Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ!

ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ!

ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ!
——————————————————————————————————–
ಒಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಳ್ಳಿ…. ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳಲೇಬೇಕು ಎಂದು ನಿಯಮ ಮಾಡಿದಾಗ ನಿಮಗೆ ಕಿರಿ ಕಿರಿಯಾಗಿತ್ತಲ್ಲವೆ? ಬೆಲ್ಟ್ ಹಾಕಿಕೊಳ್ಳುವುದನ್ನು ಪದೇ ಪದೆ ಮರೆತು ದಂಡ ಹಾಕಿಸಿಕೊಂಡಾಗ ನಿಯಮ ಮಾಡಿದವರ ಮೇಲೆ ಸಿಟ್ಟುಗೊಂಡಿದ್ದಿರಲ್ಲವೆ? ಹೆಲ್ಮೆಟ್ ಕಡ್ಡಾಯ ಮಾಡಿದಾಗಲೂ ಕೋಪ ಬಂದಿತ್ತು! ಅದರಲ್ಲೂ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯವೆಂದಾಗಲಂತೂ ಸಿಟ್ಟು ನೆತ್ತಿಗೇರಿತ್ತು ಅಲ್ವಾ?

ಹೌದು, ಯಾವುದೇ ಹೊಸ ವ್ಯವಸ್ಥೆ, ನಿಯಮ ಬಂದಾಗ ಅದಕ್ಕೆ ಹೊಂದಿಕೊಳ್ಳಲು ಪ್ರಾರಂಭದಲ್ಲಿ ನಮ್ಮ ಮನಸ್ಸು ಅಡ್ಡಿ ಮಾಡುತ್ತದೆ, ಕಾಲಾಂತರದಲ್ಲಿ ಒಗ್ಗಿಕೊಳ್ಳುತ್ತದೆ!

ಸಡನ್ನಾಗಿ ಬ್ರೇಕ್ ಹಾಕಬೇಕಾದ ಸಂದರ್ಭ ಬಂದು ಕುಳಿತಲ್ಲೇ ಮುಗ್ಗರಿಸಬೇಕಾದ ಹೊತ್ತಿನ ನಂತರ ಸದ್ಯ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಏನೂ ಆಗಲಿಲ್ಲ ಎಂದು ನಿಟ್ಟುಸಿರು ಬಿಟ್ಟಿರುತ್ತೀರಲ್ಲವೆ? ಆಗ ಸರ್ಕಾರ ಮಾಡಿದ ನಿಯಮದಿಂದ ಒಳ್ಳೆಯದೇ ಆಯಿತು ಎಂದು ಮನಸ್ಸಿಗೆ ಅನಿಸಿದ ಅನುಭವ ಒಂದಲ್ಲಾ ಒಂದು ಸಂದರ್ಭದಲ್ಲಿ ಆಗಿದೆಯಲ್ಲವೆ? ಅದೃಷ್ಟವಶಾತ್, ಹೆಲ್ಮೆಟ್ ಹಾಕಿಕೊಂಡಿದ್ದರಿಂದ ನನ್ನ ಮಗ ಉಳಿದ ಎಂದು ಹೇಳಿಕೊಂಡ ತಂದೆ-ತಾಯಂದಿರ ಮುಖದಲ್ಲಿ ಮೂಡಿದ್ದ ಆತಂಕದ ಗೆರೆಗಳನ್ನು ಒಂದು ಸಲ ಕಲ್ಪಿಸಿಕೊಳ್ಳಿ! ಇನ್ನು ರಾತ್ರಿಯಿಂದ ಪೆಟ್ರೋಲ್, ಡೀಸೆಟ್ ಬೆಲೆ ಲೀಟರ್‍ಗೆ 5 ರೂ. ಹೆಚ್ಚಳ ಎಂದು ಘೋಷಿಸಿದರೆ ರಾತ್ರಿ ಊಟ ಬಿಟ್ಟು ಬಂಕ್ ಎದುರು ಕ್ಯೂ ನಿಲ್ಲುತ್ತೀರೋ ಇಲ್ಲವೋ? ನಾಲ್ಕು ಕಾಸು ಉಳಿಯುತ್ತದೆ, ಅದರಿಂದ ಮತ್ತೊಂದಕ್ಕೆ ಅನುಕೂಲವಾಗುತ್ತದೆ ಎಂಬ ಯೋಚನೆ ನಮ್ಮಲ್ಲಿ ತಾಳ್ಮೆಯನ್ನು ತುಂಬಿ ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ ತಾನೆ? ಅಂಗಾರಕ ಸಂಕಷ್ಟ ಬಂದ ದಿನ ಒಂದು ಹಿಡಿ ಅವಲಕ್ಕಿಯನ್ನೂ ತಿನ್ನದೆ ರಾತ್ರಿ ಚಂದ್ರನ ಆಗಮನಕ್ಕಾಗಿ ಹಠ ಹಿಡಿದವರಂತೆ ಕಾಯುತ್ತೀರಿ. ಶ್ರಾವಣ ಶುಕ್ರವಾರ ಮಡಿಯುಟ್ಟು ದೇವಸ್ಥಾನಕ್ಕೆಂದು ಹೋದಾಗ ಕಿಲೋಮೀಟರ್‍ಗೂ ಮೀರಿದ ಕ್ಯೂ ನೋಡಿದಾಗಲೂ ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳದೆ ಭಕ್ತಿಯಿಂದ ಸಾಲಿನಲ್ಲಿ ಬರುತ್ತೀರಿ. ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡಿದ ನಂತರ ಕೊಡುವ ತಿಳಿ ಸಾರು ಅನ್ನವನ್ನು ಉದ್ದದ ಸಾಲಿನಲ್ಲಿ ನಿಂತು ಪ್ರಸಾದ ಅಂತ ತಾಳ್ಮೆಯಿಂದ ಸ್ವೀಕರಿಸಿ ಬರುತ್ತೀರಿ. ತಿರುಪತಿಯಲ್ಲಿ ಗಂಟೆ ಗಟ್ಟಲೆ ಒಂದೊಂದು ರೂಮಿನಲ್ಲಿ ಕೂಡಿ ಹಾಕಿದರೂ ಅದು ನಿಮಗೆ ಬಂಧನದ ಅನುಭವ ಕೊಡುವುದಿಲ್ಲ. ಏಕೆ ಹಾಗೆ ನಿಲ್ಲುತ್ತೇವೆ ಎಂದರೆ ಆ ದೇವರು ಒಲಿದರೆ ನಮಗೆ, ನಮ್ಮ ಮಕ್ಕಳಿಗೆ ಒಳ್ಳೆಯದಾಗಬಹುದು ಎಂಬ ವಿಶ್ವಾಸದಿಂದ.

