮಾಡುತ್ತಿರಲಿಲ್ಲವೆನೋ. ಮಣಿಶಂಕರ್ ಅಯ್ಯರ್ ಅವರೇ, ನಿಮಗೆ ರಾವ್ ಬಗ್ಗೆ ತಿಳಿದಿಲ್ಲವೆಂದರೆ, ತಿಳಿದುಕೊಳ್ಳಲು ಪ್ರಯತ್ನಿಸಿ. ವಿಷಯವೇ ಗೊತ್ತಿಲ್ಲದೇ ಲೇಖನ ಬರೆಯುವುದು ತಪ್ಪಾಗಬಹುದು.

ಅವರು ಸಾಮಾನ್ಯ ಪ್ರಧಾನಿಯಲ್ಲ…. ಅವರ ಬಗ್ಗೆ ತಿಳಿದುಕೊಳ್ಳಿ, ನಂತರ ಅವರ ಆಡಳಿತ ವೈಖರಿಯ ಬಗ್ಗೆ ಹೇಳುತ್ತೇನೆ.

ಪಾಮೂಲಪರ್ತಿ ವೆಂಕಟ ನರಸಿಂಹರಾವ್!
ಹೌದು, ಅದೇ ಮಾಜಿ ಪ್ರಧಾನಿ ದಿವಂಗತ ಪಿ.ವಿ.ಎನ್ ಹೆಸರು. ಮೊನ್ನೆ ಜೂನ್ 28ರಂದು ನರಸಿಂಹರಾವ್ ಅವರ ಜನ್ಮದಿನವಿತ್ತು.ಇಷ್ಟು ವರ್ಷ ಆರ್ಥಿಕ ಅಭಿವೃದ್ಧಿಯ ವಿಷಯ ಬಂದಾಗ ರಾವ್ ಅವರ ಬಗ್ಗೆ ಸಣ್ಣ ಉಲ್ಲೇಖವನ್ನೂ  ಮಾಡದಿದ್ದ, ಸೋನಿಯಾ ಗಾಂಧಿಯವರಿಗಷ್ಟೇ ಕಿರೀಟ ತೊಡಿಸುತ್ತಿದ್ದ ಇಂಗ್ಲಿಷ್ ಮಾಧ್ಯಮಗಳು ಈ ಸಲ ರಾವ್ ಜನ್ಮದಿನವನ್ನು ನೆನಪಿಸಿಕೊಂಡು ಲೇಖನ ಬರೆದಿವೆ, ವರದಿ ಪ್ರಕಟಿಸಿವೆ. ಇದೇನೇ ಇರಲಿ, ಅರವಿಂದ್ ಪಾನಗರಿಯಾ ಅವರು ಬರೆದಿರುವ ‘ A ForgottenRevolutionary ‘ ಲೇಖನ ನಿಜಕ್ಕೂ ಸ್ತುತ್ಯರ್ಹ. ಆ ಲೇಖನದ ಬೆನ್ನ ಇನ್ನೂ ಕೆಲವರು ರಾವ್ ಅವರನ್ನು ಶ್ಲಾಘಿಸಿದರೆ ಸೋನಿಯಾ ಗಾಂಧಿಯವರ ಭಟ್ಟಂಗಿ ಅರ್ಜುನ್ ಸಿಂಗ್ ಮಾತ್ರ ರಾವ್ ಬಗ್ಗೆ ತಮ್ಮ ಪುಸ್ತಕದಲ್ಲಿ ಅತ್ಯಂತ ಹೀನಾಯವಾಗಿ ಬರೆದಿದ್ದಾರೆ. ಇದೇ ನಾಲ್ಕು ಪುಸ್ತಕಗಳನ್ನು ಓದಿ ಐಯ್ಯರ್ ಲೇಖನ ಬರೆದಿರಬಹುದು. ಆದರೆ ಈ ದೇಶ ಇಂದು ಒಂದು ಆಧುನಿಕ ರಾಷ್ಟ್ರವಾಗಿ ಹೊರಹೊಮ್ಮಿದ್ದರೆ ಅದಕ್ಕೆ ರಾವ್ ಕಾರಣ.

ಏಕೆ ಗೊತ್ತಾ?
