Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ !

ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ !

ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ !

ಮಂಗಳವಾರ ಸಂಜೆಯವರೆಗೂ ಮೈಸೂರಿನಲ್ಲಿದ್ದು, ಅಂತ್ಯಸಂಸ್ಕಾರ ಮುಗಿಸಿ ಬೆಂಗಳೂರಿಗೆ ತೆರಳಿದ ಆರೆಸ್ಸೆಸ್‌ನ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಮುಕುಂದರಿಂದ ರಾತ್ರಿ ಕರೆಬಂತು. ನನಗೆ ಸಮಾಧಾನದ ಒಂದೆರಡು ಮಾತನಾಡಲು ಕರೆ ಮಾಡಿದ್ದ ಅವರ ಧ್ವನಿಯಲ್ಲೇ ನೋವು, ಸಂಕಟ, ಒಂಥರಾ ಅನಾಥ ಪ್ರಜ್ಞೆ ವ್ಯಕ್ತವಾಗುತ್ತಿತ್ತು. ಜಯದೇವರು 45 ದಿನಗಳ ಹಿಂದೆ ಆಸ್ಪತ್ರೆ ಸೇರಿದಾಗಲೇ ಮುಕುಂದರಿಗೆ ಸಂಕಟ ಶುರುವಾಗಿತ್ತು. ಅಂದಮಾತ್ರಕ್ಕೆ ಜಯದೇವರು ಅಕಾಲಿಕವಾಗಿ ದೂರವಾದರು ಎಂದಲ್ಲ. ಎಂಬತ್ಮೂರು ವರ್ಷದ ಅವರದ್ದು ತುಂಬು ಹಾಗೂ ಸಾರ್ಥಕ ಬದುಕು. ಅವರ ಅಂತ್ಯ ಅನಿರೀಕ್ಷಿತವಾಗಿ ಬಂದಿದ್ದೂ ಅಲ್ಲ. 2013ರಲ್ಲೇ ಪರಲೋಕದ ಕದತಟ್ಟಿ ವಾಪಸು ಬಂದಿದ್ದರು. ಹಾಗಾಗಿ ಅಂತ್ಯ ಅನಿರೀಕ್ಷಿತವಾಗಿರಲಿಲ್ಲ. ಆದರೂ… ಮುಕುಂದರನ್ನು ಕಾಡುತ್ತಿದ್ದುದು ಜಯದೇವರ ಅನುಪಸ್ಥಿತಿ ತಂದೊಡ್ಡಿದ್ದ ಖಾಲಿ ಖಾಲಿ ಭಾವನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅನಾರೋಗ್ಯ ಮತ್ತು ವಯೋಮಾನದ ಇತಿಮಿತಿಗಳಿಂದಾಗಿ ಅವರೇನು ಸಂಘದ ಚಟುವಟಿಕೆಗಳಲ್ಲಿ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ.