ಬಹಳ ಖುಷಿಕೊಡುವ ಸಂಗತಿಯೆಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಏನೇ ಹೇಳಿದರೂ ದೇಶಕ್ಕೆ ಒಳ್ಳೆಯದನ್ನು ಮಾಡುವುದಕ್ಕೆಂದೇ ಭಾವಿಸಿ ನೀವು ಓಗೊಡುತ್ತೀರಿ!

ಮಹತ್ಮಾ ಗಾಂಧಿ ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು, ಅವರಿಗೆ ಸ್ವಚ್ಛತೆಯೆಂಬುದು ಬಹಳ ಪ್ರಿಯವಾದ ವಿಚಾರ. ಕನಿಷ್ಟ ಅವರಿಗೆ ಸ್ವಚ್ಛ ಭಾರತವನ್ನಾದರೂ ಕೊಡೋಣ ಎಂದ ಕೂಡಲೇ ನೀವೂ ಪೊರಕೆ ಹಿಡಿದು ಬೀದಿಗಿಳಿದಿರಿ. ಹಳ್ಳಿಯಲ್ಲಿರುವ ಆ ತಾಯಂದಿರು ಸೌದೆ ಒಲೆಯಲ್ಲಿ ಅಡುಗೆ ಬೇಯಿಸಿ ಕಣ್ಣು ಪೊರೆ ಕಟ್ಟಿಕೊಂಡಿದೆ, ಹೊಗೆ ಕುಡಿದು ಎದೆ ಸುಟ್ಟಿದೆ ಎಂದ ಕೂಡಲೇ ಒಂದೂಕಾಲು ಕೋಟಿ ಕುಟುಂಬಗಳು ಗ್ಯಾಸ್ ಸಬ್ಸಿಡಿ ಬಿಟ್ಟವು. ಪ್ರತಿ ಕುಟುಂಬಕ್ಕೂ ಒಂದೊಂದು ಅಕೌಂಟ್ ಕೊಡಬೇಕು, ಸರ್ಕಾರದ ಸವಲತ್ತು, ಸಬ್ಸಿಡಿ ನೇರವಾಗಿ ಫಲಾನುಭವಿಗಳಿಗೆ ಸೇರಬೇಕು ಎಂದಾಗ ನೀವೂ ಮುಂದೆ ಬಂದಿರಿ, ಜತೆಗೆ ಇಡೀ ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳು ಕಾರ್ಯತತ್ಪರರಾದರು. 21 ಕೋಟಿ ಅಕೌಂಟ್ ತೆರೆದವು. ಜನ ಅವುಗಳಲ್ಲಿ 33,740 ಕೋಟಿ ಹಣ ಇಟ್ಟರು! ಐನೂರು ಸಾವಿರ ರೂಪಾಯಿ ನೋಟುಗಳನ್ನು ನಿಷೇಧ ಮಾಡುವ ಮೊದಲಿನವರೆಗೂ 71 ಪರ್ಸೆಂಟ್ ಅಕೌಂಟ್‍ಗಳು ಕ್ರಿಯಾಶೀಲವಾಗಿದ್ದವು. ಈಗಂತೂ ಎಲ್ಲಾ ಅಕೌಂಟ್‍ಗಳೂ ಹಣ ಹೊಂದಿರುತ್ತವೆ ಬಿಡಿ!

ಅಂದರೆ ನಮ್ಮ ಜನರಲ್ಲಿ ಹೊಸ ಸಂಸ್ಕೃತಿ ಯನ್ನು ಹುಟ್ಟುಹಾಕುವ ಪ್ರಯತ್ನ ಅದಾಗಿತ್ತು!

