Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಧರಣಿ ಮಂಡಲ ಮಧ್ಯದೊಳಗೆ ……ಗೋವಿನ ಹಾಡು ಕೇಳಿ ಬೆಳೆದವರು ನಾವೇನಾ?!

ಧರಣಿ ಮಂಡಲ ಮಧ್ಯದೊಳಗೆ ……ಗೋವಿನ ಹಾಡು ಕೇಳಿ ಬೆಳೆದವರು ನಾವೇನಾ?!

ಧರಣಿ ಮಂಡಲ ಮಧ್ಯದೊಳಗೆ ……ಗೋವಿನ ಹಾಡು ಕೇಳಿ ಬೆಳೆದವರು ನಾವೇನಾ?!

ಹೀಗೊಂದು ಸ್ವಗತದಿಂದಲೇ ಮಾತು ಆರಂಭಿಸುವುದಾದರೆ…. ನಮ್ ಅಪ್ಪ ಯಾವ ಗಳಿಗೆಯಲ್ಲಿ ‘ಗೋಪಾಲ’ ಅಂತ ಹೆಸರಿಟ್ಟರೋ ದನಗಳನ್ನು ನೋಡಿಕೊಳ್ಳುವುದೇ ನನ್ನ ಜೀವನವಾಯಿತು ಎಂದು ಅವರಿವರ ಬಳಿ ತನ್ನನ್ನು ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದರು ನನ್ನ ಅಪ್ಪಯ್ಯ. ಒಮ್ಮೊಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಂಡಾಗ ಅವರು ಹೆಂಡತಿ-ಮಕ್ಕಳಿಗಿಂತ ತಮ್ಮ ಪುಸ್ತಕಗಳು ಮತ್ತು ನಮ್ಮ ದನಕರುಗಳನ್ನೇ ಹೆಚ್ಚು ಪ್ರೀತಿಸುತ್ತಿದ್ದರೇನೋ ಎಂದನಿಸುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕರು ಹುಟ್ಟಿದಾಗ ಮೈಬಣ್ಣ ಕಪ್ಪಾಗಿದ್ದರೆ ಕರಿಯಾ, ಬಿಳಿಯಾಗಿದ್ದರೆ ಬಿಳಿಯ, ಕೆಂಪಿದ್ದರೆ ಕೆಂದಾ, ಮೈತುಂಬಾ ಬಿಳಿ ಮಚ್ಚೆಗಳಿದ್ದರೆ ಚುಕ್ಕಿ, ಹಣೆಯಲ್ಲಿ ಬೊಟ್ಟು ಇದ್ದರೆ ಚಂದ್ರ ಎಂದು ಕರೆಯುವುದು ಒಂಥರಾ ವಾಡಿಕೆ. ಆದರೂ ಕೆಲವರು ಮಾತ್ರ ತಮ್ಮ ಮಕ್ಕಳಿಗೆ ನಾಮಕರಣ ಮಾಡುವಾಗ ಹೇಗೆ ಯೋಚಿಸಿ ಹೆಸರಿಡುತ್ತಾರೋ ಹಾಗೇ ದನಕರುಗಳಿಗೂ ಒಳ್ಳೊಳ್ಳೆ ಹೆಸರುಗಳನ್ನಿಡುತ್ತಾರೆ.
ನನ್ನ ಅಪ್ಪಯ್ಯನೂ ಮಕ್ಕಳಿಗೆ ನಾಮಕರಣ ಮಾಡುವಾಗ ತೋರಿದಷ್ಟೇ ಆಸ್ಥೆಯಿಂದ ಕರುಗಳಿಗೂ ಹೆಸರಿಡುತ್ತಿದ್ದರು. ಪುಣ್ಯಕೋಟಿ, ಕಾಮಧೇನು, ನಂದಿನಿ, ಭವಾನಿ, ಲಕ್ಷ್ಮಿ, ಕೃಪಾ ಎಲ್ಲವೂ ನಮ್ಮ ಕೊಟ್ಟಿಗೆಯಲ್ಲೇ ಇದ್ದವು. ಗೋಮಾಳದಲ್ಲಿ ಮೇಯುತ್ತಿರುವ ಅವುಗಳನ್ನು ಕೊಟ್ಟಿಗೆಗೆ ಕರೆತರಲು ಅಪ್ಪಯ್ಯ ಹೊರಟರೆಂದರೆ ಕಣ್ಣಿಗೆ ಕಾಣುವ ಮೊದಲೇ ಅವರ ಬರುವಿನ ಸುಳಿವು ಹಿಡಿದು ಅಂಬಾ ಎಂದು ಕೂಗುತ್ತಿದ್ದವು. ಅವರು ನಮ್ಮನ್ನು ಮುದ್ದಿಸಿದ್ದು ಖಂಡಿತಾ ನೆನಪಿಲ್ಲ, ಆದರೆ ನಮ್ಮ ದನಕರುಗಳ ಮೈದಡವುತ್ತಿದ್ದ, ಮುತ್ತಿಕ್ಕಿದ್ದ ಚಿತ್ರಗಳು ಇಂದಿಗೂ ಕಣ್ಣಮುಂದೆ ಬರುತ್ತವೆ. ದಸರಾ, ಬೇಸಿಗೆ ರಜೆಯಲ್ಲಿ ಅಪ್ಪಯ್ಯನಿಗೆ ಗೋವುಗಳ ಜವಾಬ್ದಾರಿಯಿಂದ ಮುಕ್ತಿ ಸಿಕ್ಕಿ ನಾವು ಗೋಪಾಲಕರಾಗುತ್ತಿದ್ದೆವು. ಪ್ರತಿ ರೈತನ ಮನೆಯಲ್ಲೂ ಸಹಜವಾಗಿ ಕಾಣಬಹುದಾದ ಚಿತ್ರಣಗಳಿವು, ನೀವೊಬ್ಬ ರೈತನ ಮಗನಾಗಿದ್ದರೆ ನಿಮ್ಮೊಳಗೂ ಇಂತಹ ನೆನಪಿನ ಬುತ್ತಿ ಇರುತ್ತದೆ.
