Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ!

ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ!

ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ!
—————————————————————-
ಆ ಅಲರ್ಟ್ ಬಂದಾಗ ನವಂಬರ್ 8, ಸಂಜೆ ಏಳೂಮುಕ್ಕಾಲು! ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ತುರ್ತು ಸೂಚನೆ ಅದಾಗಿತ್ತು. ಅದಕ್ಕೂ ಮುನ್ನ ನೌಕಾಪಡೆ, ಭೂಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರ ಜತೆ ನರೇಂದ್ರ ಮೋದಿಯವರು ದೀರ್ಘ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಕ್ಯಾಬಿನೆಟ್ ಮೀಟಿಂಗ್. ಬಳಿಕ ದೇಶವನ್ನುದ್ದೇಶಿಸಿ ಭಾಷಣ, ಮರುಕ್ಷಣವೇ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರಾದ ರಾಷ್ಟ್ರಪತಿಗಳ ಭೇಟಿ.

ಯುದ್ಧ ಘೋಷಣೆ ಖಂಡಿತ ಎಂದೇ ಎಲ್ಲರೂ ಭಾವಿಸಿದರು!

ಮಾಧ್ಯಮಗಳ ಊಹೆಯೂ ಅದೇ ಆಗಿತ್ತು. ಒಂದೋ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬಹುದು, ಇಲ್ಲವೆ ಚೀನಾ ವಿರುದ್ಧ ತೊಡೆತಟ್ಟಬಹುದು ಎಂದು ಎಲ್ಲರೂ ಅಂದುಕೊಂಡರು. ಇಲ್ಲವಾದರೆ ಸೇನಾಪಡೆಗಳ ಮುಖ್ಯಸ್ಥರನ್ನು ಕರೆಸಿ ಮಾತನಾಡಿದ ನಂತರ, ಕ್ಯಾಬಿನೆಟ್ ಮೀಟಿಂಗ್‍ನಲ್ಲಿದ್ದ ಸಚಿವರನ್ನು ರೂಮಿನಲ್ಲೇ ಕುಳ್ಳಿರಿಸಿ, ತದನಂತರ ರಾಷ್ಟ್ರಪತಿಗಳನ್ನು ಭೇಟಿಯಾಗುವೆ ಎಂದು ಪ್ರಧಾನಿ ದೇಶವಾಸಿಗಳನ್ನುದ್ದೇಶಿಸಿ ನೇರವಾಗಿ ಭಾಷಣ ಮಾಡಲು ಏಕಾಗಿ ಮುಂದಾಗುತ್ತಾರೆ?

ಆದರೆ ಅವರು ಯುದ್ಧ ಸಾರಿದ್ದು ಹೊರಗಿನ ಶತ್ರುಗಳ ವಿರುದ್ಧವಲ್ಲ, ಒಳಶತ್ರುಗಳ ಮೇಲೆ!

ಒಬ್ಬ ತರಕಾರಿ ಮಾರುವ ತಾಯಿ ಕೂಡಿಟ್ಟೂ ಕೂಡಿಟ್ಟೂ ಆಸ್ಪತ್ರೆ ಕಟ್ಟಿದ ಉದಾಹರಣೆ ನಮ್ಮ ಸಮಾಜದಲ್ಲಿದೆ, ಬಿಟ್ಟು ಹೋದ ವ್ಯಾನಿಟಿ ಬ್ಯಾಗನ್ನೋ, ಮೊಬೈಲನ್ನೋ ಹುಡುಕಿಕೊಂಡು ಬಂದು ಕೊಡುವ ಆಟೋ ಡ್ರೈವರ್‍ಗಳು ನಮ್ಮ ದೇಶದಲ್ಲಿದ್ದಾರೆ, ಒಂದು ತಿಂಗಳ ನಿವೃತ್ತಿ ವೇತನವನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುವ ಹಿರಿಯ ನಾಗರೀಕರು ನಮ್ಮಲ್ಲಿದ್ದಾರೆ ಎಂದು ಒಬ್ಬ ಸಾಮಾನ್ಯ ಭಾರತೀಯನಲ್ಲಿರುವ ಪ್ರಾಮಾಣಿಕತೆಯನ್ನು ಹೊಗಳುತ್ತಲೇ ಇನ್ನು ಮುಂದೆ ರಾತ್ರಿ 12 ಗಂಟೆ ನಂತರ ನಿಮ್ಮ ಬಳಿ ಇರುವ 500 ರೂಪಾಯಿ, 1000 ರೂಪಾಯಿ ನೋಟುಗಳು ಕೇವಲ ಕಾಗದದ ತುಂಡುಗಳಷ್ಟೇ ಎಂದು ಅಡ್ಡ ಮಾರ್ಗದಲ್ಲಿ ದುಡ್ಡು ಮಾಡಿದ್ದ ಧನಿಕರ ವಿರುದ್ಧ ಸಮರ ಸಾರಿದರು!

