Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ!

ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ!

ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ!

ಇದುವರೆಗೂ ಭಾರತ 14 ರಾಷ್ಟ್ರಪತಿಗಳನ್ನು ಕಂಡಿದೆ. ಆದರೆ ಇಂದಿಗೂ ಜನರ ಮನಸ್ಸಲ್ಲಿ ಉಳಿದವರು ಸರ್ವೇಪಲ್ಲಿ ರಾಧಾಕೃಷ್ಣನ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮಾತ್ರ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವತ್ತು ನಮ್ಮ ಸ್ಯಾಂಡಲ್‌ವುಡ್ ಚಿತ್ರರಂಗ ಎಷ್ಟೇ ಮುಂದುವರಿದಿರಲಿ, ಕನ್ನಡ ಸಿನಿಮಾ ಎಂದರೆ ರಾಜ್‌ಕುಮಾರ್ ಎಂದು ಹೇಗೆ ಹೇಳುತ್ತಾರೋ ಹಾಗೇ ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಂ ಎನ್ನುತ್ತಾರೆ. ಕಲಾಂ ಬದುಕಿರಲಿ, ಬಿಡಲಿ ಅದೆಲ್ಲ ಲೆಕ್ಕಕ್ಕೇ ಇಲ್ಲ, ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಮೇ ಎನ್ನುವಷ್ಟರ ಮಟ್ಟಿಗೆ ಅವರು ನಮ್ಮನ್ನೆಲ್ಲ ಆವರಿಸಿಕೊಂಡಿದ್ದರು.

ಮೊನ್ನೆ ಜುಲೈ 27ಕ್ಕೆ ನಾವು ಕಲಾಂ ಅಜ್ಜರನ್ನು ಕಳೆದುಕೊಂಡು ಎರಡು ವರ್ಷಗಳು ಕಳೆಯಿತು. ಆದರೂ ಜನರು ಇವರನ್ನು ಯಾಕಷ್ಟು ನೆನಪು ಮಾಡಿಕೊಳ್ಳುತ್ತಾರೆ? ಅವರ ಹುಟ್ಟು ಹಬ್ಬಕ್ಕೆ ದೇಶಾದ್ಯಂತ ಆಶ್ರಮದಲ್ಲಿ , ಶಾಲೆಗಳಲ್ಲಿ ಸ್ವೀಟ್ ಹಂಚಿ ಸಂಭ್ರಮಿಸುವವರೆಷ್ಟೋ, ಪುಣ್ಯ ತಿಥಿಯಂದು ಶ್ರದ್ಧಾಭಕ್ತಿಗಳಿಂದ ನಮಿಸುವವರೆಷ್ಟೋ. ಇವಕ್ಕೆಲ್ಲ ಕಾರಣ ಅವರು ರಾಷ್ಟ್ರಪತಿಯೆಂಬ ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರೂ ಅತ್ಯಂತ ಕ್ರಿಯಾಶೀಲರಾಗಿದ್ದಿದ್ದರಿಂದ. ವಿಜ್ಞಾನಿಯಾಗಿ ಅಣು ತಂತ್ರಜ್ಞಾನ, ಅಗ್ನಿ ಕ್ಷಿಪಣಿಗೆ ಅವರ ಕೊಡುಗೆ ಅಪಾರವಾಗಿದ್ದಿದ್ದರಿಂದ. ಎಲ್ಲದಕ್ಕಿಂತ ಹೆಚ್ಚಾಗಿ ಭವಿಷ್ಯದ ಭಾರತದಲ್ಲಿ ಮಕ್ಕಳ ಪಾತ್ರವೇನು ಎಂದು ಸ್ಪಷ್ಟವಾಗಿ ಅವರಿಗೆ ಅರ್ಥವಾಗುವ ಹಾಗೆ ಬಿಡಿಸಿ ಹೇಳುತ್ತಿದ್ದಿದ್ದರಿಂದ.

