Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Prapancha > ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವುದು ಯಾವುದು ಗೊತ್ತಾ, ಕಾಂಗ್ರೆಸ್-ಕಮ್ಯುನಿಸ್ಟರ ಸುಳ್ಳು!

ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವುದು ಯಾವುದು ಗೊತ್ತಾ, ಕಾಂಗ್ರೆಸ್-ಕಮ್ಯುನಿಸ್ಟರ ಸುಳ್ಳು!

 

ps article on land ordinance

(ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವುದು ಯಾವುದು ಗೊತ್ತಾ, ಕಾಂಗ್ರೆಸ್-ಕಮ್ಯುನಿಸ್ಟರ ಸುಳ್ಳು! )

ನಾವು ಶಾಲೆಯಲ್ಲಿರುವಾಗ ರಸ ಪ್ರಶ್ನೆ ಸ್ಪರ್ಧೆ ಆಗಾಗ್ಗೆ ನಡೆಯುತ್ತಿತ್ತು. ಒಮ್ಮೆ ಒಂದೇ ಕ್ಲಾಸಿನೊಳಗೆ, ಮಗದೊಮ್ಮೆ ಭಿನ್ನ ಭಿನ್ನ ಕ್ಲಾಸ್‍ಗಳ ನಡುವೆ, ಕಡೆಗೆ ಶಾಲೆ ಶಾಲೆಗಳ ನಡುವೆ. ನಮ್ಮ ಆಗಿನ ಬುದ್ಧಿಮತ್ತೆಗೆ ತಕ್ಕುದಾದ ಪ್ರಶ್ನೆಗಳಿರುತ್ತಿದ್ದವು. ಅತ್ಯಂತ ವೇಗವಾಗಿ ಭೂಮಿಯ ಮೇಲೆ ಚಲಿಸುವ ಪ್ರಾಣಿ ಯಾವುದು? ಉತ್ತರ: ಚಿರತೆ. ಬೆಳಕು ಹಾಗೂ ಶಬ್ದ, ಇವುಗಳಲ್ಲಿ ವೇಗವಾಗಿ ಚಲಿಸುವುದು ಯಾವುದು? ಉತ್ತರ: ಬೆಳಕು. ಒಂದು ವೇಳೆ ಚಿರತೆ, ಬೆಳಕು, ಶಬ್ದಕ್ಕಿಂತ ವೇಗವಾಗಿ ಚಲಿಸುವುದು ಯಾವುದು ಎಂದು ಈಗೇನಾದರೂ ಕೇಳಿದರೆ ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ತಥಾಕಥಿತ ಬುದ್ಧಿಜೀವಿ ಮತ್ತು (ಮಾಜಿ) ಸಾಹಿತಿಗಳ ಸುಳ್ಳು ಎಂದು ಬಹಳ ಸರಳವಾಗಿ ಹೇಳಿಬಿಡಬಹುದು!

ಇದು ಜೋಕಲ್ಲ… ಮುಂದಿನ ವಿಚಾರಕ್ಕೆ ಹೋಗುವ ಮೊದಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮೊನ್ನೆ ರಾಜ್ಯಸಭೆಯ ಮುಂದಿಟ್ಟು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡ ಈ ಪತ್ರವನ್ನು ಓದಿ…