ಜನರೂ ಸ್ಪಂದಿಸಿದರು. ಮನೆಯ ಯಾವುದೋ ಮೂಲೆಯಲ್ಲೋ, ಪೆಟ್ಟಿಗೆಯಲ್ಲೋ, ಹಾಸಿಗೆಯಡಿಯೋ ಇಟ್ಟುಕೊಳ್ಳುವ ಬದಲು ಖಾತೆಯಲ್ಲಿಟ್ಟರೆ 6 ಪರ್ಸೆಂಟ್ ಬಡ್ಡಿಯೂ ಸಿಗುತ್ತದೆ, ಕಷ್ಟ ಬಂದಾಗ ಖಚಿತವಾಗಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂಬ ನಂಬಿಕೆಯೂ ಆರಂಭವಾಯಿತು. ಈಗ ಮೋದಿಯವರು ಬ್ಯಾನ್ ಮಾಡಿರುವ 500, 100 ಸಾವಿರ ನೋಟುಗಳ ಹಿಂದೆ ಇರುವುದೂ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್‌ನಂತ  ದೇಶ ನಮ್ಮದಾಗಬೇಕು ಎಂದು ಕನಸ್ಸು ಕಂಡರೆ ಸಾಕಾಗುವುದಿಲ್ಲ, ಅಂತಹ ವ್ಯವಸ್ಥೆಯನ್ನು ಮೊದಲು ಅಳವಡಿಸಿಕೊಳ್ಳಬೇಕು, ಎಲ್ಲ ವ್ಯವಹಾರಗಳೂ ಕಾನೂನುಬದ್ಧವಾಗಿಯೇ, ನೈತಿಕವಾಗಿಯೇ ನಡೆಯಬೇಕು, ಅದಕ್ಕೆ ಪ್ರತಿಯೊಬ್ಬನ ಯೋಗದಾನವೂ ಇರಬೇಕು ಎಂಬ ಸಂದೇಶವೇ. ನಮ್ಮಲ್ಲಿ ಸರ್ಕಾರದ ಕಣ್ಣುತಪ್ಪಿ ಇಟ್ಟಿರುವ ದುಡ್ಡನ್ನು ಬ್ಲ್ಯಾಕ್ ಮನಿ ಅಥವಾ ಕಪ್ಪುಹಣ ಎಂದು ಸಾಮಾನ್ಯವಾಗಿ ಕರೆಯುತ್ತೇವೆ. ಅನ್ಯ ದೇಶಗಳಲ್ಲಿ ಇದನ್ನು ಕಪ್ಪುಹಣವೆನ್ನುವುದಿಲ್ಲ, ಡರ್ಟಿ ಮನಿ ಅಥವಾ ಕೊಳಕು ಹಣ ಎನ್ನುತ್ತಾರೆ! ಭ್ರಷ್ಟ ರಾಜಕಾರಣಿಗಳ ಬಳಿ ಇರುವುದು, ರಿಯಲ್ ಎಸ್ಟೇಟ್ ದಣಿಗಳು, ಮೀಟರ್ ಬಡ್ಡೀದಾರರು, ಚಿನ್ನ-ಬೆಳ್ಳಿ ಮಾರಾಟಗಾರರು ಹಾಗೂ ಅದನ್ನು ಕೆಜಿ ಗಟ್ಟಲೆ ತುಂಬಿಕೊಂಡಿರುವವರು, ಕಳ್ಳ ಅಧಿಕಾರಿಗಳು ಕೂಡಿಟ್ಟಿರುವುದಷ್ಟೇ ಕಪ್ಪುಹಣ ಎಂದು ಭಾವಿಸಬೇಡಿ. ತೆರಿಗೆ ಕಟ್ಟದ ಕೃಷಿಯೇತರ ಆದಾಯದ ಹಣವನ್ನೂ ಇದೇ ಕ್ಯಾಟೆಗರಿಯಲ್ಲಿ ನೋಡಬೇಕಾಗುತ್ತದೆ!

