Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಜ್ಞಾನ ವರದ ಮೋಹನ ರಾಗ!

ಜ್ಞಾನ ವರದ ಮೋಹನ ರಾಗ!

ಜ್ಞಾನ ವರದ ಮೋಹನ ರಾಗ!

ಮೊದಲನೆಯವನು ಸ್ಯಾಮ್, ಎರಡನೆಯವನು ಜಾನ್ ಹಾಗೂ ಮೂರನೆಯವನು ಎರಿಕ್. ಈ ಮೂವರೂ ರಾಲ್ಫ್ ಎಂಬ ರಾಜನ ಮಕ್ಕಳು. ಇತ್ತ ರಾಲ್ಫ್‌ಗೆ ಮುಪ್ಪು ಆವರಿಸಿದೆ. ಕೈಕಾಲುಗಳು ತ್ರಾಣ ಕಳೆದುಕೊಂಡಿವೆ. ಹಾಸಿಗೆ ಹಿಡಿದಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದಾನೆ. ಆ ಬಗ್ಗೆ ರಾಲ್ಫ್‌ಗೆ ಯಾವ ಅಳುಕೂ ಇಲ್ಲ, ಪಶ್ಚಾತಾಪವಂತೂ ಇಲ್ಲವೇ ಇಲ್ಲ. ಆದರೂ ಆತನ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿರುತ್ತದೆ. ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ಪ್ರಶ್ನೆ ಆತನನ್ನು ಕಾಡುತ್ತಿರುತ್ತದೆ. ತನ್ನ ಮೂವರೂ ಮಕ್ಕಳನ್ನು ಬರಮಾಡಿಕೊಂಡ ರಾಲ್ಫ್ ಮಕ್ಕಳೇ ನನಗೆ ಸಾವು ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದೇನೆ. ಹಾಗಾಗಿ ನಾನು ಬದುಕಿರುವಾಗಲೇ ಉತ್ತರಾದಿಕಾರಿಯನ್ನು ನೇಮಕ ಮಾಡಬೇಕೆಂಬ ಗೊಂದಲವುಂಟಾಗಿದೆ. ಆದ್ದರಿಂದ ಒಂದು ಪರೀಕ್ಷೆಯನ್ನಿಟ್ಟಿದ್ದೇನೆ. ಅಗೋ ಅಲ್ಲೊಂದು ಕೋಣೆಯಿದೆ. ಯಾವ ವಸ್ತುವೇ ಆಗಿದ್ದರೂ ಅದರಿಂದ ಯಾರು ಆ ಕೋಣೆಯನ್ನು ಮೊದಲು ತುಂಬಿಸುತ್ತಾರೋ ಅವರೇ ಮುಂದಿನ ರಾಜ ಎಂದು ಹೇಳುತ್ತಾನೆ.
ಹೀಗೆ ಹೇಳಿದ ಕೂಡಲೇ ಕಾರ್ಯ ಪ್ರವೃತ್ತನಾದ ಮೊದಲನೆಯ ಮಗ ಸ್ಯಾಮ್, ಅಮೂಲ್ಯವಾದ ವಜ್ರಗಳಿಂದ ಕೋಣೆಯನ್ನು ತುಂಬಿಸಲು ಮುಂದಾಗುತ್ತಾನೆ. ಆದರೆ ಅರ್ಧ ತುಂಬುವಷ್ಟರಲ್ಲಿ ಇದ್ದ ವಜ್ರವೆಲ್ಲ ಬರಿದಾಗುತ್ತದೆ. ಎರಡನೇಯ ಮಗ ಚಿನ್ನವನ್ನು ತಂದು ತುಂಬಿಸುತ್ತಾನೆ. ಆದರೂ ಕೋಣೆ ತುಂಬುವುದಿಲ್ಲ. ಅಣ್ಣಂದಿರಿಬ್ಬರನ್ನೂ ನೋಡುತ್ತಾ ನಿಂತಿದ್ದ ಕೊನೆಯ ಮಗ ಎರಿಕ್, ನಿಧಾನವಾಗಿ ದೀಪವೊಂದನ್ನು ಹಚ್ಚಿ ಕೋಣೆಯ ಮಧ್ಯದಲ್ಲಿಡುತ್ತಾನೆ. ಕತ್ತಲೆ ಮರೆಯಾಗುತ್ತದೆ. ಕೋಣೆಯ ತುಂಬ ಬೆಳಕು ಆವರಿಸುತ್ತದೆ. ಎರಿಕ್ ಉತ್ತರಾದಿಕಾರಿಯಾಗುತ್ತಾನೆ . ವಿದ್ಯೆಯೂ ಕೂಡ ಒಂದು ಬೆಳಕು. ಅಂತಹ ಬೆಳಕನ್ನು ಚೆಲ್ಲುವುದು ಒಂದು ಪವಿತ್ರ ಕಾರ್ಯವೇ ಸರಿ.