ಎಗ್ಗಿಲ್ಲದೆ ಸಾಗುತ್ತಿದ್ದ ಬಿಜೆಪಿಯನ್ನು ಸರಿದಾರಿಗೆ ತರಲು ಸಂತೋಷ್ ಜಿಯವರು ಹೆಗಲು ಕೊಟ್ಟ ನಂತರ ಸಂಘದ ಕಾರ್ಯ ಭಾರವನ್ನು ಮುಂಕುಂದರೇ ನಿಭಾಯಿಸುತ್ತಿದ್ದರು. ಆದರೂ ಭದ್ರತೆಯ ಭಾವನೆಯಿಂದ ಸಂಘದ ರಥ ಎಳೆಯಲು ಕೇಶವಕೃಪದ ಮೊದಲ ಮಹಡಿಯ ಮೂಲೆ ರೂಮಿನಲ್ಲಿ ಜಯದೇವರಿದ್ದಾರೆ ಎಂಬ ಒಂದೇ ವಿಚಾರ ಸಾಕಿತ್ತು. ಹಾಗಾಗಿ ಏನನ್ನೋ ಕಳಕೊಂಡ ಭಾವನೆ ಮುಕುಂದರನ್ನು ಆವರಿಸಿತ್ತು. ಇವತ್ತು ಸಂಘವನ್ನು, ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಮುಕುಂದ್‌ಜಿ, ಸಂತೋಷ್‌ಜಿ, ಅರುಣ್‌ಜಿ, ಅವರೊಂದಿಗೆ ವಾದಿರಾಜರು ಜಯದೇವರ ಗರಡಿಯಲ್ಲಿ ಪಳಗಿ ಈಗಾಗಲೇ ಕಣದಲ್ಲಿದ್ದಾರೆ. ಆದರೆ ಇವರೆಲ್ಲ ಹಲವು ಜವಾಬ್ದಾರಿ ಹೊತ್ತು, ಒಂದಿಲ್ಲೊಂದು ಕಡೆ ಸದಾ ಸಂಚಾರದಲ್ಲೇ ಇರುವುದರಿಂದ, ಜಯದೇವರೂ ದೂರವಾಗಿದ್ದರಿಂದ ಪ್ರೇರಣೆಯ ತಾಣವಾಗಿದ್ದ ಕೇಶವಕೃಪ ಮಾತ್ರ ಮೊದಲಿನಂತೆ ಕೈಬೀಸಿ ಕರೆಯುತ್ತಿಲ್ಲ.

ಒಂದು ಸ್ವಗತದೊಂದಿಗೆ ಜಯದೇವರ ಬಗ್ಗೆ ಮಾತು ಆರಂಭಿಸೋಣ ಎಂದನಿಸುತ್ತಿದೆ. ಅದು 2007, ಅದುವರೆಗೂ ಇ-ಮೇಲ್, ಫೋನ್ ಕರೆಗಳಿಗೆ ಸೀಮಿತವಾಗಿದ್ದ ಧಮಕಿ ಹಾಗೂ ಕೊಲೆ ಬೆದರಿಕೆಗಳು ನೇರವಾಗಿ ನನ್ನನ್ನು ಮುಖಾಮುಖಿಯಾಗಲು ಬಂದಿದ್ದವು. ಅಂದರೆ ಖಂಡನೆ-ಮಂಡನೆಯಲ್ಲೇ ಕಾಲ ಕಳೆಯುತ್ತಿರುವ, ಅನ್ಯ ಧರ್ಮೀಯರ ಬಗ್ಗೆ ಅಸಹನೆಯನ್ನೇ ಒಡಲಲ್ಲಿಟ್ಟುಕೊಂಡು ಹುಟ್ಟಿದವರಂತೆ ವರ್ತಿಸುವ, ಪ್ರೆರಣೆಗಾಗಿ ಪಾಕಿಸ್ತಾನದತ್ತ ನೋಡುವ ಒಂದಿಷ್ಟು ವ್ಯಕ್ತಿಗಳ ಗುಂಪು ವಿಜಯ ಕರ್ನಾಟಕ ಪತ್ರಿಕಾ ಕಚೇರಿಯನ್ನು ನುಗ್ಗಿತು. ಅಂದು ವಾರದ ರಜೆಯಲ್ಲಿದ್ದ ನನ್ನನ್ನು ಕಾಣದಿದ್ದಾಗ ಅವನನ್ನು ಬಿಡುವುದಿಲ್ಲ ಎಂದು ಕಚೇರಿಯಲ್ಲಿ ಬೊಬ್ಬೆಹಾಕಿದರು. ಈ ಘಟನೆಯ ಬೆನ್ನಲ್ಲೇ ಪತ್ರಿಕಾ ಕಚೇರಿಯ ಮುಂದೆ ಪೊಲೀಸ್ ವ್ಯಾನೊಂದು ಶಸ್ತ್ರಸಜ್ಜಿತವಾಗಿ ಬಂದು ನಿಂತಿತು. ಕಿಟಕಿ, ಬಾಗಿಲು, ಗಾಜು, ಕಂಪ್ಯೂಟರ್‌ಗಳಿಗೆ ರಕ್ಷಣೆ ಒದಗಿಸಿತು. ಆದರೆ ಅಂಕಣ ಬರೆದ ನನಗೆ ಮಾತ್ರ ಯಾರೂ ಭದ್ರತೆ ನೀಡಲಿಲ್ಲ! ಕಿಟಕಿ, ಬಾಗಿಲು, ಕಂಪ್ಯೂಟರ್ ಹಾಳಾದರೆ ಹೊಸದು ತರಬಹುದು, ರಿಪೇರಿ ಮಾಡಿಸಬಹುದು. ಆದರೆ ನನ್ನ ಕಥೆ? ಅಂದು ನನ್ನ ಜೀವದ ಯೋಚಿಸಿದವರು ಮೈ. ಚ. ಜಯದೇವರು ಮಾತ್ರ! ನನ್ನನ್ನು ಕರೆಸಿ, ಕೂಡಲೇ ಶಸ್ತ್ರಾಸ್ತ್ರ ಪರವಾನಗಿಗೆ ಅರ್ಜಿ ಹಾಕು, ಉಳಿದದ್ದನ್ನು ಸುಬ್ಬಣ್ಣ ನೋಡಿಕೊಳ್ಳುತ್ತಾರೆ, ನಾ ಮಾತನಾಡಿದ್ದೇನೆ ಎಂದರು.