ನಮ್ಮ ದೇಶದಲ್ಲಿ 17 ಲಕ್ಷದ 54 ಸಾವಿರ ಕೋಟಿ ರೂಪಾಯಿ ಮೊತ್ತದ ನೋಟುಗಳು ಚಲಾವಣೆಯಲ್ಲಿವೆ. ಅದಲ್ಲಿ 500 ರೂ. ನೋಟುಗಳ ಪ್ರಮಾಣ 45 ಪರ್ಸೆಂಟ್, 1000 ರೂ. ನೋಟುಗಳ ಸಂಖ್ಯೆ 39 ಪರ್ಸೆಂಟ್! ಅಂದರೆ 84 ಪರ್ಸೆಂಟ್ ಒಟ್ಟಾರೆ ನೋಟುಗಳು 500, ಸಾವಿರದಲ್ಲಿವೆ!! ಇಂತಹ ನೋಟುಗಳು ಯಾರ ಬಳಿ ಹೆಚ್ಚಾಗಿವೆ. ಹಳ್ಳಿಯ ರೈತನ ಆದಾಯದ ನೋಟುಗಳು ಎಣಿಕೆಯಾದ ಬೆನ್ನಲ್ಲೇ ಬ್ಯಾಂಕಿನ ಸಾಲಕ್ಕೋ, ಬಡ್ಡಿಯ ಶೂಲಕ್ಕೋ ಹೊರಟುಹೋಗಿ ಬಿಡುತ್ತವೆ. ಕಾರ್ಮಿಕರ, ನೌಕರರ, ಉದ್ಯೋಗಿಗಳ, ಸಾಫ್ಟ್ ‍ವೇರ್ ಎಂಜಿನಿಯರ್‍ಗಳ ಸಂಬಳದ ನೋಟುಗಳು ಇಎಂಐ ಮೂಲಕವೇ ಹೊರಟು ಹೋಗುತ್ತವೆ, ಉಳಿದವು ಬಾಡಿಗೆ, ದಿನಸಿ, ಡ್ರೆಸ್ಸುಗಳ ರೂಪದಲ್ಲಿ ಕರಗಿ ಒಂದರಿಂದ ಇಪ್ಪತ್ತು ಉಂಡಾಟ, ಇಪ್ಪತ್ತರಿಂದ ಮೂವತ್ತು(ತಿಂಗಳ ತಾರೀಕುಗಳು) ಬಂಡಾಟವೇ ಜೀವನವಾಗಿ ಬಿಡುತ್ತದೆ.

ಹಾಗಿದ್ದರೆ ಈ ನೋಟುಗಳು ಯಾರ ಬಳಿ ಇವೆ ಹಾಗೂ ಮೋದಿ ಸಾರಿದ ಯುದ್ಧ ಯಾರ ಮೇಲೆ?

ಖೋಟಾ ನೋಟು ಹರಿಬಿಟ್ಟು ನಮ್ಮ ಅರ್ಥವ್ಯವಸ್ಥೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ಹಾಗೂ ಅದರ ಭಯೋತ್ಪಾದನೆ, ಡ್ರಗ್ ಮಾಫಿಯಾ ಮಾತ್ರವಲ್ಲ, ನಮ್ಮ ವ್ಯವಸ್ಥೆಯೊಳಗೇ ಇರುವ ಭ್ರಷ್ಟ ರಾಜಕಾರಣಿಗಳು, ಬಾಯಿಗೆ ಬಂದಂತೆ ಬೆಲೆಯೇರಿಸುವ ರಿಯಲ್ ಎಸ್ಟೇಟ್ ಕುಳಗಳು, ಲೋಕಾಯುಕ್ತದ ದಾಳಿಗೆ ಹೆದರಿ ಮೂಟೆಯಲ್ಲಿ ದುಡ್ಡು ಕಟ್ಟಿಡುವ ಸರ್ಕಾರಿ ಅಧಿಕಾರಿಗಳು, ಕುತ್ತಿಗೆ ಸುತ್ತ ನಾಯಿ ಚೈನಿನಷ್ಟು ದೊಡ್ಡದಾದ ಚಿನ್ನದ ಸರ ಹಾಕಿಕೊಂಡು ಸೊಕ್ಕಿನಿಂದ ತಿರುಗುವ ಮೀಟರ್ ಬಡ್ಡಿದಾರರು, ಕಪ್ಪುಹಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರು, ಎಷ್ಟೇ ದುಡಿದರೂ ಗಲ್ಲಾಪೆಟ್ಟಿಗೆಯನ್ನು ಖಾಲಿ ತೋರಿಸುತ್ತಿದ್ದ ಹೋಟೆಲ್‍ನವರು ಹಾಗೂ ಇನ್ನು ಮುಂತಾದವರ ವಿರುದ್ಧ! ಅದಕ್ಕಾಗಿಯೇ ನಮಗೆ ತೊಂದರೆಯಾದರೂ ಪರವಾಗಿಲ್ಲ, ಮೋದಿ ಒಳ್ಳೇ ಕೆಲಸ ಮಾಡಿದ್ದಾರೆ ಎಂದು ಸಾಮಾನ್ಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಸಿದ್ದರಾಮಯ್ಯನವರು, ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ಚುನಾವಣೆಯಲ್ಲಿ ಹಣದ ಹೊಳೆ ಹರಿಸಲು ನೋಟು ಸ್ಟಾಕು ಮಾಡಿದ್ದ ಅಖಿಲೇಶ್ ಯಾದವ್ ಬಹಿರಂಗವಾಗಿ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿ ಬಹಳಷ್ಟು ಆತ್ಮಗಳು ಹೇಳಿಕೊಳ್ಳಲಾಗದೆ ಒಳಗೊಳಗೇ ರೋಧಿಸುತ್ತಿವೆ!