ಪ್ರತಿ ವರ್ಷ ದೀಪಾವಳಿ ಬಂದಾಗ ದನಕರುಗಳಿಗೆ ಸ್ನಾನಮಾಡಿಸಿ ಗೋಪೂಜೆ ಮಾಡುವ ಗೌಜನ್ನು ಮರೆಯಲು ಸಾಧ್ಯವೆ? ಮನೆ ಮಂದಿಯಂತೆ ದನಕರುಗಳೂ ನಮ್ಮ ಬದುಕಿನ ಭಾಗವಾಗಿ ಬಿಡುತ್ತವೆ. ಅವಿನಾಭಾವ ಸಂಬಂಧ ಬೆಳೆದುಬಿಟ್ಟಿರುತ್ತದೆ. ಆರು ವರ್ಷಗಳ ಹಿಂದೆ ಅಪ್ಪಯ್ಯ ಅಗಲಿದ ಕ್ಷಣದಲ್ಲಿ ನೆನಪುಗಳು ಹೀಗೆ ಹಾದುಹೋಗುತ್ತಿರುವಾಗ, ಕೊಟ್ಟಿಗೆಯೊಳಗಿನ ನಮ್ಮ ಹಸುಗಳು ಅಂಬಾ ಎಂದು ಕರೆಯುತ್ತಿರುವುದು ಕಿವಿಗೆ ಅಪ್ಪಳಿಸುತ್ತಿದ್ದ ಘಳಿಗೆಯಲ್ಲಿ ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ಮನಸ್ಸನ್ನು ಕಲಕತೊಡಗಿತು. ನಾವು ಶಾಲೆಯಲ್ಲಿ ಬಾಯಿಪಾಠ ಮಾಡಿ ಮಾಸ್ತರಿಗೆ ಒಪ್ಪಿಸಿದ…
ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು…
ಎಂಬ ಪುಣ್ಯಕೋಟಿಯ ಹಾಡು ನೆನಪಾಯಿತು.
ನಮ್ಮ ವಂಶಕೆ ವರುಷಕೊಂದು
ಸಂಕರಾತ್ರಿಯ ಹಬ್ಬದೊಳಗೆ
ಪಾಲುಪೊಂಗಲ ಮಾಳ್ವೆವೆಂದು
ಆಗ ಹಬ್ಬವ ಮಾಡಿದ…
ಕಾಳೇನಹಳ್ಳಿಯ ಕಾಳಿಂಗಗೌಡನ ಗೋಪ್ರೀತಿ, ಹಸುಗಳಿಗೆ ಹೆಸರಿನ ಬದಲು 1, 2, 3, 4 ಎಂಬಂತೆ ನಂಬರ್ ಕೊಟ್ಟು, ಅವು ಎಷ್ಟೆಷ್ಟು ಹಾಲು ಕೊಡುತ್ತವೆ ಎಂದು ಯಾಂತ್ರಿಕವಾಗಿ ಲೆಕ್ಕಾಚಾರ ಹಾಕಲಾರಂಭಿಸಿದ ವಿದೇಶದಲ್ಲಿ ಕಲಿತ ಮೊಮ್ಮಗನ ಮನಃಸ್ಥಿತಿ ಬಹುವಾಗಿ ಕಾಡತೊಡಗಿದವು.