ಖಂಡಿತ ನಿಮಗೆ ಕಷ್ಟವಾಗಿದೆ. ಪ್ರತಿನಿತ್ಯವೂ ಉದ್ದುದ್ದ ಸಾಲಿನಲ್ಲಿ ನಿಂತೂ ನಿಂತು ತಾಳ್ಮೆ ಬರಿದಾಗುತ್ತಿದೆ. ಕೃಷಿ ಅಥವಾ ಕೂಲಿ ಕಾರ್ಮಿಕರಿಗೆ ವಾರದ ಬಟವಾಡೆ ಮಾಡುವುದೂ ಕಷ್ಟವಾಗಿ ಬದುಕು ದುಸ್ತರವಾಗಿದೆ, ಕೆಲಸ ಕಾರ್ಯಗಳು ನಿಂತು ಹೋಗಿವೆ. ಮದುವೆಗಳನ್ನು ಮುಂದುಹಾಕಬೇಕಾದ ಸ್ಥಿತಿ ಎದುರಾಗಿದೆ. ಖರೀಫ್ ಬೆಳೆ ಕೊಯ್ಲಿಗೆ ಬಂದು ನಿಂತಿದೆ, ಯಾರು ಖರೀದಿಸುತ್ತಾರೆ ಎಂಬ ಚಿಂತೆ ಕಾಡುತ್ತಿದೆ. ಇಂಥ ವಿಚಾರಗಳನ್ನು ಹೆಕ್ಕಿ ಹೆಕ್ಕಿ ತೋರಿಸುತ್ತಿರುವ ಮಾಧ್ಯಮಗಳೂ ಜನರಲ್ಲಿ ಭಯಭೀತಿ ಹುಟ್ಟಿಸುತ್ತಿವೆ. ಇನ್ನೊಂದೆಡೆ, ಇದು ನರೇಂದ್ರ ಮೋದಿಯವರು ಕೈಹಾಕಿರುವ ಅತಿ ದೊಡ್ಡ ಸವಾಲು ಅಥವಾ ಜೂಜು. ಗೆದ್ದರೆ ಮೋದಿ ಇತಿಹಾಸ ನಿರ್ಮಿಸುತ್ತಾರೆ, ಈ ದೇಶದ ಭವಿಷ್ಯವನ್ನೇ ಬದಲಾಯಿಸಿದ ಕೀರ್ತಿ ಅವರದ್ದಾಗುತ್ತದೆ, ಇಲ್ಲವಾದರೆ ಇದು ಮೋದಿಯವರ ಅತಿ ದೊಡ್ಡ ವೈಫಲ್ಯ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ ಎಂಬ ಮಾತು ಮಾಧ್ಯಮದ ವಿಶ್ಲೇಷಣಾಕಾರರ ಬಾಯಿಂದ ಹೊರಬರುತ್ತಿದೆ! ಅದನ್ನು ಕಾಲ ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದಾರೆ!!

ಆದರೆ…

ಅದನ್ನು ನಿರ್ಧರಿಸುವುದು ಕಾಲವಲ್ಲ, ನಾವು ಮತ್ತು ನೀವು! ಈ ಸವಾಲಿನಲ್ಲಿ ಮೋದಿಯವರು ಯಶಸ್ವಿಯಾದರೆ ದೇಶದ ಪಾಲಿಗೆ ಇತಿಹಾಸ ನಿರ್ಮಾಣವಾದರೆ, ನಮ್ಮ ಪಾಲಿಗೆ ನಮ್ಮ ಮಕ್ಕಳ ಭವ್ಯ ಭವಿಷ್ಯದ ನಿರ್ಮಾಣವಾಗುತ್ತದೆ ಎಂಬುದನ್ನು ಮರೆಯದಿರಿ. ಆಡಳಿತದಲ್ಲಿ ಸುಧಾರಣೆ ತರುವುದು ಆಳುವ ಸರ್ಕಾರ ಅಥವಾ ಅದರ ಚುಕ್ಕಾಣಿ ಹಿಡಿದಿರುವವರ ಕರ್ತವ್ಯವಾದರೆ, ಆ ಸುಧಾರಣೆಗಳನ್ನು ಜಾರಿಗೆ ಮಾಡುವುದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಬೇಕು. ಮೋದಿ ಕೈಹಾಕಿರುವ ಕೆಲಸದಲ್ಲಿ ಸಾರ್ವಜನಿಕರ ಸಹಭಾಗಿತ್ವವೆಂದರೆ ಸರ್ಕಾರದಿಂದ, ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಪ್ರಾಮಾಣಿಕತೆಯನ್ನು ಬಯಸುವ ಜನರ ವ್ಯವಹಾರವೂ ಪಾರದರ್ಶಕವಾಗಿರಬೇಕು! ಬಿಲ್ ಬೇಕೆಂದರೆ ವ್ಯಾಟ್ ತೆರಬೇಕಾಗುತ್ತದೆ ಎಂಬ ಲೆಕ್ಕಾಚಾರ ಹಾಕುವ ನಮ್ಮ ಮನಸ್ಥಿತಿಯೂ ಬದಲಾಗಬೇಕು. ಆದರೆ ದೇಶದ ವಿಷಯ ಬಂದಾಗ ವೈಯಕ್ತಿಕ ಲಾಭವನ್ನು ಮರೆತು ಸಹಕರಿಸುತ್ತೀರಿ ನೀವೆಲ್ಲ ಎಂದೇ ಮೋದಿಯವರು ಜೀವಮಾನದ ಅತಿ ದೊಡ್ಡ ಅಪಾಯವನ್ನು ಮೈಗೆಳೆದುಕೊಂಡಿದ್ದಾರೆ. ಅವರು ನಂಬಿರುವುದು ಈ ದೇಶದ ಸಾಮಾನ್ಯ ನಾಗರೀಕರನ್ನೇ ಹೊರತು ಕಳ್ಳ ರಾಜಕಾರಣಿಗಳನ್ನಲ್ಲ, ಭ್ರಷ್ಟ ಅಧಿಕಾರಿಗಳನ್ನಲ್ಲ, ದಂಧೆಕೋರರನ್ನೂ ಅಲ್ಲ. ಹಳೇ ಸೀರೆ ಹವಾಯಿ ಚಪ್ಪಲಿ ಹಾಕುವ ಮಮತಾ ಬ್ಯಾನರ್ಜಿ, ಔಟ್ ಷರ್ಟು ಗೂರಲು ಕೆಮ್ಮಿನ ಕೇಜ್ರೀವಾಲ್, ಸರ್ವರಿಗೂ ಸಮಪಾಲು ಸಮಭಾಳು ಎಂದು ಜೀವನದುದ್ದಕ್ಕೂ ಓಳು ಬಿಡುತ್ತಾ ಬಂದಿರುವ ಕಮ್ಯುನಿಸ್ಟರು, ಹಾಸಿಗೆಯಿಂದೇಳಲಾರದೆ ಭವಿಷ್ಯವೇ ಪ್ರಶ್ನಾರ್ಥಕ ಚಿಹ್ನೆಯಾಗಿರುವ ಅಮ್ಮ(ಇಂದು ಎಐಡಿಎಂಕೆ ಪಕ್ಷದ ಸಂಸದರೂ ಸ್ಪೀಕರ್ ಮುಂದೆ ಚೀರಾಡುತ್ತಾ ನಿಂತಿದ್ದರು), ಸ್ವಘೋಷಿತ ದಲಿತರ ಉದ್ಧಾರಕಿ ಮಾಯಾವತಿಯಂಥವರೇ ಇಂದು 500, 1000 ನೋಟಿನ ನಿಷೇಧವನ್ನು ಹಿಂತೆಗೆದುಕೊಳ್ಳಿ ಎಂದು ಬೀದಿಗಿಳಿದಿದ್ದಾರೆಂದರೆ, ಮೋದಿಯವರಿಗೆ ಮೂರು ದಿನಗಳ ಗಡುವಿನ ಧಮಕಿ ಹಾಕುತ್ತಿದ್ದಾರೆಂದರೆ ಎಂತಹ ಭ್ರಷ್ಟ ರಾಜಕೀಯ ಮನಸ್ಸುಗಳು ಈ ದೇಶವನ್ನು ಆಕ್ರಮಿಸಿವೆ ಎಂಬುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ಬಿಜೆಪಿಯ ಎಷ್ಟೋ ಕಳ್ಳ ಮನಸ್ಸುಗಳು ಕೈಕೈ ಹಿಸುಕಿಕೊಳ್ಳುತ್ತಿದ್ದುದನ್ನು ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲೂ ಕಳೆದೆರಡು ದಿನದಿಂದ ನೋಡಿದ್ದಾಯಿತು. ಇಂದು ಮೋದಿ ವರ್ಸಸ್ ಉಳಿದವರೆಲ್ಲ ಎಂಬಂಥ ಪರಿಸ್ಥಿತಿ ರಾಜಕೀಯದಲ್ಲೂ ನಿರ್ಮಾಣವಾಗಿದೆ.