1991ರಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. ಚಂದ್ರಶೇಖರ್ ಸರಕಾರ ಇದ್ದ ಚಿನ್ನವನ್ನೂ ಅಡವಿಟ್ಟಿತ್ತು. ಅರೆಬರೆ ಬಜೆಟ್ ಮಂಡಿಸಿದ್ದ ವಿತ್ತ ಸಚಿವ ಯಶವಂತ್ ಸಿನ್ಹಾ, ದಿಕ್ಕು ಕಾಣದೆ ಕೈಚೆಲ್ಲಿದ್ದರು. ದೇಶದ ಖಜಾನೆ ಬರಿದಾಗಿತ್ತು. ವಿದೇಶಿ ವಿನಿಮಯ ಶೂನ್ಯಕ್ಕಿಳಿದಿತ್ತು. ರಾಜಕೀಯ ಅಸ್ಥಿರತೆ ತಲೆದೋರಿ ಮತ್ತೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು.

1991, ಜೂನ್ 21
ರಾಜಕೀಯ ನಿವೃತ್ತಿ ಯಾಚಿಸಿದ್ದ ನರಸಿಂಹರಾವ್, ಅಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜಕೀಯ ಜ್ಞಾನವೇ ಇಲ್ಲದ ಮನಮೋಹನ್ ಸಿಂಗ್ ನೂತನ ವಿತ್ತ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆಘಾತಕಾರಿ ಸಂಗತಿಯೆಂದರೆ, ಹಣದುಬ್ಬರ (Inflation)  ಪ್ರಮಾಣ ಶೇ. 17ಕ್ಕೇರಿತ್ತು.
ವಿದೇಶಿಸಾಲ 50 ಶತಕೋಟಿ ಪೌಂಡ್‌ಗಳಿಗೇರಿತ್ತು. ಇನ್ನೆರಡು ವಾರಗಳಲ್ಲಿ ಭಾರತ ಡಿಫಾಲ್ಟರ್ ಆಗಲಿತ್ತು! ಅದುವರೆಗೂ, ಅವಧಿಗಿಂತ ಮುಂಚೆಯೇ ಸಾಲ ಮರುಪಾವತಿ ಮಾಡುತ್ತಿದ್ದ ಭಾರತ, ಡಿಫಾಲ್ಟರ್ (ಸಾಲ ಮರುಪಾವತಿ ಮಾಡಲು ವಿಫಲವಾಗುವುದು) ಆಗುವುದೆಂದರೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಗೆ, ಘನತೆ, ಅಂತಾರಾಷ್ಟ್ರೀಯ ಸ್ಥಾನಮಾನ, ಮರ್ಯಾದೆ ಮಣ್ಣಾದಂತೆ. ಇಂತಹ ಪರಿಸ್ಥಿತಿಯಲ್ಲಿ ನರಸಿಂಹರಾವ್ ನೇತೃತ್ವದ ನೂತನ ಸರಕಾರ ಅಧಿಕಾರ ವಹಿಸಿಕೊಂಡಿತ್ತು. ಆದರೆ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿರಲಿಲ್ಲ. ಒಂದೆಡೆ ವಿಶ್ವಾಸಮತ ಯಾಚಿಸಿ ಗಳಿಸಬೇಕಾದ ಅನಿವಾರ್ಯತೆ. ಇನ್ನೊಂದೆಡೆ ತುರ್ತು ಅಗತ್ಯಕ್ಕಾಗಿ ಕೇವಲ 100 ಕೋಟಿ ರು. ಸಾಲ ನೀಡಲೂ ವಿಶ್ವಬ್ಯಾಂಕ್ ಒಪ್ಪುತ್ತಿಲ್ಲ. ಇಪ್ಪತ್ತೇಳು ವರ್ಷಗಳ ರಾಜಕೀಯ ಅನುಭವ ಹೊಂದಿದ್ದರೂ ನರಸಿಂಹರಾವ್ ಅಂದು, ತಮ್ಮ ಜೀವಮಾನದಲ್ಲಿಯೇ ಅತಿದೊಡ್ಡ ಅಗ್ನಿಪರೀಕ್ಷೆ ಎದುರಿಸಿದ್ದರು.