ಮನುಷ್ಯ ಮನುಷ್ಯರ ನಡುವಿನ ಸಂಬಂಧ, ಮನುಷ್ಯ ಮತ್ತು ದೇವರ ನಡುವಿನ ಸಂಬಂಧ, ದೇವರು ಅನ್ನುವವನು ನಿಜಕ್ಕೂ ಇದ್ದಾನೆಯೇ ಎಂಬ ಪ್ರಶ್ನೆ ಇಟ್ಟುಕೊಂಡು ಉತ್ತರ ಹುಡುಕಲು ಹೊರಟವರು, ಅವನು ಅಸ್ತಿತ್ವವನ್ನು ಅಲ್ಲಗಳೆಯುವುದಕ್ಕಾಗಿ ಕಾರಣಗಳನ್ನು ಕೊಟ್ಟು ನಿರೂಪಿಸಲು ಮುಂದಾದವರು, ಮತ-ಧರ್ಮಗಳನ್ನು ಮೀರಿದ ಮಾನವೀಯತೆ ಮತ್ತು ಮಾನವೀಯ ಸಂಬಂಧಗಳನ್ನು ಚಿತ್ರಿಸಲು ಹೊರಟ ಕವಿ, ಸಾಹಿತಿ, ಲೇಖಕರು ಸಾಕಷ್ಟಿದ್ದಾರೆ. ಇನ್ನು ಮರಗಿಡ, ಪ್ರಾಣಿಸಂಕುಲ, ಜೀವಜಲರಾಶಿಯಿಂದ ಪ್ರಭಾವಿತರಾಗಿ ಬರೆದ ಲೇಖಕರೂ ಬಹಳಷ್ಟಿದ್ದಾರೆ. ನಮ್ಮ ಪ್ರಾಚೀನ ಕವಿಗಳಲ್ಲೆಲ್ಲ ಈ ಸ್ಫೂರ್ತಿ ಕಾಣಸಿಗುತ್ತದೆ.
ಗೋಮಾತೆಯನ್ನು ವಸ್ತುವಾಗಿಸಿಕೊಂಡ ಉದಾಹರಣೆಗಳೂ ಇವೆ. ಕಾಳಿದಾಸ ಬರೆದಿರುವ ದಿಲೀಪನ ಕಥೆಯಲ್ಲಿ ತನ್ನ ಪ್ರಾಣವನ್ನೇ ಕೊಡಲು ಸಿದ್ಧವಾಗುವ ನಂದಿನಿಯ ಪ್ರಸಂಗವಿದೆ. ನಮ್ಮ ಕನ್ನಡದಲ್ಲಿ, ಅದರಲ್ಲೂ ಇತ್ತೀಚಿನ ನಾಲ್ಕಾರು ದಶಕಗಳಲ್ಲಿ ಗೋವಿನ ಜತೆ ನಮಗಿರುವ ಭಾವನಾತ್ಮಕ ಸಂಬಂಧವನ್ನು ಭೈರಪ್ಪನವರಷ್ಟು ಚೆನ್ನಾಗಿ ಚಿತ್ರಿಸಿದ ಮತ್ತೊಬ್ಬ ಲೇಖಕ ಖಂಡಿತ ಕಾಣಸಿಗುವುದಿಲ್ಲ. ಅವರ ‘ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಗೋವು ಮತ್ತು ಮನುಜರ ನಡುವಿನ ಸಂಬಂಧದ ಬಗ್ಗೆ ಮನಮುಟ್ಟುವ ಸನ್ನಿವೇಶವೊಂದು ಬರುತ್ತದೆ.
‘ಕಾಳಿಂಗಗೌಡ ನಸುಕಿನಲ್ಲೇ ಎದ್ದು ಹೊಲದ ಕಡೆಗೆ ಹೋಗಿದ್ದ. ಆಷಾಢ ಕಳೆದು ಶ್ರಾವಣ ನಡೆಯುತ್ತಿದ್ದ ಆಗ ಹೊಲಗಳಲ್ಲಿ ಆಳುಗಳು ಹಿಂಗಾರು ರಾಗಿಯ ಸಸಿ ಹಾಕುತ್ತಿದ್ದರು. ಮೂಡಣ ದಿಕ್ಕಿನಲ್ಲಿ ಸ್ವಾಮಿ ನಾಲ್ಕು ಆಳುದ್ದ ಏರುವ ಹೊತ್ತಿಗೆ ಅವನು ಮನೆಗೆ ಬಂದಾಗಲೂ ಮಗು(ಮೊಮ್ಮಗ) ಅಳುತ್ತಿತ್ತು.‘ಯಾಕಲೇ ಹಿಂಗ್ ಬಡಕತ್ತೈತೆ ಮಗಾ?’ ಎಂದು ಕೇಳಿದ ಅವನಿಗೆ ಗೌಡತಿ ಹೇಳಿದಳು: ‘ತಾಯವ್ವನ್ (ಸೊಸೆ) ಎದೇಲಿ ಆಲ್ ನಿಂತೋಗ್ಯದೆ. ಒಂದು ವರ್ಸಕ್ಕೇ ಆಲ್ ಬತ್ತಿ ಓಗೋ ಇದು ಯಾವ ಒಳ್ಳೇ ಜಾತಿ ಎಂಗ್‌ಸು ಇವ್ಳ ಅವ್ವಂಗೂ ಹಂಗೇ ಆಗ್ತಿತ್ತು’. ಹೆಂಡತಿಯ ಮಾತು ಗೌಡನಿಗೆ ಸಹ್ಯವಾಗಲಿಲ್ಲ. ಸುಮ್ಮುಕ್ ಬಾಯ್ ಮುಚ್‌ಕಂಡಿರ್ತೀಲೇ ಇಲ್ವಲೇ ನೀನು? ಯಲ್ಲಾ ಅಸುಗಳೂ ಒಂದೇ ತರಾ ಇರ್ತಾವಾ? ಯಲ್ಲಾ ಅಸುಗಳೂ ಒಂದೇಸಮಕ್ ಆಲ್ ಕೊಡ್ತಾವಾ? ಎಂದು ಗದರಿಸಿದ.
