Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಎಂಟೆಬೆಯಲ್ಲಿ ತೋರಿದ ಎಂಟೆದೆ ಬಗ್ಗೆ ಮತ್ತೊಮ್ಮೆ ಹೇಳಲಾ?

ಎಂಟೆಬೆಯಲ್ಲಿ ತೋರಿದ ಎಂಟೆದೆ ಬಗ್ಗೆ ಮತ್ತೊಮ್ಮೆ ಹೇಳಲಾ?

ಎಂಟೆಬೆಯಲ್ಲಿ ತೋರಿದ ಎಂಟೆದೆ ಬಗ್ಗೆ ಮತ್ತೊಮ್ಮೆ ಹೇಳಲಾ?

ಮೊನ್ನೆ ಜುಲೈ 4ರಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ನ ರಾಜಧಾನಿ ಟೆಲ್ ಅವಿವ್‌ಗೆ ಬಂದಿಳಿದಾಗ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೆಟ್ಟಿಲ ಬಳಿಯೇ ನಿಂತು ಸ್ವಾಗತಿಸಿದ್ದನ್ನು ನೀವು ನೋಡಿರುತ್ತೀರಿ. ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ ನೆತನ್ಯಾಹು ಅವರಿಗೆ ಧನ್ಯವಾದ ಹೇಳಲು ನಿಂತ ಮೋದಿಯವರು, ಜುಲೈ 4 ಒಂದು ಮಹತ್ತರ ದಿನ. ನಲವತ್ತೊಂದು ವರ್ಷಗಳ ಹಿಂದೆ ಉಗಾಂಡದ ಎಂಟೆಬೆ ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಜಮಿನ್ ನೆತನ್ಯಾಹು ಅವರ ಹಿರಿಯ ಸಹೋದರ ಯೋನಾಥನ್ ನೆತನ್ಯಾಹು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿನವಿದು ಎಂದರು, ಪ್ರಧಾನಿ ನೆತನ್ಯಾಹು ಒಂದು ಕ್ಷಣ ಭಾವುಕರಾದರು. ನನ್ನ ಬಹಳಷ್ಟು ಓದುಗರು, ಈ ಘಟನೆ ಬಗ್ಗೆ ನೀನು ಹಿಂದೊಮ್ಮೆ ಬರೆದಿದ್ದೆಯಲ್ಲಾ ಎಂದು ನೆನಪು ಮಾಡಿಕೊಂಡರು. ಹೌದು, ಎಂಟೆಬೆಯಲ್ಲಿ ತೋರಿದ ಎಂಟೆದೆಯಲ್ಲೇ ಭಯೋತ್ಪಾದನೆಗೂ ಉತ್ತರವಿದೆ! ಎಂಬ ಶೀರ್ಷಿಕೆಯಡಿ ಒಂಬತ್ತು ವರ್ಷಗಳ ಹಿಂದೆಯೇ ಯೋನಾಥನ್ ನೆತನ್ಯಾಹು ಬಗ್ಗೆ ಬರೆದಿದ್ದೆ. ಅದನ್ನೇ ಮತ್ತೆ ನೆನಪು ಮಾಡುತ್ತಿದ್ದೇನೆ.
****
ಅದು ಕಲ್ಪನೆಗೂ ನಿಲುಕದ ವಿಚಾರವಾಗಿತ್ತು. ವಿಮಾನಕ್ಕೆ ಎಷ್ಟೇ ಇಂಧನ ತುಂಬಿಸಿದರೂ 2,200 ಮೈಲು ದೂರದಲ್ಲಿರುವ ಉಗಾಂಡಕ್ಕೆ ಹೋಗಿ ‘ಕಮಾಂಡೋ ಆಪರೇಶನ್’ ನಡೆಸಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ವಾಪಸ್ ಬಂದು ತಲುಪುವುದು ಸಾಧ್ಯವಿಲ್ಲದ ಮಾತಾಗಿತ್ತು. ಇನ್ನೊಂದೆಡೆ ಭಯೋತ್ಪಾದಕರ ಜತೆ ಕೈಜೋಡಿಸಿದ್ದ ಉಗಾಂಡ ಸರಕಾರ ಕಮಾಂಡೋ ಆಪರೇಶನ್ ನಡೆಸುವುದಕ್ಕೆ ಅವಕಾಶವನ್ನೂ ನೀಡುತ್ತಿಲ್ಲ. ಹಾಗಿರುವಾಗ ಮರು ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುತ್ತದೆಯೇ? ಹಾಗಂತ ಅಪಹರಣಕಾರರ ಬೇಡಿಕೆಗೆ ಮಣಿದು ಜೈಲಿನಲ್ಲಿದ್ದ 40 ಪ್ಯಾಲೆಸ್ತೀನಿ ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರೋಣವೆಂದರೆ ಪ್ರಾಣ ಹೋಗುವ ಸಂದರ್ಭ ಬಂದರೂ ಭಯೋತ್ಪಾದಕರ ಜತೆ ರಾಜಿ ಮಾಡಿಕೊಳ್ಳಬಾರದು ಎಂಬ ಕಾನೂನೇ ಇಸ್ರೇಲ್‌ನಲ್ಲಿದೆ. ಒಂದು ವೇಳೆ ಕಾನೂನನ್ನು ಮುರಿದು ಭಯೋತ್ಪಾದಕರನ್ನು ಬಿಡುಗಡೆ ಮಾಡಿದರೆ ದೇಶದ ಆತ್ಮಗೌರವಕ್ಕೆ ಚ್ಯುತಿ ಬರುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ರೇಲ್ ಮಾಡಿದ್ದೇನು ಗೊತ್ತೇ? ಅಂದು 1976, ಜೂನ್ 27. ಮಧ್ಯಾಹ್ನ 12.30ಕ್ಕೆ ಆಗಸಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಏರ್ ಫ್ರಾನ್ಸ್ ನ ‘ಎಎಫ್-139’ ವಿಮಾನವನ್ನು ನಾಲ್ವರು ಭಯೋತ್ಪಾದಕರು ಅಪಹರಣ ಮಾಡಿದ್ದಾರೆ ಎಂಬ ಸುದ್ದಿ ತಿಳಿಯಿತು. ಆ ವಿಮಾನ ‘ಲಾಡ್ ಏರ್‌ಪೋರ್ಟ್’ನಲ್ಲಿ (ಈಗ ಬೆನ್ ಗುರಿಯನ್) ಇಳಿಯಬಹುದು ಎಂದು ಭಾವಿಸಿದ ಇಸ್ರೇಲಿನ ಕಮಾಂಡೋಗಳು ವಿಮಾನ ನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿ ನಿಂತರು. ಲಾಡ್ ಬದಲು ಸಿರಿಯಾದ ಬೆಂಗಾಝಿ ಏರ್‌ಪೋರ್ಟ್‌ನಲ್ಲಿ ತಾತ್ಕಾಲಿಕವಾಗಿ ವಿಮಾನವನ್ನು ಕೆಳಗಿಳಿಸಿದ ಭಯೋತ್ಪಾದಕರು ಆರೂವರೆ ಗಂಟೆಯ ಬಳಿಕ ಮತ್ತೆ ಟೇಕ್ ಆಫ್ ಮಾಡಿಸಿದರು. ವಿಮಾನ ಬೆಳಗಿನ ಜಾವ 3 ಗಂಟೆಗೆ ಉಗಾಂಡದ ಎಂಟೆಬೆ ಏರ್‌ಪೋರ್ಟ್‌ಗೆ ಬಂದಿಳಿಯಿತು. ಹಾಗೆ ಬಂದಿಳಿದ ಕೂಡಲೇ ಇನ್ನೂ ಮೂವರು ಭಯೋತ್ಪಾದಕರು ಅಪಹರಣಕಾರರ ಜತೆಗೂಡಿದರು. ‘ಪೆರುವಿಯನ್’ ಎಂಬ ಅಡ್ಡ ಹೆಸರು ಇಟ್ಟುಕೊಂಡಿದ್ದ ಭಯೋತ್ಪಾದಕನೊಬ್ಬ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದಾದರೆ ಫ್ರಾನ್ಸ್, ಸ್ವಿಜರ್‌ಲ್ಯಾಂಡ್, ಪಶ್ಚಿಮ ಜರ್ಮನಿ, ಕೀನ್ಯಾದಲ್ಲಿ ಬಂಧನದಲ್ಲಿಟ್ಟಿರುವ 13 ಹಾಗೂ ಇಸ್ರೇಲಿ ಜೈಲಿನಲ್ಲಿರುವ 40 ಇಸ್ಲಾಮಿಕ್ ಭಯೋತ್ಪಾದಕರನ್ನು ಬಂಧಮುಕ್ತಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟ.
