Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಿಮ್ಮ ಮನೆಯ ಸೈಟೂ ಕೆಂಪೇಗೌಡನ ಕೆರೆಯಾಗಿತ್ತು ಕಾರ್ನಾಡರೇ!

ನಿಮ್ಮ ಮನೆಯ ಸೈಟೂ ಕೆಂಪೇಗೌಡನ ಕೆರೆಯಾಗಿತ್ತು ಕಾರ್ನಾಡರೇ!

ನಿಮ್ಮ ಮನೆಯ ಸೈಟೂ ಕೆಂಪೇಗೌಡನ ಕೆರೆಯಾಗಿತ್ತು ಕಾರ್ನಾಡರೇ!

ಅದು 1893. ” Brothers and Sisters of America ”  ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾನಂದರು ಜಗತ್ತನ್ನು ಗೆದ್ದ ಆ ಕ್ಷಣವದು. ಒಂದೇ ದಿನದಲ್ಲಿ ಅಮೆರಿಕದ ಮನೆಮಾತಾಗಿಬಿಟ್ಟರು. ಅಲ್ಲಿಂದ ಬ್ರಿಟನ್‍ಗೆ ಬಂದರು. ಹತ್ತಾರು ಭಾಷಣ, ಚರ್ಚಾಕೂಟ, ಸಂವಾದಗಳಿಗೆ ಬರುವಂತೆ ಬ್ರಿಟನ್ನಿನಿಂದ ಆಹ್ವಾನ ಬಂದಿತ್ತು. ಅಂಥದ್ದೊಂದು ಸಂವಾದದಲ್ಲಿತೊಡಗಿರುವಾಗ ವಿವೇಕಾನಂದರು ಗೌತಮ ಬುದ್ಧನ ಬಗ್ಗೆ ಮಾತನಾಡುತ್ತಿದ್ದರು. ವಿವೇಕಾನಂದರಿಗೆ ಬುದ್ಧನೆಂದರೆ ಅಚ್ಚುಮೆಚ್ಚು. ಬಹುವಾಗಿ ಬುದ್ಧನನ್ನು ಹೊಗಳುತ್ತಿದ್ದರು. ಮಧ್ಯದಲ್ಲೇಎದ್ದುನಿಂತ ಬ್ರಿಟಿಷನೊಬ್ಬ, “ನಿಮ್ಮ ಬುದ್ಧ ಅಷ್ಟು ಗ್ರೇಟ್, ಇಷ್ಟು ಗ್ರೇಟ್ ಎನ್ನುತ್ತಿದ್ದೀರಲ್ಲಾ, ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲರೂ ಬ್ರಿಟನ್‍ಗೆ ಬಂದು ಹೋಗಿದ್ದಾರೆ. ನಿಮ್ಮ ಬುದ್ಧ ಗ್ರೇಟ್ಎನ್ನುವುದಾದರೆ ಅವನೇಕೆ ಬ್ರಿಟನ್‍ಗೆ ಭೇಟಿ ನೀಡಲಿಲ್ಲ” ಎಂದು ಕೇಳಿಬಿಟ್ಟ!

ಅಯ್ಯೋ ದಡ್ಡ, ಬುದ್ಧನಿದ್ದಾಗ ನಿನ್ನ ಬ್ರಿಟನ್ ಎಲ್ಲಿತ್ತು? ನಿನ್ನ ಯುರೋಪ್ ಎಲ್ಲಿತ್ತು? ನಿನ್ನ ಅಮೆರಿಕವೆಲ್ಲಿತ್ತು? ಅಷ್ಟೇಕೆ, ನಿನ್ನ ಕ್ರಿಶ್ಚಿಯಾನಿಟಿ ಎಲ್ಲಿತ್ತು? ಎಂದರು ವಿವೇಕಾನಂದರು!