ನಿರುತ್ತರಳಾದ ಗೌಡತಿ ಮಗುವನ್ನು ಗೌಡನ ಕೈಗೇ ಕೊಟ್ಟು ಅಡಿಗೆಯ ಕೋಣೆಗೆ ಹೋದಳು. ಆ ಮಗುವನ್ನು ಸಮಾಧಾನ ಮಾಡುವುದೇ ಗೌಡನಿಗೆ ಒಂದು ಸಮಸ್ಯೆಯಾಯಿತು. ಒಳಗೆ ಹೋಗಿ ಗೌಡತಿಯನ್ನು ಕೇಳಿದರೆ ಅವಳು, ‘ಎದೆ ಆಲ್ಗೆ ಆಟೊಂದು ಜಂಗಲು ಅಚ್ಕಂಡೈತೆ ಅದು. ಯದೆ ಆಲ್ ಸಿಕ್ಕಾಗಂಟ ಸುಮ್ಕಾಗಾಕಿಲ್ಲ’ ಎಂದಳು. ಅವನಿಗೊಂದು ಉಪಾಯ ಹೊಳೆಯಿತು. ಹೆತ್ತ ತಾಯಿಗಿಂತ ಗೋತಾಯಿ ದೊಡ್ಡೋಳಲ್ವಾ? ಅವಳ ಮೊಲೆ ಹೆತ್ತವ್ವನ ಎದೆಗಿಂತ ದೊಡ್ಡದಲ್ವಾ? ಅದೇ ಸೈ ಎಂದು ಹಸುವಿನ ಕೊಟ್ಟಿಗೆಗೆ ಹೋದ. ಎಲ್ಲ ಹಸುಗಳನ್ನೂ ಕರೆದು ಆಗಿಹೋಗಿತ್ತು. ಅಲ್ಲದೆ ಮಗುವೇ ನೇರವಾಗಿ ಕೆಚ್ಚಲಿಗೆ ಬಾಯಿ ಹಾಕಿದರೆ ಎಲ್ಲ ಹಸುಗಳೂ ಸುಮ್ಮನಿರುವುದಿಲ್ಲ. ಆದರೆ ಪುಣ್ಯಕೋಟಿ ತಳಿಯ ಬಗೆಗೆ ಗೌಡನಿಗೆ ಎಲ್ಲಿಲ್ಲದ ವಿಶ್ವಾಸ.
ಯಾವ ಹೊತ್ತಿನಲ್ಲಿ ಕರೆದರೂ ಅದು ನಿರ್ವಂಚನೆಯಿಂದ ಇದ್ದಷ್ಟು ಹಾಲನ್ನು ಕೊಡುತ್ತಿತ್ತು. ಗೌಡನ ದೊಡ್ಡಿಯಲ್ಲಿ ಪುಣ್ಯಕೋಟಿ ತಳಿಯ 3 ಹಸುಗಳು ಕರೆಯುತ್ತಿದ್ದವು. ಒಂದರದು ಇನ್ನೂ ಮೊದಲನೆಯ ಕರು. ಈಯ್ದು ಈ ಶ್ರಾವಣಕ್ಕೆ ಒಂದು ವರ್ಷವಾಗಿತ್ತು. ಆ ಹೋರಿಕರುವಿಗೆ ಈ ಮೊಮ್ಮಗನದೇ ವಯಸ್ಸು. ತನ್ನ ತಾಯಿಯ ಹಾಲನ್ನು ಕುಡಿದ ಮೇಲೆ ಸುಮ್ಮಾನದಿಂದ ದೊಡ್ಡಿಯ ಹೊರಗೋಡೆಯ ಹತ್ತಿರ ಕುಣಿಯುತ್ತಿತ್ತು. ಗೌಡ ಹೋಗಿ ಅದನ್ನು ಹಿಡಿದುಕೊಂಡು ಬಂದು ಅದರ ಅಮ್ಮನ ಹತ್ತಿರ ಬಿಟ್ಟ. ಕರು ಮತ್ತೆ ಮೊಲೆಗೆ ಬಾಯಿ ಹಾಕಿತು. ಗೌಡ ಮಗುವನ್ನು ಆನಿಸಿ ಅದರ ಬಾಯಿಗೆ ಹಸುವಿನ ಇನ್ನೊಂದು ಪಾರ್ಶ್ವದ ಒಂದು ಮೊಲೆಯನ್ನು ಕೊಟ್ಟ. ಮಗು ಒಂದು ನಿಮಿಷ ಹಾಲನ್ನು ಕುಡಿಯಲು ಅನುಮಾನಿಸಿತು.