ಸುದ್ದಿ ಜಗತ್ತಿನಾದ್ಯಂತ ಹರಡಿತು. ಆದರೆ ಯಾರೂ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಉಗಾಂಡ ಹೇಳಿ ಕೇಳಿ ಮುಸ್ಲಿಂ ರಾಷ್ಟ್ರ. ಕುಖ್ಯಾತ ಸರ್ವಾಧಿಕಾರಿ ಇದಿ ಅಮೀನ್ ಅದರ ಚುಕ್ಕಾಣಿ ಹಿಡಿದಿದ್ದ. ಈ ಎಲ್ಲ ಕಾರಣಗಳಿಂದಾಗಿಯೇ ವಿಮಾನವನ್ನು ಉಗಾಂಡಕ್ಕೆ ಅಪಹರಿಸಲಾಗಿತ್ತು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಜುಲೈ 1ರಿಂದ ದಿನವೊಂದಕ್ಕೆ ಇಂತಿಷ್ಟು ಪ್ರಯಾಣಿಕರನ್ನು ಹತ್ಯೆಗೈಯ್ಯಲಾಗುವುದು ಎಂಬ ಬೆದರಿಕೆಯನ್ನೂ ಹಾಕಿದರು. ಅಪಾಯವನ್ನರಿತ ಜಗತ್ತಿನ ಇತರ ರಾಷ್ಟ್ರಗಳು ಭಯೋತ್ಪಾದಕರ ಜತೆ ಕೈಜೋಡಿಸಿದ್ದ ಉಗಾಂಡದ ಮೇಲೆ ಒತ್ತಡ ಹೇರಲಾರಂಭಿಸಿದವು. ಏಕೆಂದರೆ ವಿಮಾನದಲ್ಲಿದ್ದ ಮೂರನೇ ಎರಡರಷ್ಟು ಪ್ರಯಾಣಿಕರು ಇತರ ರಾಷ್ಟ್ರಗಳ ನಾಗರಿಕರಾಗಿದ್ದರು. ಹಾಗಾಗಿ ಒತ್ತಡಕ್ಕೆ ಮಣಿದ ಇದಿ ಅಮೀನ್ 106 ಇಸ್ರೇಲಿ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಿಸಿದರು. ಅಷ್ಟೇ ಅಲ್ಲ, ಇಸ್ರೇಲ್ ಕಮಾಂಡೋ ಆಪರೇಷನ್ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಅರಿತ ಅವರು, ಇಸ್ರೇಲಿ ಪ್ರಯಾಣಿಕರನ್ನೂ ವಿಮಾನದಿಂದ ಕೆಳಗಿಳಿಸಿ ಏರ್‌ಪೋರ್ಟ್ ಟರ್ಮಿನಲ್ಸ್‌ನ ಒಂದು ಕೋಣೆಯಲ್ಲಿ ಕೂಡಿ ಹಾಕಿದರು.