1991, ಜುಲೈ 2
ನರಸಿಂಹರಾವ್ ಅಧಿಕಾರ ವಹಿಸಿಕೊಂಡು ಕೇವಲ ಹತ್ತು ದಿನಗಳಾಗಿದ್ದವು. ಆದರೂ ಸರಕಾರವೇ ಎಗರಿಹೋಗ ಬಹುದಾದಂಥ ನಿರ್ಧಾರವನ್ನು ಕೈಗೊಂಡರು. ಅದೇ  Money depreciation!  ನಮ್ಮ ರುಪಾಯಿ ಡಾಲರ್ ಎದುರು 9.5 ಪರ್ಸೆಂಟ್ ಕುಸಿಯಲು ಬಿಟ್ಟರು. ಆ ಮೂಲಕ ನಮ್ಮ ವಿದೇಶಿ ವಿನಿಮಯ ಮೀಸಲು ಪ್ರಮಾಣವನ್ನು ಹೆಚ್ಚಿಸುವ ಮಹತ್ವದ ಕ್ರಮಗಳಿಗೆ ಮುನ್ನುಡಿ ಬರೆದರು.

ಇಷ್ಟಾದರೂ ನಿಶ್ಚಿಂತೆಯಿಂದ ನಿದ್ರಿಸುವಂತಿರಲಿಲ್ಲ!ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳೆಂಬ ಬಿಳಿ ಆನೆಗಳು ಮತ್ತು ಭ್ರಷ್ಟ ನೌಕರಶಾಹಿಯಿಂದಾಗಿ ದೇಶದ ಅರ್ಥವ್ಯವಸ್ಥೆ ಊನಗೊಂಡಿತ್ತು.
ಕಾಯಕಲ್ಪ ನೀಡಬೇಕಾದ ಅನಿವಾರ್ಯ ಎದುರಾಗಿತ್ತು. ಜತೆಗೆ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರುವಂತೆ ಒತ್ತಡ ಬಿದ್ದಿತ್ತು. ಅಂದು ರಾವ್ ಬದಲು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದರೂ ಜಾಗತೀಕರಣವನ್ನು ಅಪ್ಪಿಕೊಳ್ಳಲೇಬೇಕಾಗಿತ್ತು. ಆದರೆ ಒಬ್ಬ ಕಾಂಗ್ರೆಸ್ ಪ್ರಧಾನಿಯಾಗಿ, ನೆಹರು ಪ್ರಣೀತ ಅರೆ ಸಮಾಜವಾದವನ್ನು (Quasi Socialism) ತಿಪ್ಪೆಗೆ ಎಸೆಯುವುದು ಸುಲಭದ ಮಾತಾಗಿರಲಿಲ್ಲ. ಜತೆಗೆ ಇಂದಿರಾ ಗಾಂಧಿಯವರು ಹುಟ್ಟುಹಾಕಿದ್ದ ‘ಬಾಬು ಸಂಸ್ಕೃತಿ’ (ಅಧಿಕಾರಶಾಹಿಗಳ ಕಪಿಮುಷ್ಠಿ), ಆಕೆಯ ‘ಫಾಲ್ತು ನ್ಯಾಷನಲಿಸಮ್’, ಎಲ್ಲದಕ್ಕೂ ಅನುಮತಿ ಪಡೆಯಬೇಕಾದ ಲೈಸೆನ್ಸ್‌ರಾಜ್, ಪರ್ಮಿಟ್‌ರಾಜ್‌ಗಳಿಗೆ ತೆರೆಯೆಳೆಯಬೇಕಿತ್ತು.
ನಿಜಕ್ಕೂ ಅದು ಸಂದಿಗ್ಧ ಕಾಲ.
ಸೋವಿಯತ್ ಒಕ್ಕೂಟ ಒಡೆದಿತ್ತು. ಬರ್ಲಿನ್ ಗೋಡೆ ನೆಲಸಮಗೊಂಡಿತ್ತು. ಅದರೊಂದಿಗೆ ಕಮ್ಯುನಿಸಂ ಅರ್ಥ ಕಳೆದುಕೊಂಡಿತ್ತು. ನೆಹರು ಸಮಾಜವಾದ ಕೂಡ ನಿಸ್ಸತ್ವವೆನಿಸಿತ್ತು. ಇದನ್ನರಿತ ರಾವ್, ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದರು.