ಡಾ ಮೋಹನ್ ಆಳ್ವ ನಮಗೆ ಆಪ್ತವಾಗುವುದು ಇದೇ ಕಾರಣಕ್ಕೆ. ಆಳ್ವಾಸ್ ನುಡಿಸಿರಿ ಎನ್ನುವ ಪರ್ಯಾಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿ ಆಳುವ ಸರಕಾರವನ್ನೇ ನಾಚಿಸುತ್ತಿರುವ ಆಳ್ವ ಅವರನ್ನು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಆದರೆ ಬರೆಯಲು ಕುಳಿತರೆ ಅವರ ಸಭ್ಯತೆಯ ಬಗ್ಗೆ ಬರೆಯಬೇಕೋ, ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಬೇಕೋ, ಪ್ರತಿಭೆಯ ಬಗ್ಗೆ ಹೇಳಬೇಕೋ ಅಥವಾ ಶಕ್ತಿ ಹಾಗೂ ಸಂಪನ್ಮೂಲ ಸದ್ವಿನಿಯೋಗವಾದರೆ ಏನಾಗುತ್ತದೆ ಎಂಬುದನ್ನು ವರ್ಣಿಸಬೇಕೋ? ಎಂಬ ಗೊಂದಲ ಕಾಡಲಾರಂಭಿಸುತ್ತದೆ. 63 ವರ್ಷದ ಡಾ. ಮೋಹನ್ ಆಳ್ವ ವೃತ್ತಿಯಲ್ಲಿ ವೈದ್ಯರು. ಉಡುಪಿಯ ಎಸ್‌ಡಿಎಂ ಕಾಲೇಜಿನಲ್ಲಿ ಆಯುರ್ವೇದದಲ್ಲಿ ವೈದ್ಯಕೀಯ ಪದವಿ ಮುಗಿಸಿದ ಅವರು 1980ರಲ್ಲಿ ಮೂಡಬಿದ್ರೆಯಲ್ಲಿ ಪುಟ್ಟ ಕ್ಲಿನಿಕ್ ತೆರೆದಾಗ ಇಡೀ ನಗರದಲ್ಲಿ ಒಂದೆ ಒಂದು ಕ್ಲಿನಿಕ್ ಇರಲಿಲ್ಲ. ಆ ಕಾಲದಲ್ಲಿ ಹಾವು ಕಡಿತ ವ್ಯಾಪಕ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಮುಂದಾದ ಆಳ್ವ ಅವರ ಪಾಲಿಗೆ 1980-84ರ ಅವಧಿ ಒಂದು Testing Time ಆಗಿತ್ತು. ಸಾಲ ಮಾಡಿ ಆಸ್ಪತ್ರೆ ಕಟ್ಟಿದರು.
ಸಕಲ ವೈದ್ಯಕೀಯ ಸೇವೆಗಳನ್ನೂ ಒದಗಿಸುವ ಸಲುವಾಗಿ ಎಲ್ಲ ವಿವಿಧ ವೈದ್ಯರನ್ನೂ ಕರೆತಂದರು. ಅಲ್ಲಿಂದ ಸುಮಾರು ಇದುವರೆಗೂ ಸುಮಾರು 6 ಸಾವಿರ ಹಾವು ಕಡಿತ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಆಳ್ವರು ವಿಫಲವಾಗಿದ್ದು ಒಮ್ಮೆ ಮಾತ್ರ. ಕೊನೆಗೆ ‘ಆಳ್ವಾಸ್ ಫಾರ್ಮಸಿ’ಯನ್ನು ತೆರೆದ ಅವರ ದೂರದೃಷ್ಟಿಯ ಫಲವಾಗಿ ಇಂದು ಮಿಜಾರುನಂತಹ ಕುಗ್ರಾಮದಲ್ಲಿ 150 ವಿಧದ ಆಯುರ್ವೇದ ಔಷಧಗಳನ್ನು ತಯಾರಿಸಲಾಗುತ್ತಿದೆ. ಆಸ್ಪತ್ರೆ, ಫಾರ್ಮಸಿ ತೆರೆದ ಮಾತ್ರಕ್ಕೆ ಸಾಧಿಸಿದ್ದು ಸಾಕು ಎಂದು ಅವರು ಸುಮ್ಮನಾಗಲಿಲ್ಲ. ಒಬ್ಬ ಸಾಮಾನ್ಯ ರೈತನ, ನಿರ್ಗತಿಕನ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತುವಂತಾಗಬೇಕು ಎಂಬ ಕನಸು ಕಂಡರು. ಅಂತಹ ಕನಸಿನ ಬೆನ್ನುಹತ್ತಿ ಹೊರಟ ಆಳ್ವರ ಪ್ರಯತ್ನದ ಫಲವಾಗಿ ಇಂದು ವಿದ್ಯಾಗಿರಿಯಲ್ಲಿ ಹತ್ತಾರು ಕಟ್ಟಡಗಳನ್ನು ಹೊಂದಿರುವ ಒಂದು ಭವ್ಯ ಕ್ಯಾಂಪಸ್ ತಲೆಯತ್ತಿದೆ.
ಇದು ಉತ್ಪ್ರೇಕ್ಷೆಯ ಮಾತಲ್ಲ. ಜೈನ ಬಸದಿಗಳಿಗಾಗಿ, ಸಾವಿರ ಕಂಬಗಳ ದೇವಾಲಯಕ್ಕಾಗಿಯೇ ಪ್ರಸಿದ್ಧಿಯಾಗಿದ್ದ ಮೂಡಬಿದ್ರೆಯನ್ನು ಇಂದು ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್‌ಗಳಿಂದಾಗಿ ಗುರುತಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ವಿದ್ಯಾಗಿರಿಯಲ್ಲಿರುವ ‘ಆಳ್ವಾಸ್ ಕಾಲೇಜ್’ ಕ್ಯಾಂಪಸನ್ನು ಒಮ್ಮೆ ನೋಡಿದರೆ ಆಳ್ವ ಅವರ ಸಾಧನೆ ಏನೆಂಬುದು ಅರಿವಾಗುತ್ತದೆ. 30 ಸಾವಿರ ವಿದ್ಯಾರ್ಥಿಗಳಿಗೆ ಅಲ್ಲಿ ವಿದ್ಯಾದಾನ ಮಾಡಲಾಗುತ್ತಿದೆ! ನಮ್ಮ ಮಠ-ಮಂದಿರಗಳೂ ಸೇರಿದಂತೆ ಎಲ್ಲರೂ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನಷ್ಟೇ ಕಟ್ಟಿ ಕಾಸು ಮಾಡುತ್ತಿದ್ದರೆ ಆಳ್ವ ಅವರು ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಕೋರ್ಸ್‌ಗಳನ್ನೂ ತೆರೆದಿದ್ದಾರೆ.
ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳನ್ನು ಸ್ಥಾಪನೆ ಮಾಡಿದ್ದಾರೆ, ಜೈವಿಕ ತಂತ್ರಜ್ಞಾನದಲ್ಲಿ ಪದವಿ ಆರಂಭಿಸಿದ್ದಾರೆ. ಇಂದು ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಕಾಣಿಸಿಗದಂತಹ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯಗಳನ್ನು ಆಳ್ವಾಸ್ ಕಾಲೇಜಿನಲ್ಲಿ ಕಾಣಬಹುದು, ಇಷ್ಟೆಲ್ಲಾ ಸವಲತ್ತುಗಳನ್ನು ಕಲ್ಪಿಸಿರುವ ಆಳ್ವಾಸ್ ಕಾಲೇಜಿನ ವಿಶೇಷತೆಯೆಂದರೆ ಸಾಮನ್ಯ ವ್ಯಕ್ತಿಯ ಮಕ್ಕಳೂ ಅಲ್ಲಿ ಕಲಿಯಬಹುದಾಗಿದೆ. ಇತರೆ ಕಾಲೇಜುಗಳಿಗಿಂತ ಕಡಿಮೆ ಫೀ ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅದು ಯಾವುದೇ ತರಗತಿಯಾಗ ಬಹುದು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತದೆ! ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಓದಿಸುವಂತಹ ಪದ್ದತಿಯೂ ಇದೆ. ಸಾಮಾನ್ಯವಾಗಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುತ್ತಾರೆ. ಆದರೆ ಡಾ ಮೋಹನ್ ಆಳ್ವ ಅವರ ಬಹುದೊಡ್ಡ ಹೆಗ್ಗಳಿಕೆಯಂದರೆ ಅವರು ಮೂಡಬಿದ್ರೆಯಲ್ಲಿಯೇ ಅತ್ಯಂತ ಜನಪ್ರಿಯ ವ್ಯಕ್ತಿ. ಅವರು ಕಟ್ಟಿರುವುದು ಎಲ್ಲರಿಗೂ ಮಾದರಿಯಾಗಬಲ್ಲ ಕಾಲೇಜು, ಆ ಕಾಲೇಜು ವಿದ್ಯಾದಾನವೊಂದೇ ಅಲ್ಲ, ಕ್ರೀಡೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದೆ.
2006ರಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟದಲ್ಲಿ ಅರೆ ಮ್ಯಾರಥಾನ್‌ನಲ್ಲಿ ಕರ್ನಾಟಕಕ್ಕೆ ಬಂದ ಏಕೈಕ ಚಿನ್ನದ ಪದಕವನ್ನು ಗಳಿಸಿದ ಗುರುನಾಥ್ ಕಲ್ಯಾಣಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ, ಆ ಅಥ್ಲೆಟಿಕ್ ಕೂಟದಲ್ಲಿ ಕಾಲೇಜಿನ 55 ಕ್ರೀಡಾಪಟುಗಳು ಭಾಗವಹಿಸಿದ ದಾಖಲೆಯನ್ನೇ ನಿರ್ಮಿಸಿದ್ದಾರೆ. ಅಖಿಲ ಭಾರತ ಯೂತ್ ಫೆಸ್ಟ್‌ನಂತಹ ಸಾಂಸ್ಕೃತಿಕ ಸ್ಪರ್ಧೆಯಲ್ಲೂ ಪದಕ ಗೆಲ್ಲುವ ಮೂಲಕ ಆಳ್ವಾಸ್ ತನ್ನ ಛಾಪು ಮೂಡಿಸಿದೆ. ಇದೇನು ಮ್ಯಾಜಿಕ್ ಅಲ್ಲ ಪಾಳುಬಿದ್ದಿದ್ದ ಮೂಡಬಿದ್ರೆಯ ಸರಕಾರಿ ಕ್ರೀಡಾಂಗಣವನ್ನು ಸ್ವಂತ ಪಾಕೆಟ್‌ನಿಂದ 25 ಲಕ್ಷ ರು., ಖರ್ಚು ಮಾಡಿ ಅಭಿವೃದ್ಧಿಗೊಳಿಸಿರುವ ಡಾ. ಮೋಹನ್ ಆಳ್ವ, ಕ್ರೀಡಾ ತರಬೇತುದಾರರನ್ನು ನೇಮಕ ಮಾಡಿ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ನೂತನ ಉಪನ್ಯಾಸಕರೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಏಕರೂಪದ ಪ್ರಾರಂಭಿಕ ಸಂಬಳವನ್ನು ನೀಡಲಾಗುತ್ತದೆ. ಹೀಗೆ ಹೊಸದಾಗಿ ವೃತ್ತಿಗೆ ಕಾಲಿಡುವ ಎಲ್ಲ ಉಪನ್ಯಾಸಕರಿಗೂ ಸಾರಾಸಗಟವಾಗಿ ಅತಿ ಹೆಚ್ಚು ಸಂಬಳ ನೀಡುವ ಖಾಸಗಿ ಕಾಲೇಜು ಇದಾಗಿದೆ. ಇಂತಹ ಆಲ್ ರೌಂಡ್ ಡೆವೆಲಪ್‌ಮೆಂಟ್ ಮತ್ತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಆಳ್ವಾಸ್ ದಕ್ಷಿಣ ಕನ್ನಡದಲ್ಲಿಯೇ ನಂಬರ್ ಒನ್ ಕಾಲೇಜು.