ಅಲ್ಲದೆ ಏರ್‌ಪೋರ್ಟ್‌ನ ಹೊರಭಾಗದಲ್ಲಿ ಉಗಾಂಡ ಸೇನೆಯ ಒಂದು ತುಕಡಿಯನ್ನೂ ನಿಯೋಜನೆ ಮಾಡಿದರು. ಹೀಗೆ ಉಗಾಂಡ ಸರಕಾರವೇ ಅಪರಹಣಕಾರರ ಜತೆ ಕೈಜೋಡಿಸಿದ ಕಾರಣ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಮುಂದೆ ಯಾವ ದಾರಿಗಳೂ ಇರಲಿಲ್ಲ. ಕಮಾಂಡೋ ಆಪರೇಷನ್‌ಗೆ ಆದೇಶ ನೀಡಲು ಉಗಾಂಡ 2,200 ಮೈಲು ದೂರದಲ್ಲಿದೆ. ಅಲ್ಲಿನ ಪರಿಸ್ಥಿತಿ, ವಸ್ತುಸ್ಥಿತಿ ಹೇಗಿದೆ ಎಂಬುದೂ ತಿಳಿದಿಲ್ಲ. ಅಲ್ಲದೆ ವಿಮಾನ ಫ್ರೆಂಚ್ ಕಂಪನಿಗೆ ಸೇರಿರುವುದರಿಂದ ಅವರ ಅನುಮತಿಯೂ ಬೇಕು. ಹಾಗಾಗಿ ಬಂಧಿತ ಭಯೋತ್ಪಾದಕರನ್ನು ಬಿಡುಗಡೆ ಮಾಡುವುದಾಗಿ ಜುಲೈ 1ರಂದು ರಬಿನ್ ಘೋಷಣೆ ಮಾಡಿದರು. ಸುದ್ದಿ ತಿಳಿದ ಅಪಹರಣಕಾರರು ಕೊಲ್ಲಲು ನೀಡಿದ್ದ ಗಡುವನ್ನು ಜುಲೈ 4ರವರೆಗೂ ಮುಂದೂಡಿದರು. ಇತ್ತ ಇಸ್ರೇಲಿ ಗುಪ್ತ ದಳದ ಮುಖ್ಯಸ್ಥ ಮೊಟ್ಟಾ ಗುರ್ ಹಾಗೂ ಯೋನಾಥನ್ ನೆತನ್ಯಾಹು ಯೋಜನೆಯೊಂದನ್ನು ರೂಪಿಸಲಾರಂಭಿಸಿದರು. ಉಗಾಂಡ ಬಿಡುಗಡೆ ಮಾಡಿದ್ದ ಪ್ರಯಾಣಿಕರಲ್ಲಿ ಗರ್ಭಿಣಿಯೊಬ್ಬಳಿದ್ದಳು. ಆಕೆ ಇಸ್ರೇಲ್‌ನ ಎಂಟೆಬೆ ಏರ್‌ಪೋರ್ಟ್‌ನಲ್ಲಿರುವ ವಸ್ತುಸ್ಥಿತಿಯ ಚಿತ್ರಣ ನೀಡಿದಳು. ಆಕೆಯಿಂದಾಗಿ ಏಳು ಜನ ಅಪಹರಣಕಾರರಿಗೆ ಉಗಾಂಡ ಸೈನಿಕರು ಸಹಕಾರ ನೀಡುತ್ತಿರುವ ವಿಚಾರ ಹಾಗೂ ಇಸ್ರೇಲಿ ಪ್ರಯಾಣಿಕರನ್ನು ಕೂಡಿ ಹಾಕಿರುವ ಕೊಠಡಿಯ ಬಗೆಗಿನ ಅಮೂಲ್ಯ ಮಾಹಿತಿಯೂ ದೊರೆಯಿತು. ಜತೆಗೆ ಹಿಂದೊಮ್ಮೆ ಎಂಟೆಬೆ ಏರ್‌ಪೋರ್ಟ್‌ನಲ್ಲಿ ನಿಯೋಜಿತರಾಗಿದ್ದ ಸೇನಾ ಸಾರ್ಜೆಂಟ್ ಒಬ್ಬರು ತೆಗೆದಿದ್ದ ವಿಡಿಯೊ ಚಿತ್ರಣವೂ ಸಹಾಯಕ್ಕೆ ಬಂತು. ಜುಲೈ 2 ರಂದು ಕಮಾಂಡೋ ಆಪರೇಶನ್ ನಡೆಸಲು ಬೇಕಾದ ಸಕಲ ಸಿದ್ಧತೆ ಮಾಡಿದರು.