ಎಡಪಕ್ಷಗಳು ಮತ್ತು ಕಾಂಗ್ರೆಸ್ ಸಹೋದ್ಯೋಗಿಗಳೇ ವಿರೋಧಿಸಿದರೂ, ಕಾಲೆಳೆಯಲು ಪ್ರಯತ್ನಿಸಿದರೂ ಆರ್ಥಿಕ ಉದಾರೀಕರಣದ ಬಗ್ಗೆ ತಾವಿಟ್ಟಿದ್ದ ವಿಶ್ವಾಸ, ಭರವಸೆಗಳನ್ನು ಕಳೆದುಕೊಳ್ಳಲಿಲ್ಲ. ಧೃತಿಗೆಡಲೂ ಇಲ್ಲ. ರಾವ್ ಅವರ ಇಂತಹ ದೃಢಸಂಕಲ್ಪದಿಂದಾಗಿಯೇ ಕುಂಟುತ್ತಾ, ತೆವಳುತ್ತಾ ಸಾಗುತ್ತಿದ್ದ ಭಾರತದ ಅರ್ಥವ್ಯವಸ್ಥೆ, ಜಾಗತಿಕ ಅರ್ಥವ್ಯವಸ್ಥೆಯಾಗಿ ರೂಪುಗೊಂಡಿತು. ಕೋಕ್, ಪೆಪ್ಸಿಗಳಲ್ಲದೆ End Technology (ಉನ್ನತ ತಂತ್ರಜ್ಞಾನ) ಕೂಡ ಬಂತು. Plastic Moneyಯೂ ಆಗಮಿಸಿತು. ಇಂದು ನೀವು ಬಳಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್ ಮೊಬೈಲ್-ಸೆಲ್ ಫೋನ್‌ಗಳ ಆಗಮನಕ್ಕೆ ರಾವ್ ಕಾರಣರಾದರು. ಕ್ಷಣಮಾತ್ರದಲ್ಲಿ ಹಣ ವರ್ಗಾವಣೆ ಮಾಡುವಂತಹ ಬ್ಯಾಂಕಿಂಗ್ ವ್ಯವಸ್ಥೆ, ಇನ್ಶೂರೆನ್ಸ್, ಇಂಟರ್‌ನೆಟ್ ಕಾರು-ಏರ್‌ಲೈನ್ಸ್‌ಗಳ ಹಿಂದೆಯೂ ರಾವ್ ದೂರದೃಷ್ಟಿಯಿದೆ. ಇಲ್ಲದಿದ್ದರೆ ಅಂಬಾಸೆಡರ್, ಮಾರುತಿ, ಯೆಝಡಿ, ಎನ್ಫೀಲ್ಡಗಳೇ ಇಂದಿಗೂ ನಮ್ಮ ರಸ್ತೆಗಳನ್ನು ಅಲಂಕರಿಸಿರುತ್ತಿದ್ದವು! 30ರಿಂದ 40 ಸಾವಿರ ರು. ನೀಡಬೇಕಿದ್ದ ಕಲರ್ ಟಿವಿಗಳು ಇಂದು 7 ಸಾವಿರ ರು.ಗೆ ಲಭ್ಯವಾಗಿದ್ದರೆ, ಒಂದೂವರೆ ಲಕ್ಷವಿದ್ದ ಕಂಪ್ಯೂಟರ್ ಬೆಲೆ 10-15 ಸಾವಿರಕ್ಕಿಳಿದಿದ್ದರೆ ಅದಕ್ಕೆ, ಅಂದು ರಾವ್ ಜಾರಿಗೆ ತಂದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣಗಳೇ ಕಾರಣ.

ಜಾಗತೀಕರಣದಿಂದ ಖಂಡಿತ ನಮ್ಮ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳಾಗಿವೆ. ಆದರೆ ಜಾಗತೀಕರಣದಿಂದ ಬಂದಿದ್ದು ಬರೀ Zero Technologyಎಂಬ ಪೊಳ್ಳುವಾದ ಬೇಡ. Broad band  Technology ಬಂದಿದ್ದೇ ಜಾಗತೀಕರಣದ ನಂತರ.