ಮೊನ್ನೆ ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈನಲ್ಲಿ ಡಿಆರ್‌ಡಿಒ ಅವರು ನಿರ್ಮಿಸಿದ ಕಲಾಂ ಸ್ಮಾರಕವನ್ನು ಉದ್ಘಾಟಿಸಿದರು. ಇದರ ಜತೆಗೆ ನರೇಂದ್ರ ಮೋದಿಯವರು ಕಲಾಂ ಕುಟುಂಬದ ಜತೆಗೆ ಆರಾಮಾಗಿ ಮಾತನಾಡುತ್ತಾ, ಕುಟುಂಬದವರು ಪ್ರಧಾನಿ ಜತೆ ಮಾತಾಡುತ್ತಿದ್ದೇವೆಂಬುದೇ ತಿಳಿಯದಷ್ಟು ಹತ್ತಿರವಾಗಿಬಿಟ್ಟರು. ಅತ್ಯಂತ ವೇಗದಲ್ಲಿ ನಿರ್ಮಾಣಗೊಂಡ ಕಲಾಂರ ಆ ಸ್ಮಾರಕವನ್ನು ನೋಡಿದಾಗ ಅನಿಸಿದ್ದು, ಕಲಾಂರಲ್ಲಿ ಜನರು ಅಂಥದ್ದೇನು ಕಂಡುಕೊಂಡಿದ್ದಾರೆ.

ಯಾಕೆ ಅವರನ್ನು ಇಷ್ಟು ಆರಾಧಿಸುತ್ತಾರೆ ಎಂದು. ಉತ್ತರ ಅಂಗೈಯಲ್ಲೇ ಇತ್ತು. ನಮ್ಮ ದೇಶ ಕಂಡ ಅನೇಕ ರಾಷ್ಟ್ರಪತಿಗಳ ಪೈಕಿ ಕೆಲವರು ಬುದ್ಧಿಜೀವಿಗಳಿದ್ದರು, ದಾರ್ಶನಿಕರೂ ಇದ್ದರು. ಅಬ್ದುಲ್ ಕಲಾಂ ಕೃತಿಯಲ್ಲಷ್ಟೇ ಅಲ್ಲದೇ ಮಾತಿನಲ್ಲೂ ಜನರನ್ನು ಸೆಳೆಯುತ್ತಿದ್ದರು. ಇವರು ನಮ್ಮ ರಾಷ್ಟ್ರಪತಿ ಎಂಬ ಭಾವ ಅವರ ಮಾತು ಕೇಳುತ್ತಿದ್ದ ಪ್ರತಿಯೊಬ್ಬ ಭಾರತೀಯನಲ್ಲೂ ಹುಟ್ಟುತ್ತಿತ್ತು. 2020ರಲ್ಲಿ ನಮ್ಮ ದೇಶ ಹೇಗಿರಬೇಕು, ನಮ್ಮ ದೇಶದ ಶ್ರೀಮಂತಿಕೆಯೇನು ಎಂದು ಹೇಳುತ್ತಿದ್ದರೆ ಎದೆಯುಬ್ಬುತ್ತಿತ್ತು. ಅದು ಎಂಥ ನಿರ್ಭಾವುಕನಲ್ಲೂ ದೇಶ ಪ್ರೇಮದ ಹಸಿರನ್ನು ಚಿಗುರಿಸಬಲ್ಲ ಶಕ್ತಿ ಅವರ ಮಾತು. ಅವರು ಹೇಗೆ ಮಾತನಾಡುತ್ತಿದ್ದರು ಎಂಬುದನ್ನು ನೀವೇ ಕೇಳಿ:

***
ನಮ್ಮ ಮಾಧ್ಯಮಗಳೇಕೆ ಈ ಪರಿ ನಕಾರಾತ್ಮಕವಾಗಿ ಬಿಟ್ಟಿವೆ? ಭಾರತೀಯರಾದ ನಾವು ನಮ್ಮ ಶಕ್ತಿ ಸಾಮರ್ಥ್ಯ ಮತ್ತು ಸಾಧನೆಗೇ ಮನ್ನಣೆ ಕೊಡಲು ಏಕೆ ಹಿಂದೇಟು ಹಾಕುತ್ತೇವೆ? ನಮ್ಮದು ಎಂಥ ಮಹಾನ್ ದೇಶ, ಅತ್ಯದ್ಭುತ ಸಾಹಸಗಾಥೆಗಳು ನಮ್ಮಲ್ಲಿವೆ. ಆದರೂ ಅವುಗಳನ್ನು ಗುರುತಿಸಲು, ಒಪ್ಪಿಕೊಳ್ಳಲು ನಾವೇಕೆ ಸಿದ್ಧರಿಲ್ಲ? ಹಾಲಿನ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲಿಯೇ ಮುಂದು. ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಚಾರದಲ್ಲೂ ನಾವು ಜಗತ್ತಿನಲ್ಲಿಯೇ ನಂಬರ್ 1. ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ಅಕ್ಕಿ ಉತ್ಪಾದನೆಯಲ್ಲೂ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ. ಡಾ. ಎಚ್. ಸುದರ್ಶನ್ ಅವರನ್ನು ನೋಡಿ, ಬುಡಕಟ್ಟು ಜನಾಂಗದವರ ಗ್ರಾಮವನ್ನು ಒಂದು ಸ್ವಾವಲಂಬಿ ನಾಡಾಗಿಸಿದ್ದಾರೆ. ಇಂಥ ಕೋಟ್ಯಂತರ ಯಶೋಗಾಥೆಗಳಿವೆ. ಆದರೂ ನಮ್ಮ ಮಾಧ್ಯಮಗಳು ಮಾತ್ರ ಕೆಟ್ಟ ಸುದ್ದಿ, ಕೆಟ್ಟ ವೈಫಲ್ಯ, ಅವಘಡಗಳ ಬಗ್ಗೆ ಆಸಕ್ತಿ, ಗೀಳು ಬೆಳೆಸಿಕೊಂಡಿವೆ.