ಇಷ್ಟಕ್ಕೂ ಇದು ಕೇವಲ ಎರಡು ನೋಟುಗಳ ಕಥೆಯಲ್ಲ!

ನರೇಂದ್ರ ಮೋದಿಯವರ ನಿರ್ಧಾರದಿಂದ ಅತಿಹೆಚ್ಚು ಕಷ್ಟಕ್ಕೆ ಸಿಲುಕಿರುವವರು ಯಾರು ಗೊತ್ತೆ? ಜನ ವಿಶ್ವಾಸವಿಟ್ಟು ಗೆಲ್ಲಿಸಿದ ಮರುಕ್ಷಣವೇ, ಈ ಚುನಾವಣೆಗೆ 5 ಕೋಟಿ ಖರ್ಚಾಗಿದೆ, ಮುಂದಿನ ಚುನಾವಣೆಗೆ ಕನಿಷ್ಠ 15 ಕೋಟಿ ಬೇಕು ಎನ್ನುತ್ತಾ ಮರ್ಯಾದೆಯಿಂದ ಕೆಲಸ ಮಾಡದೆ ಕಮಾಯಿಗೆ ಇಳಿಯುತ್ತಿದ್ದ  ಕಾರ್ಪೊರೇಟರ್‍ಗಳು, ಶಾಸಕ, ಸಂಸದ, ಸಚಿವರ ಅಥವಾ ಯಾವುದೇ ಜನಪ್ರತಿನಿಧಿಗಳಿಗೆ. ತಾನು ಶಾಸಕ, ಸಂಸದ, ಸಚಿವನಾಗಿರುವುದರ ಜತೆಗೆ ನನ್ನ ಮಗನಿಗೆ, ಮಗಳಿಗೆ, ಹೆಂಡತಿಗೆ, ತಮ್ಮನಿಗೆ, ತನ್ನ ಭಂಟನಿಗೆ, ಚೇಲಾಗಳಿಗೆ ಟಿಕೆಟ್ ಕೊಡಿ ತಂದು ಒತ್ತಡ ಹೇರುತ್ತಿದ್ದ ರಾಜಕಾರಣಿಗಳಿಗೆ. ನಾನು 25 ಕೋಟಿ ಖರ್ಚು ಮಾಡುತ್ತೇನೆ, ಟಿಕೆಟ್ ಕೊಡಿ ಎಂದು ಬರುತ್ತಿದ್ದ ರಿಯಲ್ ಎಸ್ಟೇಟ್ ಹೈದರಿಗೆ. ಎಂಎಲ್ಸಿ ಟಿಕೆಟ್ ಕೊಡಿ, ಸ್ಥಳೀಯ ಸಂಸ್ಥೆಗಳ ಒಂದು ವೋಟಿಗೆ 20 ಸಾವಿರ ಕೊಡುತ್ತೇನೆ, ಬೈಕ್ ಕೊಟ್ಟು ಗೆದ್ದುಕೊಂಡು ಬರುತ್ತೇನೆ ಎಂದು ಬರುತ್ತಿದ್ದವರಿಗೆ. ಕವರ್‍ನೊಳಗೆ ನೋಟನ್ಹಾಕಿ ದೇವರ ಫೋಟೋ, ಅಕ್ಷತೆ ಇಟ್ಟು ನಿಮ್ಮನ್ನು ಹೆದರಿಸುತ್ತಿದ್ದವರಿಗೆ. ನಿಮ್ಮ ಒಬ್ಬೊಬ್ಬ ಎಂಎಲ್‍ಎಗೆ ಇಷ್ಟು, ಪಕ್ಷದ ನಿಧಿಗೆ ಇಂತಿಷ್ಟು ಕೊಡುತ್ತೇನೆ, ಎಂಎಲ್ಸಿ ಟಿಕೆಟ್ ಕೊಡಿ, ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಬರುತ್ತಿದ್ದ ಧನಿಕರಿಗೆ. ಇದನ್ನೆಲ್ಲಾ ನೋಡೀ ನೋಡೀ, ಚುನಾವಣಾ ಸುಧಾರಣೆಗಳನ್ನು ತರಬೇಕು, ರಾಜಕೀಯದಲ್ಲಿ ಹಣದ ಪ್ರಭಾವಕ್ಕೆ ಕಡಿವಾಣ ಹಾಕಬೇಕು ಎಂದು ನೀವೆಲ್ಲ ಒತ್ತಾಯಿಸುತ್ತಿದ್ದಿರಲ್ಲಾ, 500, 1000 ರೂಪಾಯಿ ನೋಟುಗಳನ್ನು ಮೋದಿ ರದ್ದಿ ಮಾಡಿರುವುದಕ್ಕಿಂತ ದೊಡ್ಡ ಚುನಾವಣಾ ಸುಧಾರಣೆ ಬೇರೇನಿದೆ?! ಮಧ್ಯಾಹ್ನದ ಊಟಕ್ಕೆ ಬಿರ್ಯಾನಿ, ಸಂಜೆ ಮಲಗುವ ಮೊದಲು ಎಣ್ಣೆ ಕೊಟ್ಟು ಪ್ರಚಾರಕ್ಕೆ ಹುಡುಗರನ್ನು ಹಚ್ಚುತ್ತಿದ್ದ, ಮತದಾನದ ಹಿಂದಿನ ದಿನ ಕೈಗೆ 500, 1000 ನೋಟು ಕೊಟ್ಟು ನಿಮ್ಮ ಮತದ ಖರೀದಿಗೆ ಬರುತ್ತಿದ್ದ ರಾಜಕಾರಣಕ್ಕೆ ಇದಕ್ಕಿಂತ ದೊಡ್ಡ ಹೊಡೆತ ಬೇಕೇ?