ಹಾಗೆಯೇ ಮಾಡಿದೆ. ಸ್ವಲ್ಪ ವಿಳಂಬವಾದರೂ ಜಯದೇವ್‌ಜಿ ಪ್ರಯತ್ನದಿಂದಾಗಿ ವೆಪನ್ ಲೈಸೆನ್ಸ್ ಬಂತು. ಆದರೆ ಬಂದೂಕು? ಆಗ ನನಗೆ ಬರುತ್ತಿದ್ದ ಸಂಬಳಕ್ಕೆ ಯೋಗ್ಯ ಬದುಕು ನಡೆಸುವುದೇ ಕಷ್ಟವಾಗಿತ್ತು. ಅಂಥ ಪರಿಸ್ಥಿತಿ! ಲೈಸೆನ್ಸ್ ಬಂದ ಒಂದೆರಡು ತಿಂಗಳಲ್ಲೇ ಮತ್ತೆ ಜಯದೇವ್ ಜಿಯಿಂದ ಕರೆ ಬಂತು. ಅದಕ್ಕೂ ಮೊದಲೇ ಒಂದಷ್ಟು ರಿವಲ್ವಾರ್, ಪಿಸ್ತೂಲ್‌ಗಳನ್ನು ತರಿಸಿ ಪರೀಕ್ಷಿಸಿ ಕೆಲವನ್ನು ಆಯ್ಕೆ ಮಾಡಿದ್ದರು. ಇವುಗಳಲ್ಲಿ ನಿನಗೆ ಯಾವುದು ಬೇಕು ತಗೋ ಎಂದರು. ನಾನು ಆಯ್ಕೆ ಮಾಡಿದ ಫ್ರೆಂಚ್ ನಿರ್ಮಿತ .26 ಪಿಸ್ತೂಲ್ ಒಂದೆರಡು ದಿನಗಳಲ್ಲೇ ಕೈ ಸೇರಿತು. ಇವತ್ತು ನನ್ನ ಬಳಿ ಬಲಿಷ್ಠವಾದ ಬೇರೊಂದು ಆಯುಧವಿರಬಹುದು. ಆದರೆ ಒಬ್ಬ ತಂದೆ ಮಗನ ಜೀವದ ಬಗ್ಗೆ ತೋರುವಂಥ ಕಾಳಜಿ, ಕಳಕಳಿಯನ್ನು ಅಂದು ತೋರಿದ್ದು ಜಯದೇವರು. ನನ್ನ ‘ನರೇಂದ್ರ ಮೋದಿ; ಯಾರೂ ತುಳಿಯದ ಹಾದಿ’ ಪುಸ್ತಕದ ಬಿಡುಗಡೆಗೆ ಅರುಣ್ ಜೇಟ್ಲಿಯವರನ್ನು ಕರೆಸಿ ಹುರಿದುಂಬಿಸಿದ್ದೂ ಅವರೇ. ಇಂತಹದ್ದು ನನ್ನೊಬ್ಬನ ಕಥೆಯಲ್ಲ.

ಜಯದೇವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಂಡ, ಸಂಘಟನೆಯಲ್ಲಿ ತೊಡಗಿಕೊಂಡ ಅಸಂಖ್ಯ ಯುವಜನರಿದ್ದಾರೆ. ನಿಮಗೆ ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದ ಭಾರತ ಭಾರತಿ ಪುಸ್ತಕ ಮಾಲೆ ಗೊತ್ತಲ್ಲವೆ? ತಾತ್ಯಾ ಟೋಪೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸಾವರ್ಕರ್, ರಾಜರಾಮಮೋಹನ ರಾಯ್, ದಯಾನಂದ ಸರಸ್ವತಿ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ಖುದೀರಾಮ್, ಮದನ್‌ಲಾಲ್ ಧಿಂಗ್ರಾರಿಂದ ಡಾ. ಕೋಟ್ನಿಸ್‌ವರೆಗೂ ಸುಮಾರು 512 ಮಹಾನ್ ಚೇತನಗಳ, ನಾಯಕರ, ದಿಗ್ಗಜರ, ಸ್ವಾತಂತ್ರ್ಯ ಕಲಿಗಳ ಸಂಕ್ಷಿಪ್ತ ಪುಸ್ತಕ ಸರಣಿ ಅದು. ಜಯದೇವರು ಸ್ವತಃ ಒಬ್ಬ ಬರಹಗಾರರಲ್ಲ. ಆದರೆ ಬರಹದ ಆಳ ವಿಸ್ತಾರ, ಆಗಾಧ ಶಕ್ತಿ, ಪರಿಣಾಮ ಅವರಿಗೆ ಗೊತ್ತಿತ್ತು. ಹಾಗಾಗಿ 512 ಆದರಣೀಯ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಿ, 512 ಲೇಖಕರನ್ನೂ ತಡಕಿ ಭಾರತ ಭಾರತಿ ಸಂಪುಟವನ್ನು ತಂದ ವ್ಯಕ್ತಿ ಜಯದೇವರು. ಒಂದು ಕೋಟಿಗೂ ಅಧಿಕ ಪುಸ್ತಕಗಳು ಮುದ್ರಣಗೊಂಡವು, ಪ್ರತಿಯೊಂದು ಶಾಲೆ, ಲೈಬ್ರರಿಯನ್ನೂ ಸೇರಿದವು. ಅದರಿಂದ ಒಂದೆರಡು ತಲೆಮಾರುಗಳೇ ಜೀವನಕ್ಕೆ ಬೇಕಾದ ಪ್ರೇರಣಿ ಪಡೆದುಕೊಂಡವು.