ಗೆ,

ಮನಮೋಹನ್ ಸಿಂಗ್

ಪ್ರಧಾನಿ, ಹೊಸದಿಲ್ಲಿ
ಸಂಸತ್ತಿನ ಸ್ಥಾಯಿ ಸಮಿತಿ ಪ್ರಸ್ತಾವಿತ 2011ರ ಭೂಸ್ವಾಧೀನ, ಪರಿಹಾರ ಹಾಗೂ ಪುನರ್ವಸತಿ ವಿಧೇಯಕ ಒಡ್ಡಬಹುದಾದ ತೊಡಕಿನ ಬಗ್ಗೆ ಕೈಗಾರಿಕಾ ಕ್ಷೇತ್ರ ವ್ಯಕ್ತಪಡಿಸಿರುವ ಗಂಭೀರ ಆತಂಕಗಳ ಬಗ್ಗೆ ಮಾನ್ಯ ಪ್ರಧಾನಿಯವರು ಅತಿ ಶೀಘ್ರವಾಗಿ ಗಮನಹರಿಸಬೇಕಾಗಿದೆ. ಈ ವಿಧೇಯಕ ತನ್ನ ಪ್ರಸ್ತುತ ಅವತಾರದಲ್ಲಿ ಉತ್ಪಾದನೆ, ಕೈಗಾರಿಕೀಕರಣ ಹಾಗೂ ನಗರೀಕರಣದ ಮೇಲೆ ದೀರ್ಘಕಾಲೀನ ಪ್ರತಿಕೂಲ ಪರಿಣಾಮ ಬೀರಲಿದೆ. ಜತೆಗೆ ದಿಲ್ಲಿ-ಮುಂಬೈ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಹಾಗೂ ನ್ಯಾಷನಲ್ ಇನ್ವೆಸ್ಟ್‍ಮೆಂಟ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಝೋನ್ ಅನ್ನು ಕಾರ್ಯಾಚಾಲನೆ ಮಾಡಲು ಗಂಭೀರ ಅಡ್ಡಿಯನ್ನು ಸೃಷ್ಟಿಸಲಿದೆ. ಇವತ್ತು ಬಹಳಷ್ಟು ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ (ಖಾಸಗಿ-ಸಾರ್ವಜನಿಕ ಸಹಭಾಗಿತ್ವ) ಕೈಗೆತ್ತಿಕೊಳ್ಳುತ್ತಿದ್ದು, ಸಾರ್ವಜನಿಕ ಉದ್ದೇಶ ಎಂಬ ಪದದ ವ್ಯಾಖ್ಯಾನವನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಏಕೆಂದರೆ ಈ ವಿಧೇಯಕ ಹೆದ್ದಾರಿಗಳು, ಪಿಪಿಪಿ ಹಾಗೂ ಕೈಗಾರಿಕಾ ಟೌನ್‍ಶಿಪ್‍ಗಳನ್ನು ತ್ವರಿತ ಅಗತ್ಯ ನಿಯಮಗಳಿಂದ ಹೊರಗಿಟ್ಟಿದ್ದು, ಅದರಿಂದ ಭೂಮಿಯ ಬೆಲೆ ವಿಪರೀತ ಹೆಚ್ಚಾಗಿ ಖರೀದಿ ಅಸಾಧ್ಯವಾಗಿ ಯೋಜನೆಗಳು ನಿಂತುಹೋಗುತ್ತವೆ. ಅಲ್ಲದೆ ರೈತರಿಂದ 70 ಪರ್ಸೆಂಟ್ ಒಪ್ಪುಗೆ ಪಡೆದುಕೊಳ್ಳಲೇಬೇಕು ಎಂಬ ನಿಯಮ ಯೋಜನೆಗಳನ್ನು ವಿಳಂಬ ಮಾಡುವುದು ಮಾತ್ರವಲ್ಲ, ಬಹಳಷ್ಟು ಪ್ರಾಜೆಕ್ಟ್‍ಗಳು ನಿಂತೇ ಬಿಡುತ್ತವೆ. ಮುಂದಿನ ಪ್ರಗತಿಯ ದೃಷ್ಟಿಯಲ್ಲಿ ಇದು ಬಹಳ ಮುಖ್ಯ ಹಾಗೂ ಅನಿವಾರ್ಯವಾಗಲಿದೆ. ನಾನು ಸ್ಥಾಯಿ ಸಮಿತಿಯ ಅಧ್ಯಕ್ಷರಿಗೂ ಬರೆದಿದ್ದೆ. ಪ್ರಧಾನಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಬೇಕು.
-ಅನಂದ್ ಶರ್ಮಾ
ಕೈಗಾರಿಕಾ ಸಚಿವ
ಹಾಗಂತ ಅಂದಿನ ಕೈಗಾರಿಕಾ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅನಂದ ಶರ್ಮಾ ಪತ್ರ ಬರೆದಿದ್ದು 25 ಮೇ 2012ರಂದು. ಇತ್ತ 2014, ಡಿಸೆಂಬರ್ 31ರಂದು ಸುಗ್ರೀವಾಜ್ಞೆಯ ಮೂಲಕ ನರೇಂದ್ರ ಮೋದಿಯವರ ಸರ್ಕಾರ ಮಾಡಿರುವುದು ಅದೇ ಕೆಲಸವನ್ನು. ಆದರೆ ಅಣಕವೆಂದರೆ, ಅಂದು ಮನವಿ ಮಾಡಿಕೊಂಡು ಪತ್ರ ಬರೆದಿದ್ದ ಆನಂದ ಶರ್ಮಾ ಇಂದು ತಾವು ಹೇಳಿದ ಕೆಲಸವನ್ನೇ ಮಾಡಿರುವ ಮೋದಿ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಬಾವುಟ ಹಾರಿಸುತ್ತಿದ್ದಾರೆ. ಕಾಂಗ್ರೆಸ್ಸಿನ ನಾಯಕಮಣಿಗಳು ಒಬ್ಬರನ್ನು ಮೀರಿಸಿ ಮತ್ತೊಬ್ಬರು ದಿನಕ್ಕೊಂದು, ತಲೆಗೊಂದು ಹೇಳಿಕೆ ನೀಡಿ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಟೀಕಿಸುತ್ತಿದ್ದಾರೆ, ರೈತರನ್ನು ಭಯಭೀತರನ್ನಾಗಿಸುತ್ತಿದ್ದಾರೆ, ಕೃಷಿಭೂಮಿಯೆಲ್ಲ ಕೈತಪ್ಪಿ ರೈತರು ಬೀದಿಗೆ ಬರುತ್ತಾರೆ ಎಂಬಂತೆ ಬೊಬ್ಬಿರಿಯುತ್ತಿದ್ದಾರೆ. ಇವರ ಜತೆ ಕೆಲ ಸಾಹಿತಿಗಳು, ಪ್ರಗತಿಪರರೆಂಬ ಬೋರ್ಡು ಹಾಕಿಕೊಂಡು ಪ್ರಗತಿಗೆ ವಿರುದ್ಧದ ಎಲ್ಲ ಕೆಲಸ ಮಾಡುತ್ತಿರುವವರು ಕೈಜೋಡಿಸಿದ್ದಾರೆ.

ಹಾಗಾದರೆ ಇವರು ಹೇಳುತ್ತಿರುವುದು ನಿಜಾನಾ? ರೈತರ ಭೂಮಿಗೆ ಸಂಚಕಾರ ಬಂದುಬಿಡುತ್ತದಾ? ಅಥವಾ ಅತಿಸುಂದರ ಕಾಯದ “ಮಿಸ್ಟರ್ ಮೈಸೂರ್” ವಿಶ್ವನಾಥ್ ಅವರು ಅಮಿತ್ ಶಾ ಅವರನ್ನು ಮಾರಿಗುಡಿ ಪೂಜಾರಿಗೆ ಹೋಲಿಸಿದಂತೆ ಭಾಸವಾಗುತ್ತಿದೆಯೇ?! ಅದಿರಲಿ, ರಾಹುಲ್ ಗಾಂಧಿ ಪ್ರಣೀತ 2013ರ ಭೂಸ್ವಾಧೀನ, ಪರಿಹಾರ ಹಾಗೂ ಪುನರ್ವಸತಿ ಕಾಯಿದೆಗೂ ಮೋದಿ ಸರ್ಕಾರದ ಸುಗ್ರೀವಾಜ್ಞೆಗೂ ಯಾವುದಾದರೂ ವ್ಯತ್ಯಾಸವಿದೆಯಾ? ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಲ್ಲವೆ? ಈ ವಿರೋಧಿಸುತ್ತಿರುವವರಲ್ಲಿ ಎಷ್ಟು ಜನ 2013ರ ಕಾಯಿದೆ ಹಾಗೂ ಈಗಿನ ಸುಗ್ರೀವಾಜ್ಞೆಯನ್ನು ಓದಿದ್ದಾರೆ?