ಇನ್ನು 25, 50 ಕೋಟಿ ಸುರಿಯುತ್ತೇನೆ ಎಂದು ಬರುತ್ತಿದ್ದ ರಿಯಲ್ ಎಸ್ಟೇಟ್ ಕುಳಗಳು ಸೈಟಿಗೆ 10 ಲಕ್ಷ ಬೆಲೆಯಿದ್ದರೆ ಸರ್ಕಾರಿ ನೋಂದಣಿ ಶುಲ್ಕ ಎರಡೋ ಮೂರು ಲಕ್ಷವನ್ನು ವೈಟ್‍ನಲ್ಲಿ ತೆಗೆದುಕೊಂಡು ಉಳಿದದ್ದನ್ನು ಬ್ಲಾಕ್‍ನಲ್ಲಿ ಕೊಡಿ ಎಂದು ನೋಟಿನ ಕಂತೆಗಳನ್ನು ಅಟ್ಟಿ ಕಟ್ಟಿಡುತ್ತಿದ್ದರಲ್ಲಾ ಅವರ ಸ್ಥಿತಿ ನೋಡಿ. ಡಿಸೆಂಬರ್ 31ರೊಳಗೆ ತಮ್ಮ ಬಳಿ ಎಷ್ಟು 500, ಎಷ್ಟು 1000 ರೂಪಾಯಿ ನೋಟಿವೆ ಎಂದು ಲೆಕ್ಕ ಕೊಟ್ಟು ಬ್ಯಾಂಕಿಗೆ ಕಟ್ಟಿ ಚೆಕ್ ಮೂಲಕ ನಿಯಮಿತವಾಗಿ ಬಿಡಿಸಿಕೊಳ್ಳಬಹುದು. ಆದರೆ ಕಟ್ಟಿದ ದುಡ್ಡಿಗೆ ನ್ಯಾಯಯುತ ಮೂಲವನ್ನು ತೋರಿಸಬೇಕು. ಇಲ್ಲವಾದರೆ ಟ್ಯಾಕ್ಸ್ ಮತ್ತು ಆ ಟ್ಯಾಕ್ಸ್ ಮೇಲೆ 200 ಪರ್ಸೆಂಟ್ ದಂಡ ತೆರಬೇಕು. ಒಂದು ವೇಳೆ ನಿಮ್ಮ ಬಳಿ 1 ಕೋಟಿ ಇದೆ ಎಂದಾದರೆ ಎರಡೂವರೆ ಲಕ್ಷಕ್ಕೆ ತೆರಿಗೆಯಿಲ್ಲ, ಉಳಿದ ಎರಡೂವರೆ ಲಕ್ಷಕ್ಕೆ 10 ಪರ್ಸೆಂಟ್ ತೆರಿಗೆ (25 ಸಾವಿರ) ನಂತರದ 5 ಲಕ್ಷಕ್ಕೆ 20 ಪರ್ಸೆಂಟ್ ತೆರಿಗೆ (1 ಲಕ್ಷ) ಉಳಿದ 90 ಲಕ್ಷಕ್ಕೆ 30 ಪರ್ಸೆಂಟ್ ತೆರಿಗೆ (27 ಲಕ್ಷ) ಎಂಬ ಲೆಕ್ಕಾಚಾರ ಇಂಟರ್‍ನೆಟ್, ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಆದರೆ ಈ ನಿಯಮ ಅನ್ವಯವಾಗುವುದು ಸಾಮಾನ್ಯ ಜನರಿಗೆ ಅಂದರೆ ನಿಮ್ಮ ಬಳಿ 5-10 ಲಕ್ಷವಿದ್ದರೆ ಮಾತ್ರ ಎರಡೂವರೆ ಲಕ್ಷಕ್ಕೆ ತೆರಿಗೆ ಇಲ್ಲ, ಉಳಿದದ್ದಕ್ಕೆ 10, 20 ಪರ್ಸೆಂಟ್ ಟ್ಯಾಕ್ಸ್. ನಿಮ್ಮಲ್ಲಿ ಒಂದು ಕೋಟಿ ಅಥವಾ ಕೋಟಿ ಕೋಟಿ ಕಾಳಧನವಿದೆಯೆಂದಾದರೆ ಮೇಲಿನ ನಿಯಮ ಅಥವಾ ಸ್ಲ್ಯಾಬ್‍ಗಳ್ಯಾವೂ ಅನ್ವಯವಾಗುವುದಿಲ್ಲ. ನೇರವಾಗಿ ಒಟ್ಟು ಹಣಕ್ಕೂ 30 ಪರ್ಸೆಂಟ್ ಟ್ಯಾಕ್ಸ್. ಆ ಟ್ಯಾಕ್ಸ್ ಮೇಲೆ 3 ಪರ್ಸೆಂಟ್ ಎಜುಕೇಶನ್ ಸೆಸ್. ಅಲ್ಲಿಗೆ 30.9 ಪರ್ಸೆಂಟ್ ಆಗುತ್ತದೆ. 30 ಪರ್ಸೆಂಟ್ ಟ್ಯಾಕ್ಸ್ ಮೇಲೆ 200 ಪರ್ಸೆಂಟ್ ದಂಡ. ಅಂತಿಮವಾಗಿ 90.9 ಪರ್ಸೆಂಟ್! ಒಂದು ಕೋಟಿ ಕಟ್ಟಿದರೆ 9 ಲಕ್ಷ ಕೈಯಲ್ಲಿ ಉಳಿಯುತ್ತದೆ!! ಹಾಗಾಗಿ ಮುಂದಿನ ದಿನಗಳಲ್ಲಿ ಯಾವುದೇ ವ್ಯವಹಾರ ವೈಟ್‍ನಲ್ಲೇ ನಡೆಯಬೇಕಾದ ಅನಿವಾರ್ಯತೆ ಎದುರಾಗಿ ಕೃತಕವಾಗಿ ಬೆಲೆ ಹೆಚ್ಚಳ ಮಾಡುವುದಕ್ಕೆ ಕಡಿವಾಣ ಬಿದ್ದು ಸೈಟು ಬೆಲೆ ಕುಸಿಯಲಿದೆ. ಇದರ ಲಾಭ ಸಾಮಾನ್ಯ ಜನರಿಗೆ, ಸಂಬಳದಲ್ಲಿ ಬದುಕುವ ಉದ್ಯೋಗಿಗಳಿಗೆ  ಹಾಗೂ ನ್ಯಾಯಯುತವಾಗಿ ತೆರಿಗೆ ಕಟ್ಟುವವರಿಗೇ ಅಲ್ಲವೆ?