ರಾಷ್ಟ್ರೋತ್ಥಾನ ಸಾಹಿತ್ಯ ಎಂಬುದು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡತೊಗಿತು. ಇಂದು ರಾಷ್ಟ್ರೋತ್ಥಾನ ಭಾರತದ ಪ್ರಮುಖ ಪ್ರಕಾಶನಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಮ್ಮಂಥ ಎಷ್ಟೋ ಮನಸ್ಸುಗಳಿಗೆ ಪ್ರೇರಣೆ ಕೊಡುತ್ತಿದೆ. ಜಯದೇವರು ಸಂಘದ ಮೂಲ ಕಾರ್ಯಾಲಯ ವಾದ ಕೇಶವ ಶಿಲ್ಪದ ಒಂದು ಸಣ್ಣ ಕೊಠಡಿಯಲ್ಲಿ ಕುಳಿತು ನಮಗೆ ಸಾಹಿತ್ಯ ಹಾಗೂ ಸ್ವಾತಂತ್ರ್ಯ ಹೋರಾಟದ ಜಗತ್ತನ್ನೇ ತೆರೆದುಕೊಟ್ಟರು. ನೀವು ಭಾರತ ಭಾರತಿ ಪುಸ್ತಕ ಸರಣಿಯ ಒಂದೊಂದು ಪುಸ್ತಕಗಳಲ್ಲೂ ಒಬ್ಬ ಲೇಖಕರ ಹೆಸರನ್ನು ನೋಡಬಹುದು. ಆದರೆ 512 ಪುಸ್ತಕಗಳ ಪ್ರತಿಪುಟಗಳಲ್ಲೂ ಕಾಣದ ಒಂದು ಹೆಸರಿದೆ, ಅದು ಜಯದೇವರದ್ದು. ಅವರೊಬ್ಬ ಸಂಘದ ಪ್ರಚಾರಕನೋ, ಕಟ್ಟಾಳೋ ಮಾತ್ರವಾಗಿರಲಿಲ್ಲ! ಇಂದು ರಾಷ್ಟ್ರೋತ್ಥಾನ ಟ್ರಸ್ಟ್ 30ಕ್ಕೂ ಹೆಚ್ಚು ಶಾಲೆ-ಕಾಲೇಜುಗಳನ್ನು ನಡೆಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನಡೆಯುತ್ತಿದೆ. ಅವುಗಳ ಕೇಶವ ಶಿಲ್ಪಿ ಜಯದೇವ್. ಸಾಹಿತ್ಯ, ಶಾಲೆ ಮಾತ್ರವಲ್ಲ, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್! ನಿಮಗೆ ಗೊತ್ತಾ ನಮ್ಮ ಮೈಸೂರಿನ ಸುತ್ತೂರು ಮಠದಲ್ಲಿ ಯುವ ಯತಿಗಳಿಗೆ ತರಬೇತಿ ನೀಡುವ ಭಾರತೀಯ ಸಂಸ್ಕೃತಿ ಪ್ರತಿಷ್ಠಾನವಿದೆ.