ಈ 2013ರ ಭೂ ಸ್ವಾಧೀನ, ಪರಿಹಾರ ಹಾಗೂ ಪುನರ್ವಸತಿ ಕಾಯಿದೆ ಮಾಡಿದಾಗ ಅದರಲ್ಲಿ ಒಂದು ಸೆಕ್ಷನ್ ಹಾಕಿದರು. ಅದೇ ಸೆಕ್ಷನ್ 105. ಅದರಲ್ಲಿ ಕಾಂಗ್ರೆಸ್ಸಿಗರು ಒಂದು ಷೆಡ್ಯೂಲ್(ಪರಿಚ್ಛೇದ) ಸೃಷ್ಟಿ ಮಾಡಿದರು. ಅದೇ ಷೆಡ್ಯೂಲ್-4. ಈ ಷೆಡ್ಯೂಲ್ 4ರಲ್ಲಿ ನ್ಯಾಷನಲ್ ಹೈವೇಸ್, ರೈಲ್ವೇಸ್, ಮೆಟ್ರೋ ರೈಲ್, ಕೋಲ್ (ಕಲ್ಲಿದ್ದಲು), ಮೈನಿಂಗ್, ಅಣುಶಕ್ತಿ ಮುಂತಾದ 13 ಅಂಶ/ವಿಷಯಗಳನ್ನು ಸೇರಿಸಿದರು. ಯಾವ್ಯಾವುದಕ್ಕೆ ಭೂಮಿಯ ಅಗತ್ಯವಿರುತ್ತದೋ ಅವುಗಳನ್ನು ಇದರಲ್ಲಿ ಸೇರಿಸಿದರು. ಈ ಹದಿಮೂರಕ್ಕೆ ಹದಿಮೂರನ್ನೂ ಕಾಯಿದೆಯ ಕಟು ನಿಯಮಗಳ ವ್ಯಾಪ್ತಿಯಿಂದ ಎಕ್ಸೆಮ್ಟ್(ಮುಕ್ತ) ಮಾಡಿದರು. ಹಾಗಾಗಿ 13 ವಿಷಯಗಳಿಗೆ ಭೂಸ್ವಾಧೀನ ಮಾಡಿಕೊಳ್ಳುವಾಗ ಭೂಮಾಲೀಕರ (ರೈತ ಅಥವಾ ಯಾರೇ ಆಗಿರಬಹುದು) ಒಪ್ಪುಗೆಯೂ ಬೇಡ ಹಾಗೂ ಸಾಮಾಜಿಕ ಪರಿಣಾಮವನ್ನು ಅಂದಾಜು ಮಾಡಿ ಪರಿಹಾರವನ್ನು ಕೊಡುವ ಅಗತ್ಯವೂ ಇಲ್ಲ. ರೈಟ್ ಟು ಫುಡ್ (ಅನ್ನದ ಹಕ್ಕು) ಕೂಡ ಅನ್ವಯವಾಗುವುದಿಲ್ಲ! ದುರದೃಷ್ಟವಶಾತ್, ಕಲ್ಲಿದ್ದಲು, ಗಣಿಗಾರಿಕೆಗೆ ಇಂಥ ಅನುಕೂಲ ಮಾಡಿಕೊಟ್ಟ ಕಾಂಗ್ರೆಸ್ಸಿಗರಿಗೆ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣೆಗಳನ್ನೂ ಈ ಪಟ್ಟಿಗೆ ಸೇರಿಸಬೇಕೆಂದು ಅನಿಸಲೇ ಇಲ್ಲ! ಜತೆಗೆ ಬಡವರ ಬಗ್ಗೆ ಮಾತನಾಡುವ ಕಾಂಗ್ರೆಸ್‍ಗೆ, ಬಡವರಿಗೆ ಮನೆ ಕಟ್ಟಿಕೊಡಲು ಜಾಗಬೇಕು, ಕೃಷಿ ನೀರಾವರಿಗೆ ಚೆಕ್ ಡ್ಯಾಂ ಹಾಗೂ ಇನ್ನಿತರ ಯೋಜನೆಗಳನ್ನು ಹಮ್ಮಿಕೊಳ್ಳಲೂ ಭೂಮಿ ಬೇಕು ಎಂದನಿಸಲೂ ಇಲ್ಲ!!