ಹಾಗಾಗಿಯೇ ನಮ್ಮ ಮನೆಯ ಟೆಲಿಫೋನ್ ಲೈನಿನಲ್ಲಿ ಇಂಟರ್‌ನೆಟ್, ಚಿತ್ರ ಮತ್ತು ಮಾಹಿತಿಗಳ ರವಾನೆ ಮಾಡಬಹುದಾಗಿದೆ. ರೋಗಗ್ರಸ್ತ ಕಾರ್ಖಾನೆಗಳನ್ನು ಆಧುನೀಕರಣಗೊಳಿಸಲು, ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಲು ಸಾಧ್ಯವಾಗಿದೆ. ಡಿಡಿ-1 ಮತ್ತು ಡಿಡಿ-2 ಚಾನೆಲ್ಗಳಲ್ಲದೆ ನೂರಾರು ರಾಷ್ಟ್ರ-ಅಂತಾರಾಷ್ಟ್ರೀಯ ಚಾನೆಲ್‌ಗಳು ಮನೆಯ ಡ್ರಾಯಿಂಗ್ ರೂಮ್‌ಗಳಿಗೆ ಬಂದಿವೆ. ಸುಮಾರು 650 ವಿದೇಶಿ ಕಂಪನಿಗಳು (ಬಹುರಾಷ್ಟ್ರೀಯ) ಭಾರತಕ್ಕೆ ಆಗಮಿಸಲು ಆರ್ಥಿಕ ಉದಾರೀಕರಣವೇ ಕಾರಣ ಎಂದು ದೂರಬಹುದು. ಆದರೆ 1990ರವರೆಗೂ ದೇಶದ ಗಡಿಯಾಚೆಯೂ ವಹಿವಾಟು ಹೊಂದಿದ್ದ ಕಂಪನಿಗಳೆಂದರೆ ಟಾಟಾ, ಬಿರ್ಲಾ ಮಾತ್ರ. ಆದರೆ ಇಂದು ರಿಲಯನ್ಸ್, ಇನ್ಫೋಸಿಸ್ , ವಿಪ್ರೊ, ಸತ್ಯಂ, ಸಿಪ್ಲಾ, ಯಾರನ್‌ಬಾಕ್ಸಿ, ಡಾ. ರೆಡ್ಡೀಸ್‌ಗಳಂಥ ಭಾರತೀಯ ಕಂಪನಿಗಳೂ ಬಹುರಾಷ್ಟ್ರೀಯ ಕಂಪನಿಗಳಾಗಿ ಹೊರಹೊಮ್ಮಿವೆ. ಅಷ್ಟೇಕೆ, ಸರಕಾರಿ ಸ್ವಾಮ್ಯದಲ್ಲಿರುವ ಒಎನ್‌ಜಿಸಿ (ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ)ಯೂ ಬಹುರಾಷ್ಟ್ರೀಯ ಕಂಪನಿಯಾಗಿ ಹೊರಹೊಮ್ಮಿದೆ. ತೋಟಾ ಕೋವಿ ಹಿಡಿದು ತಿರುಗುತ್ತಿದ್ದ ನಮ್ಮ ಸೈನಿಕರ ಕೈಗೆ ಎ.ಕೆ. 47, 56 ರೈ-ಲ್‌ಗಳು ಬಂದಿವೆ. ಭಿಕ್ಷಾಪಾತ್ರೆ ಹಿಡಿದಿದ್ದ ನಮ್ಮ ಕೈಗಳಲ್ಲಿ ನೂರಾರು ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲು ಇದೆ.
ಇಂತಹ ಸಾಮರ್ಥ್ಯ ಹೊಂದಿರುವ ಜಗತ್ತಿನ ಐದನೇ ರಾಷ್ಟ್ರ ಭಾರತವಾಗಿದೆ. ಇಂದು ಚೀನಾ ಜತೆ ನಾವು ಸೂಪರ್‌ಪವರ್ ರಾಷ್ಟ್ರದ ಸ್ಥಾನಕ್ಕೆ ಪೈಪೋಟಿ ನಡೆಸಲು ಸಾಧ್ಯವಾಗಿದ್ದರೆ ಅದಕ್ಕೆ ರಾವ್ ಅವರ ಆರ್ಥಿಕ ಉದಾರೀಕರಣ ನೀತಿಗಳೇ ಕಾರಣ. ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆಯಿಂದ ಮಾತ್ರ ಇಂಥ ಸಾಧನೆ ಸಾಧ್ಯವಾಗಿದೆ.