ನಾನೊಮ್ಮೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಹೋಗಿದ್ದೆ. ಅದೇ ದಿನ ಇಸ್ರೇಲ್‌ನಾದ್ಯಂತ ಹಲವಾರು ಬಾಂಬ್ ದಾಳಿಗಳು, ದುರ್ಘಟನೆಗಳು ಸಂಭಸಿದ್ದವು. ಸಾಕಷ್ಟು ಜನರ ಸಾವು-ನೋವುಗಳಾಗಿದ್ದವು. ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಗೈದಿದ್ದರು. ಆಶ್ಚರ್ಯವೆಂದರೆ ಮರುದಿನ ಇಸ್ರೇಲಿ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಮೊದಲ ಪುಟದಲ್ಲಿ ಐದು ವರ್ಷಗಳಲ್ಲಿ ಮರುಭೂಮಿಯೊಂದನ್ನು ಹೂದೋಟವಾಗಿಸಿದ್ದ ಯಹೂದಿಯೊಬ್ಬನ ಫೋಟೋ ಇತ್ತು. ಬೆಳಗ್ಗೆ ಎದ್ದ ಕೂಡಲೇ ಎಂಥವರಿಗೂ ಪ್ರೇರಣೆ ಕೊಡುವ ಫೋಟೋ ಅದಾಗಿತ್ತು. ಬಾಂಬ್ ಸ್ಫೋಟದ, ಸತ್ತವರ ಚಿತ್ರ ಮತ್ತು ಸುದ್ದಿಗಳು ಒಳಪುಟಗಳಲ್ಲಿ ಇತರೆ ವರದಿಗಳ ಮಧ್ಯೆ ಸೇರಿಹೋಗಿದ್ದವು. ನಮ್ಮ ಭಾರತದಲ್ಲಿ ಸಾವು, ಸಂಕಷ್ಟ, ರೋಗರುಜಿನ, ಆಕ್ರಮಣ, ದಾಳಿಗಳ ಸುದ್ದಿಗಳನ್ನೇ ಮುಖಪುಟದಲ್ಲಿ ಕಾಣುತ್ತೇವೆ. ನಾವೇಕೆ ಇಷ್ಟೊಂದು ಋಣಾತ್ಮಕ?