ವರ್ಷಕ್ಕೊಮ್ಮೆ ಅಲ್ಲಿ ಎಲ್ಲ ಜಾತಿ, ವರ್ಗದ ಯುವ ಯತಿಗಳಿಗೂ ಕಾರ್ಯಾಗಾರ ನಡೆಯುತ್ತದೆ. ಸುಖಾಸುಮ್ಮನೆ ಕಾವಿ ಹಾಕಿ ಯತಿಗಳಾಗುವುದಲ್ಲ. ನಮ್ಮ ಧರ್ಮದ ರೀತಿ-ರಿವಾಜು, ಆಚಾರ- ಪದ್ಧತಿಗಳು ಗೊತ್ತಿರಬೇಕು, ಅವುಗಳ ಮಹತ್ವ ತಿಳಿದಿರಬೇಕು. ಭಕ್ತರಿಗೆ ಬುದ್ಧಿವಾದ ಹೇಳುವ ಮೊದಲು ಯತಿಗಳು ಮೊದಲು ತಮ್ಮ ಜೀವನದಲ್ಲಿ ಅವುಗಳನ್ನು ಶ್ರದ್ಥೆಯಿಂದ ಪಾಲಿಸಬೇಕು. ಇಂತಹ ಅಂಶಗಳನ್ನು ಹೇಳಿ ಕೊಟ್ಟು ಅಣಿಗೊಳಿಸಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡು ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಸ್ಥಾಪನೆಗೆ ಪ್ರೇರಣೆ ಕೊಟ್ಟ ವ್ಯಕ್ತಿ ಜಯದೇವ್. ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ. ನಮ್ಮ ಸ್ವಾಮೀಜಿಗಳ ನಡುವೆಯೇ ಒಮ್ಮತವಿರಲಿಲ್ಲ! ಒಂದೇ ಕಾರ್ಯಕ್ರಮಕ್ಕೆ ಎರಡು, ಮೂರು ಜಾತಿಯ ಸ್ವಾಮಿಗಳನ್ನು ಕರೆದರೆ ಹಠಕ್ಕೆ ಬಿದ್ದವರಂತೆ ತಾನೂ ಲೇಟೋ, ಅವರು ಲೇಟೋ ಎಂಬಂತೆ ವಿಳಂಬವಾಗಿ ಬರುತ್ತಿದ್ದರು. ಏಕೆಂದರೆ ಮೊದಲು ಬಂದರೆ ನಂತರ ಬಂದವರಿಗೆ ಎದ್ದುನಿಂತು ಗೌರವ ಕೊಡಬೇಕಾಗುತ್ತದೆ ಎಂಬ ಅಹಂ ಅಡ್ಡಬರುತ್ತಿತ್ತು.

ಇಂತಹ ಪರಿಸ್ಥಿತಿ ಇರುವಾಗ ಸ್ವಾಮೀಜಿಗಳು ಪರಸ್ಪರ ಗೌರವ ಪ್ರೀತಿಯಿಂದ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಿದ ಸಂಧಾನಕಾರ ಮತ್ತಾರೂ ಅಲ್ಲ ಜಯದೇವ್. ಸುತ್ತೂರು, ಸಿದ್ಧಗಂಗಾ, ಆದಿಚುಂಚ ನಗಿರಿ ಎಲ್ಲರಿಗೂ ಬೇಕಾದ, ಎಲ್ಲರೂ ಆದರದಿಂದ ಕಾಣುತ್ತಿದ್ದ ವ್ಯಕ್ತಿ ಅವರು. ಆದಿಚುಂಚನಗಿರಿಯ ಬಾಲಗಂಗಾಧರ ಸ್ವಾಮೀಜಿಯವರಂತೂ ಜಯದೇವರ ಪ್ರೀತಿಗೆ ಕರಗಿ ಬೆಂಗಳೂರಿನಲ್ಲಿ ನಡೆದ ಹಿಂದು ಸಮರಸತಾ ಸಂಗಮಕ್ಕೆ ಆಗಮಿಸಿ, ಹಿಂದುಗಳು ಎಲ್ಲಿಗೆ ಹೋಗುವುದಕ್ಕಾಗುತ್ತದೆ, ಹಿಂದುಗಳಿಗೆ ಇರುವುದೊಂದೇ ಭಾರತ ಎಂದು ಗುಡುಗಿದ್ದರು! ಇಂದಿಗೂ ಸಂಘ ಹಾಗೂ ಒಕ್ಕಲಿಗರ ಮಠದ ನಡುವೆ ಅವಿನಾಭಾವ ಸಂಬಂಧವಿದ್ದರೆ ಅದರ ಕೊಂಡಿ ಜಯದೇವ್. ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮೈಸೂರಿನಲ್ಲಿ ಬ್ರಾಹ್ಮಣ ಬೀದಿಗಳಲ್ಲಿ ಪಾದಯಾತ್ರೆ ಮಾಡಿದರೆ ಅದರ ಹಿಂದೆಯೂ ಜಯದೇವರ ಮಾರ್ಗದರ್ಶನ ಮತ್ತು ಮುಂದಾಲೋಚನೆ ಇತ್ತು. ನಿಮಗೆ ಗೊತ್ತಾ, ಬರೀ ಇತಿಹಾಸಕಾರರು ಮಾತ್ರ ಸದಸ್ಯರಾಗಬಹುದಾದ ಶತಮಾನ ಕಂಡಿರುವ ಮಿಥಿಕ್ ಸೊಸೈಟಿಯೆಂಬ ಎಡಬಿಡಂಗಿಗಳ ತಾಣ, ಎಡಕ್ಕೆ ವಾಲುತ್ತಿದ್ದ ಬಸವನಗುಡಿಯ ಗೋಖಲೆ ಇನ್ಸ್ಟಿಟ್ಯೂಟ್, ಅಬಲಾಶ್ರಮ, ಶಿಶುಮಂದಿರ ಇವ್ಯಾವುವೂ ಆರೆಸ್ಸೆಸ್ಸಿನ ಸಂಸ್ಥೆಗಳಲ್ಲ. ಆದರೆ ಇಂದು ಅವು ಆರಸ್ಸೆಸ್ಸಿನ ಮಾರ್ಗದರ್ಶನದಲ್ಲಿವೆ! ಅದರ ಹಿಂದಿರುವ ಮೆದುಳೂ ಜಯದೇವರದ್ದೇ. ಒಬ್ಬ ಕುಶಲಮತಿ ಕಾರ್ಯತಂತ್ರಜ್ಞ, ಸ್ಟ್ರಾಟಜಿಸ್ಟ್!! ಲೆಕ್ಕದಲ್ಲಿ ಬಹಳ ಕಟ್ಟುನಿಟ್ಟು. ಹಾಗಾಗಿ ಸಂಘದ ಕಟ್ಟಡಗಳೂ ಹೆಚ್ಚಾದವು, ಸಂಸ್ಥೆಗಳೂ ಬೆಳೆದವು. ಸ್ವಂತಕ್ಕೆ ಏನೂ ಇಲ್ಲ, ಸಂಘದ ಮೂಲಕ ಸಮಾಜಕ್ಕೆ ಎಲ್ಲ.