ಲಾಡ್ ಏರ್‌ಪೋರ್ಟ್‌ನಲ್ಲಿ ಯಶಸ್ವಿಯಾಗಿ ಡಮ್ಮಿ ಪರೀಕ್ಷೆಯನ್ನೂ ನಡೆಸಲಾಯಿತು. ಇನ್ನೊಂದೆಡೆ ಕಮಾಂಡೋ ಆಪರೇಶನ್ ನಡೆಸುವುದು ಸುಲಭದ ಮಾತಲ್ಲ ಎಂದರಿತ ಇಸ್ರೇಲಿ ಸೇನೆ ಉಗಾಂಡದ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನೇ ಮಾಡಿಬಿಡಲು ಸನ್ನದ್ಧವಾಗುತ್ತಿತ್ತು. ಆದರೆ ಯಾವ ಮಾರ್ಗ ಅನುಸರಿಸುವುದು ಎಂದು ನಿರ್ಧರಿಸುವುದೇ ಕಷ್ಟದ ವಿಷಯವಾಗಿತ್ತು. ಅದೇನನ್ನಿಸಿತೋ ಗೊತ್ತಿಲ್ಲ. ಬ್ರಿಗೇಡಿಯರ್ ಜನರಲ್ ಡಾನ್ ಶೋಮ್ರಾನ್ ಅವರು ಯೋನಾಥನ್ ನೆತನ್ಯಾಹು ರೂಪಿಸಿದ ಯೋಜನೆಯ ಬಗ್ಗೆಯೇ ಒಲವು ತೋರಿದರು. ಇಸ್ರೇಲ್ ಸರಕಾರ ಆತಂಕದಿಂದಲೇ ಒಪ್ಪಿಗೆ ನೀಡಿತು. ಜುಲೈ 3 ರಂದು ಮಧ್ಯಾಹ್ನ 1.20ಕ್ಕೆ ನಾಲ್ಕು ವಿಮಾನಗಳು ಏಕಕಾಲಕ್ಕೆ ಹೊರಟವು. ಪ್ರಯಾಣಿಕರನ್ನು ಬಂಧ ಮುಕ್ತಗೊಳಿಸಿ ವಾಪಸ್ ಕರೆತರುವ ಒಂದು ವಿಮಾನ. ಮತ್ತೊಂದರಲ್ಲಿ ಇಂಧನ ದಾಸ್ತಾನು, ಮಗದೊಂದರಲ್ಲಿ ಒಂದಿಷ್ಟು ಕಮಾಂಡೋಗಳು. ಕೊನೆಯದರಲ್ಲಿ ಎರಡು ಲ್ಯಾಂಡ್ ರೋವರ್ ಜೀಪುಗಳು ಹಾಗೂ ಒಂದು ಕಪ್ಪುು ಮರ್ಸಿಡಿಸ್ ಬೆಂಝ್ ಕಾರಿತ್ತು. ಆ ಕಾರಿನ ಮೇಲೆ ಉಗಾಂಡದ ಭಾವುಟವಿತ್ತು. ಒಳಗೆ ನೆತನ್ಯಾಹು ಸಹಿತ ನಾಲ್ವರು ಕಮಾಂಡೋಗಳಿದ್ದರು. ಇದಿ ಅಮೀನ್ ಬಳಸುತ್ತಿದ್ದುದೂ ಬ್ಲ್ಯಾಕ್ ಮರ್ಸಿಡಿಸ್ ಬೆಂಝ್ ಕಾರನ್ನೇ. ಶರಮ್ ಶೇಕ್‌ನಲ್ಲಿ ತಾತ್ಕಾಲಿಕ ನಿಲುಗಡೆ ಮಾಡಿದ ವಿಮಾನಗಳು ಎಂಟೆಬೆ ತಲುಪಲು ಬೇಕಾದ ಏಳೂವರೆ ತಾಸು ಪ್ರಯಾಣಕ್ಕೆ ಅಣಿಯಾದವು. ಅಷ್ಟಕ್ಕೂ ಆಕ್ರಮಣದ ಸಮಯ, ಸಂದರ್ಭ ಬಹುಮುಖ್ಯವಾಗಿತ್ತು. ರಾತ್ರಿ ವೇಳೆಯಲ್ಲೇ ಕಾರ್ಯಾಚರಣೆ ನಡೆಸಬೇಕಿತ್ತು.