ಗೌಡನೇ ಇನ್ನೊಂದು ಕೈನಿಂದ ಮಗುವಿನ ಬಾಯಲ್ಲಿದ್ದ ಮೊಲೆಯ ಮೇಲ್ಭಾಗವನ್ನು ಮಿದುವಾಗಿ ಹಿಂಡಿದ. ಸ್ವಾದವಾದ ಬೆಚ್ಚನೆಯ ಹಾಲು ಬಾಯಿಗೆ ಬೀಳುತ್ತಲೇ ಮಗುವಿನ ಅನುಮಾನವು ಪರಿಹಾರವಾಗಿ ತಾನೇ ಮೊಲೆಯನ್ನು ಚೀಪಿ ಹೀರಲು ಪ್ರಾರಂಭಿಸಿತು. (ಕೆಲ ವರ್ಷಗಳ ಹಿಂದೆ ಸುದ್ದಿವಾಹಿನಿಯೊಂದರಲ್ಲಿ-‘ಬಾಲ’ಕರು– ಎಂಬ ಶೀರ್ಷಿಕೆಯಡಿ ಹಸುವಿನ ಮೊಲೆಹಾಲು ಕುಡಿಯುತ್ತಿರುವ ಮಗುವಿನ ವರದಿ ಪ್ರಸಾರವಾಗಿದ್ದು ನಿಮಗೆ ನೆನಪಿರಲೂಬಹುದು). ಮಗು ಹಾಲು ಕುಡಿದ ಮೇಲೆ ಅದನ್ನು ಎತ್ತಿ, ಅದರ ತಲೆಯನ್ನು ಹಸುವಿನ ಮುಂದಿನ ಕಾಲಿಗೆ ಒಂದು ಸಲ ಮುಟ್ಟಿಸಿ ಗೌಡ ಹಸುವಿಗೆ ಹೇಳಿದ: ಇವತ್ಲಿಂದ ನೀನೇ ಇದ್ಕೆ ತಾಯಿ ಕಣವ್ವ. ಇದು ಅತ್ತಾಗ್ಲೆಲ್ಲ ನೀನೇ ಎದೆ ಕೊಟ್ಟು ಸಾಕ್‌ಬೇಕು’.
ಗೋವನ್ನು ಸರ್ವದೇವತೆಗಳ ಸ್ವರೂಪವೆಂದು ಪೂಜಿಸುವ ಕಾಳಿಂಗಜ್ಜ ಮತ್ತು ಅದು ಹಾಲು ಮಾಂಸಗಳನ್ನು ಕೊಡುವ ಪ್ರಾಣಿ ಮಾತ್ರ ಎಂದು ಭಾವಿಸುವ ಎನಿಮಲ್ ಹಸ್‌ಬ್ಯಾಂಡ್ರಿಯಲ್ಲಿ ಪದವಿ ಪಡೆದು ಅಮೆರಿಕದಿಂದ ಹಿಂದಿರುಗಿದ ಅವನ ಮೊಮ್ಮಗ, ಇವರ ಮೌಲ್ಯ ಸಂವೇದನೆಗಳ ನಡುವೆ ನಡೆಯುವ ಸಂಘರ್ಷವನ್ನು ಮುಖ್ಯವಸ್ತುವಾಗಿಟ್ಟುಕೊಂಡಿರುವ ‘ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಗೋವು ನಮ್ಮ ಎರಡನೆ ಅಮ್ಮ ಎಂಬುದನ್ನು ಭೈರಪ್ಪನವರು ಬಹಳ ಚೆನ್ನಾಗಿ ನಿರೂಪಿಸುತ್ತಾರೆ. ಈ ಕಾದಂಬರಿ ಕನ್ನಡ (ತಬ್ಬಲಿಯು ನೀನಾದೆ ಮಗನೆ) ಹಾಗೂ ಹಿಂದಿ (ಗೋಧೂಳಿ) ಎರಡೂ ಭಾಷೆಗಳಲ್ಲಿ ಚಲನಚಿತ್ರವೂ ಆಯಿತು. ಬಿ.ವಿ. ಕಾರಂತರು ಹಾಗೂ ಗಿರೀಶ್ ಕಾರ್ನಾಡರು ನಿರ್ದೇಶಿಸಿದ ಈ ಚಿತ್ರಗಳಲ್ಲಿ ನಾಸಿರುದ್ದೀನ್ ಶಾ ಅಭಿನಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗೋಮಾತೆಯ ಮಹತ್ವವನ್ನು ಮನಮುಟ್ಟುವಂತೆ ಹೇಳುತ್ತಿರುವವರು ಗೋಕರ್ಣ ಮಂಡಲಾಧೀಶ್ವರರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ. ಹತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಗೋಯಾತ್ರೆ ಕೈಗೊಂಡಿದ್ದ ಅವರು ಇಂದು ರಾಷ್ಟ್ರಮಟ್ಟದಲ್ಲಿ ಗೋವಿನ ಬಗ್ಗೆ ಜಾಗೃತಿ ಮೂಡಿಸುವ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ನಿಮಗೆ ಗೊತ್ತಾ, ತಮಿಳಿನಲ್ಲಿ ಸತ್ಯೇಂದ್ರ ಚೋಳ ಎಂಬ ರಾಜನಿದ್ದ. ಅತಿ ವೇಗವಾಗಿ ರಥ ಓಡಿಸುವ ಖಯಾಲಿಗೆ ಬಿದ್ದಿದ್ದ ಆತನ ಮಗನ ರಥದ ಚಕ್ರಕ್ಕೆ ಸಿಲುಕಿ ಕರುವೊಂದು ಸಾವನ್ನಪ್ಪಿತು. ಆ ರಾಜ ತನ್ನ ರಾಜ್ಯದಲ್ಲಿ ನ್ಯಾಯದ ಗಂಟೆಯೊಂದನ್ನು ಕಟ್ಟಿಸಿರುತ್ತಾನೆ. ಕರುವನ್ನು ಕಳೆದುಕೊಂಡ ಹಸು ಹಗ್ಗ ಎಳೆದು ನ್ಯಾಯದ ಗಂಟೆ ಬಾರಿಸುತ್ತದೆ. ಸತ್ಯಾಸತ್ಯತೆಯನ್ನು ಪರಾಮರ್ಶಿಸಿದಾಗ ತನ್ನ ಮಗನೇ ತಪ್ಪೆಸಗಿದ್ದಾನೆ ಎಂದು ರಾಜನಿಗೆ ತಿಳಿಯುತ್ತದೆ, ರಾಜ ತನ್ನ ಮಗನಿಗೆ ಶಿಕ್ಷೆಯನ್ನು ಘೋಷಣೆ ಮಾಡಿದರೂ ಅದನ್ನು ಜಾರಿಗೊಳಿಸಲು ಯಾರೂ ಮುಂದೆ ಬರಲಿಲ್ಲ.
ಕೊನೆಗೆ ರಾಜನೇ ರಥವೇರಿ ಮಗನ ಮೇಲೆ ರಥ ಹರಿಸಿ ಸಾಯಿಸುತ್ತಾನೆ. ಬಹುಭಾಷಾ ವಿದ್ವಾಂಸರು, ಅವಧಾನ ಕಲೆಯಲ್ಲಿ ದೊಡ್ಡ ಹೆಸರಾದ ಶತಾವಧಾನಿ ಆರ್. ಗಣೇಶರನ್ನು ಕೇಳಿದರೆ ಇಂತಹ ಅಗಣಿತ ನಿದರ್ಶನಗಳನ್ನು ಕೊಡುತ್ತಾರೆ, ನಮ್ಮ ಪರಂಪರೆ ಗೋವಿಗೆ ಎಂತಹ ಸ್ಥಾನಮಾನ ಕೊಟ್ಟಿತ್ತು ಎಂಬುದನ್ನು ವಿವರಿಸುತ್ತಾರೆ. ನಮ್ಮಲ್ಲಿ ಒಂದು ಸಂಪ್ರದಾಯವಿತ್ತು. ಅದನ್ನು ಪಂಪ ಕೂಡ ಬರೆಯುತ್ತಾನೆ, ‘ಪೆಣ್‌ಪುಯ್ಯಲೊಳ್ ತುರುಗೋಳೋಳ್ ಕಾವುದು’. ಅಂದರೆ ಹೆಂಗಸರಿಗೆ, ಹಸುಗಳಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕಾದುದು ವೀರರ ಲಕ್ಷಣ ಎಂದು ಪಂಪಭಾರತದಲ್ಲಿ ಆತ ಬರೆಯುತ್ತಾನೆ. ಇದನ್ನು ನೀವು ಮಹಾಭಾರತದಲ್ಲಿ ಬರುವ ವಿರಾಟ ಪರ್ವದಲ್ಲೂ ಕಾಣಬಹುದು.