ಮತ್ತೊಂದು ಬಹುದೊಡ್ಡ ವಿಶೇಷತೆಯೆಂದರೆ ಅವರ ದಾಢಸಿತನ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಬಂದರೂ ಕೇಶವ ಕೃಪದ ಮೊದಲ ಮಹಡಿ ಮೂಲೆ ರೂಮಿನಿಂದ ಕೆಳಗಿಳಿದು ಬರುತ್ತಿರಲಿಲ್ಲ. ಜಯದೇವರು ಕುರ್ಚಿಯಲ್ಲಿ ಆಸೀನರಾಗಿದ್ದರೆ ಬಿಎಸ್‌ವೈ, ಈಶ್ವರಪ್ಪ, ಸದಾನಂದ ಗೌಡರು ಜಮಖಾನದ ಮೇಲೆ ಕಾಲು ಮಡಚಿ ಕುಳಿತಿರುತ್ತಿದ್ದರು. ಅನಂತ ಕುಮಾರರಂತೂ ಜಯದೇವರ ಮುಂದೆ ಯಾವತ್ತೂ ಮಾತನಾಡಿದ್ದು ನಿಂತುಕೊಂಡೇ. ಸ್ವಾಮೀಜಿ ಸಾಧುಗಳಾದಿಯಾಗಿ ಯಾರೇ ಬಂದರೂ ಜಯದೇವರನ್ನು ಮೊದಲ ಮಹಡಿಗೆ ಬಂದೇ ಕಾಣಬೇಕಿತ್ತು. ಖಡಕ್ ಮಾತಿನ ಸಂತೋಷ್‌ಜಿ, ಮೃದುಮಾತು ದೃಢ ನಿಲುವಿನ ಮುಕುಂದರು ಯಾರಿಗಾದರೂ ಅಂಜಿದ್ದರೆ ಅದು ಜಯದೇವರಿಗೆ ಮಾತ್ರ.