ಮೊನ್ನೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‍ನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವಾಗ ಮಾತಿಗೆ ನಿಂತ ಜ್ಞಾನಪೀಠಿ ಗಿರೀಶ್ ಕಾರ್ನಾಡ್ ಅವರುಬಹಳ ಶೋಧಕ ಹಾಗೂ ಚಿಂತಕ ದೃಷ್ಟಿಯಿಂದ, “ಕೇಂಪೇಗೌಡನೇನು ಸ್ವಾತಂತ್ರ್ಯ ಹೋರಾಟಗಾರನಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡನ ಬದಲು ಟಿಪ್ಪುವಿನಹೆಸರಿಟ್ಟಿದ್ದರೆ ಹೆಚ್ಚು ಸೂಕ್ತವಿರುತ್ತಿತ್ತು” ಎಂದು ಆಣಿಮುತ್ತು ಉದುರಿಸಿದರು ಹಾಗೂ ನೆರೆದವರಿಂದ ಶಹಭಾಸ್‍ಗಿರಿಯನ್ನೂ ಪಡೆದುಕೊಂಡರು. ಆಗ ಬುದ್ಧನೇಕೆ ಬ್ರಿಟನ್ನಿಗೆ ಬರಲಿಲ್ಲ ಎಂದು ಕೇಳಿದಫಿಂರಂಗಿಗೆ ವಿವೇಕಾನಂದರು ಮಾತಿನ ತಪರಾಕಿ ಹಾಕಿದ್ದು ನೆನಪಿಗೆ ಬಂತು! ಕೆಂಪೇಗೌಡ ಬೆಂಗಳೂರನ್ನು ಕಟ್ಟಿದ್ದು, ಆಳಿದ್ದು 15ನೇ ಶತಮಾನದಲ್ಲಿ. ಎಲ್ಲಿಯ ಕೆಂಪೇಗೌಡ, ಎಲ್ಲಿಯ ಬ್ರಿಟಿಷರು?ಅವರು ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಆರಂಭಿಸಿದ್ದು 1757ರ ಪ್ಲಾಸಿ ಕದನದ ನಂತರ. ಭಾರತ ಸಂಪೂರ್ಣವಾಗಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದು 1858ರಲ್ಲಿ.ಕೆಂಪೇಗೌಡನಿದ್ದಾಗ ಬ್ರಿಟಿಷರು ಭಾರತಕ್ಕೇ ಕಾಲಿಟ್ಟಿರಲಿಲ್ಲವೆಂದಾದರೆ ಅವರ ವಿರುದ್ಧ ಹೋರಾಡುವ ಪ್ರಸಂಗವೆಲ್ಲಿ ಬಂತು ಕಾರ್ನಾಡರೇ?