ಒಂದು ವರ್ಷದ ಅಜ್ಞಾತವಾಸದಲ್ಲಿದ್ದ ಪಾಂಡವರು ವಿರಾಟ ರಾಜನ ಸಾಮ್ರಾಜ್ಯದಲ್ಲಿ ತಲೆಮರೆಸಿಕೊಂಡಿರಬಹುದೆಂಬ ಅನುಮಾನ ಕೌರವರನ್ನು ಕಾಡುತ್ತದೆ. ವಿರಾಟನ ದನಕರುಗಳನ್ನು ಅಪಹರಿಸಿದರೆ ಪಾಂಡವರು ಎಲ್ಲೇ ಇದ್ದರೂ ಯುದ್ಧಕ್ಕೆ ಬರುತ್ತಾರೆ ಎಂಬ ಕಾರಣದಿಂದಲೇ ಕೌರವರು ಹಸುಗಳನ್ನು ಅಪಹರಿಸುತ್ತಾರೆ. ಆಗ ಉತ್ತರ ಕುಮಾರನ ಸಾರಥಿಯಾಗಿ ಬಂದು ಅರ್ಜುನ(ಆಗ ಬೃಹನ್ನಳೆ) ಗೋವುಗಳನ್ನು ಬಿಡಿಸಿದ್ದು ನಿಮಗೆ ಗೊತ್ತೇ ಇದೆ. ಇವತ್ತಿಗೂ ಗೃಹಪ್ರವೇಶದ ಸಂದರ್ಭದಲ್ಲಿ ಪೂಜೆಗೆ ಭಾಜನವಾಗುವುದು, ನಾವು ಮನೆತುಂಬಿಸಿಕೊಳ್ಳುವುದು ಹಸುವನ್ನೇ. ಗೋವು ನಮ್ಮ ಪರಂಪರೆಯ ಒಂದು ಭಾಗ, ನಮ್ಮ ಭಾವನಾತ್ಮಕ ಕೊಂಡಿ ಅದು. ಒಮ್ಮೆ ಭೈರಪ್ಪನವರು ಮುಂಬೈನ ಬಾಂದ್ರಾದಲ್ಲಿರುವ ಏಷ್ಯಾದ ಅತಿದೊಡ್ಡ ಕಸಾಯಿ ಖಾನೆಗೆ ಭೇಟಿ ಕೊಟ್ಟಿದ್ದರು. ಅಲ್ಲಿ ‘ಹಲಾಲ್’ ಮಾಡುವ ಸಲುವಾಗಿ ಹಸು, ಎತ್ತು, ಎಮ್ಮೆಗಳನ್ನು ಸಾಲಾಗಿ ಮಲಗಿಸಿದ್ದರು. ಅಂದರೆ ಮುಸಲ್ಮಾನರು ಹಲಾಲ್ ಮಾಡಿದ ಪ್ರಾಣಿಗಳನ್ನು ಮಾತ್ರ ತಿನ್ನುತ್ತಾರೆ.
ಹಲಾಲ್ ಎಂದರೆ ಹಸು ಕರುಗಳನ್ನು ಮಲಗಿಸಿ ಕುತ್ತಿಗೆ ಅಥವಾ ಉಸಿರಾಟದ ನಾಳವನ್ನು ಹರಿತವಾದ ಚಾಕುವಿನಿಂದ ಸೀಳುತ್ತಾರೆ. ಅವು ರಕ್ತಸ್ರಾವದಿಂದ ನರಳಿ ಒದ್ದಾಡಿ ಸತ್ತ ಮೇಲೆ ತುಂಡರಿಸಿ ತಿನ್ನುತ್ತಾರೆ. ಬಾಂದ್ರಾ ಕಸಾಯಿಖಾನೆಯಲ್ಲಿ ನಡೆಯುತ್ತಿದ್ದ ಅಂಥದ್ದೊಂದು ಅಮಾನವೀಯ ಕೃತ್ಯವನ್ನು ಕಂಡ ಭೈರಪ್ಪನವರಿಗೆ ವಾರಗಟ್ಟಲೆ ನಿದ್ರೆಯೇ ಬರಲಿಲ್ಲ, ಮನಸು ಕೊರಗಿ ಕರಕಲಾಯಿತು. ಆ ನೋವಿನಲ್ಲಿ ರಚನೆಯಾಗಿದ್ದೇ ‘ತಬ್ಬಲಿಯು ನೀನಾದೆ ಮಗನೆ’. ಗೋಹತ್ಯೆಯ ವಿಚಾರ ಬಂದಾಗ ಏಕೆ ನಮ್ಮ ಮನಸ್ಸು ಘಾಸಿಗೊಂಡಂತೆ ವರ್ತಿಸುತ್ತದೆ, ರೌದ್ರಾವತಾರ ತಾಳುತ್ತದೆಂದರೆ ಇದೇ ಕಾರಣಕ್ಕೆ. ದನ ಕರುಗಳನ್ನು ನಾವು ತಾಯಿಯಂತೆ ಕಾಣುವವರೇ ಹೊರತು ಅವು ನಮ್ಮ ಪಾಲಿಗೆ ಮಿಲ್ಕ್‌ ಗಿವಿಂಗ್ ಮಷಿನ್‌ಗಳಾಗಲಿ, ಮಾಂಸದ ಮೂಲಗಳಾಗಲಿ ಅಲ್ಲ. ಎಲ್ಲವನ್ನೂ ಭೋಗದ ವಸ್ತುವಂತೆ ನೋಡುವ ಯುಟಿಲಿಟೇರಿಯನ್ ಸಂಸ್ಕೃತಿ, ಮನಸ್ಥಿತಿ ನಮ್ಮದಲ್ಲ. ದನಕರುಗಳ ಜತೆ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದೇವೆ.