ಇನ್ನು ಮೀಟರ್ ಬಡ್ಡಿದಾರರ ಕಥೆ ಕೇಳಿ. ಛಾಪಾ ಕಾಗದದ ಮೇಲೆ ಬರೆಸಿಕೊಂಡು ನಿಮ್ಮ ಆಸ್ತಿಯನ್ನು ಅಡವಿಟ್ಟುಕೊಂಡು, 15 ಲಕ್ಷವನ್ನು ಚೆಕ್‍ನಲ್ಲಿ 25 ಲಕ್ಷವನ್ನು ಬ್ಲಾಕ್‍ನಲ್ಲಿ ಕೊಟ್ಟು ನಿಮ್ಮ ಜೀವ ಹಿಂಡುತ್ತಿದ್ದರಲ್ಲಾ ಅವರನ್ನು ಕೋರ್ಟಿಗೆಳೆಯಿರಿ. ಚೆಕ್‍ನಲ್ಲಿ ಕೊಟ್ಟಿದ್ದಷ್ಟೇ ಚೆಕ್ಕಕ್ಕೆ ಬರುತ್ತದೆ. ಹೀಗೆ ಮೋದಿ ಬಡ್ಡಿದಾರರನ್ನು ಬಗ್ಗುಬಡಿದು ಅಮಾಯಕರನ್ನು ರಕ್ಷಿಸಿದ್ದಾರೆ.