ವಾದಿರಾಜರಂತೂ ಜಯದೇವರನ್ನು ಕೇಳದೆ ಏನೂ ಮಾಡುತ್ತಿರಲಿಲ್ಲ. ಜಯದೇವರು ಇಂತಹ ಗೌರವ ಪ್ರೀತಿಯನ್ನು ಗಳಿಸಿದ್ದು ಅವರು ನಡೆದುಕೊಂಡ ರೀತಿ ಹಾಗೂ ಕೊಟ್ಟ ಕೊಡುಗೆಯಿಂದಲೇ. ಜಯದೇವರು ಸುಮಾರು 6 ಅಡಿ 2 ಇಂಚು ಎತ್ತರದ ಸುಂದರಾಂಗ. ಆಕರ್ಷಕ ಯುವಕ ಯುವತಿಯರ ಅಡ್ಡಾ ಎಂದೇ ಹೇಳಬಹುದಾದ ನಮ್ಮ ಮೈಸೂರಿನ ಮಹಾಜನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. 65 ವರ್ಷದ ಹಿಂದೆಯೇ ಅಪ್ಪ ಸೈಕಲ್ ಕೊಡಿಸಿದ್ದರು. ಕಾಲೇಜಿನ ಕಣ್ಮಣಿಯಾಗಲು ಇದಕ್ಕಿಂತ ಇನ್ನೇನು ಬೇಕು? ಆದರೆ ಈ ಸ್ಫುರದ್ರೂಪಿಗೆ ಕಾಲೇಜಿನ ಸಹಜ ಕಾಮನೆಗಳಿಂತ ಕೇಶವ ಬಲಿರಾಮನೇ ಹೆಚ್ಚು ಆಕರ್ಷಿಸಿದ.

ಓದು ಮುಗಿದ ಮೇಲೆ ಮದುವೆಯಾಗಿ ಸುಂದರ ಸಂಸಾರದ ಬದುಕು ಕಟ್ಟಿಕೊಳ್ಳುವ ಬದಲು ಒಂದಿಡೀ ತಲೆಮಾರಿನ ಬದುಕನ್ನೇ ಬದಲಿಸಲು ಹೊರಟರು, ಎಷ್ಟೋ ಜನರ ಜೀವನದಲ್ಲಿ ತಂದೆಯ ಸ್ಥಾನ ತುಂಬಿದರು. ಆದರೂ ಅಕಾಲಿಕವಾಗಿ ವಿದ್ಯಾನಂದ ಶೆಣೈ, ಅದಾದ ನಂತರ ನಾ. ಕೃಷ್ಣಪ್ಪನವರು, ಈಗ ಜಯದೇವರು ಒಬ್ಬೊಬ್ಬರೇ ಹೊರಟು ಹೋಗುತ್ತಿದ್ದರೆ, ಸಾವು ಸಹಜವಾದರೂ ಮನಸ್ಸಿಗೆ ಸಂಕಟವಾಗುತ್ತಿದೆ. ಮಂಗಳವಾರ ಮೈಸೂರಿನಲ್ಲಿ ಜಯದೇವರ ಅಂತಿಮಯಾತ್ರೆ ಸಾಗುತ್ತಿದ್ದಾಗ ರುದ್ರಭೂಮಿಗೆ ರಸ್ತೆಯಲ್ಲಿ ಖಿನ್ನವಾಗಿ ನಡೆದುಕೊಂಡು ಬರುತ್ತಿದ್ದ ಬಿ.ಎಸ್. ಯಡಿಯೂರಪ್ಪನವರ ಮುಖ ನೋಡಿದವರಿಗೆ ಆ ಸಂಕಟ ಎಂಥಾದ್ದು ಎಂಬುದು ಅರ್ಥವಾಗುತ್ತದೆ.

20170225_072231

Comments are closed.