ಇಷ್ಟೆಲ್ಲಾ ಜನಾನೂರಾಗಿ ಕಾರ್ಯ ಮಾಡುತ್ತಿರುವ ಮೊಹನ್ ಆಳ್ವ ಅವರು ಕುಬೇರರೇನಲ್ಲ! ಕೋಟಿ ಕೋಟಿ ರು., ಸಾಲ ಮಾಡಿ ಜ್ಞಾನ ದೇಗುಲಗಳನ್ನು ಕಟ್ಟಿದ್ದಾರೆ. ಸಾಲದ ಹೊರೆಯಿದ್ದರೂ ಆಳ್ವಾಸ್ ವಿರಾಸತ್ ಎಂಬ ಸಂಗೀತ ಸುಧೆಯನ್ನು ಕಳೆದ 20 ವರ್ಷಗಳಿಂದ ಹರಿಸುತ್ತಾ ಬಂದಿದ್ದಾರೆ. ತಲಾ ನಾಲ್ಕು ಲಕ್ಷ ರು., ಗೌರವ ಧನ ನೀಡಿ ಜಾಕಿರ್ ಹುಸೇನ್ ಹಾಗೂ ಬಾಲಸುಬ್ರಹ್ಮಣ್ಯಂ ಅವರಂತಹ ಮಹಾನ್ ಕಲಾವಿದರನ್ನು ಕರೆಸಿ ಸೈ ಎನಿಸಿಕೊಂಡಿದ್ದಾರೆ. ಸೋನಾಲ್ ಮಾನ್ ಸಿಂಗ್, ಕುನ್ನುಕುಡಿ, ವೈದ್ಯನಾಥನ್ ಅವರಂತಹವರು ಮೂಡಬಿದ್ರೆಗೆ ಬಂದು ಮೆಚ್ಚಿ ಹೋಗಿದ್ದಾರೆ. ಇಂತಹ ಪ್ರತಿ ವಿರಾಸತ್‌ಗೆ ಕನಿಷ್ಠ 35 ಲಕ್ಷ ರು., ಬೇಕಾಗುತ್ತದೆ. ಮೂರು ವರ್ಷದಿಂದ ನಡೆಸಿಕೊಡು ಬರುತ್ತಿರುವ ಆಳ್ವಾಸ್ ನುಡಿಸಿರಿಗೆ 25 ಲಕ್ಷ ರು., ಖರ್ಚಾಗುತ್ತದೆ.
ಮೈಸೂರು, ಬೆಂಗಳೂರುಗಳಿಗೆ ಮಾತ್ರ ಸೀಮಿತವಾಗಿದ್ದ ಸಾಂಸ್ಕೃತಿಕ ವಾತಾವರಣ ಮೋಹನ್ ಆಳ್ವರಿಂದಾಗಿ ದಕ್ಷಿಣ ಕನ್ನಡಕ್ಕೂ ಬರುವಂತಾಗಿದೆ. ಮನಸ್ಸಿದ್ದರೆ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ಆಳ್ವ ಅವರಿಗಿಂತ ಉದಾಹರಣೆ ಬೇಕಿಲ್ಲ. ಅಷ್ಟೆ ಅಲ್ಲಾ, ಡಾ. ಮೋಹನ್ ಆಳ್ವ ಅವರು ಒಬ್ಬ ಭರತನಾಟ್ಯ ಕಲಾವಿದ. ರಂಗೋಲಿ ಹಾಕುತ್ತಾರೆ. ಭೂತದ ಕೋಲಾ ಕಟ್ಟುತ್ತಾರೆ. ವೇದಿಕೆ ನಿರ್ಮಾಣದಲ್ಲಿ ಎತ್ತಿದ ಕೈ. ಸುಮಾರು ಎರಡು ಸಾವಿರ ಗಣೇಶನ ವಿಭಿನ್ನ ವಿಗ್ರಹಗಳನ್ನು ಸಂಗ್ರಹಿಸಿರುವ ಅವರು ನೈಜ್ಯ ಅರ್ಥದಲ್ಲಿ ಬಹುಮುಖ ಪ್ರತಿಭೆ. 1998ರಲ್ಲಿ ಪತ್ನಿಯನ್ನು ಕಳೆದುಕೊಂಡ ಮೊಹನ್ ಆಳ್ವರು ಹೆಂಡತಿಯ ಹೆಸರಿನಲ್ಲಿ ಶೋಭಾವನ ಎಂಬ ಸಸ್ಯಧಾಮವನ್ನು ನಿರ್ಮಿಸಿದ್ದಾರೆ. ಇಲ್ಲಿ ಸಂಪಿಗೆ ಸೇರಿದಂತೆ ಹಲವಾರು ಅಮೂಲ್ಯ ಸಸ್ಯಗಳ ವಿಬಿನ್ನ ತಳಿಗಳನ್ನು ಬೆಳೆಸಿದ್ದಾರೆ.