ನಿಮ್ಮ ಮಾತನ್ನು ಕೇಳಿದ ನಂತರ, ಮೈಸೂರುಪಾಕ್‍ನಲ್ಲಿ ಮೈಸೂರು ಇರಲ್ಲ ಅಂತ ಒಪ್ಪುತ್ತೀರಿ. ಆದರೆ “ಜ್ಞಾನಪೀಠ” ಪಡೆದವರಲ್ಲಿ “ಜ್ಞಾನ” ಇರಲೇಬೇಕು ಎಂದು ಹಠ ಏಕೆ ಮಾಡುತ್ತೀರಿಎಂಬ ವಿಡಂಬನೆಯೊಂದು ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ ಸಾರ್! ಆದರೆ ಜ್ಞಾನಪೀಠದಂಥ ಸಾಹಿತ್ಯಕ್ಕಾಗಿನ ಮೇರು ಪುರಸ್ಕಾರ ಪಡೆದವರೇ ಹೀಗೆಲ್ಲ ಮಾತನಾಡಿದರೆ ಕಥೆಯೇನು ಸ್ವಾಮಿ?ಇತಿಹಾಸದ ಕನಿಷ್ಠ ಜ್ಞಾನ, ಕಾಲಘಟ್ಟವಾದರೂ(ಟೈಮ್ ಲೈನ್) ನಿಮಗೆ ಗೊತ್ತಿರಬೇಕಲ್ಲವೆ? ಸ್ವಾಮಿ ಕಾರ್ನಾಡರೇ, ಟಿಪ್ಪುಗೂ ನನಗೂ 40 ವರ್ಷಗಳ ಸಂಬಂಧವಿದೆ ಎಂದು ಬಹಳಹೆಮ್ಮೆಯಿಂದ ಹೇಳಿಕೊಳ್ಳುತ್ತೀರಲ್ಲಾ, ನೀವು ವಾಸಿಸುತ್ತಿರುವ ವಿಶ್ವಪ್ರಸಿದ್ಧ ಬೆಂಗಳೂರು ನಗರಿಯ ನಿರ್ಮಾಣದ ಹಿಂದೆ ಇರುವ ವ್ಯಕ್ತಿಯ, ಆತನ ಶ್ರಮದ, ತ್ಯಾಗದ ಬಗ್ಗೆ 40 ವರ್ಷ ಬೇಡ, 4ಗಂಟೆಯಾದರೂ ಓದಿ ತಿಳಿದುಕೊಂಡಿದ್ದರೆ ನಿಮ್ಮ ಅಜ್ಞಾನ ದೂರವಾಗುತ್ತಿತ್ತು. ಕೆಂಪೇಗೌಡನ ಬದಲು ಟಿಪ್ಪುವಿನ ಹೆಸರಿಡಬೇಕಿತ್ತು ಎಂದು ಕೃತಘ್ನತೆಯಿಂದ ನೀವು ಮಾತನಾಡುತ್ತಿರಲಿಲ್ಲ.ಅಷ್ಟುಮಾತ್ರವಲ್ಲ, ಪ್ರತಿಭಟನೆಗೆ ಹೆದರಿ ಬುಧವಾರ ಕ್ಷಮೆಯಾಚನೆ ಮಾಡಿದ ನಂತರ ಟಿವಿಯಲ್ಲಿ ಮಾತನಾಡುತ್ತಾ, ಕೆಂಪೇಗೌಡನೂ ಒಳ್ಳೆಯವನಿರ”ಬಹುದು” ಎಂದಿರಲ್ಲಾ ನಿಮಗೆಆತ್ಮಸಾಕ್ಷಿಯೇ ಇಲ್ಲವೇ?

ಇಷ್ಟಕ್ಕೂ ಕೆಂಪೇಗೌಡನ ಬಗ್ಗೆ ನಿಮಗೇನು ಗೊತ್ತು ಕಾರ್ನಾಡರೇ?