ಏಕೆ ಇದನ್ನೆಲ್ಲ ಮತ್ತೆ ಹೇಳಬೇಕಾಗಿದೆಯೆಂದರೆ ಕಳೆದ ಒಂದು ವಾರದಲ್ಲಿ ಏನೆಲ್ಲಾ ನೋಡಿದೆವು ನಾವು?! ಧರಣಿ ಮಂಡಲ ಮಧ್ಯದೊಳಗೆ… ಎಂಬ ಗೋವಿನ ಹಾಡು ಹೇಳಿ ಬೆಳೆದವರು ನಾವೇನಾ ಎಂಬ ಅನುಮಾನ ಕಾಡುತ್ತಿದೆ! ಸಾರ್ವಜನಿಕವಾಗಿ ಹದಿನೆಂಟು ತಿಂಗಳ ಕರುವಿನ ಕುತ್ತಿಗೆ ಕೊಯ್ದು, ಬೇಯಿಸಿ ತಿಂದ ಕೇರಳ ಯೂತ್ ಕಾಂಗ್ರೆಸಿಗರ ಅಟ್ಟಹಾಸ, ವಯಸ್ಸಾದ ತಂದೆ-ತಾಯಂದಿರನ್ನೇ ಮಕ್ಕಳು ನೋಡಿಕೊಳ್ಳುವುದಿಲ್ಲ, ಇನ್ನು ದನಗಳನ್ನು ಯಾರು ನೋಡಿಕೊಳ್ಳುತ್ತಾರ್ರೀ ಎಂಬ ನಿರ್ಭಾವುಕ ಮಾತುಗಳು, ಟೌನ್‌ಹಾಲ್ ಎದುರು ಬೀಫ್ ಪಾರ್ಟಿ ಮಾಡುತ್ತೇವೆಂದು ಮಾಡಿದ ಘೋಷಣೆ, ನನಗೆ ಏನು ಬೇಕೋ ಅದನ್ನು ತಿನ್ನುತ್ತೇನೆ, ಕೇಳೋಕೆ ನೀನ್ಯಾರು ಎಂಬ ವೀರಾವೇಶದ ಮಾತುಗಳು. ಹಾಗಂತ ನಾನು ಖಂಡಿತ ಅನ್ಯಧರ್ಮಿಯರನ್ನು ಪ್ರಶ್ನಿಸುವುದಿಲ್ಲ.
ಏಕೆಂದರೆ…
ಕರುವಿನ ಕುತ್ತಿಗೆ ಕೊಯ್ಯಲು ಎಳೆತಂದವರು, ಟೌನ್ ಹಾಲ್ ಎದುರು ಬೀಫ್ ಪಾರ್ಟಿ ಮಾಡಲು ಮುಂದಾದವರು, ದನದ ಮಾಂಸ ತಿನ್ನುವ ಪರವಾಗಿ ಉದ್ದುದ್ದ ಭಾಷಣ ಕೊಡುತ್ತಿರುವವರು, ಕಡಿಯುವವನು ಯಾರೇ ಆಗಿರಲಿ, ಉಪಯೋಗಕ್ಕೆ ಬರುವವರೆಗೂ ದುಡಿಸಿಕೊಂಡು, ಹಾಲು ಬರುವವರೆಗೂ ಹೀರಿ ಕೊನೆಗೆ ಕಟುಕನಿಗೆ ಮಾರುವ ಸ್ವಾರ್ಥಿಗಳು ಯಾರು?!

Comments are closed.