ಮೋದಿಯವರು ಹೇಳಿದಂತೆ ಬೇನಾಮಿ ಆಸ್ತಿಗೆ ಜನವರಿಯಲ್ಲಿ ಕಂಟಕ ಬಂತೆಂದರೆ ನಮ್ಮ ವ್ಯವಸ್ಥೆ ಹೆಚ್ಚೂ ಕಡಿಮೆ ಸ್ವಚ್ಛವಾಗಿ ಬಿಡುತ್ತದೆ. ನಿಮ್ಮ ಬಳಿಯೂ ಮೂರ್ನಾಲ್ಕು ಸೈಟುಗಳಿರಬಹುದು ಅಥವಾ ಮನೆ ಮಂದಿಯೆಲ್ಲರ ಹೆಸರಿನಲ್ಲೂ ಸೈಟು ಮಾಡಿಟ್ಟಿರಬಹುದು. ನ್ಯಾಯಯುತವಾಗಿ ದುಡಿದು ಮಾಡಿದ್ದರೆ ಖಂಡಿತ ಅದರಲ್ಲಿ ತಪ್ಪೂ ಇಲ್ಲ, ಅದಕ್ಕೆ ಯಾವ ಕಂಟಕವೂ ಇಲ್ಲ. ಈ ಬೇನಾಮಿ ಆಸ್ತಿ ಕಾಯಿದೆಯಿಂದ ಕಂಟಕ ಎದುರಾಗುವುದು ರಾಜಕಾರಣಿಗಳಿಗೇ ಹೆಚ್ಚು. ತಮ್ಮ ಶಿಷ್ಯನ, ಚೇಲಾಗಳ, ನಿಷ್ಠರ, ನೆಂಟರಿಸ್ಟರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿ, ಅದರ ಮೂಲ ಕಾಗದ ಪತ್ರಗಳನ್ನು ತಮ್ಮ ಬಳಿ ಇಟ್ಟುಕೊಂಡು ಆ ಶಿಷ್ಯ, ಚೇಲಾಗಳಿಂದ ಅಸೈನ್‍ಮೆಂಟ್ ಡೀಡ್(ಪರಭಾರೆ ಪತ್ರ) ಕೂಡ ಮಾಡಿಸಿಟ್ಟುಕೊಂಡಿರುತ್ತಾರೆ. ಅದಕ್ಕೆ ಸ್ಟ್ಯಾಂಪ್ ಡ್ಯೂಟಿ ಕಟ್ಟಿ ರಿಜಿಸ್ಟರ್ ಮಾಡಿಕೊಂಡರೆ ಎಲ್ಲಿ ಗೊತ್ತಾಗಿ ಬಿಡುತ್ತದೋ ಎಂದು ಹೆದರಿ ಮಾಡಿಸಿರುವುದಿಲ್ಲ. ಇಂತಹ ಠಕ್ಕರ ಆಸ್ತಿಗೆ ಕತ್ತರಿ ಬೀಳಲಿದೆ. ಇನ್ನು ಕೆಲವು ಮೀಟರ್ ಬಡ್ಡೀದಾರರು ನಿಮ್ಮಿಂದ ಸೇಲ್ ಡೀಡ್ ಮಾಡಿಸಿಕೊಂಡಿರುತ್ತಾರೆ. ಇನ್ನು ಮುಂದೆ ಅವರಿಗೆ ಬಡ್ಡಿ ಕೊಡಬೇಡಿ, ವಕೀಲರನ್ನು ಸಂಪರ್ಕಿಸಿ ಕೋರ್ಟಿಗೆಳೆಯಿರಿ. “ಸಾಲ ಭಾದೆಯಿಂದ ನೊಂದ ರೈತ ಆತ್ಮಹತ್ಯೆ, ಸಾಲಭಾದೆಯಿಂದ ಸಾವಿಗೆ ಶರಣಾದ ದಂಪತಿ, ಸಾಲಬಾಧೆಯಿಂದ ನೊಂದು ಮಕ್ಕಳಿಗೂ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿ” ಇಂತಹ ಶೀರ್ಷಿಕೆಗಳನ್ನು ನೀವು ಆಗಾಗ್ಗೆ ಪತ್ರಿಕೆಗಳಲ್ಲಿ ಓದುತ್ತಿರುತ್ತೀರಿ. ಈ ಸಾಲಭಾದೆ ಯಾವುದೇ ಬ್ಯಾಂಕಿನದ್ದಲ್ಲ, ಮೀಟರ್ ಬಡ್ಡೀದಾರರು ಖಾಲಿ ಚೆಕ್ ಪಡೆದುಕೊಂಡು ಬಾಯಿಗೆ ಬಂದ ಮೊತ್ತವನ್ನು ಬರೆಯುತ್ತೇನೆ ಎಂದು ಹಾಕುವ ಧಮಕಿಗೆ ಹೆದರಿ ಸಾವಿಗೆ ಶರಣಾಗಿರುತ್ತಾರೆ, ಇಲ್ಲವೆ ಬೀದಿಯಲ್ಲಿ ನಿಂತು ಜರಿಯುವ ಬೈಗುಳಗಳಿಗೆ ನೊಂದು ಮರ್ಯಾದೆ ಹೋಯಿತಲ್ಲಾ ಎಂದು ಜೀವ ಕಳೆದುಕೊಂಡಿರುತ್ತಾರೆ. ಇಂತಹ ಬಡ್ಡೀಮಗನೊಬ್ಬನ ಕಾಟಕ್ಕೆ ಹೆದರಿ ಕನ್ನಡದ ಅತ್ಯದ್ಭುತ ವ್ಯಂಗ್ಯಚಿತ್ರ ಬರಹಗಾರ ಎಸ್.ವಿ. ಪದ್ಮನಾಭ ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ಮಕ್ಕಳ ಎದುರು ಬಡಿಸಿಕೊಂಡ ತಂದೆಯರಿದ್ದಾರೆ, ಮಾನಹೋಯಿತಲ್ಲಾ ಎಂದು ಸೆರಗಿನೊಳಗೆ ಕಣ್ಣೀರನ್ನು ಅದುಮಿಟ್ಟುಕೊಂಡ ತಾಯಂದಿರಿದ್ದಾರೆ.