ಜಾಗತೀಕರಣದಿಂದಾಗಿ ಸರಕಾರಿ ಉದ್ಯೋಗಗಳಿಗೆ ಕತ್ತರಿ ಬಿತ್ತು. ನಿರುದ್ಯೋಗಕ್ಕೆ ಖಾಸಗೀಕರಣವೇ ಕಾರಣ ಎಂದು ರಾವ್ ಅವರನ್ನು ದೂರುವ ಯತ್ನ ನಡೆಯುತ್ತಲೇ ಬಂದಿದೆ. ಆದರೆ ದೂರುವ ಮೊದಲು, 1992ರವರೆಗೂ ಅಂದರೆ, ಸುಮಾರು 45 ವರ್ಷಗಳ ಕಾಲ ಸರಕಾರಿ ಉದ್ಯೋಗಿಗಳು ಯಾವ ದೇಶೋದ್ಧಾರ ಮಾಡಿದರು ಎಂಬುದನ್ನು ಯೋಚಿಸುವುದೊಳಿತು. ಆದರೆ ಖಾಸಗಿ ಕ್ಷೇತ್ರದಲ್ಲಿ ಪ್ರತಿಭೆಗೆ ಮಾತ್ರ ಬೆಲೆ. ಅಲ್ಲಿ ನಿಮ್ಮ ಜ್ಞಾನವೇ ಕರೆನ್ಸಿ (Knowledge is currency)  ಅದನ್ನರಿತಾಗ ದೂರುವುದು ತಪು ತ್ತದೆ.

ಕೇವಲ ಆರ್ಥಿಕ ನೀತಿಗಳು ಮಾತ್ರವಲ್ಲ, ರಾವ್ ರಾಜಕೀಯದಲ್ಲೂ ಅತ್ಯಂತ ಚಾಣಾಕ್ಷ. ಅವರು ಅಧಿಕಾರ ವಹಿಸಿಕೊಂಡಾಗ ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಅಪಾಯದ ಮಟ್ಟ ತಲುಪಿತ್ತು. 17 ಭಾಷೆಗಳನ್ನು ಬಲ್ಲ ಚಂದ್ರಶೇಖರ್ ಅವರಿಂದ ‘ಮೌನಿ ಬಾಬಾ’ ಎಂದೇ ಕರೆಸಿಕೊಳ್ಳುತ್ತಿದ್ದ ರಾವ್‌ಗೆ ಪಂಜಾಬ್‌ನಲ್ಲಿ ಶಾಂತಿ ಸ್ಥಾಪನೆ ಮಾಡುವುದು ಅತಿ ದೊಡ್ಡ ಸವಾಲಾಗಿತ್ತು. ಆದರೂ ಉದ್ದೇಶ ಸಾಧನೆಯ ವಿಧಾನ ಗೊತ್ತಿತ್ತು. ಅರ್ಥವ್ಯವಸ್ಥೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮನಮೋಹನ ಸಿಂಗ್ ಮತ್ತು ಅವರ ಸಹಾಯಕ ಸಚಿವ ಪಿ. ಚಿದಂಬರಂಗೆ ಸಂಪೂರ್ಣ ಸ್ವಾಯತ್ತೆ ನೀಡಿದರೆ, ಬೆಂಕಿಯ ಜ್ವಾಲೆಯಾಗಿದ್ದ ಪಂಜಾಬನ್ನು ಹದ್ದುಬಸ್ತಿನಲ್ಲಿಡಲು ಮುಖ್ಯಮಂತ್ರಿ ಬೇಅಂತ್ ಸಿಂಗ್ ಮತ್ತು ಪೊಲೀಸ್ ವರಿಷ್ಠ ಕೆ.ಪಿ.ಎಸ್. ಗಿಲ್‌ಗೆ ಎಲ್ಲ ಅಧಿಕಾರವನ್ನೂ ನೀಡಿದರು. ಅವರ ಯತ್ನ ಯಶ ಕಂಡಿತು.