ಅರ್ಥಶಾಸ್ತ್ರಕ್ಕೆ ಗಣಿತಶಾಸ್ತ್ರದ ರೀತಿಯ ಪರಿಷ್ಕಾರಗಳನ್ನು ತಂದುಕೊಟ್ಟ ಜೆ.ಎಂ. ಕೇನ್ಸ್ ಒಮ್ಮೆ ಹೀಗೆ ಹೇಳಿದ್ದ: “ಅರ್ಥಿಕ ಜಿಜ್ನಾಸೆಗೆ ಬೇಕಾದದ್ದು ತಾರ್ಕಿಕತೆಯ ಜೊತೆಗೆ ಕರಾರುವಕ್ಕಾದ ಅಳತೆಗೆ ಸಿಕ್ಕಿದ ಭಾವನಾತ್ಮಕ ಅಂಶಗಳ ಮತ್ತು ವಾಸ್ತವಿಕ ಸಂಗತಿಗಳ ಪರಿಜ್ನಾನ”. ಕೇನ್ಸ್ ನ ಆರ್ಥಿಕತೆಯ ಕುರಿತಾದ ಪಠ್ಯಗಳನ್ನು ಪದವಿ ಮಟ್ಟದಲ್ಲಿ ಎಕನಾಮಿಕ್ಸ್ ತೆಗೆದುಕೊಂಡ ಒಬ್ಬ ಸಾಮಾನ್ಯ ವಿದ್ಯಾರ್ಥಿಯೂ ಓದಿರುತ್ತಾನೆ. ಪದವಿ ಮುಗಿದ ನಂತರ ಕೇನ್ಸ್ ಎಲ್ಲೋ ಆತ ಎಲ್ಲೋ. ಏಕೆಂದರೆ ಕೇನ್ಸ್ ನ ತತ್ವಗಳು ಸಾಮಾನ್ಯನಿಗೆ ಅಗತ್ಯವಿಲ್ಲ. ಅದರ ಅರಿವು ಇರಬೇಕೆಂಬ ನಿಯಮಗಳೂ ಇಲ್ಲ. ಆದರೆ ಈಗ ಕೇನ್ಸ್ ‍ನ ವ್ಯಾಖ್ಯಾನವನ್ನು ಕೇಳುತ್ತಿದ್ದರೆ ಸಾಮಾನ್ಯ ವ್ಯಕ್ತಿಗೂ ಅದು ಹೌದು ಎನಿಸತೊಡಗುತ್ತದೆ. ಏಕೆಂದರೆ ಈಗ ಕೇನ್ಸ್ ಎಂದಾಗ ಆತನಿಗೆ ಮೋದಿ ನೆನಪಾಗುತ್ತಾರೆ. ಇತಿಹಾಸಕ್ಕೆ ಸರಿದ ಆ ಎರಡು ನೋಟುಗಳು ನೆನಪಾಗುತ್ತವೆ. ಅಂದು ಪದವಿಯಲ್ಲಿ ಓದಿದ್ದ ಹುಡುಗನ ಮುಂದೆ ಮೋದಿ ಈಗ ಮಹಾನ್ ಅರ್ಥಶಾಸ್ತ್ರಜ್ಞನಂತೆ ಬಂದು ನಿಲ್ಲುತ್ತಾರೆ. ಅಂದು ಕೇನ್ಸ್ ತನ್ನ ವ್ಯಾಖ್ಯಾನವನ್ನು ಕೇವಲ ಅರ್ಥಶಾಸ್ತ್ರಜ್ಞನಿಗೆ ಮಾತ್ರ ನೀಡಿದ್ದ. ಈಗ ಅದು ಸಮಸ್ತ ದೇಶಕ್ಕೇ ಅರ್ಥವಾಗುತ್ತದೆ. ಮೋದಿ ಮಾಡಿದ ಮಾರ್ಪಾಡುಗಳ ಹಿರಿಮೆಯನ್ನೊಮ್ಮೆ ಅಂದಾಜಿಸಿ. ಇತಿಹಾಸವನ್ನು ನೋಡಿದರೂ ಸುಮಾರು ಮೂರು ಸಾವಿರ ವರ್ಷಗಳ ಹಿಂದಿನಿಂದಲೇ ನಾಗರಿಕತೆಯ ವಿಕಾಸ ಪ್ರಕೃತಿಯ ಮೇಲೆ ಒತ್ತಡಗಳನ್ನು ಹೇರುತ್ತಾ ಬಂದಿದ್ದರೂ ಅದು ಮಾನವನ ಅಗತ್ಯ ಮತ್ತು ಸಂಪನ್ಮೂಲಗಳಗಳ ನಡುವೆ ಸಮತೋಲನವನ್ನು ಸ್ಥಾಪಿಸುವ ಪ್ರಯತ್ನಗಳು ನಡೆಸಿದ್ದನ್ನು ಕಾಣುತ್ತೇವೆ. ಈಗ ಮೋದಿ ಸರ್ಕಾರ ಮಾಡಿದ್ದು ಅದನ್ನೇ ಅಲ್ಲವೇ? ಆಧುನಿಕ ಅರ್ಥ ಜಗತ್ತಿನಲ್ಲಿ ದೇಶದ ತುರ್ತನ್ನು ಮನಗಂಡ ಅಪರೂಪದ ಜನನಾಯಕನ ಕಾಲಕ್ಕೆ ಸಾಕ್ಷಿಯಾದೆವೆಂದು ಜನ ಇಂದು ಸಂತಸ ಪಡುತ್ತಿದ್ದಾರೆ. ಏಕೆಂದರೆ ಆರ್ಥಿಕತೆಯು ಈಗ ಯಾಂತ್ರಿಕತೆಯಿಂದ ಹೊರಬಂದು ಸಮಾಜದ ಅಭಿಮುಖ ದಿಕ್ಕಿನತ್ತ ನಡೆಯುತ್ತಿದೆ. ಇದನ್ನು ಕಾಣಲು ನಾವು ಸ್ವಾತಂತ್ರ್ಯ ಬಂದು 70 ವರ್ಷ ಕಾಯಬೇಕಾಯಿತು!