ಒಮ್ಮೆ ಶಿವನಸಮುದ್ರದ ಬಳಿ ಬೇಟೆಗೆ ಹೋಗಿದ್ದಾಗ ಭವಿಷ್ಯದ ಭವ್ಯ ನಗರಿಯೊಂದರ ನಿರ್ಮಾಣದ ಕನಸ್ಸು ಕಂಡವನು ಕೆಂಪೇಗೌಡ. ಒಂದು ನಗರವೆಂದರೆ ಅದರಲ್ಲಿ ಕೋಟೆಯಿರಬೇಕು, ಕೆರೆ,ಕಟ್ಟೆಗಳಿರಬೇಕು, ಭಕುತಿಗೆ ದೇಗುಲಗಳಿರಬೇಕು, ವಹಿವಾಟಿಗೆ ಪ್ರತ್ಯೇಕ ಮಾರುಕಟ್ಟೆಗಳಿರಬೇಕು ಎಂದು ಮುಂದಾಲೋಚಿಸಿದನು. ಇಂತಹ ಯೋಚನೆಗಳೊಂದಿಗೆ 1537ರಲ್ಲಿ ಕೆಂಪೇಗೌಡನುಬೆಂಗಳೂರನ್ನು ಸ್ಥಾಪಿಸಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ನಗರದ ನಿರ್ಮಾಣವೂ ಆರಂಭವಾಯಿತು. ಭಕುತಿಗಾಗಿ ಗವಿಗಂಗಾಧರೇಶ್ವರ, ಬಸವೇಶ್ವರ, ದೊಡ್ಡಗಣೇಶ,ಹನುಮಂತ, ಚೆನ್ನಿಗರಾಯ ಸ್ವಾಮಿ ದೇವಾಲಯಗಳು ನಿರ್ಮಾಣವಾದವು. ವರ್ತೂರು, ಯಲಹಂಕ, ಬೇವೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕನ್ನೇಲಿ,ಬಾಣಾವಾರ, ಹೆಸರುಘಟ್ಟಗಳು ಸೇರ್ಪಡೆಗೊಂಡವು. ಆಯಾ ವ್ಯಾಪಾರಕ್ಕಾಗಿ ಆಯಾ ಹೆಸರಿನ ಪೇಟೆ, ರಸ್ತೆಗಳೇ ನಿರ್ಮಾಣಗೊಂಡವು. ಎಲ್ಲಾ ವಿಧದ ವಹಿವಾಟಿಗಾಗಿ ದೊಡ್ಡಪೇಟೆ(ಅವೆನ್ಯೂರಸ್ತೆ), ಚಿಕ್ಕಪೇಟೆಗಳು, ಉಳಿದ ವಸ್ತುಗಳಿಗಾಗಿ ಅದದೇ ಹೆಸರಿನ ಅರಳೇಪೇಟೆ, ಥರಗುಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಬಳೆಪೇಟೆ, ಕುರುಬರಪೇಟೆ, ಕುಂಬಾರರ ಪೇಟೆ, ಗಾಣಿಗರಪೇಟೆ,ಉಪ್ಪಾರಪೇಟೆಗಳು ತಲೆಯೆತ್ತಿದವು. ಅಗ್ರಹಾರಗಳನ್ನು ನಿರ್ಮಾಣ ಮಾಡಿಕೊಟ್ಟ. ಆಯಾ ಬಡಾವಣೆಗಳಿಗೆ ಅಲ್ಲಲ್ಲೇ ಕುಡಿಯುವ ನೀರಿನ ಪೂರೈಕೆಗಾಗಿ ಕೆರೆಗಳು ನಿರ್ಮಾಣವಾದವು!ಬೆಂಗಳೂರು ಸಾವಿರ ಕೆರೆಗಳ ನಗರಿ ಎಂಬ ಹೆಸರಿಗೆ ಭಾಜನವಾಯಿತು. ಅದಿರಲಿ, ನಿಮ್ಮ ಮನೆಯಿರುವ ಸರ್ಕಾರಿ ಸೈಟೂ ಕೂಡಾ ಒಂದಾನೊಂದು ಕಾಲದಲ್ಲಿ ಕೆಂಪೇಗೌಡ ಕಟ್ಟಿದಕೆರೆಯಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ ಕಾರ್ನಾಡರೇ? ನಿಮ್ಮನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷದ ಕಚೇರಿ ಕೂಡಾಕೆಂಪೇಗೌಡನ ಕೆರೆಯಾಗಿತ್ತು! ರಿಯಲ್ ಎಸ್ಟೇಟ್ ತಿಮಿಂಗಿಲ ದಂಧೆಯ ಹೊರತಾಗಿಯೂ ಇಂದಿಗೂ ಬೆಂಗಳೂರಿನಲ್ಲಿ 183 ಕರೆಗಳು ಉಳಿದಿವೆ ಹಾಗೂ ಬೆಂಗಳೂರನ್ನು ತಣ್ಣಗೆ ಇಟ್ಟಿವೆ.ಅದಕ್ಕಾದರೂ ಕೃತಜ್ಞತೆ ಬೇಡವೇ?