ಆದರೆ …

2014, ಡಿಸೆಂಬರ್ 31ರಂದು ಹೊರಡಿಸಿರುವ ಭೂಸ್ವಾಧೀನ ಸುಗ್ರೀವಾಜ್ಞೆಯಲ್ಲಿ ನಾವೇನೂ ಹೊಸದಾಗಿ ಮಾಡಿಲ್ಲ. ಕಾಂಗ್ರೆಸ್ಸಿಗರು ಷೆಡ್ಯೂಲ್-4ರಲ್ಲಿ ಸೇರಿಸಿರುವ 13 ವಿಷಯಗಳಿಗೆ ಇನ್ನೈದು ವಿಷಯಗಳನ್ನು ಸೇರಿಸಿದೇವಷ್ಟೇ . 1. ರಾಷ್ಟ್ರೀಯ ಭದ್ರತೆ 2. ರಕ್ಷಣೆ 3. ಗ್ರಾಮೀಣ ಮೂಲಭೂತ ಸೌಕರ್ಯ ನಿರ್ಮಾಣ (ಅದರಲ್ಲಿ ನೀರಾವರಿ ಹಾಗೂ ವಿದ್ಯುತ್ ಯೋಜನೆ) 4. ಕೈಗಾರಿಕಾ ಕಾರಿಡಾರ್‍ಗಳು ಹಾಗೂ 5 ಬಡ ಗ್ರಾಮೀಣ ಜನರಿಗೆ ವಸತಿ ಯೋಜನೆ. ಇದರಲ್ಲಿ ಏನಾದರೂ ತಪ್ಪಿದೆಯಾ ಹೇಳಿ? ಕಲ್ಲಿದ್ದಲು, ಗಣಿಗಾರಿಕೆಯಂಥ ಉಳಿದ 13 ವಿಷಯಗಳಿಗೆ ಬೇಕಾಗದ 70 ಪರ್ಸೆಂಟ್ ಒಪ್ಪುಗೆ, ಸಾಮಾಜಿಕ ಪರಿಣಾಮದ ಅಂದಾಜು ಅಥವಾ ಲೆಕ್ಕ ಈ ವಿಷಯಗಳಿಗೆ ಮಾತ್ರ ಬೇಕೆ ಕಾಂಗ್ರೆಸ್ಸಿಗರೇ?! ನಿಮ್ಮ ಅಧಿನಾಯಕಿಯ ಹೆಸರಿನಲ್ಲಿರುವ ಇಂದಿರಾ ಆವಾಸ್ ಯೋಜನೆಯಡಿ ಬಡವರಿಗೆ ಗೃಹ ನಿರ್ಮಾಣ ಮಾಡಿಕೊಡಲು ಭೂಮಿ ಬೇಡವೇ? ಅದನ್ನು 70 ಪರ್ಸೆಂಟ್ ಒಪ್ಪುಗೆ, ಸಾಮಾಜಿಕ ಪರಿಣಾಮದ ಅಂದಾಜಿನಾಚೆ ಇಟ್ಟಿದ್ದು ತಪ್ಪಾ? ಗ್ರಾಮೀಣ ರಸ್ತೆ ನಿರ್ಮಾಣಕ್ಕೆ, ವಿದ್ಯುತ್ ಸೌಕರ್ಯ ಕಲ್ಪಿಸುವುದಕ್ಕೆ, ನೀರಾವರಿಗೆ ಭೂಮಿ ಬೇಡವೇ? ಇದರಿಂದ ಲಾಭ ಹಾಗೂ ಸಹಾಯವಾಗುವುದು ನಮ್ಮ ರೈತಬಾಂಧವರಿಗೇ ಅಲ್ಲವೆ? ಹಾಗಿರುವಾಗ ಸುಗ್ರೀವಾಜ್ಞೆ ಹೇಗೆ ರೈತ ವಿರೋಧಿಯಾಗಿ ಬಿಡುತ್ತದೆ? ಬೀದಿಯಲ್ಲಿ ಬೊಬ್ಬೆ ಹೊಡೆದು, ಜನರನ್ನು ದಾರಿತಪ್ಪಿಸುತ್ತಿದ್ದೀರಲ್ಲಾ ಬನ್ನಿ ಸಂಸತ್ತಿನೊಳಗೆ ಖುಲ್ಲಂಖುಲ್ಲಾ ಚರ್ಚೆ ಮಾಡೋಣ? ಇಷ್ಟಕ್ಕೂ ದೇಶದ ಜನತೆಗೆ ಯಾರ್ಯಾರ ಯೋಗ್ಯತೆ ಏನೇನು ಎಂದು ಸಾಬೀತಾಗಬೇಕಲ್ಲವೆ?

ಅದಿರಲಿ, 2013ರ ಕಾಯಿದೆ ಮಾಡುವಾಗ ನಿಮ್ಮ ಮಂತ್ರಿ ಜೈರಾಮ್ ರಮೇಶ್ ಅವರು ರಾಷ್ಟ್ರೀಯ ಭದ್ರತೆ(ನ್ಯಾಷನಲ್ ಸೆಕ್ಯುರಿಟಿ) ಹಾಗೂ ರಕ್ಷಣೆ(ಡಿಫೆನ್ಸ್)ಯನ್ನು `ಅರ್ಜೆನ್ಸಿ ಪರ್ಪಸ್’ (ತ್ವರಿತ ಉದ್ದೇಶಕ್ಕಾಗಿ ) ಪಟ್ಟಿಯಲ್ಲಿ ಹಾಕಿದರೂ ಕಾಯಿದೆಯ ನಿಯಮಗಳ ವ್ಯಾಪ್ತಿಯಿಂದ ಏಕೆ ಹೊರಗಿಡಲಿಲ್ಲ? ನಿಮಗೆ ದೇಶದ ಹಿತಾಸಕ್ತಿ ಹಾಗೂ ರಕ್ಷಣೆ ಮುಖ್ಯವಾಗಿರಲಿಲ್ಲವೆ? ನೀವು ಮಾಡಿದ ಅನಾಹುತ ಎಂಥದ್ದು ಗೊತ್ತಾ? ನಮ್ಮ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಹಾಗೂ ರಕ್ಷಣಾ ಉದ್ದೇಶಕ್ಕೆ (ಶಸ್ತ್ರಾಸ್ತ್ರ ದಾಸ್ತಾನು, ಕ್ಷಿಪಣಿ ನಿಯೋಜನೆ) ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಬೇಕಾದರೂ ಮೊದಲು ಜಾಗವನ್ನು ಗುರುತು ಮಾಡಬೇಕು, ಯಾವ ಉದ್ದೇಶಕ್ಕಾಗಿ ಆ ಜಾಗ ಬೇಕು ಎಂದು ಸ್ಪಷ್ಟಪಡಿಸಬೇಕು, ತದನಂತರ ಅಲ್ಲಿನ ಜನ/ರೈತರನ್ನು ಒಂದೆಡೆ ಸೇರಿಸಿ, ಮನವೊಲಿಸಿ 70 ಪರ್ಸೆಂಟ್ ಒಪ್ಪುಗೆ ಪಡೆಯಬೇಕು. ಇದಕ್ಕಿಂತ ಮೂರ್ಖತನ ಇನ್ನೊಂದುಂಟೇ ಹೇಳಿ? ಚೀನಾ, ಪಾಕಿಸ್ತಾನ ಹಾಗೂ ಇತರ ರಾಷ್ಟ್ರಗಳಿಗೆ ತಲೆನೋವೇ ಇಲ್ಲ. ಏಕೆಂದರೆ ಯುಪಿಎ ರೂಪಿಸಿರುವ ಭೂಸ್ವಾಧೀನ ಕಾಯಿದೆ ಪ್ರಕಾರ ಉದ್ದೇಶವನ್ನು, ಅಂದರೆ ಅಣ್ವಸ್ತ್ರ ಅಭಿವೃದ್ಧಿಯನ್ನು ಎಲ್ಲಿ ಮಾಡುತ್ತೇವೆ, ಶಸ್ತ್ರಾಸ್ತ್ರ ದಾಸ್ತಾನು ಹಾಗೂ ಕ್ಷಿಪಣಿ ನಿಯೋಜನೆಯನ್ನು ಎಲ್ಲಿ ಮಾಡುತ್ತೇವೆ ಎಂದು ಮೊದಲೇ ಹೇಳಿಬಿಡುತ್ತೇವಲ್ಲಾ!! ಇಂಥದ್ದೊಂದು ಭಾರತದ ಹಿತಾಸಕ್ತಿಯ ವಿರೋಧಿ ಕಾಯಿದೆಗೆ ಮಾರ್ಪಾಡು ಮಾಡಲು ಹೊರಟಿದ್ದು ತಪ್ಪೇ? ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗರನ್ನು ಹೋಗಿ ಕೇಳಿರಲ್ಲಾ, ಈ ಕಾಯಿದೆಯಿಂದ ನಮ್ಮ ರಕ್ಷಣಾ ಯೋಜನೆಗಳು ಸ್ಥಗಿತಗೊಂಡಿವೆಯೋ ಇಲ್ಲವೋ ಅಂತ?!