1997ರವರೆಗೆ “ಏಷ್ಯನ್ ಹುಲಿ”ಗಳೆಂದು ಕರೆಯಲ್ಪಡುತ್ತಿದ್ದ ಥೈಲ್ಯಾಂಡ್, ದ.ಕೊರಿಯಾ, ಫಿಲಿಫೈನ್ಸ್, ಮಲೇಶ್ಯಾ, ಇಂಡೋನೇಶ್ಯಾ ಮೊದಲಾದ ರಾಷ್ಟ್ರಗಳು ತಮ್ಮ ಮುಳುಗಿಹೋಗುತ್ತಿರುವ ಆರ್ಥಿಕ ನೀತಿಯನ್ನು ರಕ್ಷಿಸಿಕೊಳ್ಳುವುದಕ್ಕೆ  ನಾನಾ ತಂತ್ರಗಳನ್ನು ಹೂಡಿ ಫಲಿಸದೆ ಸೋತುಹೋದವು. ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ವಿಶ್ವಸಂಸ್ಥೆ ಮತ್ತಿತರ ಜಾಗತಿಕ ಹಣಕಾಸು ಸಂಸ್ಥೆಗಳು ಆ ದೇಶಗಳತ್ತ ಧಾವಿಸಿದವು. ಒಮ್ಮೆ ಈ ಸಂಸ್ಥೆಗಳ ಸುಳಿಗೆ ಸಿಕ್ಕಿದ ಈ ರಾಷ್ಟ್ರಗಳು ಅದರಿಂದ ಹೊರಬರಲು ಹೆಣಗಿದವು. ಈಗಲೂ ಹೆಣಗುತ್ತಿವೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಏಷ್ಯನ್ ಹುಲಿಗಳ ಅವಸ್ಥೆ ಗೊತ್ತಿತ್ತು. ಅದಕ್ಕೆ ಅವರು ಬ್ರಿಕ್ಸ್ ಬ್ಯಾಂಕ್ ಕಟ್ಟಿದರು. ಅದರ ನಂತರ ಅವರ ಆರ್ಥಿಕ ನಡೆಗಳೆಲ್ಲಾ ಸರ್ಕಾರದ ಯೋಜನೆಗಳಾಗಿ ಅನುಷ್ಠಾನವಾದದ್ದು ನಮ್ಮ ಕಣ್ಣಮುಂದೆಯೇ ಇದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಕಪ್ಪುಹಣದ ತನಿಖೆಗಾಗಿ ಎಸ್‍ಐಟಿ ರಚನೆ ಮಾಡಿದರು. ತದನಂತರ ಪ್ರತಿಯೊಂದೂ ಕುಟುಂಬಕ್ಕೂ ಒಂದೊಂದು ಬ್ಯಾಂಕ್ ಖಾತೆ ಕೊಡುವ ಪ್ರಧಾನಮಂತ್ರಿ ಜನಧನ್ ಯೋಜನೆ ಜಾರಿಗೆ ತಂದರು. 21 ಕೋಟಿ ಹೊಸ ಅಕೌಂಟ್‍ಗಳು ತೆರೆದವು. ಅಕೌಂಟ್ ತೆರೆಯುವುದರಿಂದ ಏನು ಬಂತು ಬಹಳ ಜನ ಕೇಳಿದರು. ಅದ ಬೆನ್ನಲ್ಲೇ ವಿದೇಶಗಳಲ್ಲಿ ಹಣವಿಟ್ಟಿರುವವರ ಹಿಂದೆ ಬಿದ್ದರು, 80 ಸಾವಿರ ಕೋಟಿ ಪತ್ತೆ ಮಾಡಿದರು. ಕೂಡಲೇ ಸ್ವಯಿಚ್ಛೆಯಿಂದ ಆದಾಯ ಘೋಷಣೆ ಮಾಡಿ, ಹಣದ ಮೂಲ ಕೇಳುವುದಿಲ್ಲ, 45 ಪರ್ಸೆಂಟ್ ಬಡ್ಡಿ ಕಟ್ಟಿ, ಉಳಿದದ್ದನ್ನು ವೈಟ್ ಮಾಡಿಕೊಳ್ಳಿ ಎಂದರು. 65 ಸಾವಿರ ಕೋಟಿ ಸಂಗ್ರಹವಾಗಿ 29.5 ಸಾವಿರ ಕೋಟಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಬಂತು. ಈ ಕಪ್ಪುಹಣ ಹೊಂದಿರುವವರನ್ನು ಮೂಲೋತ್ಪಾಟನೆ ಮಾಡುವ ಸಲುವಾಗಿ 500, 1000 ರೂ. ನೋಟುಗಳನ್ನೇ ರದ್ದಿ ಮಾಡಿದ್ದಾರೆ. ಇನ್ನು ಮುಂದೆ ಬ್ಲಾಕ್‍ಮನಿ ವಿಚಾರದಲ್ಲಿ ಯಾರೊಬ್ಬರೂ ಚಕಾರವೆತ್ತುವ ಹಾಗಿಲ್ಲ. ಎರಡು ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದಿರಲ್ಲಾ, ಆ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲಾ? ಪ್ರತಿಯೊಬ್ಬ ವ್ಯಕ್ತಿಯೂ ಬ್ಯಾಂಕ್ ಖಾತೆಯನ್ನು ಹೊಂದಬೇಕು ಎಂದು ಅಂದು ಪ್ರಧಾನಿಗಳು ಹೇಳಿದಾಗ ತುಂಬಾ ಜನಕ್ಕೆ ಅರ್ಥವಾಗಿರಲಿಲ್ಲ. ಸರ್ಕಾರ ಕೈಗೊಂಡ ಪ್ರತೀ ಯೋಜನೆಯ ಹಿಂದೆ ಒಂದು ದೊಡ್ಡ ಆರ್ಥಿಕ ಸುಧಾರಣೆಯ ಯೋಚನೆಯಿತ್ತು, ಗೊತ್ತಾಯಿತಲ್ಲಾ?

ಇಷ್ಟಕ್ಕೂ ಇದು ಎರಡು ನೋಟಿನ ಕಥೆಯಲ್ಲ, ದೂರವಾಗಿಸಲಿದೆ ದೇಶದ ವ್ಯಥೆ.

black-money

Comments are closed.