ಹದಿನಾರು ವಿಧದ ತುಳಸಿ ಗಿಡಗಳಿವೆ. ಅಷ್ಟದಿಕ್ಪಾಲಕರ ಸಂಕೇತವಾಗಿ ಎಂಟು ವಿಧದ ಮರಗಳನ್ನು ಬೆಳೆಸಿದ್ದಾರೆ. ನಿಯಮದಂತೆ ಸತ್ಯನಾರಾಯಣ ಪೂಜೆಗೆಂದೇ ಮೀಸಲಾದ 24 ಪುಷ್ಪಗಳಿದ್ದು, ಇವು ದುರ್ಲಭವಾದ್ದರಿಂದ ನಮ್ಮ ಅರ್ಚಕರು ತುಳಸಿಯೊಂದರಿಂದಲೇ 24 ಬಾರಿ ಪ್ರೋಕ್ಷಣೆ ಮಾಡುತ್ತಾರೆ. ಆದರೆ ಶೋಬಾವನದಲ್ಲಿ 24 ಪುಷ್ಪಗಳ ಗಿಡಗಳನ್ನು ಬೆಳೆಸಿದ್ದಾರೆ. ಒಂದು ಸಂಸ್ಥೆಯನ್ನು ಕಟ್ಟುವುದಕ್ಕ್ಕೂ, ಸಮಾಜವನ್ನು ಕಟ್ಟುವುದಕ್ಕೂ ಬಹಳ ವ್ಯತ್ಯಾಸವಿದೆ. ಶಿಕ್ಷಣ ಕ್ಷೇತ್ರವನ್ನೂ ಒಂದು ಉದ್ಯಮವನ್ನಾಗಿ ಪರಿವರ್ತಿಸಿರುವವರ ನಡುವೆ ಅದನ್ನು ದ್ಯೇಯವಾಗಿಟ್ಟುಕೊಂಡು ಸಮಾಜವನ್ನು ಕಟ್ಟುತ್ತಿರುವ ಡಾ. ಮೋಹನ್ ಆಳ್ವ ಅವರ ಬಗ್ಗೆ ಬರೆಯಲು ಕಾರಣಗಳಾಗಲಿ, ಸಂದರ್ಭವಾಗಿಲಿ ಬೇಕಿಲ್ಲ. ಆದರೆ ಮೊನ್ನೆ ನಡೆದ ಗಣರಾಜೋತ್ಸವದ ದಿನದಂದು ಆಳ್ವಾಸ್ 30 ಸಾವಿರ ವಿದ್ಯಾರ್ಥಿಗಳು ಒಂದೆಡೆ ನಿಂತು ರಾಷ್ಟ್ರಗೀತೆಯನ್ನು ಹಾಡುತ್ತಿರುವ ವಿಹಂಗಮ ನೋಟವನ್ನು ಚಿತ್ರದಲ್ಲಿ ಕಂಡಾಗ ಆಳ್ವರ ಸಾಧನೆ ಬಗ್ಗೆ ಬರೆಯಬೇಕೆಂಬ ತುಡಿತವನ್ನು ತಡೆದುಕೊಳ್ಳಲಾಗಲಿಲ್ಲ. ಈ ‘ಮೋಹನ’ರಾಗ ನಾಡಿನಾದ್ಯಂತ ಮೊಳಗಲಿ.

Mohan Alva

Comments are closed.