ಮತ್ತೊಂದು ಪ್ರಶ್ನೆ: ನಾವು ಒಂದು ರಾಷ್ಟ್ರವಾಗಿ ಏಕೆ ವಿದೇಶಿ ವಸ್ತುಗಳ ಬಗ್ಗೆ ಮೋಹ ಬೆಳೆಸಿಕೊಂಡಿದ್ದೇವೆ? ನಮಗೆ ವಿದೇಶಿ ಟಿ, ವಿದೇಶಿ ಶರ್ಟ್‌ಗಳೇ ಬೇಕು ಏಕೆ ವಿದೇಶಿ ತಂತ್ರಜ್ಞಾನವೇ ಆಗಬೇಕು? ಎಲ್ಲವೂ ಆಮದು ವಸ್ತುಗಳೇ ಆಗಿರಬೇಕೆಂಬ ಗೀಳೇಕೆ ಸ್ವಾವಲಂಬನೆಯಿಂದ ಸ್ವಾಭಿಮಾನ ಬರುತ್ತದೆ ಎಂಬುದು ನಮಗೆ ಅರ್ಥವೇ ಆಗುವುದಿಲ್ಲವೆ? ನಾನು ಹೈದರಾಬಾದ್‌ನಲ್ಲಿ ಉಪನ್ಯಾಸವೊಂದನ್ನು ಕೊಡುತ್ತಿದ್ದಾಗ, 14 ವರ್ಷದ ಬಾಲಕಿಯೊಬ್ಬಳು ಬಂದು ನನ್ನ ಹಸ್ತಾಕ್ಷರ ಕೇಳಿದಳು. ನಿನ್ನ ಜೀವನದ ಗುರಿಯೇನು ಎಂದು ನಾನವಳನ್ನು ಕೇಳಿದಾಗ, ‘ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬದುಕಲು ಬಯಸುತ್ತೇನೆ’ಎಂದಳು. ಅವಳಿಗಾಗಿ ನಾನು ಮತ್ತು ನೀವು ಬಲಿಷ್ಠ ಭಾರತವನ್ನು ಕಟ್ಟಬೇಕು. ಭಾರತ ಹಿಂದುಳಿದ ರಾಷ್ಟ್ರವಲ್ಲ, ಅದೂ ಅತ್ಯಂತ ಮುಂದುವರಿದ ರಾಷ್ಟ್ರ ಎಂದು ನೀವು ಘೋಷಿಸಬೇಕು. ನಿಮ್ಮ ಬಳಿ 10 ನಿಮಿಷ ಕಾಲಾವಕಾಶವಿದೆಯೇ? ಈ ದೇಶಕ್ಕಾಗಿ ನಿಮ್ಮಲ್ಲಿ 10 ನಿಮಿಷ ಸಮಯವಿದೆಯೇ? ಹಾಗಿದ್ದರೆ ಮಾತ್ರ ಕೇಳಿ, ಇಲ್ಲವಾದರೆ ನಿಮ್ಮಿಷ್ಟ?

ನೀವು ಹೇಳುತ್ತೀರಿ, ನಮ್ಮದು ಅದಕ್ಷ ಸರಕಾರ. ನೀವು ಹೇಳುತ್ತೀರಿ, ನಮ್ಮ ಕಾನೂನುಗಳು ಓಬೀರಾಯನ ಕಾಲದವು. ನೀವು ಹೇಳುತ್ತೀರಿ, ನಮ್ಮ ನಗರಪಾಲಿಕೆಯವರು ಕಸವನ್ನೇ ವಿಲೇವಾರಿ ಮಾಡುವುದಿಲ್ಲ. ನೀವು ಹೇಳುತ್ತೀರಿ, ನಿಮ್ಮ ಮನೆಯ ಫೋನ್ ಹಾಳಾಗಿದೆ, ಮಿಂಚಂಚೆಗಳು ತಲುಪುವುದಿಲ್ಲ. ನೀವು ಹೇಳುತ್ತೀರಿ, ನಮ್ಮ ದೇಶ ನಾಯಿಪಾಲಾಗಿ, ಕೊಚ್ಚೆ ಗುಂಡಿಯಾಗಿದೆ. ನೀವು ಹೇಳುತ್ತೀರಿ, ಹೇಳುತ್ತಲೇ ಇರುತ್ತೀರಿ. ಆದರೆ ಅದನ್ನು ಸರಿಪಡಿಸಲು ನೀವೇನು ಮಾಡುತ್ತಿದ್ದೀರಿ?