ಇತ್ತ, ಇಸ್ಲಾಮಿಕ್ ರಾಷ್ಟ್ರಗಳನ್ನು ತೃಪ್ತಿಪಡಿಸುವ ಸಲುವಾಗಿ ಇಸ್ರೇಲನ್ನು ದೂರವಿಟ್ಟಿರುವುದು ಸರಿಯಲ್ಲ ಎಂದರಿತ ರಾವ್,‘ Look East ‘’ (ಆಗ್ನೇಯ ಏಷ್ಯಾ ರಾಷ್ಟ್ರಗಳ ಜತೆ ಸ್ನೇಹ ಸಂಬಂಧ) ಪಾಲಿಸಿಯನ್ನು ಚಾಲ್ತಿಗೆ ತಂದರು. ಇಸ್ರೇಲ್ ಜತೆ ಮೊಟ್ಟಮೊದಲ ಬಾರಿಗೆ ರಾಜತಾಂತ್ರಿಕ ಸಂಬಂಧ ಆರಂಭಿಸಿದರು. ಚೀನಾಕ್ಕೂ ಸ್ನೇಹಹಸ್ತ ಚಾಚಿದರು. ಗೌಪ್ಯ ಅಣು ಕಾರ್ಯಕ್ರಮವನ್ನೂ ಆರಂಭಿಸಿದರು. ಇವೆಲ್ಲದರ ಮಧ್ಯೆ, ಅರ್ಜುನ್ ಸಿಂಗ್, ಎಸ್.ಬಿ. ಚವ್ಹಾಣ್, ಮಾಧವ್‌ರಾವ್ ಸಿಂಧಿಯಾ, ಎನ್.ಡಿ. ತಿವಾರಿ, ಜಿತೇಂದ್ರ ಪ್ರಸಾದ್‌ರಂಥ ರಾಜಕೀಯ ವೈರಿಗಳನ್ನೂ ಮಟ್ಟಹಾಕಬೇಕಾಗಿ ಬಂತು. ಹವಾಲಾ ಹಗರಣವನ್ನು ಸೃಷ್ಟಿಸಿ ವಿರೋಧಪಕ್ಷಗಳ ಬಾಯಿ ಮುಚ್ಚಿಸಬೇಕಾಗಿ ಬಂತು. ಆದರೂ ಮಂಡಲವೆಂಬ ಮೀಸಲು ಭೂತವನ್ನು ಆರ್ಥಿಕ ಉದಾರೀಕರಣದ ಮೂಲಕ ಸೊಲ್ಲಡಗಿಸಿದ್ದು ಸಾಮಾನ್ಯ ಮಾತಲ್ಲ. ಜತೆಗೆ ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಅವರಿಂದಾಗಿ ತಲೆದೋರಿದ್ದ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸಿದರು.

ನರಸಿಂಹರಾವ್ ಮಹಾನ್ ಚಾಣಾಕ್ಷ ಮನುಷ್ಯ. ಅವರನ್ನು ‘” Indecisive ’ಎಂದು ಟೀಕಿಸಿದಾಗ ನಿರ್ಧಾರ ತೆಗೆದುಕೊಳ್ಳದೇ ಇರುವುದೂ ಕೂಡ ಒಂದು ನಿರ್ಧಾರವೇ ಎನ್ನುತ್ತಿದ್ದರು.
ಅಯೋಧ್ಯೆ ಸಮಸ್ಯೆಗೆ ಯಾವ ಪರಿಹಾರವನ್ನು ಹುಡುಕುತ್ತೀರಿ, ಹಗರಣಗಳ ತನಿಖೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರೆ Law will take its own course of action ಎಂದು ನುಣುಚಿಕೊಳ್ಳುತ್ತಿದ್ದರು.