ಟಿಪ್ಪುವಿನ ಲಾವಣಿಯನ್ನೇ ಇತಿಹಾಸವೆಂದು ಪ್ರತಿಪಾದಿಸುವ ನಿಮಗೊಂದು ಘಟನೆಯನ್ನು ಹೇಳಲೇಬೇಕು. ಸುಂದರ ನಗರಿಯನ್ನು ನಿರ್ಮಾಣ ಮಾಡಿದ ಕೆಂಪೇಗೌಡ, ಒಂದು ಒಳ್ಳೆಯಕೋಟೆಯ ನಿರ್ಮಾಣದ ಕನಸ್ಸನ್ನೂ ಕಂಡಿದ್ದ. ಆದರೆ ಹೆಬ್ಬಾಗಿಲನ್ನು ಎಷ್ಟೇ ಸಲ ನಿಲ್ಲಿಸಿದರೂ ಬಿದ್ದುಹೋಗಲು ಆರಂಭಿಸುತ್ತದೆ. ಪುರೋಹಿತರನ್ನು ಕೇಳಿದಾಗ ಗರ್ಭಿಣಿ ಸ್ತ್ರೀಯನ್ನುಬಲಿಕೊಡಬೇಕೆಂದು ಹೇಳುತ್ತಾರೆ. ಕೆಂಪೇಗೌಡರು ಬಹುವಾಗಿ ನೊಂದುಕೊಳ್ಳುತ್ತಾರೆ. ಇದನ್ನೆಲ್ಲ ಗಮನಿಸಿದ ಅವರ ಸೊಸೆ ಲಕ್ಷ್ಮಮ್ಮ, ಅನ್ಯ ಹೆಣ್ಣೇಕೆ ಬಲಿಯಾಗಬೇಕು ಎಂದೆಣೆಸಿ ತಾನೇ ಕೋಟೆಬಾಗಿಲಿಗೆ ಬಲಿಯಾಗುತ್ತಾಳೆ. ಹೀಗೆ ತನ್ನ ಗರ್ಭಿಣಿ ಸೊಸೆಯನ್ನೇ ಬಲಿಕೊಟ್ಟ ನೋವನ್ನು ಎದೆಯಲ್ಲಿಟ್ಟುಕೊಂಡು ಕೆಂಪೇಗೌಡ ಕಟ್ಟಿದ ನಗರ ಬೆಂಗಳೂರು. ಇಂಥ ನಗರದ ಅಂತಾರಾಷ್ಟ್ರೀಯವಿಮಾನ ನಿಲ್ದಾಣಕ್ಕೆ ನಗರದ ನಿರ್ಮಾತೃವಿನ ಬದಲು ಕೊಳ್ಳೆ ಹೊಡೆದವನ ಹೆಸರಿಡಬೇಕೆಂದು ಒತ್ತಾಯಿಸುತ್ತೀರಲ್ಲಾ ನಿಮ್ಮ ಮನಸ್ಥಿತಿಗೆ ಏನನ್ನಬೇಕು? ಅದಿರಲಿ, ನಿಮ್ಮ ಪ್ರಕಾರ ಸ್ವಾತಂತ್ರ್ಯಹೋರಾಟಗಾರರ ಹೆಸರನ್ನು ಮಾತ್ರ ವಿಮಾನ ನಿಲ್ದಾಣಕ್ಕಿಡಬೇಕೆ? ನಿಮ್ಮ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕೆದೆಹಲಿ ಹಾಗೂ ಹೈದರಾಬಾದ್‍ನ ವಿಮಾನ ನಿಲ್ದಾಣಗಳಿಗೆ ಅವರ ಹೆಸರನ್ನಿಟ್ಟಿದ್ದಾರೆ ಹೇಳಿ ಜ್ಞಾನಪೀಠಿಗಳೇ?