ನರೇಂದ್ರ ಮೋದಿ ಮಾಡಲು ಹೊರಟಿರುವುದು ಕೇವಲ ಕಪ್ಪುಹಣದ ಮೇಲೆ ಕಡಿವಾಣಕುವುದನ್ನಷ್ಟೇ ಅಲ್ಲ, ಇದೊಂದು ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆ. ನಿಮ್ಮನ್ನು ಗದರಿಸಿನಿಮ್ಮ ಸೈಟಿಗೆ ಅಡ್ವಾನ್ಸ್ ಕೊಟ್ಟು ಬೇರೆಯವರಿಗೆ ಒಂದೂವರೆ ಪಟ್ಟು ಹೆಚ್ಚು ಮೊತ್ತಕ್ಕೆ ಮಾರಿಕೊಂಡ ಎಷ್ಟು ಪುಢಾರಿಗಳು ಹಾಗೂ ಅವರ ಚೇಲಾಗಳಿಲ್ಲ ಹೇಳಿ? ಮೀಟರ್ ಬಡ್ಡಿ ವ್ಯವಹಾರ ಮಾಡುವ ಯಾವನಿಗೆ ರಾಜಕಾರಣಿಗಳ ನಂಟಿಲ್ಲ? 1999ರಲ್ಲಿ ಅರ್ಬನ್ ಲ್ಯಾಂಡ್ ಸೀಲಿಂಗ್ ನಿಯಮವನ್ನು ತೆಗೆದ ನಂತರ ಅದಕ್ಕೂ ಮೊದಲು ಹರಕಲು ಬಟ್ಟೆ ಹವಾಯಿ ಚಪ್ಪಲಿ ಹಾಕಿಕೊಂಡು ರಾಜಕಾರಣಕ್ಕೆ ಬಂದ ಪುಢಾರಿಗಳು ಮತ್ತು ಅವರ ಹಿಂಬಾಲಕರೇ ಅಲ್ಲವೇ ದೊಡ್ಡ ರಿಯಲ್‍ಎಸ್ಟೇಟ್ ಕುಳಗಳಾಗಿ ಮಾರ್ಪಟ್ಟಿದ್ದು? ನನಗೆ ಬಿರ್ಯಾನಿ ತಿನ್ನಿಸು, ಎಣ್ಣೆ ಕುಡಿಸು, ಕೈಗೆ ಕಾಸು ಕೊಡು ಎಂದು ಯಾವ ಮತದಾರರ ಕೇಳಲು ಬಂದಿದ್ದ? ಕೇಳದೇ ಕೊಟ್ಟು ಜನರನ್ನೂ ಕರಪ್ಟ್ ಮಾಡಲು ಬಳಕೆಯಾಗಿದ್ದು ಇದೇ ಡರ್ಟಿ ಮನಿಯಲ್ಲವೆ? ಹಾದಿ ಬೀದಿಗಳನ್ನು ತಿಪ್ಪೆಗಳನ್ನಾಗಿ ಮಾಡಿರುವ ಈ ರಾಜಕಾರಣಿಗಳ ಫ್ಲೆಕ್ಸ್ ರಾಜಕಾರಣಕ್ಕೆ ಕಡಿವಾಣ ಹಾಕಬೇಕೋ ಬೇಡವೋ?