ಕಾಂಗ್ರೆಸ್ಸಿಗರೇ, ನಿಮ್ಮ ಆನಂದ ಶರ್ಮಾ 2012ರಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದೂ ಇದನ್ನೇ. ಇಂಥದ್ದೊಂದು ಕಾಯಿದೆ ತರಲು ಯುಪಿಎ ಸರ್ಕಾರ ತಯಾರಿ ನಡೆಸುತ್ತಿದ್ದಾಗ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಅವರು 2011ರಲ್ಲೇ ಪತ್ರ ಬರೆದು ಪರಿಹಾರ 4 ಪಟ್ಟು ಬೇಡ, 2 ಪಟ್ಟು ಸಾಕು ಎಂದಿದ್ದರು. ಪಿಪಿಪಿ ಮಾಡೆಲ್‍ನಡಿ ಬರುವ ಸಾಮಾಜಿಕ ಯೋಜನೆಗಳನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಒಪ್ಪುಗೆ ಮಿತಿಯನ್ನು 70 ಬೇಡ 50 ಪರ್ಸೆಂಟ್‍ಗೆ ನಿಗದಿ ಮಾಡಿ ಅಗಿನ ಹರ್ಯಾಣದ ಕಾಂಗ್ರೆಸ್ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಎಂದು ಪತ್ರದ ಮೂಲಕ ಕೋರಿಕೊಂಡಿದ್ದರು. ದೊಡ್ಡ ಯೋಜನೆಗಳಿಗೆ ಈ ಸಾಮಾಜಿಕ ಪರಿಣಾಮದ ಅಂದಾಜು ನಿಯಮ ಅನ್ವಯವಾಗುವುದು ಬೇಡ ಎಂದು ಹಾಲಿ ಕರ್ನಾಟಕ ಸರ್ಕಾರ ಕೂಡ ಕೇಳಿಕೊಂಡಿದೆ. ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದ ಯೋಜನೆಗಳಿಗೆ 70 ಪರ್ಸೆಂಟ್ ಒಪ್ಪುಗೆ ಪಡೆದುಕೊಳ್ಳಬೇಕಾದ ನಿಯಮ ಅನ್ವಯವಾಗುವುದು ಬೇಡ ಎಂದು ತ್ರಿಪುರಾ ಕಮ್ಯುನಿಸ್ಟ್ ಮುಖ್ಯಮಂತ್ರಿ (ಉಳಿದಿರುವವರು ಅವರೊಬ್ಬರೇ) ಕೂಡ ಮನವಿ ಮಾಡಿಕೊಂಡಿದ್ದಾರೆ. ಕಳೆದ ಜೂನ್‍ನಲ್ಲಿ ಕರೆದಿದ್ದ ಎಲ್ಲ 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಭೆಯಲ್ಲಿ ಒಕ್ಕೊರಲಿನಿಂದ ಮಾಡಿಕೊಂಡ ಮನವಿಗೆ ಪೂರಕವಾಗಿಯೇ ಮೋದಿ ಸರ್ಕಾರ ಈ ಸುಗ್ರೀವಾಜ್ಞೆಯನ್ನು ತಂದಿರುವುದು. ಇಲ್ಲವೆಂದು ಹೇಳಿದರೆ, ಆಯಾ ರಾಜ್ಯಗಳ ನಿಜರೂಪವನ್ನು ಅವುಗಳೇ ಬರೆದಿರುವ ಪತ್ರಗಳ ಮೂಲಕ ಬಹಿರಂಗ ಮಾಡುವುದಕ್ಕೂ ನಾವು ಸಿದ್ದರಿದ್ದೇವೆ .

