Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ರಾಜ್ಯ ಬಿಜೆಪಿ ಸಂಸದರಿಂದ ಕೇಂದ್ರ ಪರಿಸರ ಸಚಿವರ ಭೇಟಿ, ಪ್ರಮುಖ ವಿಚಾರ ಕುರಿತು ಚರ್ಚೆ.

ರಾಜ್ಯ ಬಿಜೆಪಿ ಸಂಸದರಿಂದ ಕೇಂದ್ರ ಪರಿಸರ ಸಚಿವರ ಭೇಟಿ, ಪ್ರಮುಖ ವಿಚಾರ ಕುರಿತು ಚರ್ಚೆ.

* ರಾಜ್ಯ ಬಿಜೆಪಿ ಸಂಸದರಿಂದ ಕೇಂದ್ರ ಪರಿಸರ ಸಚಿವರ ಭೇಟಿ, ಪ್ರಮುಖ ವಿಚಾರ ಕುರಿತು ಚರ್ಚೆ.

* ಮೇಕೆದಾಟು ಯೋಜನೆಗೆ ರಾಜ್ಯ ಬಿಜೆಪಿ ಕಟಿಬದ್ಧ.

ಡಾ.ಕಸ್ತೂರಿರಂಗನ್ ವರದಿ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಕುರಿತು ರಾಜ್ಯ ಬಿಜೆಪಿ ಸಂಸದರಿಂದ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು.

ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಮಂಗಳವಾರ ಬಿಜೆಪಿ ಸಂಸದರ ನಿಯೋಗವು ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ಭೇಟಿ ಮಾಡಿ ಕರ್ನಾಟಕದ ಅಭಿವೃದ್ಧಿ, ಕೇಂದ್ರದಿಂದ ಆಗಬೇಕಿರುವ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅನೇಕ ವಿಚಾರಗಳಿಗೆ ಸಮ್ಮತಿ ನೀಡಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.

ಡಾ.ಕಸ್ತೂರಿರಂಗನ್ ವರದಿ, ಹುಲಿ ಕಾರಿಡಾರ್ ಯೋಜನೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಯೋಜನೆ ಪ್ರಮುಖವಾಗಿ ಚರ್ಚೆಗೆ ಬಂದವು. ಈ ಸಂದರ್ಭದಲ್ಲಿ ಮಾತನಾಡಿದ ಪರಿಸರ ಸಚಿವರು, ಗ್ರಾಮಸಭೆಗಳನ್ನು ನಡೆಸುವ ಮೂಲಕ ರಾಜ್ಯದ ಹಿತರಕ್ಷಣೆಗೆ ಪೂರಕವಾದ ವರದಿಯನ್ನು ಕರ್ನಾಟಕ ಸರ್ಕಾರವು ಸಲ್ಲಿಸುವುದನ್ನು ಕೇಂದ್ರಸರ್ಕಾರ ಎದುರು ನೋಡುತ್ತಿದೆ. ವರದಿ ಬಂದ ನಂತರ ರಾಜ್ಯದ ಪಶ್ಚಿಮಘಟ್ಟಗಳ ಹಾಗೂ ಕರ್ನಾಟಕದ ಹಿತರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಹುಲಿ ಕಾರಿಡಾರ್ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆಗೆ ಬಂದಾಗ, ಹುಲಿ ಕಾರಿಡಾರ್ ರಚನೆ ಮಾಡಬೇಕೋ, ಬೇಡವೋ ಎಂಬುದು ಸಂಪೂರ್ಣವಾಗಿ ರಾಜ್ಯಕ್ಕೆ ಬಿಟ್ಟ ವಿಚಾರವಾಗಿದೆ. ಇದರಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಪ್ರಸ್ತಾವನೆ ಸಲ್ಲಿಸಿದರೆ ಖಂಡಿತವಾಗಿ ಪರಿಶೀಲನೆ ನಡೆಸಲಾಗುವುದು. ಈ ವಿಚಾರದಲ್ಲಿ ಪ್ರಸ್ತಾವನೆ ಬಂದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಂಸದರಿಗೆ ಭರವಸೆ ನೀಡಿದರು.

ಈ ಮಧ್ಯೆ ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಅವರು ಮೇಕೆದಾಟು ಯೋಜನೆಯ ಅಗತ್ಯದ ಬಗ್ಗೆ ಸಚಿವ ಸಂಪುಟ ಸಭೆಯ ವೇಳೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಕೂಲಂಕಷವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ನುಡಿದರು. ರಾಜ್ಯ ಬಿಜೆಪಿ ಮೇಕೆದಾಟು ಯೋಜನೆಗೆ ಕಟಿಬದ್ಧವಾಗಿದೆ ಎಂದು ತಿಳಿಸಿದ್ದಾರೆ.

 

env min

Comments are closed.