ಮುಂದುವರಿದು, ಕಳೆದ 300 ವರ್ಷಗಳಲ್ಲಿ ಟಿಪ್ಪುವಿನಂಥ ಒಬ್ಬ ಕನ್ನಡಿಗನೇ ಜನಿಸಿಲ್ಲ ಎಂದಿರಲ್ಲಾ ನಿಮಗೇನಾಗಿದೆ? ಈ ದೇಶಕ್ಕೆ ಮೊದಲ ತಲೆಮಾರಿನ ಬಹುತೇಕ ಎಲ್ಲ ವಿಜ್ಞಾನಿಗಳನ್ನುನೀಡಿದ ಐಐಎಸ್‍ಸಿ ಸ್ಥಾಪನೆಗೆ ಕಾರಣೀಭೂತರಾದ, ಮೈಸೂರು ವಿವಿ, ಕನ್ನಂಬಾಡಿ ಕಟ್ಟೆ, ಜೋಗ-ಶಿವನಸಮುದ್ರ ವಿದ್ಯುತ್ ಯೋಜನೆ, ಮೈಸೂರು ಬ್ಯಾಂಕ್ ಹಾಗೂ ವಿವಿಧ ಕಾರ್ಖಾನೆಗಳಸ್ಥಾಪನೆ ಮಾಡಿ ಜನರಿಗೆ ಅನ್ನ, ನೀರು, ಉದ್ಯೋಗ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ, ಸಾಹಿತ್ಯದ ಮೇರು ತಾರೆಗಳಾದ ಕುವೆಂಪು, ಕಾರಂತ, ಬೇಂದ್ರೆ,ರಾಜ್‍ಕುಮಾರ್, ರಾಜಾರಾಮಣ್ಣ, ಸಿಎನ್‍ಆರ್ ರಾವ್ ಇವರ್ಯಾರು ನಿಮಗೆ ಮಹಾನ್ ಕನ್ನಡಿಗರಾಗಿ ಕಾಣುವುದಿಲ್ಲವೆ? ಇವರಿಗಿಂತಲೂ ದೊಡ್ಡವನಾದನೆ ನಿಮ್ಮ ಟಿಪ್ಪು? ಆತ ಕೊಟ್ಟ ಒಂದುಜನಾನುರಾಗಿ ಕೊಡುಗೆಯನ್ನು ಉದಾಹರಿಸಿ ನೋಡೋಣ? ಸ್ವಾಮಿ ಜ್ಞಾನಪೀಠಿಗಳೇ, ಕನ್ನಡದಲ್ಲಿ ನಾಲ್ಕು ಪದ ಮಾತನಾಡಲು ಬಾರದ ವಕ್ಫ್ ಸಚಿವ ಕಮರುಲ್ಲಾ ಇಸ್ಲಾಂರಷ್ಟೇಕನ್ನಡಿಗನಾಗಿದ್ದ ನಿಮ್ಮ ಟಿಪ್ಪು ಸುಲ್ತಾನ್! ಪಾಲಿಕೆ ಚುನಾವಣೆಯನ್ನು ನೆಪವಾಗಿಟ್ಟುಕೊಂಡು ಬೆಂಗಳೂರನ್ನು ಮೂರು ಚೂರು ಮಾಡಲು ಹೊರಟಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬೇಕೆಂದಿರುವ ನೀವು, ಬೆಂಗಳೂರಿನ ಹಿನ್ನೆಲೆ ಹಾಗೂ ಕೆಂಪೇಗೌಡನ ಹೆಸರನ್ನು ಅಳಿಸಿಹಾಕಲು ಯತ್ನಿಸುತ್ತಿದ್ದೀರಿ ಎಂಬುದು ಜನಕ್ಕೆ ಅರ್ಥವಾಗಿದೆ.ಸಾಕು ಮಾಡಿ.

 

kempegowda article

Comments are closed.