ಇಲ್ಲಿ ಜನರು ಒಂದು ಅಂಶವನ್ನು ಗಮನಿಸಬೇಕು. 70 ಪರ್ಸೆಂಟ್ ಒಪ್ಪುಗೆ ನಿಯಮ (70 percent consent) ಹಾಗೂ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್‍ಮೆಂಟ್ ( SIA) ತೆಗೆದುಹಾಕುವುದರಿಂದ ಜನರಿಗೂ ಲಾಭ, ದೇಶಕ್ಕೂ ಲಾಭವಿದೆ. ಏಕೆ ಗೊತ್ತಾ? ಇವೆರಡೂ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಅಂಶಗಳು ಎಂಬುದನ್ನು ಫಸ್ಟ್ ಪೋಸ್ಟ್ ಡಾಟ್ಕಾಂನ ಸಂಪಾದಕರಾದ ಆರ್. ಜಗನ್ನಾಥ್ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಒಂದು ಯೋಜನೆಗೆ ಬೇಕಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಕಾರ್ಯಕ್ಕೆ ಕನಿಷ್ಠ 2ರಿಂದ 3 ವರ್ಷ ಬೇಕಾಗುತ್ತದೆ. ಹಾಗಾಗಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಇರುವವರ ಪರವಾಗಿ ಲಾಭಿ ಮಾಡುವ CREDAI , ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಬಳಿಗೆ ಹೋಗಿ ನೀವು ಪ್ರಾಜೆಕ್ಟ್ ಕ್ಲಿಯರೆನ್ಸ್ ಪ್ರಕ್ರಿಯೆಯ ಅವಧಿಯನ್ನು ಕಡಿಮೆ ಮಾಡಿದರೆ ನಾವು ಫ್ಲಾಟ್‍ನ ಬೆಲೆಯನ್ನು 20 ಪರ್ಸೆಂಟ್ ಕಡಿಮೆ ಮಾಡುತ್ತೇವೆ ಎಂದಿತು. ಏಕೆಂದರೆ ಒಂದು ಪ್ರಾಜೆಕ್ಟ್ 2 ವರ್ಷ ವಿಳಂಬವಾದರೆ ಅದರಿಂದ ಅಗುವ ನಷ್ಟ ಕನಿಷ್ಟ 20 ಪರ್ಸೆಂಟ್ ಆಗಿರುತ್ತದೆ. ಸುಗ್ರೀವಾಜ್ಞೆಯ ಮೂಲಕ 70 ಪರ್ಸೆಂಟ್ ಒಪ್ಪುಗೆ ಮತ್ತು SIA ಅನ್ನು ತೆಗೆದುಹಾಕಿರುವುದೂ ಇದೇ ಕಾರಣಕ್ಕೆ. ಒಂದು ಪ್ರಾಜೆಕ್ಟ್ ಆರಂಭವಾಗುವುದಕ್ಕೇ ಐದಾರು ವರ್ಷವಾದರೆ ಏನಾಗುತ್ತೆ ಹೇಳಿ? ಜತೆಗೆ ಇವು ಭ್ರಷ್ಟಾಚಾರಕ್ಕೆ ನಾಂದಿ ಮಾಡುತ್ತವೆ ಎಂದು ಹೇಳಿದ್ದೇಕೆ ಗೊತ್ತೆ? ಇಂಥ ಕಡೆ ಇಂಥ ಯೋಜನೆಗೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ ಎಂಬುದು ಮೊದಲು ಗೊತ್ತಾಗುವುದು ನಮ್ಮ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವವರಿಗೆ ಎಂಬುದನ್ನು ಒಪ್ಪುತ್ತೀರಲ್ಲವೆ? ಹಾಗೆ ಮೊದಲೇ ಗೊತ್ತಾದ ಕೂಡಲೇ ನೀವೇ ಆರಿಸಿ ಕಳುಹಿಸಿದ ರಾಜಕಾರಣಿಗಳು ನಿಮ್ಮ ಭೂಮಿಯನ್ನು ಮೊದಲೇ ಖರೀದಿ ಮಾಡಿ, ಇಲ್ಲವೆ ರಿಜಿಸ್ಟರ್ಡ್ ಜಿಪಿಎ ಮಾಡಿಸಿಕೊಂಡು 70 ಒಪ್ಪುಗೆ ಹಾಗೂ SIA ಹೆಸರಿನಲ್ಲಿ ವಿಳಂಬ ಮಾಡಿ ಅತಿ ಹೆಚ್ಚು ಬೆಲೆಗೆ ಮಾರಿಕೊಳ್ಳುತ್ತಾರೆ ಅಷ್ಟೇ. ನೀವೇ ನೇರವಾಗಿ ಮಾರಲು ಮುಂದಾದರೂ 70 ಪರ್ಸೆಂಟ್ ಒಪ್ಪುಗೆಯನ್ನು ಪಡೆದುಕೊಡುತ್ತೇವೆ ಎಂದು ನೀವು ಹಾಗೂ ಕಂಪನಿಗಳ ಜತೆ ರಾಜಕಾರಣಿಗಳು ದಲ್ಲಾಳಿ ಕೆಲಸ ಮಾಡುತ್ತಾರೆಯೇ ಹೊರತು ಇನ್ನೇನೂ ಅಗುವುದಿಲ್ಲ. ಹಾಗಾಗಿ ಈ 70 ಒಪ್ಪುಗೆ ಹಾಗೂ SIA ತೆಗೆದುಹಾಕಿದ್ದರಿಂದ ಸ್ವಾಧೀನದ ಅವಧಿ, ಸಾಮಾಜಿಕ ಪರಿಣಾಮದ ಆಂದಾಜಿನ ಹೆಸರಿನಲ್ಲಿ ನಡೆಯುವ ವಿಳಂಬ, ಪರೋಕ್ಷ ವೆಚ್ಚ ಕಡಿಮೆಯಾಗಿ ಉದ್ಯಮವೂ ಬೆಳೆಯುತ್ತದೆ ಹಾಗೂ ಷೆಡ್ಯೂಲ್-4ರಲ್ಲಿ ಒಳಗೊಂಡಿರುವ ವಿಷಯಗಳಿಗೆ ಭೂಸ್ವಾಧೀನ ಮಾಡಿಕೊಂಡಾಗಲೂ 4 ಪಟ್ಟು ಹೆಚ್ಚು ಪರಿಹಾರ ಸಿಕ್ಕಿ ಜನಕ್ಕೆ ಸಂಪೂರ್ಣ ಲಾಭ ದೊರೆಯುತ್ತದೆ. ಒಂದು ಮಾತನ್ನು ನೆನಪಿನಲ್ಲಿಡಿ, ನಮಗೆ ಉದ್ಯಮ ಬೇಡ ಎಂದು ಟಾಟಾ ಕಂಪನಿಯನ್ನು ಸಿಂಗೂರಿನಿಂದ ಓಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವರ್ಷಕ್ಕೆ 28 ಸಾವಿರ ಕೋಟಿ ಬರೀ ಬಡ್ಡಿಯನ್ನು ಕಟ್ಟಲಾರದೆ ಕೇಂದ್ರ ಸರ್ಕಾರದ ಮುಂದೆ ಭಿಕ್ಷಾಪಾತ್ರೆಯನ್ನು ಹಿಡಿದು ನಿಂತಿದ್ದಾರೆ. ಅಂಥ ದುಸ್ಥಿತಿಗೆ ತಂದ ಕಮ್ಯುನಿಸ್ಟರು ಈಗ ಸುಗ್ರೀವಾಜ್ಞೆಯ ವಿರುದ್ಧ ಬೊಬ್ಬೆಹಾಕುತ್ತಿದ್ದಾರೆ.