ರಾಡಾರ್‌ನ ಕಣ್ಣಿಗೆ ಬೀಳುವಂತಿರಲಿಲ್ಲ. ಹಾಗಾಗಿ ಸಮಯವನ್ನೂ ಲೆಕ್ಕ ಹಾಕಿಯೇ ನಿರ್ಧರಿಸಲಾಗಿತ್ತು. ಪ್ರತಿ ರಾತ್ರಿ 10.30ಕ್ಕೆ ಬ್ರಿಟಿಷ್ ಏರ್‌ವೇಶ್‌ನ ವಿಮಾನವೊಂದು ಇಂಧನ ತುಂಬಿಸಿಕೊಳ್ಳಲು ಎಂಟೆಬೆಯಲ್ಲಿ ಇಳಿಯುತ್ತಿತ್ತು. ಲೈಟ್ ಆರಿಸಿಕೊಂಡು ಆ ವಿಮಾನದ ಹಿಂದೆ ಹಿಂದೆ ಸಾಗಿದ ನಾಲ್ಕೂ ಇಸ್ರೇಲಿ ವಿಮಾನಗಳು ಎಂಟೆಬೆಗೆ ತೀರಾ ಸಮೀಪದಲ್ಲಿರುವ ವಿಕ್ಟೋರಿಯಾ ಸರೋವರದ ಬಳಿಗೆ ಬಂದಾಗ ರಾತ್ರಿ 10.30. ಹಾಗೆ ಆಗಮಿಸಿದ ಮೂರು ವಿಮಾನಗಳು ಆಗಸದಲ್ಲೇ ಗಿರಕಿ ಹೊಡೆದುಕೊಂಡಿದ್ದರೆ, ಮುಂದಿನ ವಿಮಾನ ರಸ್ತೆಗಿಳಿಯಿತು! ಕೂಡಲೆ ಕೆಳಗಿಳಿದ 10 ಕಮಾಂಡೊಗಳು ಉಳಿದ ವಿಮಾನಗಳು ಇಳಿಯುವುದಕ್ಕೆ ದಾರಿ ಸುಗಮಗೊಳಿಸಿದರು. ಮೊದಲು ಇಳಿದ ವಿಮಾನ ಟ್ಯಾಕ್ಸಿ ರಸ್ತೆಯಲ್ಲಿ ನಿಲ್ದಾಣದ ಹಳೆಯ ಟರ್ಮಿನಲ್‌ನತ್ತ ಸಾಗತೊಡಗಿತು. ಸ್ವಲ್ಪ ಮುಂದೆ ಸಾಗುತ್ತಿದ್ದಂತೆಯೇ ಆ ಕಾರ್ಗೋ ವಿಮಾನದ ಕೆಳಭಾಗ ತೆರೆಯಿತು. ಅದರೊಳಗಿನಿಂದ 2 ಲ್ಯಾಂಡ್ ರೋವರ್‌ಗಳು ಹಾಗೂ ಕಪ್ಪು ಮರ್ಸಿಡಿಸ್ ಹೊರಬಂದವು! ಲ್ಯಾಂಡ್ ರೋವರ್‌ಗಳಲ್ಲಿ ಉಗಾಂಡ ಸೈನಿಕರ ಸಮವಸ್ತ್ರ ಧರಿಸಿದ್ದ 35 ಕಮಾಂಡೋಗಳಿದ್ದರು. ಹೀಗೆ ಮೂರು ವಾಹನಗಳ ದಂಡು ಟರ್ಮಿನಲ್‌ನತ್ತ ಸಾಗತೊಡಗಿತು.
ಸೈಲೆನ್ಸ್ಡ್ ಗನ್ (Silenced Gun) ಬಳಸಿ ಅಡ್ಡ ಬಂದ ಕಾವಲುಗಾರರನ್ನು ಕೊಂದು ಹಾಕಿದ ನೆತನ್ಯಾಹು, ಮರ್ಸಿಡಿಸ್ ಮೂಲಕ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದರು. ಕೇವಲ ಮೂರು ನಿಮಿಷಗಳಲ್ಲಿ ಏಳು ಅಪಹರಣಕಾರರಲ್ಲಿ ನಾಲ್ವರನ್ನು ಕೊಂದುಹಾಕಿದರು. ಗುಂಡಿನ ಶಬ್ದ ಕೇಳಿ ಎಚ್ಚೆತ್ತುಕೊಂಡ ಉಗಾಂಡ ಸೈನಿಕರನ್ನು ಲ್ಯಾಂಡ್ ರೋವರ್‌ನಲ್ಲಿದ್ದ 35 ಕಮಾಂಡೋಗಳು ಗುಂಡಿನ ಚಕಮಕಿಯಲ್ಲಿ ತೊಡಗಿಸಿಕೊಂಡರು. ಮೊದಲನೇ ವಿಮಾನ ಕೆಳಗಿಳಿದ 6 ನಿಮಿಷಗಳಲ್ಲಿ ಎರಡನೇ ವಿಮಾನವೂ ಕೆಳಗಿಳಿಯಿತು. ಅದರಲ್ಲಿದ್ದ ಕಮಾಂಡೊಗಳು ಪ್ರಯಾಣಿಕರನ್ನು ಬಂಧಮುಕ್ತಗೊಳಿಸಿದರು. ಅಷ್ಟರಲ್ಲಿ ಮತ್ತೊಂದು ವಿಮಾನವೂ ಕೆಳಗಿಳಿಯಿತು. ಅದರಲ್ಲಿ ಆಗಮಿಸಿದ್ದ ಕಮಾಂಡೋಗಳು ಏರ್‌ಪೋರ್ಟ್‌ನಲ್ಲಿ ಸನ್ನದ್ದವಾಗಿ ನಿಲ್ಲಿಸಿದ್ದ ಉಗಾಂಡದ 8 ಮಿಗ್ ವಿಮಾನಗಳನ್ನು ನಾಶಪಡಿಸಿ ಸೈನಿಕರ ಜತೆ ಕಾದಾಟ ಆರಂಭಿಸಿದರು. ಈ ಮಧ್ಯೆ ಕೆಳಗಿಳಿದ ಕೊನೆ ವಿಮಾನ ಉಳಿದ ವಿಮಾನಗಳಿಗೆ ಮರು ಇಂಧನ ತುಂಬಿಸಿತು. ಹೀಗೆ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರನ್ನು ಬಂಧಮುಕ್ತಗೊಳಿಸಿ ವಿಮಾನಕ್ಕೆ ಏರಿಸಿದರು. ಆದರೆ ವಿಮಾನವನ್ನು ಟೇಕ್ ಆಫ್ ಮಾಡೋಣವೆಂದರೆ ಉಗಾಂಡ ಸೈನಿಕರು ಗುಂಡುಹಾರಿಸಿ ಹೊಡೆದುರುಳಿಸುತ್ತಾರೆ.
ಅಂತಹ ಅಪಾಯವನ್ನರಿತ ಕಮಾಂಡೋಗಳು ಏರ್‌ಪೋರ್ಟ್ ವಿದ್ಯುತ್ ಸಂಪರ್ಕವನ್ನೇ ಕಡಿದುಹಾಕಿದರು. ರಾಸಾಯನಿಕ ಹಾಗೂ ಬಾಂಬ್‌ಗಳನ್ನು ಸಿಡಿಸಿ ದಟ್ಟ ಹೊಗೆಯನ್ನು ಸೃಷ್ಟಿಸಿದರು. ಹೀಗೆ ನಿರ್ಮಾಣವಾದ ಕತ್ತಲಿನಲ್ಲಿಯೇ ಟೇಕ್ ಆಫ್ ಆದ ವಿಮಾನ 106 ಪ್ರಯಾಣಿಕರನ್ನು ಹೊತ್ತು ಇಸ್ರೇಲ್‌ನತ್ತ ಹೊರಟಿತು. ಇತ್ತ ತಮ್ಮ ದೇಶವಾಸಿಗಳ ಪ್ರಾಣ ರಕ್ಷಣೆ ಮಾಡಿದ ಕಮಾಂಡೋಗಳು ಒಬ್ಬೊಬ್ಬರಾಗಿಯೇ ಹಿಂದೆ ಸರಿದು ಉಳಿದ ವಿಮಾನಗಳನ್ನೇರಿದರು. ದಟ್ಟ ಹೊಗೆ ಹಾಗೂ ಅನಿರೀಕ್ಷಿತ ದಾಳಿಯಿಂದಾಗಿ ದಿಕ್ಕೆಟ್ಟಿದ್ದ ಉಗಾಂಡ ಸೈನಿಕರು ಬೆಪ್ಪಾಗಿ ನಿಂತಿದ್ದರೆ ಇಸ್ರೇಲಿ ಕಮಾಂಡೋಗಳು ವಿಮಾನಗಳೊಂದಿಗೆ ವಾಪಸ್ ಸಾಗುತ್ತಿದ್ದರು. ಇಂಥದ್ದೊಂದು ‘ಕಮಾಂಡೋ ಆಪರೇಶನ್’ ಅನ್ನು ಇಸ್ರೇಲ್ ಬಿಟ್ಟರೆ ಜಗತ್ತಿನ ಯಾವ ರಾಷ್ಟ್ರವೂ ಇದುವರೆಗೂ ನಡೆಸಿಲ್ಲ. ಬಹುಶಃ ಮುಂದೆಯೂ ನಡೆಸಲು ಸಾಧ್ಯವಿಲ್ಲ!