ಇಂಥ ಭಾಷಣ ಕೇಳಿ 10 ವರ್ಷಗಳೇ ಕಳೆದವು ಅಲ್ವಾ?
2007, ಜುಲೈ 24ರಂದು ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಭವನವನ್ನು ತೊರೆದ ನಂತರ ಒಂದು ಪ್ರೇರಕ ಶಕ್ತಿಯೇ ಹೊರಟು ಹೋದಂತಾಯಿತು. ಹೊಸ ಸರಕಾರಗಳು ರಚನೆಯಾಗುವಾಗ, ಹಾಲಿ ಸರಕಾರ ಸಂಕಷ್ಟಕ್ಕೆ ಸಿಕ್ಕಾಗ, ಬಿದ್ದು ಹೋಗುವಾಗ ಮಾತ್ರ ಸುದ್ದಿಯಾಗುತ್ತಿದ್ದ, ಉಳಿದಂತೆ ಭೂತ ಬಂಗಲೆಯಂತಿರುತ್ತಿದ್ದ ರಾಷ್ಟ್ರಪತಿ ಭವನವನ್ನೂ ಚಟುವಟಿಕೆಯ ಕೇಂದ್ರವಾಗಿಸಿದ, ದೇಶವಾಸಿಗಳು ತಮ್ಮ ನೋವನ್ನು ಆಲಿಸುವ ದೈವವೊಂದಿದೆ ಎಂಬಂತೆ ರಾಷ್ಟ್ರಪತಿ ಭವನದತ್ತ ಮುಖ ಮಾಡುವಂತೆ ಮಾಡಿದ ವ್ಯಕ್ತಿ ಕಲಾಂ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಸ್. ರಾಧಾಕೃಷ್ಣನ್ ಹೊರತುಪಡಿಸಿ ರಾಷ್ಟ್ರಪತಿಯೊಬ್ಬರ ಹೆಸರು ರಾಷ್ಟ್ರವಾಸಿಗಳ ನಾಲಗೆ ತುದಿಯಲ್ಲಿ ಹರಿದಾಡಿದ್ದರೆ ಅದು ಕಲಾಂ ಬಿಟ್ಟರೆ ಬೇರಾರದ್ದು ಹೇಳಿ ನೋಡೋಣ? ಈ ದೇಶದ ಉದ್ದಗಲವನ್ನು ಕಲಾಂ ಕ್ರಮಿಸಿದಷ್ಟು ಯಾರು ತಿರುಗಿದ್ದಾರೆ? ಪದ್ಮಶ್ರೀ, ಪದ್ಮಭೂಷಣ, ಪದ್ಮಭೂಷಣ ಮುಂತಾದ ಪದ್ಮಾ ಅವಾರ್ಡ್‌ಗಳ ಪ್ರದಾನ ಸಮಾರಂಭ, ಅರ್ಜುನ್, ದ್ರೋಣಾಚಾರ್ಯ, ರಾಜೀವ್ ಖೇಲ್ ರತ್ನ ಮುಂತಾದ ಪ್ರಶಸ್ತಿಗಳನ್ನು ಕೊಡ ಮಾಡುವಾಗ, ಗಣರಾಜ್ಯೋತ್ಸವದ ದಿನ, ಸಂಸತ್ ಅಧಿವೇಶನದ ಆರಂಭ ದಿನ ಮಾತ್ರ ಈ ನಮ್ಮ ಸೋಕಾಲ್ಡ್‌ ರಾಷ್ಟ್ರಪತಿಗಳು ದೇಶವಾಸಿಗಳಿಗೆ ತಮ್ಮ ಮುಖದರ್ಶನ ಮಾಡಿಸುತ್ತಾರೆ.

ಆದರೆ ಅಬ್ದುಲ್ ಕಲಾಂ ಇಂಥ ರೂಢಿಗತ ಪರಂಪರೆಗೆ ತದ್ವಿರುದ್ಧವಾಗಿದ್ದರು. ರಾಷ್ಟ್ರಪತಿ ಭವನದಿಂದ ಹೊರ ಬಂದ ನಂತರವೂ ಜೀವನದ ಕಟ್ಟ ಕಡೇ ಕ್ಷಣದವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದರು. ಮಕ್ಕಳಿಗೆ ಪಾಠ ಹೇಳುವುದೆಂದರೆ ದೇಶ ವಾಸಿಗಳಿಗೆ ಪ್ರೇರಣೆ ಕೊಡುವಂಥ ಭಾಷಣ ಮಾಡುವುದೆಂದರೆ ಅವರಿಗೆ ಅಚ್ಚು ಮೆಚ್ಚು, ಆ ಕಾರಣಕ್ಕಾಗಿಯೇ ಅವರು ಅಗಲಿ ಎರಡು ವರ್ಷಗಳಾದರೂ ನಮ್ಮ ಸ್ಮತಿ ಪಟಲದಿಂದ ಮರೆಯಾಗಿಲ್ಲ. ಒಬ್ಬರು ಒಳ್ಳೆಯ ರಾಷ್ಟ್ರಪತಿ ಹೇಗಿರಬೇಕೆಂದು ಎಂದು ಯೋಚಿಸಿದರೆ, ಕಣ್ಣ ಮುಂದೆ ಬರುವುದು ಕಲಾಂ ಮೇಲ್ಪಂಕ್ತಿಯೇ. ಮೊನ್ನೆ ಗುರುವಾರ ತಮಿಳುನಾಡಿನಲ್ಲಿ ಅವರ ಸ್ಮಾರಕ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಹೋದಾಗ ಮತ್ತೆ ಕಲಾಂರನ್ನು ನೆನಪಿಸಿಕೊಳ್ಳಬೇಕೆನಿಸಿತು.

Comments are closed.