ಇವತ್ತು ನಮ್ಮ ಒಟ್ಟು ರಾಷ್ಟ್ರಿಯ ಉತ್ಪನ್ನಕ್ಕೆ ಕೃಷಿಯ ಕೊಡುಗೆ 15 ಪರ್ಸೆಂಟ್. ಆದರೆ ಕೃಷಿಯನ್ನು ಆಧರಿಸಿಕೊಂಡಿರುವವರು 60 ಪರ್ಸೆಂಟ್. ಇಂಥ ಅತಿಯಾದ ಅವಲಂಬನೆಯಿಂದ 20-25 ಪರ್ಸೆಂಟ್ ಜನರನ್ನು ಹೊರಗೆಳೆಯಬೇಕಾದರೆ ಇನ್ಫ್ರಾಸ್ಟ್ರಕ್ಚರ್ ಹಾಗೂ ಇಂಡಸ್ಟ್ರಿ ಎರಡೂ ಬಹಳ ಮುಖ್ಯ. ಅದಕ್ಕಾಗಿ ಸ್ವಲ್ಪ ಪ್ರಮಾಣದ ಭೂಮಿ ಬೇಕು. ಅದಕ್ಕೋಸ್ಕರ ಕಾಯಿದೆಯಲ್ಲಿ ಸ್ವಲ್ಪ ಬದಲಾವಣೆ ತಂದರೆ ತಪ್ಪೇನಿದೆ? ಇನ್ನು 2022ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಅಷ್ಟರೊಳಗೆ ಪ್ರತಿ ಕುಟುಂಬಕ್ಕೊಂದು ಸೂರು ಕಟ್ಟಿಕೊಡಬೇಕೆಂದು ಮೋದಿಯವರು ಸಂಕಲ್ಪತೊಟ್ಟಿದ್ದಾರೆ. ತಲೆಗೊಂದು ಸೂರು, ದುಡಿಯುವ ಕೈಗಳಿಗೆ ಕೆಲಸಕ್ಕಾಗಿ ನ್ಯಾಯ ರೀತಿಯಲ್ಲಿ ತುಸು ಭೂಮಿ ಪಡೆಯಲು ಈ ಮಾರ್ಪಾಡು ಮಾಡಲಾಗಿದೆಯಷ್ಟೇ, ಭಯ ಬೇಡ. ಈ ಪ್ರಯತ್ನಕ್ಕೆ ಚುನಾವಣೆಯಲ್ಲಿ ಸೋತುಸುಣ್ಣಾಗಿರುವ ವಿರೋಧಿಗಳು ಸಂಸತ್ತಿನಲ್ಲಿ ಸೋಲು ತರಲು ಪ್ರಯತ್ನಿಸಬಹುದು, ಆದರೆ ನಮ್ಮ ಉದ್ದೇಶದ ಬಗ್ಗೆ ಶಂಕೆ ಬೇಡ. ಇಷ್ಟಕ್ಕೂ ಭ್ರಷ್ಟಾಚಾರ, ಹಗರಣ ಎಂಬ ಈ ಪದಗಳು ನಿತ್ಯವೂ ಸುದ್ದಿಯಾಗುತ್ತಿದ್ದ, ಹೆಡ್‍ಲೈನ್‍ಗಳಾಗುತ್ತಿದ್ದ ದಿನಗಳಿದ್ದವು. ಅದು ಕಳೆದ 9 ತಿಂಗಳಿನಿಂದ ಸಂಪೂರ್ಣವಾಗಿ ನಿಂತುಹೋಗಿರುವುದು ಮೋದಿಯವರಿಂದಾಗಿ ಎಂಬುದನ್ನು ನೆನಪು ಮಾಡಿಕೊಳ್ಳಿ.