ಬೇಸರದ ಸಂಗತಿಯೆಂದರೆ ಆ ದಾಳಿಯ ರೂವಾರಿ ಯೋನಾಥನ್ ನೆತನ್ಯಾಹು ವಿಮಾನದಲ್ಲಿ ಹೆಣವಾಗಿ ಮಲಗಿದ್ದರು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ನೆತನ್ಯಾಹು ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆದರೇನಂತೆ ತನ್ನ ಪ್ರಾಣ ಹೋಗುವ ಮೊದಲು ದೇಶದ ಮಾನ ಕಾಪಾಡಿದ್ದರು. ಇರಾನ್, ಲೆಬನಾನ್, ಪ್ಯಾಲೆಸ್ತೀನ್, ಈಜಿಪ್ಟ್, ಸಿರಿಯಾ, ಇರಾಕ್ ಹೀಗೆ ಮುಸ್ಲಿಂ ರಾಷ್ಟ್ರಗಳಿಂದಲೇ ಸುತ್ತುವರಿದಿದ್ದರೂ ನಮ್ಮ ಬೆಂಗಳೂರಿನ ಮೂರು ಪಟ್ಟು ಮಾತ್ರ ದೊಡ್ಡದಿರುವ ಇಸ್ರೇಲ್ ಏಕೆ ಇಂದಿಗೂ ಅಸ್ತಿತ್ವ ಉಳಿಸಿಕೊಂಡಿದೆಯೆಂದರೆ ಪ್ರತಿ ಯಹೂದಿಯಲ್ಲೂ ಒಬ್ಬ ಯೋನಾಥನ್ ನೆತನ್ಯಾಹು ಇದ್ದಾನೆ. ಇಲ್ಲದೇ ಹೋಗಿದ್ದರೆ 1967ರಲ್ಲಿ ಐದು ಮುಸ್ಲಿಂ ರಾಷ್ಟ್ರಗಳು ಒಮ್ಮೆಲೆ ಮುಗಿಬಿದ್ದಾಗಲೇ ಇಸ್ರೇಲ್ ಅಳಿದು ಇತಿಹಾಸದ ಪುಟ ಸೇರುತ್ತಿತ್ತು. ಇಂತಹ ಸಾಹಸಿ ರಾಷ್ಟ್ರಕ್ಕೆ ಕಳೆದ 70 ವರ್ಷಗಳಲ್ಲಿ ಯಾವೊಬ್ಬ ಭಾರತೀಯ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ, ಏಕೆಂದರೆ ಎಲ್ಲಿ ನಮ್ಮ ದೇಶದಲ್ಲಿರುವ ಮುಸಲ್ಮಾನರು ಮುನಿಸಿಕೊಂಡಾರೋ ಎಂಬ ಭಯದಿಂದ! ಇಸ್ರೇಲ್‌ಗೆ ಭೇಟಿ ಕೊಡಲು ಸರ್ಜಿಕಲ್ ಸ್ಟ್ರೈಕ್ ಮಾಡಿಸಿದ ನರೇಂದ್ರ ಮೋದಿಯವರಂಥ ಒಬ್ಬ 56 ಇಂಚಿನ ಎದೆ ಮಾತ್ರವಲ್ಲ, ಒಳಗೆ ಗುಂಡಿಗೆಯನ್ನೂ ಹೊಂದಿರುವ ಪ್ರಧಾನಿ ಕೊನೆಗೂ ನಮಗೆ ಸಿಕ್ಕಿದರಲ್ಲಾ ಎಂಬುದೇ ಹೆಮ್ಮೆಯ ವಿಚಾರ. ನೈಂಟಿ ಮಿನಿಟ್ಸ್ ಅಟ್ ಎಂಟೆಬೆ, ದಿ ಎಕ್ಸಡೂಸ್, ಓ ಜೆರುಸಲೇಂನಂತಹ ಪುಸ್ತಕ ಓದಿ, ಇಲ್ಲವೆ ಮ್ಯೂನಿಕ್‌ನಂತಹ ಸಿನಿಮಾ ನೋಡಿ, ಇಸ್ರೇಲ್ ಬಗ್ಗೆ ನಿಮಗೂ ಹೆಮ್ಮೆ ಮೂಡುತ್ತದೆ.

Comments are closed.