ಇನ್ನು ನಮ್ಮ ದುಡ್ಡಿಗೂ ಕತ್ತರಿ ಬೀಳುತ್ತದೆ ಎಂದು ಎಲ್ಲರೂ ಭಾವಿಸಬೇಡಿ. ಇಡೀ ದೇಶದಲ್ಲಿ ಚಲಾವಣೆಯಲ್ಲಿರುವುದು 14 ಲಕ್ಷದ 94 ಸಾವಿರ ಕೋಟಿ ಮೌಲ್ಯದ 500, 1000 ರೂಪಾಯಿ ನೋಟುಗಳು. ಇವಿಷ್ಟನ್ನೂ ಬದಲಾಯಿಸುವುದು ಹೈರಾಣದ ಕೆಲಸವಾಗಿದ್ದರೂ ದೇಶದ 125 ಕೋಟಿ ಜನರಲ್ಲಿ ಕಪ್ಪುಹಣ ಹೆಚ್ಚಾಗಿ ಇರುವುದು 30-40 ಲಕ್ಷ ಜನರ ಬಳಿ ಮಾತ್ರ. ಹಾಗಾಗಿ ಎಲ್ಲರೂ ಭಯಪಡಬೇಕಾಗಿಲ್ಲ. ಹಾಗಂತ ನಿರಾಳವಾಗಿ ಕುಳಿತುಕೊಳ್ಳಲೂ ಬಾರದು. ಕಿಸೆಯಲ್ಲಿ ದುಡ್ಡು ಇಟ್ಟುಕೊಂಡು ಓಡಾಡುವ ಅಭ್ಯಾಸಕ್ಕೆ ನಾವೆಲ್ಲ ಒಗ್ಗಿಕೊಂಡಿದ್ದೇವೆ. ಖರೀದಿ ಮಾಡುವಾಗಲೂ ಕಿಸೆಯಿಂದ ನೋಟಿನ ಕಂತೆಯನ್ನು ಹೊರತೆಗೆದರಷ್ಟೇ ಕೆಲವರಿಗೆ ಸಮಾಧಾನ. ಇನ್ನು ಮುಂದೆ ಏನೇ ವ್ಯವಹಾರವಿದ್ದರೂ ಬ್ಯಾಂಕು, ಎಟಿಎಂ, ಡೆಬಿಟ್ ಕಾರ್ಡ್ ಮುಖಾಂತರವೇ ಮಾಡಿ. ಬ್ಯಾಂಕುಗಳಿಗೆ ಯಥೇಚ್ಛವಾಗಿ ಕಡಿಮೆ ವೆಚ್ಚದಲ್ಲಿ ಠೇವಣಿ ಬರುತ್ತದೆ, ಸಾಲ ಕೊಡುವ ಶಕ್ತಿ ತನ್ನಿಂದಾಗಿಯೇ ಬಂದು ರಿಸರ್ವ್ ಬ್ಯಾಂಕಿನಿಂದ ಸಾಲಪಡೆದುಕೊಂಡು ಬಂದು ಹೆಚ್ಚಿನ ಬಡ್ಡಿಗೆ ಜನರಿಗೆ ಕೊಡುವ ಅನಿವಾರ್ಯತೆ ಬ್ಯಾಂಕುಗಳಿಗೂ ಎದುರಾಗುವುದಿಲ್ಲ. ಜತೆಗೆ ಮುಂದಿನ ದಿನಗಳಲ್ಲಿ ಕಪ್ಪು ಹಣ ನಮ್ಮ ಅರ್ಥವ್ಯವಸ್ಥೆಯಿಂದ ದೂರವಾಗಿ ಸರ್ಕಾರಕ್ಕೆ ರಿಸರ್ವ್ ಬ್ಯಾಂಕಿನ ಮೇಲಿರುವ ಋಣಭಾರದ ಕಡಿಮೆಯಾಗಿ ಬಡ್ಡೀ ದರವೂ ಕುಸಿದು ಜನರಿಗೆ ಅನುಕೂಲವಾಗುತ್ತದೆ, ಸರ್ಕಾರದ ಬೊಕ್ಕಸವೂ ತುಂಬಿ ಜನಪರ ಯೋಜನೆಗಳಿಗೆ ಆಗಾಧ ದೇಣಿಗೆ ಬರುತ್ತದೆ. ಇನ್ನು ಕೃಷಿಯಲ್ಲಿ ತೊಡಗಿರುವವರು ಕಾಫಿ ಬೆಳೆಯುವವರು ತೋಟದಲ್ಲಿರುವ ಮೆಣಸು, ಏಲಕ್ಕಿ, ಭತ್ತದ ಗದ್ದೆಯಲ್ಲಿ ಅಡಿಕೆ ಬೆಳೆದವರೂ ಕೂಡಲೇ ನಿಮ್ಮ ಅರ್‍ಟಿಸಿಯ ನಾಲ್ಕನೇ ಕಾಲಂನಲ್ಲಿ ನಿಮ್ಮ ಜಮೀನಿನಲ್ಲಿ ಬೆಳೆಯುವ ಎಲ್ಲ ಬೆಳೆಗಳನ್ನೂ ನಮೂದನೆ ಮಾಡಿಸಿ, ಆಗ ಹೆಚ್ಚಿನ ಆದಾಯಕ್ಕೆ ಟ್ಯಾಕ್ಸ್ ಕಟ್ಟಬೇಕೇನೋ ಎಂಬ ಆತಂಕವೂ ಇರುವುದಿಲ್ಲ.