ಒಂದು ಕಾಲದಲ್ಲಿ ಕಂಪ್ಯೂಟರ್ ಬಂದರೆ 25 ಜನರ ಕೆಲಸವನ್ನು ಒಂದೇ ಕಂಪ್ಯೂಟರ್ ಮಾಡುತ್ತದೆ ಹಾಗೂ ಅಷ್ಟು ಜನರಿಗೆ ಕೆಲಸ ಹೋಗುತ್ತದೆ ಎಂದು ಸುಳ್ಳೇ ಸುಳ್ಳು ಭಯಹುಟ್ಟಿಸಿದ್ದ ಕಾಲಘಟ್ಟವನ್ನು ನೆನಪಿಸಿಕೊಳ್ಳಿ. ಈಗ ನಡೆಯುತ್ತಿರುವುದು ಇಂಥದ್ದೇ ಅಪಪ್ರಚಾರವಷ್ಟೇ. ದಿವಂಗತ ದೇವರಾಜ ಅರಸರು ಜನರ ಕೃಷಿ ಭೂಮಿಗೆ ನೀರುಣಿಸಲು ವರುಣಾ ನಾಲೆಯ ಕನಸ್ಸು ಕಂಡರು. ಇವತ್ತು ವರುಣಾ ನಾಲೆ ಸುತ್ತ ಇರುವ ಕೃಷಿ ಭೂಮಿಯೆಲ್ಲ ರಿಯಲ್ ಎಸ್ಟೇಟ್ ಮಾಫಿಯಾದ ವಶವಾಗಿ ಲೇಔಟ್‍ಗಳು ನಿರ್ಮಾಣವಾಗಿವೆಯಲ್ಲಾ, ಇದರ ಬಗ್ಗೆ ಏನು ಹೇಳುತ್ತೀರಿ? ಈಗ ಯಾವ ನಗರದ ಸುತ್ತ ಇರುವ ಕೃಷಿ ಭೂಮಿ ಭೂ ಮಾಫಿಯಾದ ಸ್ವಾಧೀನಕ್ಕೊಳಗಾಗಿಲ್ಲ ಹೇಳಿ? ಸುಗ್ರಿವಾಜ್ಞೆ ಬಗ್ಗೆ ಧ್ವನಿಯೆತ್ತುವ ಇವರು ಖಾಸಗಿ ಸ್ವತ್ತು ಹಾಗೂ ಸಂಪತ್ತು ಹೆಚ್ಚಿಸಿಕೊಳ್ಳಲು ಹೋಬಳಿ ಮಟ್ಟಕ್ಕೆ ಹೋಗಿ ಕೃಷಿ ಭೂಮಿಯನ್ನು ಕಬಳಿಸುತ್ತಿರುವ ರಿಯಲ್ ಎಸ್ಟೇಟ್ ಮಾಫಿಯಾ ಬಗ್ಗೆ ಎಂದಾದರೂ ಧ್ವನಿಯೆತ್ತಿದ್ದಾರಾ? ಬೆಂಗಳೂರು ಪಕ್ಕದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಗಳು ಅವರೆ, ಕಡ್ಲೆ, ತರಕಾರಿಗಳಿಗೆ ಪ್ರಸಿದ್ಧವಾಗಿದ್ದವು. ಹಸಿರಾಗಿದ್ದ ಹೊಲಗಳು ಇವತ್ತು ಲೇಔಟ್‍ಗಳಾಗಿವೆ. ಮೈಸೂರಿನಿಂದ 25 ಕಿ.ಮೀ. ದೂರದಲ್ಲಿರುವ ಫಲವತ್ತಾದ ಹೊಲಗಳೂ ಆ `ಸಿಟಿ’, ಈ `ಸಿಟಿ’ಗಳಾಗಿವೆ, 2 ಲಕ್ಷ ರೂಪಾಯಿಗೆ ಸೈಟು ಮತ್ತು ಲ್ಯಾಪ್‍ಟಾಪ್ ಕೊಡುತ್ತೇವೆ ಎಂದು ಜನರನ್ನು ಮೂರ್ಖರನ್ನಾಗಿಸಿ ರಿಯಲ್ ಎಸ್ಟೇಟ್ ಕುಬೇರರು ಬೆಳೆದಿದ್ದಾರೆ. ಹಾಗಾಗಿ ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸುಗ್ರೀವಾಜ್ಞೆಯ ಬದಲು ಇಂಥ ಮಾಫಿಯಾದ ವಿರುದ್ಧ ಮೊದಲು ಹೋರಾಡಿ ಸೈಟು ಖರೀದಿ ಮಾಡುವ ಜನರನ್ನು ವಂಚನೆಯಿಂದ ಹಾಗೂ ದುಡ್ಡಿನಾಸೆಗೆ ಅಷ್ಟಿಷ್ಟಕ್ಕೆ ಕೃಷಿ ಭೂಮಿಯನ್ನು ಮಾರಿಕೊಳ್ಳುವ ರೈತನನ್ನು ರಕ್ಷಣೆ ಮಾಡಲಿ.

ಕಡೆಯದಾಗಿ, ಸಾಹಿತಿ ದೇವನೂರ ಮಹಾದೇವ ಅವರೇ, ಕುಸುಮಬಾಲೆಯಂಥ ಅದ್ಭುತ ಕೃತಿಕೊಟ್ಟ ನಿಮ್ಮ ಬಗ್ಗೆ ನಮ್ಮೆಲ್ಲರಿಗೂ ತುಂಬಾ ಗೌರವವಿದೆ. ಹಾಗಾಗಿಯೇ ಚುನಾವಣೆಯ ಸಂದರ್ಭದಲ್ಲಿ ನೀವು ರಾಜಕೀಯ ನಿಲುವು ತೆಗೆದುಕೊಂಡರೂ ನಾವು ಬೇಸರಿಸಿಕೊಳ್ಳುವುದಿಲ್ಲ. ಅದರೆ ನ್ಯಾಯ ಕೊಡಿಸು ಎಂದು ಬಂದ ಕ್ಲಿಯಂಟಳಿಗೆ ಕಂಕಣಭಾಗ್ಯ ಕೊಟ್ಟ ಮಾಜಿ ಕೆ.ಆರ್. ನಗರದ ಮಾಜಿ ವಕೀಲರೊಬ್ಬರ ಜತೆ ಸೇರಿ ಏನೇನೋ ಮಾತನಾಡಬೇಡಿ. ನಿಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿ, ನಾವೂ ಖುಷಿಪಡುತ್ತೇವೆ. ಇಷ್ಟಕ್ಕೂ 589 ಎಸ್‍ಎಝೆಡ್‍ಗಳಿಗೆ ಅನುಮತಿ ನೀಡಿ ಲಕ್ಷಾಂತರ ಎಕರೆ ಕೃಷಿಭೂಮಿಯನ್ನು ಬಲಿತೆಗೆದುಕೊಂಡ ಕಾಂಗ್ರೆಸ್ಸಿಗರ ಜತೆ ಹೋರಾಟಕ್ಕಿಳಿಯುವುದು ಯಾಕೋ ಸರಿಯೆನಿಸುತ್ತಿಲ್ಲ, ಯೋಚಿಸಿ…

One Response to “ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವುದು ಯಾವುದು ಗೊತ್ತಾ, ಕಾಂಗ್ರೆಸ್-ಕಮ್ಯುನಿಸ್ಟರ ಸುಳ್ಳು!”

  1. shivaraj says:

    Well done sir
    U r in wright path
    We wil be with u