ಇಂತಹ ಮಹಾನ್ ವ್ಯಕ್ತಿಯನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ ಬಿಡಿ. 2004, ಡಿಸೆಂಬರ್ 23ರಂದು ರಾವ್ ನಮ್ಮನ್ನಗಲಿದಾಗ, ಸೂಕ್ತ ಗೌರವ ತೋರುವ ಬದಲು ಅವರ ಪಾರ್ಥಿವ ಶರೀರವನ್ನು ಒಳಕ್ಕೆ ಕೊಂಡೊಯ್ಯದಂತೆ ಎಐಸಿಸಿ ಕಚೇರಿಯ ಗೇಟ್ ಬಳಿಯೇ ತಡೆದ ಕಾಂಗ್ರೆಸ್ ಕಮಂಗಿಗಳು ಅಂತಿಮ ಯಾತ್ರೆ ಸಂದರ್ಭದಲ್ಲೂ ಅವಮಾನಿಸಿದರು. ‘ಮಹಾತ್ಯಾಗಿ’ ಸೋನಿಯಾ, ರಾವ್ ಅವರ ಅಂತ್ಯಸಂಸ್ಕಾರದ ವೇಳೆ ಖುದ್ದಾಗಿ ಹಾಜರಾಗುವಂಥ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಈ ದೇಶದ ಮೊದಲ ಫೀಲ್ಡ್ ಮಾರ್ಷಲ್ ಮಾಣಿಕ್ಷಾ ತೀರಿಕೊಂಡಾಗಲೂ ಅಂತ್ಯಸಂಸ್ಕಾರಕ್ಕೆ ಹೋಗದ ಆಕೆಯಿಂದ ಒಳ್ಳೆಯತನವನ್ನು ನಿರೀಕ್ಷಿಸುವುದು ನಮ್ಮ ಮೂರ್ಖತನವಾದೀತು ಬಿಡಿ. ಆದರೆ ನಮ್ಮ ಮಾಧ್ಯಮಗಳಿಗಾದರೂ ಏನು ಧಾಡಿ? ಆಧುನಿಕ ಭಾರತದ ನಿರ್ಮಾತೃವನ್ನು ನೆನೆಸಿಕೊಳ್ಳುವ ಸೌಜನ್ಯವನ್ನು ನಮ್ಮ ಮಾಧ್ಯಮಗಳು ಏಕೆ ತೋರುವುದಿಲ್ಲ?

ಇವತ್ತು ನಾವೆಲ್ಲ ಭವ್ಯ ಭವಿಷ್ಯದ ಬಗ್ಗೆ ಕನಸು ಕಾಣುವಂತಾಗಿದ್ದರೆ, ಸರಕಾರಿ ಉದ್ಯೋಗಗಳ ಹಂಗಿಲ್ಲದೆ ಬದುಕು ರೂಪಿಸಿಕೊಳ್ಳುವಂತಾಗಿದ್ದರೆ, ನಮ್ಮ ದೇಶ ಚೀನಾಕ್ಕೆ ಪೈಪೋಟಿ ನೀಡುವಂತಾಗಿದ್ದರೆ, ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿ ನೂರಾರು ಶತಕೋಟಿ ಡಾಲರ್ ದಾಟಿದ್ದರೆ ಅದಕ್ಕೆ ನರಸಿಂಹರಾವ್ ಅವರೇ ಕಾರಣ! ಅವರನ್ನು ‘ಭಾರತದ ಅಣುಶಕ್ತಿಯ ನಿಜವಾದ ಪಿತಾಮಹ’ ಎಂದು ಹೊಗಳಿದ ಮಾಜಿ ಪ್ರಧಾನಿ ವಾಜಪೇಯಿಯವರ ನಿಸ್ವಾರ್ಥ ಮಾತುಗಳನ್ನು ನೆನಪಿಸಿಕೊಂಡರೆ ನಮ್ಮ ಕಣ್ಣುಗಳು ರಾವ್ ಅವರನ್ನು ಧನ್ಯತೆಯಿಂದ ನೋಡುತ್ತವೆ. ಈಗ ಹೇಳಿ, ರಾವ್ ಹೇಳಿದ್ದರಲ್ಲಿ ತಪ್ಪೇನಿದೆ. ನಮ್ಮದು ಹಿಂದುಸ್ತಾನವೇ ಅಲ್ಲವೇ? ಭಾರತ ಹಿಂದೂಗಳ ರಾಷ್ಟ್ರ ಎಂದು ಹೇಳಿದ ಮಾತ್ರಕ್ಕೆ ಅವರು ಧರ್ಮಕ್ಕಾಗಿ ಏನಾದರೂ ಮಾಡಿದ್ದಾರಾ? ಅಥವಾ ಮುಸಲ್ಮಾನರು ಸೇರಿದಂತೆ ಇತರ ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದಾರಾ? ಒಬ್ಬ ಮನುಷ್ಯನಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟವಿಲ್ಲ ಅಂದರೆ ಬೇಡ. ಆದರೆ, ಅವರ ಸಾಧನೆಯನ್ನು ಕಡೆಗಣಿಸಿ ಒಂದೇ ಶಬ್ದ ಹಿಡಿದು ವಾದ ಮಾಡುವುದು ಸರ್ವತಾ ಸರಿಯಲ್ಲ.

PVNRao n

Comments are closed.