ಒಟ್ಟಿನಲ್ಲಿ, ನರೇಂದ್ರ ಮೋದಿಯವರು ಕೈಹಾಕಿರುವ ಜಿಎಸ್‍ಟಿ ಹಾಗೂ 500, 1000 ರೂ. ನೋಟುಗಳ ನಿಷೇಧ ಇವೆರಡೇ ಸವಾಲುಗಳು ಫಲಕೊಟ್ಟರೆ ಸಾಕು ಭಾರತ ಅನಾಮತ್ತಾಗಿ ಜಗತ್ತಿನ ನಾಲ್ಕೈದು ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಬಿಡುತ್ತದೆ. ಇತ್ತ ದುಡ್ಡು ಮಾಡಬಹುದು ಎಂದೇ ರಾಜಕೀಯಕ್ಕೆ ಮುಗಿಬೀಳುತ್ತಿದ್ದ, ಲಾಭ ಮಾಡಿಕೊಳ್ಳುವುದಕ್ಕಾಗಿ ಮಂತ್ರಿಗಿರಿಗಾಗಿ ಹೋರಾಡುತ್ತಿದ್ದ, ಕಾರ್ಪೋರೇಶನ್‍ಗಳಲ್ಲಿ ವಕ್ರ್ಸ್ ಕಮಿಟಿ ಮತ್ತು ಹೆಲ್ತ್ ಕಮಿಟಿಗಳೇ ಬೇಕೆನ್ನುವ, ಜಿಲ್ಲಾ ಪಂಚಾಯಿತಿಯಲ್ಲಿ ಸೋಷಿಯಲ್ ವೆಲ್ಫೇರ್ ಕಮಿಟಿ ಕೊಡಿ ಎಂದು ಹಠ ಹಿಡಿಯುವ ಮನಸ್ಥಿತಿಗಳಿಗೆ ರಾಜಕೀಯದಲ್ಲಿ ಲಾಭವಿಲ್ಲ ಎಂಬುದನ್ನು ನೀವು ಗೊತ್ತು ಮಾಡಿದರೆ, ಎಲ್ಲವನ್ನೂ ಆನ್‍ಲೈನ್ ಮುಖಾಂತರವೇ ವ್ಯವಹಾರ ಮಾಡಿದರೆ, ಯೋಗ್ಯರು, ಸೇವಾ ಮನೋಭಾವ ಹೊಂದಿರುವವರು ಮಾತ್ರ ರಾಜಕೀಯ ಹಾಗೂ ಆಡಳಿತಶಾಹಿಯಲ್ಲಿ ಬರಲು ವೇದಿಕೆ ಸಿದ್ಧವಾಗುತ್ತದೆ.

ಇಷ್ಟಕ್ಕೂ ನೀವು ತೋರುವ ಸಾವಕಾಶ, ಈ ದೇಶವನ್ನು ಸರಿಪಡಿಸಲು ನಿಮಗೆ ಸಿಕ್ಕಿರುವ ಅವಕಾಶ!

 balck-money-note-ban

Comments are closed.